ರಾಜ್ಯದಲ್ಲಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐರ್) ಬಳಿಕ ಸುಮಾರು 2.89 ಕೋಟಿ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ ಎಂದು ಉತ್ತರ ಪ್ರದೇಶದ ಮುಖ್ಯ ಚುನಾವಣಾ ಅಧಿಕಾರಿ (ಸಿಇಒ) ನವದೀಪ್ ರಿನ್ವಾ ಮಂಗಳವಾರ (ಜ.6) ತಿಳಿಸಿದ್ದಾರೆ.
ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರಿನ್ವಾ, ಚುನಾವಣಾ ಆಯೋಗವು ಸುಮಾರು 12.5 ಕೋಟಿ ಎಸ್‌ಐಆರ್ ಅರ್ಜಿಗಳನ್ನು ಜನರಿಂದ ಸ್ವೀಕರಿಸಿದೆ ಎಂದು ಹೇಳಿದ್ದಾರೆ.
ವರದಿಗಳ ಪ್ರಕಾರ, ಎಸ್‌ಐಆರ್‌ಗೂ ಮೊದಲು ಉತ್ತರ ಪ್ರದೇಶದ ಮತದಾರರ ಒಟ್ಟು ಸಂಖ್ಯೆ 15.44 ಕೋಟಿ ಇತ್ತು. ಎಸ್‌ಐಆರ್ ವೇಳೆ 46.23 ಲಕ್ಷ ಜನರು ಮೃತಪಟ್ಟಿದ್ದಾರೆ, 1.27 ಕೋಟಿ ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ, 25.47 ಲಕ್ಷ ಮಂದಿಯ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಇದೆ ಮತ್ತು ಪತ್ತೆಯಾಗದವರು ಹಾಗೂ ಇತರೆ ಕಾರಣಗಳನ್ನು ನೀಡಿ 2.89 ಕೋಟಿ ಹೆಸರುಗಳನ್ನು ಕೈ ಬಿಡಲಾಗಿದೆ. ಇದರಿಂದ ಎಸ್‌ಐಆರ್ ಬಳಿಕ ಪ್ರಕಟಿಸಿ ಕರಡು ಮತದಾರರ ಪಟ್ಟಿಯಲ್ಲಿ ಒಟ್ಟು ಮತದಾರರ ಸಂಖ್ಯೆ 12.5 ಕೋಟಿಗೆ ಕುಸಿತಗೊಂಡಿದೆ.
ಸಿಇಒ ಪ್ರಕಾರ, 15.44 ಕೋಟಿ ಮತದಾರರಲ್ಲಿ, 12.55 ಕೋಟಿ ಮತದಾರರ (ಶೇಕಡ 81.30) ಹೆಸರುಗಳನ್ನು ಎಸ್‌ಐಆರ್ ನಂತರ ಕರಡು ಮತದಾರರ ಪಟ್ಟಿಯಲ್ಲಿ ಉಳಿಸಿಕೊಳ್ಳಲಾಗಿದೆ.
ಎಸ್‌ಐಆರ್ ಪೂರ್ಣಗೊಂಡ ಬಳಿಕ ಅಂತಿಮ ಮತದಾರರ ಪಟ್ಟಿಯನ್ನು ಮಾರ್ಚ್ 6,2026 ರಂದು ಬಿಡುಗಡೆ ಮಾಡಲಾಗುವುದು ಎಂದು ರಿನ್ವಾ ಹೇಳಿದ್ದಾರೆ. ಈಗ ಕರಡು ಪಟ್ಟಿ ಬಿಡುಗಡೆಯಾಗಿರುವುದರಿಂದ ಮತದಾರರು ತಮ್ಮ ಎಪಿಕ್ ( EPIC)ಸಂಖ್ಯೆಯನ್ನು ವೆಬ್‌ಸೈಟ್‌ನಲ್ಲಿ ನಮೂದಿಸುವ ಮೂಲಕ ತಮ್ಮ ವಿವರಗಳನ್ನು ಪರಿಶೀಲಿಸಬೇಕು. ಒಂದು ವೇಳೆ ನಿಮ್ಮ ಹೆಸರು ಪಟ್ಟಿಯಲ್ಲಿ ಇಲ್ಲದಿದ್ದರೆ ಫಾರ್ಮ್ 6 ಭರ್ತಿ ಮಾಡುವ ಮೂಲಕ ಸೇರ್ಪಡೆಗೆ ಕೋರಬಹುದು ಎಂದಿದ್ದಾರೆ.
ಚುನಾವಣಾ ಆಯೋಗವು ಕರಡು ಮತದಾರರ ಪಟ್ಟಿಯ ಪ್ರಕಟಣೆಯನ್ನು ಒಂದು ವಾರ ವಿಸ್ತರಿಸಿ, ಎಸ್‌ಐಆರ್‌ನ ವೇಳಾಪಟ್ಟಿಯನ್ನು ಪರಿಷ್ಕರಿಸಿತ್ತು. ಹಾಗಾಗಿ, ಡಿಸೆಂಬರ್ 31ರ ಹಿಂದಿನ ಗಡುವಿನ ಬದಲು ಜನವರಿ 6ರಂದು ಕರಡು ಪಟ್ಟಿಯನ್ನು ಪ್ರಕಟಿಸಿದೆ.
ಪರಿಷ್ಕೃತ ಅವಧಿಯ ಪ್ರಕಾರ, ಜನರು ಹಕ್ಕು ಮತ್ತು ಆಕ್ಷೇಪಣೆಗಳನ್ನು ಸಲ್ಲಿಸುವ ಅವಧಿಯು ಜನವರಿ 6 ರಿಂದ ಫೆಬ್ರವರಿ 6, 2026 ರವರೆಗೆ ಇರುತ್ತದೆ. ಯುಪಿಯಲ್ಲಿ ಎಸ್‌ಐಆರ್ ಪ್ರಕ್ರಿಯೆಗೆ ಹಲವು ಗಡುವುಗಳು ವಿಸ್ತರಣೆಯಾಗಿವೆ. ಆರಂಭದಲ್ಲಿ ಡಿಸೆಂಬರ್ 4 ಕ್ಕೆ ಗಣತಿ ಗಡುವನ್ನು ನಿಗದಿಪಡಿಸಲಾಗಿತ್ತು, ನಂತರ ಎರಡು ಬಾರಿ ವಿಸ್ತರಿಸಲಾಗಿದೆ.


