ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾಳಮ್ಮನಗರದಲ್ಲಿ ಶನಿವಾರ (ಜ.3) ನಡೆದ ಅಡುಗೆ ಸಹಾಯಕಿ ರಂಜಿತಾ ಮಲ್ಲಪ್ಪ ಬನ್ಸೊಡೆ (30) ಅವರ ಹತ್ಯೆ ಪ್ರಕರಣದ ಆರೋಪಿ ರಫೀಕ್ ಇಮಾಮಸಾಬ ಯಳ್ಳೂರ(30) ಅವರ ಮೃತದೇಹ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಯಲ್ಲಾಪುರ ಪಟ್ಟಣದ ಖಾಜಲ್ವಾಡ ಅರಣ್ಯ ಪ್ರದೇಶದಲ್ಲಿ ರಫೀಕ್ ಮೃತದೇಹ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಭಾನುವಾರ (ಜ.4) ಬೆಳಿಗ್ಗೆ ಪತ್ತೆಯಾಗಿದೆ ಎಂದು ವರದಿಯಾಗಿದೆ.
ಈ ಕುರಿತು ಮಾಹಿತಿ ಪಡೆದ ತಕ್ಷಣ ಯಲ್ಲಾಪುರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮದುವೆಯಾಗಿ ವಿಚ್ಛೇದನ ಹೊಂದಿದ್ದ ರಂಜಿತಾಗೆ ರಫೀಕ್ ಅನೇಕ ವರ್ಷಗಳಿಂದ ಪರಿಚಿತನಾಗಿದ್ದು, ತನ್ನನ್ನು ಪ್ರೀತಿಸಿ ಮದುವೆಯಾಗುವಂತೆ ಸತಾಯಿಸುತ್ತಿದ್ದರು. ಇದಕ್ಕೆ ನಿರಾಕರಿಸಿದ ರಂಜಿತಾ ಆತನೊಂದಿಗೆ ಮಾತನಾಡುವುದನ್ನು ನಿಲ್ಲಿಸಿದ್ದರು. ಇದರಿಂದ ಸಿಟ್ಟಿಗೆದ್ದಿದ್ದ ರಫೀಕ್ ಶನಿವಾರ ರಂಜಿತಾ ಕೆಲಸ ಮುಗಿಸಿ ಶಾಲೆಯಿಂದ ಬರುತ್ತಿದ್ದ ವೇಳೆ ಅಡ್ಡಗಟ್ಟಿದ್ದರು. ಈ ವೇಳೆ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ರಫೀಕ್ ಹರಿತವಾದ ಆಯುಧದಿಂದ ರಂಜಿತಾ ಅವರ ಕತ್ತು ಕುಯ್ದು ಪರಾರಿಯಾಗಿದ್ದರು ಎನ್ನಲಾಗಿದೆ.
ಆರೋಪಿ ರಫೀಕ್ ಪತ್ತೆಗಾಗಿ ಪೊಲೀಸರು ತೀವ್ರ ಶೋಧ ಕಾರ್ಯಾಚರಣೆ ಆರಂಭಿಸಿದ್ದರು. ಈ ನಡುವೆ ಅವರ ಶವ ಕಾಡಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ತಿಳಿದುಬಂದಿದೆ.
ರಂಜಿತಾ ಕೊಲೆ ಕೃತ್ಯವನ್ನು ಖಂಡಿಸಿ ಭಾನುವಾರ ಯಲ್ಲಾಪುರ ಬಂದ್‌ಗೆ ಹಿಂದುತ್ವ ಸಂಘಟನೆಗಳು ಕರೆ ನೀಡಿದ್ದವು. ಪಟ್ಟಣದ ಬಸವೇಶ್ವರ ಸರ್ಕಲ್‌ನಲ್ಲಿ ಸಂಘಟನೆಗಳು ಪ್ರತಿಭಟನೆಗೆ ಸಿದ್ಧತೆ ನಡೆಸುತ್ತಿದ್ದಂತೆಯೇ ರಫೀಕ್ ಮೃತದೇಹ ಕಾಡಿನಲ್ಲಿ ಆತ್ಮಹತ್ಯೆಗೈದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ನೆನಪಿಡಿ : ಯಾವುದೇ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡಿ. ತುರ್ತು ಪರಿಸ್ಥಿತಿಯಿದ್ದರೆ ಕರೆ ಮಾಡಿ ವೈದ್ಯರೊಂದಿಗೆ ಮಾತನಾಡಿ. ಬೆಂಗಳೂರು ಸಹಾಯವಾಣಿ 080-25497777, ಬೆಳಗ್ಗೆ 10ರಿಂದ ಸಂಜೆ 8ರವರೆಗೆ, ನಿಮಾನ್ಸ್ ಸಹಾಯವಾಣಿ 080-46110007, ಆರೋಗ್ಯ ಸಹಾಯವಾಣಿ 104


