ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿನ ಹಗರಣ ಪ್ರಕರಣಕ್ಕೆ ಸಂಬಂಧಿಸಿ ನಕಲಿ ಖಾತೆ ತೆರೆದಿದ್ದ ಆರೋಪಿಯನ್ನು ಎಸ್ಐಟಿ ಅಧಿಕಾರಿಗಳು ಬಂಧಿಸಿದ್ದು, ಪ್ರಕರಣದಲ್ಲಿ ಬಂಧಿತರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ.
ಬಂಧಿತ ಆರೋಪಿಯನ್ನು ಸತ್ಯನಾರಾಯಣ ವರ್ಮ ಎಂದು ಗುರುತಿಸಲಾಗಿದ್ದು, ಈತ ವಿವಿಧ ಕಂಪೆನಿಗಳ ಹೆಸರಿನಲ್ಲಿ 18 ಬ್ಯಾಂಕ್ ಖಾತೆ ತೆರೆದಿದ್ದ ಎಂದು ಆರೋಪಿಸಲಾಗಿದೆ. ಸತ್ಯನಾರಾಯಣ ವರ್ಮಗೆ ಸೇರಿದ ಎಲ್ಲಾ 18 ಬ್ಯಾಂಕ್ ಖಾತೆಗಳಿಗೂ ವಾಲ್ಮೀಕಿ ನಿಗಮದಿಂದ ಹಣ ವರ್ಗಾವಣೆ ಆಗಿದ್ದು, ಈತನ ಬಳಿಯಿಂದ 16 ಕೆಜಿ ಚಿನ್ನ, 10 ಕೋಟಿ ನಗದು ಜಪ್ತಿ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಈತನನ್ನು ಹೈದರಾಬಾದ್‌ನಲ್ಲಿ ಬಂಧಿಸಲಾಗಿದ್ದು, ಎಸ್ಐಟಿ ಅಧಿಕಾರಿಗಳು ಬೆಂಗಳೂರಿಗೆ ಕರೆತರುತ್ತಿದ್ದಾರೆ.
ಶಿವಮೊಗ್ಗದ ವಿನೋಬ ನಗರದ ಕೆಂಚಪ್ಪ ಲೇಔಟ್‌ನಲ್ಲಿರುವ ತಮ್ಮ ನಿವಾಸದಲ್ಲಿ ಭಾನುವಾರ ಸಂಜೆ ಡೆತ್‌ನೋಟ್ ಬರೆದಿಟ್ಟು ಚಂದ್ರಶೇಖರನ್ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ಡೆತ್ ನೋಟ್‌ನಲ್ಲಿ ತಮ್ಮ ಸಾವಿಗೆ ಕಾರಣ ತಿಳಿಸಿ ಮೂವರು ಉನ್ನತ ಅಧಿಕಾರಿಗಳ ಹೆಸರು ಉಲ್ಲೇಖಿಸಿದ್ದರು. ಈ ಆಧಾರದ ಮೇಲೆ ಶಿವಮೊಗ್ಗ ಪೊಲೀಸರು ಎಫ್ಐಆರ್ ದಾಖಲಿಸಿದ್ದರು.
ಮೂವರು ಅಧಿಕಾರಿಗಳು ವಿವಿಧ ಠೇವಣಿಗಳ ಮೂಲಕ ವೈಯಕ್ತಿಕ ಲಾಭಕ್ಕಾಗಿ ಸುಮಾರು 87 ಕೋಟಿ ರೂಪಾಯಿ ದುರುಪಯೋಗ ಪಡಿಸಿಕೊಂಡಿದ್ದು, ಮಾತ್ರವಲ್ಲದೇ ತನಗೆ ಕಿರುಕುಳ ನೀಡಿದ್ದಾರೆ. ನಿಗಮದ ಪ್ರಾಥಮಿಕ ಖಾತೆಯಿಂದ ಲೆಕ್ಕಕ್ಕೆ ಸಿಗದ ಹಣವನ್ನು ಬೇರೆಡೆಗೆ ತಿರುಗಿಸಲು ಸಮಾನಾಂತರ ಬ್ಯಾಂಕ್ ಖಾತೆ ತೆರೆಯುವಂತೆ ಹಿರಿಯ ಅಧಿಕಾರಿಗಳು ಒತ್ತಾಯಿಸಿದ್ದಾರೆ ಎಂದು ಚಂದ್ರಶೇಖರನ್ ತನ್ನ ಡೆತ್‌ನೋಟ್‌ನಲ್ಲಿ ಬರೆದಿದ್ದರು.
ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ. ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ ದುರುಗಣ್ಣವರ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮತಾ ರವುಲ್ ನನ್ನ ಸಾವಿಗೆ ಕಾರಣ ಎಂದು ಅವರು ಡೆತ್ ನೋಟ್‌ನಲ್ಲಿ ಬರೆದಿದ್ದರು. ಮಾನ್ಯ ಸಚಿವರು ಮೌಖಿಕವಾಗಿ ಸೂಚಿಸಿದ್ದಾರೆ ಎಂದು ಹಣ ವರ್ಗಾಯಿಸಲು ಲೆಕ್ಕಾಧಿಕಾರಿ ಹೇಳಿದ ಹಿನ್ನೆಲೆಯಲ್ಲಿ ನಿಗಮದ 87 ಕೋಟಿ ಅನುದಾನವನ್ನು ಬೇರೆ ಬೇರೆ ಖಾತೆಗಳಿಗೆ ವರ್ಗಾಯಿಸಲಾಗಿದೆ. ವ್ಯವಸ್ಥಾಪಕ ನಿರ್ದೇಶಕರು ಒತ್ತಾಯಪೂರ್ವಕ ಅನುದಾನ ವರ್ಗಾಯಿಸುತ್ತಿದ್ದರು. ನಮಗೆ ಅವರ ಒಳಸಂಚು ಅರ್ಥವೇ ಆಗಿಲ್ಲ. ಬ್ಯಾಂಕ್‌ನವರು ಚೆಕ್ ಬುಕ್ ಮತ್ತು ಪಾಸ್ ಬುಕ್ ಈವರೆಗೂ ನೀಡಿಲ್ಲ. 87 ಕೋಟಿ ಅವ್ಯವಹಾರ ಆಗಿದೆ. ಅಧಿಕಾರಿಗಳು ಅಕ್ರಮವಾಗಿ ಹಣ ವರ್ಗಾವಣೆ ಮಾಡಿಸಿದ್ದಾರೆ. ನಾನು ನಿಗಮಕ್ಕೆ ಮೋಸ ಮಾಡಿಲ್ಲ. ಅವ್ಯವಹಾರದಲ್ಲಿ ಭಾಗಿ ಆಗಿಲ್ಲ ಎಂದು ಡೆತ್‌ನೋಟ್‌ನಲ್ಲಿ ಉಲ್ಲೇಖಿಸಿದ್ದರು. ಆ ಬಳಿಕ ಪ್ರಕರಣ ಬಯಲಾಗಿತ್ತು.
ಹಗರಣಕ್ಕೆ ಸಂಬಂಧಿಸಿ ನಿಗಮದ ಮಾಜಿ ವ್ಯವಸ್ಥಾಪಕ ನಿರ್ದೇಶಕ ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ್, ಮಾಜಿ ಸಚಿವ ಬಿ.ನಾಗೇಂದ್ರ ಅವರ ಅಪ್ತ ಎನ್ನಲಾದ ನಾಗರಾಜ್ ನೆಕ್ಕುಂಟಿ, ನಾಗೇಶ್ವರ್ ರಾವ್ ಎಂಬುವವರನ್ನು ಈಗಾಗಲೇ ಎಸ್ಐಟಿ ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದಾರೆ.
ಇದನ್ನು ಓದಿ: ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ಚಂದ್ರಬಾಬು ನಾಯ್ಡು ಪ್ರಮಾಣವಚನ ಸ್ವೀಕಾರ


