HomeಮುಖಪುಟMGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

MGNREGA ಬದಲು VB-G Ram G : ರಾಜ್ಯಗಳ ಮೇಲೆ 40 ಶೇಕಡ ಆರ್ಥಿಕ ಹೊರೆ

ಯೋಜನೆಯಿಂದ ಮಹಾತ್ಮಾ ಗಾಂಧಿ ಹೆಸರು ಮಾಯ!

- Advertisement -
- Advertisement -

ಕಾಂಗ್ರೆಸ್‌ ನೇತೃತ್ವದ ಯುಪಿಎ ಸರ್ಕಾರ 2005ರಲ್ಲಿ ಜಾರಿಗೆ ತಂದ ಮಹತ್ವಕಾಂಕ್ಷೆಯ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎಂಜಿಎನ್‌ಆರ್‌ಇಜಿಎ) ಮತ್ತು ಅದರಡಿ ರೂಪಿಸಲಾದ ನರೇಗಾ ಯೋಜನೆಯ ಹೆಸರನ್ನು ಬದಲಿಸಲು ಕೇಂದ್ರ ಸರ್ಕಾರ ಮುಂದಾಗಿದೆ.

ನರೇಗಾ ಕಾಯ್ದೆಯ ಹೆಸರು ಬದಲಿಸುವ ವಿಕಸಿತ್ ಭಾರತ್ – ರೋಜ್‌ಗಾರ್ ಅಂಡ್ ಅಜೀವಿಕಾ ಮಿಷನ್ (ಗ್ರಾಮೀಣ್) ಮಸೂದೆ, 2025 ಅನ್ನು (ವಿಬಿ–ಜಿ ರಾಮ್ ಜಿ ಮಸೂದೆ) ಈ ವಾರ ಲೋಕಸಭೆಯಲ್ಲಿ ಮಂಡಿಸಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಕಾಯ್ದೆಯ ಅಡಿ ನರೇಗಾ ಯೋಜನೆಯ ಹೆಸರನ್ನು ‘ಪೂಜ್ಯ ಬಾಪು ಗ್ರಾಮೀಣ್ ರೋಜ್‌ಗಾರ್ ಯೋಜನಾ’ ಎಂದು ಬದಲಿಸಲು ಪ್ರಸ್ತಾಪಿಸಲಾಗಿದೆ.

ಹೊಸ ಕಾನೂನು ಗ್ರಾಮೀಣ ಪ್ರದೇಶದ ಕುಟುಂಬಗಳಿಗೆ ಒಂದು ಹಣಕಾಸು ವರ್ಷದಲ್ಲಿ ಪ್ರಸ್ತುತ ಖಾತರಿಪಡಿಸಿರುವ ವೇತನ ಸಹಿತ ಕೆಲಸ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಿದೆ. ಆದರೆ, ಇದೇ ವೇಳೆ ಕಾಯ್ದೆಯು ರಾಜ್ಯಗಳ ಮೇಲೆ ಹೆಚ್ಚಿನ ಆರ್ಥಿಕ ಹೊರೆ ಹೊರಿಸಲಿದೆ. ರಾಜ್ಯಗಳು ಯೋಜನೆಯ ಆರ್ಥಿಕ ಜವಾಬ್ದಾರಿಯಲ್ಲಿ ಹೆಚ್ಚಿನ ಪಾಲನ್ನು ಭರಿಸಬೇಕಾಗುತ್ತದೆ.

ಕೇಂದ್ರ ಸರ್ಕಾರ ಪ್ರತಿ ರಾಜ್ಯಕ್ಕೆ ಯೋಜನೆಯಡಿ ಸಿಗುವ ಹಣದ ಮೊತ್ತವನ್ನು ಮುಂಗಡವಾಗಿ ನಿರ್ಧರಿಸುವುದು ಹೊಸ ಕಾನೂನಿನ ಇನ್ನೊಂದು ನಿಬಂಧನೆಯಾಗಿದೆ. ಇದು ‘ನಿಯಮಾತ್ಮಕ’ (normative) ಆಧಾರದ ಮೇಲೆ ಇರುತ್ತದೆ. ಅಂದರೆ, ಕೆಲವು ನಿಗದಿತ ನಿಯತಾಂಕಗಳು (ಉದಾ: ಜನಸಂಖ್ಯೆ, ಬಡತನ ಮಟ್ಟ, ಇತ್ಯಾದಿ) ಆಧರಿಸಿ ಎಂದು ವರದಿಗಳು ಹೇಳಿವೆ.

ಪ್ರಸ್ತಾವಿತ ಮಸೂದೆಯ ಪ್ರಕಾರ, ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಸರ್ಕಾರಗಳು ಯೋಜನೆಯ ಆರ್ಥಿಕ ವೆಚ್ಚವನ್ನು 60:40 ಅನುಪಾತದಲ್ಲಿ ಭರಿಸಲಿವೆ. ಉತ್ತರಾಖಂಡ, ಹಿಮಾಚಲ ಪ್ರದೇಶ, ಜಮ್ಮು ಕಾಶ್ಮೀರ ಸೇರಿದಂತೆ ಈಶಾನ್ಯ ಮತ್ತು ಹಿಮಾಲಯನ್ ರಾಜ್ಯಗಳಿಗೆ, ಕೇಂದ್ರ ಮತ್ತು ರಾಜ್ಯಗಳ ನಡುವೆ ಹಣಕಾಸಿನ ಹಂಚಿಕೆಯು 90:10 ಅನುಪಾತದಲ್ಲಿ ಇರುತ್ತದೆ.

ಪ್ರಸ್ತುತ ಅಸ್ತಿತ್ವದಲ್ಲಿರುವ ನರೇಗಾ ಯೋಜನೆಯಲ್ಲಿ ಅನಕುಶಲ ಕೈಕೆಲಸದ ಕೂಲಿಯನ್ನು ಸಂಪೂರ್ಣವಾಗಿ (ಶೇ.100) ಕೇಂದ್ರ ಸರ್ಕಾರ ಭರಿಸುತ್ತಿದೆ. ವಸ್ತು ವೆಚ್ಚದಲ್ಲಿ (material costs) ಕೇಂದ್ರ ಸರ್ಕಾರ ಶೇಕಡ 75 ಮತ್ತು ರಾಜ್ಯಗಳು ಶೇಕಡ 25 ಪಾಲನ್ನು ಹೊಂದಿವೆ. ಕುಶಲ ಮತ್ತು ಅರೆಕುಶಲ ಕೆಲಸಗಾರರ ಕೂಲಿಯಲ್ಲಿ ಶೇಕಡ 75ರಷ್ಟು ಕೇಂದ್ರ ಭರಿಸುತ್ತಿದೆ. ಹೊಸ ಮಸೂದೆಯು ಹಣಕಾಸಿನ ಹಂಚಿಕೆಯನ್ನು ಬದಲಾಯಿಸುತ್ತದೆಯಾದರೂ, ನರೇಗಾ ಕಾಯ್ದೆಯ ಸೆಕ್ಷನ್ 6ರ ಅಡಿಯಲ್ಲಿ ಸೂಚಿಸಲಾದ ಅಸ್ತಿತ್ವದಲ್ಲಿರುವ ವೇತನ ದರಗಳನ್ನು ಹಾಗೆಯೇ ಉಳಿಸಿಕೊಳ್ಳಲಿದೆ ಎಂದು ವರದಿಯಾಗಿದೆ.

ಪ್ರಸ್ತಾವಿತ ಮಸೂದೆಯು ಯೋಜನೆಯ ಮೇಲ್ವಿಚಾರಣೆ, ಪರಿಶೀಲನೆ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಕೇಂದ್ರ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿ ಮತ್ತು ರಾಜ್ಯ ಗ್ರಾಮೀಣ ಉದ್ಯೋಗ ಖಾತರಿ ಮಂಡಳಿಗಳ ರಚನೆಗೆ ಅವಕಾಶ ನೀಡುತ್ತದೆ. ಇದರ ಜೊತೆಗೆ, ಪ್ರಮಾಣಿತ ಹಂಚಿಕೆಗಳು (Normative Allocation) ಏಕಪಕ್ಷೀಯ (One Sided) ಮತ್ತು ಇತರ ಕಾರ್ಯಾಚರಣೆಯ ಸಮಸ್ಯೆಗಳಿಗೆ ಸಂಬಂಧಿಸಿದ ವಿಷಯಗಳನ್ನು ಶಿಫಾರಸು ಮಾಡಲು ಕೇಂದ್ರ ಮತ್ತು ರಾಜ್ಯ ಮಟ್ಟದಲ್ಲಿ ಸ್ಟೀರಿಂಗ್ ಸಮಿತಿಗಳನ್ನು ಸ್ಥಾಪಿಸಲು ಅನುವು ಮಾಡಿಕೊಡುತ್ತದೆ.

ಮತ್ತೊಂದು ಪ್ರಮುಖ ನಿಬಂಧನೆಯೆಂದರೆ, ರಾಜ್ಯಗಳಿಗೆ ಕೃಷಿ ಋತುಗಳ ಗರಿಷ್ಠ ಅವಧಿಯಲ್ಲಿ ಯೋಜನೆಯ ಅನುಷ್ಠಾನವನ್ನು ತಾತ್ಕಾಲಿಕವಾಗಿ ನಿಲ್ಲಿಸಲು ಅವಕಾಶ ನೀಡುತ್ತದೆ. ಕೃಷಿ ಕಾರ್ಮಿಕರ ಸಮರ್ಪಕ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಲು, ಯೋಜನೆಯಡಿಯಲ್ಲಿ ಕೆಲಸಗಳನ್ನು ಕೈಗೊಳ್ಳದ ಬಿತ್ತನೆ ಮತ್ತು ಕೊಯ್ಲು ಋತುಗಳನ್ನು ಒಳಗೊಂಡ ನಿರ್ದಿಷ್ಟ ಅವಧಿಗಳನ್ನು ತಿಳಿಸಲು ಮಸೂದೆ ರಾಜ್ಯಗಳಿಗೆ ಅಧಿಕಾರ ನೀಡುತ್ತದೆ.

ಮಹಿಳೆಯರು, ವೃದ್ಧರು, ಅಂಗವಿಕಲರು ಮತ್ತು ದುರ್ಬಲಗೊಳಿಸುವ ಕಾಯಿಲೆಗಳಿಂದ ಬಳಲುತ್ತಿರುವವರು ಸೇರಿದಂತೆ ದುರ್ಬಲ ಗುಂಪುಗಳಿಗೆ ಸೂಕ್ತವಾದ ಕೆಲಸದ ವರ್ಗಗಳಲ್ಲಿ ಭಾಗವಹಿಸಲು ಅನುವು ಮಾಡಿಕೊಡಲು ವಿಶೇಷ ದರಗಳ ವೇಳಾಪಟ್ಟಿಯನ್ನು ಮಸೂದೆ ಪ್ರಸ್ತಾಪಿಸುತ್ತದೆ.

ಇದಲ್ಲದೆ, ಅರ್ಜಿ ಸಲ್ಲಿಸಿದ 15 ದಿನಗಳ ಒಳಗೆ ಉದ್ಯೋಗ ಒದಗಿಸದಿದ್ದರೆ ದೈನಂದಿನ ನಿರುದ್ಯೋಗ ಭತ್ಯೆಯ ನಿಬಂಧನೆಯನ್ನು ಮಸೂದೆ ಉಳಿಸಿಕೊಂಡಿದೆ. ನಿರುದ್ಯೋಗ ಭತ್ಯೆ ಮತ್ತು ವಿಳಂಬ ಪರಿಹಾರದ ವೆಚ್ಚವನ್ನು ರಾಜ್ಯ ಸರ್ಕಾರಗಳು ಭರಿಸುತ್ತವೆ. ಕೆಲಸಗಾರರ ಹಾಜರಾತಿ ಪಟ್ಟಿ ಮುಚ್ಚಿದ 15 ದಿನಗಳ ಒಳಗೆ ವೇತನವನ್ನು ಪಾವತಿಸದ ಸಂದರ್ಭಗಳಲ್ಲಿ, ಹದಿನಾರನೇ ದಿನದಿಂದ ಪಾವತಿಸದ ವೇತನದ 0.05 ಪ್ರತಿಶತದಷ್ಟು ದರದಲ್ಲಿ ಪರಿಹಾರವನ್ನು ಪಡೆಯಲು ಕಾರ್ಮಿಕರಿಗೆ ಅರ್ಹತೆ ಇರುತ್ತದೆ.

ಪ್ರಸ್ತಾವಿತ ಮಸೂದೆ ಬಗ್ಗೆ ಪ್ರತಿಕ್ರಿಯಿಸಿರುವ ಸಿಪಿಐ (ಎಂ) ರಾಜ್ಯಸಭಾ ಸಂಸದ ಜಾನ್ ಬ್ರಿಟ್ಟಾಸ್, “ಸರ್ಕಾರವು ಹಕ್ಕು ಆಧಾರಿತ ಖಾತರಿ ಕಾನೂನಿನ ಆತ್ಮವನ್ನು ತೆಗೆದುಹಾಕಿ, ಸರ್ಕಾರಗಳು ಮತ್ತು ಕಾರ್ಮಿಕರ ವಿರುದ್ಧ ಸಿದ್ದಪಡಿಸಲಾದ ಷರತ್ತುಬದ್ಧ, ಕೇಂದ್ರ ನಿಯಂತ್ರಿತ ಯೋಜನೆಯನ್ನು ಜಾರಿಗೆ ತರುತ್ತಿದೆ” ಎಂದು ಹೇಳಿದ್ದಾರೆ.

“125 ಕೆಲಸದ ದಿನಗಳು’ ಎಂಬುವುದು ಹೆಡ್‌ಲೈನ್ ಮಾತ್ರ. ಇದು ಆಕರ್ಷಣೆಗೆ ಒಡ್ಡುವ ಸುದ್ದಿಯಾದರೆ, 60:40 ಎಂಬುದು ಸಣ್ಣ ಅಕ್ಷರಗಳಲ್ಲಿರುವ ನಿಜವಾದ ವಿವರವಾಗಿದೆ. ನರೇಗಾ ಯೋಜನೆಯಲ್ಲಿ ಅನಕುಶಲ ಕೆಲಸಗಳ ಕೂಲಿಯನ್ನು ಸಂಪೂರ್ಣವಾಗಿ ಕೇಂದ್ರ ಸರ್ಕಾರವೇ ಭರಿಸುತ್ತಿತ್ತು. ಆದರೆ, ಹೊಸ ಯೋಜನೆಯು ತೆಗೆದು ಹಾಕಿ ರಾಜ್ಯಗಳು ಶೇ.40ರಷ್ಟು ಹೊರೆ ಹೊರರುವಂತೆ ಮಾಡಲಿದೆ. ಇದರಿಂದ ರಾಜ್ಯಗಳು ಈಗ ಸುಮಾರು 50,000 ಕೋಟಿ ರೂಪಾಯಿಗಳಿಗಿಂತ ಹೆಚ್ಚು ಹಣ ಖರ್ಚು ಮಾಡಬೇಕಾಗುತ್ತದೆ. ಕೇರಳ ರಾಜ್ಯ ಏಕಾಏಕಿ ಹೆಚ್ಚುವರಿ 2,000 ದಿಂದ 2,500 ಕೋಟಿ ರೂಪಾಯಿಗಳ ಹೊರೆ ಹೊರಬೇಕಾಗುತ್ತದೆ. ಇದು ಸುಧಾರಣೆಯಲ್ಲ, ಬದಲಿಗೆ ರಾಜ್ಯಗಳ ಮೇಲೆ ಗುಪ್ತವಾಗಿ ಹಣದ ಹೊರೆ ಹೇರುವ ತಂತ್ರವಾಗಿದೆ. ರಾಜ್ಯಗಳು ಹೆಚ್ಚು ಹಣ ಖರ್ಚು ಮಾಡಬೇಕು, ಕೇಂದ್ರ ಸರ್ಕಾರ ಹೊಣೆಗಾರಿಕೆಯಿಂದ ದೂರ ಸರಿದು ನಿಂತುಕೊಂಡು ಕೀರ್ತಿ ಮಾತ್ರ ಪಡೆಯಬೇಕು ಎಂಬುವುದು ಹೊಸ ಒಕ್ಕೂಟ ವ್ಯವಸ್ಥೆ” ಎಂದು ಜಾನ್ ಬ್ರಿಟ್ಟಾಸ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಬರೆದುಕೊಂಡಿದ್ದಾರೆ.

“ನರೇಗಾ ಬೇಡಿಕೆ ಆಧಾರಿತವಾಗಿದೆ. ಒಬ್ಬ ಕೆಲಸಗಾರ ಕೆಲಸ ಕೇಳಿದರೆ ಕೇಂದ್ರ ಸರ್ಕಾರವೇ ಕೂಲಿ ಪಾವತಿಸಬೇಕಿತ್ತು. ಆದರೆ, ಹೊಸ ಯೋಜನೆಯು ಇದನ್ನು ಬದಲಾಯಿಸಿ ಕೇಂದ್ರ ಸರ್ಕಾರ ಮುಂಗಡ ಹಣ ಹಂಚಿಕೆ ನಿಯಮಗಳು ಮತ್ತು ಮಿತಿಗಳನ್ನು ನಿಗದಿಪಡಿಸುತ್ತದೆ. ಇದರ ಪ್ರಕಾರ, ಹಣ ಮುಗಿದರೆ ಜನರ ಹಕ್ಕುಗಳೂ ಮುಗಿದಂತೆ. ಹಾಗಾಗಿ, ಇದು ಕಾನೂನುಬದ್ಧ ಉದ್ಯೋಗ ಖಾತ್ರಿಯನ್ನು ರಾಜ್ಯಗಳ ವೆಚ್ಚದಲ್ಲಿ ನಿರ್ವಹಣೆ ಮಾಡಿ ಕೇಂದ್ರ ಸರ್ಕಾರ ಪುಕ್ಕಟೆ ಪ್ರಚಾರ ಪಡೆಯುವ ಯೋಜನೆಯಾಗಿ ಕನಿಷ್ಠ ಮಟ್ಟಕ್ಕೆ ಇಳಿಸಲಾಗಿದೆ” ಎಂದು ಜಾನ್ ಬ್ರಿಟ್ಟಾಸ್ ಟೀಕಿಸಿದ್ದಾರೆ.

“ಹೊಸ ಕಾನೂನು ಪಂಚಾಯತ್‌ಗಳು ನಿರ್ಧಾರ ತೆಗೆದುಕೊಳ್ಳುವ ಅಧಿಕಾರವನ್ನು ಕಡೆಗಣಿಸಲಿದೆ. ಗ್ರಾಮೀಣ ಕಾರ್ಮಿಕರನ್ನು ಡ್ಯಾಶ್ ಬೋರ್ಡ್‌ಗೆ ಸೀಮಿತಗೊಳಿಸಲಿದೆ. ನರೇಗಾ ಯೋಜನೆಯು ಸ್ಥಳೀಯ ಅಗತ್ಯಗಳ ಆಧಾರದ ಮೇಲೆ ಕೆಲಸಗಳನ್ನು ಯೋಜಿಸಲು ಗ್ರಾಮ ಸಭೆಗಳು ಮತ್ತು ಪಂಚಾಯತ್‌ಗಳಿಗೆ ಅಧಿಕಾರ ನೀಡಿತ್ತು. ಆದರೆ, ಹೊಸ ಯೋಜನೆ ಜಿಐಎಸ್‌ ಉಪಕರಣಗಳು, ಪಿಎಂ ಗತಿಶಕ್ತಿ ಲೇಯರ್‌ಗಳು ಮತ್ತು ಕೇಂದ್ರೀಯ ಡಿಜಿಟಲ್ ಸ್ಟ್ಯಾಕ್‌ಗಳನ್ನು ಕಡ್ಡಾಯಗೊಳಿಸುತ್ತದೆ. ಸ್ಥಳೀಯ ಆದ್ಯತೆಗಳನ್ನು ವಿಕಸಿತ ಭಾರತ್ ರಾಷ್ಟ್ರೀಯ ಗ್ರಾಮೀಣ ಮೂಲಸೌಕರ್ಯ ಸ್ಟ್ಯಾಕ್ ಮೂಲಕ ಫಿಲ್ಟರ್ ಮಾಡಲಾಗುತ್ತದೆ. ಇದು ಬಯೋಮೆಟ್ರಿಕ್, ಜಿಯೋ-ಟ್ಯಾಗಿಂಗ್, ಡ್ಯಾಶ್‌ಬೋರ್ಡ್‌ಗಳು ಮತ್ತು ಎಐ ಆಡಿಟ್‌ಗಳನ್ನು ಕಾನೂನುಬದ್ಧಗೊಳಿಸುತ್ತದೆ. ಈ ಮೂಲಕ ಲಕ್ಷಾಂತರ ಗ್ರಾಮೀಣ ಕಾರ್ಮಿಕರಿಗೆ ತಾಂತ್ರಿಕ ಸಮಸ್ಯೆಗಳನ್ನು ಉಂಟು ಮಾಡಲಿದೆ. ಅವರನ್ನು ಯೋಜನೆಯಿಂದ ಹೊರಗಟ್ಟಲಿದೆ” ಎಂದಿದ್ದಾರೆ.

“ಹೊಸ ಕಾನೂನು ಯೋಜನೆಯ ವಿಕೇಂದ್ರೀಕರಣವನ್ನು ಕೇಂದ್ರೀಕರಿಸಲಿದೆ. ಜನರು ಡೇಟಾ ಪಾಯಿಂಟ್‌ಗಳಾಗುತ್ತಾರೆ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

“ಹೊಸ ಕಾನೂನಿನ ಇನ್ನೊಂದು ಕೆಟ್ಟ ನಿಬಂಧನೆ ಎಂದರೆ, ಕೃಷಿ ಋತುಗಳ ಹೆಸರಿನಲ್ಲಿ ಪ್ರತಿ ವರ್ಷ 60 ದಿನಗಳವರೆಗೆ ಕೆಲಸವನ್ನು ಸ್ಥಗಿತಗೊಳಿಸುವುದು” ಎಂದಿರುವ ಬ್ರಿಟ್ಟಾಸ್, “ಇದು ಉದ್ಯೋಗ ಖಾತರಿಯೇ..ಇಲ್ಲ ಕಾರ್ಮಿಕರ ನಿಯಂತ್ರಣವೇ?” ಎಂದು ಪ್ರಶ್ನಿಸಿದ್ದಾರೆ. “ಈ ನಿಬಂಧನೆಯ ಮೂಲಕ ಕಾರ್ಮಿಕರಿಗೆ ಕೆಲಸ ಮಾಡಬೇಡಿ, ಹಣ ಸಂಪಾದಿಸಬೇಡಿ, ಕಾಯಿರಿ ಎಂದು ಹೇಳಲಾಗುತ್ತದೆ. ಖಾಸಗಿ ಜಮೀನುಗಳಿಗೆ ಕಾರ್ಮಿಕರನ್ನು ತಳ್ಳಲು ಸಾರ್ವಜನಿಕ ಕೆಲಸಗಳನ್ನು ನಿಲ್ಲಿಸುವುದು ಕಲ್ಯಾಣವಲ್ಲ, ಇದು ಸರ್ಕಾರವೇ ಕಾರ್ಮಿಕರನ್ನು ಪೂರೈಸಿದಂತೆ. ಇದು ಕಾರ್ಮಿಕರ ವೇತನ, ಆಯ್ಕೆ ಮತ್ತು ಘನತೆಯನ್ನು ಕಸಿದುಕೊಳ್ಳುತ್ತದೆ” ಎಂದಿದ್ದಾರೆ.

ವಿಬಿ–ಜಿ ರಾಮ್ ಜಿ ಎಂದರೆ ಕೇಂದ್ರದ ನಿಯಂತ್ರಣ, ರಾಜ್ಯದ ಹಣ ಮತ್ತು ‍‍‍ಷರತ್ತುಗಳ ಮೂಲಕ ಜನರ ಹಕ್ಕುಗಳನ್ನು ನಿಯಂತ್ರಿಸುವುದಾಗಿದೆ. ಇದು ಕಾರ್ಮಿಕರ ಮೇಲೆ ಹೆಚ್ಚಿನ ಹೊರೆಯನ್ನು ಹೊರಿಸುತ್ತದೆಯೇ ಹೊರತು, ನರೇಗಾ ಯೋಜನೆಯನ್ನು ಸುಧಾರಿಸುವುದಿಲ್ಲ. ಆರ್ಥಿಕ, ಸಾಂಸ್ಥಿಕ ಮತ್ತು ನೈತಿಕವಾಗಿ ನರೇಗಾ ಯೋಜನೆಯನ್ನು ಹಾಳು ಮಾಡುತ್ತದೆ. ರಾಮ್ ಹೆಸರಿನಲ್ಲಿ, ರಾಜ್ಯಗಳು ಮತ್ತು ಬಡವರನ್ನು ದಂಡಿಸಲಾಗುತ್ತಿದೆ. ಹಕ್ಕು, ಅಧಿಕಾರವನ್ನು ಕಸಿದುಕೊಳ್ಳಲಾಗುತ್ತಿದೆ. ಆರ್ಥಿಕ ಹೊರೆಯನ್ನು ರಾಜ್ಯಗಳ ಮೇಲೆ ಹೊರಿಸಿ ಜವಾಬ್ದಾರಿಯಿಂದ ನುಣುಚಿಕೊಳ್ಳಲಾಗುತ್ತಿದೆ ಎಂದು ಜಾನ್ ಬ್ರಿಟ್ಟಾಸ್ ಹೇಳಿದ್ದಾರೆ.

ರಾಜ್ಯಗಳ ಮೇಲೆ ಹೆಚ್ಚಿನ ಹೊರೆ- ಬಿಜೆಪಿ ಮಿತ್ರ ಪಕ್ಷ ಟಿಡಿಪಿ

ಪ್ರಸ್ತಾವಿತ ಕಾನೂನಿನ ಬಗ್ಗೆ ಎನ್‌ಡಿಎ ಒಕ್ಕೂಟದ ಬಿಜೆಪಿ ಮಿತ್ರ ಪಕ್ಷ ಟಿಡಿಪಿ ಪ್ರತಿಕ್ರಿಯೆ ನೀಡಿದೆ. ಈ ಕುರಿತು ಇಂಡಿಯನ್ ಎಕ್ಸ್‌ಪ್ರೆಸ್ ಜೊತೆ ಮಾತನಾಡಿರುವ ಆಂಧ್ರ ಪ್ರದೇಶದ ಹಣಕಾಸು, ಯೋಜನೆ ಮತ್ತು ಸಂಸದೀಯ ವ್ಯವಹಾರಗಳ ಸಚಿವ ಪಯ್ಯಾವುಲ ಕೇಶವ್, “ಪ್ರಸ್ತಾವಿತ ಕಾನೂನನ್ನು ನಾವು ಒಪ್ಪುತ್ತೇವೆ. ಆದರೆ, ಅದರಲ್ಲಿನ ಹಣಕಾಸಿನ ಹಂಚಿಕೆಯ ಕುರಿತ ನಿಯಮಗಳು ರಾಜ್ಯಗಳ ಮೇಲೆ ಹೆಚ್ಚಿನ ಹೊರೆ ಹೊರಿಸುವಂತಿದೆ. ಹಾಗಾಗಿ, ನಾವು ಕಾನೂನನ್ನು ಪರಿಶೀಲಿಸಬೇಕಿದೆ” ಎಂದಿದ್ದಾರೆ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....

ಬಿಹಾರ: ಸರ್ಕಾರಿ ಶಾಲಾ ಶಿಕ್ಷಕರಿಗೆ ಬೀದಿ ನಾಯಿಗಳನ್ನು ಎಣಿಸುವ ಹೆಚ್ಚುವರಿ ಕರ್ತವ್ಯ ವಹಿಸಿದ ಪುರಸಭೆ  

ಪಾಟ್ನಾ: ಸುಪ್ರೀಂ ಕೋರ್ಟ್ ಬೀದಿ ನಾಯಿಗಳ ವಿಚಾರದಲ್ಲಿ ಮಹತ್ವದ ಆದೇಶ ನೀಡಿದೆ. ಸಾರ್ವಜನಿಕ ರಸ್ತೆಗಳು, ಬೀದಿಗಳು ಬೀದಿನಾಯಿ ಮುಕ್ತವಾಗಿರಬೇಕು ಎಂದು ಹೇಳಿದೆ. ಆದರೆ ಈ ಆದೇಶ ಸರ್ಕಾರಿ ಶಾಲಾ ಶಿಕ್ಷಕರ ಪಾಲಿಗೆ ದೊಡ್ಡ...

ಮಮತಾ ಬ್ಯಾನರ್ಜಿಯ ರಾಜಕೀಯ ಸಲಹಾ ಸಂಸ್ಥೆ ಐ-ಪ್ಯಾಕ್, ಅದರ ಮುಖ್ಯಸ್ಥ ಪ್ರತೀಕ್ ಜೈನ್ ಮನೆ ಮೇಲೆ ಇಡಿ ದಾಳಿ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ದಾಳಿ...

ಉತ್ತರಪ್ರದೇಶ: ಕಬ್ಬಿನ ಗದ್ದೆಯಲ್ಲಿ ಸುಟ್ಟ, ಅರೆನಗ್ನ ಮಹಿಳೆಯ ಮೃತದೇಹ ಪತ್ತೆ: ಅತ್ಯಾಚಾರ ಮಾಡಿ ಬೆಂಕಿ ಹಚ್ಚಿರುವ ಶಂಕೆ

ಹಾಪುರ್: ಉತ್ತರ ಪ್ರದೇಶದ ಹಾಪುರ್ ಜಿಲ್ಲೆಯಲ್ಲಿ ಆಘಾತಕಾರಿ ಘಟನೆಯೊಂದು ಬೆಳಕಿಗೆ ಬಂದಿದ್ದು, ಬಹದ್ದೂರ್‌ಗಢ ಪೊಲೀಸ್ ಠಾಣೆ ವ್ಯಾಪ್ತಿಯ ಲಹಾದ್ರಾ ಗ್ರಾಮದ ಇಟ್ಟಿಗೆ ಗೂಡುಗಳ ಹಿಂದಿನ ಕಬ್ಬಿನ ಗದ್ದೆಯಲ್ಲಿ ಸುಮಾರು 30 ವರ್ಷ ವಯಸ್ಸಿನ...

ಗೋಮಾಂಸ ಸೇವನೆ ಶಂಕೆಯಲ್ಲಿ ಮಾನಸಿಕ ಅಸ್ವಸ್ಥ ವ್ಯಕ್ತಿಯ ಮೇಲೆ ಕ್ರೂರ ಹಲ್ಲೆ : ಮೂವರು ದುಷ್ಕರ್ಮಿಗಳ ಬಂಧನ

ಸಾರ್ವಜನಿಕವಾಗಿ ಹಸುವನ್ನು ಕೊಂದು, ಅದರ ಮಾಂಸವನ್ನು ತಿಂದಿದ್ದಾರೆ ಎಂದು ಆರೋಪಿಸಿ ಮಾನಸಿಕ ಅಸ್ವಸ್ಥ ವ್ಯಕ್ತಿ ಮೇಲೆ ಸ್ವಘೋಷಿತ ಗೋರಕ್ಷಕರು ಕ್ರೂರವಾಗಿ ಹಲ್ಲೆ ನಡೆಸಿದ ಘಟನೆ ರಾಜಸ್ಥಾನದ ಝಾಲಾವರ್ ಜಿಲ್ಲೆಯ ಅಕ್ಲೇರಾ ತಾಲೂಕಿನ ಕಿಶನ್‌ಪುರ...

‘ನಿಮ್ಮನ್ನು ನಂಬಿ ಬಂದ ನಕ್ಸಲ್ ಕಾರ್ಯಕರ್ತರಿಗೆ ಕೊಟ್ಟ ಮಾತು ಉಳಿಸಿಕೊಳ್ಳಿ’: ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ ಶಾಂತಿಗಾಗಿ ನಾಗರೀಕ ವೇದಿಕೆ

ಬೆಂಗಳೂರು: ‘ಮುಖ್ಯವಾಹಿನಿಗೆ ಬಂದ ಏಳೂ ಜನ ನಕ್ಸಲೀಯರು ಜೈಲಿನಲ್ಲೇ ಇದ್ದಾರೆ. ಬಹಳ ಸೊರಗಿದ್ದಾರೆ. ತೀವ್ರ ದೈಹಿಕ ಹಾಗೂ ಮಾನಸಿಕ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರನ್ನು ಹೋಗಿ ಕಾಣುವುದೇ ನಮ್ಮ ಪಾಲಿಗೆ ದೊಡ್ಡ ಹಿಂಸೆಯಾಗಿದೆ ಎಂದು...

ಕೋಗಿಲು ಮನೆಗಳ ನೆಲಸಮ : ಪ್ರತಿಭಟಿಸಿದ ಹೋರಾಟಗಾರರ ಮೇಲೆ ಎಫ್‌ಐಆರ್

ಕೋಗಿಲು ಬಡಾವಣೆಯಲ್ಲಿ ಬಡವರ ಮನೆಗಳ ನೆಲಸಮ ವೇಳೆ ಬಿಗುವಿನ ವಾತಾವರಣ ಸೃಷ್ಟಿಸಿದ್ದಾರೆ ಎಂಬ ಆರೋಪದ ಮೇಲೆ ಹೋರಾಟಗಾರರ ವಿರುದ್ದ ಯಲಹಂಕ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ. ಜನಪರ ವೇದಿಕೆಯ ಮುಖಂಡರಾದ ಗೌರಮ್ಮ ಮತ್ತು ಮನೋಹರ್,...

17 ವರ್ಷದ ಮಹಿಳಾ ಅಥ್ಲೀಟ್ ಮೇಲೆ ಲೈಂಗಿಕ ದೌರ್ಜನ್ಯ ಆರೋಪ: ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಮಾನತು

ಫರಿದಾಬಾದ್‌ನ ಹೋಟೆಲ್‌ನಲ್ಲಿ 17 ವರ್ಷದ ರಾಷ್ಟ್ರಮಟ್ಟದ ಮಹಿಳಾ ಶೂಟರ್ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಹರಿಯಾಣ ಪೊಲೀಸರು ಪ್ರಕರಣ ದಾಖಲಿಸಿದ ನಂತರ ರಾಷ್ಟ್ರೀಯ ಶೂಟಿಂಗ್ ತರಬೇತುದಾರ ಅಂಕುಶ್ ಭಾರದ್ವಾಜ್ ಅವರನ್ನು...

ಸುಪ್ರೀಂ ಕೋರ್ಟ್‌ನಿಂದ ಜಾಮೀನು : ಗುಲ್ಫಿಶಾ ಫಾತಿಮಾ ಸೇರಿದಂತೆ ನಾಲ್ವರು ಜೈಲಿನಿಂದ ಬಿಡುಗಡೆ

ಈಶಾನ್ಯ ದೆಹಲಿಯ 2020ರ ಗಲಭೆ ಪಿತೂರಿ ಆರೋಪದಲ್ಲಿ ಬಂಧಿತರಾಗಿದ್ದ ನಾಲ್ವರು ವಿದ್ಯಾರ್ಥಿ ಹೋರಾಟಗಾರರು ಬುಧವಾರ (ಜ.7) ಜೈಲಿನಿಂದ ಹೊರ ಬಂದಿದ್ದಾರೆ. ಗುಲ್ಫಿಶಾ ಫಾತಿಮಾ, ಮೀರಾನ್ ಹೈದರ್, ಶಿಫಾ ಉರ್ ರೆಹಮಾನ್ ಮತ್ತು ಮೊಹಮ್ಮದ್ ಸಲೀಮ್...