ಮಲಯಾಳಂ ಚಿತ್ರರಂಗದ ಹಿರಿಯ ನಟ, ಚಿತ್ರಕಥೆಗಾರ, ನಿರ್ದೇಶಕ ಹಾಗೂ ನಿರ್ಮಾಪಕ ಶ್ರೀನಿವಾಸನ್ ಶನಿವಾರ (ಡಿ.20) ನಿಧನರಾದರು. ಅವರಿಗೆ 69 ವರ್ಷ ವಯಸ್ಸಾಗಿತ್ತು.
ದೀರ್ಘ ಸಮಯದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಶ್ರೀನಿವಾಸನ್ ಅವರು, ಚಿಕಿತ್ಸೆ ಪಡೆಯುತ್ತಿದ್ದರು. ಶುಕ್ರವಾರ ಆರೋಗ್ಯದಲ್ಲಿ ಹಠಾತ್ ಏರುಪೇರು ಕಂಡುಬಂದ ನಂತರ ಅವರನ್ನು ತ್ರಿಪ್ಪುನಿತುರಾದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಶನಿವಾರ ಬೆಳಿಗ್ಗೆ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು ಎಂದು ಮಾತೃಭೂಮಿ ನ್ಯೂಸ್ ವರದಿ ಮಾಡಿದೆ.
ಕೇರಳದ ತಲಶ್ಶೇರಿ ಬಳಿಯ ಪತ್ಯಂನಲ್ಲಿ ಏಪ್ರಿಲ್ 6, 1956ರಂದು ಜನಿಸಿದ ಶ್ರೀನಿವಾಸನ್, ಶಾಲಾ ಶಿಕ್ಷಕ ಮತ್ತು ಗೃಹಿಣಿ ದಂಪತಿಯ ಮಗನಾಗಿದ್ದರು. ಕದಿರೂರಿನಲ್ಲಿ ತಮ್ಮ ಶಾಲಾ ಶಿಕ್ಷಣವನ್ನು ಪೂರ್ಣಗೊಳಿಸಿದ ಅವರು, ಬಳಿಕ ಮಟ್ಟನೂರಿನ ಪಿಆರ್‌ಎನ್‌ಎಸ್‌ಎಸ್ ಕಾಲೇಜಿನಿಂದ ಅರ್ಥಶಾಸ್ತ್ರದಲ್ಲಿ ಪದವಿ ಪಡೆದರು. ನಂತರ ಚೆನ್ನೈನ ತಮಿಳುನಾಡು ಚಲನಚಿತ್ರ ಮತ್ತು ದೂರದರ್ಶನ ಸಂಸ್ಥೆಯಲ್ಲಿ ಔಪಚಾರಿಕ ಚಲನಚಿತ್ರ ತರಬೇತಿಯನ್ನು ಪಡೆದರು.
1977ರಲ್ಲಿ ಪಿ.ಎ ಬ್ಯಾಕರ್ ಅವರ ‘ಮಣಿಮುಳಕ್ಕಂ’ ಚಿತ್ರದ ಮೂಲಕ ಶ್ರೀನಿವಾಸನ್ ನಟನಾ ರಂಗಕ್ಕೆ ಪಾದಾರ್ಪಣೆ ಮಾಡಿದರು. ಮಲಯಾಳಂ ಚಿತ್ರರಂಗದ ಅತ್ಯಂತ ಗೌರವಾನ್ವಿತ ನಟರಲ್ಲಿ ಒಬ್ಬರಾದರು. ಸುಮಾರು ಐದು ದಶಕಗಳಲ್ಲಿ, ಅವರು 225ಕ್ಕೂ ಹೆಚ್ಚು ಚಲನಚಿತ್ರಗಳಲ್ಲಿ ನಟಿಸಿದ್ದಾರೆ. ತೀಕ್ಷ್ಣವಾದ ಸಾಮಾಜಿಕ ವಿಡಂಬನೆ ಮತ್ತು ಸ್ಮರಣೀಯ ಅಭಿನಯಕ್ಕಾಗಿ ಮೆಚ್ಚುಗೆ ಗಳಿಸಿದ್ದಾರೆ.
ನಟನೆಯ ಹೊರತಾಗಿ, ಶ್ರೀನಿವಾಸನ್ ಓರ್ವ ಪ್ರಸಿದ್ಧ ಚಿತ್ರಕಥೆಗಾರ ಮತ್ತು ನಿರ್ದೇಶಕರಾಗಿದ್ದರು. ಇಂದಿಗೂ ನೆನಪಿನಲ್ಲಿ ಉಳಿಯುವ ಐಕಾನಿಕ್ ಹಿಟ್ ಚಿತ್ರಗಳಿಗೆ ಅವರು ಚಿತ್ರಕಥೆಗಳನ್ನು ಬರೆದಿದ್ದಾರೆ. ರಾಜ್ಯ ಮತ್ತು ರಾಷ್ಟ್ರೀಯ ಪ್ರಶಸ್ತಿಗಳನ್ನು ಗೆದ್ದ ಚಲನಚಿತ್ರಗಳ ನಿರ್ದೇಶನ ಮಾಡಿದ್ದಾರೆ. ಶ್ರೀನಿವಾಸನ್ ಅವರ ಕೆಲಸಗಳು ಹಾಸ್ಯವನ್ನು ಸಾಮಾಜಿಕ ಟೀಕೆಯೊಂದಿಗೆ ಹೆಣೆದುಕೊಂಡಿರುತ್ತಿದ್ದವು. ಇದರಿಂದ ಅವರ ಸಿನಿಮಾಗಳು ಪ್ರೇಕ್ಷಕರೊಂದಿಗೆ ಆಳವಾದ ಒಡನಾಟವನ್ನು ಉಂಟುಮಾಡುತ್ತಿದ್ದವು ಮತ್ತು ನಿಜಜೀವನದ ಸಮಸ್ಯೆಗಳನ್ನು ಚರ್ಚಿಸುತ್ತಿದ್ದವು.
ಶ್ರೀನಿವಾಸನ್ ನಿರ್ಮಾಪಕರೂ ಆಗಿದ್ದರು. ಅವರು ಸಹ-ನಿರ್ಮಾಣ ಮಾಡಿದ ಯಶಸ್ವಿ ಚಲನಚಿತ್ರಗಳು ಸಾಂಸ್ಕೃತಿಕ ಮೈಲುಗಲ್ಲುಗಳಾದವು. ನಟನಾಗಿ, ಬರಹಗಾರನಾಗಿ ಮತ್ತು ಚಿತ್ರನಿರ್ಮಾಪಕನಾಗಿ ಅವರ ಕೊಡುಗೆಗಳು ಆಧುನಿಕ ಮಲಯಾಳಂ ಸಿನಿಮಾವನ್ನು ರೂಪಿಸಲು ಸಹಾಯ ಮಾಡಿದವು ಮತ್ತು ತಲತಲಾಂತರದ ನಟರು ಮತ್ತು ನಿರ್ದೇಶಕರ ಮೇಲೆ ಪ್ರಭಾವ ಬೀರಿದವು.


