ಹಿಂದೂ ದೇವಾಲಯಗಳನ್ನು ರಾಜ್ಯ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸುವ ಉದ್ದೇಶದಿಂದ ರಾಷ್ಟ್ರವ್ಯಾಪಿ ಅಭಿಯಾನವನ್ನು ಪ್ರಾರಂಭಿಸುವ ಯೋಜನೆಯನ್ನು, ಬಿಜೆಪಿ ಬೆಂಬಲಿತ ಸಂಘಟನೆಯಾದ ವಿಶ್ವ ಹಿಂದೂ ಪರಿಷತ್ (ವಿಎಚ್‌ಪಿ) ಗುರುವಾರ ಪ್ರಕಟಿಸಿದೆ. ಜನವರಿ 5 ರಂದು ಆಂಧ್ರಪ್ರದೇಶದ ವಿಜಯವಾಡದಲ್ಲಿ ಸಾರ್ವಜನಿಕ ಜಾಗೃತಿ ಕಾರ್ಯಕ್ರಮದೊಂದಿಗೆ ಅಭಿಯಾನ ಪ್ರಾರಂಭವಾಗಲಿದೆ.
ಮಾಧ್ಯಮಗಳನ್ನು ಉದ್ದೇಶಿಸಿ ಮಾತನಾಡಿದ ವಿಎಚ್‌ಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ ಮಿಲಿಂದ್ ಪರಾಂಡೆ, “ಸಮುದಾಯದ ಸದಸ್ಯರಿಂದ ಹಿಂದೂ ದೇವಾಲಯಗಳ ಆಡಳಿತ ಮತ್ತು ನಿರ್ವಹಣೆಗೆ ಕರಡು ಕಾನೂನನ್ನು ಈಗಾಗಲೇ ಸಿದ್ಧಪಡಿಸಲಾಗಿದೆ. ನಾನು ಕೆಲವು ದಿನಗಳ ಹಿಂದೆ ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರ ಪರಿಗಣನೆಗೆ ಕರಡು ಪ್ರತಿಯನ್ನು ನೀಡಿದ್ದೇನೆ” ಎಂದು ಅವರು ಹೇಳಿದರು.
ನಿವೃತ್ತ ಮುಖ್ಯ ನ್ಯಾಯಮೂರ್ತಿಗಳು, ಸುಪ್ರೀಂ ಕೋರ್ಟ್ ವಕೀಲರು, ಧಾರ್ಮಿಕ ಮುಖಂಡರು ಮತ್ತು ವಿಎಚ್‌ಪಿ ಕಾರ್ಯಕರ್ತರನ್ನು ಒಳಗೊಂಡಿರುವ ಚಿಂತಕರ ಚಾವಡಿಯಿಂದ ರಚಿಸಲಾದ ಕರಡು ಕಾನೂನು, ದೇವಸ್ಥಾನದ ಆಡಳಿತವನ್ನು ಹಿಂದೂ ಸಮಾಜವು ನಿರ್ವಹಿಸುವ ಚೌಕಟ್ಟನ್ನು ವಿವರಿಸುತ್ತದೆ. “ನಾವು ಕಳೆದ 2-3 ವರ್ಷಗಳಿಂದ ಅದರ ಮೇಲೆ ಕೆಲಸ ಮಾಡುತ್ತಿದ್ದೇವೆ” ಎಂದು ಪರಾಂಡೆ ಹೇಳಿಕೊಂಡಿದ್ದಾರೆ.
“ಸ್ವಾತಂತ್ರ್ಯದ ನಂತರವೂ ಈ ದೇವಾಲಯಗಳು ಸರ್ಕಾರದ ನಿಯಂತ್ರಣದಲ್ಲಿ ಮುಂದುವರೆಯುವುದು ದುರದೃಷ್ಟಕರ” ಎಂದು ಅವರು ಹೇಳಿದರು.
ವಿಜಯವಾಡದಲ್ಲಿ ನಡೆಯುವ ಅಭಿಯಾನದ ಮೊದಲ ಕಾರ್ಯಕ್ರಮವು ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಧಾರ್ಮಿಕ ದಾರ್ಶನಿಕರು ಸೇರಿದಂತೆ ಎರಡು ಲಕ್ಷಕ್ಕೂ ಹೆಚ್ಚು ಜನರು ಭಾಗವಹಿಸುವ ನಿರೀಕ್ಷೆಯಿದೆ. ಈ ಆಂದೋಲನವು ರಾಜಕೀಯ ಪ್ರೇರಿತವಲ್ಲ ಎಂದು ಪರಾಂಡೆ ಒತ್ತಿ ಹೇಳಿದರು.
ಕರ್ನಾಟಕವು ದೇವಾಲಯದ ಸ್ವಾತಂತ್ರ್ಯವನ್ನು ಪ್ರಸ್ತಾಪಿಸಿದ ಉದಾಹರಣೆಯಾಗಿದೆ. ಆದರೆ, ಬಿಜೆಪಿಯ ಚುನಾವಣೆಯ ಸೋಲಿನಿಂದಾಗಿ ಬಗೆಹರಿಯದೆ ಉಳಿದಿದೆ.
ಕರಡು ಕಾನೂನು ಪ್ರತಿ ರಾಜ್ಯದಲ್ಲಿ ಗೌರವಾನ್ವಿತ ಧಾರ್ಮಿಕ ಮುಖಂಡರು, ನಿವೃತ್ತ ನ್ಯಾಯಾಧೀಶರು ಮತ್ತು ಹಿಂದೂ ಧರ್ಮಗ್ರಂಥಗಳು ಮತ್ತು ಆಚರಣೆಗಳಲ್ಲಿ ತಜ್ಞರನ್ನು ಒಳಗೊಂಡಿರುವ ಧಾರ್ವಿುಕ ಮಂಡಳಿಗಳನ್ನು ಸ್ಥಾಪಿಸಲು ಪ್ರಸ್ತಾಪಿಸುತ್ತದೆ. ಈ ಮಂಡಳಿಗಳು ಜಿಲ್ಲಾ ಮಟ್ಟದ ಕೌನ್ಸಿಲ್‌ಗಳ ಚುನಾವಣೆಯನ್ನು ಮೇಲ್ವಿಚಾರಣೆ ಮಾಡುತ್ತವೆ, ಇದು ಸ್ಥಳೀಯ ದೇವಾಲಯಗಳನ್ನು ನಿರ್ವಹಿಸಲು ಟ್ರಸ್ಟಿಗಳನ್ನು ನೇಮಿಸುತ್ತದೆ ಎಂದು ವಿಎಚ್‌ಪಿ ಹೇಳಿಕೊಂಡಿದೆ.
ಪರಾಂಡೆ ಅವರ ಪ್ರಕಾರ, ಆಚರಣೆಯಲ್ಲಿರುವ ಹಿಂದೂಗಳು ಮಾತ್ರ ಈ ಆಡಳಿತ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಲು ಅರ್ಹರಾಗಿರುತ್ತಾರೆ. ರಾಜಕೀಯ ಪಕ್ಷಗಳೊಂದಿಗೆ ಸಂಬಂಧ ಹೊಂದಿರುವ ರಾಜಕಾರಣಿಗಳು ಅಥವಾ ವ್ಯಕ್ತಿಗಳನ್ನು ಹೊರಗಿಡಲಾಗುತ್ತದೆ. ದೇವಸ್ಥಾನಗಳಿಂದ ಬರುವ ಆದಾಯವನ್ನು ಸರ್ಕಾರಿ ಯೋಜನೆಗಳಿಗೆ ಬದಲಾಗಿ ಹಿಂದೂ ಧರ್ಮದ ಪ್ರಚಾರಕ್ಕಾಗಿ ಮತ್ತು ಸಮುದಾಯ ಸೇವೆಗೆ ಮಾತ್ರ ಬಳಸಲಾಗುವುದು ಎಂದು ಅವರು ಹೇಳಿದರು.
“ಇದು ಹಿಂದೂ ಸಮಾಜವನ್ನು ಅದರ ದೇವಾಲಯಗಳ ಉಸ್ತುವಾರಿ ವಹಿಸಲು, ಅವುಗಳ ಪವಿತ್ರತೆ ಮತ್ತು ಸರಿಯಾದ ಆಡಳಿತವನ್ನು ಖಚಿತಪಡಿಸಿಕೊಳ್ಳಲು ಅಧಿಕಾರ ನೀಡುವುದು” ಎಂದು ಪರಾಂಡೆ ಹೇಳಿದರು.
ಇದನ್ನೂ ಓದಿ; ಸಾರ್ವಜನಿಕವಾಗಿ ಚಾಟಿಯಿಂದ ದಂಡಿಸಿಕೊಂಡ ತಮಿಳುನಾಡು ಬಿಜೆಪಿ ಮುಖ್ಯಸ್ಥ ಅಣ್ಣಾಮಲೈ: ಕಾರಣ ಏನು?


