ಮಹಾರಾಷ್ಟ್ರದ ಹಿಂಗೋಲಿ ಜಿಲ್ಲೆಯಲ್ಲಿ ಮಂಗಳವಾರ (ಡಿ.2) ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಸಂದರ್ಭದಲ್ಲಿ ಮಹಿಳೆಯೊಬ್ಬರು ಮತ ಚಲಾಯಿಸುತ್ತಿದ್ದಾಗ ಶಿವಸೇನಾ ಶಾಸಕ ಸಂತೋಷ್ ಬಂಗಾರ್ ಮತಗಟ್ಟೆಗೆ ಪ್ರವೇಶಿಸುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದ್ದು, ಈ ಕುರಿತು ಚುನಾವಣಾ ಅಧಿಕಾರಿಗಳು ತನಿಖೆ ಆರಂಭಿಸಿದ್ದಾರೆ.
ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಮೊದಲ ಹಂತದಲ್ಲಿ 264 ಪುರಸಭೆಗಳು ಮತ್ತು ನಗರ ಪಂಚಾಯತ್‌ಗಳ ಒಟ್ಟು 6,042 ಸದಸ್ಯ ಸ್ಥಾನಗಳು ಮತ್ತು 264 ಪುರಸಭೆಗಳ ಅಧ್ಯಕ್ಷರ ಹುದ್ದೆಗಳಿಗೆ ಚುನಾವಣೆ ನಡೆಯುತ್ತಿದೆ.
ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆದ ವಿಡಿಯೋದಲ್ಲಿ, ಶಾಸಕ ಬಂಗಾರ್ ಮತಗಟ್ಟೆಗೆ ಪ್ರವೇಶಿಸಿ, ಮಹಿಳೆಯೊಬ್ಬರು ಮತ ಚಲಾಯಿಸುತ್ತಿರುವಾಗ ಆವರಣದೊಳಗೆ ಇಣುಕಿ ನೋಡುತ್ತಾ ಅವರೊಂದಿಗೆ ಮಾತನಾಡುತ್ತಿರುವುದು ಇದೆ ಎಂದು ಡಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಸುದ್ದಿಗಾರರೊಂದಿಗೆ ಮಾತನಾಡಿದ ಚುನಾವಣಾ ಅಧಿಕಾರಿಯೊಬ್ಬರು, “ನಾನು ವಿಡಿಯೋ ನೋಡಿದ್ದೇನೆ. ಆದರೆ, ಅದು ಅಪೂರ್ಣವಾಗಿದೆ. ಹಾಗಾಗಿ, ಈ ಕುರಿತು ವರದಿ ನೀಡುವಂತೆ ಬೂತ್‌ನಲ್ಲಿದ್ದ ಸಂಬಂಧಪಟ್ಟ ಅಧಿಕಾರಿಗೆ ಸೂಚಿಸಿದ್ದೇನೆ. ಏಕೆಂದರೆ ಅವರು ಸ್ಥಳದಲ್ಲಿದ್ದರು. ವರದಿಯ ಆಧಾರದ ಮೇಲೆ ನಾವು ಕ್ರಮ ಕೈಗೊಳ್ಳುತ್ತೇವೆ” ಎಂದು ಹೇಳಿದ್ದಾರೆ.
ಶಾಸಕ ಬಂಗಾರ್ ಅವರ ಕುಟುಂಬದ ಸದಸ್ಯರೊಬ್ಬರು ಹಿಂಗೋಲಿಯ ಪುರಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿದ್ದಾರೆಂದು ಹೇಳಲಾಗಿದೆ.
ಮಜಲ್ಗಾಂವ್‌ನಲ್ಲಿ 6 ಲಕ್ಷ ರೂ. ವಶ
ಮತ್ತೊಂದು ಘಟನೆಯಲ್ಲಿ, ಬೀಡ್ ಜಿಲ್ಲೆಯ ಮಜಲ್ಗಾಂವ್‌ನಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಪ್ರಚಾರದ ಕೊನೆಯ ದಿನವಾದ ಸೋಮವಾರ, ಅಧಿಕಾರಿಗಳು ಎಸ್‌ಯುವಿಯಿಂದ 6 ಲಕ್ಷ ರೂ. ನಗದನ್ನು ವಶಪಡಿಸಿಕೊಂಡಿದ್ದಾರೆ.
“ಜೀಪಿನಲ್ಲಿ ಪತ್ತೆಯಾದ ಹಣವನ್ನು ವಶಪಡಿಸಿಕೊಳ್ಳಲಾಗಿದೆ. ಸಂಬಂಧಪಟ್ಟ ವ್ಯಕ್ತಿಗೆ ಸರಿಯಾದ ಲೆಕ್ಕಪತ್ರ ವಿವರಗಳನ್ನು ಒದಗಿಸುವಂತೆ ಕೇಳಲಾಗಿದೆ” ಎಂದು ಮಜಲ್ಗಾಂವ್ ಪುರಸಭೆಯ ಮುಖ್ಯ ಅಧಿಕಾರಿ ಸುಂದರ್ ಬೊಂಡಾರ್ ತಿಳಿಸಿದ್ದಾರೆ.


