ತಮಿಳು ಮಾಧ್ಯಮ ಆನಂದ ವಿಕಟನ್ ವೆಬ್‌ಸೈಟ್ ಮೇಲಿನ ನಿಷೇಧವನ್ನು ತೆಗೆದುಹಾಕುವಂತೆ ಮದ್ರಾಸ್ ಹೈಕೋರ್ಟ್ ಗುರುವಾರ ಕೇಂದ್ರ ಮಾಹಿತಿ ಮತ್ತು ಪ್ರಸಾರ ಸಚಿವಾಲಯಕ್ಕೆ ನಿರ್ದೇಶನ ನೀಡಿದೆ ಎಂದು ಬಾರ್ ಅಂಡ್ ಬೆಂಚ್ ವರದಿ ಮಾಡಿದೆ. ಫೆಬ್ರವರಿ 25 ರಂದು ರಾಜಕೀಯ ವ್ಯಂಗ್ಯಚಿತ್ರವನ್ನು ಪ್ರಕಟಿಸಿದ ಕಾರಣಕ್ಕೆ ಈ ವೆಬ್‌ಸೈಟ್ ಅನ್ನು ನಿರ್ಬಂಧಿಸಲಾಗಿತ್ತು. ಆದಾಗ್ಯೂ, ವೆಬ್‌ಸೈಟ್ ಅನ್ನು ಪುನಃಸ್ಥಾಪಿಸುವ ಮೊದಲು ಕಾರ್ಟೂನ್ ಅನ್ನು ತಾತ್ಕಾಲಿಕವಾಗಿ ತೆಗೆದುಹಾಕುವಂತೆ ನ್ಯಾಯಾಲಯವು ವಿಕಟನ್‌ಗೆ ಸೂಚಿಸಿದೆ.
ಸಂಕೋಲೆಯಲ್ಲಿ ಬಂಧಿಸಲಾದ ಪ್ರಧಾನಿ ನರೇಂದ್ರ ಮೋದಿಯೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಕುಳಿತು ಮಾತನಾಡುತ್ತಿರುವ ಕಾರ್ಟೂನ್ ಅಲ್ಲಿ ಚಿತ್ರಿಸಲಾಗಿತ್ತು. ಕಾರ್ಟೂನ್ ಭಾರತದ ಸಾರ್ವಭೌಮತ್ವಕ್ಕೆ ಧಕ್ಕೆ ತರುತ್ತದೆ ಎಂದು ಹೇಳಿಕೊಂಡು ಸಚಿವಾಲಯ ವಿಕಟನ್ ವೆಬ್‌ಸೈಟ್ ಅನ್ನು ನಿರ್ಬಂಧಿಸಿತ್ತು. ವಿಕಟನ್ ವೆಬ್‌ಸೈಟ್
ಆನಂದ ವಿಕಟನ್ ಪ್ರೊಡಕ್ಷನ್ಸ್ ಪ್ರೈವೇಟ್ ಲಿಮಿಟೆಡ್ ಮತ್ತು ಆನಂದ ವಿಕಟನ್ ಪಬ್ಲಿಷರ್ಸ್ ಪ್ರೈವೇಟ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ನ್ಯಾಯಮೂರ್ತಿ ಡಿ. ಭರತ ಚಕ್ರವರ್ತಿ ಈ ಆದೇಶ ಹೊರಡಿಸಿದ್ದಾರೆ. ಪ್ರಕರಣದಲ್ಲಿ ತೀರ್ಪು ನೀಡುವವರೆಗೆ ನಿಷೇಧವು ಜಾರಿಯಲ್ಲಿರಬೇಕಾಗಿಲ್ಲ ಎಂದು ನ್ಯಾಯಾಲಯ ಹೇಳಿದೆ.
ಆನಂದ ವಿಕಟನ್ ಪರವಾಗಿ ಹಾಜರಾದ ಹಿರಿಯ ವಕೀಲ ವಿಜಯ್ ನಾರಾಯಣ್, ಕಾರ್ಟೂನ್ ವಾಕ್ ಸ್ವಾತಂತ್ರ್ಯಕ್ಕೆ ಸಂಬಂಧಿಸಿದ ಸಂವಿಧಾನದ 19(2) ನೇ ವಿಧಿಯಲ್ಲಿ ವಿವರಿಸಿರುವ ಯಾವುದೇ ನಿರ್ಬಂಧಗಳನ್ನು ಉಲ್ಲಂಘಿಸಿಲ್ಲ ಎಂದು ವಾದಿಸಿದ್ದಾರೆ ಎಂದು ಲೈವ್ ಲಾ ವರದಿ ಮಾಡಿದೆ. ಒಂದೇ ಒಂದು ಕಾರ್ಟೂನ್‌ಗಾಗಿ ಇಡೀ ವೆಬ್‌ಸೈಟ್ ಅನ್ನು ನಿರ್ಬಂಧಿಸುವುದು ತೀವ್ರವಾದ ಕ್ರಮ ಎಂದು ಅವರು ಪ್ರತಿಪಾದಿಸಿದ್ದಾರೆ.
ಸಾರ್ವಭೌಮತ್ವ, ಭದ್ರತೆ, ಸಾರ್ವಜನಿಕ ಸುವ್ಯವಸ್ಥೆ ಅಥವಾ ವಿದೇಶಿ ಸಂಬಂಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿ ವಾಕ್ ಸ್ವಾತಂತ್ರ್ಯದ ಮೇಲೆ ನಿರ್ಬಂಧ ಹೇರಲು ಅನುಮತಿಸುವ ಮಾಹಿತಿ ತಂತ್ರಜ್ಞಾನ ಕಾಯ್ದೆಯ ಸೆಕ್ಷನ್ 69A ಅನ್ನು ಈ ಕಾರ್ಟೂನ್ ಉಲ್ಲಂಘಿಸಿಲ್ಲ ಎಂದು ನಾರಾಯಣ್ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.
ಈ ಕಾರ್ಟೂನ್ ಭಾರತದ ಸಮಗ್ರತೆ ಅಥವಾ ಅಮೆರಿಕದೊಂದಿಗಿನ ರಾಜತಾಂತ್ರಿಕ ಸಂಬಂಧಗಳಿಗೆ ಹಾನಿ ಮಾಡಿಲ್ಲ. ಅಂತಹ ದಂಡನಾತ್ಮಕ ಕ್ರಮಗಳನ್ನು ಎದುರಿಸದೆ ಪ್ರಕಟಣೆಗಳು ರಾಜಕೀಯ ಕಾರ್ಟೂನ್‌ಗಳನ್ನು ಪ್ರದರ್ಶಿಸುವುದು ಸಾಮಾನ್ಯ ಅಭ್ಯಾಸವಾಗಿದೆ ಎಂದು ಅವರು ವಾದಿಸಿದ್ದಾರೆ. ಅಷ್ಟೆ ಅಲ್ಲದೆ, ವೆಬ್‌ಸೈಟ್ ಅನ್ನು ನಿರ್ಬಂಧಿಸಲು ಕಾರಣವಾದ ದೂರು ಯಾರದ್ದು ಎಂಬುದನ್ನು ಬಹಿರಂಗಪಡಿಸಲು ಕೇಂದ್ರವು ನಿರಾಕರಿಸಿದೆ ಎಂದು ನಾರಾಯಣ್ ಎತ್ತಿ ತೋರಿಸಿದ್ದಾರೆ.
ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಆರ್‌ಎಲ್ ಸುಂದರೇಶನ್, ಕಾರ್ಟೂನ್ ಭಾರತ-ಅಮೆರಿಕ ಸಂಬಂಧಗಳಿಗೆ ಹಾನಿ ಮಾಡುತ್ತದೆ ಎಂದು ವಾದಿಸಿದ್ದು, ಜೊತೆಗೆ ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ವೆಬ್‌ಸೈಟ್ ನಿರ್ಬಂಧಿಸುವುದನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರವು ವಿವರವಾಗಿ ಪ್ರತಿಕ್ರಿಯಿಸುವ ಮೊದಲೆ ನಿಷೇಧವನ್ನು ತೆಗೆದುಹಾಕುವುದು ಎಂದರೆ ಮುಖ್ಯ ಅರ್ಜಿಯನ್ನು ಸ್ವತಃ ಅನುಮತಿಸುವುದಕ್ಕೆ ಸಮಾನವಾಗಿರುತ್ತದೆ ಎಂದು ಹೇಳುವ ಮೂಲಕ ಮಧ್ಯಂತರ ಜಾಮೀನನ್ನು ಅವರು ವಿರೋಧಿಸಿದರು. ಕಾರ್ಟೂನ್ ತೆಗೆದುಹಾಕಿದರೆ ವೆಬ್‌ಸೈಟ್ ಅನ್ನು ಪುನಃಸ್ಥಾಪಿಸಬಹುದು ಎಂದು ಸಚಿವಾಲಯ ನೇಮಿಸಿದ ಸಮಿತಿಯು ನಿರ್ಧರಿಸಿದೆ ಎಂದು ಅವರು ಹೇಳಿದ್ದಾರೆ.
ಎರಡೂ ಕಡೆಯ ವಾದಗಳನ್ನು ಆಲಿಸಿದ ನಂತರ, ಪ್ರಕರಣದ ವಿಚಾರಣೆ ನಡೆಯುತ್ತಿರುವಾಗ ವೆಬ್‌ಸೈಟ್‌ಗೆ ಮೇಲಿನ ನಿರ್ಬಂಧವನ್ನು ತೆಗೆದು ಹಾಕಿ ಅದನ್ನು ಪುನಃಸ್ಥಾಪಿಸಬೇಕು ಎಂದು ನ್ಯಾಯಾಲಯ ತೀರ್ಪು ನೀಡಿತು. ಮಾರ್ಚ್ 21 ರೊಳಗೆ ತನ್ನ ಪ್ರತಿ ಅಫಿಡವಿಟ್ ಸಲ್ಲಿಸುವಂತೆ ಸಚಿವಾಲಯಕ್ಕೆ ನಿರ್ದೇಶಿಸಲಾಯಿತು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸನಾತನ ವಿವಾದ: ಉದಯನಿಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್
ಸನಾತನ ವಿವಾದ: ಉದಯನಿಧಿ ವಿರುದ್ಧ ಹೊಸ ಎಫ್‌ಐಆರ್ ದಾಖಲಿಸುವಂತಿಲ್ಲ ಎಂದ ಸುಪ್ರೀಂ ಕೋರ್ಟ್

