ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ ನಡೆದ ಗುಂಡಿನ ದಾಳಿಯಲ್ಲಿ 10 ಜನರು ಸಾವನ್ನಪ್ಪಿದ್ದಾರೆ ಹಾಗೂ ಗಾಯಗೊಂಡಿದ್ದಾರೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದಾರೆ.
ಶೂಟರ್ ಕೂಡ ಸಾವನ್ನಪ್ಪಿದ್ದಾನೆ ಎಂದು ಚೆಸಾಪೀಕ್ ನಗರದ ಅಧಿಕಾರಿಗಳು ಮಂಗಳವಾರ ಟ್ವೀಟ್ ಮಾಡಿದ್ದಾರೆ. “ಸ್ಯಾಮ್ಸ್ ಸರ್ಕಲ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ ಸಾವುನೋವುಗಳಾಗುವಂತೆ ಗುಂಡಿನ ದಾಳಿ ನಡೆಸಿರುವುದನ್ನು ಚೆಸಾಪೀಕ್ ಪೊಲೀಸರು ಖಚಿತಪಡಿಸಿದ್ದಾರೆ. ಶೂಟರ್ ಸತ್ತಿದ್ದಾನೆ” ಎಂದು ಟ್ವೀಟರ್‌ನಲ್ಲಿ ಪ್ರತಿಕ್ರಿಯಿಸಲಾಗಿದೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಪೊಲೀಸ್ ಇಲಾಖೆಯ ವಕ್ತಾರರಾದ ಲಿಯೋ ಕೊಸಿನ್ಸ್ಕಿ ಅವರು ಸಂಕ್ಷಿಪ್ತ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, “ರಾತ್ರಿ 10 ಗಂಟೆಯ ವೇಳೆಗೆ ಗುಂಡಿನ ದಾಳಿಯ ಕುರಿತ ಮಾಹಿತಿ ಸಿಕ್ಕಿತು. ಅನೇಕ ಸಾವುನೋವುಗಳ ಸ್ಥಳಕ್ಕೆ ತಕ್ಷಣವೇ ತೆರಳಲಾಯಿತು” ಎಂದಿದ್ದಾರೆ.
“ಪೊಲೀಸರು ಆಗಮಿಸಿದ ನಂತರ ಗುಂಡಿನ ದಾಳಿ ನಿಲ್ಲಿಸಲಾಗಿದೆ ಎಂದು ಭಾವಿಸಲಾಗಿದೆ” ಎಂದು ಕೊಸಿನ್ಸ್ಕಿ ಹೇಳಿದ್ದಾರೆ. “ಪೊಲೀಸರು ಗುಂಡು ಹಾರಿಸಿದ್ದಾರೆ ಎಂದು ಹೇಳಲಾಗುವುದಿಲ್ಲ, ಆದರೆ ಶೂಟರ್ ಸ್ವಯಂ ಪ್ರೇರಿತ ಗುಂಡೇಟಿನಿಂದ ಸಾವನ್ನಪ್ಪಿದ್ದಾನೆಯೇ ಎಂದು ಹೇಳಲೂ ಸಾಧ್ಯವಿಲ್ಲ” ಎಂದಿದ್ದಾರೆ.
ಎಷ್ಟು ಜನರು ಸತ್ತರು ಎಂಬುದು ಸ್ಪಷ್ಟವಾಗಿಲ್ಲ, ಆದರೆ ಕೊಸಿನ್ಸ್ಕಿಯವರು, “10ಕ್ಕಿಂತ ಹೆಚ್ಚು ಜನರನ್ನು ಹತ್ಯೆ ಮಾಡಲಾಗಿದೆ” ಎಂದು ತಿಳಿಸಿದ್ದಾರೆ.
“ನಮ್ಮ ಚೆಸಾಪೀಕ್‌ನ ವರ್ಜೀನಿಯಾ ಅಂಗಡಿಯಲ್ಲಿ ನಡೆದ ಈ ದುರಂತ ಘಟನೆಯಿಂದ ನಾವು ಆಘಾತಕ್ಕೊಳಗಾಗಿದ್ದೇವೆ” ಎಂದು ವಾಲ್ಮಾರ್ಟ್ ಬುಧವಾರ ಮುಂಜಾನೆ ಟ್ವೀಟ್ ಮಾಡಿದೆ.
“ತೊಂದರೆಗೊಳಗಾದ ಜನರಿಗಾಗಿ, ಸಮುದಾಯಕ್ಕಾಗಿ, ಸಹವರ್ತಿಗಳಿಗಾಗಿ ಪ್ರಾರ್ಥಿಸುತ್ತಿದ್ದೇವೆ. ನಾವು ಕಾನೂನು ಕ್ರಮ ಜರುಗಿಸುವ ಕೆಲಸ ಮಾಡುತ್ತಿದ್ದೇವೆ. ನಮ್ಮ ಸಹವರ್ತಿಗಳನ್ನು ಬೆಂಬಲಿಸುವತ್ತ ನಾವು ಗಮನಹರಿಸಿದ್ದೇವೆ” ಎಂದು ವಾಲ್ಮಾರ್ಟ್ ತಿಳಿಸಿದೆ.
ವಾಲ್‌ಮಾರ್ಟ್‌ಗೆ ಸೇರಿದ ಐವರು ನಾರ್ಫೋಕ್ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಸೆಂಟಾರಾ ಹೆಲ್ತ್‌ಕೇರ್‌ನ ವಕ್ತಾರ ಮೈಕ್ ಕಾಫ್ಕಾ ಹೇಳಿದ್ದಾರೆ. ಅವರ ಪರಿಸ್ಥಿತಿಯ ಬಗ್ಗೆ ಸರಿಯಾದ ಮಾಹಿತಿ ದೊರೆತಿಲ್ಲ.
ವರ್ಜೀನಿಯಾ ರಾಜ್ಯದ ಸೆನೆಟರ್ ಲೂಯಿಸ್ ಲ್ಯೂಕಾಸ್, “ಅಮೆರಿಕದ ಇತ್ತೀಚಿನ ಸಾಮೂಹಿಕ ಗುಂಡಿನ ದಾಳಿಯು ವರ್ಜೀನಿಯಾದ ಚೆಸಾಪೀಕ್‌ನಲ್ಲಿರುವ ವಾಲ್‌ಮಾರ್ಟ್‌ನಲ್ಲಿ ನಡೆದಿರುವುದು ಸಂಪೂರ್ಣವಾಗಿ ಎದೆಗುಂದುವಂತೆ ಮಾಡಿದೆ” ಎಂದಿದ್ದಾರೆ.
ಇದನ್ನೂ ಓದಿರಿ: ನವೆಂಬರ್ 26ರ ಸಂವಿಧಾನ ದಿನವನ್ನು ‘ಜಾತಿ ಪದ್ದತಿಯ ಸಮರ್ಥನೆ ಮತ್ತು ವೈಭವೀಕರಣ’ ದಿನವಾಗಿ ಆಚರಿಸಲು ತಯಾರಿ ನಡೆಸುತ್ತಿರುವ ಸರ್ಕಾರ!
“ನಮ್ಮ ದೇಶದಲ್ಲಿ ಹಲವಾರು ಜೀವಗಳನ್ನು ಬಲಿ ತೆಗೆದುಕೊಂಡ ಈ ಬಂದೂಕು ಹಿಂಸಾಚಾರದ ಸಾಂಕ್ರಾಮಿಕವನ್ನು ಕೊನೆಗೊಳಿಸಲು ನಾವು ಪರಿಹಾರಗಳನ್ನು ಕಂಡುಕೊಳ್ಳುವವರೆಗೆ ನಾನು ವಿಶ್ರಾಂತಿ ಪಡೆಯುವುದಿಲ್ಲ” ಎಂದಿದ್ದಾರೆ.
ಕೊಲೊರಾಡೋದಲ್ಲಿನ ಸಲಿಂಗಿಗಳ ನೈಟ್‌ಕ್ಲಬ್‌ನಲ್ಲಿ ವ್ಯಕ್ತಿಯೊಬ್ಬ ಗುಂಡು ಹಾರಿಸಿ ಐದು ಜನರನ್ನು ಕೊಂದು 17 ಜನರನ್ನು ಗಾಯಗೊಳಿಸಿದ ಮೂರು ದಿನಗಳ ನಂತರ ವರ್ಜೀನಿಯಾದಲ್ಲಿ ಈ ಘಟನೆ ನಡೆದಿದೆ. ಶೂಟರ್‌ನನ್ನು ಬಂಧಿಸಲಾಗಿತ್ತು. ಟೆಕ್ಸಾಸ್‌ನ ಉವಾಲ್ಡೆಯಲ್ಲಿ ಶಾಲೆಯೊಂದರಲ್ಲಿ ನಡೆದ ಗುಂಡಿನ ದಾಳಿಯಲ್ಲಿ 21 ಮಂದಿ ಸಾವಿಗೀಡಾದ ಘಟನೆ ನಡೆದಿತ್ತು. ಒಂದೇ ವರ್ಷದ ಅವಧಿಯಲ್ಲಿ ಮತ್ತೊಂದು ಗುಂಡಿನ ದಾಳಿ ನಡೆದಿದೆ.
ಮಂಗಳವಾರದ ಗುಂಡಿನ ದಾಳಿಯು 2019ರಲ್ಲಿ ವಾಲ್‌ಮಾರ್ಟ್‌ನಲ್ಲಿ ನಡೆದ ಮತ್ತೊಂದು ಗುಂಡಿನ ದಾಳಿಯ ನೆನಪುಗಳನ್ನು ತಂದಿತು. ಮೆಕ್ಸಿಕನ್ನರನ್ನು ಗುರಿಯಾಗಿಸಿಕೊಂಡು ಬಂದೂಕುಧಾರಿಯು ಎಲ್ ಪಾಸೊದಲ್ಲಿನ ಅಂಗಡಿಯೊಂದರಲ್ಲಿ ಗುಂಡು ಹಾರಿಸಿ 22 ಜನರನ್ನು ಕೊಂದಿದ್ದನು.


