ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ (ಇಂದು) ವಿಧಾನಸಭಾ ಚುನಾವಣೆಗೆ ನಂದಿಗ್ರಾಮದಿಂದ ನಾಮಪತ್ರ ಸಲ್ಲಿಸುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಅವರು ಬಿಜೆಪಿಯಿಂದ ಸ್ಪರ್ಧಿಸುತ್ತಿರುವ ಸುವೆಂದು ಅಧಿಕಾರಿಯ ವಿರುದ್ದ ಸ್ಪರ್ಧೆಗೆ ವೇದಿಕೆ ಸಿದ್ಧಪಡಿಸುತ್ತಿದ್ದಾರೆ.
ಈ ಹಿಂದೆ ಮಮತಾ ಬ್ಯಾನರ್ಜಿಯ ಆಪ್ತರಾಗಿದ್ದ ಸುವೆಂದು ಅಧಿಕಾರಿ ಕಳೆದ ವರ್ಷ ಡಿಸೆಂಬರ್‌ನಲ್ಲಿ ಬಿಜೆಪಿ ಪಾಳಯ ಸೇರಿದ್ದರು. ಬಿಜೆಪಿ ಶನಿವಾರ ಬಿಡುಗಡೆ ಮಾಡಿದ 57 ಅಭ್ಯರ್ಥಿಗಳ ಪಟ್ಟಿಯಲ್ಲಿ ಅವರನ್ನು ನಂದಿಗ್ರಾಮದ ಸ್ಪರ್ಧಿ ಎಂದು ಹೆಸರಿಸಲಾಗಿದೆ. ಅವರು ಮಾರ್ಚ್ 12 ರಂದು ತಮ್ಮ ಸ್ಥಾನಕ್ಕೆ ನಾಮಪತ್ರ ಸಲ್ಲಿಸುವ ನಿರೀಕ್ಷೆಯಿದೆ.
ಇದನ್ನೂ ಓದಿ: ಪ.ಬಂಗಾಳ: ಬಿಜೆಪಿ ಅಭ್ಯರ್ಥಿ ಭಾರತಿ ಘೋಷ್ ಬಂಧನದ ವಾರೆಂಟ್ ತಡೆ ಹಿಡಿದ ಸುಪ್ರೀಂ
ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಮಾರ್ಚ್ 27 ರಿಂದ ಎಂಟು ಹಂತಗಳಲ್ಲಿ ನಡೆಯಲಿದ್ದು, ಏಪ್ರಿಲ್ 29 ರಂದು ಅಂತಿಮ ಸುತ್ತಿನ ಮತದಾನ ನಡೆಯಲಿದೆ. ಮತ ಎಣಿಕೆ ಮೇ 2 ರಂದು ನಡೆಯಲಿದೆ. ಭೂಸ್ವಾಧೀನ ವಿರೋಧಿ ಚಳವಳಿಯ ತೊಟ್ಟಿಲು ಆಗಿರುವ ನಂದಿಗ್ರಾಮವು 2011 ರಲ್ಲಿ ಮಮತಾ ಅವರನ್ನು ಅಧಿಕಾರಕ್ಕೆ ತರುವಲ್ಲಿ ಮಹತ್ವದ ಪಾತ್ರ ವಹಿಸಿತ್ತು.
ಮಮತಾ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸತತ ಮೂರನೇ ಬಾರಿಗೆ ಅಧಿಕಾರಕ್ಕೆ ಮರಳುವ ಗುರಿ ಹೊಂದಿದ್ದರೆ, ಅದನ್ನು ತಡೆಯುವುದಾಗಿ ಬಿಜೆಪಿ ಪ್ರತಿಜ್ಞೆ ಮಾಡಿದೆ. 2019 ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯು ಪ್ರಬಲ ಸ್ಪರ್ಧೆಯನ್ನು ನೀಡಿದ್ದು 18 ಸಂಸದರು ಅಲ್ಲಿಂದ ಆಯ್ಕೆಯಾಗಿದ್ದರು.
“ಅವರು ಪವಿತ್ರ ನಂದಿಗ್ರಾಮ ಆಂದೋಲನವನ್ನು ಅವಮಾನಿಸುತ್ತಿದ್ದಾರೆ ಮತ್ತು ಕೋಮುವಾದಿ ರಾಜಕೀಯವನ್ನು ಮಾಡುತ್ತಿದ್ದಾರೆ. ಮತದಾನದ ದಿನವಾದ ಎಪ್ರಿಲ್ 1 ರಂದು ನಂದಿಗ್ರಾಮದ ಜನರು ಬಿಜೆಪಿಯನ್ನು ‘ಏಪ್ರಿಲ್ ಫೂಲ್’ಗಳನ್ನಾಗಿ ಮಾಡುತ್ತಾರೆ” ಎಂದು ಮುಖ್ಯಮಂತ್ರಿ ಮಮತಾ ಮಂಗಳವಾರ ಪ್ರತಿಪಾದಿಸಿದ್ದಾರೆ.
ಇದನ್ನೂ ಓದಿ: ಉತ್ತರಾಖಂಡ: ಸಿಎಂ ಸ್ಥಾನಕ್ಕೆ ತ್ರಿವೇಂದ್ರ ಸಿಂಗ್ ರಾವತ್ ರಾಜೀನಾಮೆ


