ಜೆ.ಎನ್.ಯು ವಿದ್ಯಾರ್ಥಿಗಳ ಮೇಲೆ ಮುಸುಕುಧಾರಿ ಗೂಂಡಾಗಳು ನಡೆಸಿದ ಅಮಾನುಷ ದಾಳಿ ಖಂಡಿಸಿ ಬೆಂಗಳೂರಿನ ಟೌನ್‌ಹಾಲ್ ಎದುರು ಪ್ರತಿಭಟನೆ ಆರಂಭವಾಗಿದೆ.
ನೂರಾರು ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿ ABVP ಸದಸ್ಯರೇ ದಾಳಿ ನಡೆಸಿದ್ದಾರೆ, ಇದಕ್ಕೆ ಕೇಂದ್ರ ಸರ್ಕಾರದ ಸಂಪೂರ್ಣ ಬೆಂಬಲವಿದೆ, ಹಾಗಾಗಿಯೇ ಪೊಲೀಸರು ದಾಳಿಗೆ ಸಹಕರಿಸಿದ್ದಾರೆ ಎಂದು ಪ್ರತಿಭಟನಾಕಾರರು ಆಗ್ರಹಿಸಿದ್ದಾರೆ.
ಪ್ರತಿಷ್ಠಿತ ಜೆಎನ್‌ಯು ವಿಶ್ವವಿದ್ಯಾಲಯವನ್ನು ಮುಚ್ಚುವುದಕ್ಕಾಗಿ ಕೇಂದ್ರ ಸರ್ಕಾರ ಈ ಹುನ್ನಾರ ನಡೆಸಿದೆ. ಇದಕ್ಕೆ ಪೊಲೀಸರನ್ನು ಬಳಸಿಕೊಂಡು ದಾಳಿ ನಡೆಸಿದೆ. ಘಟನೆಯ ಹೊಣೆಹೊತ್ತು ಗೃಹ ಸಚಿವ ಅಮಿತ್ ಶಾ ರಾಜೀನಾಮೆ ನೀಡಬೇಕೆಂದು ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.
ಎಬಿವಿಪಿ ಗೂಂಡಾಗಳು ವಿವಿಯೊಳಗೆ ಮಾರಕಾಸ್ತ್ರಗಳನ್ನು ಹೇಗೆ ತಂದರು, ಅವರು ಬರುವಾಗ ಮತ್ತು ಹೋಗುವಾಗ ಪೊಲೀಸರು ಮೂಕಪ್ರೇಕ್ಷಕರಾಗಿದ್ದು ಏಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದಾರೆ.
ದೈಹಿಕ ಹಲ್ಲೆಯಿಂದ ವಿದ್ಯಾರ್ಥಿಗಳನ್ನು ಮಣಿಸಲು ಸಾಧ್ಯವಿಲ್ಲ. ಸಿಎಎ, ಎನ್‌ಆರ್‌ಸಿ ವಿರೊಧಿ ಹೋರಾಟವನ್ನು ದಿಕ್ಕುತಪ್ಪಿಸಲು ಸಾಧ್ಯವಿಲ್ಲ. ನಾವೆಲ್ಲರೂ ಜೆಎನ್‌ಯು ವಿದ್ಯಾರ್ಥಿಗಳ ಪರವಾಗಿದ್ದೇವೆ ಎಂದು ವಿದ್ಯಾರ್ಥಿ ಸಾರ್ವಜನಿಕರು ಸಾರಿದ್ದಾರೆ.
ಜೆಎನ್‌ಯುನಲ್ಲಿನ ಶುಲ್ಕ ಹೆಚ್ಚಳವನ್ನು ಸರ್ಕಾರ ಹಿಂಪಡೆಯಬೇಕು, ಜೆಎನ್‌ಯು ಉಳಿಸಲು ಮುಂದಾಗಬೇಕು ಎಂದು ಹೋರಾಟಗಾರರು ಆಗ್ರಹಿಸಿದ್ದಾರೆ.
ಇಂದು ಸಂಜೆ 4 ನಾಲ್ಕು ಗಂಟೆಗೂ ಕೂಡ ಹಲವು ವಿದ್ಯಾರ್ಥಿ ಸಂಘಟನೆಗಳು ಟೌನ್‌ಹಾಲ್ ಎದುರು ಸೇರಿ ಪ್ರತಿಭಟನೆ ತೀವ್ರಗೊಳಿಸಲಿದ್ದಾರೆ.


