ಜನರು ನರೇಂದ್ರ ಮೋದಿ ಸರ್ಕಾರದ ವಿರುದ್ಧ ಮಾತನಾಡಲು ಭಯಭೀತರಾಗಿದ್ದಾರೆ. ಜನರ ಟೀಕೆಗಳನ್ನು ಸರ್ಕಾರ ಆರೋಗ್ಯಕರ ರೀತಿಯಲ್ಲಿ ಸ್ವೀಕರಿಸುತ್ತದೆ ಎಂಬ ಭರವಸೆಯಿಲ್ಲ ಎಂದು ಕೈಗಾರಿಕೋದ್ಯಮಿ ರಾಹುಲ್ ಬಜಾಜ್ ಹೇಳಿದ್ದಾರೆ.
ಮುಂಬೈನಲ್ಲಿ ನಡೆದ ಎಕಾನಾಮಿಕ್ಸ್ ಟೈಮ್ಸ್ ಪ್ರಶಸ್ತಿ-2019ರ ಪ್ರದಾನ ಸಮಾರಂಭದಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮತ್ತು ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಗೃಹ ಸಚಿವ ಅಮಿತ್ ಶಾ ವೇದಿಕೆಯಲ್ಲಿರುವಾಗಲೇ ರಾಹುಲ್ ಬಜಾಜ್ ಮೇಲಿನ ಹೇಳಿಕೆ ನೀಡಿದ್ದಾರೆ.
ಹಿಂದಿನ ಮನಮೋಹನ್ ಸಿಂಗ್ ಸರ್ಕಾರದ ಅವಧಿಯಲ್ಲಿ ಯಾರನ್ನು ಬೇಕಾದರೂ ಟೀಕಿಸುವ ಸ್ವಾತಂತ್ಯ್ರವಿತ್ತು. ಆದರೆ ಈಗಿನ ಸಂದರ್ಭದಲ್ಲಿ ಬಹಿರಂಗವಾಗಿ ಮೋದಿ ಸರ್ಕಾರವನ್ನು ಟೀಕಿಸುವ ಪರಿಸ್ಥಿತಿಯಿಲ್ಲ ಎಂದಿದ್ದಾರೆ.
ಯುಪಿಎ 2ರ ಅವಧಿಯಲ್ಲಿ ಯಾರನ್ನು ಬೇಕಾದರೂ ನಾವು ಟೀಕಿಸಬಹುದಿತ್ತು. ನೀವು ಒಳ್ಳೆಯ ಕೆಲಸವನ್ನೇ ಮಾಡುತ್ತಿದ್ದೀರಿ ಆದರೆ ಬಹಿರಂಗವಾಗಿ ನಿಮ್ಮನ್ನು ಟೀಕಿಸಲು ಸಾಧ್ಯವಿಲ್ಲ. ನೀವದನ್ನು ಪ್ರಶಂಸಿಸುತ್ತೀರಿ ಎಂಬ ಭರವಸೆಯಿಲ್ಲ. ನಾನು ಹೇಳುತ್ತಿರುವುದು ಬಹುಶಃ ತಪ್ಪಿರಬಹುದು ಆದರೆ ಎಲ್ಲರೂ ರೀತಿ ಭಾವಿಸಿದ್ದಾರೆ ಎಂದು ರಾಹುಲ್ ಬಜಾಜ್ ಹೇಳಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಬಿಜೆಪಿ ಅಧ್ಯಕ್ಷ ಮತ್ತು ಗೃಹ ಸಚಿವ ಅಮಿತ್ ಶಾ, ಯಾರೂ ಭಯಪಡುವ ಅಗತ್ಯವಿಲ್ಲ. ದಯವಿಟ್ಟು ನಿಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸಿ ಎಂದಿದ್ದಾರೆ.
ಆನಂತರ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್ ವಿಷಯ ಪ್ರಸ್ತಾಪಿಸಿದ ರಾಹುಲ್ ಬಜಾಜ್, ಸಂಸತ್ತಿನಲ್ಲಿ ಗೋಡ್ಸೆಯನ್ನು ದೇಶಭಕ್ತ ಎಂದ ಪ್ರಗ್ಯಾ ಬಿಜೆಪಿ ಬೆಂಬಲದಿಂದ ಗೆದ್ದು ಬಂದಿದ್ದಾರೆ. ಗಾಂಧಿಯನ್ನು ಗೋಡ್ಸೆ ಕೊಂದಿದ್ದರೆ ಬಗ್ಗೆ ಯಾರಿಗಾದರೂ ಸಂಶಯವಿದೆಯೇ? ನನಗಂತೂ ಗೊತ್ತಿಲ್ಲ ಎಂದಿದ್ದಾರೆ.
ಕಳೆದ ಮೇ ತಿಂಗಳಿನಲ್ಲಿಯೇ ಆಕೆ ಇದೇ ರೀತಿಯಾಗಿ ಗಾಂಧಿ ಕೊಂದ ಗೋಡ್ಸೆಯನ್ನು ದೇಶಭಕ್ತ ಎಂದಿದ್ದರು. ಆಗ ಆಕೆಯನ್ನು ಕ್ಷಮಿಸಲು ಪ್ರಧಾನಿ ನರೇಂದ್ರ ಮೋದಿಯವರು ತುಂಬಾ ಕಷ್ಟವಾಗಿತ್ತು ಎಂದು ಹೇಳಿದ್ದರು. ಆದರೂ ಆಕೆಯನ್ನು ಆನಂತರ ರಕ್ಷಣಾ ಸಲಹಾ ಸಮಿತಿಗೆ ತೆಗೆದುಕೊಂಡರು ಎಂದು ರಾಹುಲ್ ಬಜಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಪ್ರಗ್ಯಾ ಹೇಳಿಕೆಯನ್ನು ನಾವು ಖಂಡಿಸುತ್ತೇವೆ ಎಂದಿದ್ದಾರೆ.
ಮಹಮೋಹನ್ ಸಿಂಗ್‌ರವರು ಆರ್ಥಿಕ ಸ್ಥಿತಿಗತಿಯ ಕುರಿತು ಮಾತನಾಡಿದರೆ ಭಯ ಮತ್ತು ಕಿರುಕುಳ ನೀಡುವ ವಾತವಾರಣ ಸೃಷ್ಠಿಯಾಗಿದೆ ಎಂದು ಹೇಳಿದ ನಂತರ ರಾಹುಲ್ ಬಜಾಜ್‌ರವರು ಮಾತನಾಡಿರುವುದು ಬಿಸಿ ಬಿಸಿ ಚರ್ಚೆಗೆ ಕಾರಣವಾಗಿದೆ.
ಕೃಪೆ: ದಿ ಪ್ರಿಂಟ್



ಉದ್ಯಮಿ ರಾಹುಲ್ ಬಜಾಜ್ ಅವರ ಧೈರ್ಯ ಮೆಚ್ಚುವಂತಹದ್ದಾಗಿದೆ.