“ಸಂತೋಷ್ ಪಾಟೀಲ್ ಯಾರೆಂಬುದೇ ನನಗೆ ಗೊತ್ತಿಲ್ಲ. ಅವರು ಮಾತುಕತೆ ನಡೆಸಿದ್ದನ್ನು ಒಂದು ಸಲ ನೋಡಿದ್ದೆ. ಅದು ಡೆಲ್ಲಿಯಲ್ಲಿ ಆದದ್ದು” ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.
‘ನನ್ನ ಸಾವಿಗೆ ಕೆ.ಎಸ್.ಈಶ್ವರಪ್ಪನವರೇ ಕಾರಣ’ ಎಂದು ಆರೋಪಿಸಿ ಬೆಳಗಾವಿಯ ಗುತ್ತಿಗೆದಾರ ಉಡುಪಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಕುರಿತು ಕೆ.ಎಸ್.ಈಶ್ವರಪ್ಪ ಪ್ರತಿಕ್ರಿಯೆ ನೀಡಿದ್ದಾರೆ. ಶೇ. 40ರಷ್ಟು ಕಮಿಷನ್‌ಗಾಗಿ ಪೀಡಿಸುತ್ತಿದ್ದಾರೆಂದು ಆರೋಪಿಸಿ ಗುತ್ತಿಗೆದಾರ ಸಂತೋಷ್ ಪಾಟೀಲ್ ಆತ್ಮಹತ್ಯೆಗೆ ಶರಣಾಗಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಮಾಧ್ಯಮಗಳೊಂದಿಗೆ ಮಾತನಾಡಿರುವ ಈಶ್ವರಪ್ಪ, “ನನ್ನನ್ನು ಎಂಬತ್ತು ಸಲ ಭೇಟಿಯಾಗಿರುವುದಾಗಿ ಸಂತೋಷ್ ಪಾಟೀಲ್ ಹೇಳಿಕೊಂಡಿದ್ದಾರೆ. ಅವರು ಯಾರೆಂಬುದೇ ನನಗೆ ಗೊತ್ತೇ ಇಲ್ಲ. ಟಿವಿ 18ನಲ್ಲಿ ಮಾತನಾಡಿದ್ದು ನೋಡಿದ್ದೆ. ನಾಲ್ಕು ಕೋಟಿ ರೂ. ಕೆಲಸ ಮಾಡಿದ್ದೀನಿ, 40 ಪರ್ಸೆಂಟ್ ಕಮಿಷನ್ ಕೇಳುತ್ತಿದ್ದಾರೆಂದು ಹೇಳಿದ್ದರು” ಎಂದು ತಿಳಿಸಿದ್ದಾರೆ.
‘‘ಈಶ್ವರಪ್ಪನವರ ಕಡೆಯವರು ನನ್ನಿಂದ 40 ಪರ್ಸೆಂಟ್ ಕಮಿಷನ್ ಕೇಳಿದ್ದಾರೆ. ಇದನ್ನು ಮೋದಿಯವರಿಗೆ, ಅಮಿತ್ ಶಾ ಅವರಿಗೆ ತಿಳಿಸಿದ್ದೇನೆ ಎಂದು ಸಂತೋಷ್ ಹೇಳಿರುವುದನ್ನು ಟಿವಿಯಲ್ಲಿ ನೋಡಿದೆ. ಆ ಕಾಪಿ ನನಗೆ ಸಿಕ್ಕಿತು. ಬಳಿಕ ಕೇಸ್ ಹಾಕಿದ್ದೇನೆ. ಸಂತೋಷ್ ಪಾಟೀಲ್‌ಗೆ ನೋಟೀಸ್ ಹೋಗಿದೆ. ಈ ಮಧ್ಯೆ ಕೇಂದ್ರದ ಕಾಂಗ್ರೆಸ್ ನಾಯಕರಾದ ಡಿ.ಕೆ.ಸುರೇಶ್, ಎಲ್.ಹನುಮಂತಯ್ಯನವರು ದೆಹಲಿಯಲ್ಲಿ ಪ್ರೆಸ್‌ಮೀಟ್ ಮಾಡಿ ಕಮಿಷನ್ ಆರೋಪ ಮಾಡಿದ್ದರು” ಎಂದು ಪ್ರತಿಕ್ರಿಯೆ ನೀಡಿದ್ದಾರೆ.

ಕೇಂದ್ರದ ಗ್ರಾಮೀಣಾಭಿವೃದ್ಧಿ ಸಚಿವ ಗಿರಿರಾಜ್ ಸಿಂಗ್ ಅವರ ಕಚೇರಿಯಿಂದ ನಮ್ಮ ಕಚೇರಿಗೆ ಒಂದು ಪತ್ರ ಬಂದಿದೆ. ಕಮಿಷನ್ ಆರೋಪದ ಬಗ್ಗೆ ಕ್ಲಾರಿಫಿಕೇಷನ್ ಕೇಳಿದ್ದಾರೆ. ನನಗೆ ಅದೂ ಗೊತ್ತಿಲ್ಲ. ಉತ್ತರ ಹೋದ ಮೇಲೆ ಪ್ರತಿ ನನಗೆ ಸಿಕ್ಕಿತು ಎಂದಿದ್ದಾರೆ.
ಮತ್ತೊಂದು ಮಾಧ್ಯಮದೊಂದಿಗೆ ಮಾತನಾಡುತ್ತಾ, ‘ಸಂತೋಷ್ ಪಾಟೀಲ್ 108 ಕಾಮಗಾರಿ ಮಾಡಿರುವುದಾಗಿ ಹೇಳುತ್ತಿದ್ದಾರೆ. ನಾವು ಯಾವುದೇ ಕೆಲಸವನ್ನು ಅವರಿಗೆ ಕೊಟ್ಟಿಲ್ಲ. ದುಡ್ಡು ಕೊಡುವ ಪ್ರಶ್ನೆಯೇ ಬರುವುದಿಲ್ಲ. ಇದೆಲ್ಲವನ್ನು ಇಟ್ಟುಕೊಂಡು ಕೋರ್ಟ್‌ನಲ್ಲಿ ಮಾನನಷ್ಟ ಮೊಕದ್ದಮೆ ಹಾಕಿದ್ದೀನಿ’ ಎಂದಿದ್ದಾರೆ.
“ಸಂತೋಷ್ ಪಾಟೀಲ್ ಅವರಿಗೆ ನೋಟೀಸ್ ಹೋಗಿದೆ. ಸುದ್ದಿ ಪ್ರಸಾರ ಮಾಡಿದ ಟಿ.ವಿ. 18 ಅವರಿಗೂ ನೋಟೀಸ್ ಹೋಗಿದೆ. ಇದರ ಮಧ್ಯೆ ಅವರು ಆತ್ಮಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಮುಖ್ಯಮಂತ್ರಿಯವರೊಂದಿಗೆ ಮಾತನಾಡಿದ್ದು ತಕ್ಷಣವೇ ಈ ಕುರಿತು ತನಿಖೆ ಮಾಡಬೇಕು ಎಂದಿದ್ದೇನೆ” ಎಂದು ತಿಳಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
₹100 ₹200 ₹500 ₹1000 Others
ಇದನ್ನೂ ನೋಡಿರಿ: ವಿಡಿಯೊ ➤➤ ‘ಮುಂದಿನ ಅನಾಹುತಕ್ಕೆ ಈಶ್ವರಪ್ಪನವರೇ ಕಾರಣ’


