ಕೃಷಿ ಕಾಯ್ದೆಗಳ ವಿರುದ್ಧ ಹೋರಾಡುತ್ತಿರುವ ರೈತರು ಅಂಬಾನಿ-ಅದಾನಿ ಉತ್ಪನ್ನಗಳನ್ನು ಬಹಿಷ್ಕರಿಸುವಂತೆ ನೀಡಿದ ಕರೆ ಓಗೊಟ್ಟಿರುವ ರಾಜ್ಯದ ಯುವಜನರು ತಮ್ಮ ಹೋರಾಟವನ್ನು ಮತ್ತೊಂದು ಹೆಜ್ಜೆ ಮುಂದಕ್ಕೆ ಹೊಯ್ದಿದ್ದು, ನಮಗೆ ಜಿಯೋ ಬೇಡ, BSNLಗೆ ಪೋರ್ಟ್ ಆಗಿದ್ದೇವೆ 4G ಸೇವೆ ಕೊಡಿ ಎಂದು ಒತ್ತಾಯಿಸುತ್ತಿದ್ದಾರೆ.
ಇಂದು ಬೆಂಗಳೂರು, ಗಂಗಾವತಿ ಮತ್ತು ಕಲಬುರಗಿಯಲ್ಲಿ ಕರ್ನಾಟಕ ವಿದ್ಯಾರ್ಥಿ ಸಂಘಟನೆಯ ನೇತೃತ್ವದಲ್ಲಿ ಹಲವು ವಿದ್ಯಾರ್ಥಿ -ಯು ವಜನರು BSNL ಕಚೇರಿಗಳಿಗೆ ಹೋಗಿ ಲಕ್ಷಾಂತರು ಜನರು BSNL ಸಿಮ್‌ಗೆ ಪೋರ್ಟ್ ಆಗಲು ಸಿದ್ದರಿದ್ದು, ಅದಕ್ಕೆ ನೀವು 4G ಸೇವೆ ಕೊಡಿ ಎಂದು ಆಗ್ರಹಿಸಿದ್ದಾರೆ.
ನರೇಂದ್ರ ಮೋದಿ ಸರ್ಕಾರ ಜಾರಿಗೆ ತಂದಿರುವ ಕೃಷಿ ಕಾನೂನುಗಳು ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿಯಂತಹ ಕಾರ್ಪೊರೇಟ್ ಕಂಪನಿಗಳ ಪರವಾಗಿವೆ ಎಂದು ಆರೋಪಿಸಿರುವ ರೈತರು ಅವರ ಎಲ್ಲಾ ಉತ್ಪನ್ನಗಳನ್ನು ಬಹಿಷ್ಕರಿಸಲು ಕರೆ ನೀಡಿದ್ದರು. ರೈತರ ಹೋರಾಟ ಬೆಂಬಲಿಸಿ ಡಿಸೆಂಬರ್ 10 ರಂದು ನೂರಾರು ಯುವಜನರು ತಮ್ಮ ಜಿಯೋ ಸಿಮ್‌ನಿಂದ ಪೋರ್ಟ್ ಆಗಿದ್ದರು.

ಈ ಆಂದೋಲನದ ನೇತೃತ್ವ ವಹಿಸಿರುವ ಕೆವಿಎಸ್ ರಾಜ್ಯ ಸಂಚಾಲಕ ಸರೋವರ್ ಬೆಂಕಿಕೆರೆ ನಾನುಗೌರಿ.ಕಾಂ ಜೊತೆ ಮಾತನಾಡಿ “ಇದೀಗ 5ಜಿ ತರಂಗಗಳನ್ನು ಜಿಯೋ ಕಂಪನಿಗೇ ಮೊದಲು ನೀಡುವ ಸುದ್ಧಿ ನಮಗೆ ಆಘಾತ ನೀಡಿದೆ. ಸರ್ಕಾರಿ ಸ್ವಾಮ್ಯದ ಸಂಸ್ಥೆ ಬಲಗೊಳ್ಳದೇ ಖಾಸಗೀ ವ್ಯಕ್ತಿಯ ಲಾಭಕ್ಕಾಗಿನ ವ್ಯವಸ್ಥೆ ಅಪಾಯಕಾರಿಯಾಗಿದೆ. ಹಾಗಾಗಿ ನಿಮ್ಮ ವ್ಯಾಪ್ತಿಯಲ್ಲಿ ಬರುವ ನಗರ-ಹಳ್ಳಿಗಳಲ್ಲಿಯಾದರೂ ಬಿಎಸ್‌ಎನ್‌ಎಲ್ ತರಂಗಗಳನ್ನು ಉತ್ತಮಗೊಳಿಸಿದರೆ ದೇಶಪ್ರೇಮಿ ವಿದ್ಯಾರ್ಥಿ-ಯುವಜನರಾದ ನಾವು ಬಿಎಸ್‌ಎನ್‌ಎಲ್ ಸೇವೆಯನ್ನು ಬಳಸಲು ಸಿದ್ಧರಿದ್ದೇವೆ. ನೂರಾರು ಯುವಜನರನ್ನು ಬಿಎಸ್‌ಎನ್‌ಎಲ್ ಗೆ ಪೋರ್ಟ್ ಮಾಡಿಸುವ ಆಂದೋಲನವನ್ನು ಮಾಡಲು ತಯಾರಿದ್ದೇವೆ ಮತ್ತು ರಾಜ್ಯದಾದ್ಯಂತ ಈ ಆಂದೋಲನ ನಡೆಯಲಿದೆ. ಇದನ್ನು ತಾವುಗಳು ಗಂಭೀರವಾಗಿ ಪರಿಗಣಿಸಿ ತರಂಗಗಳನ್ನು ಬಲಪಡಿಸುವ ಎಲ್ಲಾ ಪ್ರಯತ್ನಗಳನ್ನು ನಡೆಸಬೇಕು” ಎಂದು ಒತ್ತಾಯಿಸಿದ್ದಾರೆ.
ಬೆಂಗಳೂರಿನಲ್ಲಿನ ಬಿಎಸ್‌ಎನ್ ಕಚೇರಿಗಳಿಗೆ ಕರ್ನಾಟಕ ಶ್ರಮಿಕ ಶಕ್ತಿಯ ವರದರಾಜೇಂದ್ರ, ಕೆವಿಎಸ್‌ನ ಮಮತಾ, ಮನೋಜ್ ಮುಂತಾದವರು ಹಕ್ಕೊತ್ತಾಯ ಪತ್ರ ಸಲ್ಲಿಸಿದ್ದಾರೆ. ಗಂಗಾವತಿ ತಂಡದಲ್ಲಿ ಸಂತೋಷ್ ಎಚ್.ಎಂ, ದುರ್ಗೇಶ್, ಸುನೀಲ್ ಮುಂತಾದವರಿದ್ದಾರೆ.
ಇದನ್ನೂ ಓದಿ: ಅಂಬಾನಿಯ ಜಿಯೋ ಸಿಮ್ ಬಳಸುವುದಿಲ್ಲ, ರಿಲೆಯನ್ಸ್ ಪೆಟ್ರೋಲ್ ಹಾಕಿಸುವುದಿಲ್ಲ, ಮಾಲ್‌ಗೆ ಹೋಗುವುದಿಲ್ಲ: ರೈತರ ಪ್ರತಿಜ್ಞೆ


