ಅಕ್ರಮ ವಲಸಿಗರು ಎಂದು ಗುರುತಿಸಲಾದ ಭಾರತೀಯ ಪ್ರಜೆಗಳನ್ನು ಗಡಿಪಾರು ಮಾಡಿರುವ ಅಮೆರಿಕ ತನ್ನ ಸೇನಾ ವಿಮಾನದಲ್ಲಿ ಕಳುಹಿಸಿಕೊಟ್ಟಿದೆ. ಮೊದಲ ಹಂತದಲ್ಲಿ 104 ಭಾರತೀಯರನ್ನು ಹೊತ್ತ ವಿಮಾನ ಪಂಜಾಬ್‌ನ ಅಮೃತಸರಕ್ಕೆ ಬುಧವಾರ (ಫೆ.5) ಬಂದು ತಲುಪಿದೆ.
“ಎಲ್ಲಾ ಅಕ್ರಮ ವಲಸಿಗರನ್ನು ದೇಶದಿಂದ ಹೊರದುಬ್ಬುತ್ತೇವೆ” ಎಂದು ಚುನಾವಣಾ ಪೂರ್ವದಲ್ಲಿ ವಾಗ್ದಾನ ಮಾಡಿದ್ದ ಅಮೆರಿಕದ ನೂತನ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಅಧಿಕಾರಕ್ಕೇರಿದ ಬಳಿಕ ಹೇಳಿದಂತೆ ಮಾಡಿದ್ದಾರೆ. ಭಾರತ ಸೇರಿದಂತೆ ವಿವಿಧ ರಾಷ್ಟ್ರಗಳ ಸಾವಿರಾರು ಜನರನ್ನು ಗಡಿಪಾರು ಮಾಡುವ ಪ್ರಕ್ರಿಯೆ ಪ್ರಾರಂಭಗೊಂಡಿದೆ.
ಅಮೃತಸರ ವಿಮಾನ ನಿಲ್ದಾಣದಲ್ಲಿ ಬುಧವಾರ ಬಂದಿಳಿದ ಪಂಜಾಬ್ ಮತ್ತು ಹರಿಯಾಣ ಮೂಲದ ಅಕ್ರಮ ವಲಸಿಗರು, ಎಲ್ಲಾ ವಿಧಿ ವಿಧಾನಗಳ ಬಳಿಕ ಪೊಲೀಸ್ ವಾಹನಗಳಲ್ಲಿ ತಮ್ಮ ಊರಿನತ್ತ ತೆರಳಿದ್ದಾರೆ.
ಗಡಿಪಾರು ಮಾಡಲಾದ ಭಾರತೀಯ ವಲಸಿಗರಲ್ಲಿ ಒಬ್ಬರಾದ ಹರಿಯಾಣದ ಜಸ್ಪಾಲ್ ಸಿಂಗ್ “ನಮ್ಮ ಕೈಗೆ ಬೇಡಿ, ಕಾಲಿಗೆ ಸಂಕೋಲೆ ಬಿಗಿದು ಅಮೆರಿಕದಿಂದ ಹೊರದಬ್ಬಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ತೆಗೆಯಲಾಗಿದೆ” ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
“ಮೊದಲಿಗೆ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ತಿಳಿದಿರಲಿಲ್ಲ. ನಮ್ಮನ್ನು ಬೇರೆ ಶಿಬಿರಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ನಾವು ಭಾವಿಸಿದ್ದೆವು. ನಂತರ ಒಬ್ಬರು ಪೊಲೀಸ್ ಅಧಿಕಾರಿ ನಮ್ಮನ್ನು ಭಾರತಕ್ಕೆ ಕರೆದೊಯ್ಯಲಾಗುತ್ತಿದೆ ಎಂದು ಹೇಳಿದರು. ನಮ್ಮ ಕೈಗಳಿಗೆ ಕೋಳ ಹಾಕಿ, ಕಾಲುಗಳಿಗೆ ಸರಪಳಿ ಬಿಗಿಯಲಾಗಿತ್ತು. ಅಮೃತಸರ ವಿಮಾನ ನಿಲ್ದಾಣದಲ್ಲಿ ಅವುಗಳನ್ನು ತೆಗೆಯಲಾಗಿದೆ” ಎಂದು ಜಸ್ಪಾಲ್ ಸಿಂಗ್ ವಿವರಿಸಿದ್ದಾರೆ.
“ಅಮೆರಿಕಕ್ಕೆ ಕಾನೂನುಬದ್ಧ ಪ್ರವೇಶದ ಭರವಸೆ ನೀಡಿದ್ದ ಟ್ರಾವೆಲ್ ಏಜೆಂಟ್‌ನಿಂದ ನನಗೆ ವಂಚನೆಯಾಗಿದೆ. ಸರಿಯಾದ ಯುಎಸ್ ವೀಸಾ ಪಡೆದ ನಂತರ ನನ್ನನ್ನು ಕಳುಹಿಸಲು ನಾನು ಏಜೆಂಟರನ್ನು ಕೇಳಿದ್ದೆ. ಆದರೆ, ಅವರು ನನ್ನನ್ನು ವಂಚಿಸಿದರು. ಏಜೆಂಟರೊಂದಿಗಿನ ಒಪ್ಪಂದವನ್ನು 30 ಲಕ್ಷ ರೂ.ಗೆ ಅಂತಿಮಗೊಳಿಸಲಾಗಿತ್ತು” ಎಂದು ಹೇಳಿದ್ದಾರೆ.
“ಕಳೆದ ವರ್ಷ ಜುಲೈನಲ್ಲಿ ತಾನು ವಿಮಾನದ ಮೂಲಕ ಬ್ರೆಝಿಲ್ ತಲುಪಿದ್ದಾಗಿ ಜಸ್ಪಾಲ್ ಹೇಳಿಕೊಂಡಿದ್ದಾರೆ. ಮುಂದಿನ ಹಂತದ ಅಮೆರಿಕ ಪ್ರಯಾಣವೂ ವಿಮಾನದ ಮೂಲಕವೇ ಆಗಲಿದೆ ಎಂದು ಭರವಸೆ ನೀಡಲಾಗಿತ್ತು. ಆದರೆ, ತನ್ನ ಏಜೆಂಟ್ ಅಕ್ರಮವಾಗಿ ಗಡಿ ದಾಟುವಂತೆ ಒತ್ತಾಯಿಸಿ ವಂಚಿಸಿದ” ಎಂದು ತಿಳಿಸಿದ್ದಾರೆ.
“ಬ್ರೆಝಿಲ್‌ನಲ್ಲಿ ಆರು ತಿಂಗಳು ತಂಗಿದ್ದ ನಾನು ಗಡಿ ದಾಟಿ ಅಮೆರಿಕ ತಲುಪಿದೆ. ಆದರೆ ಅಮೆರಿಕದ ಗಡಿ ಗಸ್ತು ಪಡೆಯಿಂದ ಬಂಧಿನಕ್ಕೊಳಗಾದೆ. ಅವರು 11 ದಿನಗಳ ಕಾಲ ಕಸ್ಟಡಿಯಲ್ಲಿಟ್ಟು ನಂತರ ಮನೆಗೆ ಕಳುಹಿಸಿದರು” ಎಂದು ಜಸ್ಪಾಲ್ ಹೇಳಿದ್ದಾರೆ.
“ಅಮೆರಿಕಕ್ಕೆ ತೆರಳಲು ಸಾಲ ಪಡೆದು ದೊಡ್ಡ ಮೊತ್ತದ ಹಣ ಖರ್ಚು ಮಾಡಿದ್ದೆ.ಇದೀಗ ಗಡಿಪಾರು ಮಾಡುವಿಕೆಯಿಂದ ತಾನು ಜರ್ಜರಿತನಾಗಿದ್ದೇನೆ” ಎಂದು ಜಸ್ಪಾಲ್ ಹೇಳಿಕೊಂಡಿದ್ದಾರೆ.
ಗಡಿಪಾರು ಪ್ರಕ್ರಿಯೆ ಕುರಿತು ಮಾತನಾಡಿರುವ ಜಸ್ಪಾಲ್, “ಇದು ಸರ್ಕಾರಗಳ ಸಮಸ್ಯೆ. ನಾವು ಕನಸುಗಳನ್ನು ಹೊತ್ತು ನಮ್ಮ ಕುಟುಂಬದ ಭವಿಷ್ಯಕ್ಕಾಗಿ ಉದ್ಯೋಗ ನಿಮಿತ್ತ ವಿದೇಶಕ್ಕೆ ಹೋಗಿರುತ್ತೇವೆ. ಯಾರದ್ದೋ ತಪ್ಪಿಗೆ ನಾವು ಬಲಿಪಶುಗಳಾಗಿದ್ದೇವೆ” ಎಂದಿದ್ದಾರೆ.
Courtesy : timesofindia.indiatimes.com
ಬಾಂಗ್ಲಾದೇಶ | ರಾಷ್ಟ್ರಪಿತ ಶೇಖ್ ಮುಜಿಬುರ್ ರೆಹಮಾನ್ ಮನೆ ಧ್ವಂಸಗೊಳಿಸಿದ ಪ್ರತಿಭಟನಾಕಾರರು


