ಜೈಲಿನಲ್ಲಿರುವ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ (ಜೆಎನ್‌ಯು) ಮಾಜಿ ವಿದ್ಯಾರ್ಥಿ ಉಮರ್ ಖಾಲಿದ್ ಅವರಿಗೆ ನ್ಯೂಯಾರ್ಕ್ ನಗರದ ನೂತನ ಮೇಯರ್ ಝೊಹ್ರಾನ್ ಮಮ್ದಾನಿ ಅವರು ಕೈಬರಹದ ಪತ್ರವೊಂದನ್ನು ಬರೆದಿದ್ದಾರೆ ಎಂದು, ಖಾಲಿದ್ ಸ್ನೇಹಿತೆ ಬನೋಜ್ಯೋತ್ಸ್ನಾ ಲಹಿರಿ ಗುರುವಾರ (ಜ.1) ತಿಳಿಸಿದ್ದಾರೆ.
2025ರ ಡಿಸೆಂಬರ್‌ನಲ್ಲಿ ಉಮರ್ ಖಾಲಿದ್ ಪೋಷಕರು ಅಮೆರಿಕಕ್ಕೆ ಭೇಟಿ ನೀಡಿದ್ದ ವೇಳೆ ಮಮ್ದಾನಿ ಪತ್ರ ಕೊಟ್ಟಿದ್ದಾರೆ ಎಂದು ವರದಿಯಾಗಿದೆ.
“ಪ್ರಿಯ ಉಮರ್, ಕಹಿಯ ಬಗ್ಗೆ ನಿಮ್ಮ ಮಾತುಗಳನ್ನು ನಾನು ಆಗಾಗ್ಗೆ ನೆನಪಿಸಿಕೊಳ್ಳುತ್ತೇನೆ. ಅದು ಒಬ್ಬರ ಆತ್ಮವನ್ನು ಆವರಿಸದಂತೆ ನೋಡಿಕೊಳ್ಳಬೇಕೆಂಬ ನಿಮ್ಮ ಮಾತುಗಳು ನನಗೆ ಆಗಾಗ್ಗೆ ನೆನಪಾಗುತ್ತವೆ. ನಿಮ್ಮ ಪೋಷಕರನ್ನು ಭೇಟಿಯಾದುದು ಸಂತೋಷವಾಯಿತು” ಎಂದು ಮಮ್ದಾನಿ ಪತ್ರದಲ್ಲಿ ಬರೆದಿದ್ದಾರೆ.
ಅಂದರೆ, ಉಮರ್ ಖಾಲಿದ್ ಅವರು ಜೈಲಿನಲ್ಲಿರುವಾಗ ಬರೆದ ಪತ್ರಗಳಲ್ಲಿ, “ಕಹಿಯಿಂದ (ಕೋಪ, ಸಿಟ್ಟು, ಬೇಸರ) ಹೃದಯವನ್ನು ತುಂಬಿಕೊಳ್ಳಬಾರದು. ಅದು ನಮ್ಮನ್ನು ಪೂರ್ತಿಯಾಗಿ ನಾಶಮಾಡಬಹುದು. ಅದನ್ನು ನಿಯಂತ್ರಣದಲ್ಲಿಟ್ಟುಕೊಂಡು, ಧೈರ್ಯವಾಗಿ ಮುಂದುವರೆಯಬೇಕು ಎಂದು ಬರೆದಿದ್ದರು. ಮಮ್ದಾನಿ ಆ ಬರಹ ತನ್ನ ಮೇಲೆ ತುಂಬಾ ಪ್ರಭಾವ ಬೀರಿವೆ ಎಂದು ಮಮ್ದಾನಿ ಹೇಳಿದ್ದಾರೆ. ಉಮರ್ ಅವರಿಗೆ ಬೆಂಬಲ ಸೂಚಿಸಿದ್ದಾರೆ.
2023ರಲ್ಲಿ, ನ್ಯೂಯಾರ್ಕ್‌ನಲ್ಲಿ ನಡೆದ ಒಂದು ಕಾರ್ಯಕ್ರಮದಲ್ಲಿ (ಹೌಡಿ ಡೆಮಾಕ್ರಸಿ?! ಎಂಬ ಕಾರ್ಯಕ್ರಮ) ಮಮ್ದಾನಿ ಅವರು ಉಮರ್ ಖಾಲಿದ್ ಜೈಲಿನಿಂದ ಬರೆದ ಪತ್ರದ ಕೆಲವು ಭಾಗಗಳನ್ನು ಜೋರಾಗಿ ಓದಿದ್ದರು.
ಮಮ್ದಾನಿ ಬರೆದ ಪತ್ರವನ್ನು ಅವರು ನ್ಯೂಯಾರ್ಕ್ ಮೇಯರ್ ಆಗಿ ಪ್ರಮಾಣವಚನ ಸ್ವೀಕರಿಸಿದ ದಿನದಂದೇ (ಜ.1) ಬನೋಜ್ಯೋತ್ಸ್ನಾ ಲಹಿರಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದಾರೆ.
ಖಾಲಿದ್ ಅವರ ಪೋಷಕರಾದ ಸಾಹಿಬಾ ಖಾನಮ್ ಮತ್ತು ಸೈಯದ್ ಖಾಸಿಮ್ ರಸೂಲ್ ಇಲ್ಯಾಸ್, ಕುಟುಂಬದ ವಿವಾಹಕ್ಕೆ ಮುಂಚಿತವಾಗಿ ತಮ್ಮ ಹೆಣ್ಣುಮಕ್ಕಳಲ್ಲಿ ಒಬ್ಬಳನ್ನು ಭೇಟಿ ಮಾಡಲು ಅಮೆರಿಕಕ್ಕೆ ತೆರಳಿದ್ದರು. ಈ ವೇಳೆ ಅವರು ಮಮ್ದಾನಿ ಮತ್ತು ಇತರ ಕೆಲವರನ್ನು ಭೇಟಿಯಾಗಿದ್ದರು ಎಂದು ಲಹಿರಿ ಹೇಳಿದ್ದಾರೆ.


