ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್‌ಐಆರ್) ಬಳಿಕ ಮಂಗಳವಾರ (ಡಿಸೆಂಬರ್ 16) ಚುನಾವಣಾ ಆಯೋಗ ಪಶ್ಚಿಮ ಬಂಗಾಳದ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದೆ. ಸಾವು, ವಲಸೆ ಮತ್ತು ಎಣಿಕೆ ನಮೂನೆಗಳನ್ನು ಸಲ್ಲಿಸದಿರುವುದು ಸೇರಿದಂತೆ ವಿವಿಧ ಕಾರಣಗಳ ಮೇಲೆ 58 ಲಕ್ಷಕ್ಕೂ ಹೆಚ್ಚು ಮತದಾರರ ಹೆಸರುಗಳನ್ನು ಅಳಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹೆಸರು ಅಳಿಸಲಾದ 58 ಲಕ್ಷ (58,20,898) ಮತದಾರರ ಪೈಕಿ 24,16,852 ಮಂದಿ ಸಾವನ್ನಪ್ಪಿದ್ದಾರೆ, 19,88,076 ಜನರು ಶಾಶ್ವತವಾಗಿ ಸ್ಥಳಾಂತರಗೊಂಡಿದ್ದಾರೆ. 12,20,038 ಮಂದಿ ಪತ್ತೆಯಾಗಿಲ್ಲ ಅಥವಾ ಕಾಣೆಯಾಗಿದ್ದಾರೆ. 1,38,328 ಮಂದಿಯ ಹೆಸರು ಒಂದಕ್ಕಿಂತ ಹೆಚ್ಚು ಬಾರಿ ಇವೆ ಮತ್ತು 57,604 ಜನರ ಹೆಸರುಗಳನ್ನು ಇತರ ಕಾರಣಗಳಿಗೆ ಕೈ ಬಿಡಲಾಗಿದೆ ಎಂದು ಚುನಾವಣಾ ಆಯೋಗ ಹೇಳಿದೆ.
ಕರಡು ಮತದಾರರ ಪಟ್ಟಿಯ ಪ್ರಕಟದ ಮೂಲಕ ಪಶ್ಚಿಮ ಬಂಗಾಳದ ಎಸ್‌ಐಆರ್ ಪ್ರಕ್ರಿಯೆಯ ಮೊದಲ ಹಂತ ಕೊನೆಗೊಂಡಿದೆ. ಯಾರ ಹೆಸರು ತಪ್ಪಾಗಿ ಅಳಿಸಲಾಗಿದೆಯೂ, ಅವರು ಜನವರಿ 15ವರೆಗೆ ಆಕ್ಷೇಪಣೆಗಳನ್ನು ಸಲ್ಲಿಸಿ ತಮ್ಮ ಹೆಸರು ಸೇರ್ಪಡೆಗೊಳಿಸಲು ಅವಕಾಶವಿದೆ. ಎಲ್ಲಾ ಆಕ್ಷೇಪಣೆಗಳನ್ನು ಪರಿಹರಿಸಿದ ಬಳಿಕ, ಮುಂದಿನ ಫೆಬ್ರವರಿಯಲ್ಲಿ (2026) ಮತದಾರರ ಅಂತಿಮ ಪಟ್ಟಿ ಪ್ರಕಟಿಸಲಾಗುವುದು ಎಂದು ಚುನಾವಣಾ ಆಯೋಗ ತಿಳಿಸಿದೆ.
ಕರಡು ಪಟ್ಟಿಯ ಬಗ್ಗೆ ಪ್ರತಿಕ್ರಿಯಿಸಿರುವ ತೃಣಮೂಲ ಕಾಂಗ್ರೆಸ್ (ಟಿಎಂ) ಸಂಸದ ಸೌಗತ್ ರಾಯ್, “58 ಲಕ್ಷ ಹೆಸರುಗಳನ್ನು ಅಳಿಸಿರುವುದು ‘ಅನ್ಯಾಯ” ಎಂದಿದ್ದಾರೆ. “ಇದು ಬಂಗಾಳದ ಮತದಾರರ ಪಟ್ಟಿಯಿಂದ ಕಾನೂನುಬದ್ಧ ಮತದಾರರನ್ನು ತೆಗೆದುಹಾಕಲು ಬಿಜೆಪಿ ನಡೆಸಿದ ಪಿತೂರಿಯಾಗಿದೆ. ನಾವು ಮತದಾರರ ಸಹಾಯ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ಜನರು ಮತದಾರರ ಪಟ್ಟಿಗೆ ತಮ್ಮ ಹೆಸರುಗಳನ್ನು ಸೇರಿಸಲು ಅರ್ಜಿ ಸಲ್ಲಿಸಲು ನಾವು ಸಹಾಯ ಮಾಡುತ್ತೇವೆ” ಎಂದು ಹೇಳಿದ್ದಾರೆ.
ಕರಡು ಪಟ್ಟಿಯ ಪ್ರಕಟಣೆಯು ಬಂಗಾಳದಲ್ಲಿ ಎಸ್‌ಐಆರ್ ಕುರಿತ ರಾಜಕೀಯ ಕೋಲಾಹಲವನ್ನು ತೀವ್ರಗೊಳಿಸುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಹಾಗೂ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ಎಸ್‌ಐಆರ್ ಪ್ರಕ್ರಿಯೆಯನ್ನು ವಿರೋಧಿಸಿದ್ದಾರೆ. ಕೇಂದ್ರ ಬಿಜೆಪಿ ಸರ್ಕಾರ ಮತ್ತು ಚುನಾವಣಾ ಆಯೋಗ ಎಸ್‌ಐಆರ್ ಮೂಲಕ ಚುನಾವಣೆಗೆ ಮುಂಚಿತವಾಗಿ ಲಕ್ಷಾಂತರ ಅರ್ಹ ಮತದಾರರ ಹೆಸರುಗಳನ್ನು ಅಳಿಸುತ್ತಿದೆ ಎಂದು ಆರೋಪಿಸಿದ್ದಾರೆ.


