ಬೆಂಗಳೂರು: ಕರ್ನಾಟಕ ಐಟಿ/ಬಿಟಿ ಸಚಿವ ಪ್ರಿಯಾಂಕ ಖರ್ಗೆ ಅವರನ್ನು ‘ಫಸ್ಟ್ ಕ್ಲಾಸ್ ಈಡಿಯಟ್’ ಎಂದಿದ್ದ ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರಿಗೆ ತಿರುಗೇಟು ನೀಡಿರುವ ಪ್ರಿಯಾಂಕ್ ಖರ್ಗೆ ‘ಥರ್ಡ್ ಕ್ಲಾಸ್ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಲು ಸಾಧ್ಯ’ ಎಂದು ತಿರುಗೇಟು ನೀಡಿದ್ದಾರೆ.
ಅಸ್ಸಾಂನಲ್ಲಿ ಸೆಮಿಕಂಡಕ್ಟರ್ ಘಟಕ ಸ್ಥಾಪನೆಗೆ ಅನುಮತಿ ದೊರೆತ ವಿಚಾರವಾಗಿ ಇಬ್ಬರು ನಾಯಕರ ನಡುವೆ ವಾಗ್ವಾದ ನಡೆಯುತ್ತಿದ್ದು, ಅದು ವೈಯಕ್ತಿಕ ನಿಂದನೆಯ ಮಟ್ಟಕ್ಕೆ ಇಳಿದಿದೆ. ದೊಡ್ಡ ಕೈಗಾರಿಕೆಗಳನ್ನು ಸ್ಥಾಪಿಸಲು ಈಶಾನ್ಯ ರಾಜ್ಯಗಳಲ್ಲಿ ಪ್ರತಿಭೆ ಕೊರೆತೆಯಿದೆ ಎಂಬ ಪ್ರಿಯಾಂಕ್ ಖರ್ಗೆ ಹೇಳಿಕೆಗೆ ಪ್ರತಿಕ್ರಿಯಿಸಿದ್ದ ಬಿಸ್ವಾ, ಪ್ರಿಯಾಂಕ್ ಅವರನ್ನು ಒಬ್ಬ ‘ಫಸ್ಟ್ ಕ್ಲಾಸ್ ಈಡಿಯಟ್’ ಎಂದು ಕರೆದಿದ್ದರು.
ಈ ಹೇಳಿಕೆ ಕುರಿತು ವರದಿಗಾರರೊಂದಿಗೆ ಮಾತನಾಡಿದ ಪ್ರಿಯಾಂಕ ಖರ್ಗೆ “ಇದು ಅವರ ವರ್ಗ ಸವಲತ್ತು ಮತ್ತು ಕುರ್ಚಿಯ ಕಾರಣದಿಂದಾಗಿ ಅವರಿಗೆ ಸಿಕ್ಕಿರುವ ಸವಲತ್ತನ್ನು ತೋರಿಸುತ್ತದೆ. ಇಲ್ಲದಿದ್ದರೆ, ಅದರಲ್ಲಿ ಏನೂ ಇಲ್ಲ. ಸ್ಪಷ್ಟವಾಗಿ, ಅವರು ನನ್ನ ಹೇಳಿಕೆಗಳನ್ನು ತಪ್ಪಾಗಿ ಅರ್ಥೈಸಿಕೊಳ್ಳುತ್ತಿದ್ದಾರೆ, ಅದನ್ನು ರಾಜಕೀಯಗೊಳಿಸುತ್ತಿದ್ದಾರೆ. ಆದರೆ ಅಸ್ಸಾಂನಿಂದ ಅನೇಕ ಜನರು ತರಬೇತಿಗಾಗಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಅವರೇ ಟ್ವೀಟ್ ಮಾಡಿದ್ದರು ಎಂಬುದು ಸತ್ಯ. ನಾವು ಅವರನ್ನು ಸ್ವಾಗತಿಸುತ್ತೇವೆ. ಯಾರೂ ಇಲ್ಲ ಎಂದು ಹೇಳುತ್ತಿಲ್ಲ. ಶರ್ಮಾ ಅವರ ಭಾಷೆ ಅವರ ಹತಾಶೆಯನ್ನು ತೋರಿಸುತ್ತದೆ. ಮೂರನೇ ದರ್ಜೆಯ ವಂಚಕನಿಂದ ನಾವು ಇನ್ನೇನು ನಿರೀಕ್ಷಿಸಬಹುದು?” ಎಂದು ಪ್ರಶ್ನಿಸಿದ್ದಾರೆ.


