ಭಾರತದ ರಾಷ್ಟ್ರ ಭಾಷೆ ಯಾವುದು? ಎಂಬ ಪ್ರಶ್ನೆಗೆ ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) ಪಕ್ಷದ ಸಂಸದೆ ಕನಿಮೋಳಿ ನೀಡಿರುವ ಉತ್ತರ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಭಯೋತ್ಪಾದನೆ ಕುರಿತ ಭಾರತದ ನಿಲುವನ್ನು ಜಗತ್ತಿಗೆ ತಿಳಿಸಲು ಸರ್ವಪಕ್ಷ ಸಂಸದರ ನಿಯೋಗಗಳು ವಿವಿಧ ರಾಷ್ಟ್ರಗಳಿಗೆ ತೆರಳಿದೆ. ಸ್ಪೇನ್‌ಗೆ ತೆರಳಿರುವ ನಿಯೋಗದಲ್ಲಿ ಸಂಸದೆ ಕನಿಮೋಳಿ ಇದ್ದಾರೆ. ಸ್ಪೇನ್‌ನ ರಾಜಧಾನಿ ಮ್ಯಾಡ್ರಿಡ್‌ನಲ್ಲಿ ಅನಿವಾಸಿ ಭಾರತೀಯ ಜೊತೆ ಆಯೋಜಿಸಿದ್ದ ಸಂವಾದಲ್ಲಿ ಕನಿಮೋಳಿ ಮಾತನಾಡಿದ್ದಾರೆ.
ಕಾರ್ಯಕ್ರಮದಲ್ಲಿ ವ್ಯಕ್ತಿಯೊಬ್ಬರು “ಭಾರತದ ರಾಷ್ಟ್ರ ಭಾಷೆ ಯಾವುದು?” ಎಂದು ಕನಿಮೋಳಿ ಅವರನ್ನು ಪ್ರಶ್ನಿಸಿದ್ದಾರೆ. ಅದಕ್ಕೆ ಉತ್ತರಿಸಿದ ಕನಿಮೋಳಿ ” ಭಾರತದ ರಾಷ್ಟ್ರ ಭಾಷೆ ವಿವಿಧತೆಯಲ್ಲಿ ಏಕತೆ” ಎಂದಿದ್ದಾರೆ. ಈ ಉತ್ತರ ಎಲ್ಲೆಡೆ ವೈರಲ್ ಆಗಿದೆ.
“ಭಾರತದ ರಾಷ್ಟ್ರೀಯ ಭಾಷೆ ವಿವಿಧತೆಯಲ್ಲಿ ಏಕತೆ. ಈ ನಿಯೋಗವು ಜಗತ್ತಿಗೆ ಕೊಡುವ ಸಂದೇಶವೂ ಅದೇ. ಅದು ಇಂದಿನ ಅತ್ಯಂತ ಮುಖ್ಯವಾದ ವಿಷಯ” ಎಂದು ಕನಿಮೋಳಿ ಹೇಳಿದ್ದಾರೆ.
Great answer by #India All Party #Parliament Delegation leader #Tamilnadu #MP Smt @KanimozhiDMK in #Spain #Kanimozhi replied – “You wanted to know about the #NationalLanguage. I think the #National #Language of India is Unity in Diversity”#KanimozhiSpeech #DMK #KanimozhiMP pic.twitter.com/OcU3dK6B0a
— A OMPRAKASH (@omprakash678) June 2, 2025
ರಾಷ್ಟ್ರೀಯ ಶಿಕ್ಷಣ ನೀತಿ (ಎನ್‌ಇಪಿ), ತ್ರಿಭಾಷಾ ನೀತಿ ಮೂಲಕ ಹಿಂದಿ ಹೇರಿಕೆ ಇತ್ಯಾದಿ ವಿಷಯಗಳಲ್ಲಿ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಮತ್ತು ಡಿಎಂಕೆ ನೇತೃತ್ವದ ತಮಿಳುನಾಡು ಸರ್ಕಾರಗಳ ನಡುವೆ ತಿಕ್ಕಾಟ ಏರ್ಪಟ್ಟಿರುವ ಕನಿಮೋಳಿ ಅವರು ನೀಡಿರುವ ಉತ್ತರ ಮಹತ್ವವೆನಿಸಿಕೊಂಡಿದೆ.
ಭಯೋತ್ಪಾದನೆಯ ಕುರಿತ ಪ್ರಶ್ನೆಗೆ ಉತ್ತರಿಸಿದ ಕನಿಮೋಳಿ ಅವರು “ನಮ್ಮ ದೇಶದಲ್ಲಿ ಬಹಳಷ್ಟನ್ನು ಮಾಡಬೇಕಾಗಿದೆ ಮತ್ತು ನಾವು ಅದನ್ನೇ ಮಾಡಲು ಬಯಸುತ್ತೇವೆ. ದುರದೃಷ್ಟವಶಾತ್, ನಮ್ಮನ್ನು ಬೇರೆಡೆಗೆ ತಿರುಗಿಸಲಾಗುತ್ತಿದೆ. ನಾವು ಭಯೋತ್ಪಾದನೆಯನ್ನು ಎದುರಿಸಬೇಕಾಗಿದೆ, ಯುದ್ಧವು ಸಂಪೂರ್ಣವಾಗಿ ಅನಗತ್ಯ” ಎಂದು ಒತ್ತಿ ಹೇಳಿದ್ದಾರೆ. ಭಾರತ ಸುರಕ್ಷಿತ ಸ್ಥಳವಾಗಿದ್ದು, ಕಾಶ್ಮೀರ ಸುರಕ್ಷಿತವಾಗಿದೆ ಎಂದು ಸರ್ಕಾರ ಈ ಮೂಲಕ ಖಚಿತಪಡಿಸುತ್ತದೆ ಎಂದು ಎಂದಿದ್ದಾರೆ.
“ಭಾರತೀಯರಾಗಿ, ಭಾರತ ಸುರಕ್ಷಿತವಾಗಿದೆ ಎಂಬ ಸಂದೇಶವನ್ನು ನಾವು ಜಗತ್ತಿಗೆ ಸ್ಪಷ್ಟಪಡಿಸಬೇಕು. ಅವರು (ಭಯೋತ್ಪಾದಕರು) ಏನು ಬೇಕಾದರೂ ಪ್ರಯತ್ನಿಸಬಹುದು. ಆದರೆ, ಅವರು ನಮ್ಮನ್ನು ಹಳಿತಪ್ಪಿಸಲು ಸಾಧ್ಯವಿಲ್ಲ. ಕಾಶ್ಮೀರ ಸುರಕ್ಷಿತ ಸ್ಥಳವಾಗಿ ಉಳಿಯುವಂತೆ ನಾವು ಖಚಿತಪಡಿಸಿಕೊಳ್ಳುತ್ತೇವೆ” ಎಂದು ತಿಳಿಸಿದ್ದಾರೆ.
ಕನಿಮೋಳಿ ನೇತೃತ್ವದ ನಿಯೋಗದ ಐದು ರಾಷ್ಟ್ರಗಳ ಭೇಟಿಯ ಕೊನೆಯ ದೇಶ ಸ್ಪೇನ್ ಆಗಿತ್ತು. ಮೇ 31ರಂದು ಅಲ್ಲಿಗೆ ತಲುಪಿದ ನಿಯೋಗ, ಜೂನ್ 2ರವರೆಗೆ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಿತ್ತು. ನಿಯೋಗದಲ್ಲಿ ಸಮಾಜವಾದಿ ಪಕ್ಷದ ಸಂಸದ ರಾಜೀವ್ ಕುಮಾರ್ ರೈ, ಬಿಜೆಪಿಯ ಬ್ರಿಜೇಶ್ ಚೌಟ, ಎಎಪಿಯ ಅಶೋಕ್ ಮಿತ್ತಲ್, ಆರ್‌ಜೆಡಿಯ ಪ್ರೇಮ್ ಚಂದ್ ಗುಪ್ತಾ ಮತ್ತು ಮಾಜಿ ರಾಜತಾಂತ್ರಿಕ ಮಂಜೀವ್ ಸಿಂಗ್ ಪುರಿ ಇದ್ದರು.


