ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರನ್ನು ಮುಖ್ಯಮಂತ್ರಿ ಸ್ಥಾನದಿಂದ ಕೆಳಗಿಳಿಸಿದ ಬಳಿಕ ಪಂಜಾಬ್ ಮುಖ್ಯಮಂತ್ರಿ ಯಾರಾಗುತ್ತಾರೆಂಬ ಕುತೂಹಲ ಎಲ್ಲರಲ್ಲೂ ಇತ್ತು. ಮುಂದಿನ ವರ್ಷ ವಿಧಾನಸಭೆ ಚುನಾವಣೆ ನಡೆಯುತ್ತಿರುವುದರಿಂದ ಕಾಂಗ್ರೆಸ್ ಯಾವ ಹೆಜ್ಜೆ ಇಡಬಹುದು ಎಂಬ ಕುತೂಹಲ ರಾಜಕೀಯ ಪಡಸಾಲೆಯಲ್ಲಿ ನೆಲೆಸಿತ್ತು. ಅಚ್ಚರಿಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ಪಕ್ಷವು ಸಿಖ್ ದಲಿತ ವ್ಯಕ್ತಿಯನ್ನು ಮುಖ್ಯಮಂತ್ರಿಯಾಗಿ ಘೋಷಿಸಿದ್ದು, ಪಂಜಾಬ್‌ನಲ್ಲಿ ಅತಿಹೆಚ್ಚಿರುವ ದಲಿತ ಸಮುದಾಯದ ಮೊದಲ ಮುಖ್ಯಮಂತ್ರಿಯೂ ಅವರಾಗಿದ್ದಾರೆ.
ಚರಣ್‌ಜಿತ್ ಸಿಂಗ್ ಚನ್ನಿ ಅವರನ್ನು ಮುಖ್ಯಮಂತ್ರಿಯಾಗಿ ಮಾಡುತ್ತಿರುವುದರ ಹಿಂದೆ ರಾಜಕೀಯ ಲೆಚ್ಚಾಚಾರಗಳಿವೆ. ಜಾತಿ ಧ್ರುವೀಕರಣದ ಯೋಚನೆ ಇದೆ. ಪಂಜಾಬ್‌ನಲ್ಲಿ ಕಾಂಗ್ರೆಸ್ಸೇತರ ಪಕ್ಷಗಳು ಇಟ್ಟಿರುವ ಹೆಜ್ಜೆಗಳು ಇದಕ್ಕೆ ಕಾರಣವಾಗಿದೆ.
ನವಜೋತ್ ಸಿಂಗ್ ಸಿಧು ಅವರೊಂದಿಗೆ ನಿಂತು ಕ್ಯಾಪ್ಟನ್ ಅಮರಿಂದರ್ ಸಿಂಗ್ ವಿರುದ್ಧ ಸಮರ ಸಾರಿ, ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಕಾರಣರಾದವರಲ್ಲಿ ಚಮ್‌ಕೌರ್ ಸಾಹಿಬ್ ಮೀಸಲು ವಿಧಾನಸಭಾ ಕ್ಷೇತ್ರದ ಶಾಸಕ ಚನ್ನಿ ಕೂಡ ಒಬ್ಬರಾಗಿದ್ದಾರೆ. ಗುರುದಾಸ್‌ಪುರ ಪ್ರಾಂತ್ಯದ ದೆರಾ ಬಾಬಾ ನಾಯಕ್ ವಿಧಾನಸಭಾ ಕ್ಷೇತ್ರದ ಸುಖ್‌ಜಿಂದರ್ ಸಿಂಗ್ ರಾಂದ್ವಾ ಅವರು ಮುಖ್ಯಮಂತ್ರಿಯಾಗುತ್ತಾರೆ ಎನ್ನುತ್ತಿರುವಾಗಲೇ ಚನ್ನಿ ಹೆಸರು ಘೋಷಣೆಯಾಗಿದ್ದು ಅಚ್ಚರಿಯೇ ಸರಿ.
ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ: ಚರಣಜಿತ್ ಸಿಂಗ್ ಚನ್ನಿ ಕುರಿತ ವಿವರಗಳು
ಹಾಗಿದ್ದರೆ ಚನ್ನಿ ಅವರ ಆಯ್ಕೆ ಹಿಂದಿನ ಲೆಕ್ಕಾಚಾರವೇನು?
‘ದಿ ವೈರ್’ ಜಾಲತಾಣದಲ್ಲಿ ಲೇಖಕ ವಿವೇಕ್ ಗುಪ್ತಾ ಅವರು ಹೀಗೆ ವಿವರಿಸುತ್ತಾರೆ:
1. ಮಜ್ಹಾ ಪ್ರದೇಶದ ಸುಖ್‌ಜಿಂದರ್ ರಾಂಧ್ವಾ ಆಯ್ಕೆಗಿಂತ ನಜಜೋತ್ ಸಿಧು ಅವರು ಚನ್ನಿ ಅವರ ಆಯ್ಕೆಯನ್ನು ಬಯಸಿದ್ದರು. ಮುಂದಿನ ಚುನಾವಣೆಯ ನಾಯಕತ್ವವನ್ನು ನಿಭಾಯಿಸಬೇಕಾಗಿರುವುದರಿಂದ ಮುಖ್ಯಮಂತ್ರಿ ಪಟ್ಟವನ್ನು ಸಿಧು ಬಯಸಲಿಲ್ಲ. ಮುಖ್ಯಮಂತ್ರಿ ಸ್ಥಾನಕ್ಕೆ ಕುಳಿತರೆ ಚುನಾವಣೆ ಮಂಕಾಗಬಹುದು ಎಂಬುದು ಸಿಧು ಅವರ ಆಲೋಚನೆಯಾಗಿತ್ತು. ಅಂದರೆ ಸಿಧು ಮುಂದಿನ ಚುನಾವಣೆಯ ನಾಯಕತ್ವ ವಹಿಸುವುದು ಖಚಿತ. ಚುನಾವಣೆಯಲ್ಲಿ ಪಕ್ಷವನ್ನು ಸಂಘಟಿಸಿ, ಮುಂದೆ ಸಿಧು ಮಹೋನ್ನತ ಸ್ಥಾನವನ್ನು ಪಡೆಯಲಿದ್ದಾರೆ. ಸಿಧು ಉನ್ನತಿಗೆ ಚನ್ನಿ ಅವರು ತೊಡಕಾಗುವುದಿಲ್ಲ. ಪ್ರಭಾವಿ ವ್ಯಕ್ತಿಯಾದ ಸುಖ್‌ಜಿಂದರ್ ಆಯ್ಕೆಯಾದರೆ ಸಿಧು ಅವರ ನಾಯಕತ್ವಕ್ಕೆ ತೊಡಕಾಗುತ್ತಿತ್ತು ಎಂಬ ಲೆಕ್ಕಾಚಾರ ಇಲ್ಲಿದೆ.
2. ಚನ್ನಿ ಅವರನ್ನು ಮುಖ್ಯಮಂತ್ರಿ ಸ್ಥಾನದಲ್ಲಿ ಕೂರಿಸಿದರೆ ಪಂಜಾಬ್‌ನಲ್ಲಿ ದಲಿತ ಮತಗಳು ಚದುರಿ ಹೋಗುವುದಿಲ್ಲ ಎಂಬ ಲೆಕ್ಕಾಚಾರವಿದೆ. ರಾಜ್ಯದ ಮೂರು ಕೋಟಿ ಜನಸಂಖ್ಯೆಯಲ್ಲಿ ಮೂರನೇ ಒಂದು ಭಾಗ ದಲಿತರಿದ್ದಾರೆ. ಅತಿ ಹೆಚ್ಚು ದಲಿತರಿರುವ ರಾಜ್ಯ ಪಂಜಾಬ್ ಆಗಿದೆ. ರಾಜ್ಯದ ಜನಸಂಖ್ಯೆಯಲ್ಲಿ ಶೇ. 32ರಷ್ಟು ದಲಿತರಿದ್ದಾರೆ ಎಂದು 2011ರ ಜನಗಣತಿ ಹೇಳುತ್ತದೆ.
ಜಾಟ್ ಸಮುದಾಯದ ಪ್ರಾಬಲ್ಯವಿರುವ ಶಿರೋಮಣಿ ಅಕಾಲಿ ದಳ ಪಕ್ಷವು, ದಲಿತರೊಂದಿಗೆ ಗುರುತಿಸಿಕೊಂಡಿರುವ ಬಹುಜನ ಸಮಾಜ ಪಾರ್ಟಿ (ಬಿಎಸ್‌ಪಿ) ಜೊತೆ ಪಂಜಾಬ್‌ನಲ್ಲಿ ಮೈತ್ರಿ ಮಾಡಿಕೊಂಡಿರುವುದರಿಂದ ಪಂಜಾಬ್‌ನಲ್ಲಿ ದಲಿತ ರಾಜಕಾರಣವು ಗಮನ ಸೆಳೆದಿದೆ. ಸರ್ಕಾರವನ್ನು ರಚಿಸಬೇಕಾದರೆ ದಲಿತರ ಮತಗಳು ಅಗತ್ಯ. ಹೀಗಾಗಿ ಚನ್ನಿ ಅವರನ್ನು ಮುಖ್ಯಮಂತ್ರಿ ಸ್ಥಾನಕ್ಕೆ ಕೂರಿಸಲಾಗಿದೆ.
“ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥನಾಗಿ ಜಾಟ್ ಸಿಖ್ (ಸಿಧು), ಮುಖ್ಯಮಂತ್ರಿಯಾಗಿ ಸಿಖ್ ದಲಿತ ವ್ಯಕ್ತಿ ಎಂಬ ರಾಜಕೀಯ ತಂತ್ರವನ್ನು ರೂಪಿಸಿ 2022ರ ಚುನಾವಣೆಯನ್ನು ಎದುರಿಸುವುದು ಕಾಂಗ್ರೆಸ್‌ನ ನಡೆಯಾಗಿದೆ” ಎಂದು ರಾಜಕೀಯ ವಿಶ್ಲೇಷಕ ಹರ್‌ಜೇಶ್ವರ್ ಪಾಲ್ ಸಿಂಗ್ ಹೇಳುತ್ತಾರೆ.
ರಾಜಕೀಯ ವಿಶ್ಲೇಷಕ ಖಾಲಿದ್ ಮೊಹಮ್ಮದ್ ಅವರ ಪ್ರಕಾರ, ಚನ್ನಿಯವರ ನೇಮಕಾತಿಯು ಕೇವಲ ಸಿಧು ಅವರ ಆಜ್ಞೆಯ ಮೇರೆಗೆ ಮಾಡಿದ ಒಂದು ಮಧ್ಯಂತರ ವ್ಯವಸ್ಥೆಯಾಗಿದೆ.

“ಮುಖ್ಯಮಂತ್ರಿ ಆಯ್ಕೆಯಲ್ಲಿ ಸಿಧು ಅವರು ಗಾಂಧಿ ಕುಟುಂಬದ ಮೇಲೆ ಪ್ರಭಾವ ಬೀರಿದ್ದಾರೆ. ಚುನಾವಣೆ ಮುಂದಾಳತ್ವ ವಹಿಸಬೇಕಾದರೆ ಮುಖ್ಯಮಂತ್ರಿ ಸ್ಥಾನದಲ್ಲಿರುವವರು ತನಗಿಂತ ಪ್ರಭಾವಿಯಾಗಿರಬಾರದು ಎಂಬ ಸಿಧು ಅವರ ಲೆಕ್ಕಾಚಾರದ ಮೇರೆಗೆ ಮುಖ್ಯಮಂತ್ರಿಯರನ್ನು ನೇಮಿಸಲಾಗಿದೆ. ಸಿಧು ಅವರು ಪಕ್ಷವನ್ನು ಮುನ್ನಡೆಸಲಿದ್ದಾರೆ, ಜೊತೆಗೆ ಅಮರಿಂದರ್ ಸಿಂಗ್ ಅವರ ನಾಯಕತ್ವದಲ್ಲಿ ತೆಗೆದುಕೊಳ್ಳಲು ಸಾಧ್ಯವಾಗದಿದ್ದ ನಿರ್ಧಾರಗಳ ಮೇಲೂ ಈಗ ಸರ್ಕಾರದಲ್ಲಿ ಸಿಧು ಪ್ರಭಾವ ಬೀರಲಿದ್ದಾರೆ” ಎನ್ನುತ್ತಾರೆ ಖಾಲಿದ್ ಮೊಹಮ್ಮದ್. ಕ್ಯಾಪ್ಟನ್ ಅಮರಿಂದರ್ ಸಿಂಗ್ ಅವರೂ ಚನ್ನಿ ಅವರ ಆಯ್ಕೆಯನ್ನು ಸ್ವಾಗತಿಸಿದ್ದಾರೆ.
ಇದನ್ನೂ ಓದಿ: ಪಂಜಾಬ್‌ನ ಮೊದಲ ದಲಿತ ಮುಖ್ಯಮಂತ್ರಿ: ಚರಣಜಿತ್ ಸಿಂಗ್ ಚನ್ನಿ ಕುರಿತ ವಿವರಗಳು


