Homeಕರ್ನಾಟಕರಾಜ್ಯದ ಮರ್ಯಾದೆ ಕಳೆದ ಮೂರು ಪಕ್ಷಗಳು ಮುಂದೇನಾಗಲಿವೆ? ಹೊಣೆಗೇಡಿ ರಾಜಕಾರಣದಿಂದ ಕರಗುತ್ತಿದೆ ವಿಶ್ವಾಸ

ರಾಜ್ಯದ ಮರ್ಯಾದೆ ಕಳೆದ ಮೂರು ಪಕ್ಷಗಳು ಮುಂದೇನಾಗಲಿವೆ? ಹೊಣೆಗೇಡಿ ರಾಜಕಾರಣದಿಂದ ಕರಗುತ್ತಿದೆ ವಿಶ್ವಾಸ

ಪಕ್ಷಾಂತರಿ ಕಾಂಗ್ರೆಸ್ ಶಾಸಕರನ್ನು ಸೋಲಿಸಿಯೇ ಸಿದ್ಧ: ಈ ಛಲ ಎಷ್ಟು ದಿನ ಉಳಿದೀತು? ಪಕ್ಷ ಉಳಿಸಿಕೊಳ್ಳುವುದೇ ಮೊದಲ ಸವಾಲು: ಮತ್ತೆ ಮೇಲೇಳಲಿದೆಯಾ ಫೀನಿಕ್ಸ್ ಜೆಡಿಎಸ್? ಅತೃಪ್ತರನ್ನು ತೃಪ್ತರಾಗಿಸಲು ಬಿಜೆಪಿಗೆ ಸಾಧ್ಯವೇ? ಅಸ್ಥಿರ ಮತ್ತು ಅನೈತಿಕ ಸರ್ಕಾರಗಳಿಂದ ರಾಜ್ಯದ ಜನತೆ ಏನು ನಿರೀಕ್ಷಿಸಬಹುದು?

- Advertisement -
- Advertisement -

ರಾಜ್ಯ ರಾಜಕಾರಣದ ಹೈಡ್ರಾಮಾ ಒಂದು ಹಂತದ ತೆರೆ ಬಿದ್ದಿದೆ. ಆದರೆ, ‘ಅತೃಪ್ತಿ’, ‘ಬ್ಲ್ಯಾಕ್‍ಮೇಲ್’, ‘ರಾಜೀನಾಮೆ’ ಇವೆಲ್ಲಾ ಪ್ರಹಸನಗಳು ಇಲ್ಲಿಗೆ ಮುಕ್ತಾಯವಾಗಲಿವೆ ಎಂದು ಹೇಳಲಾಗದು. ಇಲ್ಲಿಂದ ಮುಂದಕ್ಕೆ ಇನ್ನೊಂದು ಅಂಕ ಶುರು ಎಂಬುದು ಖಚಿತ. ರಾಜಕೀಯ ಕುತೂಹಲ ಮತ್ತು ರಾಜ್ಯದ ಜನರ ಹಿತಾಸಕ್ತಿಗಳ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಮೂರೂ ಪಕ್ಷಗಳ ಮುಂದಿನ ನಡೆಗಳು ಏನಾಗಿರಬಹುದು ಎಂಬುದನ್ನು ನೋಡುವ ಅಗತ್ಯವಿದೆ.

ಮಾರಾಟವಾಗಲು ಸಿದ್ಧವಾಗಿರುವ ವ್ಯಕ್ತಿಗಳಿಗೆ ಟಿಕೆಟ್ ಕೊಟ್ಟ ಪಕ್ಷಗಳು ಮತ್ತು ಅನೈತಿಕ ಮಾರ್ಗದಲ್ಲಿ ಶಾಸಕರನ್ನು ಕೊಳ್ಳಲು ಸಿದ್ಧವಾಗಿರುವ ಪಕ್ಷ – ಈ ಮೂರೂ ಪಕ್ಷಗಳು ಸೇರಿ ಕರ್ನಾಟಕದ ಮರ್ಯಾದೆ ತೆಗೆದಾಗಿದೆ. ಕಳೆದೊಂದು ವರ್ಷದಿಂದ ರಾಜ್ಯದಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ಜನಪರ ಕಾರ್ಯಕ್ರಮಗಳ ಸುತ್ತಲಿನ ಚರ್ಚೆ-ಜಗಳಗಳು ನಡೆದಿಲ್ಲ. ಬದಲಿಗೆ, ಬಿಜೆಪಿಯು ಎಷ್ಟು ಜನರನ್ನು ಅಪರೇಷನ್ ಕಮಲ ಮಾಡುತ್ತಿದೆ ಎಂಬುದೇ ಪದೇ ಪದೇ ಕೇಳಿ ಬಂದ ಸುದ್ದಿ. ಸುದ್ದಿ ಮಾಧ್ಯಮಗಳು, ಅದರಲ್ಲೂ ಟಿವಿ ವಾಹಿನಿಗಳು ತಾವೂ ಕೆಲವು ‘ಹುಸಿ ಆಪರೇಷನ್’ಗಳನ್ನು ನಡೆಸಿದವು. ಮಾರಾಟವಾಗುವ ಶಾಸಕರ ನಡೆಯನ್ನು ಟೀಕಿಸುವ ಬದಲಿಗೆ, ಸಂಭ್ರಮಿಸುವ ಮಾಧ್ಯಮಗಳಿರುವ ರಾಜ್ಯದಲ್ಲಿ ಯಾವ ರೀತಿಯ ರಾಜಕೀಯ ಮೌಲ್ಯಗಳಿರಲು ಸಾಧ್ಯ?

ಅಂತಿಮವಾಗಿ ನಡೆದ ಸುದೀರ್ಘ ವಿಶ್ವಾಸಮತ ಪ್ರಹಸನವು ರಾಜಕೀಯ ಪಕ್ಷಗಳು ತಲುಪಿರುವ ಅಧೋಗತಿಯನ್ನು ನಿಚ್ಚಳವಾಗಿ ಬಿಂಬಿಸಿತು. ಆಡಳಿತ ನಡೆಸುತ್ತಿದ್ದ ಪಕ್ಷಗಳು ವಾಚಾಮಗೋಚರವಾಗಿ ತಮ್ಮ ಜಾತಕ ಬಿಚ್ಚಿಡುತ್ತಿದ್ದರೆ ಅದನ್ನು ಅತ್ಯಂತ ಮೌನವಾಗಿ ಕೇಳಿಸಿಕೊಂಡಿದ್ದು ಬಿಜೆಪಿ. ಏಕೆಂದರೆ, ಅದರ ವಿರುದ್ಧ ಮಾತನಾಡಿ ಒಂದು ವೇಳೆ ಗಲಾಟೆಯುಂಟಾಗಿ ತಮ್ಮ ಶಾಸಕರು ಅಮಾನತುಗೊಂಡರೆ ಬಹುಮತ ಸಾಬೀತು ಮಾಡುವ ಸಂಖ್ಯೆ ಇಲ್ಲದೇ ಹೋದೀತು ಎಂಬ ಭಯ ಒಂದೆಡೆ. ಇನ್ನೊಂದೆಡೆ, ತಾವು ಮಾತನಾಡಲು ಮುಂದಾಗಿ ತಡವಾದರೆ, ತಮ್ಮ ಪಕ್ಷದವರು ಹಿಡಿದಿಟ್ಟುಕೊಂಡಿರುವ ಶಾಸಕರು ಬೇಲಿ ಹಾರಿ ವಾಪಸ್ ಹೋಗಿಬಿಟ್ಟರೆ ಏನು ಗತಿ ಎಂಬ ಆತಂಕ ಇನ್ನೊಂದೆಡೆ. ಹಾಗಾಗಿ ಹೆಚ್ಚು ಕಡಿಮೆ ಜೀವಚ್ಛವಗಳಂತೆ ಕೂತು ತಮ್ಮ ಮೇಲೆ ಸುರಿದ ಬೈಗುಳಗಳನ್ನು ಅವರು ಸಹಿಸಿಕೊಂಡರು.

ಟಿವಿ ನೋಡುತ್ತಿದ್ದವರೊಬ್ಬರು ಆಡಿದ ಮಾತು ಬಿಜೆಪಿ ಮತ್ತು ಯಡಿಯೂರಪ್ಪನವರ ಸ್ಥಿತಿಯನ್ನು ಸರಿಯಾಗಿ ಸೂಚಿಸುತ್ತಿತ್ತು. ‘ಬೇಕಾದರೆ ಇಲ್ಲೇ ನನಗೆ ಚಪ್ಪಲಿಯಲ್ಲಿ ನಾಲ್ಕೇಟು ಹೊಡೆದುಬಿಡಿ. ಆದರೆ, ಬೇಗನೇ ವೋಟಿಂಗ್‍ಗೆ ಹಾಕಿಬಿಟ್ಟು ನನ್ನನ್ನು ಮುಖ್ಯಮಂತ್ರಿ ಮಾಡಲು ಅವಕಾಶ ಮಾಡಿಕೊಡಿ’ ಎಂಬಂತಿತ್ತು ಅವರ ನಡವಳಿಕೆ.

ಇನ್ನು ಆಡಳಿತ ಪಕ್ಷಗಳ ನಡವಳಿಕೆಯೂ ಹೇವರಿಕೆ ಮೂಡಿಸುತ್ತಿತ್ತು. ವಿಶ್ವಾಸಮತ ಯಾಚನೆಯ ಸಂದರ್ಭದಲ್ಲಿ ಆಗಬೇಕಾದ ಚರ್ಚೆಗಳು ಆಗಲೇಬೇಕು ಮತ್ತು ಸಾರ್ವಜನಿಕರ ಮುಂದೆ ವಿವರಗಳನ್ನು ಬಿಚ್ಚಿಡಬೇಕೆಂಬುದು ಸರಿಯಾದುದೇ ಆಗಿತ್ತು. ಆದರೆ, ಸೋಮವಾರ ಸಂಜೆಯ ಹೊತ್ತಿಗೆ ಆ ಉಮೇದೂ ಸಹಾ ಹೋಗಿಬಿಟ್ಟಿತ್ತು. ಏಕೆಂದರೆ, ವಿಶ್ವಾಸಮತ ಚರ್ಚೆ ದೀರ್ಘವಾಗಿ ನಡೆಯಲಿ ಎಂಬುದಕ್ಕಿಂತ ಹೆಚ್ಚು ಸಮಯ ಸಿಕ್ಕಿದರೆ ಮುಂಬೈಗೆ ಓಡಿಹೋಗಿರುವವರಲ್ಲಿ ಕೆಲವರಾದರೂ ಬರುವಂತಾಗಬಹುದು ಎಂಬ ಬಹುದೂರದ ಆಸೆ! ಅದಕ್ಕಾಗಿ ಅನಗತ್ಯವಾಗಿ ಸಭೆಯ ಕಲಾಪಗಳನ್ನು ಎಳೆಯುವ ದಾರಿಯನ್ನು ಹುಡುಕಿಕೊಂಡರು. ಆ ಕಾರಣದಿಂದ ಕೆಲವು ಉತ್ತಮವಾದ ಭಾಷಣಗಳನ್ನು ಕೇಳುವ ಅವಕಾಶ ರಾಜ್ಯದ ಜನರಿಗೆ ಸಿಕ್ಕಿತಾದರೂ, ಒಂದು ಹಂತದ ನಂತರ ಅತಿ ಎನಿಸತೊಡಗಿತು. ಹೇಗಾದರೂ ಅಧಿಕಾರವನ್ನು ಉಳಿಸಿಕೊಳ್ಳಬೇಕೆನ್ನುವ ಹಪಾಹಪಿ ಇದು ಎಂಬುದು ಎದ್ದು ಕಂಡಿತು.

ಅವೆಲ್ಲಕ್ಕೂ ಈಗ ಒಂದು ಹಂತದ ತೆರೆ ಬಿದ್ದಿದೆ. ಆದರೆ, ‘ಅತೃಪ್ತಿ’, ‘ಬ್ಲ್ಯಾಕ್‍ಮೇಲ್’, ‘ರಾಜೀನಾಮೆ’ ಇವೆಲ್ಲಾ ಪ್ರಹಸನಗಳು ಇಲ್ಲಿಗೆ ಮುಕ್ತಾಯವಾಗಲಿವೆ ಎಂದು ಹೇಳಲಾಗದು. ಇಲ್ಲಿಂದ ಮುಂದಕ್ಕೆ ಇನ್ನೊಂದು ಅಂಕ ಶುರು ಎಂಬುದು ಖಚಿತ. ಸಾಮಾನ್ಯವಾಗಿ ವಿರೋಧಪಕ್ಷದಲ್ಲಿರುವಾಗ ಸಕ್ರಿಯವಾಗಿರದ ಕಾಂಗ್ರೆಸ್ ಸಹಾ ಶಾಸಕರು ಮುಂಬೈ ಸೇರಿದ ಮೇಲೆ ಚುರುಕಾಯಿತು ಮತ್ತು ಸದನದಲ್ಲಿ ‘ಹೋರಾಡುವ’ ಪ್ರಯತ್ನ ನಡೆಸಿತು. ರಾಜಕೀಯ ಕುತೂಹಲ ಮತ್ತು ರಾಜ್ಯದ ಜನರ ಹಿತಾಸಕ್ತಿಗಳ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ಮೂರೂ ಪಕ್ಷಗಳ ಮುಂದಿನ ನಡೆಗಳು ಏನಾಗಿರಬಹುದು ಎಂಬುದನ್ನು ನೋಡುವ ಅಗತ್ಯವಿದೆ.

ಪಕ್ಷಾಂತರಿ ಕಾಂಗ್ರೆಸ್ ಶಾಸಕರನ್ನು ಸೋಲಿಸಿಯೇ ಸಿದ್ಧ: ಈ ಛಲ ಎಷ್ಟು ದಿನ ಉಳಿದೀತು?
ಪಕ್ಷಾಂತರ ಪರ್ವದ ಸಂದರ್ಭದಲ್ಲಿ ಸದ್ಯದ ಸಂದರ್ಭವನ್ನು ಹೇಗೆ ನಿಭಾಯಿಸಬೇಕೆಂದು ಚರ್ಚಿಸಲು ಕೆ.ಜೆ.ಜಾರ್ಜ್‍ಗೆ ಸೇರಿದ ಹಿಲ್ಟನ್ ಹೋಟೆಲ್‍ನಲ್ಲಿ ಸಭೆ ಸೇರಿದ ಕಾಂಗ್ರೆಸ್ ನಾಯಕರು ಮುಂದಿನ ನಡೆಗಳ ಕುರಿತೂ ಮಾತನಾಡಿದ್ದಾರೆ. ಸಿದ್ದರಾಮಯ್ಯನವರೇ ಪಕ್ಷಾಂತರಕ್ಕೆ ಜವಾಬ್ದಾರರು ಎಂಬ ಭಾವನೆಯು ಈಗ ಎಲ್ಲರಲ್ಲೂ ಕಡಿಮೆಯಾಗಿದೆ. ಇದನ್ನು ಹೆಚ್ಚೆಂದರೆ ಸಿದ್ದರಾಮಯ್ಯನವರ ವೈಫಲ್ಯ ಎಂದಷ್ಟೇ ಕರೆಯಬಹುದು ಎಂಬುದು ಈಗ ಬಹುತೇಕ ಎಲ್ಲರ ಅನಿಸಿಕೆಯಾಗಿದೆ. ಅಷ್ಟೇ ಅಲ್ಲದೇ, ರಾಜ್ಯದಲ್ಲಿ ಕಾಂಗ್ರೆಸ್ಸನ್ನು ಮುನ್ನಡೆಸಬಲ್ಲ ಮಾಸ್ ಲೀಡರ್ ಈಗಲೂ ಸಹಾ ಅವರೇ ಎಂಬುದನ್ನು ಬಹುಶಃ ಅವರ ವಿರೋಧಿಗಳೂ ಅಲ್ಲಗಳೆಯಲಾರರು.

ಆದರೆ, ಕೆಪಿಸಿಸಿಯನ್ನು ಮುನ್ನಡೆಸಲು ಒಕ್ಕಲಿಗ ನಾಯಕರೊಬ್ಬರ ಕೈಗೆ ಚುಕ್ಕಾಣಿ ನೀಡಬೇಕು ಎಂಬ ಚರ್ಚೆಯೂ ಅವರೊಳಗೆ ನಡೆದಿದೆ. ಸದನದಲ್ಲಿ ಮಿಂಚಿದ ಕೃಷ್ಣಭೈರೇಗೌಡರು ಮಾಸ್ ಲೀಡರ್ ಅಲ್ಲ, ಎಲ್ಲರನ್ನೂ ನಿಭಾಯಿಸುವುದು ಅವರಿಗೆ ಕಷ್ಟ ಹಾಗಾಗಿ ಡಿಕೆಶಿಯೇ ಅನಿವಾರ್ಯ ಆಯ್ಕೆ. ಆದರೆ ಮುಂದಿನ ದಿನಗಳಲ್ಲಿ ಕೇಂದ್ರ ತನಿಖಾ ಸಂಸ್ಥೆಗಳ ಬಲೆಯಲ್ಲಿ ಸಿಕ್ಕಿಕೊಳ್ಳುವ ಸಾಧ್ಯತೆ ಹೆಚ್ಚಿರುವುದರಿಂದ ಅವರಿಂದ ಎಷ್ಟು ಅನುಕೂಲವಾಗಬಹುದು ಎಂಬ ಸಂದೇಹವೂ ಇದೆ. ಜೆಡಿಎಸ್ ಹೆಚ್ಚು ಕಾಲ ಉಳಿಯಲಾರದು. ಹಾಗಾಗಿ ಒಕ್ಕಲಿಗರ ಬೇಸ್ ಸಂಪೂರ್ಣ ಬಿಜೆಪಿಗೆ ಹೋಗದಂತೆ ನೋಡಿಕೊಳ್ಳಲು ಒಕ್ಕಲಿಗ ಲೀಡರ್ ಒಬ್ಬರನ್ನು ಪ್ರೊಜೆಕ್ಟ್ ಮಾಡುವುದು ಅನಿವಾರ್ಯ ಎಂಬುದು ಕಾಂಗ್ರೆಸ್ ನಾಯಕರ ಆಲೋಚನೆ. ನಿಧಾನಕ್ಕೆ ಈ ಭಾಗದ ಜೆಡಿಎಸ್ ನಾಯಕರಲ್ಲಿ ಹಲವರು ಬಿಜೆಪಿ ಸೇರಿಕೊಳ್ಳಬಹುದಾದರೂ, ಗಣನೀಯ ಸಂಖ್ಯೆಯ ನಾಯಕರು ಇತ್ತ ಕಡೆಗೂ ಬರಲಿ ಎಂಬುದು ಅವರ ಲೆಕ್ಕಾಚಾರ.

ಮುಂದಿನದ್ದನ್ನು ಮುಂದೆ ನೋಡಿಕೊಳ್ಳೋಣ. ಸದ್ಯಕ್ಕೆ ಕಾಂಗ್ರೆಸ್‍ಗೆ ಕೈಕೊಟ್ಟಿ ಓಡಿ ಹೋಗಿರುವ ಶಾಸಕರನ್ನು ಸೋಲಿಸುವುದಕ್ಕೇ ಆದ್ಯತೆ ಎಂಬುದು ಸಭೆಯಲ್ಲಿದ್ದ ಎಲ್ಲರ ಅನಿಸಿಕೆಯಾಗಿತ್ತೆಂದು ಮೂಲಗಳು ಹೇಳುತ್ತವೆ. ಉಪಚುನಾವಣೆ ನಡೆಯುವವರೆಗೆ ಈ ಒಗ್ಗಟ್ಟು ಉಳಿಯಬಹುದಾದರೂ, ನಂತರದ ದಿನಗಳಲ್ಲಿ ಈ ಎಲ್ಲಾ ನಾಯಕರುಗಳೂ ಪರಸ್ಪರ ಕಾಲೆಳೆದುಕೊಳ್ಳುವುದಿಲ್ಲ ಎಂಬ ಗ್ಯಾರಂಟಿ ಯಾರಿಗೂ ಇದ್ದಂತಿಲ್ಲ.

ಮುಂದೆ ಮುಖ್ಯಮಂತ್ರಿಯಾಗಲೇಬೇಕು ಎನ್ನುವ ಬಲವಾದ ಆಸೆ ಇರುವವರಲ್ಲಿ ಮುಂಚೂಣಿ ವ್ಯಕ್ತಿಗಳು ಡಿ.ಕೆ.ಶಿವಕುಮಾರ್, ಎಂ.ಬಿ.ಪಾಟೀಲ್ ಮಾತ್ರ. ಉಪಮುಖ್ಯಮಂತ್ರಿ ಆಗಿರುವ ಜಿ.ಪರಮೇಶ್ವರ್‍ರಿಗೆ ಮುಖ್ಯಮಂತ್ರಿ ಆಗಬೇಕೆನ್ನುವ ಬಯಕೆ ಇರುವುದಾದರೂ, ಅದು ಇನ್ನು ಸಾಧ್ಯವಾಗದು ಎಂದು ಅರ್ಥ ಮಾಡಿಕೊಂಡಂತಿದೆ. ಇವರಿಬ್ಬರ ಹೊರತಾಗಿ ಎಲ್ಲಾ ಅರ್ಹತೆಗಳಿದ್ದೂ ಅವಕಾಶವಂಚಿತವಾಗಿರುವ ನಾಯಕರೆಂದರೆ ಮಲ್ಲಿಕಾರ್ಜುನ ಖರ್ಗೆಯವರು. ಮುಂದಿನ ಚುನಾವಣೆಯ ಹೊತ್ತಿಗೆ ಆ ವಿಚಾರ ಮತ್ತೆ ಮುನ್ನೆಲೆಗೆ ಬರುತ್ತದಾ ಇಲ್ಲವಾ ಕಾದು ನೋಡಬೇಕು. ಸಿದ್ದರಾಮಯ್ಯನವರ ಬೆಂಬಲ ಇಲ್ಲದೇ ಡಿ.ಕೆ.ಶಿ ಮತ್ತು ಎಂ.ಬಿ.ಪಾಟೀಲ್ ಸಿಎಂ ಆಗಲಾರರು; ಎಲ್ಲರನ್ನೂ ಜೊತೆಗೆ ಒಯ್ಯುವಂಥವರೂ ಆಗಬೇಕು, ಸಿದ್ದರಾಮಯ್ಯನವರ ಮಾತು ಕೇಳುವ ವ್ಯಕ್ತಿಯೇ ಇರಬೇಕು ಎನ್ನುವ ಕಾರಣಕ್ಕೆ ದಿನೇಶ್ ಗುಂಡೂರಾವ್ ಈ ಸದ್ಯ ಕೆಪಿಸಿಸಿ ಅಧ್ಯಕ್ಷರಾಗಿದ್ದಾರೆ.

ಇವರೆಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡಿದರೆ, ಯಾರು ಸಿಎಂ ಆಗಬೇಕು ಎನ್ನುವಲ್ಲಿ ಅರ್ಹತೆ ಮಾತ್ರ ಮಾನದಂಡವಾಗಿರಬೇಕು ಎನ್ನುವುದಾದರೆ ಕಾಂಗ್ರೆಸ್ಸಿಗೆ ಭವಿಷ್ಯವಿದೆ. ಸದನದಲ್ಲಿ ತಮ್ಮ ಸಾಮಥ್ರ್ಯ ತೋರಿಸಿರುವ ಕೃಷ್ಣಭೈರೇಗೌಡ, ಸ್ಪೀಕರ್ ರಮೇಶ್‍ಕುಮಾರ್ ಮತ್ತಿತರರನ್ನೂ ಒಳಗೊಂಡ ಒಂದು ತಂಡ, ತಂಡವಾಗಿ ಕೆಲಸ ಮಾಡಿದರೆ ಅತ್ಯಧಿಕ ಮತನೆಲೆಯನ್ನೂ ಒಳಗೊಂಡಿರುವ ಕಾಂಗ್ರೆಸ್ ಮತ್ತೆ ಪುಟಿದೇಳಬಹುದು. ಸಕ್ರಿಯ ವಿರೋಧ ಪಕ್ಷವಾಗಿಯೂ ಕೆಲಸ ಮಾಡುತ್ತಾ, ಪಕ್ಷವನ್ನೂ ಕಟ್ಟುತ್ತಾ ಹೋಗಬೇಕು. ಆ ಕೆಲಸ ಕಾಂಗ್ರೆಸ್ ಮಾಡುತ್ತದೆ ಎಂದು ನಂಬಲು ಇದುವರೆಗಿನ ಇತಿಹಾಸ ಸಾಕ್ಷ್ಯ ಒದಗಿಸುವುದಿಲ್ಲ.

ಪಕ್ಷ ಉಳಿಸಿಕೊಳ್ಳುವುದೇ ಮೊದಲ ಸವಾಲು: ಮತ್ತೆ ಮೇಲೇಳಲಿದೆಯಾ ಫೀನಿಕ್ಸ್ ಜೆಡಿಎಸ್?
1996ರವರೆಗೆ ಮೂರು ಬಾರಿ ಕಾಂಗ್ರೆಸ್ಸೇತರ ಪಕ್ಷಗಳ ಮೈತ್ರಿಕೂಟ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದಾಗಲೂ ಅದರ ಕೇಂದ್ರದಲ್ಲಿದ್ದು ಜನತಾ ಪರಿವಾರ. ನಂತರದಲ್ಲಿ ಅದು ವಿವಿಧ ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳಲ್ಲಿ ಒಡೆದುಹೋಗಿದೆ. ಒಮ್ಮೆ ಪ್ರಧಾನಿಯೂ ಆಗಿದ್ದ ಎಚ್.ಡಿ.ದೇವೇಗೌಡರ ನೇತೃತ್ವದ ಜೆಡಿಎಸ್ ಆ ಪರಂಪರೆಗೆ ಸೇರಿದ್ದ ಪಕ್ಷ. ಸಂಸ್ಥಾ ಕಾಂಗ್ರೆಸ್ಸಿನಲ್ಲಿದ್ದ ಹಳೆಯ ತಲೆಗಳು, ಸೋಷಿಯಲಿಸ್ಟರು ಮತ್ತು ತುರ್ತು ಪರಿಸ್ಥಿತಿಗೆ ಮುಂಚಿನ ಜೆ.ಪಿ.ಚಳವಳಿಯ ಉತ್ಪನ್ನಗಳು ಎಲ್ಲರೂ ಸೇರಿ ರೂಪಿಸಿದ್ದ ಈ ಪರಿವಾರದ ಎಲ್ಲಾ ಆಗುಹೋಗುಗಳನ್ನೂ ಬಲ್ಲವರು ದೇವೇಗೌಡರು. ಅಂತಿಮವಾಗಿ ಒಂದೇ ರಾಜ್ಯದ ಕೆಲವು ಜಿಲ್ಲೆಗಳ ಪಕ್ಷವಾಗುಳಿದ ಈ ಪಕ್ಷದ ಇಂದಿನ ಸ್ಥಿತಿಗೂ ದೇವೇಗೌಡರ ರಾಜಕಾರಣ ಪ್ರಧಾನ ಕಾರಣ. ನಂತರ ಅದೊಂದು ಕುಟುಂಬಾಧಿಪತ್ಯದ ಪಕ್ಷವಾಗಿ ಪರಿವರ್ತನೆ ಹೊಂದಿದೆ.

ಬಹಳ ದುಸ್ಥಿತಿಗೆ ತಲುಪಿದ್ದರೂ ಜೆಡಿಎಸ್ ಪಕ್ಷವನ್ನು ಹೊರತುಪಡಿಸಿ ಸರ್ಕಾರ ರಚಿಸಲಾಗದ ಸ್ಥಿತಿ ಈ ಇಪ್ಪತ್ತು ವರ್ಷಗಳಲ್ಲಿ ಎರಡು ಸಾರಿ ಬಂದಿದೆ. ಅದಕ್ಕೆ ಒಕ್ಕಲಿಗರು ಹೆಚ್ಚಿರುವ ಜಿಲ್ಲೆಗಳಲ್ಲಿ ಅದಕ್ಕಿರುವ ಪ್ರಭಾವ ಒಂದು ಕಾರಣವಾದರೆ, ರಾಜ್ಯದಲ್ಲಿ ಪ್ರಾದೇಶಿಕ ಹಿತಾಸಕ್ತಿ ಕಾಯುವ ಮೂರನೇ ಶಕ್ತಿಗೆ ಅವಕಾಶವಿರುವುದು ಇನ್ನೊಂದು ಕಾರಣ. ಇದರ ಅರಿವು ದೇವೇಗೌಡರಿಗಿರುವುದರಿಂದಲೇ ತಾವು ರಾಷ್ಟ್ರೀಯ ಅಧ್ಯಕ್ಷರಾಗಿರುವ ಜೆಡಿಎಸ್ ಪಕ್ಷವನ್ನು ಆಗಾಗ ಪ್ರಾದೇಶಿಕ ಪಕ್ಷವೆಂದು ಸಂಬೋಧಿಸುತ್ತಿರುತ್ತಾರೆ. ಆದರೆ, ಯಾವ ರೀತಿಯಲ್ಲೂ ಪ್ರಾದೇಶಿಕ ಪಕ್ಷದ ರೀತಿಯಲ್ಲಿ ಅದು ವರ್ತಿಸುವುದಿಲ್ಲ; ಪದೇ ಪದೇ ಕುಟುಂಬದ ಪಕ್ಷವೆಂದು ಸಾಬೀತುಪಡಿಸುತ್ತಾರೆ. ಈ ಸಾರಿ ಕುಮಾರಸ್ವಾಮಿ ಮುಖ್ಯಮಂತ್ರಿಯಾದ ನಂತರ ಅದನ್ನು ಮತ್ತಷ್ಟು ನಿಚ್ಚಳವಾಗಿ ಸಾಬೀತುಪಡಿಸಿದ್ದಾರೆ.

ಒಂದೆಡೆ ಒಕ್ಕಲಿಗ ಸಮುದಾಯವನ್ನು ಸೆಳೆಯಲು ಬಿಜೆಪಿ ಮಾಡುತ್ತಿರುವ ಪ್ರಯತ್ನ, ಮತ್ತೊಂದೆಡೆ ಉಳಿದ ಸಮುದಾಯಗಳಿಗೆ ಅದು ತಮ್ಮ ಪಕ್ಷವಲ್ಲವೆಂದು ಅನಿಸುತ್ತಿರುವುದು – ಈ ಹಿನ್ನೆಲೆಯಲ್ಲಿ ಜೆಡಿಎಸ್ ಪಕ್ಷವು ಮತ್ತಷ್ಟು ಮೂಲೆಗೆ ತಳ್ಳಲ್ಪಡುವ ಸಾಧ್ಯತೆಯೇ ಹೆಚ್ಚು ಕಾಣುತ್ತಿದೆ. ಹಾಗಾಗಿ ಈ ರಾಜ್ಯದಲ್ಲಿ ಹಳೇ ಮೈಸೂರು ಪ್ರದೇಶವೂ ಕಾಂಗ್ರೆಸ್ ಮತ್ತು ಬಿಜೆಪಿಗಳ ನಡುವೆ ಧ್ರುವೀಕರಣಗೊಂಡರೆ ಅದಕ್ಕೆ ಗೌಡರ ಕುಟುಂಬದ ಜಾತಿವಾದಿ ಧೋರಣೆಯೂ ಕಾರಣವಾಗಿದೆ. ಅದನ್ನೂ ದಾಟಿ ಅದು ಮತ್ತೊಮ್ಮೆ ಮೇಲೆದ್ದು ಬರುತ್ತದಾದರೆ ಅದನ್ನು ಫೀನಿಕ್ಸ್ ಎಂತಲೇ ಹೇಳಬೇಕು.

ಕುಮಾರಸ್ವಾಮಿಯವರ ಅನಾರೋಗ್ಯ, ಕುಟುಂಬದೊಳಗೆ ಮೂರನೇ ತಲೆಮಾರಿನ ನಡುವೆ ಇರುವ ಬಿರುಕು ಹಾಗೂ ದೇವೇಗೌಡರ ವಯಸ್ಸು ಇವೆಲ್ಲವೂ ಜೆಡಿಎಸ್ ಪಕ್ಷದ ಪುನಶ್ಚೇತನದ ಸಾಧ್ಯತೆಯನ್ನು ಕಡಿಮೆ ಮಾಡುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಈ ಕುಟುಂಬದ ಕೌಟುಂಬಿಕ ರಾಜಕಾರಣವನ್ನು ರಾಜ್ಯದ ಜನತೆಯು ಇನ್ನು ಮುಂದೆಯೂ ಒಪ್ಪುವ ಸಾಧ್ಯತೆ ಕಡಿಮೆಯಾಗಿದೆ ಎಂಬುದನ್ನು ಮಂಡ್ಯದ ಲೋಕಸಭಾ ಚುನಾವಣೆಯು ಎತ್ತಿ ತೋರಿಸಿದೆ.

ಅತೃಪ್ತರನ್ನು ತೃಪ್ತರಾಗಿಸಲು ಬಿಜೆಪಿಗೆ ಸಾಧ್ಯವೇ?
ಮುಂದಿನ ದಿನಗಳಲ್ಲಿ ಹೆಚ್ಚಿನ ಕುತೂಹಲ ಮೂಡಿಸಿರುವುದು ಬಿಜೆಪಿಯ ಮುಂದಿನ ನಡೆಗಳು. ಈಗಲೇ ಮುಖ್ಯಮಂತ್ರಿಯಾಗಿಬಿಡಬೇಕು ಎನ್ನುವ ಆತುರ ಯಡಿಯೂರಪ್ಪನವರಿಗಿದ್ದಷ್ಟು ಬಿಜೆಪಿಯ ಇತರರಿಗಿರಲಿಲ್ಲ. ಏಕೆಂದರೆ, ಈಗಲೇ ಸರ್ಕಾರ ರಚಿಸಿದರೆ ಯಡಿಯೂರಪ್ಪನವರೇ ಮುಖ್ಯಮಂತ್ರಿ. ಚುನಾವಣೆಗೆ ಹೋದರೆ ಸಲೀಸಾಗಿ ದೊಡ್ಡ ಬಹುಮತ ಗಳಿಸಬಹುದು, ಆಗ ಬೇರೆಯವರು ಮುಖ್ಯಮಂತ್ರಿಯಾಗುವುದು ಖಾತ್ರಿ. ಅಷ್ಟೇ ಅಲ್ಲದೇ, ಈಗ ಕಾಂಗ್ರೆಸ್-ಜೆಡಿಎಸ್‍ಗಳಿಂದ ಹೊರಬಂದಿರುವ ಶಾಸಕರಲ್ಲಿ (ಗೈರು ಹಾಜರಾದವರೂ ಸೇರಿದರೆ 17+ಇಬ್ಬರು ಪಕ್ಷೇತರರು) ಹೆಚ್ಚಿನವರು ಮಂತ್ರಿ ಸ್ಥಾನ ಬಯಸುತ್ತಾರೆ. ಕನಿಷ್ಠ 14 ಜನರಿಗೆ ಮಂತ್ರಿ ಸ್ಥಾನ ನೀಡಿದರೆ ಬಿಜೆಪಿಯವರಿಗೆ ಉಳಿಯುವುದು 20 ಸ್ಥಾನ ಮಾತ್ರ. ಹಿಂದೆ ಮಂತ್ರಿಗಳಾದವರು, ನಾಲ್ಕೈದು ಸಾರಿ ಶಾಸಕರಾಗಿರುವವರು, ‘ಬಲಾಢ್ಯರು’ ಎಲ್ಲರೂ ಸೇರಿದರೆ ಸುಮಾರು 60 ಜನ ಮಂತ್ರಿಗಳಾಗುವ ಆಸೆ ಇಟ್ಟುಕೊಂಡಿದ್ದಾರೆ. ಸರಳ ಬಹುಮತವಷ್ಟೇ ಸಿಕ್ಕಿರುವಾಗ ಬ್ಲ್ಯಾಕ್‍ಮೇಲ್ ಮಾಡುವವರು 25 ಜನ ಆದರೆ ಅದನ್ನು ಹೇಗೆ ನಿಭಾಯಿಸುವುದು ಎಂಬ ಪ್ರಶ್ನೆ ಏಳುತ್ತದೆ.

ಇವೆಲ್ಲಾ ಕಾರಣಗಳಿಂದ ಬಿಜೆಪಿಯೊಳಗೆ ಭಿನ್ನಮತ ಭುಗಿಲೇಳುತ್ತದೆ ಎಂಬುದಷ್ಟೇ ಬಿಜೆಪಿಯ ತಲೆನೋವಲ್ಲ. ಯಡಿಯೂರಪ್ಪನವರು ಒಂದು ರೀತಿ ಹಸಿದ ಮತ್ತು ಕೆರಳಿದ ಹುಲಿ. ಅವರಿಗೆ ವಿರೋಧ ಪಕ್ಷಗಳು ತೊಂದರೆ ಕೊಟ್ಟಿರುವಷ್ಟೇ ಸ್ವಪಕ್ಷೀಯರೂ ಕೊಟ್ಟಿದ್ದಾರೆ. ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ, ಈಗ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೇರಿರುವ ಬಿ.ಎಲ್.ಸಂತೋಷ್, ಜಗದೀಶ್ ಶೆಟ್ಟರ್, ಆರ್.ಅಶೋಕ್ ಸೇರಿದಂತೆ ಹಲವರು ಯಡಿಯೂರಪ್ಪನವರನ್ನು ಕಾಡದೇ ಇರುವುದಿಲ್ಲ. ಯಡಿಯೂರಪ್ಪನವರೂ ತಮಗೆ ನಿಷ್ಠರಾದವರ ಹಿತ ಕಾಯುವಲ್ಲಿ ಎರಡು ಹೆಜ್ಜೆ ಮುಂದೆ. ಶೋಭಾ ಕರಂದ್ಲಾಜೆಯವರಿಂದ ಮಂತ್ರಿ ಪದವಿ ಕಿತ್ತುಕೊಳ್ಳಬೇಕಾಗಿ ಬಂದಾಗ ಸಾರ್ವಜನಿಕವಾಗಿ ಕಣ್ಣೀರು ಹಾಕಿದವರು ಅವರು. ನಂತರ ಹೇಗೋ ಮಾಡಿ ಮತ್ತೆ ಮಂತ್ರಿ ಮಾಡಿಯೂ ಬಿಟ್ಟಿದ್ದರು. ಅದರ ಮೇಲೆ ಅವರ ಪುತ್ರರತ್ನರಿಬ್ಬರೂ ಅಧಿಕಾರ ಬಂದಾಗ ವಿಧಾನಸೌಧದ ಸುತ್ತಲೇ ಇರುತ್ತಾರೆಂಬುದು ಈ ಹಿಂದೆಯೂ ಸಾಬೀತಾಗಿದೆ.

ಇವೆಲ್ಲವೂ ಬಿಜೆಪಿಯೊಳಗೆ ಸಮಸ್ಯೆಗಳನ್ನು ಹೆಚ್ಚಿಸುತ್ತಲೇ ಹೋಗುತ್ತದೆ. ಸಚಿವ ಸಂಪುಟ ರಚನೆಯ ಸಂದರ್ಭದಿಂದಲೇ ಶುರುವಾಗುವ ಸಂಕಷ್ಟಗಳಿವು. ಅದನ್ನು ತಪ್ಪಿಸಲು ಇರುವ ಏಕೈಕ ಸಾಧ್ಯತೆ ಏರ್ಪಡುವುದು ರಾಜೀನಾಮೆ ನೀಡಿರುವ ಶಾಸಕರು ವಿಧಾನಸಭೆಯ ಇಡೀ ಅವಧಿಯವರೆಗೆ ಅನರ್ಹಗೊಳ್ಳುವುದರ ಮೂಲಕ. ಆ ಸಾಧ್ಯತೆ ಹೆಚ್ಚೇ ಇದೆ. ಏಕೆಂದರೆ ಸದರಿ ಶಾಸಕರು ಮರಳಿ ಬಂದರೆ, ‘ಪ್ರಳಯವೇ ಆದರೂ ಮರಳಿ ಪಕ್ಷಕ್ಕೆ ಸೇರಿಸಿಕೊಳ್ಳುವುದಿಲ್ಲ’ ಎಂದು ಸಿದ್ದರಾಮಯ್ಯನವರು ಸದನದಲ್ಲಿ ಘೋಷಿಸಿದ್ದಾರೆ. ಅದರರ್ಥ ಅವರನ್ನು ಅನರ್ಹಗೊಳಿಸುವ ವಿಚಾರದಲ್ಲಿ ಸ್ಪೀಕರ್‍ಗೆ ಯಾವ ತಡೆಯೂ ಇರುವುದಿಲ್ಲ. ಸ್ವತಃ ಸ್ಪೀಕರ್ ಈ ವಿಚಾರದಲ್ಲಿ ‘ತನ್ನ ವಿಶೇಷತೆ’ಯನ್ನು ತೋರಿಸುವ ಉತ್ಸುಕತೆಯಿಂದಲೂ ಇದ್ದಾರೆ. ಹೀಗಾಗಿ ಆ ರೀತಿ ಅನರ್ಹಗೊಂಡವರು ಮರಳಿ ‘ಅರ್ಹರಾಗಲು’ ಸುಪ್ರೀಂಕೋರ್ಟಿನಲ್ಲಿ ಕೇಸು ಹಾಕಿ ಗೆಲ್ಲಬೇಕು. ಅಷ್ಟರಲ್ಲಿ ಹೊಸ ಸಚಿವ ಸಂಪುಟ ರಚನೆಯಾಗಿಬಿಟ್ಟಿರುತ್ತದೆ. ಹೆಚ್ಚೆಂದರೆ ಮೂರ್ನಾಲ್ಕು ಖಾಲಿ ಜಾಗಗಳನ್ನು ಇಟ್ಟುಕೊಂಡು, ಅವರಿಗೆಲ್ಲಾ ಕ್ಯಾರೆಟ್ ತೋರಿಸುತ್ತಾ ಕಾಲ ಕಳೆಯಬಹುದು. ಆ ಮಧ್ಯೆ ಇನ್ನೂ ಹತ್ತಾರು ಶಾಸಕರು ಬೇಲಿ ಹಾರಿ ಬಿಜೆಪಿ ಕಡೆಗೆ ಬಂದರೆ, ಅಲ್ಲಿಗೆ ಯಾರಿಗೂ ಸಚಿವ ಸ್ಥಾನ ಕೊಡದೇ ಸಂಪೂರ್ಣ ಬಹುಮತದ ಆಡಳಿತವನ್ನೂ ನಡೆಸಬಹುದು.

ಆದರೆ, ಇದು ಅಷ್ಟು ಸುಲಭವೇ ಎಂಬ ಪ್ರಶ್ನೆ ಏಳುತ್ತದೆ. ಈಗ ಬಿಜೆಪಿಗೆ ತುರ್ತಾಗಿ ಉಪಚುನಾವಣೆಯಲ್ಲಿ 8 ಸ್ಥಾನಗಳನ್ನಾದರೂ ಗೆಲ್ಲಬೇಕು. ಏಕೆಂದರೆ, ಇಬ್ಬರು ಪಕ್ಷೇತರರು ಮತ್ತು ಬಿಎಸ್‍ಪಿಯ ಎನ್.ಮಹೇಶ್ (ಇವರನ್ನು ಬಿಎಸ್‍ಪಿಯಿಂದ ಉಚ್ಛಾಟನೆ ಮಾಡಲಾಗಿದೆ) ಅವರುಗಳು ಜೊತೆಯಾದರೂ ಅದನ್ನು ನೆಚ್ಚಿಕೊಂಡು ಇರುವಂತಿಲ್ಲ. 15ಕ್ಕೂ ಹೆಚ್ಚು ಸ್ಥಾನಗಳ ಪೈಕಿ, ಅಷ್ಟು ಸೀಟುಗಳನ್ನು ಬಿಜೆಪಿ ಗೆಲ್ಲುವ ಸಾಧ್ಯತೆ ಇದೆಯಾದರೂ ಅದು ಇಂದಿನ ವಾತಾವರಣದಲ್ಲಿ ಸುಲಭದ ಕೈತುತ್ತೇನಲ್ಲ.
ಒಟ್ಟಿನಲ್ಲಿ ಬಿಜೆಪಿ ಸರ್ಕಾರಕ್ಕೆ ಬಹಳ ಸಲೀಸಾದ ದಿನಗಳೇನೂ ಇರುವುದಿಲ್ಲ.

ಅಸ್ಥಿರ ಮತ್ತು ಅನೈತಿಕ ಸರ್ಕಾರಗಳಿಂದ ರಾಜ್ಯದ ಜನತೆ ಏನು ನಿರೀಕ್ಷಿಸಬಹುದು?
ಈ ಪ್ರಶ್ನೆಯ ಕುರಿತು ತಲೆ ಕೆಡಿಸಿಕೊಳ್ಳುವವರು ಯಾರು ಎಂಬುದರ ಬಗ್ಗೆ ಮೊದಲು ತಲೆ ಕೆಡಿಸಿಕೊಳ್ಳಬೇಕಿದೆ. ಉಳಿದ ರಾಜಕೀಯ ಪಕ್ಷಗಳಿಗೆ ಅವರವರ ಸಮಸ್ಯೆಗಳ ಚಿಂತೆಯಾದರೆ, ಮಾಧ್ಯಮಗಳು ಬಿಜೆಪಿಯ ಪರ ಪುಂಗಿ ಊದುವ ಕೆಲಸದಲ್ಲಿ ನಿರತರಾಗಿರುತ್ತಾರೆ. ಇಲ್ಲವೇ ವಿರೋಧ ಪಕ್ಷಗಳ ವಿರುದ್ಧವೇ ಪ್ರಚಾರದಲ್ಲಿ ನಿರತರಾಗುವ ಅಸಂಗತ ಕೆಲಸವೂ ಅವರನ್ನು ಎಂಗೇಜ್ ಮಾಡಬಹುದು.

ಕುಮಾರಸ್ವಾಮಿ ಸರ್ಕಾರ ಬಿದ್ದ ಕೂಡಲೇ ಮಾಧ್ಯಮಗಳ ಜೊತೆ ಮಾತನಾಡಿರುವ ಯಡಿಯೂರಪ್ಪನವರು ‘ನಾಳೆಯಿಂದ ರಾಜ್ಯದಲ್ಲಿ ಅಭಿವೃದ್ಧಿ ಪರ್ವ. ಬರ ಪರಿಹಾರದ ಕುರಿತು ಕೂಡಲೇ ಗಮನಹರಿಸಲಾಗುವುದು’ ಎಂದು ಹೇಳಿದ್ದಾರೆ. ಆದರೆ, ಈ ಹಿಂದಿನ ಅವರ ಆಡಳಿತದಲ್ಲಿ ನಡೆದ ಅಭಿವೃದ್ಧಿಯ ಪರಿ ಎಲ್ಲರಿಗೂ ಗೊತ್ತಿದೆ. ಅದೇನೇ ಇರಲಿ, ಈ ಸಾಲಿನಲ್ಲಿ ಜನಸಾಮಾನ್ಯರ ಸಮಸ್ಯೆಗಳ ಕಡೆಗೆ ಅವರು ಗಮನ ಹರಿಸಲಿ ಎಂದಷ್ಟೇ ಆಶಿಸಬಹುದು.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...