Homeಮುಖಪುಟಪಠ್ಯ ಸೇರುತ್ತಿರುವ ಹೆಡಗೇವಾರ್ ಯಾರು? ಅವರ ಸಿದ್ದಾಂತವೇನು?

ಪಠ್ಯ ಸೇರುತ್ತಿರುವ ಹೆಡಗೇವಾರ್ ಯಾರು? ಅವರ ಸಿದ್ದಾಂತವೇನು?

ವೈದ್ಯಕೀಯ ಕಲಿಯುತ್ತಿದ್ದಾಗ ಕಲ್ಕತ್ತಾದಲ್ಲಿ ಹೆಡಗೇವಾರ್ ಅವರಿಗೆ ಬಲಪಂಥೀಯ ಭೂಗತ ಗುಪ್ತ ಸಮಾಜಗಳ ಸಂಪರ್ಕ ಸಿಕ್ಕಿತು.

- Advertisement -
- Advertisement -

1925ರ ಸೆಪ್ಟೆಂಬರ್ 27ರಂದು ಸ್ಥಾಪನೆಯಾದ ಆರೆಸ್ಸೆಸ್ ರಾಷ್ಟ್ರಪ್ರೇಮದ ಹೆಸರಿನಲ್ಲಿ ಪ್ರತಿಪಾದಿಸುತ್ತಾ ಬಂದಿರುವ ರಾಷ್ಟ್ರ ಯಾವುದು, ಅದಕ್ಕಾಗಿ ಬಳಸಿಕೊಳ್ಳುತ್ತಿರುವ ನಾಜಿ ತಂತ್ರಗಳು ಯಾವುವು, ಅದನ್ನು ಸ್ಥಾಪಿಸಿದ ಕೇಶವರಾವ್ ಬಲಿರಾಮ ಹೆಡಗೇವಾರ್ ಯಾರು ಮತ್ತು ಆತನ ವಿಚಾರಗಳೇನು ಎಂಬುದನ್ನು ತಿಳಿದುಕೊಳ್ಳುವುದು ಇಂದಿಗೆ ಪ್ರಸ್ತುತವಾಗಿದೆ.

ಆರೆಸ್ಸಿಗರು ಡಾಕ್ಟರ್ ಜೀ ಎಂದು ಕರೆಯುವ ಈ ವ್ಯಕ್ತಿ ಜೀವ ಉಳಿಸುವ ವೈದ್ಯನಾಗದೆ ಸಮಾಜದಲ್ಲಿ ಕೋಮುವಾದ ಹರಡುವ ವೈದ್ಯನಾದದ್ದನ್ನು ನಾವು ಮನಗಾಣಬೇಕು. ಇಂದು ಈ ವ್ಯಕ್ತಿ ಪಠ್ಯ ಪುಸ್ತಕಗಳಲ್ಲಿ ಪಾಠವಾಗಿ ಮಕ್ಕಳ ಎಳೆ ಮನಸ್ಸುಗಳನ್ನು ಪ್ರವೇಶಿಸುತ್ತಿರುವಾಗ, ಕರಾವಳಿ, ಮಲೆನಾಡಿನ ಹಳ್ಳಿ ಹಳ್ಳಿಗಳಲ್ಲಿ ನಡೆಯುತ್ತಿರುವ ಆರೆಸ್ಸೆಸ್ ಶಾಖೆಗಳಲ್ಲಿ ಕುಟಿಲವಾಗಿ ರೂಪಿಸಿದ ಆಟಗಳ ಮೂಲಕ ಈತನ ವಿಚಾರಗಳನ್ನು ಹರಡಲಾಗುತ್ತಿರುವಾಗ ಇದು ಇನ್ನಷ್ಟು ಪ್ರಸ್ತುತ.

ಆರೆಸ್ಸೆಸ್ಸಿಗೆ ಮೂಲ ಪ್ರೇರಣೆಯಾಗಿದ್ದದ್ದು ಕಾಂಗ್ರೆಸ್‍ನ ಒಳಗೇ ಇದ್ದ ಹಿಂದೂ ಮಹಾಸಭಾ ಎಂಬ ಒಂದು ಸಮಾನಾಸಕ್ತಿ ಗುಂಪು. 1923ರಲ್ಲಿ ಇದು ಮದನ ಮೋಹನ ಮಾಳವೀಯ ಎಂಬವರ ನೇತೃತ್ವದಲ್ಲಿ ಒಂದು ಸ್ವಯಂ ಆಸ್ತಿತ್ವ ಇರುವ ಸಂಘಟನೆಯಾಗಿ ಹುಟ್ಟಿತು. ಇಂದು ಈತನನ್ನೂ ಒಬ್ಬ ರಾಷ್ಟ್ರೀಯ ನಾಯಕನಾಗಿ ಬಿಂಬಿಸುವ ಪ್ರಯತ್ನ ಮಾಡಲಾಗುತ್ತಿದೆ. ‘ಹಿಂದೂ’ ಹೆಸರಿನಲ್ಲಿ ಬ್ರಾಹ್ಮಣವಾದಿ ಮೇಲ್ಜಾತಿಗಳ ಹಿತರಕ್ಷಣೆಗಾಗಿಯೇ ಇದ್ದ ಈ ಸಂಘಟನೆ ತಳವರ್ಗದವರನ್ನು ಸೇರಿಸಿಕೊಳ್ಳಲೂ ಇಲ್ಲ. ತಳವರ್ಗದವರು ಅದನ್ನು ಮೂಸಿ ನೋಡಲೂ ಇಲ್ಲ. ಅದು ವರ್ಣಾಶ್ರಮ ಧರ್ಮ, ಬ್ರಾಹ್ಮಣ್ಯದ ಮೇಲ್ಮೆಯನ್ನು ಉಳಿಸಿಕೊಳ್ಳಲು ಬಯಸುವ ಒಂದು ಪಿತೂರಿಗಾರರ, ಪ್ರಚೋದಕರ ಹಲ್ಲಿಲ್ಲದ ಸಂಘಟನೆಯಾಗಿ ಉಳಿದುಕೊಂಡಿತ್ತು. ಇದೇ ವ್ಯಕ್ತಿಗಳು ಪಂಜಾಬ್ ಹಿಂದೂ-ಸಿಖ್ ನೆಲೆಯಲ್ಲಿ ವಿಭಜನೆಯಾಗಿ ಹರ್ಯಾಣ ಹುಟ್ಟಲು ಕಾರಣರಾದವರು. ದೇಶವನ್ನು ಕೋಮು ನೆಲೆಯಲ್ಲಿ ವಿಭಜಿಸಲು ಮುಸ್ಲಿಂ ಲೀಗ್ ಜೊತೆ ಕೈ ಜೋಡಿಸಿ ಪಾಕಿಸ್ತಾನ, ಬಾಂಗ್ಲಾ ದೇಶ ಹುಟ್ಟಲು ಕಾರಣರಾದವರು.

ಮಾಳವೀಯರ ವಿಚಾರಗಳಿಂದ ಪ್ರಭಾವಿತರಾದ ಕೇಶವರಾವ್ ಬಲಿರಾಮ ಹೆಡಗೆವಾರ್ ಅವರ ಎಳೆ ಮನಸ್ಸಿಗೆ ಹೊಕ್ಕಿದ್ದೂ ಇದೇ ಬಾಲಿಶ ವಿಚಾರಗಳೇ ಆಗಿದ್ದವು. ಕೇವಲ 5000 ಸಾವಿರ ಸೈನಿಕರನ್ನು ಹೊಂದಿದ್ದ ರಾಬರ್ಟ್ ‍ಕ್ಲೈವ್ ಹೇಗೆ ಬ್ರಿಟಿಷ್ ಸಾಮ್ರಾಜ್ಯಕ್ಕೆ ಅಡಿಗಲ್ಲು ಹಾಕಿದ? ಅಲ್ಲಾವುದ್ದೀನ್ ಖಿಲ್ಜಿ ಹದಿನೇಳು ಬಾರಿ ದಂಡಯಾತ್ರೆ ಮಾಡಿ ಸೋಮನಾಥ ಸಹಿತ ಹಲವಾರು ದೇವಾಲಯಗಳಿಗೆ ದಾಳಿ ಮಾಡಿ ಸಂಪತ್ತು ಲೂಟಿ ಮಾಡಿದ? ಇತ್ಯಾದಿ ವಿಚಾರಗಳು ಅವರ ತಲೆಯಲ್ಲಿದ್ದವು. ಆದರೆ ಸೋಮನಾಥಪುರದಲ್ಲಿ ಬ್ರಾಹ್ಮಣರ ಅಪಾರ ಪ್ರಮಾಣದ ಸಂಪತ್ತನ್ನು ಬಚ್ಚಿಡಲಾಗಿತ್ತು; ಅದಕ್ಕಾಗಿ ಹಿಂದೂ ರಾಜರುಗಳೂ ಅಂತಹಾ ದೇವಾಲಯಗಳಿಗೆ ದಾಳಿ ಮಾಡಿದ್ದರು; ಇದರಿಂದ ಬಡ ಜನರಿಗಾಗಲೀ ದೇವಾಲಯ ಪ್ರವೇಶ ಇಲ್ಲದ ದಲಿತರಿಗಾಗಲೀ ಯಾವ ವ್ಯತ್ಯಾಸವೂ ಆಗುತ್ತಿರಲಿಲ್ಲ; ಖಿಲ್ಜಿಯ ಸೇನಾನಾಯಕ ಮಲ್ಲಿಕ್ ಕಾಫರ್ ಒಬ್ಬ ಮತಾಂತರಗೊಂಡ ಹಿಂದೂವಾಗಿದ್ದ; ಅವನು ಮತಾಂತರವಾಗಲು ಕಾರಣವೇನು? ದಾಳಿಗಳು ನಡೆದಾಗ ಹಿಂದೂ ರಾಜರುಗಳೇನು ಮಾಡುತ್ತಿದ್ದರು? ಭಾರತ ಎಂಬ ದೇಶ ಇತ್ತೆ? ಕ್ಲೈವ್ ಆದಿಯಾಗಿ ಬ್ರಿಟಿಷರ ವಿರುದ್ಧ ಎರಡು ಮೂರು ಶತಮಾನ ಕಾಲ ಹಿಂದೂಗಳಾಗಲಿ, ಮುಸ್ಲಿಮರಾಗಲೀ- ಭಾರತೀಯರು ಎಂಬ ನೆಲೆಯಲ್ಲಿ ಯಾಕೆ ಒಟ್ಟಾಗಲಿಲ್ಲ? ಬಿಟಿಷರೂ, ಮೊಗಲರೂ, ಅವರೂ, ಇವರೂ- ಎಲ್ಲಾ ಆಡಳಿತಗಾರರು ಒಂದೇ ಎಂಬ ಭಾವನೆ ಮೇಲು ಕೀಳಿನ ಜಾತಿವ್ಯವಸ್ಥೆಗೆ ಒಗ್ಗಿಕೊಂಡಿದ್ದ ಭಾರತೀಯರಲ್ಲಿ ಇರಲಿಲ್ಲವೆ? ಎಲ್ಲರ ಸೇವೆ ಮಾಡಿ ಬದುಕಿದವರು; ಉಳಿದ ಹಿಂದೂಗಳು, ದಲಿತರನ್ನು, ಒಟ್ಟಾಗಿ ಹೇಳುವುದಾದರೆ ಕೆಳವರ್ಗಗಳ ಜನರನ್ನು ಆಳಿದವರು ಇದೇ ಬ್ರಾಹ್ಮಣರು.

ಈ ಪ್ರಶ್ನೆಗಳು ಬಹುಶಃ ಬ್ರಾಹ್ಮಣರಾಗಿದ್ದ ಹೆಡಗೆವಾರ್ ಅವರಿಗೆ ಹೊಳೆದಿರಲಾರದು. ಅವರು ಹಿಂದೂ ಏಕತೆಯನ್ನು ಪ್ರತಿಪಾದಿಸಿದಾಗ ಆ ಹಿಂದೂತ್ವ ಸಮಾನತೆಯ ಹಿಂದೂತ್ವ ಆಗಿರಲಿಲ್ಲ. ಬದಲಾಗಿ ಬಹುಸಂಖ್ಯಾತರು ಬ್ರಾಹ್ಮಣ್ಯವನ್ನು ಒಪ್ಪಿಕೊಂಡು ಅವರ ಅಡಿಯಾಳುಗಳಾಗಿ ಬದುಕಿ ಬಂದ ಹಿಂದೂತ್ವವಾಗಿತ್ತು. ಅವರ ಹಿಂದೂತ್ವ ವೇದ-ಉಪನಿಷದ್‍ಗಳಲ್ಲಿ ಇದ್ದ ಕೆಲವು ಉದಾತ್ತ ತತ್ವಗಳು (ಸಹಾನುಭವತು, ಸಹಾನೌಭುನತ್ತು… ಜತೆಗೆ ಬಾಳುವ, ಜೊತೆಗೆ ಉಣ್ಣುವ..) ಮತ್ತು ಸರ್ವೇ ಜನಾ ಸುಖಿನೋ ಭವಂತು ಎಂಬಂತಹ ಆದರ್ಶದ ಮೇಲೆ ನಿಂತಿರಲಿಲ್ಲ. ಮುಸ್ಲಿಮರು, ‘ಕ್ರೈಸ್ತ’ರಾದ ಬ್ರಿಟಿಷರ ವಿರುದ್ಧ ಹಿಂದೂಗಳು ಭೇದ ಭಾವವನ್ನು ಒಪ್ಪಿಕೊಂಡು ಒಂದಾಗಬೇಕು ಎಂಬ ಆಗ್ರಹದ ಮೇಲೆ ನಿಂತಿತ್ತು!

ವೈದ್ಯಕೀಯ ಕಲಿಯುತ್ತಿದ್ದಾಗ ಕಲ್ಕತ್ತಾದಲ್ಲಿ ಹೆಡಗೇವಾರ್ ಅವರಿಗೆ ಬಲಪಂಥೀಯ ಭೂಗತ ಗುಪ್ತ ಸಮಾಜಗಳ ಸಂಪರ್ಕ ಸಿಕ್ಕಿತು. ಅವರ ತಂತ್ರ-ಕುತಂತ್ರಗಳನ್ನು ಬಹುಶಃ ಚೆನ್ನಾಗಿಯೇ ಕಲಿತುಕೊಂಡರು. ಅವರು ಆರೆಸ್ಸೆಸ್ ಸ್ಥಾಪಿಸುವ ಕೆಲ ವರ್ಷ ಮೊದಲಷ್ಟೇ ಜರ್ಮನಿಯ ಜರ್ಮನ್ ನ್ಯಾಷನಲಿಸ್ಟ್ ಸೋಷಿಯಲಿಸ್ಟ್ ಪಾರ್ಟಿ ಸ್ಥಾಪನೆಯಾಗಿತ್ತು. ಅದರ ಸಂಘಟನಾ ಸಂರಚನೆ (Organizational structure) ವಿದ್ಯಾವಂತರಾಗಿದ್ದ ಹೆಡಗೇವಾರ್ ಅವರ ಗಮನಕ್ಕೆ ಬಂದಿರುವ ಎಲ್ಲಾ ಸಾಧ್ಯತೆಗಳಿವೆ. ಆ ಪಕ್ಷದಲ್ಲಿ ಮುಂದೆ ಎಸ್‍ಎಸ್ (ಸ್ಟ್ರೂಮ್ಸ್  ಸ್ಷ್ರಾಫೆಲ್- ಭದ್ರತಾ ಸಿಬ್ಬಂದಿ ಅಥವಾ ಚೌಕಿದಾರ್!) ಎಂದು ಕರೆಸಿಕೊಂಡ ಸಮವಸ್ತ್ರಧಾರಿ ಗೂಂಡಾ ವಿಭಾಗವಿತ್ತೆಂದೂ, ಅದು ಮುಂದೆ ಭಯಾನಕ ಹಿಂಸಾಚಾರಕ್ಕೆ ಅಸ್ತ್ರವಾಯಿತು. ಅದೇ ಮಾದರಿಯಲ್ಲಿ ಆರೆಸ್ಸೆಸ್ ಕಾರ್ಯಕರ್ತರಿಗೆ ಬ್ರಿಟಿಷ್ ಕಾಲದ ಆಗಿನ ಪೊಲೀಸರ ಸಮವಸ್ತ್ರದ ಮಾದರಿಯಲ್ಲಿ ಖಾಕಿ ಚಡ್ಡಿ, ಬೆಲ್ಟು-ಬೂಟುಗಳನ್ನು ನೀಡಿದ್ದಲ್ಲದೆ ಕೈಗೊಂದು ದಂಡವನ್ನೂ ನೀಡಲಾಯಿತು! ಇದೀಗ ಸಿ.ಟಿ. ರವಿ ಸಮರ್ಥಿಸುತ್ತಿರುವ ಶಸ್ತ್ರಾಸ್ತ್ರ ತರಬೇತಿಯನ್ನೂ ನೀಡಲಾಗುತ್ತಿದೆ. ಮಕ್ಕಳ ಕೈಗೆ ತ್ರಿಶೂಲ, ಖಡ್ಗಗಳನ್ನು ನೀಡಲಾಗುತ್ತಿದೆ.

ಆರೆಸ್ಸೆಸ್‍ನ ಸಂಘಟನೆಯಲ್ಲಿ ನಾಜಿ ಸಂರಚನೆ ಇರುವುದನ್ನು ಗಮನಿಸಬಹುದು. ಒಬ್ಬ ಸರಸಂಘಚಾಲಕ (ಪರಮೋಚ್ಛ ನಾಯಕ) ಇರುತ್ತಾನೆ. ಆತ ಪ್ರಶ್ನಾತೀತ! ನಂತರ ಸಂಘಚಾಲಕರು, ಪ್ರಾದೇಶಿಕ ಸಂಚಾಲಕರು, ಪ್ರಾಂತ ಸಂಚಾಲಕರು, ತಳಮಟ್ಟದಲ್ಲಿ ಪ್ರಚಾರಕರು ಇರುತ್ತಾರೆ. ಇವರು ಸಂಘಟನೆಗೆ ಜನರನ್ನು, ಅದರಲ್ಲೂ ಬುದ್ಧಿ ಬೆಳೆಯದ ಬಾಲಕರನ್ನು ಸೇರಿಸುತ್ತಾರೆ. ಸಂಘದ ಶಾಖೆಗಳಲ್ಲಿ ಭಗವಾಧ್ವಜವನ್ನು ಇಟ್ಟುಕೊಂಡು ವ್ಯಾಯಾಮ ಮತ್ತಿತರ ಕವಾಯತುಗಳನ್ನು ಅರೆಮಿಲಿಟರಿ ಮಾದರಿಯಲ್ಲಿ ನಡೆಸಲಾಗುತ್ತದೆ. (ದಕ್ಷ-ಎಟೆನ್ಷನ್, ವಿಶ್ರಮ್- ಸ್ಟ್ಯಾಂಡ್ ಎಟ್‍ಈಸ್, ವಿಸರ್ಜನ್- ಡಿಸ್‍ಪರ್ಸ್ ಇತ್ಯಾದಿ)

ಪ್ರತೀ ಶಾಖೆಯಲ್ಲಿ ಒಬ್ಬ ಬೌದ್ಧಿಕ್ ಪ್ರಮುಖ್ ಇರುತ್ತಾನೆ. ಪೊಲಿಟಿಕಲ್ ಕಮಿಸ್ಸಾರ್ ರೀತಿಯಲ್ಲಿ. ಆತ ಆರೆಸ್ಸೆಸ್ ಸಿದ್ಧಾಂತಗಳನ್ನು ಹೇಳಿಕೊಟ್ಟು ಬ್ರೈನ್‍ವಾಶ್ ಮಾಡುತ್ತಾನೆ. ಆತ ಮೇಲಿನವರ ನೇರ ನಿಯಂತ್ರಣದಲ್ಲಿದ್ದು ಉಳಿದವರಿಗಿಂತ ಮೇಲಿರುತ್ತಾನೆ. ಇಲ್ಲಿ ‘ಆತ’ ಎಂಬುದಕ್ಕೆ ಮಹತ್ವ ಇದೆ. ಆರೆಸ್ಸೆಸ್‍ನಲ್ಲಿ ಮಹಿಳೆಯರಿಗೆ ಅವಕಾಶವಿಲ್ಲ. ದೇಶವನ್ನು ಭಾರತ ಮಾತೆ ಎನ್ನುವ ಆರೆಸ್ಸೆಸ್ ಬಳಗದಲ್ಲಿ ರಾಷ್ಟ್ರ ಸೇವಿಕಾ ಸಂಘ ಎಂಬ ಪ್ರತ್ಯೇಕ ಸಂಘಟನೆ ಇದೆ. ಇದು ಸ್ವಯಂಸೇವಕನೊಬ್ಬನ ತಾಯಿ ಲಕ್ಷ್ಮೀಬಾಯಿ ಕೇಳ್ಕರ್ ಎಂಬವರಿಂದ ಪ್ರಾರಂಭವಾಯಿತು. 1936ರಲ್ಲಿ ಆಕೆ ಸಂಘದಲ್ಲೇ ಸ್ತ್ರೀಯರ ವಿಭಾಗವೊಂದನ್ನು ಸ್ಥಾಪಿಸುವಂತೆ ಹೆಡಗೆವಾರರನ್ನು ಭೇಟಿ ಮಾಡಿದಾಗ ಅವರು ಸುತಾರಾಮ ಒಪ್ಪಲಿಲ್ಲ. ಕೊನೆಗೆ ಆರೆಸ್ಸೆಸ್ ಮಾದರಿಯಲ್ಲೇ ಪ್ರತ್ಯೇಕ ಸಂಘಟನೆ ಮಾಡಿಕೊಳ್ಳಿ ಎಂದರು.

ಬೌದ್ಧಿಕ್ ಪ್ರಮುಖ್‍ಗಳು ಶಾಖೆಯಲ್ಲಿ ಆಟ, ಕತೆಗಳ ಮೂಲಕ ಹೇಗೆ ದ್ವೇಷಭಾವನೆಯನ್ನು ಗೊತ್ತೇ ಆಗದಂತೆ ಬಿತ್ತುತ್ತಾರೆ ಎಂಬುದನ್ನು ಹಿಂದೆ ಜನಸಂಘದಲ್ಲಿ ಇದ್ದು ಶಾಸಕರೂ ಆಗಿದ್ದ ಎ.ಕೆ.ಸುಬ್ಬಯ್ಯ ಅವರು ತಮ್ಮ ಆರ್.ಎಸ್.ಎಸ್ ಅಂತರಂಗ ಎಂಬ ಪುಸ್ತಕದಲ್ಲಿ ವಿವರಿಸಿದ್ದಾರೆ.(1988, ಸಂಗಾತಿ ಪ್ರಕಾಶನ)

“ಒಂದು ಉದಾಹರಣೆ ಮಾತ್ರ ಇಲ್ಲಿಡುತ್ತೇನೆ. ‘ಮೈ ಶಿವಾಜಿ ಹೂಂ’ ಎನ್ನುವ ಆಟವನ್ನು ಶಾಖೆಗಳಲ್ಲಿ ಆಡಿಸುತ್ತಾರೆ. ಮಕ್ಕಳೆಲ್ಲರೂ ‘ಮೈ ಶಿವಾಜಿ ಹೂಂ, ಮೈ ಶಿವಾಜಿ ಹೂಂ’ ಎಂದು ಓಡಾಡುತ್ತಾರೆ. ಮಧ್ಯದಲ್ಲಿ ಒಬ್ಬ ‘ಮೈ ಔರಂಗಜೇಬ್ ಹೂಂ’ ಎನ್ನುತ್ತಾನೆ. ಉಳಿದ ಮಕ್ಕಳು ಮಕ್ಕಳೆಲ್ಲರೂ ಹೋಗಿ ‘ಮೈ ಔರಂಗಜೇಬ್ ಹೂಂ’ ಎಂದವನ ಮೇಲೆ ಬೀಳುತ್ತಾರೆ – ಅವನನ್ನು ಥಳಿಸುತ್ತಾರೆ.” ಇಂತದ್ದೇ ಬ್ರೈನ್ ವಾಷಿಂಗ್ ಕೆಲಸವನ್ನು ನಾಜಿಗಳು ‘ಹಿಟ್ಲರ್ ಯೂತ್’ ಎಂಬ ಸಂಘಟನೆಯ ಹೆಸರಲ್ಲಿ ಮಾಡಿದ್ದರು.

ಹಿಂದೂ ಮಹಾಸಭಾದಲ್ಲಿ ಎರಡು-ಮೂರು ವರ್ಷ ಸಕ್ರಿಯರಾಗಿದ್ದ ಹೆಡಗೆವಾರ್ ಅವರು ಬ್ರಿಟಿಶ್ ಅನುಯಾಯಿ ವಿನಾಯಕ ದಾಮೋದರ ಸಾವರ್ಕರ್ ಅವರ ವಿಚಾರಗಳಿಂದಲೂ ಪ್ರಭಾವಿತರಾಗಿದ್ದರು. ಅಂಡಮಾನ್ ಜೈಲಿನಲ್ಲಿದ್ದು, ನಂತರ ಬ್ರಿಟಿಷರಿಗೆ ‘ಕ್ಷಮಾಪಣಾ’ ಪತ್ರ ಬರೆದಿದ್ದ ಸಾವರ್ಕರ್ ಅವರನ್ನು ಈಗ ವೀರ ಸಾವರ್ಕರ್ ಎಂದು ಹೊಗಳುತ್ತಿರುವ ಹಿಂದೂತ್ವದ ಬೆಂಬಲಿಗರು  ಗೋಹತ್ಯೆ ಬಗ್ಗೆ ಸಾವರ್ಕರರ ವಿಚಾರಗಳನ್ನು ತಿಳಿದರೆ  ಕಂಗಾಲಾಗಿಬಿಡಬಹುದು. ತಿನ್ನುವವರನ್ನು ಅವರ ಪಾಡಿಗೆ ಬಿಟ್ಟರೆ ಒಳ್ಳೆಯದು ಎಂಬುದು ಅವರ ನಿಲುವು.

ಆರಂಭದಲ್ಲಿ ಹೆಡಗೆವಾರ್ ಅವರು ಬ್ರಿಟಿಷರ ವಿರುದ್ಧ ಪ್ರತಿರೋಧದಲ್ಲಿ ಭಾಗವಹಿಸಿ ಒಂದು ವರ್ಷ ಜೈಲು ಅನುಭವಿಸಿದ್ದರೂ, ನಂತರ ಬ್ರಿಟಿಷರ ವಿರುದ್ಧ ಒಂದು ಗಟ್ಟಿಯಾದ ನಿಲುವು ತಳೆಯಲು ಅಸಮರ್ಥವಾಗಿದ್ದರು ಎಂಬುದು ವಾಸ್ತವ. ಇದೀಗ ಭಗತ್‍ಸಿಂಗ್ ಅವರಂತಹ ಕಮ್ಯುನಿಸ್ಟ್ ಒಲವುಳ್ಳ ಕ್ರಾಂತಿಕಾರಿಗಳನ್ನು ತಮ್ಮವರೆಂದು ಹೇಳಿಕೊಳ್ಳುತ್ತಿರುವವರು ಆಗ ಬ್ರಿಟಿಷರನ್ನು ಓಲೈಸುವ ಕಾರ್ಯದಲ್ಲಿ ತೊಡಗಿದ್ದರು ಎಂಬುದಕ್ಕೆ ಲಿಖಿತ ಸಾಕ್ಷ್ಯಾಧಾರಗಳಿದ್ದರೂ, ಒಂದು ಲೇಖನದ ಸೀಮಿತತೆಯಲ್ಲಿ ಅದನ್ನು ಪ್ರಸ್ತುತಪಡಿಸಲಾಗದು. ಆರೆಸ್ಸೆಸ್ಸನ್ನು ಕೇವಲ ಒಂದು ಬಾರಿ ಮಾತ್ರ ನಿಷೇಧಿಸಿದ್ದ ಬ್ರಿಟಿಷರು, ಈ ಸಂಘಟನೆ ತಮ್ಮ ಆಡಳಿತಕ್ಕೆ ‘ಉಪಯೋಗಿ’ ಎಂದು ಬರೆದ ಪತ್ರಗಳು ಕೂಡ ಲಭ್ಯವಿವೆ.

‘ಧರ್ಮ-ಸಂಸ್ಕೃತಿ ರಕ್ಷಣೆ ಮೂಲಕ ಸ್ವಾತಂತ್ರ್ಯ’ ಇದು ಅವರ ಘೋಷಣೆ! ಅರ್ಥವೇನು?

ನಂತರ ಬಂದ ‘ಗುರೂಜಿ’ ಅಥವಾ ಎಂ.ಎಸ್ ಗೋಲ್ವಾಲ್ಕರ್ ಎಂಬ ಸರಸಂಘಚಾಲಕರು ಸ್ವಾತಂತ್ರ್ಯ ಚಳವಳಿಯಿಂದ ಇನ್ನಷ್ಟು ದೂರ ಸರಿದರು. ಬ್ರಿಟಿಷರಿಗೆ ಪರವಾದ ನಿಲುವುಗಳನ್ನು ಕುರಿತು 1940ರಲ್ಲಿ ಎಲ್ಲಾ ಪ್ರಾದೇಶಿಕ ಸಂಘ ಚಾಲಕರಿಗೆ ಕಳುಹಿಸಲಾಗಿತ್ತು. ಗೋಲ್ವಾಲ್ಕರ್ ಅವರ ‘ಶ್ರೀ ಗುರೂಜಿ ದರ್ಶನ’ ಸಂಪುಟ 4ರಲ್ಲಿ (ಭಾರತೀಯ ವಿಚಾರ ಸಾಧನ ಪ್ರಕಾಶನ, 1974) ಇಂತಹ ಹಲವಾರು ವಿಚಾರಗಳನ್ನು ನೋಡಬಹುದು. (‘ವೇಬ್ಯಾಕ್ ಮೆಷಿನ್’ ಎಂಬ ನೆಟ್‍ನಲ್ಲಿ ಲಭ್ಯವಿರುವ ಪಿಡಿಎಫ್‍ನಲ್ಲಿ ಕೂಡಾ ಇಂತಹ ವಿಚಾರಗಳಿವೆ). ಶಂಶುಲ್ ಇಸ್ಲಾಂ ಅವರ ‘ರಿಲೀಜಿಯಸ್ ಡೈಮೆನ್ಷನ್ಸ್’ ಎಂಬ ಪುಸ್ತಕದಲ್ಲೂ ಬಹಳಷ್ಟು ವಿವರ –ದಾಖಲೆಗಳಿವೆ.

ಅದಿರಲಿ, ದೇಶಪ್ರೇಮಿ ಎಂದು ಕರೆದುಕೊಳ್ಳುತ್ತಿರುವ ಆರೆಸ್ಸೆಸ್ ಬ್ರಿಟಿಷ್ ಆಡಳಿತದಲ್ಲಿ ಒಂದು ಬಾರಿ ಮಾತ್ರ ನಿಷೇಧಕ್ಕೆ ಗುರಿಯಾಗಿತ್ತು. ಅದು 1947ರ ಮೊದಲ ಭಾಗದಲ್ಲಿ – ಅದೂ ಕೂಡ ಪಂಜಾಬ್ ಪ್ರಾಂತ್ಯದಲ್ಲಿ! ಕಾರಣ- ಸ್ವಾತಂತ್ರ್ಯ ಹೋರಾಟವಲ್ಲ – ಅವಿಭಜಿತ ಪಂಜಾಬಿನಲ್ಲಿ ಕೋಮುಗಲಭೆ ಹಬ್ಬಿಸಲು ಯತ್ನಿಸಿದ್ದು. ಆದರೆ, ಸ್ವಾತಂತ್ರ್ಯದ ಬಳಿಕ ಆರೆಸ್ಸೆಸ್ ಮೂರು ಭಾರಿ ನಿಷೇಧಿತವಾಯಿತು!. ಯಾವುದೇ ಜನಪರ ಹೋರಾಟದ ಕಾರಣಗಳಿಗಲ್ಲ!, ದೇಶದ ಶಾಂತಿಯನ್ನು ಕದಡಿದ ಕಾರಣಕ್ಕಾಗಿ! ‘ಕದಡಿದ ನೀರಲ್ಲಿ ಮೀನು ಹಿಡಿಯುವುದು’ ಎಂಬ ಮಾತು ಆರೆಸ್ಸೆಸ್‍ಗೆ ಚೆನ್ನಾಗಿ ಅನ್ವಯವಾಗುತ್ತದೆ.

ಮೊದಲ ಬಾರಿಗೆ 1948ರಲ್ಲಿಯೇ ಗೃಹ ಸಚಿವ, ಉಪಪ್ರಧಾನಿ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರು ಅದನ್ನು ನಿಷೇಧಿಸಿದ್ದರು-ಕಾರಣ? ಗಾಂಧೀಜಿ ಹತ್ಯೆಗೆ-ನಾಗಪುರ ಆದಿಯಾಗಿ ಎಲ್ಲೆಡೆ ಅದು ಸಿಹಿಹಂಚಿದ್ದು!. ಎರಡನೇ ಬಾರಿ 1975-77ರಲ್ಲಿ ತುರ್ತು ಪರಿಸ್ಥಿತಿ ವೇಳೆ. ಇದಕ್ಕೆ ಕಾರಣ -ಬಲಪಂಥೀಯರು ಬಿತ್ತುತ್ತಿದ್ದ ವಿಷಬೀಜವಾಗಿ ಇದ್ದರೆ (ಸಿಪಿಐ ಇದಕ್ಕಾಗಿ ತುರ್ತು ಪರಿಸ್ಥಿತಿಯನ್ನು ಬೆಂಬಲಿಸಿತ್ತು), ಇನ್ನೊಂದು ಕಡೆಯಲ್ಲಿ ಕಮ್ಯುನಿಸ್ಟರು ಪ್ರಬಲವಾಗಿ ಸಂಸತ್ತಿನಲ್ಲೂ ಗಣನೀಯ ಸ್ಥಾನ ಪಡೆದದ್ದು. ಮತ್ತೊಂದು ಕಡೆಯಲ್ಲಿ ನಕ್ಸಲೀಯರು ಕಲ್ಕತ್ತಾವನ್ನೇ ತುಂಬುವಂತಹ ಪ್ರಭಾವಿ ಮಟ್ಟಕ್ಕೆ ಬೆಳೆದದ್ದು. ಮೂವರು ತದ್ವಿರುದ್ಧ ವಿರೋಧಿಗಳನ್ನು ಒಂದೇ ಏಟಿಗೆ ಮಟ್ಟ ಹಾಕುವ ದುಸ್ಸಾಹಸಕ್ಕೆ ಇಂದಿರಾ ಗಾಂಧಿಯವರು ಕೈಹಾಕಿದ್ದರು.
ಮೂರನೇ ಬಾರಿ ಅದು ನಿಷೇಧಕ್ಕೆ ಒಳಗಾದದ್ದು, 1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿ ಮುಸ್ಲಿಮರ ವಿರುದ್ಧ ಶೂದ್ರರನ್ನು, ಅಷ್ಟೇ ಏಕೆ ಇವರಿಂದ ದಮನಿತರಾದ ದಲಿತರನ್ನು ಎತ್ತಿ ಕಟ್ಟಿ-‘ಹಿಂದೂ’ ಎಂಬುದಕ್ಕೆ ಒಂದು ವಂಚಕ ವ್ಯಾಖ್ಯಾನ ಬರೆದಾಗ!.

ಇದೀಗ ಹಿಜಾಬ್, ಹಲಾಲ್ ಇತ್ಯಾದಿ ವಿವಾದಗಳನ್ನು ಎಬ್ಬಿಸುವಾಗ ಇಂದೂ ಮುಸುಕಿನಲ್ಲಿ ಕುಳಿತ ಹಿಂದೂ-ರಾಜಪೂತ ಮಹಿಳೆಯರು ನೆನಪಾಗದೆ ಮುಸ್ಲಿಂ ಮಹಿಳೆಯರ ಹಿಜಾಬ್, ಬುರ್ಖಾ ನೆನಪಾಗುತ್ತದೆ. ದಲಿತರಿಗೆ ಸತ್ತ ದನವನ್ನು ಕೊಂಡೊಯ್ದು ತಿನ್ನಿ ಎಂಬ “ಉದಾರತೆ” ತೋರಿಸಿದ ಈ ದನ ತಿನ್ನುತ್ತಿದ್ದ ಬ್ರಾಹ್ಮಣ್ಯಕ್ಕೆ ಇಂದು ದನ ತಿನ್ನುವ ಮುಸ್ಲಿಮರು, ಕ್ರೈಸ್ತರು, ದಲಿತರು ಪಾಪಿಗಳಂತೆ ಕಾಣುತ್ತಿದ್ದಾರೆ. ಮೂರು ಪರ್ಸೆಂಟ್ ಗಿರಾಕಿಗಳ ನಲ್ವತ್ತು ಪರ್ಸೆಂಟ್ ನ್ಯಾಯ ಇದು!

  • ನಿಖಿಲ್ ಕೋಲ್ಪೆ, ಹಿರಿಯ ಪತ್ರಕರ್ತರು
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...