Homeಅಂಕಣಗಳುಪುಟಕ್ಕಿಟ್ಟ ಪುಟಗಳುನಿರೀಶ್ವರವಾದದ ತಿಳಿವನ್ನು ಪಸರಿಸುತ್ತಿರುವ ’ದೇವರು ಎಂಬುದೇಕಿಲ್ಲ?’ ಪುಸ್ತಕ

ನಿರೀಶ್ವರವಾದದ ತಿಳಿವನ್ನು ಪಸರಿಸುತ್ತಿರುವ ’ದೇವರು ಎಂಬುದೇಕಿಲ್ಲ?’ ಪುಸ್ತಕ

- Advertisement -
- Advertisement -

ಸ್ಟೀಫನ್ ಹಾಕಿಂಗ್ ಹೇಳುವಂತೆ, “ದೇವರು ಇಲ್ಲ. ಯಾರೊಬ್ಬರೂ ವಿಶ್ವವನ್ನು ಸೃಷ್ಟಿಸಿಲ್ಲ. ಯಾರೊಬ್ಬರೂ ನಮ್ಮ ಹಣೆಬರಹವನ್ನು ನಿರ್ಧರಿಸಿಲ್ಲ.”

ಭಾರತವನ್ನೂ ಒಳಗೊಂಡಂತೆ ವಿಶ್ವಕ್ಕೆ ನಿರೀಶ್ವರವಾದವೇನೂ ಹೊಸತಲ್ಲ. ಆದರೆ, ನಾಸ್ತಿಕರು ಅಥವಾ ನಿರೀಶ್ವರವಾದಿಗಳೆಂದರೆ ಧಾರ್ಮಿಕರಿಗೆ, ಪುರೋಹಿತರಿಗೆ, ಮೌಲ್ವಿಗಳಿಗೆ, ಪಾದ್ರಿಗಳಿಗೆ ಅತ್ಯಂತ ಭಯ. ಅವರು ಯಾವುದರ ಆಧಾರದಿಂದ ಜನರ ಮೇಲೆ ಪ್ರಭುತ್ವ ಸಾಧಿಸಿರುತ್ತಾರೋ ಅದನ್ನೇ ಅಲ್ಲಗಳೆಯುವ ಮಂದಿ.

ದೇವರು ಸರ್ವಜ್ಞ, ಸರ್ವಶಕ್ತ ಮತ್ತು ಸರ್ವಾಂತರ್ಯಾಮಿ. ದೇವರಿಗೆ ಅಸಾಧ್ಯವಾದುದು ಯಾವುದೂ ಇಲ್ಲ. ಲೋಕದಲ್ಲಿ ಪ್ರಭುತ್ವದ ವಿಷಯದಲ್ಲಿ ದೇವರ ಸ್ಥಾನ ಅತ್ಯುನ್ನತ ಮತ್ತು ಅದ್ವಿತೀಯ. ಸರ್ವಶ್ರೇಷ್ಟವೆನ್ನುವ ಅವನ ಸ್ವಾಮಿತ್ವವನ್ನೇ ಧಿಕ್ಕರಿಸುತ್ತಿರುವವರೆಂದರೆ, ಅವರು ಇನ್ನು ಯಾವ ಪುರೋಹಿತ, ಮೌಲ್ವಿ ಮತ್ತು ಪಾದ್ರಿಯ ಯಜಮಾನಿಕೆಯನ್ನು ಒಪ್ಪುತ್ತಾರೆ?

ಹಾಗಾಗಿ ಧಾರ್ಮಿಕರಿಗೆ ಅಥವಾ ಅದರ ಲಾಂಛನದಲ್ಲಿ ಸರ್ವ ವ್ಯವಹಾರಗಳಲ್ಲಿ ನಿರತರಾಗಿರುವವರಿಗೆ, ಸಮಾಜದಲ್ಲಿ ಸ್ಥಾನಮಾನಾದಿಗಳಿಂದ ಮೆರೆಯುತ್ತಿರುವವರಿಗೆ ನಿರೀಶ್ವರವಾದಿಗಳು ಅಥವಾ ನಾಸ್ತಿಕರೆಂದೆನಿಸಿಕೊಂಡವರು ಅತ್ಯುಗ್ರಗಾಮಿಗಳಾಗಿ ಕಾಣುತ್ತಾರೆ.

ದೇವರ ಭಯವನ್ನೇ ಬಿಟ್ಟವನಿಗೆ ಇನ್ನಾವುದರ ಭಯ? ಸ್ವರ್ಗದ ಆಸೆಯಿಲ್ಲ, ನರಕದ ಅಂಜಿಕೆಯಿಲ್ಲ, ದೇವರ ನಂಬುಗೆ ಇಲ್ಲ; ಈ ಮನುಷ್ಯ ತನ್ನ ದೇವರು ಇಲ್ಲ ಹೇಗೆ ಎಂಬ ವಿಚಾರವನ್ನು ಮುಗ್ಧರಿಗೆ ಮುಟ್ಟಿಸುತ್ತಾನೆ. ಮೂರ್ಖರಿಗೆ ಎಚ್ಚರಿಸುತ್ತಾನೆ. ಈ ದೇವರ ಹೆಸರಿನಲ್ಲಿ ತಾವೆಷ್ಟು ಮೋಸ ಹೋಗುತ್ತಿದ್ದೇವೆ ಎಂದು ಅವರಿಗೆ ಅರಿವಾದರೆ ಧಾರ್ಮಿಕ ಡಂಭಾಚಾರಿಗಳ ವಿರುದ್ಧ ಸೆಟೆದು ನಿಲ್ಲುತ್ತಾರೆ. ಅವರ ಸುಳ್ಳುಕಂತೆಗಳನ್ನು ಸಾರಾಸಗಟಾಗಿ ಒಗೆದುಬಿಡುತ್ತಾರೆ. ದೇವರ ಹೆಸರಿನಲ್ಲಿ ನಿರ್ಮಾಣವಾಗಿರುವ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತದೆ. ಅವರ ಧಾರ್ಮಿಕ ವ್ಯವಸ್ಥೆಯೇ ದೇವರ ತಳಹದಿಯ ಮೇಲೆ ನಿಂತಿರುವಾಗ ದೇವರೇ ಇಲ್ಲವೆಂಬುದು ಮನವರಿಕೆಯಾಗಿಬಿಟ್ಟರೆ, ಎಲ್ಲವೂ ಪತನಹೊಂದಿಬಿಡುತ್ತದೆ.

ಈಗ ಹಿಂದೂ ಪುರೋಹಿತರು, ಜ್ಯೋತಿಷಿಗಳು, ಸುಬ್ರಹ್ಮಣ್ಯ ಪೂಜೆ, ಗಣ ಹೋಮ, ನಾಗ ಶಾಂತಿ, ನವಗ್ರಹ ಶಾಂತಿಗಳೆಂಬುದೆಲ್ಲಾ ಮಾಡುವಾಗ, ಆ ಮೂಲ ಸಾಮಗ್ರಿಯಾದ ದೇವರೆಂಬ ಪರಿಕಲ್ಪನೆಯು ನಿರಾಕರಣೆಗೆ ಒಳಗಾಗಿಬಿಟ್ಟರೆ, ಇಷ್ಟು ದಿನ ಯಾವುದನ್ನು ನಿಜವೆಂದು ನಂಬಿಸಿಕೊಂಡು ಬಂದಿದ್ದರೋ ಅವೆಲ್ಲಾ ಹುಸಿ ಎಂದೂ, ಅದನ್ನು ನಂಬಿದ್ದವನೂ, ಆಚರಿಸಿದ್ದವನು ಮೂರ್ಖನೆಂದೂ, ಅವನ್ನು ಮಾಡಿಸಿದ್ದೆಲ್ಲವೂ ಶೋಷಣೆಯ ಒಂದು ಭಾಗವೆಂದೂ ಜ್ಞಾನೋದಯವಾಗಿಬಿಟ್ಟರೆ ಗತಿಯೇನು?

ಇನ್ನು ಕ್ರೈಸ್ತರಲ್ಲಿ ಕ್ರಿಸ್ತನೇ ತಾನು ದೇವರ ಮಗನೆಂದು ಹೇಳಿದ್ದಾನೆ. ದೇವರನ್ನು ತಂದೆಯೆಂದು ಹೇಳಿದ್ದಾನೆ. ಮನುಷ್ಯರ ಬಗ್ಗೆ ದೇವರ ಮುಂದಿನ ನಿರ್ಣಾಯಕ ದಿನದ ಬಗ್ಗೆ ಮಾತಾಡುತ್ತಾನೆ. ಆತ ಹುಟ್ಟಿದ್ದೂ ದೇವದೂತನ ಸಂದೇಶ ತಲುಪಿದ ಮೇಲೆ. ಮರಿಯಾ ಎಂಬ ಪವಿತ್ರ ಮತ್ತು ಅಕಳಂಕಿತ ಹೆಣ್ಣು ಸಂಭೋಗ ಎಂಬುವ ಪಾಪದ ಕೆಲಸವಿಲ್ಲದೆಯೇ ದೇವರ ವಾಕ್ಯದಿಂದಲೇ ಗರ್ಭ ಧರಿಸಿರುತ್ತಾಳೆ. ಮನುಷ್ಯ ದೇಹವನ್ನು ಹೊತ್ತ ಯೇಸು ಸತ್ತ ಮೇಲೆ ದೇವರ ಮಗನೂ ಆಗಿರುವ ಅವನು ಪುನರುತ್ಥಾನಗೊಳ್ಳುತ್ತಾನೆ. ಹೀಗೆಲ್ಲಾ ಇರುವಾಗ ದೇವರು ಇಲ್ಲವೆಂದು ಸಾಬೀತಾಗಿಬಿಟ್ಟರೆ ಪವಿತ್ರ ಮಾತೆ ಮರಿಯಾಳ ಚಾರಿತ್ರ್ಯದ ಬಗ್ಗೆ ಪ್ರಶ್ನೆ ಏಳುತ್ತದೆ. ಯೇಸುಕ್ರಿಸ್ತನು ಮಾತು ಮಾತಿಗೂ ತಂದೆ ತಂದೆ ಎಂದು ಹೇಳಿದ ದೇವರು ಇಲ್ಲವೆಂದಾಗ, ಆತನ ಇತರ ಮಾತುಗಳೆಲ್ಲಾ ಶುದ್ಧ ಬಕವಾಸ್ ಎಂದು ತೋರಿಬಿಡಬಹುದು. ಇಷ್ಟು ವರ್ಷಗಳು ಅತ್ಯಂತ ದೊಡ್ಡ ಸಮೂಹವೊಂದು ಯಾವುದೋ ಸುಳ್ಳನ್ನು ಪ್ರತಿಪಾದಿಸಿಕೊಂಡು ಬಂದಿದ್ದರು ಎಂದು ಅನ್ನಿಸಿಬಿಡಬಹುದು. ಆಗ ಕ್ರೈಸ್ತ ಧರ್ಮವೇ ಪತನಹೊಂದಿಬಿಡುತ್ತದೆ.

ಇನ್ನು ಇಸ್ಲಾಂನಲ್ಲಿ ರೂಪರಹಿತ, ನಿರಾಕಾರನಾದ ಅಲ್ಲಾಹ್ ಒಬ್ಬನೇ ದೇವರು. ಅವನಿಂದಲೇ ಅವತೀರ್ಣವಾದಂತಹ ಧರ್ಮಗ್ರಂಥ ಕುರಾನ್. ಅಲ್ಲಾಹನ ಬಿಟ್ಟರೆ ದೇವರಿಲ್ಲ. ದೇವರ ವಾಕ್ಯವನ್ನು ಸ್ವೀಕರಿಸಿದ ಮಹಮದ್ ಪೈಗಂಬರ್ ಕೊನೆಯ ಪ್ರವಾದಿ ಎಂತೆಲ್ಲಾ ಇದೆ. ಹಾಗಿರುವಾಗ ಒಬ್ಬ ಮುಸ್ಲಿಂ ದೇವರನ್ನು ನಿರಾಕರಿಸಿದರೆ ಅವನು ಮುಸ್ಲಿಮರ ಮೂಲಭೂತ ಶ್ರದ್ಧೆಯನ್ನೇ ಧಿಕ್ಕರಿಸಿದಂತಾಗುತ್ತದೆ. ದೇವರಿಗೆ ಪ್ರಾರ್ಥನೆ ಸಲ್ಲಿಸಬೇಕಾದ ಬಗೆಯಾದ ನಮಾಜ಼್ ಎಂಬ ಪ್ರಾರ್ಥನಾ ವಿಧಿಯ ಬಗ್ಗೆ ನಿಷ್ಕ್ರಿಯನಾಗಬೇಕಾಗುತ್ತದೆ. ಜೊತೆಗೆ ಮಹಮದರಿಗೆ ಅವತೀರ್ಣವಾದ ದೇವರ ವಾಕ್ಯವನ್ನು ನಿರಾಕರಿಸಬೇಕಾಗುತ್ತದೆ. ಅಂದರೆ ಕುರಾನ್ ಅವನಿಗೆ ಪವಿತ್ರವಾಗಿ ಉಳಿಯುವುದಿಲ್ಲ.

ದೇವರ ಅಸ್ತಿತ್ವವನ್ನು ನಿರಾಕರಿಸಿದಂತಹ ಬೌದ್ಧ ಮತ್ತು ಜೈನ ಧರ್ಮಗಳನ್ನು ಕಂಡರೆ ವೈದಿಕರಿಗೆ ಅದಕ್ಕೇ ಅಷ್ಟೊಂದು ಸಿಟ್ಟು. ಶಂಕರಾಚಾರ್ಯ ಚಾರ್ವಾಕವೇ ಮೊದಲಾದ ಬೌದ್ಧ ಮತ್ತು ಜೈನ ಧರ್ಮಗಳನ್ನು ಖಂಡಾತುಂಡವಾಗಿ ನಿರಾಕರಿಸುತ್ತಾನೆ. ಅವುಗಳನ್ನು ಧಿಕ್ಕರಿಸುತ್ತಾನೆ. ಅವನದೇ ನೇತೃತ್ವದಲ್ಲಿ ನಾಗಾರ್ಜುನದಲ್ಲಿ ಬೌದ್ಧರ ಮಾರಣ ಹೋಮಕ್ಕೆ ಕಾರಣನಾಗುತ್ತಾನೆ. ಬೌದ್ಧರ ಅವೈದಿಕ ಮಾತ್ರವಲ್ಲ ನಿರೀಶ್ವರವಾದದ ವಿಚಾರಧಾರೆ ಅತ್ಯಂತ ವೈಜ್ಞಾನಿಕವಾಗಿಯೂ ಮತ್ತು ವೈಚಾರಿಕವಾಗಿಯೂ ಮುಂದಿರುವಾಗ, ತನ್ನ ಅಹಂ ಬ್ರಹ್ಮಾಸ್ಮಿ ಎಂಬ ವಿಚಾರವೂ, ಎರಡಿಲ್ಲ ಎಂಬ ವಿಚಾರವಾದ ಅದ್ವೈತವೂ, ತಾನು ರಚಿಸಿರುವ ದೇವಾನುದೇವತೆಗಳ ಮೇಲಿನ ಸ್ತುತಿ, ಶ್ಲೋಕಗಳೆಲ್ಲವೂ ಸುಳ್ಳಾಗಿಬಿಡುತ್ತದೆ. ಹಾಗಾಗಿಯೇ ಶಂಕರನಿಗೂ ಬೌದ್ಧರನ್ನು, ಜೈನರನ್ನು ಮತ್ತು ಇತರ ಅವೈದಿಕರನ್ನು ಸಹಿಸಲು ಸಾಧ್ಯವಾಗಲಿಲ್ಲ.

ಏನೇ ಆಗಲಿ ಆಸ್ತಿಕರೇ ಈ ಜಗತ್ತಿನಲ್ಲಿ ಬಹುಜನ. ಜನಾಭಿಪ್ರಾಯಕ್ಕೆ ಮನ್ನಣೆ ಕೊಟ್ಟರೆ ಆಸ್ತಿಕರೇ ಗೆಲ್ಲುವರು. ನಾಸ್ತಿಕರು ಅಲ್ಪ ಸಂಖ್ಯಾತರು. ಆದರೆ, ಅವರ ವಿಚಾರಧಾರೆಗಳು ಬಹಳ ತೀಕ್ಷ್ಣ ಮತ್ತು ಕಠೋರ. ಬಹುಸಂಖ್ಯಾತರು ಯಾವುದನ್ನು ಗೌರವಿಸುವರೋ ಅದರ ಮೇಲೆ ಮಾರಣಾಂತಕ ಹಲ್ಲೆ ಮಾಡುವ ಅತ್ಯುಗ್ರವಾದಿಗಳು.

ಜೈನ ಧರ್ಮವು ತನ್ನ ಅಸ್ತಿತ್ವವನ್ನು ಉಳಿಸಿಕೊಳ್ಳುವುದಕ್ಕಾಗಿ ಈ ಬಹುಜನರೊಂದಿಗೆ ಮೆಲ್ಲನೆ ರಾಜಿಯಾಗಿಬಿಟ್ಟಿತು. ದಿಗಂಬರರಾಗಲಿ, ಶ್ವೇತಾಂಬರರಾಗಲಿ ಲಕ್ಷ್ಮಿ ಮಾತಾ, ಗಣೇಶ್ ಜೀ ಇತ್ಯಾದಿ ದೇವ ದೇವಿಯರನ್ನು ಮೆಲ್ಲನೆ ಒಳಕ್ಕೆ ಬಿಟ್ಟುಕೊಂಡರು. ಅವರೂ ಅರಿಹಂತರೊಂದಿಗೆ, ತೀರ್ಥಂಕರರೊಂದಿಗೆ ವಿರಾಜಮಾನವಾಗಿಬಿಟ್ಟರು. ಮಹಾವೀರನ ಮೂಲ ತತ್ವವೇ ಈ ಮೂಲಕ ಮಸುಕಾಗಿಬಿಟ್ಟಿತು. ಅವರ ’ಬಾಳು ಬಾಳಗೊಡು’ ಎನ್ನುವಂತಹ ಪರಮ ಅಹಿಂಸಾ ತತ್ವವನ್ನು ಸಾಂಕೇತಿಕವಾಗಿ ಆಚರಿಸುವುದನ್ನು ಬಿಟ್ಟರೆ ಇನ್ನು ನಿಜವಾದ ಮಹಾವೀರ ತತ್ವಗಳನ್ನು ಹೇಗೆ ಅನುಷ್ಟಾನಕ್ಕೆ ತರುತ್ತಿದ್ದಾರೋ, ಹೊರಗಣ್ಣಿಗಂತೂ ಏನೂ ಕಾಣುತ್ತಿಲ್ಲ.

ಅದೇನೇ ಇರಲಿ, ನಾಸ್ತಿಕವಾದಿಗಳ ಬಗ್ಗೆ ಇರುವ ಭಯ ಇಂದು ನಿನ್ನೆಯದಲ್ಲ. ಶತಶತಮಾನಗಳಿಂದ ಇವರ ಬಗ್ಗೆ ಹೆದರಿರುವ ಆಸ್ತಿಕವೃಂದವು ದೇವರ ಮೇಲಿನ ಹೆಚ್ಚಿನ ಭಯವನ್ನು ಇವರ ಬಗ್ಗೆ ಹೊಂದಿದ್ದಾರೆ. ಆದರೆ ಅವರು ತಮ್ಮ ದಿಗಿಲನ್ನು ಹೆದರಿಕೆ ಎಂದು ಒಪ್ಪಿಕೊಳ್ಳದೇ ಬೇರೊಂದು ರೀತಿಯಲ್ಲಿ ಸಾಧಿಸಹೋಗುತ್ತಾರೆ. ಅದಕ್ಕೆ ಶ್ರದ್ಧೆ, ನಂಬಿಕೆಗಳ ಧಕ್ಕೆ, ಧಾರ್ಮಿಕ ಉಲ್ಲಂಘನೆ ಇತ್ಯಾದಿಗಳಿಂದ ಕರೆಯುತ್ತಾ ಅವರನ್ನು ನಾಶಪಡಿಸಲು ನೋಡುತ್ತಾರೆ.

ಕ್ರೈಸ್ತರು, ಮುಸಲ್ಮಾನರು, ವೈದಿಕರು; ಹೀಗೆ ಪುರೋಹಿತಶಾಹಿ ಗಟ್ಟಿಯಾಗಿರುವ ಯಾವ ಸಮುದಾಯವೂ ಹಿಂದೆ ಬಿದ್ದಿಲ್ಲ.

ಕರ್ನಾಟಕದಲ್ಲಿ ಬಸವಣ್ಣನವರೂ ಕೂಡಾ ಅನ್ವೇಷಣೆ, ಆತ್ಮಾವಲೋಕನ ಪ್ರಕ್ರಿಯೆಗಳಿಗೆ ಇಂಬುಕೊಟ್ಟವರು. ನನ್ನ ಗ್ರಹಿಕೆಯಲ್ಲಿ ನಿರೀಶ್ವರ ವಸ್ತುಸ್ಥಿತಿಯನ್ನು ಅವರು ಗ್ರಹಿಸಿದರೂ, ಸಾವಿರಾರು ವರ್ಷಗಳಿಂದ ದೇವರನ್ನು ಆಧರಿಸಿ ಬದುಕನ್ನು ನಡೆಸುತ್ತಿರುವ ಜನರಿಂದ ದೇವರನ್ನು ಕಿತ್ತೆಸೆಯುವ ಬದಲು ಪರ್ಯಾಯವಾಗಿ ದೇವರನ್ನು ತಾವೇ ಕಂಡುಕೊಳ್ಳುವ ವಿಧಾನವನ್ನು ಕಲಿಸಿದರು. ಬೆಟ್ಟದ ಲಿಂಗದಿಂದ ಅಂಗೈ ಮೇಲಿನ ಇಷ್ಟಲಿಂಗಕ್ಕೆ ದೇವರು ರೂಪಾಂತರಗೊಂಡಿತು. ಕುರುಹಿನ ಲಿಂಗದಿಂದ ಅರುಹಿನ ಲಿಂಗದ ಪ್ರಕ್ರಿಯೆಯಲ್ಲಿ ಸಾಗುತ್ತಿದ್ದ ವಚನ ಚಳವಳಿ ಮತ್ತು ಶರಣ ಸಂಸ್ಕೃತಿ ಕಲ್ಯಾಣ ಕ್ರಾಂತಿಯಿಂದಾಗಿ ಬಸವಣ್ಣನವರ ಆಶಯದ ಸಮಾಜೋಧಾರ್ಮಿಕ ಆಂದೋಲನ ಪೂರ್ತಿಗೊಳ್ಳಲಿಲ್ಲ.

ದೈವಿಕ ಶ್ರದ್ಧೆ ಮತ್ತು ಸಾಂಪ್ರದಾಯಿಕ ಆಚರಣೆಗಳನ್ನು ಬಸವಣ್ಣ ಅಂದು ಪ್ರಶ್ನಿಸಿ, ಸವಾಲೆಸೆದು ಪರ್ಯಾಯವಾಗಿ ಚಳವಳಿ ಕಟ್ಟದೇ ಇದ್ದಿದ್ದರೆ ಅವರು ನಮಗಿಂದು ದಕ್ಕುತ್ತಲೇ ಇರಲಿಲ್ಲ.
ಇರಲಿ, ಧರ್ಮ ದಾರಿಯೇ ಹೊರತು ಗುರಿಯಲ್ಲ ಎಂಬುದು ಧರ್ಮಾಂಧರಿಗೆ ತಿಳಿಯುವುದೇ ಇಲ್ಲ. ಗುರಿಯನ್ನು ಬಿಟ್ಟು ದಾರಿಗಾಗಿಯೇ ಹೊಡೆದಾಡಿಕೊಂಡಿರುವ ಅವರದ್ದು ಕಠೋರ ಚೌಕಟ್ಟಿನ ಮನಸ್ಥಿತಿ. ನಿಜ ಹೇಳಬೇಕೆಂದರೆ ಅವರ ಹೋರಾಟಕ್ಕೆ ಕಾರಣ ಧರ್ಮವೆಂಬುದು ಅಲ್ಲವೇ ಅಲ್ಲ. ಅದೊಂದು ಬ್ಯಾನರ್ ಅಷ್ಟೇ. ಕೋಮುವಾದಿಗಳಿಗೆ ಯಾವುದೇ ಧರ್ಮಗಳಿಲ್ಲ. ಇಂತಹ ಮನಸ್ಥಿತಿಗಳೊಡನೆ ಹೋರಾಟವನ್ನು ಮಾಡಿಕೊಂಡು ಬಂದಿರುವ ಮಾನವತಾವಾದಿಗಳು, ವಿಚಾರವಂತರು, ಮುಕ್ತ ಚಿಂತಕರು ನಾನಾ ರೀತಿಯಲ್ಲಿ ತೊಂದರೆಗಳಿಗೆ ಒಳಗಾಗಿದ್ದಾರೆ ಮತ್ತು ಜೀವವನ್ನೂ ತೆತ್ತಿದ್ದಾರೆ.

ಇಂತಹ ಇಪ್ಪತ್ತು ನಿರೀಶ್ವರವಾದದ ಸಾಮಾನ್ಯ ಚರ್ಚೆಗಳನ್ನು ’ವೈ ದೇರ್ ಈಸ್ ನೋ ಗಾಡ್ ಎಂಬ ಕೃತಿಯಲ್ಲಿ ಅರ್ಮಿನ್ ನವಾಬಿ ಬೆಳಕಿಗೆ ತರುತ್ತಾರೆ.

ವಿಜ್ಞಾನವೆನ್ನುವುದು ನಮ್ಮ ಜೀವನದ ಮತ್ತು ವಿಶ್ವದ ಕ್ರಮದ ಸಂಕೀರ್ಣತೆಯನ್ನು ವಿವರಿಸಲು ಸೋಲುವುದು. ಆದ್ದರಿಂದಲೇ ದೇವರೆಂಬುವನು ಈ ವಿಶ್ವವನ್ನು ಸೃಷ್ಟಿಸಿದ್ದಾನೆ ಎನ್ನುವುದು ಎಷ್ಟರಮಟ್ಟಿಗೆ ಹಾಸ್ಯಾಸ್ಪದ ಎಂದು ಅರ್ಮಿನ್ ನವಾಬಿ ವಿವರಿಸುತ್ತಾರೆ. ಅವರನ್ನು ಮಾಜೀ ಮುಸಲ್ಮಾನ ಎಂದು ಕರೆಯಲಾಗುತ್ತದೆ. ಇರಾನಿನವರಾಗಿದ್ದು ನಾಸ್ತಿಕನಾಗಿ ಏಥಿಸ್ಟ್ ರಿಪಬ್ಲಿಕ್ ಸ್ಥಾಪಿಸುವುದು ಸುಲಭದ ಮಾತಲ್ಲ. ಇಸ್ಲಾಮಿಕ್ ರಿಪಬ್ಲಿಕ್ ಆಫ್ ಇರಾನ್ ದೇಶದಲ್ಲಿ ಹುಟ್ಟಿ, ಸಾಂಪ್ರದಾಯಕ ಮುಸ್ಲಿಂ ಕುಟುಂಬದಲ್ಲಿ ಬೆಳೆದವರು. ದೇವರ ಅನುಗ್ರಹಕ್ಕೆಂದೇ ಹೆಚ್ಚೂ ಕಡಿಮೆ ತಮ್ಮ ಜೀವವನ್ನೇ ಪಣಕ್ಕಿಟ್ಟು ದೈವಾನ್ವೇಷಣೆಯನ್ನು ಮಾಡಿ, ಮಹಾನ್ ಧಾರ್ಮಿಕ ಶ್ರದ್ಧೆಯುಳ್ಳವನಾಗಿದ್ದು ನಂತರ ಅವರ ನಿರಂತರ ಅನ್ವೇಷಣೆ ಇಸ್ಲಾಂ ಧರ್ಮವನ್ನು ತೊರೆಯುವಂತೆ ಮಾಡಿತು ಮತ್ತು ನಾಸ್ತಿಕನಾಗಿ ಬದಲಾಗುವಂತಾಯಿತು.

ಇದು ನಿಜ. ದೇವರ ಭಕ್ತರಾಗಿ ನಂಬಿಕೆ ಶ್ರದ್ಧೆಗಳಿಂದ ಆರಾಧಿಸಿಕೊಂಡುಬಿಟ್ಟಿದ್ದರೆ ಅವರಿಗೆ ದೇವರ ಬಗ್ಗೆ ಯಾವ ಗೊಂದಲವೂ ಇರುವುದಿಲ್ಲ. ಯಾವಾಗ ದೇವರನ್ನು ಭಕ್ತಿ ಶ್ರದ್ಧೆ ಇದ್ದರೂ, ವೈಜ್ಞಾನಿಕವಾಗಿ, ವೈಚಾರಿಕವಾಗಿ ಮತ್ತು ತಮ್ಮ ಜೀವನದ ಅನುಭವಗಳನ್ನು ಒರೆಗೆ ಹಚ್ಚಿ ನೋಡುವ ಮಾನದಂಡಗಳ ಆಧಾರವಾಗಿ ನೋಡಲು ಹೋದರೆ ಆತ ನಾಸ್ತಿಕನಾಗುವುದು ಸಹಜವೆನಿಸುತ್ತದೆ. ಏಕೆಂದರೆ ದೇವರೆಂಬುದೇ ಒಂದು ಪರಿಕಲ್ಪನೆ. ಅದು ಮನುಷ್ಯನ ಪರಿಕಲ್ಪನೆಯಲ್ಲಿ ಇರುವುದೇ ಹೊರತು, ಭೌತಿಕ ಅಸ್ತಿತ್ವದಲ್ಲಿ ಇಲ್ಲ. ಬೈಬಲ್ಲಿನಲ್ಲಿ ಹೇಳುವಂತೆ ದೇವರು ತನ್ನ ಪ್ರತಿರೂಪವಾಗಿ ಮನುಷ್ಯನನ್ನು ಸೃಷ್ಟಿಸಿದ ಎಂದು. ಆದರೆ ವಾಸ್ತವವಾಗಿ ಮನುಷ್ಯ ತನ್ನ ಪ್ರತಿರೂಪವಾಗಿ ದೇವರನ್ನು ಸೃಷ್ಟಿಸಿದ. ದೇವರು ಎಂಬುದು ಮಾನುಷ ಸೃಷ್ಟಿ. ಈ ಜಗತ್ತು ಆ ದೇವರ ಸೃಷ್ಟಿ. ಸರಿ ಬಿಡಿ, ಈಗ ಅರ್ಮಿನ್ ನವಾಬಿಯವರ ವಿಷಯಕ್ಕೆ ಬಂದರೆ, ದೇವರಿಲ್ಲ ಎಂದು ತಾವು ಕಂಡುಕೊಂಡ ಸತ್ಯವನ್ನು ತಮ್ಮಂತೆಯೇ ಇರುವ ಇತರರಿಗೆ ವಿಷಯವನ್ನು ಹಂಚಿಕೊಳ್ಳಲು ಸರ್ವಥಾ ಹೆಣಗುತ್ತಿದ್ದಾರೆ. ಶೈಕ್ಷಣಿಕ ಚರ್ಚೆಗಳಿಂದ ನಿರೀಶ್ವರವಾದದ ಅರಿವನ್ನು ಹಂಚಿಕೊಳ್ಳುತ್ತಿದ್ದಾರೆ.


ಇದನ್ನೂ ಓದಿ: ಲಿಪಿ, ಲಿಪಿಕಾರನ ಇತಿಹಾಸ ಹಿಡಿದಿಡುವ ಷ. ಶೆಟ್ಟರ್ ಅವರ ’ಹಳಗನ್ನಡ’

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಗೆ ಸಂಸದ ಸಂಗಣ್ಣ ಕರಡಿ ರಾಜೀನಾಮೆ: ಕಾಂಗ್ರೆಸ್ ಸೇರ್ಪಡೆ ಸಾಧ್ಯತೆ

0
ಲೋಕಸಭೆ ಚುನಾವಣೆಯಲ್ಲಿ ಕೊಪ್ಪಳ ಕ್ಷೇತ್ರದ ಟಿಕೆಟ್‌ ಕೈತಪ್ಪಿದ ಹಿನ್ನೆಲೆ ಬಿಜೆಪಿ ವಿರುದ್ದ ಮುನಿಸಿಕೊಂಡಿದ್ದ ಹಾಲಿ ಸಂಸದ ಸಂಗಣ್ಣ ಕರಡಿ ಅವರು ತಮ್ಮ ಸಂಸದ ಸ್ಥಾನಕ್ಕೆ ಮತ್ತು ಬಿಜೆಪಿ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ...