ದಕ್ಷಿಣ ಭಾರತದ ರಾಜ್ಯಗಳಲ್ಲಿ ಹಿಂದಿಯನ್ನು ಉತ್ತೇಜಿಸಲು ‘ದಕ್ಷಿಣ ಭಾರತ ಹಿಂದಿ ಪ್ರಚಾರ ಸಭಾ’ ಒಂದು ಶತಮಾನಕ್ಕೂ ಹೆಚ್ಚು ಕಾಲದಿಂದ ಅಸ್ತಿತ್ವದಲ್ಲಿದ್ದರೂ, ಉತ್ತರ ಭಾರತದಲ್ಲಿ ‘ಉತ್ತರ ಭಾರತ ತಮಿಳು ಪ್ರಚಾರ ಸಭಾ’ ಏಕೆ ಸ್ಥಾಪಿಸಲಿಲ್ಲ? ಎಂದು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಕುರಿತು ಪೋಸ್ಟ್ ಹಾಕಿರುವ ಸ್ಟಾಲಿನ್ “ದಕ್ಷಿಣ ಭಾರತೀಯರು ಹಿಂದಿ ಕಲಿಯುವಂತೆ ಮಾಡಲು ದಕ್ಷಿಣ ಭಾರತ ಹಿಂದಿ ಪ್ರಚಾರ ಸಭೆಯನ್ನು ಸ್ಥಾಪಿಸಿ ಒಂದು ಶತಮಾನ ಕಳೆದಿದೆ. ಈ ಅವಧಿಯಲ್ಲಿ ಉತ್ತರ ಭಾರತದಲ್ಲಿ ಎಷ್ಟು ಉತ್ತರ ಭಾರತ ತಮಿಳು ಪ್ರಚಾರ ಸಭೆಗಳನ್ನು ಸ್ಥಾಪಿಸಲಾಗಿದೆ? ಸತ್ಯವೆಂದರೆ, ಉತ್ತರ ಭಾರತೀಯರು ತಮಿಳು ಅಥವಾ ಯಾವುದೇ ದಕ್ಷಿಣ ಭಾರತೀಯ ಭಾಷೆಯನ್ನು ‘ಸಂರಕ್ಷಿಸುವ ಸಲುವಾಗಿ ಕಲಿಯಬೇಕೆಂದು ನಾವು ಎಂದಿಗೂ ಒತ್ತಾಯಿಸಿಲ್ಲ. ನಮ್ಮ ಮೇಲೆ ಹಿಂದಿ ಹೇರಿಕೆಯನ್ನು ನಿಲ್ಲಿಸಿ ಎಂದು ಮಾತ್ರ ನಾವು ಕೇಳಿಕೊಳ್ಳುತ್ತಿದ್ದೇವೆ. ಬಿಜೆಪಿ ಆಡಳಿತದ ರಾಜ್ಯಗಳು ಮೂರು ಅಥವಾ 30 ಭಾಷೆಗಳನ್ನು ಕಲಿಸಲಿ, ಅದು ಅವರಿಗೆ ಬಿಟ್ಟಿದ್ದು, ಆದರೆ, ತಮಿಳುನಾಡನ್ನು ಬಿಟ್ಟುಬಿಡಿ!” ಎಂದು ಬರೆದುಕೊಂಡಿದ್ದಾರೆ.
A century has passed since the Dakshin Bharat Hindi Prachar Sabha was set up to make South Indians learn Hindi.
How many Uttar Bharat Tamil Prachar Sabhas have been established in North India in all these years?
Truth is, we never demanded that North Indians must learn Tamil or… pic.twitter.com/mzBbSja9Op
— M.K.Stalin (@mkstalin) March 4, 2025
ತಮಿಳುನಾಡು ಮತ್ತು ದಕ್ಷಿಣದ ಇತರ ರಾಜ್ಯಗಳಲ್ಲಿ ಹಿಂದಿ ಹೇರಿಕೆಗೆ ತಮ್ಮ ವಿರೋಧವನ್ನು ಪುನರುಚ್ಚರಿಸಿದ ಸಿಎಂ ಸ್ಟಾಲಿನ್, “ಉತ್ತರದ ರಾಜ್ಯಗಳು ತಮಿಳು ಕಲಿಯಬೇಕೆಂದು ತಮಿಳುನಾಡು ಎಂದಿಗೂ ಒತ್ತಾಯಿಸಿಲ್ಲ” ಎಂದು ಒತ್ತಿ ಹೇಳಿದ್ದಾರೆ.
ಉತ್ತರ ಭಾರತದ ವಿದ್ಯಾರ್ಥಿಗಳು ಕೇವಲ ಎರಡು ಭಾಷೆಗಳನ್ನು ಕಲಿಯಬೇಕಾದರೆ, ದಕ್ಷಿಣ ಭಾರತದ ವಿದ್ಯಾರ್ಥಿಗಳು ಮಾತ್ರ ಮೂರನೇ ಭಾಷೆಯನ್ನು ಕಲಿಯುವಂತೆ ಒತ್ತಾಯಿಸುತ್ತಿರುವುದು ಏಕೆ? ಎಂದು ಕೇಂದ್ರದ ತ್ರಿಭಾಷಾ ನೀತಿಯನ್ನು ಸ್ಟಾಲಿನ್ ಪ್ರಶ್ನಿಸಿದ್ದಾರೆ.
ಮತ್ತೊಂದು ಎಕ್ಸ್ ಪೋಸ್ಟ್‌ನಲ್ಲಿ ಅವರು ತಮಿಳುನಾಡಿನಲ್ಲಿ ಮೂರನೇ ಭಾಷೆಗಾಗಿ ಆಗ್ರಹಿಸುತ್ತಿರುವವರನ್ನು ಟೀಕಿಸಿಸಿದ್ದು, “ಕೆಲವು ಓರೆ ನೀತಿಗಳ ರಕ್ಷಕರು, ತೀವ್ರ ಕಳವಳದಿಂದ ಅಳುತ್ತಾ, ‘ತಮಿಳುನಾಡಿನ ವಿದ್ಯಾರ್ಥಿಗಳಿಗೆ ಮೂರನೇ ಭಾಷೆ ಕಲಿಯುವ ಅವಕಾಶವನ್ನು ಏಕೆ ನಿರಾಕರಿಸುತ್ತಿದ್ದೀರಿ?’ ಎಂದು ಕೇಳುತ್ತಿದ್ದಾರೆ. ಹಾಗಾದರೆ, ಸರಿ, ಉತ್ತರದಲ್ಲಿ ಯಾವ ಮೂರನೇ ಭಾಷೆಯನ್ನು ಕಲಿಸಲಾಗುತ್ತಿದೆ ಎಂದು ಅವರು ಏಕೆ ಹೇಳುತ್ತಿಲ್ಲ? ಉತ್ತರ ಭಾರತದವರು ಎರಡು ಭಾಷೆಗಳನ್ನು ಕಲಿಯುವಾಗ, ನಾವು ಮೂರನೇ ಭಾಷೆಯನ್ನು ಕಲಿಯುವ ಅಗತ್ಯ ಏನಿದೆ?” ಎಂದು ಕೇಳಿದ್ದಾರೆ.
Some guardians of lopsided policies, wailing in great concern, ask, “Why are you denying Tamil Nadu students the opportunity to learn a third language?”
Well, why don’t they first say which third language is being taught up north? If they had just taught two languages properly… pic.twitter.com/LZGwxYXrsa
— M.K.Stalin (@mkstalin) March 3, 2025
“ಎನ್‌ಇಪಿ ಜಾರಿಗೆ ತಂದರೆ ತಮಿಳುನಾಡು 2 ಸಾವಿರ ವರ್ಷಗಳಷ್ಟು ಹಿಂದಕ್ಕೆ ಹೋಗಲಿದೆ. ಕೇಂದ್ರ ಸರ್ಕಾರ 10 ಸಾವಿರ ಕೋಟಿ ಕೊಟ್ಟರೂ, ನಾವು ಹೊಸ ಶಿಕ್ಷಣ ನೀತಿಯನ್ನು ತಮಿಳುನಾಡಿನಲ್ಲಿ ಜಾರಿಗೊಳಿಸುವುದಿಲ್ಲ” ಎಂದು ಇತ್ತೀಚೆಗೆ ಸಿಎಂ ಸ್ಟಾಲಿನ್ ಹೇಳಿದ್ದರು.
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನೂ ಟೀಕಿಸಿದ್ದ ಸ್ಟಾಲಿನ್, “ಅವರು ಎನ್‌ಇಪಿ ಮೂಲಕ ಹಿಂದಿ ಹೇರಿಕೆ ಮಾಡುತ್ತಿದ್ದಾರೆ” ಎಂದು ಕಿಡಿಕಾರಿದ್ದರು.
ಭಾಷಾ ಅಭಿವೃದ್ಧಿಗೆ ನಿಧಿ ಹಂಚಿಕೆ ಮಾಡುವಲ್ಲಿನ ತಾರತಮ್ಯವನ್ನು ಸಿಎಂ ಸ್ಟಾಲಿನ್ ಎತ್ತಿ ತೋರಿಸಿದ್ದು, “8 ಕೋಟಿ ಜನರು ತಮಿಳು ಮಾತನಾಡುತ್ತಾರೆ. ಆದರೆ, ಕೇಂದ್ರ ಸರ್ಕಾರ ಅದರ ಅಭಿವೃದ್ಧಿಗೆ ಕೇವಲ 74 ಕೋಟಿ ರೂ.ಗಳನ್ನು ಮಾತ್ರ ಮೀಸಲಿಟ್ಟಿದೆ. ಆದರೆ, ಕೆಲವೇ ಸಾವಿರ ಜನರು ಮಾತನಾಡುವ ಸಂಸ್ಕೃತಕ್ಕೆ 1,488 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ” ಎಂದಿದ್ದಾರೆ.
“ತಮಿಳುನಾಡು ಸರ್ಕಾರ ಎನ್‌ಇಪಿ ಮತ್ತು ತ್ರಿಭಾಷಾ ನೀತಿಯನ್ನು ನಿರಂತರವಾಗಿ ವಿರೋಧಿಸುತ್ತಾ ಬಂದಿದೆ. ಪ್ರಸ್ತುತ ಅಸ್ತಿತ್ವದಲ್ಲಿರುವ ದ್ವಿಭಾಷಾ ವ್ಯವಸ್ಥೆಯಾದ ತಮಿಳು ಮತ್ತು ಇಂಗ್ಲಿಷ್‌ಗೆ ಆದ್ಯತೆ ನೀಡಿದೆ. ಪ್ರಮುಖ ವಿರೋಧ ಪಕ್ಷವಾದ ಎಐಎಡಿಎಂಕೆ ಕೂಡ ಈ ನಿಲುವನ್ನು ಬೆಂಬಲಿಸಿದೆ” ಎಂದು ಸಿಎಂ ಸ್ಟಾಲಿನ್ ತಿಳಿಸಿದ್ದಾರೆ.
ಈ ನಡುವೆ, ಸಿಎಂ ಸ್ಟಾಲಿನ್ ಅವರು ರಾಜಕೀಯಕ್ಕಾಗಿ ಎನ್‌ಇಪಿ ಕುರಿತು ತಪ್ಪು ಹೇಳಿಕೆ ನೀಡುತ್ತಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಆರೋಪಿಸಿದ್ದಾರೆ. ರಾಜಕೀಯ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ವಿದ್ಯಾರ್ಥಿಗಳ ಹಿತಾಸಕ್ತಿಗಳ ಮೇಲೆ ಕೇಂದ್ರೀಕರಿಸುವಂತೆ ಅವರು ಮನವಿ ಮಾಡಿದ್ದಾರೆ.
ಪ್ರಧಾನ ಮಂತ್ರಿ ಶ್ರೀ ಶಾಲೆಗಳ ಯೋಜನೆಯೊಂದಿಗೆ ಸಮಗ್ರ ಶಿಕ್ಷಾ ಅಭಿಯಾನ (ಎಸ್‌ಎಸ್‌ಎ) ನಿಧಿಯನ್ನು ಜೋಡಿಸುವುದನ್ನು ಆಕ್ಷೇಪಿಸಿ ಸಿಎಂ ಸ್ಟಾಲಿನ್ ಪ್ರಧಾನಿ ನರೇಂದ್ರ ಮೋದಿಗೆ ಪತ್ರ ಬರೆದ ನಂತರ ಪ್ರಧಾನ್ ಅವರ ಪ್ರತಿಕ್ರಿಯೆ ಬಂದಿದೆ.
ಪ್ರಧಾನ ಮಂತ್ರಿ ಶ್ರೀ ಶಾಲೆ ಮತ್ತು ಎಸ್‌ಎಸ್‌ಎ ಪ್ರತ್ಯೇಕ ಕೇಂದ್ರ ಪ್ರಾಯೋಜಿತ ಕಾರ್ಯಕ್ರಮಗಳಾಗಿದ್ದು, ಇವುಗಳನ್ನು ಲಿಂಕ್ ಮಾಡುವುದು ಅನ್ಯಾಯ ಎಂದು ಸ್ಟಾಲಿನ್ ಅವರು ಪ್ರಧಾನಿಗೆ ಬರೆದ ಪತ್ರದಲ್ಲಿ ಹೇಳಿದ್ದರು. ಎನ್‌ಇಪಿ ಜೊತೆ ಸೇರಿಸದೆ ಎಸ್‌ಎಸ್‌ಎ ಯೋಜನೆಯ ಹಣವಾದ 2,152 ಕೋಟಿ ರೂ.ಗಳನ್ನು ತಮಿಳುನಾಡಿಗೆ ತಕ್ಷಣ ಬಿಡುಗಡೆ ಮಾಡಬೇಕೆಂದು ಅವರು ಒತ್ತಾಯಿಸಿದ್ದರು.
ರಾಜ್ಯಗಳು ತಾವು ಹೇಳಿದಂತೆ ಕೇಳಲು ಕೇಂದ್ರ ಸರ್ಕಾರ ಅನುದಾನ ಹಂಚಿಕೆಯನ್ನು ಒಂದು ಅಸ್ತ್ರವಾಗಿ ಬಳಸುತ್ತಿದೆ. ಇದು ಸಹಕಾರಿ ಒಕ್ಕೂಟ ವ್ಯವಸ್ಥೆಗೆ ವಿರುದ್ದ ಎಂದು ಸ್ಟಾಲಿನ್ ಪತ್ರದಲ್ಲಿ ಹೇಳಿದ್ದರು.
ತಮಿಳುನಾಡು ಉಪಮುಖ್ಯಮಂತ್ರಿ ಉದಯನಿಧಿ ಸ್ಟಾಲಿನ್ ಕೂಡ ಹೊಸ ಶಿಕ್ಷಣ ನೀತಿ (ಎನ್‌ಇಪಿ) ಮತ್ತು ಇತರ ರೀತಿಯಲ್ಲಿ ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸಿದ್ದಾರೆ. ತಮಿಳು ಗುರುತನ್ನು ಯಾವುದೇ ಬೆಲೆ ತೆತ್ತಾದರೂ ರಕ್ಷಿಸುವುದಾಗಿ ಪ್ರತಿಜ್ಞೆ ಮಾಡಿದ್ದಾರೆ.
‘ತಕ್ಷಣ ಮಕ್ಕಳನ್ನು ಹೊಂದಿ’ | ಕ್ಷೇತ್ರ ವಿಂಗಡನೆ ಬಗ್ಗೆ ತಮಿಳುನಾಡು ನಿವಾಸಿಗಳಿಗೆ ಸಿಎಂ ಸ್ಟಾಲಿನ್ ಸಲಹೆ


