ಅಪರಾಧಿ ಕುಲದೀಪ್ ಸಿಂಗ್ ಸೆಂಗಾರ್ ಜೀವಾವಧಿ ಶಿಕ್ಷೆ ಅಮಾನತಿಗೆ ತಡೆ ನೀಡಿರುವ ಸುಪ್ರೀಂ ಕೋರ್ಟ್ ಆದೇಶವನ್ನು ಉನ್ನಾವೋ ಅತ್ಯಾಚಾರ ಸಂತ್ರಸ್ತೆ ಸ್ವಾಗತಿಸಿದ್ದು, ಸೆಂಗಾರ್ ಗಲ್ಲಿಗೇರುವವರೆಗೆ ತನ್ನ ಕಾನೂನು ಹೋರಾಟ ಮುಂದುವರಿಸುವುದಾಗಿ ಹೇಳಿದ್ದಾರೆ.
“ಈ ತೀರ್ಪಿನಿಂದ ನನಗೆ ತುಂಬಾ ಸಂತೋಷವಾಗಿದೆ. ಸುಪ್ರೀಂ ಕೋರ್ಟ್‌ನಿಂದ ನನಗೆ ನ್ಯಾಯ ಸಿಕ್ಕಿದೆ. ನಾನು ಆರಂಭದಿಂದಲೂ ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದೇನೆ” ಎಂದು ಸಂತ್ರಸ್ತೆ ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ.
“ನಾನು ಯಾವುದೇ ನ್ಯಾಯಾಲಯದ ವಿರುದ್ಧ ಯಾವುದೇ ಆರೋಪಗಳನ್ನು ಮಾಡುವುದಿಲ್ಲ. ನನಗೆ ಎಲ್ಲಾ ನ್ಯಾಯಾಲಯಗಳ ಮೇಲೆ ನಂಬಿಕೆ ಇದೆ, ಆದರೆ ಸುಪ್ರೀಂ ಕೋರ್ಟ್ ನನಗೆ ನ್ಯಾಯ ನೀಡಿದೆ ಮತ್ತು ಅದನ್ನು ಮುಂದುವರಿಸುತ್ತದೆ” ಎಂದು ಸಂತ್ರಸ್ತೆ ತಿಳಿಸಿದ್ದಾರೆ.
2017ರ ಅತ್ಯಾಚಾರ ಪ್ರಕರಣದಲ್ಲಿ ಬಿಜೆಪಿಯ ಮಾಜಿ ಶಾಸಕ ಕುಲದೀಪ್ ಸಿಂಗ್ ಸೆಂಗಾರ್‌ಗೆ ವಿಧಿಸಿದ್ದ ಜೀವಾವಧಿ ಶಿಕ್ಷೆಯನ್ನು ದೆಹಲಿ ಹೈಕೋರ್ಟ್ ಅಮಾನತಿನಲ್ಲಿಟ್ಟಿತ್ತು. ಹೈಕೋರ್ಟ್ ಆದೇಶದ ವಿರುದ್ದ ಸಿಬಿಐ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಸಿಬಿಐ ಅರ್ಜಿ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಹೈಕೋರ್ಟ್ ಆದೇಶಕ್ಕೆ ಸೋಮವಾರ (ಡಿ.29) ತಡೆ ನೀಡಿದೆ. ಅಪರಾಧಿ ಕುಲದೀಪ್ ಸೆಂಗಾರ್‌ಗೆ ನೋಟಿಸ್ ಜಾರಿ ಮಾಡಿ ಪ್ರತಿಕ್ರಿಯೆ ನೀಡುವಂತೆ ಸೂಚಿಸಿದೆ.
ಕಾನೂನು ಹೋರಾಟ ಮುಂದುವರಿಸುವುದಾಗಿ ಪ್ರತಿಜ್ಞೆ ಮಾಡಿರುವ ಸಂತ್ರಸ್ತೆ, ಆತನನ್ನು (ಸೆಂಗಾರ್) ಗಲ್ಲಿಗೇರಿಸುವವರೆಗೂ ನಾನು ವಿಶ್ರಮಿಸುವುದಿಲ್ಲ. ಹೋರಾಟ ಮುಂದುವರಿಸುತ್ತೇನೆ. ಆಗ ಮಾತ್ರ ನನ್ನ ಕುಟುಂಬ ಮತ್ತು ನನಗೆ ನ್ಯಾಯ ಸಿಗುತ್ತದೆ. ಇಂದಿಗೂ ನಮಗೆ ಬೆದರಿಕೆಗಳು ಬರುತ್ತಿವೆ ಎಂದು ಹೇಳಿದ್ದಾರೆ.
ಸುಪ್ರೀಂ ಕೋರ್ಟ್ ಆದೇಶಕ್ಕೆ ಕುಟುಂಬ ಸದಸ್ಯರು ಕೂಡ ಸಮಾಧಾನ ವ್ಯಕ್ತಪಡಿಸಿದ್ದು, ನ್ಯಾಯ ವ್ಯವಸ್ಥೆಯಲ್ಲಿನ ತಮ್ಮ ನಂಬಿಕೆಯನ್ನು ಪುನಃಸ್ಥಾಪಿಸಲಾಗಿದೆ ಎಂದಿದ್ದಾರೆ.
ನ್ಯಾಯಾಲಯವು ಅಪರಾಧಿ ಬಿಡುಗಡೆ ಆಗದಂತೆ ನೋಡಿಕೊಳ್ಳುತ್ತದೆ ಎಂಬ ಸಂಪೂರ್ಣ ನಂಬಿಕೆ ಇದೆ ಎಂದು ಸಂತ್ರಸ್ತೆಯ ಸಹೋದರಿ ಹೇಳಿದ್ದಾರೆ.
“ಆತ ಒಬ್ಬ ರಾಕ್ಷಸ. ಮೊದಲು ಆತ ನನ್ನ ಸಹೋದರಿಯ ಮೇಲೆ ಅತ್ಯಾಚಾರ ಮಾಡಿ, ನಂತರ ಇಡೀ ಕುಟುಂಬವನ್ನೇ ನಾಶ ಮಾಡಿದ. ಇಂದು ನನಗೆ ತೃಪ್ತಿಯಾಗಿದೆ. ಆತನ ಜಾಮೀನು ತಿರಸ್ಕೃತವಾಗಲೇಬೇಕು. ನಮ್ಮ ಕುಟುಂಬವು ಪ್ರಕರಣವನ್ನು ಮುಂದುವರಿಸುತ್ತದೆ”ಎಂದು ತಿಳಿಸಿದ್ದಾರೆ.


