ಭಯೋತ್ಪಾದನೆಯನ್ನು ನಿರ್ಮೂಲನೆ ಮಾಡಬೇಕು. ಆದರೆ, ಸರ್ಕಾರ ಆರೋಪಿಯ ಧರ್ಮದ ಆಧಾರದ ಮೇಲೆ ಮೇಲ್ಮನವಿ ಸಲ್ಲಿಸಿದರೆ, ಈ ಹೋರಾಟದಲ್ಲಿ ರಾಜಿಯಾದಂತೆ ಎಂದು ಹೈದರಾಬಾದ್ ಸಂಸದ ಹಾಗೂ ಎಐಎಂಐಎಂ ಪಕ್ಷದ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಹೇಳಿದ್ದಾರೆ.
ಮುಂಬೈ ರೈಲು ಸ್ಪೋಟ ಪ್ರಕರಣದ ಅಪರಾಧಿಗಳನ್ನು ಖುಲಾಸೆಗೊಳಿಸಿದ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಿರುವ ಬಗ್ಗೆ ಸುದ್ದಿ ಸಂಸ್ಥೆ ಪಿಟಿಐಗೆ ಪ್ರತಿಕ್ರಿಯಿಸಿದ ಅವರು, “ನಾವು ಕೇಂದ್ರ ಮತ್ತು ಮಹಾರಾಷ್ಟ್ರದ ಬಿಜೆಪಿ ಸರ್ಕಾರಗಳಿಗೆ ಕೇಳಲು ಬಯಸುವುದೇನೆಂದರೆ, ಮಾಲೆಗಾಂವ್ ಸ್ಪೋಟ ಪ್ರಕರಣದ ಆರೋಪಿಗಳನ್ನು ಒಂದು ವೇಳೆ ನ್ಯಾಯಾಲಯ ಖುಲಾಸೆಗೊಳಿಸಿದರೆ ಮೇಲ್ಮನವಿ ಸಲ್ಲಿಸುತ್ತೀರಾ? ಎಂದಿದ್ದಾರೆ.
2008ರಲ್ಲಿ ಮಕ್ಕಾ ಮಸೀದಿಯಲ್ಲಿ ಸ್ಫೋಟ ಸಂಭವಿಸಿತ್ತು. ಆ ಪ್ರಕರಣದಲ್ಲಿ ಏಕೆ ಮೇಲ್ಮನವಿ ಸಲ್ಲಿಸಿಲ್ಲ. ಅಜ್ಮೀರ್ ಸ್ಫೋಟ ಪ್ರಕರಣದಲ್ಲಿ ಅವರು ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಓವೈಸಿ ಹೇಳಿದ್ದಾರೆ.
ಮುಂಬೈ ರೈಲು ಸ್ಪೋಟಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸಂಘಟಿತ ಅಪರಾಧ ನಿಯಂತ್ರಣ ಕಾಯ್ದೆ (MCOCA)ಅಡಿಯಲ್ಲಿ ಗೊತ್ತುಪಡಿಸಿದ ವಿಶೇಷ ನ್ಯಾಯಾಲಯವು ಸೆಪ್ಟೆಂಬರ್ 2015ರಲ್ಲಿ ಐವರು ಅಪರಾಧಿಗಳಿಗೆ ಮರಣದಂಡನೆ ಮತ್ತು ಏಳು ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಈ ತೀರ್ಪನ್ನು 2025ರ ಜುಲೈ 21ರಂದು ಬಾಂಬೆ ಹೈಕೋರ್ಟ್ ರದ್ದುಗೊಳಿಸಿತ್ತು. ಎಲ್ಲಾ 12 ಅಪರಾಧಿಗಳನ್ನು ಖುಲಾಸೆಗೊಳಿಸಿತ್ತು. ಬಾಂಬೆ ಹೈಕೋರ್ಟ್ ತೀರ್ಪಿನ ವಿರುದ್ದ ಮಹಾರಾಷ್ಟ್ರ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿತ್ತು. ಸುಪ್ರೀಂ ಕೋರ್ಟ್ ಗುರುವಾರ (ಜುಲೈ 24) ಹೈಕೋರ್ಟ್ ತೀರ್ಪಿಗೆ ತಡೆ ನೀಡಿದೆ.
ಮುಂಬೈ ರೈಲು ಸ್ಪೋಟ: 12 ಅಪರಾಧಿಗಳನ್ನು ಖುಲಾಸೆಗೊಳಿಸಿದ್ದ ಬಾಂಬೆ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ


