ಚಳಿಗಾಲದ ಅಧಿವೇಶನ ನವೆಂಬರ್ 18ರಿಂದ ಆರಂಭವಾಗಲಿದ್ದು, ಆಡಳಿತ ಪಕ್ಷ ಬಿಜೆಪಿಯನ್ನು ಕಟ್ಟಿ ಹಾಕಲು ಪ್ರತಿಪಕ್ಷಗಳು ಸಿದ್ದತೆ ನಡೆಸಿವೆ. ನವೆಂಬರ್ 18 ರಿಂದ ಡಿಸೆಂಬರ್ 13ರವರೆಗೆ ಅಂದರೆ 25 ದಿನಗಳು ಕಲಾಪ ನಡೆಯಲಿದೆ.
ಚಳಿಗಾಲದ ಅಧಿವೇಶನದಲ್ಲಿ ಸುಮಾರು 35 ಮಸೂದೆಗಳನ್ನು ಮಂಡಿಸಿ ಅಂಗೀಕರಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ ಸರ್ಕಾರ ತೀರ್ಮಾನಿಸಿದೆ. ವಿವಾದಾತ್ಮಕ ಭಾರತೀಯ ಪೌರತ್ವ ತಿದ್ದುಪಡಿ ಮಸೂದೆ, ಅಕ್ರಮ ವಲಸೆ ಮಸೂದೆ, ವೈಯಕ್ತಿಕ ಮಾಹಿತಿ ಸಂರಕ್ಷಣಾ ಮಸೂದೆ ಸೇರಿದಂತೆ ಹಲವು ಮಸೂದೆಗಳು ಸಂಸತ್ ಅಧಿವೇಶನದಲ್ಲಿ ಮಂಡನೆಯಾಗಲಿವೆ.
ಹಿಂದಿನ ಅಧಿವೇಶನದಲ್ಲಿ ಮಂಡಿಸಿ ಅಂಗೀಕರಿಸಲು 43 ಮಸೂದೆಗಳು ಬಾಕಿ ಇದ್ದು ಅದರಲ್ಲಿ 12 ಮಸೂದೆ ಗಳನ್ನು ಪಾಸು ಮಾಡಲು ಭಾರತ ಸರ್ಕಾರ ತೀರ್ಮಾನಿಸಿದೆ. ಜೊತೆಗೆ 7 ಮಸೂದೆಗಳನ್ನು ವಾಪಸ್ ಪಡೆಯಲಿದೆ. 27 ಮಸೂದೆಗಳನ್ನು ಮಂಡನೆ ಮಾಡಿ ಪರಿಶೀಲಿಸಲು ನಿರ್ಧರಿಸಲಾಗಿದೆ.
ಮಹಾರಾಷ್ಟ್ರದಲ್ಲಿ ಬಿಜೆಪಿ ಮತ್ತು ಶಿವಸೇನೆಯ ನಡುವೆ ಬಿಕ್ಕಟ್ಟು ಸೃಷ್ಟಿಯಾಗಿರುವ ಹಿನ್ನೆಲೆಯಲ್ಲಿ ಶಿವಸೇನೆ ಎನ್.ಡಿ.ಎ. ಸರ್ಕಾರದಿಂದ ಹೊರಬಂದಿದೆ. ಇದ್ದ ಒಬ್ಬ ಸಚಿವರೂ ಕೂಡ ರಾಜಿನಾಮೆ ನೀಡಿ ಹೊರ ಬಂದಿರುವುದರಿಂದ ಸಂಸತ್‌ನಲ್ಲಿ ಶಿವಸೇನೆಗೆ ಪ್ರತ್ಯೇಕ ಆಸನಗಳ ವ್ಯವಸ್ಥೆ ಮಾಡಬೇಕಾಗಿದೆ.
ಶಿವಸೇನೆಯ 18 ಮಂದಿ ಲೋಕಸಭಾ ಸದಸ್ಯರು ಮತ್ತು ಮೂವರು ರಾಜ್ಯಸಭಾ ಸದಸ್ಯರು ಇದ್ದಾರೆ. ಅವರಿಗೆ ಉಭಯ ಸದಗಳಲ್ಲಿ ಪ್ರತ್ಯೇಕ ಆಸನ ವ್ಯವಸ್ಥೆ ಮಾಡಬೇಕಾದುದು ಸರ್ಕಾರದ ಕರ್ತವ್ಯವಾಗಿದೆ.
ಜಾರ್ಖಂಡ್ ನಲ್ಲಿ ಎಲ್.ಜೆ.ಪಿಯು ಭಾರತೀಯ ಜನತಾ ಪಕ್ಷದ ಮೈತ್ರಿಯನ್ನು ಕಡಿದುಕೊಂಡಿದ್ದು ಸ್ವತಂತ್ರವಾಗಿ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ದತೆ ನಡೆದಿದೆ. ಇದರ ಜೊತೆಗೆ ಶಿವಸೇನೆಯೂ ಬಿಜೆಪಿಯ ಬಹುಕಾಲದ ಮೈತ್ರಿಯಿಂದ ಹೊರಬಂದಿರುವುದು ಪ್ರತಿಪಕ್ಷಗಳಿಗೆ ಸರ್ಕಾರವನ್ನು ಹಣಿಯಲು ಸಾಕಷ್ಟು ಅಸ್ತ್ರಗಳು ದೊರೆತಂತಾಗಿದೆ.
ಪ್ರಮುಖವಾಗಿ ಅಸ್ಸಾಂನಲ್ಲಿ ರಾಷ್ಟ್ರೀಯ ಪೌರತ್ವ ನೋಂದಣಿಯ ಸಂದರ್ಭದಲ್ಲಿ ಸುಮಾರು 19 ಲಕ್ಷ ಮಂದಿಯ ಹೆಸರನ್ನು ಪಟ್ಟಿಯಿಂದ ಬಿಟ್ಟಿರುವುದು ಚರ್ಚೆಗೆ ಬರಲಿದೆ. ಗೃಹ ಸಚಿವ ಅಮಿತ್ ಶಾ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರು ಪಕ್ಕದ ಬಾಂಗ್ಲಾದೇಶ, ಪಾಕಿಸ್ತಾನ ಮತ್ತು ಅಪ್ಘಾನಿಸ್ತಾನದಿಂದ ಅಕ್ರಮವಾಗಿ ವಲಸೆ ಬಂದಿರುವ ಹಿಂದೂ, ಸಿಖ್, ಜೈನ, ಬೌದ್ಧ ಮತ್ತು ಕ್ರಿಶ್ಚಿಯನ್ನರಿಗೆ ಪೌರತ್ವ ನೀಡಿರುವುದನ್ನು ಹಾಗೂ ಪೌರತ್ವಕ್ಕೆ ಅರ್ಹರಾಗಿರುವ ಮುಸ್ಲಿಮರನ್ನು ಪಟ್ಟಿಯಿಂದ ಕೈಬಿಟ್ಟಿರುವ ವಿಷಯವನ್ನು ಪ್ರತಿಪಕ್ಷಗಳು ಸಂಸತ್ ಕಲಾಪದಲ್ಲಿ ಪ್ರಸ್ತಾಪಿಸಿ ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿವೆ.
ಜಮ್ಮು ಮತ್ತು ಕಾಶ್ಮೀರಕ್ಕೆ ಸಂವಿಧಾನಾತ್ಮಕವಾಗಿ 370ನೇ ವಿಧಿಯನ್ವಯ ನೀಡಲಾಗಿದ್ದ ಮಾನ್ಯತೆಯನ್ನು ರದ್ದುಪಡಿಸಿರುವುದು ಮತ್ತು ಜಮ್ಮು ಕಾಶ್ಮೀರ ಮತ್ತು ಲಡಕ್ ನ್ನು ಎರಡು ಭಾಗಗಳಾಗಿ ವಿಂಗಡಿಸಿ ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿರುವುದು ಹಾಗೂ ಕಣಿವೆ ರಾಜ್ಯದ ಕಾಂಗ್ರೆಸ್, ಪಿಡಿಪಿ, ನ್ಯಾಷನಲ್ ಕಾನ್ಸರೆನ್ಸ್ ನಾಯಕರಾದ ಫಾರೂಕ್ ಅಬ್ದುಲ್ಲಾ, ಮೆಹಬೂಬಾ ಮುಫ್ತಿ, ಒಮರ್ ಅಬ್ದುಲ್ಲಾ ಜೊತೆಗೆ ವಿದ್ಯಾರ್ಥಿಗಳು, ಸಂಘ-ಸಂಸ್ಥೇಗಳ ಮುಖಂಡರು, ವಕೀಲರನ್ನು ಬಂಧನಕ್ಕೊಳಪಡಿಸಿರುವದನ್ನು ಹಾಗೂ ಎಲ್ಲಾ ರೀತಿಯ ಹಕ್ಕುಗಳನ್ನು ಮೊಟುಕುಗೊಳಿಸಿರುವುದನ್ನು ಪ್ರಸ್ತಾಪಿಸಿ ಸರ್ಕಾರವನ್ನು ಟೀಕೆಗೆ ಗುರಿಪಡಿಸಲಿವೆ.
ಕರ್ನಾಟಕದಲ್ಲಿ 17 ಮಂದಿ ಜೆಡಿಎಸ್ ಮತ್ತು ಕಾಂಗ್ರೆಸ್ ಶಾಸಕರು ರಾಜಿನಾಮೆ ನೀಡಲು ಗೃಹ ಸಚಿವ ಅಮಿತ್ ಶಾ ಅವರ ಬೆಂಬಲವೂ ಕಾರಣ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿರುವ ಆಡಿಯೋ ಕೂಡ ಸಂಸತ್ ನಲ್ಲಿ ಸದ್ದು ಮಾಡಲಿದೆ. ಪದೇ ಪದೇ ಆಪರೇಷನ್ ಕಮಲ ಮಾಡಿ ಅನೈತಿಕತೆ ಮತ್ತು ಅಸಂವಿಧಾನದ ಮೂಲಕ ಅಧಿಕಾರಕ್ಕೆ ಬಂದಿರುವ ಬಿಜೆಪಿ ಪಕ್ಷವನ್ನು ತರಾಟೆಗೆ ತೆಗೆದುಕೊಳ್ಳಲು ಪ್ರತಿಪಕ್ಷಗಳು ಸಿದ್ದತೆ ನಡೆಸಿವೆ.
ದೇಶದಲ್ಲಿ ಕಳೆದ ಆರು ತಿಂಗಳಲ್ಲಿ 90 ಲಕ್ಷ ಉದ್ಯೋಗಗಳು ನಷ್ಟವಾಗಿರುವುದು, ಉದ್ದಿಮೆಗಳು ಬಾಗಿಲು ಮುಚ್ಚಿಸಿರುವುದು, ಅದರಿಂದ ಕಾರ್ಮಿಕರು ಉದ್ಯೋಗ ಕಳೆದುಕೊಂಡಿರುವುದು, ಮಹಾರಾಷ್ಟ್ರ-ಪಂಜಾಬ್ ಸಹಕಾರ ಬ್ಯಾಂಕ್ ನಲ್ಲಿ ನಡೆದಿರುವ ಹಗರಣ, ಅದರಿಂದಾದ ಸಾವು ನೋವು, ಆರ್ಥಿಕ ಕುಸಿತ, ರೈತರ ಆತ್ಮಹತ್ಯೆ, ಕಾರ್ಮಿಕ ಕಾಯ್ದೆಗಳ ತಿದ್ದುಪಡಿ ಮೊದಲಾದ ವಿಷಯಗಳು ಉಭಯ ಸದನಗಳಲ್ಲಿ ಚರ್ಚೆಗೆ ಗ್ರಾಸವಾಗಲಿವೆ.
ಆಟೋ ಮೊಬೈಲ್, ಜವಳಿ, ಕಟ್ಟಡ ನಿರ್ಮಾಣ, ವಾಹನ ತಯಾರಿಕೆ ಮತ್ತು ಮಾರಾಟದಲ್ಲಿ ವ್ಯಾಪಕವಾಗಿ ಕುಸಿತ ಕಂಡಿರುವುದು, ನಿರುದ್ಯೋಗ ಸಮಸ್ಯೆ ಕಳೆದ 49 ವರ್ಷಗಳಲ್ಲೇ ಅತ್ಯಧಿಕವಾಗಿ ಕಾಡುತ್ತಿರುವುದು ಹೀಗೆ ಹತ್ತು ಹಲವು ವಿಷಯಗಳನ್ನು ಕಲಾಪದಲ್ಲಿ ಚರ್ಚಿಸಿ ಕೇಂದ್ರ ಸರ್ಕಾರಕ್ಕೆ ಮುಜುಗರ ಉಂಟು ಮಾಡಲು ಕಾಂಗ್ರೆಸ್ , ಶಿವಸೇನೆ, ಎನ್.ಸಿ.ಪಿ, ಡಿಎಂಕೆ ಪಕ್ಷಗಳಿಗೆ ಅವಕಾಶವಿದೆ.
ಇದೇ ವೇಳೆ ಪ್ರಧಾನಿ ನರೇಂದ್ರ ಮೋದಿ ಮತ್ತು ಗೃಹ ಸಚಿವ ಅಮಿತ್ ಶಾ ನಡವಳಿಕೆಗೆ ವಿರೋಧ ವ್ಯಕ್ತಪಡಿಸಿರುವ ಪ್ರತಿಪಕ್ಷಗಳು ಸಿಬಿಐ, ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಇಲಾಖೆ ಅಧಿಕಾರಿಗಳನ್ನು ಬಿಟ್ಟು ಪ್ರತಿಪಕ್ಷಗಳ ಮುಖಂಡರನ್ನು ಜೈಲಿಗೆ ಕಳಿಸಿರುವನ್ನು ಪ್ರಮುಖವಾಗಿ ಎತ್ತಿ ಕಲಾಪಕ್ಕೆ ಅಡ್ಡಿಸಲಿವೆ. ಪಿ.ಚಿದಂಬರಂ ಬಂಧನ ಮುಂದುವರಿಕೆ ಎನ್.ಸಿ.ಪಿ ಮುಖ್ಯಸ್ಥ ಶರದ್ ಪವಾರ್ ವಿರುದ್ಧ ಇಡಿ ಬಳಕೆ, ಡಿಕೆಶಿವಕುಮಾರ್ ಬಂಧನ, ಹೀಗೆ ಹಲವು ವಿಷಯಗಳು ಸರ್ಕಾರವನ್ನು ಟೀಕೆಗೊಳಪಡಿಸಲು ಅವಕಾಶವಿದೆ.
ವಿದೇಶಾಂಗ ನೀತಿ, ರಾಜತಾಂತ್ರಿಕತೆಯಲ್ಲಿ ವೈಫಲ್ಯ ಅವೈಜ್ಞಾನಿಕ ಸರಕು ಮತ್ತು ಸೇವಾ ತೆರಿಗೆ, ನೋಟು ರದ್ದುಗೊಳಿಸಿ ಮೂರು ವರ್ಷವಾಗಿದ್ದು ಅದರಿಂದಾದ ದುಷ್ಪರಿಣಾಮಗಳು, ಸಾಲ ಮನ್ನಾ ಮಾಡದೇ ಇರುವುದು, ದೇಶದಲ್ಲಿ ಬಿಜೆಪಿ ಕೋಮು ದ್ವೇಷದ ಮೂಲಕ ಸಮಾಜವನ್ನು ವಿಭಜಿಸಿ ಸೌಹಾರ್ದತೆಯನ್ನು ಹಾಳು ಮಾಡುತ್ತಿರುವುದು ಮತ್ತು ಮುಸ್ಲೀಮರ ವಿರುದ್ಧ ಸೇಡು ತೀರಿಸಿಕೊಳ್ಳುತ್ತಿರುವುದರ ವಿರುದ್ಧ ಪ್ರತಿಭಟಿಸಲು ಮುಂದಾಗಿವೆ.


