ಕರ್ನಾಟಕದಲ್ಲಿ ಮಾರೆಲ್ ಪೊಲೀಸಿಂಗ್ ಘಟನೆಗಳು ಹೆಚ್ಚುತ್ತಿರುವ ಸಂದರ್ಭದಲ್ಲಿ ಮತೀಯ ಗೂಂಡಾಗಿರಿ ಸಮರ್ಥಿಸಿ ನೀಡಿದ್ದ ಹೇಳಿಕೆಯನ್ನು ಹಿಂಪಡೆಯಬೇಕು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಶನ್ ಫಾಸ್ ಜಸ್ಟೀಸ್ ಸಂಘಟನೆ ನೋಟೀಸ್ ನೀಡಿದೆ.
“ಮತೀಯ ಗೂಂಡಾಗಿರಿ ಸಮರ್ಥಿಸಿ ಹೇಳಿಕೆ ನೀಡುವ ಮೂಲಕ ತಾವು ತೆಗೆದುಕೊಂಡಿರುವ ಪ್ರಮಾಣ ವಚನವನ್ನು ಉಲ್ಲಂಘಿಸಿದ್ದೀರಿ. ಕೋಮು ಹಿಂಸಾಚಾರಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಿಮ್ಮ ಹೇಳಿಕೆಗಳು ಆಘಾತಕಾರಿಯಾಗಿವೆ ಮತ್ತು ಸಾಂವಿಧಾನಿಕ ಪ್ರತಿಜ್ಞೆಯನ್ನು ಉಲ್ಲಂಘಿಸಿವೆ. ಹಾಗಾಗಿ ಹೇಳಿಕೆಯನ್ನು ಹಿಂಪಡೆಯಿರಿ” ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ.
1/3 AILAJ has sent @CMofKarnataka Shri Bommai a notice to withdraw statements made in violation of oath justifying moral policing. These statements are shocking, coming in the backdrop of an alarming increase in communal violence and are in violation of his constitutional oath. pic.twitter.com/kaMJab0MQP
— AILAJ_HQ (@AilajHq) October 17, 2021
ಮುಖ್ಯಮಂತ್ರಿಗಳ ಹೇಳಿಕೆಗಳು ಧಾರ್ಮಿಕ ದ್ವೇಷ ಮತ್ತು ಹಿಂಸೆಗೆ ಬಲಿಯಾದ ಸಂತ್ರಸ್ತರನ್ನು ಖಂಡಿಸುವಂತಿವೆ ಮತ್ತು ಅವರ ವಿರುದ್ಧ ಹಿಂಸೆಗೆ ಪ್ರಚೋದನೆ ನೀಡುವಂತಿವೆ. ಅವರಿಗೆ ಕಾನೂನುಬದ್ಧ ರಕ್ಷಣೆಯನ್ನು ನಿರಾಕರಿಸುವುದು ಮತ್ತು ಕಾನೂನು ಸೌಲಭ್ಯಗಳನ್ನು ನೀಡದಿರುವುದು ಮಾತ್ರವಲ್ಲದೆ ಅವರನ್ನು ಸಂಪೂರ್ಣವಾಗಿ ಕಾನೂನುಬಾಹಿರ ಶಕ್ತಿಗಳಿಗೆ ಅಕ್ರಮವಾಗಿ ಹಸ್ತಾಂತರಿಸಿದಂತಿವೆ ಎಂದು ವಕೀಲರ ಸಂಘಟನೆ ಅಭಿಪ್ರಾಯಪಟ್ಟದೆ.
ಅವರ ಹೇಳಿಕೆಗಳು ಸಾಂವಿಧಾನಿಕ ನೈತಿಕತೆಗೆ ವಿರುದ್ಧವಾಗಿವೆ. ಸಮಾಜದ ಬಲಿಷ್ಟ ಜಾತಿ – ಧರ್ಮಗಳ ಸಮುದಾಯಗಳ ಸಾಮಾಜಿಕ ನೈತಿಕತೆಗೆ ಪುಷ್ಠಿ ನೀಡುತ್ತವೆ. ಗುಂಪು ಹಿಂಸಾಚಾರವನ್ನು ನಿಯಂತ್ರಿಸಲು ಮತ್ತು ನಿಗ್ರಹಿಸಲು ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳಿಗೆ ವಿರುದ್ಧವಾಗಿದೆ ಎಂದು ಆಲ್ ಇಂಡಿಯಾ ಲಾಯರ್ಸ್ ಅಸೋಷಿಯೇಶನ್ ಫಾಸ್ ಜಸ್ಟೀಸ್ ಸಂಘಟನೆ ಹೇಳಿದೆ.
ಕರಾವಳಿಯಲ್ಲಿ ಹೆಚ್ಚುತ್ತಿರುವ ಮಾರಲ್ ಪೊಲೀಸಿಂಗ್ ಕುರಿತ ಪ್ರಶ್ನೆಗೆ ಅಕ್ಟೋಬರ್ 13 ರಂದು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಉತ್ತರಿಸಿದ್ದ ಮುಖ್ಯಮಂತ್ರಿ ಬೊಮ್ಮಾಯಿಯವರು, “ಸಮಾಜದಲ್ಲಿ ಹಲವಾರು ಭಾವನೆಗಳಿವೆ. ಆ ಭಾವನೆಗಳಿಗೆ ಧಕ್ಕೆ ಬಾರದ ರೀತಿಯಲ್ಲಿ ನಡೆದುಕೊಳ್ಳಬೇಕಾಗಿದೆ. ಭಾವನೆಗಳಿಗೆ ಧಕ್ಕೆಯಾದಾಗ ಸಹಜವಾಗಿ ಕ್ರಿಯೆ-ಪ್ರತಿಕ್ರಿಯೆ ನಡೆಯುತ್ತವೆ. ಇಂಥ ಸಂದರ್ಭದಲ್ಲಿ ಒಂದು ಸರ್ಕಾರವಾಗಿ ನಮ್ಮ ಕರ್ತವ್ಯ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಸಾಮಾಜಿಕವಾಗಿಯೂ ಸಾಮರಸ್ಯ ಕಾಪಾಡಲು ನಾವೆಲ್ಲರೂ ಕ್ರಮ ಕೈಗೊಳ್ಳಬೇಕು. ಅದಕ್ಕೆ ಎಲ್ಲರೂ ಸಹಕಾರ ಕೊಡಬೇಕು” ಎಂದಿದ್ದರು.
ಇದನ್ನೂ ಓದಿ: ನೈತಿಕತೆ ಇಲ್ಲದೇ ಬದುಕಲಾಗದು: ಮಾರಲ್ ಪೊಲೀಸಿಂಗ್ ಸಮರ್ಥಿಸಿಕೊಂಡ ಸಿಎಂ ಬಸವರಾಜ ಬೊಮ್ಮಾಯಿ
ಮುಂದುವರಿದು ಕೆಲವು ಯುವಕರು ಏನಾದರೂ ಕೈಗೆತ್ತುಕೊಂಡು, ಈಗ ಅವರ ಒಂದು, ಈ ಸಮಾಜದ ಭಾವೆನೆಗಳಿಗೆ ಧಕ್ಕೆಯಾಗದಂತೆ ಅವರು ಕೂಡ ನೋಡಿಕೊಳ್ಳಬೇಕಾಗಿದೆ. ಹೀಗಾಗಿ ಇದೊಂದು ಸಮಾಜಿಕವಾಗಿರುವ ಪ್ರಶ್ನೆ ಇದೆ. ಸಮಾಜದಲ್ಲಿ ಮೊರಾಲಿಟಿ ಇರಬೇಕು. ನೈತಿಕತೆ ಇಲ್ಲದೇ ನಾವು ಬದಕಲು ಸಾಧ್ಯವೇ? ಎಂದಿದ್ದರು.
ನಿಮ್ಮ ಶಾಸಕರೆ ಎಂದು ಪತ್ರಕರ್ತರ ಪ್ರಶ್ನೆಯನ್ನು ತುಂಡರಿಸಿದ ಅವರು, ನೈತಿಕತೆ ಇಲ್ಲದೆ ನಾವು ಬದುಕಲು ಸಾಧ್ಯವಿಲ್ಲ. ಇವತ್ತು ನಾವು ನಮ್ಮಲ್ಲ ಸಂಬಂಧಗಳು, ಶಾಂತಿ ಸುವ್ಯವಸ್ಥೇ ಇರುವುದು ನಮ್ಮ ಮೇಲೆ ನಾವು ನಿಯಂತ್ರಣವಿರುವುದರಿಂದ, ನೈತಿಕತೆಯಿಂದ. ನೈತಿಕತೆ ಇಲ್ಲದಾಗ ಎಲ್ಲಾ ಥರದ ಘಟನೆಗಳು ನಡೆಯುತ್ತವೆ ಎಂದಿದ್ದರು.
ಮುಖ್ಯಮಂತ್ರಿಗಳ ಹೇಳಿಕೆಗೆ ಸಮಾಜದ ಹಲವು ವಿಭಾಗಗಳಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಹಾಗಾದರೆ ಗೃಹ ಇಲಾಖೆ ಮತ್ತು ಸರ್ಕಾರ ಇರುವುದೇಕೆ ಎಂದು ಸಾಮಾಜಿಕ ಕಾರ್ಯಕರ್ತರು ಕಿಡಿಕಾರಿದ್ದರು. ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, “ಪುಂಡರು ಕಾನೂನನ್ನು ಕೈಗೆತ್ತಿಕೊಳ್ಳುವ ಅನೈತಿಕ ಪೊಲೀಸ್ ಗಿರಿಯನ್ನು ಸಮರ್ಥಿಸುವ ಮೂಲಕ ಕಾನೂನು ಪಾಲನೆ ನಿಮ್ಮಿಂದ ಸಾಧ್ಯವಿಲ್ಲ ಎಂದು ನಿಮ್ಮ ಅಸಾಮರ್ಥ್ಯವನ್ನು ತೋಡಿಕೊಂಡಿದ್ದೀರಿ. ದಯವಿಟ್ಟು ರಾಜೀನಾಮೆ ಕೊಟ್ಟು ಮನೆಗೆ ಹೋಗಿ. ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ” ಎಂದು ಒತ್ತಾಯಿಸಿದ್ದರು.
“ಅನೈತಿಕ ಪೊಲೀಸ್ ಗಿರಿಗೆ ಬಲಿಯಾಗುತ್ತಿರುವವರು ಅಸಹಾಯಕ, ಅಮಾಯಕ ಹೆಣ್ಣುಮಕ್ಕಳು. ಸ್ತ್ರಿಪೀಡಕರ ಹೆಡೆಮುರಿ ಕಟ್ಟಿ ಜೈಲಿಗೆ ತಳ್ಳಬೇಕಾದ ನೀವು ಅದನ್ನು ಮಾಡದೆ ಆ ದುಷ್ಕರ್ಮಿಗಳ ರಕ್ಷಣೆಗೆ ನಿಂತಿದ್ದೀರಿ. ಕುರ್ಚಿಯ ರಕ್ಷಣೆಗಾಗಿ ಸಂಘ ಪರಿವಾರದ ಓಲೈಕೆ ನಿಮಗೆ ಅನಿವಾರ್ಯವಾಗಿರಬಹುದು. ಇದಕ್ಕಾಗಿ ಇಷ್ಟೊಂದು ಕೆಳ ಮಟ್ಟಕ್ಕೆ ಇಳಿಯುವುದೇ?” ಎಂದು ಪ್ರಶ್ನಿಸಿದ್ದರು.
ಇದನ್ನೂ ಓದಿ: ರಾಜ್ಯವನ್ನು ಜಂಗಲ್ ರಾಜ್ಯ ಮಾಡಬೇಡಿ; ರಾಜೀನಾಮೆ ಕೊಟ್ಟು ಮನೆಗೆ ಹೋಗಿ: ಸಿದ್ದರಾಮಯ್ಯ



ನೋಟೀಸು ಕೊಟ್ಟಿರುವುದು ಸ್ವಾಗತಾರ್ಹ.