ಆಂಧ್ರ ಪ್ರದೇಶದ ರೈಲ್ವೆ ಕೊಡೂರು ವಿಧಾನಸಭಾ ಕ್ಷೇತ್ರದ ಜನ ಸೇನಾ ಶಾಸಕ ಮತ್ತು ಸರ್ಕಾರಿ ಸಚೇತಕ ಅರವ ಶ್ರೀಧರ್ ವಿರುದ್ಧ ಮಹಿಳೆಯೊಬ್ಬರು ಅತ್ಯಾಚಾರ ಮತ್ತು ಬಲವಂತದ ಗರ್ಭಪಾತ ಆರೋಪ ಮಾಡಿದ್ದಾರೆ.
ಈ ಕುರಿತು ವಿಡಿಯೋ ಮೂಲಕ ಮಾತನಾಡಿರುವ ಮಹಿಳೆ, “ಕಳೆದ ಒಂದೂವರೆ ವರ್ಷದಿಂದ ಶಾಸಕ ತನ್ನನ್ನು ಬೆದರಿಸಿ ಹಲವು ಬಾರಿ ಅತ್ಯಾಚಾರವೆಸಗಿದ್ದಾರೆ. ಕನಿಷ್ಠ ಐದು ಬಾರಿ ಬಲವಂತದಿಂದ ಗರ್ಭಪಾತ ಮಾಡಿಸಿದ್ದಾರೆ. ಆರಂಭದಲ್ಲಿ ದೌರ್ಜನ್ಯ ಎಸಗುವಾಗ ಮದುವೆಯಾಗುವುದಾಗಿ ಭರವಸೆ ಕೊಟ್ಟಿದ್ದರು. ಆದರೆ, ಈಗ ಮದುವೆಯಾವುದಿಲ್ಲ,ನೀನು ಏನು ಮಾಡುತ್ತಿಯೋ ಮಾಡು, ಯಾರ ಬಳಿ ಹೇಳುತ್ತಿಯೋ ಹೇಳು. ನನಗೆ ಏನು ಆಗದು ಎನ್ನುತ್ತಿದ್ದಾರೆ” ಎಂದು ಹೇಳಿದ್ದಾರೆ.
ಶಾಸಕ ಮಹಿಳೆ ಮಾಡಿದ್ದಾರೆ ಎನ್ನಲಾದ ವಿಡಿಯೋ ಕಾಲ್ ರೆಕಾರ್ಡ್, ವಾಟ್ಸಾಪ್ ಚಾಟ್‌ಗಳು ಮತ್ತು ಇತರ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದು ಮಹಿಳೆಯ ಆರೋಪವನ್ನು ಪುಷ್ಠೀಕರಿಸುತ್ತಿವೆ. ಸಾರ್ವಜನಿಕ ವಲಯದಲ್ಲಿ ಶಾಸಕನ ವಿರುದ್ದ ಆಕ್ರೋಶ ವ್ಯಕ್ತವಾಗಿದೆ.
ಅರವ ಶ್ರೀಧರ್ ಶಾಸಕರಾದ ಬಳಿಕ ಮೊದಲ ಬಾರಿಗೆ ನನ್ನನ್ನು ಫೇಸ್‌ಬುಕ್ ಮೂಲಕ ಸಂಪರ್ಕಿಸಿದ್ದರು. ನಂತರ ನಿರಂತರವಾಗಿ ಬೆದರಿಸಿ ಲೈಂಗಿಕವಾಗಿ ಸಹಕರಿಸುವಂತೆ ಒತ್ತಾಯಿಸಿದ್ದರು. ನಾನು ನಿರಾಕರಿಸಿದಾಗ ಕುಟುಂಬಕ್ಕೆ ಹಾನಿ ಮಾಡುವುದಾಗಿ ಹೆದರಿಸಿದ್ದರು. 2024ರಲ್ಲಿ ಮೊದಲ ಬಾರಿಗೆ ನನ್ನನ್ನು ಕಾರಿನಲ್ಲಿ ಕರೆದೊಯ್ದು ನಿರ್ಜನ ಪ್ರದೇಶದಲ್ಲಿ ಅತ್ಯಾಚಾರವೆಸಗಿದ್ದರು. ಈ ವಿಷಯ ಯಾರ ಬಳಿಯಾದರು ಹೇಳಿದರೆ ಕೊಲ್ಲುವುದಾಗಿ ಬೆದರಿಸಿದ್ದರು ಎಂದು ಮಹಿಳೆ ಆರೋಪ ಮಾಡಿದ್ದಾರೆ.
ಶ್ರೀಧರ್ ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ತಾನು ತನ್ನ ಪತಿಯಿಂದ ಪ್ರತ್ಯೇಕವಾಗಿ ವಾಸಿಸುತ್ತಿದ್ದು, ವಿಚ್ಛೇದನ ಪಡೆಯುವಂತೆ ತನ್ನ ಮೇಲೆ ಒತ್ತಡ ಹೇರಿದ್ದಾರೆ. ತನ್ನ ಬೇಡಿಕೆಗಳನ್ನು ಈಡೇರಿಸದಿದ್ದರೆ ನನ್ನ ಮೂರು ವರ್ಷದ ಮಗನನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಮತ್ತು ಬಹಿರಂಗವಾಗಿ ಮಾತನಾಡಿದರೆ ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ ಎಂಬುವುದಾಗಿ ಮಹಿಳೆ ಹೇಳಿದ್ದಾರೆ.
ಆರೋಪ ನಿರಾಕರಿಸಿದ ಶಾಸಕ ಶ್ರೀಧರ್
ಮಹಿಳೆಯ ಆರೋಪ ಎಲ್ಲೆಡೆ ಚರ್ಚೆಯಾಗುತ್ತಿದ್ದಂತೆ ಶಾಸಕ ಶ್ರೀಧರ್ ವಿಡಿಯೋ ಮೂಲಕ ಪ್ರತಿಕ್ರಿಯಿಸಿದ್ದು, “ತಾನು ಸ್ವಚ್ಚ ಸಾರ್ವಜನಿಕ ಜೀವನ ನಡೆಸುತ್ತಿದ್ದೇನೆ. ತನ್ನ ಮೇಲಿನ ಆರೋಪಗಳೆಲ್ಲ ಸುಳ್ಳು. ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿರುವ ವಿಡಿಯೋಗಳು ಡೀಪ್ ಫೇಕ್, ಎಐ ಸೃಷ್ಟಿ” ಎಂದಿದ್ದಾರೆ.
ವೈಎಸ್‌ಆರ್ ಪಕ್ಷವು ಶಾಸಕನನ್ನು ತಕ್ಷಣ ಬಂಧಿಸಬೇಕೆಂದು ಒತ್ತಾಯಿಸಿದೆ ಮತ್ತು ಸ್ವತಂತ್ರ ಸಂಸ್ಥೆಯ ತನಿಖೆಗೆ ಒತ್ತಾಯಿಸಿದೆ.


