ದೆಹಲಿಯ ಕರ್ತವ್ಯ ಪಥದಲ್ಲಿ ನಡೆದ ಗಣರಾಜ್ಯೋತ್ಸವದ ಪರೇಡ್‌ನಲ್ಲಿ ಸಿಆರ್‌ಪಿಎಫ್ ಸಹಾಯಕ ಕಮಾಂಡೆಂಟ್ ಸಿಮ್ರಾನ್ ಬಾಲಾ ಅವರು ಅರೆಸೈನಿಕ ಪಡೆಯ ಸಂಪೂರ್ಣ ಪುರುಷರ ತುಕಡಿಯನ್ನು ಮುನ್ನಡೆಸುವ ಮೂಲಕ ಇತಿಹಾಸ ನಿರ್ಮಿಸಿದರು.
ಜಮ್ಮು ಕಾಶ್ಮೀರದ ರಾಜೌರಿ ಜಿಲ್ಲೆಯವರಾದ 26 ವರ್ಷದ ಸಿಮ್ರಾನ್ ಬಾಲಾ, ದೇಶದ ಅತಿದೊಡ್ಡ ಅರೆಸೈನಿಕ ಪಡೆಯಾದ ಸಿಆರ್‌ಪಿಎಫ್‌ನ 147 ಸಿಬ್ಬಂದಿಯ ತುಕಡಿಯನ್ನು ನೇತೃತ್ವ ವಹಿಸಿದರು. ಕರ್ತವ್ಯ ಪಥದಲ್ಲಿ ಫೋರ್ಸ್ ಬ್ಯಾಂಡ್ ನುಡಿಸಿದ ಸಿಆರ್‌ಪಿಎಫ್ ಹಾಡಿನ ‘ದೇಶ್ ಕೆ ಹಮ್ ಹೈ ರಕ್ಷಕ್’ ಟ್ಯೂನ್‌ನಲ್ಲಿ ಸಿಮ್ರಾನ್ ಅವರ ತಂಡವು ಸಾಗಿತು.
ಸಿಆರ್‌ಪಿಎಫ್‌ನ ಮಹಿಳಾ ಅಧಿಕಾರಿಗಳು ಈ ಹಿಂದೆ ವಿವಿಧ ಗಣರಾಜ್ಯೋತ್ಸವದ ತುಕಡಿಗಳನ್ನು ಮುನ್ನಡೆಸಿದ ನಿದರ್ಶನಗಳಿದ್ದರೂ, ಇದೇ ಮೊದಲ ಬಾರಿಗೆ ಮಹಿಳಾ ಅಧಿಕಾರಿಯೊಬ್ಬರು ಸಂಪೂರ್ಣ ಪುರುಷರ ತಂಡದ ನೇತೃತ್ವ ವಹಿಸಿದರು. ಇದು ಒಂದು ಐತಿಹಾಸಿಕ ಸಾಧನೆ ಮತ್ತು ಉತ್ತಮ ಬೆಳವಣಿಗೆ ಎಂದು ಪರಿಗಣಿಸಲಾಗಿದೆ.
ಒಂದು ವರ್ಷದ ಹಿಂದೆ ಸಿಆರ್‌ಪಿಎಫ್‌ಗೆ ಸೇರಿದ ಸಿಮ್ರಾನ್ ಅವರು, ದೇಶದ ಅತಿದೊಡ್ಡ ಅರೆಸೈನಿಕ ಪಡೆಯಲ್ಲಿ ಅಧಿಕಾರಿ ಶ್ರೇಣಿಯ ಹುದ್ದೆ ಪಡೆದ ರಾಜೌರಿಯ ಜಿಲ್ಲೆಯ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಆಕೆಯ ಗ್ರಾಮ ನೌಶೇರಾ ಭಾರತ-ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಿಂದ (ಎಲ್‌ಒಸಿ) ಕೇವಲ 11 ಕಿ.ಮೀ ದೂರದಲ್ಲಿದೆ. ಈ ಪ್ರದೇಶವು ಹಿಂದೆ ಹಲವು ಬಾರಿ ಗಡಿಯಾಚೆಗಿನ ಶೆಲ್ ದಾಳಿಗೆ ಸಾಕ್ಷಿಯಾಗಿದೆ.
“ಗಣರಾಜ್ಯೋತ್ಸವದಂದು ತುಕಡಿಯನ್ನು ಮುನ್ನಡೆಸಲು ನನಗೆ ನಿಜಕ್ಕೂ ಗೌರವವಿದೆ. ಈ ಅವಕಾಶ ನೀಡಿದ್ದಕ್ಕಾಗಿ ಸಿಆರ್‌ಪಿಎಫ್‌ಗೆ ನಾನು ಕೃತಜ್ಞಳಾಗಿದ್ದೇನೆ” ಎಂದು ಸಿಮ್ರಾನ್ ಅವರು ಕೆಲವು ದಿನಗಳ ಹಿಂದೆ ತಮ್ಮ ಪೆರೇಡ್ ಅಭ್ಯಾಸದ ಸಮಯದಲ್ಲಿ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.
ಸಿಮ್ರಾನ್, ಅವರ ಪೋಷಕರ ಮೂವರು ಮಕ್ಕಳಲ್ಲಿ ಕಿರಿಯವರು. ಅವರ ಅಜ್ಜ ಮತ್ತು ತಂದೆ ಕೂಡ ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಿದ್ದಾರೆ. ಸಿಮ್ರಾನ್ ಜಮ್ಮುವಿನ ಗಾಂಧಿನಗರದಲ್ಲಿರುವ ಸರ್ಕಾರಿ ಮಹಿಳಾ ಕಾಲೇಜಿನಿಂದ ರಾಜ್ಯಶಾಸ್ತ್ರದಲ್ಲಿ ಪದವಿ ಪಡೆದಿದ್ದಾರೆ.
ಏಪ್ರಿಲ್ 2025ರಲ್ಲಿ ಸಿಆರ್‌ಪಿಎಫ್ ಸೇರಿದ ಸಿಮ್ರಾನ್, ಛತ್ತೀಸ್‌ಗಢದ ‘ಬಸ್ತಾರಿಯಾ’ ಬೆಟಾಲಿಯನ್‌ನಲ್ಲಿ ನಕ್ಸಲ್ ವಿರೋಧಿ ಕಾರ್ಯಾಚರಣೆಗಳನ್ನು ಕೈಗೊಳ್ಳುವ ಕಾರ್ಯವನ್ನು ನಿರ್ವಹಿಸುತ್ತಿದ್ದಾರೆ.
ಸುಮಾರು 3.25 ಲಕ್ಷ ಸಿಬ್ಬಂದಿಯನ್ನು ಹೊಂದಿರುವ ಸಿಆರ್‌ಪಿಎಫ್ ದೇಶದ ಅತ್ಯುನ್ನತ ಆಂತರಿಕ ಭದ್ರತಾ ಪಡೆಯಾಗಿದ್ದು, ನಕ್ಸಲ್ ವಿರೋಧಿ ಕಾರ್ಯಾಚರಣೆಗಳು, ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ನಿಗ್ರಹ ದಾಳಿಗಳು ಮತ್ತು ಈಶಾನ್ಯದಲ್ಲಿ ದಂಗೆ ನಿಗ್ರಹ ಈ ಪಡೆಯ ಪ್ರಮುಖ ಕರ್ತವ್ಯಗಳಾಗಿವೆ.


