ಚಲಿಸುತ್ತಿದ್ದ ವ್ಯಾನ್‌ನಲ್ಲಿ 25 ವರ್ಷದ ಮಹಿಳೆ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ನಂತರ ಆಕೆಯನ್ನು ರಸ್ತೆಗೆ ಎಸೆದ ಆಘಾತಕಾರಿ ಘಟನೆ ಉತ್ತರ ಪ್ರದೇಶದ ಫರೀದಾಬಾದ್‌ನಲ್ಲಿ ನಡೆದಿದ್ದು, ಮಹಿಳೆಯ ತಲೆಗೆ ಗಂಭೀರ ಗಾಯಗಳಾಗಿವೆ ಎಂದು ಪೊಲೀಸರು ಬುಧವಾರ (ಡಿ.31) ತಿಳಿಸಿದ್ದಾರೆ.
ಸೋಮವಾರ (ಡಿ.29) ತಡರಾತ್ರಿ ಮನೆಗೆ ತೆರಳಲು ಮಹಿಳೆ ವಾಹನಕ್ಕಾಗಿ ಕಾಯುತ್ತಿದ್ದಾಗ ಇಬ್ಬರು ಆರೋಪಿಗಳು ಲಿಫ್ಟ್ ನೀಡುವುದಾಗಿ ಆಕೆಯನ್ನು ವ್ಯಾನ್‌ಗೆ ಹತ್ತಿಸಿಕೊಂಡಿದ್ದು, ನಂತರ ದೌರ್ಜನ್ಯವೆಸಗಿದ್ದಾರೆ ಎಂದು ಆಕೆಯ ಸಹೋದರಿ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.
ಇಬ್ಬರೂ ಆರೋಪಿಗಳನ್ನು ಬಂಧಿಸಲಾಗಿದೆ. ಈ ಪೈಕಿ ಒಬ್ಬ ಉತ್ತರ ಪ್ರದೇಶದವನು, ಮತ್ತೋರ್ವ ಮಧ್ಯಪ್ರದೇಶದವನು. ಇಬ್ಬರೂ ಫರೀದಾಬಾದ್‌ನಲ್ಲಿ ವಾಸಿಸುತ್ತಿದ್ದರು ಪೊಲೀಸರು ತಿಳಿಸಿದ್ದಾರೆ.
ವೈವಾಹಿಕ ಭಿನ್ನಾಭಿಪ್ರಾಯದಿಂದಾಗಿ ತನ್ನ ಹೆತ್ತವರ ಮನೆಯಲ್ಲಿದ್ದ ಮಹಿಳೆ ಸೋಮವಾರ ಸಂಜೆ ಸೆಕ್ಟರ್ 23ರಲ್ಲಿರುವ ತನ್ನ ಸ್ನೇಹಿತರ ಮನೆಗೆ ಹೋಗಿದ್ದರು. ತಡರಾತ್ರಿ ಮನೆಗೆ ಹಿಂತಿರುಗುವಾಗ ಘಟನೆ ನಡೆದಿದೆ ಎಂದು ಪೊಲೀಸರು ಹೇಳಿದ್ದಾರೆ.
ಆರೋಪಿಗಳು ಮಹಿಳೆಯನ್ನು ವ್ಯಾನ್‌ಗೆ ಹತ್ತಿಸಿಕೊಂಡ ಬಳಿಕ, ಆಕೆಯನ್ನು ಹೇಳಿದ ಜಾಗಕ್ಕೆ ಕರೆದೊಯ್ಯುವ ಬದಲು, ಗುರುಗ್ರಾಮದ ಕಡೆಗೆ ಕಾರು ಚಲಾಯಿಸಿ, ವ್ಯಾನ್‌ನೊಳಗೆ ಆಕೆಯ ಮೇಲೆ ಅತ್ಯಾಚಾರ ಎಸಗಿದ್ದಾರೆ.
ಯುವತಿಯನ್ನು ವ್ಯಾನ್‌ನಲ್ಲೇ ಸುತ್ತಾಡಿಸಿ ಅತ್ಯಾಚಾರವೆಸಗಿ, ಬೆಳಗಿನ ಜಾವ 3 ಗಂಟೆ ಸುಮಾರಿಗೆ ರಾಜಾ ಚೌಕ್ ಬಳಿ ವ್ಯಾನ್‌ನಿಂದ ಹೊರಗೆ ಎಸೆದಿದ್ದಾರೆ. ಇದರಿಂದ ಆಕೆಗೆ ಗಂಭೀರ ಗಾಯಗಳಾಗಿವೆ. ರಸ್ತೆಗೆ ಬಿದ್ದ ಯುವತಿ ತನ್ನ ಸಹೋದರಿಗೆ ಕರೆ ಮಾಡಿ ಮಾಹಿತಿ ನೀಡಿದ್ದು, ಅವರು ಸ್ಥಳಕ್ಕೆ ತಲುಪಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
“ನಾವು ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದೇವೆ. ಅವರನ್ನು ಹೆಚ್ಚಿನ ವಿಚಾರಣೆಗೆ ಶೀಘ್ರದಲ್ಲೇ ಒಳಪಡಿಸಲಾಗುವುದು ಎಂದು ಫರೀದಾಬಾದ್ ಪೊಲೀಸ್ ವಕ್ತಾರ ಯಶ್ಪಾಲ್ ಯಾದವ್ ಹೇಳಿದ್ದಾರೆ.


