ಮುಂಬೈನಲ್ಲಿ ಭಾನುವಾರ ನಡೆದ ವರ್ಲಿ ಹಿಟ್ ಅಂಡ್ ರನ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಪ್ರಮುಖ ಆರೋಪಿ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿದ್ದಾರೆ. ಪ್ರಮುಖ ಆರೋಪಿಯನ್ನು ಮಿಹಿರ್ ಶಾ ಎಂದು ಗುರುತಿಸಲಾಗಿದೆ. ಬಿಎಂಡಬ್ಲ್ಯು ಕಾರು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಪತಿಯೊಂದಿಗೆ ಪ್ರಯಾಣಿಸುತ್ತಿದ್ದ ಮೀನು ವ್ಯಾಪಾರ ಮಾಡುತ್ತಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ನಡೆದಿದೆ. ಘಟನೆಯ ಪ್ರಮುಖ ಆರೋಪಿ, ಶಿವಸೇನಾ ನಾಯಕನ ಮಗ ಮಿಹಿರ್ ಶಾ ತಲೆಮರೆಸಿಕೊಂಡಿದ್ದು, ಆರೋಪಿಗಳ ಪತ್ತೆಗೆ ಪೊಲೀಸರು ಒಟ್ಟು ಆರು ತಂಡಗಳನ್ನು ರಚಿಸಿದ್ದಾರೆ.
ಮೃತ ಮಹಿಳೆಯನ್ನು ವರ್ಲಿ ಕೋಳಿವಾಡ ನಿವಾಸಿ ಕಾವೇರಿ ನಖ್ವಾ (45) ಎಂದು ಗುರುತಿಸಲಾಗಿದೆ. ಇದೇ ವೇಳೆ ಮೃತಳ ಪತಿಗೆ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಭಾನುವಾರ ಮುಂಜಾನೆ, ಬಾಂದ್ರಾ ಪ್ರದೇಶದಿಂದ ಕಾರನ್ನು ವಶಪಡಿಸಿಕೊಳ್ಳಲಾಗಿದೆ ಎಂದು ವರ್ಲಿ ಪೊಲೀಸರು ತಿಳಿಸಿದ್ದಾರೆ. ಮುಂಬೈನ ಬಾಂದ್ರಾ ಪ್ರದೇಶದಿಂದ ವರ್ಲಿ ಪೊಲೀಸರು ಬಿಎಂಡಬ್ಲ್ಯು ಕಾರನ್ನು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸರು ಹೇಳಿದ್ದೇನು?
ಬೈಕ್ ನಲ್ಲಿ ತೆರಳುತ್ತಿದ್ದ ಇಬ್ಬರ ಮೇಲೆ ಬಿಎಂಡಬ್ಲ್ಯು ಕಾರು ಹರಿದಿದೆ ಎಂದು ಮುಂಬೈ ಪೊಲೀಸರ ಹೇಳಿಕೆ ತಿಳಿಸಿದೆ. ಅದರಲ್ಲಿ, “ಈ ಘಟನೆಯಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ ಮತ್ತು ಇನ್ನೊಬ್ಬ ವ್ಯಕ್ತಿ ಗಾಯಗೊಂಡಿದ್ದಾರೆ. ಭಾನುವಾರ ಮುಂಜಾನೆ 5:30 ಕ್ಕೆ ದಂಪತಿಗಳು ಬೈಕಿನಲ್ಲಿ ಸವಾರಿ ಮಾಡುತ್ತಿದ್ದಾಗ ವರ್ಲಿಯ ಅಟ್ರಿಯಾ ಮಾಲ್ ಮುಂದೆ ಹಾದು ಹೋಗುತ್ತಿದ್ದಾಗ ಈ ಘಟನೆ ನಡೆದಿದೆ” ಎಂದು ಹೇಳಿದ್ದಾರೆ.
ಪ್ರಮುಖ ಆರೋಪಿಯ ತಂದೆಯನ್ನು ಬಂಧಿಸಿದ ಪೊಲೀಸರು
ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯ ತಂದೆ ರಾಜೇಶ್ ಶಾ ಮತ್ತು ಇನ್ನೊಬ್ಬ ವ್ಯಕ್ತಿ ರಾಜ್ ರಿಷಿ ರಾಜೇಂದ್ರ ಸಿಂಗ್ ವಿದಾವತ್ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಇಬ್ಬರನ್ನೂ ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು. ಮೂಲಗಳಿಂದ ಬಂದಿರುವ ಮಾಹಿತಿಯ ಪ್ರಕಾರ, ಪೊಲೀಸರಿಗೆ ಸಹಕರಿಸದ ಕಾರಣಕ್ಕಾಗಿ ಮತ್ತು ಇತರ ಸೆಕ್ಷನ್‌ಗಳ ಅಡಿಯಲ್ಲಿ ಆರೋಪಿಗಳಿಬ್ಬರನ್ನೂ ಬಂಧಿಸಲಾಗಿದ್ದು, ಸೋಮವಾರ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಹೇಳಲಾಗುತ್ತಿದೆ.
ಐಷಾರಾಮಿ ಕಾರು ಮಹಾರಾಷ್ಟ್ರದ ಪಾಲ್ಘರ್ ಮೂಲದ ರಾಜಕೀಯ ಪಕ್ಷದ ನಾಯಕನಿಗೆ ಸೇರಿದ್ದು ಎಂದು ಪೊಲೀಸರು ಒತ್ತಿ ಹೇಳಿದರು. ಹಿಟ್ ಅಂಡ್ ರನ್ ಪ್ರಕರಣದ ಹಿಂದಿರುವ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಭಾನುವಾರ ಭರವಸೆ ನೀಡಿದ್ದಾರೆ. ಮುಂಬೈ ಹಿಟ್ ಅಂಡ್ ರನ್ ಪ್ರಕರಣ ನಡೆದಿರುವುದು ಅತ್ಯಂತ ದುರದೃಷ್ಟಕರ, ನಾನು ಪೊಲೀಸರೊಂದಿಗೆ ಮಾತುಕತೆ ನಡೆಸಿದ್ದೇನೆ, ತಪ್ಪಿತಸ್ಥರು ಯಾರೇ ಇದ್ದರೂ ಅವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು.. ಎಲ್ಲರನ್ನೂ ಸಮಾನವಾಗಿ ಕಾಣುತ್ತೇವೆ, ಏನೇ ನಡೆದರೂ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಸಿಎಂ ಹೇಳಿದ್ದಾರೆ.
ಇದನ್ನೂ ಓದಿ; ನೀಟ್ ವಿವಾದ: ಇಂದು ಪರೀಕ್ಷಾ ಅಕ್ರಮಗಳಿಗೆ ಸಂಬಂಧಿಸಿದ 30ಕ್ಕೂ ಹೆಚ್ಚು ಅರ್ಜಿಗಳ ವಿಚಾರಣೆ


