Homeಎಕಾನಮಿ11.68 ಲಕ್ಷ ಕೋಟಿ ರೈಟ್ ಆಫ್ - 20 ಲಕ್ಷ ಕೋಟಿ NPA: ನಮ್ಮೆಲ್ಲರ ಹಣ...

11.68 ಲಕ್ಷ ಕೋಟಿ ರೈಟ್ ಆಫ್ – 20 ಲಕ್ಷ ಕೋಟಿ NPA: ನಮ್ಮೆಲ್ಲರ ಹಣ ಸೋರಿ ಹೋಗುತ್ತಿರುವುದು ಹೀಗೆ…

ಗುಜರಾತಿನ ಉದ್ಯಮಿ ರಿಷಿ ಅಗರ್ ವಾಲ್ 28 ಬ್ಯಾಂಕುಗಳಿಂದ 22,842 ಕೋಟಿ ಸಾಲ ಪಡೆದು ಮರುಪಾವತಿ ಮಾಡದೆ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.

- Advertisement -
- Advertisement -

ಕಳೆದ ಹತ್ತು ವರ್ಷಗಳಲ್ಲಿ 11,68,095 ಕೋಟಿ ವಸೂಲಾಗದ ಸಾಲವನ್ನು (NPA) ರೈಟ್ ಆಫ್ ಮಾಡಲಾಗಿದೆ. ಅದರಲ್ಲಿ ಮೋದಿ ಅಧಿಕಾರಕ್ಕೆ ಬಂದ ನಂತರದ ಏಳು ವರ್ಷಗಳಲ್ಲಿಯೇ 10.7 ಲಕ್ಷ ಕೋಟಿ ರೈಟ್ ಆಫ್ (write off) ಮಾಡಲಾಗಿದೆ. 2020-21ರ ಆರ್ಥಿಕ ವರ್ಷದಲ್ಲಿ 2,02,781 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ. ಮಾಹಿತಿ ಹಕ್ಕು ಕಾಯ್ದೆಯಡಿ ಸಲ್ಲಿಸಿದ ಅರ್ಜಿಗೆ ಆರ್ ಬಿ ಐ ಈ ಮಾಹಿತಿಯನ್ನು ನೀಡಿದೆ. ಈ ಮೊತ್ತ ಅಂದಾಜು 110.79 ಲಕ್ಷ ಕೋಟಿ ಮೊತ್ತದ ಬ್ಯಾಂಕ್ ಮುಂಗಡದ (non-food bank advances) ಶೇಕಡಾ 10.54ರಷ್ಟಿದೆ.

2018ರ ಮಾರ್ಚ್ ವೇಳೆ ಅತೀ ಹೆಚ್ಚು NPA 10.36 ಲಕ್ಷ ಕೋಟಿ ಇತ್ತು. ಲೋಕಸಭೆಯಲ್ಲಿ ಸರ್ಕಾರ ನೀಡಿದ ಮಾಹಿತಿಯಂತೆ 2021ರ ಮಾರ್ಚ್ ವೇಳೆಯಲ್ಲಿ ಎನ್ ಪಿ ಎ ಪ್ರಮಾಣ 8.35 ಲಕ್ಷ ಕೋಟಿಗೆ ಇಳಿಯಿತು. ಅಂದರೆ 2018 ಮತ್ತು 2021ರ ಮೂರು ವರ್ಷಗಳ ಅವಧಿಯಲ್ಲಿ 2 ಲಕ್ಷ ಕೋಟಿ ಎನ್ ಪಿ ಎ ಪ್ರಮಾಣ ಕಡಿಮೆಯಾಯಿತು. ಆದರೆ, ಈ ಅವಧಿಯಲ್ಲಿ ರೈಟ್ ಆಫ್ ಮಾಡಿದ ಸಾಲದ ಮೊತ್ತ 6,59,639 ಕೋಟಿಯಾಗಿದೆ!. ಅಂದರೆ ಈ ಮೂರು ವರ್ಷಗಳಲ್ಲಿ 4,59,639 ಕೋಟಿ ಸಾಲ ಹೊಸದಾಗಿ ಎನ್ ಪಿ ಎ ಲೆಕ್ಕಕ್ಕೆ ಸೇರಿಸಲಾಗಿದೆ. ಇದುವರೆಗೆ ರೈಟ್ ಆಫ್ ಮತ್ತು ಸಾಲ ಮನ್ನಾ ಮಾಡಿರುವುದೂ ಸೇರಿದಂತೆ ಒಟ್ಟಾರೆಯಾಗಿ ವಸೂಲಾಗದ ಸಾಲದ ಪ್ರಮಾಣ 20 ಲಕ್ಷ ಕೋಟಿ. ಅನಧಿಕೃತ ವರದಿಗಳ ಪ್ರಕಾರ ಈ ಮೊತ್ತ ಇನ್ನೂ ಹೆಚ್ಚು. ಇಷ್ಟು ದೊಡ್ಡ ಮೊತ್ತದ ಸಾರ್ವಜನಿಕರ ಹಣವನ್ನು ದೊಡ್ಡ ಉದ್ಯಮಿಗಳು ದೋಚಿದ್ದಾರೆ.

(ಮಾಹಿತಿ -ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಇಂಡಿಯನ್ ಎಕ್ಸ್‌ಪ್ರೆಸ್)

ರಿಷಿ ಅಗರ್ ವಾಲ್ – 22,842 ಕೋಟಿ ವಂಚನೆ:

ಇತ್ತೀಚೆಗೆ ಮತ್ತೊಂದು ಬ್ಯಾಂಕ್ ವಂಚನೆಯ ದೊಡ್ಡ ಪ್ರಕರಣವೊಂದು ಬೆಳಕಿಗೆ ಬಂದಿದೆ. ಹಡಗು ನಿರ್ಮಾಣದ ಬೃಹತ್ ಸಂಸ್ಥೆ ಎಜಿಬಿ ಶಿಪ್ ಯಾರ್ಡ್ 28 ಬ್ಯಾಂಕುಗಳಿಂದ ಪಡೆದ ರೂ 22,842 ಕೋಟಿ ಸಾಲ ಮರುಪಾವತಿ ಮಾಡದೆ ವಂಚಿಸಿದೆ. ಗುಜರಾತಿನ ಉದ್ಯಮಿ ರಿಷಿ ಕಮಲೇಸ್ ಅಗರ್ ವಾಲ್ ಈ ಕಂಪನಿಯ ಮಾಲೀಕ. ಎಜಿಬಿ ಶಿಪ್ ಯಾರ್ಡ್ ಕಂಪನಿ ನಿರಂತರವಾಗಿ ನಷ್ಟ ಅನುಭವಿಸಿದ ಕಾರಣ ನೀಡುತ್ತಿದೆಯಾದರೂ, ಈ ಕಂಪನಿ ಬ್ಯಾಂಕುಗಳಿಂದ ಪಡೆದ ಸಾಲವನ್ನು ವಿದೇಶಗಳಲ್ಲಿ ವಿವಿಧ ಕಂಪನಿಗಳಲ್ಲಿ ಹೂಡಿಕೆ ಮಾಡಿದೆ ಎಂಬ ಆರೋಪವೂ ಇದೆ. ಬ್ಯಾಂಕುಗಳಿಂದ ಪಡೆದ ಸಾಲವನ್ನು ಆಸ್ತಿ ಖರೀದಿಸಲು ಬಳಕೆ ಮಾಡಿಕೊಂಡಿದೆ ಎಂಬ ಆರೋಪವೂ ಇದೆ. ಪ್ರಕರಣದ ತನಿಖೆ ಆರಂಭಿಸಿರುವ ಸಿಬಿಐ, ಕಂಪನಿಯ ಅಂದಿನ ವ್ಯವಸ್ಥಾಪಕ ನಿರ್ದೇಶಕ ರಿಷಿ ಕಮಲೇಸ್ ಅಗರ್ ವಾಲ್ ಸೇರಿದಂತೆ ಸಂಸ್ಥೆಯ ಎಲ್ಲ ನಿರ್ದೇಶಕರನ್ನು ತನಿಖೆಗೆ ಒಳಪಡಿಸಿದೆ.

2016ರಲ್ಲಿ ಈ ಕಂಪನಿಯ ಸಾಲವನ್ನು ವಸೂಲಾಗದ ಸಾಲದ (ಎನ್ ಪಿ ಎ) ಲೆಕ್ಕಕ್ಕೆ ಸೇರಿಸಲಾಯ್ತು. ಕಂಪನಿಯ ದಾಖಲೆಗಳ ಪರಿಶೀಲನೆ ನಂತರ 2017ರಲ್ಲಿ ಇದೊಂದು ವಂಚನೆ ಎಂದು ಸಾಲ ಕೊಟ್ಟ 28 ಬ್ಯಾಂಕುಗಳು ಘೋಷಣೆ ಮಾಡಿದವು. 2019ರಲ್ಲಿ ಸಿಬಿಐ ನಲ್ಲಿ ಮೊದಲ ದೂರು ದಾಖಲಾಯಿತು. ಅಗತ್ಯವಾದ ದಾಖಲೆ ಸಲ್ಲಿಸದಿರುವ ಬಗ್ಗೆ ಆಕ್ಷೇಪಣೆ ವ್ಯಕ್ತಪಡಿಸಿದ ಸಿಬಿಐ ಹೆಚ್ಚಿನ ವಿವರ ಸಲ್ಲಿಸುವಂತೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾಗೆ ಸೂಚಿಸಿತು. 2020ರ ಆಗಸ್ಟ್ ತಿಂಗಳಿನಲ್ಲಿ ಹೆಚ್ಚಿನ ವಿವರಗಳೊಂದಿಗೆ ಎಸ್ ಬಿ ಐ ಎರಡನೆಯ ದೂರು ದಾಖಲಿಸಿತು. ಪ್ರಕರಣವನ್ನು ಸಂಪೂರ್ಣ ಪರಿಶೀಲಿಸಿದ ಬಳಿಕ 2022ರ ಫೆಬ್ರವರಿ 7ರಂದು ಎಫ್ ಐ ಆರ್ ದಾಖಲಾಯಿತು. ಈ ಪ್ರಕರಣದಲ್ಲಿ ಸಿಬಿಐ ಗೆ ದೂರು ನೀಡಲು ಎಸ್ ಬಿ ಐ ವಿಳಂಬ ಮಾಡಿರುವುದು ಮತ್ತು ಸಿಬಿಐ ನ ನಿಧಾನಗತಿ ಸ್ಪಷ್ಟವಾಗಿದೆ.

ಸುಸ್ತಿದಾರ ಕಂಪನಿಗಳ ಮಾಹಿತಿ ನೀಡಲು ನಕಾರ

ಸರ್ಕಾರಿ ಸ್ವಾಮ್ಯದ ಬ್ಯಾಂಕುಗಳು ಕಳೆದ ಐದು ವರ್ಷಗಳಲ್ಲಿ ರೈಟ್ ಆಫ್ ಮಾಡಿದ ರೂ 500 ಕೋಟಿಗಿಂತ ಹೆಚ್ಚು ವಂಚನೆ ಮಾಡಿರುವ ಸುಸ್ತಿದಾರ ಕಂಪನಿಗಳ ಪಟ್ಟಿ ಕೊಡುವಂತೆ ಪೆಬ್ರವರಿ 15, 2016ರಂದು ಸುಪ್ರೀಕೋರ್ಟ್ ಆರ್ ಬಿಐಗೆ ಸೂಚಿಸಿತ್ತು. ಸಾರ್ವಜನಿಕ ಹಿತಾಸಕ್ತಿಯ ಅರ್ಜಿಯ ಮೇಲೆ (Center for public interest litigation) ನ್ಯಾಯಾಲಯದಲ್ಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಾದ ಮಂಡಿಸಿದ ವಕೀಲರಾದ ಪ್ರಶಾಂತ್ ಭೂಷಣ್ ಅವರು 2015ರಲ್ಲಿ 40,000 ಕೋಟಿ ಸಾಲ ರೈಟ್ ಆಫ್ ಮಾಡಲಾಗಿದೆ ಆರೋಪಿಸಿದ್ದರು.

“ಪ್ರವರ್ತಕರು ಆನಂದಿಸುತ್ತಿರುವಾಗ ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಸೇರಿದಂತೆ ಸಾರ್ವಜನಿಕ ಹಣಕಾಸು ಸಂಸ್ಥೆಗೆ ಸಾವಿರಾರು ಕೋಟಿ ಒಡೆತನವಿದೆ” ಎಂದು ಸುಪ್ರೀಂ ಕೋರ್ಟಿನ ಅಂದಿನ ಮುಖ್ಯ ನ್ಯಾಯಾಧೀಶರಾಗಿದ್ದ ಟಿ ಎಸ್ ಠಾಕೂರ್ ಹೇಳಿದ್ದರು. ನ್ಯಾಯಮೂರ್ತಿಗಳಾದ ಯು ಯು ಲಲಿತ್ ಮತ್ತು ಆರ್ ಭಾನುಮತಿ ಅವರನ್ನೊಳಗೊಂಡ ನ್ಯಾಯಪೀಠ, ‘ಸರ್ಕಾರಿ ಸ್ವಾಮ್ಯದ ಬ್ಯಾಂಕ್‌ಗಳು ಮತ್ತು ಹಣಕಾಸು ಸಂಸ್ಥೆಗಳು ಸರಿಯಾದ ಮಾರ್ಗಸೂಚಿಗಳಿಲ್ಲದೆ ಹೇಗೆ ದೊಡ್ಡ ಪ್ರಮಾಣದ ಸಾಲಗಳನ್ನು ನೀಡುತ್ತಿವೆ ಮತ್ತು ಅವುಗಳನ್ನು ವಸೂಲಿ ಮಾಡಲು ಸಾಕಷ್ಟು ಕಾರ್ಯವಿಧಾನವಿದೆಯೇ’ ಎಂದು ತಿಳಿಯಲು ಬಯಸಿತು. ಈ ಸಂಬಂಧ ನ್ಯಾಯಾಲಯಕ್ಕೆ ‘ಉದ್ದೇಶ ಪೂರ್ವಕವಾಗಿ’ ವಂಚನೆ ಮಾಡಿದ ಕಂಪನಿಗಳ ಹೆಸರುಗಳುಳ್ಳ ಪ್ರಮಾಣ ಪತ್ರವನ್ನು ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಲು ಆರು ವಾರಗಳ ಕಾಲಾವಕಾಶ ಕೊಟ್ಟಿತ್ತು.

ಜುಲೈ 17,2017ರಂದು ಮುಖ್ಯ ನ್ಯಾಯಾಧೀಶರಾಗಿದ್ದ ಜೆ ಎಸ್ ಖೇಹರ್, ನ್ಯಾಯಾಧೀಶ ಡಿವೈ ಚಂದ್ರಚೂಡ್ ಅವರಿದ್ದ ಪೀಠದಲ್ಲಿ ನಡೆದ ವಿಚಾರಣೆ ಸಂದರ್ಭದಲ್ಲಿ ಜುಲೈ 24ರ ಒಳಗೆ ಡಿಫಾಲ್ಟರ್ ಕಂಪನಿಗಳ ಪಟ್ಟಿ ಕೊಡುವಂತೆ ಮತ್ತೆ ಒಂದು ವಾರದ ಗಡುವು ನೀಡಿತು. ಆ ಸಮಯದಲ್ಲಿ ಎನ್ ಪಿ ಎ ಪ್ರಮಾಣ ಎಂಟು ಲಕ್ಷ ಕೋಟಿ ದಾಟಿತ್ತು.

“ಸಾರ್ವಜನಿಕರು, ಠೇವಣಿದಾರರು, ದೇಶದ ಆರ್ಥಿಕತೆ ಮತ್ತು ಬ್ಯಾಂಕಿಂಗ್ ವಲಯದ ಹಿತಾಸಕ್ತಿಗಳನ್ನು ಎತ್ತಿಹಿಡಿಯಲು ಆರ್‌ಬಿಐ ಶಾಸನಬದ್ಧ ಕರ್ತವ್ಯವನ್ನು ಹೊಂದಿದೆ,” ಎಂದು ಸುಸ್ತಿದಾರರ ಪಟ್ಟಿಯನ್ನು ಬಹಿರಂಗಪಡಿಸುವಂತೆ ಆರ್‌ಬಿಐಗೆ ನಿರ್ದೇಶಿಸುವಾಗ ಅಂದು ನ್ಯಾಯಾಲಯ ಹೇಳಿತ್ತು.

“ಆರ್‌ಟಿಐ ಕಾಯ್ದೆಯ ನಿಬಂಧನೆಗಳನ್ನು ಅನುಸರಿಸಲು ಆರ್‌ಬಿಐ ಕರ್ತವ್ಯ ಬದ್ಧವಾಗಿದೆ. ಉದ್ದೇಶ ಪೂರ್ವಕ ಸುಸ್ತಿದಾರ ಕಂಪನಿಗಳ ಹೆಸರುಗಳನ್ನು ಬಹಿರಂಗ ಪಡಿಸುವುದರಿಂದ ದೇಶದ ಆರ್ಥಿಕ ಹಿತಾಸಕ್ತಿಗಳಿಗೆ ಧಕ್ಕೆ ತರುತ್ತದೆ ಎಂಬ ಆರ್‌ಬಿಐನ ಆಧಾರರಹಿತ ವಾದವು ಸಂಪೂರ್ಣವಾಗಿ ತಪ್ಪು ಕಲ್ಪನೆಯಾಗಿದೆ” ಎಂದು ನ್ಯಾಯಾಲಯ ಹೇಳಿತ್ತು. ಇಷ್ಟಾದರೂ ಆರ್ ಬಿ ಐ ದೊಡ್ಡ ಪ್ರಮಾಣದಲ್ಲಿ ವಂಚನೆ ಮಾಡಿದ ಉದ್ಯಮಿಗಳ ಪಟ್ಟಿಯನ್ನು ಕೊಡಲಿಲ್ಲ.

ರೈಟ್ ಆಫ್ ಮಾತ್ರ. ಸಾಲ ಮನ್ನಾ ಅಲ್ಲ:

‘ಇದು ರೈಟ್ ಆಫ್ ಮಾತ್ರ, ಸಾಲ ಮನ್ನಾ ಅಲ್ಲ. ವಸೂಲಾಗದ ಸಾಲದ ಲೆಕ್ಕದ ಪುಸ್ತಕದಲ್ಲಿ ಕೆಲವನ್ನು ಅಳಿಸಿ ಹಾಕಲಾಗುತ್ತದಷ್ಟೆ. ಇದನ್ನು ವಸೂಲಿ ಮಾಡುವ ಪ್ರಕ್ರಿಯೆ ಮುಂದುವರಿಯುತ್ತದೆ. ರೈಟ್ ಆಫ್ ಮಾಡಿದ ಮಾತ್ರಕ್ಕೆ ಅದು ಮನ್ನಾ ಎಂದು ಹೇಳುವುದು ಸರಿಯಲ್ಲ ಎಂದು ಕೇಂದ್ರದ ಸಚಿವರು ಮತ್ತು ಬಿಜೆಪಿ ನಾಯಕರು ಮತ್ತು ಆರ್ ಬಿ ಐ ಅಧಿಕಾರಿಗಳು ವಾದಿಸುತ್ತಾರೆ. ಬ್ಯಾಂಕುಗಳಲ್ಲಿನ ಸಾರ್ವಜನಿಕರ ಸಂಪತ್ತನ್ನು ಉಳಿಸುವ ಪ್ರಾಮಾಣಿಕತೆ ಆರ್ ಬಿ ಐ ಮತ್ತು ಕೇಂದ್ರ ಸರ್ಕಾರಕ್ಕೆ ಇದ್ದರೆ ‘ರೈಟ್ ಆಫ್’ ಮಾಡುವುದೇಕೆ ಎಂಬ ಪ್ರಶ್ನೆ ಮೂಡುತ್ತದೆ…..

ಇವೆಲ್ಲವೂ ಹಿಂದಿನ ಸರ್ಕಾರದ ಅವಧಿಯಲ್ಲೇ ಪಡೆದ ಸಾಲಗಳಾಗಿದ್ದವು. ಈಗ ಅವು ಎನ್.ಪಿ.ಎ. ಆಗಿ ಪರಿವರ್ತನೆಯಾಗುತ್ತಿವೆ. ಅದರಲ್ಲಿ ಮೋದಿ ಸರ್ಕಾರದ ತಪ್ಪೇನಿಲ್ಲ. ಮೋದಿ ಅಧಿಕಾರಕ್ಕೆ ಬಂದ ನಂತರ ಹಗರಣಗಳನ್ನು ಪತ್ತೆಮಾಡಿ ಬೆಳಕಿಗೆ ತರುತ್ತಿದ್ದಾರೆ ಎಂದು ಬಿಜೆಪಿ ಬೆಂಬಲಿಗರು ಮೋದಿಯವರನ್ನು ಬಣ್ಣಿಸತೊಡಗಿದ್ದಾರೆ. ರಿಷಿ ಅಗರ್ ವಾಲ್ ವಂಚನೆ ಪ್ರಕರಣದಲ್ಲಿಯೂ ಇದೇ ವಾದವನ್ನು ಮಂಡಿಸುತ್ತಾರೆ. ಆದರೆ, ಈ ಪ್ರಮಾಣದ ಸಾಲ ಪಡೆದು ಮರುಪಾವತಿ ಮಾಡದಿರುವ ವಂಚಕರಿಗೆ ಸಾಲ ಕೊಡುವುದನ್ನು ಸ್ಥಗಿತಗೊಳಿಸಿದ ಮತ್ತು ಅಂತಹ ಎಲ್ಲರಿಂದ ಸಾಲ ವಸೂಲಿಗೆ ಕೈಗೊಂಡ ಕ್ರಮಗಳ ಬಗ್ಗೆ ಇವರು ಏನನ್ನೂ ಹೇಳುವುದಿಲ್ಲ.

ವಸೂಲಾಗದ ಸಾಲದ ಪ್ರಮಾಣ ನಿರಂತರವಾಗಿ ಏರುತ್ತಲೇ ಇದೆ.

2014 ರಲ್ಲಿ ಐದು ಲಕ್ಷ ಕೋಟಿ ಇದ್ದ NPA ಪ್ರಮಾಣ ಇಂದು ಒಂಬತ್ತು ಲಕ್ಷ ಕೋಟಿಗೆ ಏರಿಕೆಯಾಗಿದೆ. ಕಳೆದ ಏಳು ವರ್ಷಗಳಲ್ಲಿ 10.5 ಲಕ್ಷ ಕೋಟಿ ಸಾಲವನ್ನು ರೈಟ್ ಆಫ್ ಮಾಡಿದ ನಂತರವೂ 8.35 ಲಕ್ಷ ಕೋಟಿ ಎನ್ ಪಿ ಎ ಇದೆ.

‘ಉದ್ಯಮಿಗಳ ಕೋಟ್ಯಂತರ ರೂಪಾಯಿ ಸಾಲ ಮನ್ನಾ ಮಾಡಿಲ್ಲ. ಎನ್ ಪಿ ಎ ಪುಸ್ತಕದಿಂದ ಸಾಲದ ಲೆಕ್ಕ ಅಳಿಸಿಹಾಕಲಾಗಿದೆ (ರೈಟ್ ಆಫ್) ಅಷ್ಟೆ. ಅದನ್ನು ಮತ್ತೊಂದು ಪುಸ್ತಕದಲ್ಲಿ ಬರೆಯಲಾಗುತ್ತದೆ’ ಎಂದು ಹಣಕಾಸು ಸಚಿವ ಅರುಣ್ ಜೇಟ್ಲಿ ಅವರೂ ಒಮ್ಮೆ ಹೇಳಿಕೆ ನೀಡಿದ್ದರು. ಯಾವುದೇ ರೂಪದಲ್ಲಿ ಮರೆಮಾಚಿದರೂ ಇದು ಸಾಲ ಮನ್ನಾ ಮಾಡಿದಂತೆಯೇ ಆಗುತ್ತದೆ. ಒಮ್ಮೆ ಯಾವುದಾದರೂ ಒಂದು ಬ್ಯಾಂಕಿನಲ್ಲಿ ಸಾಲ ಪಡೆದು ಮರುಪಾವತಿಸದೇ ಹೋದ ವ್ಯಕ್ತಿ ಅಥವಾ ಸಂಸ್ಥೆ ಸಾಲ ಪಡೆಯಲು ಅನರ್ಹ ಎಂದೇ ಅರ್ಥ. ಅಂತಹವರಿಗೆ ಯಾವುದೇ ಬ್ಯಾಂಕಿನಲ್ಲಿ ಸಾಲ ಕೊಡುವಂತಿಲ್ಲ. ಆದರೂ, ಅಂತಹ ಉದ್ಯಮಿಗಳಿಗೆ ಬ್ಯಾಂಕುಗಳು ಮತ್ತೆ ಮತ್ತೆ ಸಾಲ ಕೊಡುತ್ತಲೇ ಇರುತ್ತವೆ. ಮತ್ತೆ ಆ ಸಾಲವನ್ನು ಎನ್ ಪಿ ಎ (ವಸೂಲಾಗದ ಸಾಲದ ಪ್ರಮಾಣ) ಲೆಕ್ಕಕ್ಕೆ ಸೇರಿಸುತ್ತಾರೆ. ನಂತರ ಅದನ್ನು ರೈಟ್ ಆಫ್ ಮಾಡುವ ಮೂಲಕ ಸಾಲದ ಖಾತೆಯನ್ನೇ ರದ್ದುಪಡಿಸುತ್ತಾರೆ. ನಂತರ ಆ ವಸೂಲಾಗದ ಸಾಲವನ್ನು ‘ವಸೂಲಾತಿ ಬಾಕಿ ಇರುವ ಮುಂಗಡ’ (AUCA) ಖಾತೆಗೆ ಬದಲಾಯಿಸುತ್ತಾರೆ. ಈ ಎಲ್ಲಾ ಕ್ರಿಯೆಗಳಲ್ಲಿ ಎನ್ ಪಿ ಎ ಮೊತ್ತ ಕಡಿಮೆ ತೋರಿಸುವ ಉದ್ದೇಶ ಇದೆ. ಅಂದರೆ ವಸೂಲಾಗದ ಸಾಲದ ಮೊತ್ತವನ್ನು ಮರೆಮಾಚಲಾಗುತ್ತದೆ. ಸಾಲ ಪಡೆದ ಉದ್ಯಮಿಯೊಬ್ಬ ಯಾವ ಉದ್ಯಮದ ಹೆಸರಿನಲ್ಲಿ ಸಾಲ ಪಡೆದಿರುತ್ತಾನೋ, ಆ ಉದ್ಯಮ ನಷ್ಟಕ್ಕೊಳ್ಳಪಟ್ಟರೆ, (ಹಲವು ಬಾರಿ ಉದ್ದೇಶ ಪೂರ್ವಕವಾಗಿ ಸಾಲ ಪಡೆದ ಉದ್ಯಮ ನಷ್ಟಕ್ಕೆ ಒಳಗಾಗಿದೆ ಎಂಬಂತೆ ತೋರಿಸುತ್ತಾರೆ. ಬ್ಯಾಂಕ್ ಸಾಲ ಪಡೆಯಲೆಂದೇ ಸೃಷ್ಟಿಯಾದ ದಾಖಲೆಗಳಲ್ಲಿ ಮಾತ್ರ ಇರುವ ನಕಲಿ ಉದ್ಯಮಗಳೂ ಇವೆ. ಈ ವ್ಯವಹಾರಗಳಲ್ಲಿ ಭ್ರಷ್ಟ ರಾಜಕಾರಣಿಗಳು ಮತ್ತು ಹಿರಿಯ ಬ್ಯಾಂಕ್ ಅಧಿಕಾರಿಗಳು ಶಾಮೀಲಾಗಿರುತ್ತಾರೆ). ಸಾಲ ಪಡೆದವರ ಇನ್ನಿತರ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಅಧಿಕಾರ ಬ್ಯಾಂಕುಗಳಿಗೆ ಇದೆ. ಆದರೆ, ಬ್ಯಾಂಕುಗಳು ಅಂತಹ ಕಠಿಣ ನಿರ್ಧಾರ ಕೈಗೊಳ್ಳುವುದಿಲ್ಲ. ಕಾರಣ ಸರ್ಕಾರ ಅಂತಹ ಸುಸ್ತಿದಾರರ ಪರವಾಗಿರುತ್ತದೆ ಮತ್ತು ಅಂತಹ ಸುಸ್ತಿದಾರರೇ ಲೋಕಸಭೆಯಲ್ಲಿ ಜನಪ್ರತಿನಿಧಿಗಳಾಗಿ ಕುಳಿತಿರುತ್ತಾರೆ. ಬೆಳೆಸಾಲ ಪಡೆದ ರೈತನೊಬ್ಬ ಬೆಳೆನಷ್ಟವಾಗಿ ಸಾಲ ಮರುಪಾವತಿ ಮಾಡದಿದ್ದರೆ, ಆ ರೈತನ ಮನೆಯಲ್ಲಿನ ವಸ್ತುಗಳನ್ನು ಜಪ್ತಿಮಾಡುತ್ತಾರೆ. ಅಂತದೇ ಕ್ರಮ ಸಿರಿವಂತ ಸುಸ್ತಿದಾರರ ವಿರುದ್ದ ಇಲ್ಲ.

ಕೇಂದ್ರ ಸರ್ಕಾರದಿಂದ 13 ವರ್ಷಗಳಲ್ಲಿ ಬ್ಯಾಂಕುಗಳಿಗೆ ನಾಲ್ಕು ಲಕ್ಷ ಕೋಟಿ ನೆರವು:

ಎನ್ ಪಿ ಎ, ರೈಟ್ ಆಫ್, ಸಾಲ ಮನ್ನಾ ಕಾರಣದಿಂದ ಬ್ಯಾಂಕುಗಳು ದಿವಾಳಿ ಆಗುವುದನ್ನು ತಡೆಯಲು 2020-21 ರವರೆಗಿನ 13 ವರ್ಷಗಳಲ್ಲಿ ಕೇಂದ್ರ ಸರ್ಕಾರ ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ 4,05,000 ಕೋಟಿ ರೂಪಾಯಿಗಳನ್ನು ತುಂಬಿದೆ. ಸಂಸತ್ತಿಗೆ 2019ರ ಜುಲೈ ತಿಂಗಳಲ್ಲಿ ಹಣಕಾಸು ರಾಜ್ಯ ಸಚಿವ ಅನುರಾಗ್ ಸಿಂಗ್ ಠಾಕೂರ್ ಅವರು ಪಿಎಸ್‌ಯು (ಸರ್ಕಾರಿ ಒಡೆತನದ ಯೂನಿಯನ್) ಬ್ಯಾಂಕ್‌ಗಳ ಬಂಡವಾಳದ ಅಗತ್ಯತೆಗಳ ಕುರಿತ ಪ್ರಶ್ನೆಗೆ ಉತ್ತರಿಸುತ್ತ ‘ಭಾರತೀಯ ರಿಸರ್ವ್ ಬ್ಯಾಂಕ್‌ನ ಮಾರ್ಗಸೂಚಿಗಳ ಪ್ರಕಾರ, ಭಾರತದಲ್ಲಿನ ಬ್ಯಾಂಕ್‌ಗಳು ಕನಿಷ್ಠ ಬಂಡವಾಳದಿಂದ ಅಪಾಯದ ತೂಕದ ಆಸ್ತಿ ಅನುಪಾತವನ್ನು 9 ಪ್ರತಿಶತದಷ್ಟು ನಿರ್ವಹಿಸುವ ಅಗತ್ಯವಿದೆ’ ಎಂದು ಹೇಳಿದ್ದರು.

(ಮೋದಿ ಅಧಿಕಾರಕ್ಕೆ ಬಂದ ನಂತರದ ಏಳು ವರ್ಷಗಳಲ್ಲಿ ಪಿಎಸ್‌ಯು ಬ್ಯಾಂಕುಗಳಿಗೆ 3,42,990 ಕೋಟಿ ನೆರವು ನೀಡಲಾಗಿದೆ.)

ಸಾಲ ಮನ್ನಾ ಮಾಡುವ ಉದ್ದೇಶ ಸರ್ಕಾರಕ್ಕೆ ಇಲ್ಲ ಎನ್ನುವುದಾದರೆ, ಸುಪ್ರೀಂ ಕೋರ್ಟ್ ಸೂಚನೆಯಂತೆ ಸುಸ್ತಿದಾರರ ಹೆಸರು ಬಹಿರಂಗ ಪಡಿಸಲು ನಿರಾಕರಿಸುತ್ತಿರುವುದೇಕೆ? ಜನರಿಗೆ ಈ ಸತ್ಯ ತಿಳಿಯಬೇಕಿದೆ. ಸಾಲ ಕೊಡು, ಮನ್ನಾ ಮಾಡು, ಅದರ ನಷ್ಟ ತುಂಬಿಕೊಳ್ಳಲು ಸರ್ಕಾರದ ಹಣ ಕೊಡು. ಇದೇ ಆಳುವವರ ಇಂದಿನ ನೀತಿಯಾಗಿದೆ. ಇದು ಬ್ಯಾಂಕುಗಳ ವಸೂಲಾಗದ ಸಾಲದ ಪ್ರಮಾಣ (NPA)ವನ್ನು ತಗ್ಗಿಸಿ ಆರ್ಥಿಕ ಪ್ರಗತಿ ಮತ್ತು ಹೂಡಿಕೆಯನ್ನು ಹೆಚ್ಚಿಸಲಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲೆ ಹೇಳುತ್ತಾರೆ. ಬ್ಯಾಂಕುಗಳೂ ತಮಗೆ ಬರುವ ಲಾಭದ ಬಹುಪಾಲನ್ನು ಈ ನಷ್ಟ ತುಂಬಿಕೊಳ್ಳಲು ಬಳಕೆ ಮಾಡಿಕೊಳ್ಳುತ್ತಿವೆ. ಬ್ಯಾಂಕುಗಳ ಅಯ-ವ್ಯಯ ವರದಿಗಳನ್ನು ನೋಡಿದಾಗ, ವಸೂಲಾಗದ ಸಾಲದ ಪ್ರಮಾಣ ತಗ್ಗಿಸಲು ಬ್ಯಾಂಕುಗಳು ತಮ್ಮ ಆದಾಯದ ಬಹುಪಾಲು ಹಣವನ್ನು ಮೀಸಲಿಟ್ಟು ಅವುಗಳ ಆದಾಯ ಕುಂಠಿತಗೊಂಡ ಬಗ್ಗೆ ತಿಳಿಸಿವೆ.

ಸಾಲ ವಸೂಲಿಗೆ ದಿಟ್ಟ ಕ್ರಮ ಕೈಗೊಂಡು ಬ್ಯಾಂಕುಗಳ ರಕ್ಷಣೆಗೆ ನಿಲ್ಲಬೇಕಾದ ಸರ್ಕಾರ, ಅಂತಹ ಸಾಲಗಳ ಲೆಕ್ಕವನ್ನು NPA ಕಡತದಿಂದ ಅಳಿಸಿ ಹಾಕುವಂತೆ (ರೈಟ್ ಆಫ್) ಬ್ಯಾಂಕುಗಳಿಗೆ ಸೂಚಿಸುತ್ತದೆ. ಸಾಲ ವಸೂಲಿ ಪ್ರಶ್ನೆ ಬಂದಾಗ ವಿಜಯ್ ಮಲ್ಯರ ಸಾಲ ವಸೂಲಿಗೆ ತೆಗೆದು ಕೊಂಡ ಕ್ರಮಗಳ ಕಡೆಗೆ ಬೆರಳು ತೋರಿಸುತ್ತಾರೆ. ಹೀಗೆ ರೈಟ್ ಆಫ್ ಮಾಡಿದ ಒಟ್ಟು ಸಾಲದ ಶೇಕಡಾ 14ರಷ್ಟು ಮಾತ್ರ ವಸೂಲಿ ಆಗಿರುವ ವರದಿಗಳಿವೆ. ರೈಟ್ ಆಫ್ ನಿಂದ ಬ್ಯಾಂಕುಗಳಿಗೆ ಆಗುವ ನಷ್ಟದ ಕೆಲ ಪಾಲನ್ನು ತುಂಬಿಕೊಡಲು ಸಾರ್ವಜನಿಕರ ತೆರಿಗೆ ಹಣವನ್ನು ಸರ್ಕಾರ ಬಳಕೆ ಮಾಡಿಕೊಳ್ಳುತ್ತಿದೆ. ಸರ್ಕಾರದ ಈ ಕೊಡುಗೆಯ ಹಣದಲ್ಲಿ ಸಾರ್ವಜನಿಕ ಉದ್ದಿಮೆಗಳ ಷೇರು ಮಾರಾಟದಿಂದ ಸಂಗ್ರಹಿಸಿದ ಹಣವೂ ಇದೆ. (ಷೇರು ಖರೀದಿಸುವವರೂ ಅದೇ ವಂಚಕ ಖಾಸಗಿ ಉದ್ಯಮಪತಿಗಳೆ) ಅಂದರೆ, ಶ್ರೀಮಂತ ಉದ್ಯಮಪತಿಗಳು ಮಾಡಿದ ಸಾಲ ತೀರಿಸಲು ಸಾರ್ವಜನಿಕರ ಆಸ್ತಿ ಮಾರುತ್ತಾರೆ ಮತ್ತು ಜನಸಾಮಾನ್ಯರ ಮೇಲೆ ತೆರಿಗೆ ಹೆಚ್ಚಳ ಮಾಡುತ್ತಾರೆ ಎಂದಾಯಿತು. ಇಂಥ ವಂಚಕರು ಸಾಲ ಪಡೆದು ಉದ್ದೇಶ ಪೂರ್ವಕವಾಗಿ ಹಿಂತಿರುಗಿಸುತ್ತಿಲ್ಲ. ಮಾತ್ರವಲ್ಲ, ಮತ್ತೆ ಮತ್ತೆ ಸಾಲಪಡೆಯುತ್ತಲೇ ಇದ್ದಾರೆ. ವಂಚಕರು ದುರುದ್ದೇಶದಿಂದಲೇ ಸರಿಯಾದ ಭದ್ರತೆಯನ್ನೂ ಕೊಡದೆ ಸಾಲ ಪಡೆಯುತ್ತಾರೆ. ಈ ಕಾರಣದಿಂದ ಸಾಲ ವಸೂಲಿಗೆ ಅವರ ಇತರೆ ಆಸ್ತಿ ಜಪ್ತಿಮಾಡಲೂ ಕಾನೂನಿನ ತೊಡಕಾಗುವಂತೆ ನೋಡಿಕೊಳ್ಳುತ್ತಾರೆ. ಭ್ರಷ್ಟ ರಾಜಕಾರಣಿಗಳು, ಅದಿಕಾರಿಗಳು ಇಂಥ ವಂಚಕ ಉದ್ಯಮಪತಿಗಳ ಜೊತೆ ಷಾಮೀಲಾಗಿದ್ದಾರೆ. ಸರ್ಕಾರವೇ ಬಂಡವಾಳಶಾಹಿಗಳ ಹಿಡಿತದಲ್ಲಿರುವುದರಿಂದ ಮತ್ತು ಉದ್ಯಮಿಗಳೂ ಜನಪ್ರತಿನಿಧಿಗಳಾಗಿ ಆಯ್ಕೆಗೊಂಡು ಸಂಸತ್ತು ಮತ್ತು ವಿದಾನ ಸಭೆಗಳಲ್ಲಿ ಕುಳಿತಿರುವುದರಿಂದ, ತಮ್ಮ ಸಂಪತ್ತು ವೃದ್ಧಿಗೆ ಅನುಕೂಲವಾಗುವಂತೆ ಯೋಜನೆ ರೂಪಿಸಿಕೊಳ್ಳತೊಡಗಿದ್ದಾರೆ.

ಶ್ರಮಿಕರು ಎಚ್ಚೆತ್ತುಕೊಂಡು ಪ್ರತಿಭಟಿಸದಿದ್ದರೆ, ಎಲ್ಲಾ ಸಾರ್ವಜನಿಕ ಆಸ್ತಿಗಳನ್ನು ಈ ಕೆಲವೇ ವಂಚಕ ಶ್ರೀಮಂತ ಕುಳಗಳು ತಮ್ಮ ವಶಕ್ಕೆ ಪಡೆಯುತ್ತವೆ. ಮೋದಿ ಸರ್ಕಾರ ವಂಚಕ ಉದ್ಯಮಿಗಳ ಹೆಸರು ಬಹಿರಂಗ ಪಡಿಸುತ್ತದೆ ಎಂಬ ನಂಬಿಕೆಯಂತೂ ಇಲ್ಲ. ತಮ್ಮ ಪೋಷಕರನ್ನು ಶಿಕ್ಷೆಗೆ ಗುರಿಪಡಿಸಲು, ಅವರಿಗೆ ನಷ್ಟ ಆಗುವಂತಹ ಕೆಲಸಗಳನ್ನು RSS ಮತ್ತದರ ನಿಷ್ಠಾವಂತ ಸ್ವಯಂ ಸೇವಕ ಮೋದಿ ಎಂದೂ ಮಾಡುವುದಿಲ್ಲ. ಆದೇಶ ಕೊಟ್ಟ ನ್ಯಾಯಾಧೀಶರ ವರ್ಗಾವಣೆ ನಡೆಯುತ್ತದೆ, ಆದೇಶ ನೀಡಿದ ಮಾಹಿತಿ ಹಕ್ಕು ಆಯೋಗದ ಅಧಿಕಾರಿಗಳ ಎತ್ತಂಗಡಿ ಆಗುತ್ತದೆ. ಇದೇ ಸತ್ಯ.

  • ಸಿದ್ದಯ್ಯ ಚಿಕ್ಕಮಾದೇಗೌಡ

(90ರ ದಶಕದಲ್ಲಿ ಆಟೋ ಚಾಲಕರಾಗಿದ್ದ ಸಿದ್ದಯ್ಯನವರು ಆಟೋ ಚಾಲಕರನ್ನು ಸಂಘಟಿಸಿ ಆಟೋ ಚಾಲಕ ಎಂಬ ಸಂಘ ಪತ್ರಿಕೆಯನ್ನು ತರುತ್ತಿದ್ದರು. ನಂತರ ಸಿಪಿಐ(ಎಂ) ಪಕ್ಷದ ಸದಸ್ಯತ್ವ ಪಡೆದು ಹಲವು ಕಾರ್ಮಿಕ ಸಂಘಟನೆಗಳಲ್ಲಿ ಕೆಲಸ ಮಾಡಿದ್ದಾರೆ. ಸದ್ಯಕ್ಕೆ ಸಿಐಟಿಯು ಅಡಿಯಲ್ಲಿ ಕಟ್ಟಡ ಕಾರ್ಮಿಕರ ಪರವಾಗಿ ಕೆಲಸ ಮಾಡುತ್ತಿದ್ದಾರೆ)


ಇದನ್ನೂ ಓದಿ: Write Off ವಿವಾದ: ಏನಿದು ಟೆಕ್ನಿಕಲ್ ರೈಟ್-ಆಫ್?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...