Homeಅಂತರಾಷ್ಟ್ರೀಯಯೆಮನ್ | ಇಸ್ರೇಲ್ ದಾಳಿಯಲ್ಲಿ ಹೌತಿ ಸರ್ಕಾರದ ಪ್ರಧಾನಿ, ಹಲವು ಸಚಿವರು ಸಾವು: ವರದಿ

ಯೆಮನ್ | ಇಸ್ರೇಲ್ ದಾಳಿಯಲ್ಲಿ ಹೌತಿ ಸರ್ಕಾರದ ಪ್ರಧಾನಿ, ಹಲವು ಸಚಿವರು ಸಾವು: ವರದಿ

- Advertisement -
- Advertisement -

ಯೆಮನ್‌ ರಾಜಧಾನಿ ಸನಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಹೌತಿ ಸರ್ಕಾರದ ಪ್ರಧಾನಿ ಅಹ್ಮದ್ ಗಲೇಬ್ ನಾಸರ್ ಅಲ್-ರಹಾವಿ ಮತ್ತು ಹಲವು ಸಚಿವರು ಸಾವಿಗೀಡಾಗಿದ್ದಾರೆ ಎಂದು ವರದಿಯಾಗಿದೆ.

ಕಳೆದ ಗುರುವಾರ (ಆ.28) ಇಸ್ರೇಲ್ ದಾಳಿ ನಡೆಸಿದೆ. ಈ ದಾಳಿಯಲ್ಲಿ ಪ್ರಧಾನಿ ರಹಾವಿ, ಸಚಿವರು ಮತ್ತು ಅಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂಬುವುದನ್ನು ಹೌತಿ ದೃಢಪಡಿಸಿದೆ ಎಂದು ಬಿಬಿಸಿ ಭಾನುವಾರ(31) ವರದಿ ಮಾಡಿದೆ.

ಸನಾ ಪ್ರದೇಶದಲ್ಲಿ ಸಭೆಯೊಂದರ ಮೇಲೆ ಇಸ್ರೇಲಿ ಫೈಟರ್ ಜೆಟ್‌ಗಳು ದಾಳಿ ನಡೆಸಿದ್ದು, ಹೌತಿ ಆಡಳಿತದ ಪ್ರಧಾನಿ ರಹಾವಿ ಮತ್ತು ಇತರ ಹಿರಿಯ ಹೌತಿ ಅಧಿಕಾರಿಗಳನ್ನು ಹತ್ಯೆ ಮಾಡಲಾಗಿದೆ ಎಂದು ಇಸ್ರೇಲ್‌ನ ಐಡಿಎಫ್ ಕೂಡ ಹೇಳಿದೆ.

ವರದಿಗಳ ಪ್ರಕಾರ, ವಿನಾಶಕಾರಿ ಅಂತರ್ಯುದ್ಧ ನಡೆದು ಯೆಮನ್‌ ರಾಜಧಾನಿ ಸನಾದಿಂದ ಅಧಿಕೃತ ಸರ್ಕಾರದ ಆಡಳಿತವನ್ನು ಕಿತ್ತು ಹಾಕಿದ ಬಳಿಕ, 2014 ರಿಂದ ಹೌತಿಗಳು ವಾಯುವ್ಯ ಯೆಮೆನ್‌ನ ಹೆಚ್ಚಿನ ಭಾಗವನ್ನು ತಮ್ಮ ನಿಯಂತ್ರಣದಲ್ಲಿಟ್ಟುಕೊಂಡಿದ್ದಾರೆ.

ತಮ್ಮ ಪ್ರಧಾನಿ ರಹಾವಿ ಮತ್ತು ಸಚಿವರು ಇಸ್ರೇಲ್ ದಾಳಿಯಲ್ಲಿ ಹತ್ಯೆಯಾಗಿದ್ದಾರೆ ಎಂದು ಹೌತಿ ಹೇಳಿಕೊಂಡಿದೆ. ಮೃತ ಸಚಿವರ ಹೆಸರು ತಿಳಿಸಿಲ್ಲ.

ಸೌದಿ ಅರೇಬಿಯಾದ ಸುದ್ದಿ ತಾಣ ಅಲ್-ಹದತ್ ವರದಿ ಮಾಡಿರುವ ಪ್ರಕಾರ, ಹೌತಿಗಳ ವಿದೇಶಾಂಗ ಸಚಿವರು, ನ್ಯಾಯ, ಯುವಜನ ಮತ್ತು ಕ್ರೀಡೆ, ಸಾಮಾಜಿಕ ವ್ಯವಹಾರಗಳು ಮತ್ತು ಕಾರ್ಮಿಕ ಸಚಿವರು ಕೊಲ್ಲಲ್ಪಟ್ಟಿದ್ದಾರೆ.

ಇಸ್ರೇಲ್ ದಾಳಿಯಲ್ಲಿ ಹಲವಾರು ಇತರ ಸಚಿವರು ಕೂಡ ಸಾಧಾರಣ ಮತ್ತು ಗಂಭೀರ ಗಾಯಗಳಿಗೆ ಒಳಗಾಗಿದ್ದಾರೆ ಎಂದು ಹೌತಿಗಳ ಅಧ್ಯಕ್ಷ ಮಹ್ದಿ ಅಲ್-ಮಶಾತ್ ಅವರ ಕಚೇರಿಯನ್ನು ಉಲ್ಲೇಖಿಸಿ ಬಿಬಿಸಿ ವರದಿ ಮಾಡಿದೆ.

ಪ್ರಧಾನಿ ಹತ್ಯೆಯಾಗಿರುವ ಹಿನ್ನೆಲೆ ಉಪ ಪ್ರಧಾನಿ ಮುಹಮ್ಮದ್ ಅಹ್ಮದ್ ಮಿಫ್ತಾ ಅವರು ಪ್ರಧಾನಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ಹೌತಿ ಹೇಳಿದೆ.

ರಹಾವಿ ಆಗಸ್ಟ್ 2024ರಿಂದ ಹೌತಿ ಆಡಳಿತದ ಪ್ರಧಾನಿಯಾಗಿದ್ದರು. ಅದಕ್ಕೂ ಮುನ್ನ ಮಿಲಿಟರಿ ಕಾರ್ಯಾಚರಣೆಗಳನ್ನು ಯೋಜಿಸುವ ಉನ್ನತ ನಿರ್ಧಾರ ತೆಗೆದುಕೊಳ್ಳುವ ತಂಡದ ಭಾಗವಾಗುವ ಬದಲು ಹೌತಿ ಚಳವಳಿಯ ಪ್ರಮುಖ ವ್ಯಕ್ತಿಯಾಗಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತಿದ್ದರು ಎಂದು ವರದಿಗಳು ಹೇಳಿವೆ.

ಗುರುವಾರದ ದಾಳಿಯಲ್ಲಿ ಹೌತಿ ಚಳುವಳಿಯ ಅಂತಿಮ ನಾಯಕ ಅಬ್ದುಲ್-ಮಲಿಕ್ ಅಲ್-ಹೌತಿ, ಹಾಗೆಯೇ ಗುಂಪಿನ ರಕ್ಷಣಾ ಸಚಿವರು ಮತ್ತು ಸಿಬ್ಬಂದಿ ಮುಖ್ಯಸ್ಥರು ಸಾವನ್ನಪ್ಪಿದ್ದಾರೆಯೇ ಎಂಬುವುದರ ಬಗ್ಗೆ ಖಚಿತ ಮಾಹಿತಿ ದೊರೆತಿಲ್ಲ.

ಹೌತಿ ಸಭೆಯ ಬಗ್ಗೆ ಗುಪ್ತಚರ ಮಾಹಿತಿ ಪಡೆದ ‘ಕೆಲವೇ ಗಂಟೆಗಳಲ್ಲಿ’ ದಾಳಿ ನಡೆಸಲಾಗಿದೆ ಎಂದು ಐಡಿಎಫ್ ಶನಿವಾರ ತಡರಾತ್ರಿ ಹೇಳಿಕೆಯಲ್ಲಿ ತಿಳಿಸಿದೆ. ಕಾರ್ಯಾಚರಣೆಯ ಸಂಪೂರ್ಣ ಪರಿಣಾಮವನ್ನು ಇನ್ನೂ ನಿರ್ಣಯಿಸಲಾಗುತ್ತಿದೆ ಎಂದು ಅದು ಹೇಳಿದೆ.

ಗಾಝಾದಲ್ಲಿ ಇಸ್ರೇಲ್ ಮತ್ತು ಹಮಾಸ್ ನಡುವಿನ ಯುದ್ಧ ಪ್ರಾರಂಭವಾದಾಗಿನಿಂದ, ಹೌತಿಗಳು ನಿಯಮಿತವಾಗಿ ಇಸ್ರೇಲ್ ಮೇಲೆ ಕ್ಷಿಪಣಿಗಳನ್ನು ಉಡಾಯಿಸುತ್ತಿದ್ದಾರೆ ಮತ್ತು ಕೆಂಪು ಸಮುದ್ರ ಮತ್ತು ಅಡೆನ್ ಕೊಲ್ಲಿಯಲ್ಲಿ ವಾಣಿಜ್ಯ ಹಡಗುಗಳನ್ನು ಗುರಿಯಾಗಿಸಿಕೊಂಡಿದ್ದಾರೆ. ಹೌತಿಗಳು ಪ್ಯಾಲೆಸ್ತೀನಿಯರನ್ನು ಬೆಂಬಲಿಸುವುದಾಗಿ ಹೇಳಿಕೊಂಡಿದ್ದಾರೆ.

ಇದಕ್ಕೆ ಪ್ರತಿಯಾಗಿ, ಇಸ್ರೇಲ್ ಯೆಮನ್‌ನ ಹೌತಿ ಹಿಡಿತದಲ್ಲಿರುವ ಪ್ರದೇಶಗಳ ಮೇಲೆ ವಾಯುದಾಳಿಗಳನ್ನು ನಡೆಸುತ್ತಿದೆ.

ಉಕ್ರೇನ್‌ನಲ್ಲಿ ನಡೆಯುತ್ತಿರುವುದು ‘ಮೋದಿ ಯುದ್ಧ’: ಅಮೆರಿಕ ವಾಗ್ದಾಳಿ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -