ಪಂಜಾಬ್‌ನಲ್ಲಿ ನಡೆಯುತ್ತಿರುವ ಖಲಿಸ್ತಾನಿ ಬೆಂಬಲಿಗರು ಮತ್ತು ಪೊಲೀಸರ ನಡುವಿನ ಘರ್ಷಣೆಗೆ ಸಂಬಂಧಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪಂಜಾಬ್‌ನ ಅಜ್ನಾಲಾ ನ್ಯಾಯಾಲಯ ಶನಿವಾರ ಅಮೃತಪಾಲ್ ಸಿಂಗ್ ಅವರ 10 ಸಹಚರರನ್ನು ಏಪ್ರಿಲ್ 6 ರವರೆಗೆ ನ್ಯಾಯಾಂಗ ಬಂಧನಕ್ಕೆ ಕಳುಹಿಸಿದೆ. ಮತ್ತೊಬ್ಬ ಆರೋಪಿ ಸುಖಪ್ರೀತ್ ಸಿಂಗ್‌ನನ್ನು ನಾಲ್ಕು ದಿನಗಳ ಪೊಲೀಸ್ ಕಸ್ಟಡಿಗೆ ಒಪ್ಪಿಸಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ 10 ಜನರು, ಅಪಹರಣ ಪ್ರಕರಣದಲ್ಲಿ ಬಂಧಿತರಾಗಿದ್ದ ವಾರಿಸ್ ಪಂಜಾಬ್ ದೇ ತಂಡದ ಸದಸ್ಯರನ್ನು ಬಿಡಿಸಲು ಫೆಬ್ರವರಿಯಲ್ಲಿ ಅಜ್ನಾಲಾ ಪೊಲೀಸ್ ಠಾಣೆಯೊಳಗೆ ನುಗ್ಗಿ ಪೊಲೀಸರೊಂದಿಗೆ ಘರ್ಷಣೆ ನಡೆಸಿದ್ದರು ಎನ್ನುವ ಆರೋಪ ಹೊತ್ತಿದ್ದಾರೆ.
ಫೆಬ್ರವರಿ 23 ರಂದು, ಅಮೃತಪಾಲ್ ಸಿಂಗ್ ಅವರ ಸಾವಿರಾರು ಬೆಂಬಲಿಗರು ಕತ್ತಿಗಳು ಮತ್ತು ಬಂದೂಕುಗಳೊಂದಿಗೆ ಅಜ್ನಾಲಾ ಪೊಲೀಸ್ ಠಾಣೆಗೆ ಪ್ರವೇಶಿಸಿದರು ಮತ್ತು ವ್ಯಕ್ತಿಯೊಬ್ಬನ ಮೇಲೆ ಹಲ್ಲೆ ಮತ್ತು ಅಪಹರಣದ ಆರೋಪದಲ್ಲಿ ಬಂಧಿಸಲ್ಪಟ್ಟ ಲವ್ಪ್ರೀತ್ ತೂಫಾನ್ ಅವರನ್ನು ಬಿಡುಗಡೆ ಮಾಡದಿದ್ದರೆ ಭೀಕರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದು ಪೊಲೀಸರಿಗೆ ಬೆದರಿಕೆ ಹಾಕಿದ್ದರು.
ಬೆಂಬಲಿಗರು ಕತ್ತಿ, ಬಂದೂಕು ಝಳಪಿಸುತ್ತಾ ಪೊಲೀಸ್ ಠಾಣೆಯ ಹೊರಗೆ ಹಾಕಲಾಗಿದ್ದ ಬ್ಯಾರಿಕೇಡ್‌ಗಳನ್ನು ದಾಟಿ ಒಳ ನುಗ್ಗಿದ್ದರು. ಈ ಘಟನೆಯ ಕುರಿತು ವಾರಿಸ್ ಪಂಜಾಬ್ ದೇ ಸದಸ್ಯರ ವಿರುದ್ಧ ಎಫ್‌ಐಆರ್ ದಾಖಲಾಗಿದ್ದು, ಅಜ್ನಾಲಾ ನ್ಯಾಯಾಲಯ ಇಂದು ಅವರಲ್ಲಿ 10 ಜನರನ್ನು ಎರಡು ದಿನಗಳ ಪೊಲೀಸ್ ಕಸ್ಟಡಿಗೆ ಕಳುಹಿಸಿದೆ.
ಈ ನಡುವೆ ಅಮೃತಪಾಲ್ ಸಿಂಗ್ ಪರಾರಿಯಾಗಿದ್ದು, ಒಂದು ವಾರ ಕಳೆಯುತ್ತಿದ್ದರೂ ಪೊಲೀಸರಿಗೆ ಪತ್ತೆಯಾಗಿಲ್ಲ. ದೇಶ ಬಿಟ್ಟು ಹೋಗುತ್ತಾನೆ ಎಂದು ಹೇಳಲಾಗಿತ್ತು. ಹಾಗಾಗಿ ಭಾರತ-ನೇಪಾಳ ಗಡಿಯಲ್ಲಿ ಹೆಚ್ಚಿನ ನಿಗಾ ಇರಿಸಲಾಗಿದೆ.
ಮತ್ತೊಂದಡೆ, ಅಮೃತಪಾಲ್ ಅವರು ರಾಷ್ಟ್ರ ರಾಜಧಾನಿಯನ್ನು ಪ್ರವೇಶಿಸುವ ಸಾಧ್ಯತೆಯ ಹಿನ್ನೆಲೆಯಲ್ಲಿ ದೆಹಲಿ ಮತ್ತು ಅದರ ಗಡಿಯಲ್ಲಿ ದೆಹಲಿ ಪೊಲೀಸರು ಮತ್ತು ಪಂಜಾಬ್ ಪೊಲೀಸರು ಶೋಧ ಕಾರ್ಯಾಚರಣೆಯನ್ನು ಆರಂಭಿಸಿದ್ದಾರೆ.


