Homeಮುಖಪುಟಜಾತ್ಯತೀತ ಶಕ್ತಿಗಳ ಸಾಂಸ್ಕೃತಿಕ ವೈಫಲ್ಯವೇ ಇಂದಿನ ಸ್ಥಿತಿಗೆ ಕಾರಣ: ಯೋಗೇಂದ್ರ ಯಾದವ್‌ರ ನಿಷ್ಠುರ ಅಭಿಪ್ರಾಯ

ಜಾತ್ಯತೀತ ಶಕ್ತಿಗಳ ಸಾಂಸ್ಕೃತಿಕ ವೈಫಲ್ಯವೇ ಇಂದಿನ ಸ್ಥಿತಿಗೆ ಕಾರಣ: ಯೋಗೇಂದ್ರ ಯಾದವ್‌ರ ನಿಷ್ಠುರ ಅಭಿಪ್ರಾಯ

- Advertisement -
- Advertisement -

ಅಯೋಧ್ಯೆಯ ತೀರ್ಪಿನ ನಂತರ ಇಂದು ಕಂಡುಬಂದಷ್ಟು ದುರ್ಬಲವಾಗಿ, ನಿಕೃಷ್ಟವಾಗಿ, ಕ್ಷಮೆಯಾಚಿಸುವಂತೆ ಜಾತ್ಯತೀತತೆಯು ಹಿಂದೆಂದೂ ಕಾಣಿಸಿಕೊಂಡಿದ್ದಿಲ್ಲ. ಈ ಪರಿಸ್ಥಿತಿಗೆ ಯಾರನ್ನು ದೂರಬೇಕು? ಉತ್ತರ ಸ್ಪಷ್ಟವಾಗಿದೆ; ಜಾತ್ಯತೀತತೆಯ ರಕ್ಷಕಪಾಲಕರೇ ಇದಕ್ಕೆ ಹೊಣೆ ಹೊರಬೇಕಿದೆ. ಅವರ ಹಿಪಾಕ್ರಸಿಯ, ಬೂಟಾಟಿಕೆಯ ಕಾರಣದಿಂದಷ್ಟೇ ಅಲ್ಲ, ಅದರೊಂದಿಗೆ ಅವರ ಸೊಕ್ಕೂ ಇದಕ್ಕೆ ಕಾರಣವಾಗಿದೆ. ಜಾತ್ಯತೀತ ಬುದ್ಧಿಜೀವಿಗಳು ಮತ್ತು ರಾಜಕಾರಣಿಗಳು ಜಾತ್ಯತೀತತೆಯ ಈ ಸಾಂವಿಧಾನಿಕ ಆದರ್ಶವನ್ನು ಸಾಮಾನ್ಯ ಜನರಿಗೆ ಮುಟ್ಟಿಸುವಲ್ಲಿ ವಿಫಲರಾಗಿದ್ದಾರೆ ಹಾಗೂ ಹಾಗೆ ಮಾಡುವುದಕ್ಕೆ ನಿರಾಕರಿಸಿದ್ದಾರೆ.

ಇದು ಜಾತ್ಯತೀತತೆಯ ಪರಿಕಲ್ಪನೆಯ ನಿರಾಕರಣೆ ಅಲ್ಲ. ಇಂತಹ ಸಮಯದಲ್ಲಿ ಜಾತ್ಯತೀತತೆ ಎನ್ನುವುದು ಒಂದು ಪವಿತ್ರ ಸಿದ್ಧಾಂತ, ಭಾರತದ ಪರಿಕಲ್ಪನೆಗೆ ಅಂತರ್ಗತವಾದ ತತ್ವ ಎಂದು ಗಟ್ಟಿ ದನಿಯಲ್ಲಿ ಹೇಳಬೇಕಿದೆ. ಸಂಘಟಿತ ಧರ್ಮಗಳಿಂದ ‘ಸೈದ್ಧಾಂತಿಕ ಅಂತರ’ವನ್ನು ಕಾಯ್ದುಕೊಳ್ಳುವುದು ನಮ್ಮ ಸಂವಿಧಾನಕ್ಕೆ ಅತ್ಯವಶ್ಯಕ. ಇದು ಕೇವಲ ನೈತಿಕ ಆದರ್ಶವಲ್ಲ, ಅದು ರಾಜಕೀಯ ಅನಿವಾರ್ಯವೂ ಆಗಿದೆ. ದೀರ್ಘಾವಧಿಯಲ್ಲಿ ನಾವುಗಳು ಒಂದೋ ಜಾತ್ಯತೀತ ಭಾರತವನ್ನು ಹೊಂದಬಹುದು ಅಥವಾ ಭಾರತವನ್ನೇ ಕಳೆದುಕೊಳ್ಳಬೇಕಾಗಬಹುದು.

ಜಾತ್ಯತೀತತೆಯನ್ನು ಒಂದು ಪವಿತ್ರ ತತ್ವ ಎಂದಿಟ್ಟುಕೊಂಡಲ್ಲಿ, ಈ ಆದರ್ಶಕ್ಕನುಗುಣವಾಗಿ ನಮ್ಮ ‘ಜಾತ್ಯತೀತ ರಾಜಕೀಯ’ವು ಕಾರ್ಯನಿರ್ವಹಿಸಿಲ್ಲ. ಸ್ವಾತಂತ್ರ್ಯದ ಸಮಯದಿಂದ ಜಾತ್ಯತೀತ ರಾಜಕೀಯವು ಒಂದು ಜಾತ್ಯತೀತ ವಂಚನೆಯಾಗಿ ಮಾರ್ಪಾಡಾಗಿದೆ. ದೇಶ ವಿಭಜನೆಯ ನಂತರದಲ್ಲಿ ಜಾತ್ಯತೀತ ರಾಜಕೀಯವು ಒಂದು ರೀತಿಯ ಗಟ್ಟಿತನ, ನಂಬಿಕೆಯನ್ನು ಪ್ರದರ್ಶಿಸಿತ್ತು. ಆದರೆ ಕ್ರಮೇಣವಾಗಿ, ಇದು ರಾಜಕೀಯ ಅನುಕೂಲ ಮತ್ತು ವೋಟ್ ಬ್ಯಾಂಕ್ ಅನಿವಾರ್ಯತೆಯ ವಿಷಯವಾಯಿತು. ಅಲ್ಪಸಂಖ್ಯಾತ ಮತದಾರರನ್ನು ಒತ್ತೆಯಾಳಾಗಿ ಇಡುವ ಸಿನಿಕತೆಯ ರಾಜಕೀಯ ಹಾಗೂ ತಕ್ಷಣದ ಅಪ್ರಜ್ಞಾಪೂರ್ವಕ ಪ್ರತಿಕ್ರಿಯೆ ನೀಡುವಂತಹ (ನೀ ಜರ್ಕ್) ಅಲ್ಪಸಂಖ್ಯಾತವಾದವು ಜಾತ್ಯತೀತ ರಾಜಕೀಯದಾಟದ ಪ್ರಮುಖ ಅಂಶಗಳಾದವು.

ನಾವಿಂದು ಕಾಣುತ್ತಿರುವಂತೆ ಜಾತ್ಯತೀತತೆಯು ಶರಣಾಗತಿಯ ರಾಜಕೀಯಕ್ಕಿಳಿಯಲು ಮತ್ತು ಪ್ರತಿರೋಧವನ್ನು ಎದುರಿಸುವಂತಾಗಲು ಇದೇ ಕಾರಣವಾಗಿದೆ. ಜಾತ್ಯತೀತ ರಾಜಕೀಯದ ನಿಕೃಷ್ಟ ಶರಣಾಗತಿಯ ಪರಿಸ್ಥಿತಿಯನ್ನು ಅರಿಯಬೇಕಾದರೆ ಅಯೋಧ್ಯೆ ತೀರ್ಪಿನ ಬಗ್ಗೆ ಕಾಂಗ್ರೆಸ್ ಕಾರ್ಯಕಾರಿಣಿ ಸಮಿತಿಯ ಮೂರು ಸಾಲಿನ ಹೇಳಿಕೆಯನ್ನು ಗಮನಿಸಿ. ಇತರ ಪ್ರಮುಖ ವಿರೋಧಪಕ್ಷಗಳ ಪ್ರತಿಕ್ರಿಯೆ ಮತ್ತು ಅವರ ಮೌನವೂ ಕಾಂಗ್ರೆಸ್‌ನ ಪ್ರತಿಕ್ರಿಯೆಗಿಂತ ಹೆಚ್ಚು ಭಿನ್ನವಾಗಿಲ್ಲ. ಈಗ ಬಂದಿರುವ ಅಯೋಧ್ಯೆ ತೀರ್ಪು ಜಾತ್ಯತೀತ ರಾಜಕೀಯವು ಎದುರಿಸುತ್ತಿರುವ ಸಂದಿಗ್ಧತೆಯ ಅಂತ್ಯವಲ್ಲ; ಇಂತಹ ಇನ್ನೂ ಅದೆಷ್ಟೋ ಕ್ಲಿಷ್ಟಕರ ಸಂಗತಿಗಳು ಪರಿಹಾರಕ್ಕಾಗಿ ಎದುರು ನೋಡುತ್ತಿವೆ.

ಸಾಂಸ್ಕೃತಿಕ ರಾಜಕೀಯದ ವಿಫಲತೆ

ಆದರೆ, ಆಷಾಢಭೂತಿತನನ, ಬೂಟಾಟಿಕೆ ಮತ್ತು ಸಿನಿಕತೆಗಳು ಮಾತ್ರ ಭಾರತದ ಜಾತ್ಯತೀತತೆಯ ನಿಜವಾದ ಸಮಸ್ಯೆಗಳಲ್ಲ. ತಮ್ಮನ್ನು ತಾವು ಜಾತ್ಯತೀತ ಎಂದು ಕರೆದುಕೊಳ್ಳುವ ಪಕ್ಷಗಳು ಮಾತ್ರವೇ ವಿಶ್ವಾಸಹೀನ ರಾಜಕಾರಣದ ಮೇಲೆ ಏಕಸ್ವಾಮ್ಯತೆಯನ್ನು ಹೊಂದಿಲ್ಲ. ಹಿಂದೂ, ಮುಸ್ಲಿಮ್ ಅಥವಾ ಸಿಖ್ ಕೋಮುವಾದದ ರಾಜಕೀಯವೂ ಇಂತಹ ಯು-ಟರ್ನ್ ಮತ್ತು ರಾಜಕೀಯ ಕುತಂತ್ರತೆಗಳಿಂದ ತುಂಬಿದೆ. ಇದಕ್ಕೆ ತದ್ವಿರುದ್ಧವಾಗಿ, ಧರ್ಮ, ನಂಬಿಕೆಯ ವಿಷಯಗಳನ್ನು ನ್ಯಾಯಾಲಯದಿಂದ ಬಗೆಹರಿಸಲು ಆಗುವುದಿಲ್ಲ ಎಂದು ಮುಂಚೆ ಬಿಜೆಪಿ ಪಟ್ಟು ಹಿಡಿದಿದ್ದನ್ನು ಹಾಗೂ ಈಗ ಇತ್ತೀಚಿಗೆ ಅದಕ್ಕೆ ನ್ಯಾಯಾಂಗದ ಬಗ್ಗೆ ಕಾಣಿಸಿಕೊಂಡ ಭಯಭಕ್ತಿಯನ್ನು ಗಮನಿಸಿ. ಕಾಂಗ್ರೆಸ್ ಮತ್ತು ಸಮಾಜವಾದಿ ಪಕ್ಷದ ರಾಜಕೀಯವು ಎಷ್ಟು ವೋಟ್ ಬ್ಯಾಂಕ್ ರಾಜಕೀಯವಾಗಿದೆಯೋ, ಅಷ್ಟೇ ಬಿಜೆಪಿ ಮತ್ತು ಏಐಎಮ್‌ಐಎಮ್‌ಯ ರಾಜಕೀಯದ್ದೂ ಆಗಿದೆ.

ಭಾರತೀಯ ಜಾತ್ಯತೀತತೆಯ ವಿಫಲತೆಯು ಅದರ ಸಾಂಸ್ಕೃತಿಕ ರಾಜಕೀಯದ ವಿಫಲತೆಯಲ್ಲಿದೆ. ರಾಜಕೀಯವೆಂದರೆ ಕೇವಲ ಚುನಾವಣೆ ಗೆಲ್ಲುವುದು, ಸರಕಾರ ರಚಿಸುವುದು, ಪ್ರತಿಭಟನೆಗಳನ್ನು ಹಮ್ಮಿಕೊಳ್ಳುವುದು ಇತ್ಯಾದಿ ಅಲ್ಲ. ಆಳವಾದ ರಾಜಕೀಯವೆಂದರೆ, ಪ್ರತಿಕೂಲ ಸಾರ್ವಜನಿಕ ಅಭಿಪ್ರಾಯದ ಸವಾಲನ್ನು ಎದುರಿಸುವುದೂ ಆಗಿದೆ ಮತ್ತು ಅದನ್ನು ಅಪೇಕ್ಷಿತ ದಿಕ್ಕಿನಲ್ಲಿ ಕೊಂಡೊಯ್ಯುವುದೂ ಆಗಿದೆ. ರಾಜಕೀಯವೆಂದರೆ, ಹೊಸ ಹೊಸ ಪದಗಳನ್ನು ಹುಟ್ಟುಹಾಕುವುದು, ಹಳೆಯ ಪದಗಳಲ್ಲಿ ಹೊಸ ಅರ್ಥಗಳನ್ನು ತುಂಬುವುದು ಹಾಗೂ ಈ ಹೊಸ ಪದಗಳನ್ನು ಮತ್ತು ಅರ್ಥಗಳನ್ನು ಜನರು ಒಪ್ಪಿಕೊಳ್ಳುವಂತೆ ಮನವರಿಕೆ ಮಾಡುವುದು. ಇದನ್ನು ಸಾಹಿತ್ಯ ಅಥವಾ ಸಿನೆಮಾ ಅಥವಾ ರಂಗಭೂಮಿಯಂತಹ ಸಾಂಸ್ಕೃತಿಕ ಕಲೆಯ ಮುಖಾಂತರ ಮಾಡಬಹುದಾಗಿದೆ. ಇದನ್ನು ರಾಜಕೀಯ ಭಾಷಣಗಳು, ಟಿವಿ ಚರ್ಚೆಗಳು ಅಥವಾ ಸರಳ ವದಂತಿಗಳ ಮುಖಾಂತರವೂ ಮಾಡಬಹುದಾಗಿದೆ.

ಇಲ್ಲಿಯೇ ಜಾತ್ಯತೀತತೆಯ ರಾಜಕೀಯವು ಸೋತಿದೆ ಹಾಗೂ ಹಿಂದುತ್ವದ ರಾಜಕೀಯ ಗೆಲುವು ಸಾಧಿಸಿದೆ. ನಮ್ಮ ಸ್ವಾತಂತ್ರ್ಯ ಸಂಗ್ರಾಮಕ್ಕೆ ಜಾತ್ಯತೀತತೆ ಎನ್ನುವುದು ಶ್ರದ್ಧೆಯ ವಿಷಯವಾಗಿತ್ತು. ಯಾವುದೇ ರೀತಿಯ ಕೋಮುವಾದವು ಅಸಹನೀಯವಾಗಿತ್ತು. ಇಂದು ಜಾತ್ಯತೀತತೆ ಎನ್ನುವುದು ತುಂಬಾ ದೂರದಲ್ಲಿರುವ ಹಾಗೂ ಬಿಟ್ಟುಕೊಡಬಹುದಾದ ಪರಿಕಲ್ಪನೆಯಾಗಿ ಕಂಡುಬರುತ್ತಿದೆ. ಸೆಕ್ಯೂಲರ್ (ಜಾತ್ಯತೀತ)ರನ್ನು ಸಿಕ್ಯೂಲರ್ (ರೋಗಗ್ರಸ್ತ) ಎಂದೂ, (ಲಿಬರಲ್) ಉದಾರವಾದಿಗಳನ್ನು ಲಿಬ್‌ಟಾರ್ಡ್ ಎಂದೂ ಕರೆಯುವ ಸಂದರ್ಭ ಏರ್ಪಟ್ಟಿದೆ. ಆದರೆ ಅದೇ ಸಮಯದಲ್ಲಿ ಹಿಂದುತ್ವ ಎನ್ನುವುದು ಇತಿಹಾಸದಲ್ಲಿ ಆದ ತಪ್ಪುಗಳನ್ನು (ಅನ್ಯಾಯಗಳನ್ನು) ಸರಿಪಡಿಸುವ, ಆತ್ಮಗೌರವದ ಚಳವಳಿಯಾಗಿ, ರಾಷ್ಟ್ರೀಯ ಪುನರುತ್ಥಾನದ ಘಳಿಗೆಯಾಗಿ ತನ್ನನ್ನು ತಾನು ಯಶಸ್ವಿಯಾಗಿ ಬಿಂಬಿಸಿಕೊಂಡಿದೆ.

ಜಾತ್ಯತೀತರು ತಪ್ಪಿದ್ದು ಎಲ್ಲಿ?

ಇಂತಹ ಬೃಹತ್ ಬದಲಾವಣೆ ಸಾಧ್ಯವಾಗಿದ್ದು ಹೇಗೆ? ಜಾತ್ಯತೀತತೆಯಂತಹ ಪರಿಕಲ್ಪನೆಗಳು ನಮ್ಮ ಸಂವಿಧಾನದಲ್ಲಿ ಬರೆಯಲಾಗಿದೆ ಎಂದ ಮಾತ್ರಕ್ಕೆ ಜೀವಂತವಾಗಿರಲು ಸಾಧ್ಯವಿಲ್ಲ. ಈ ಕಲ್ಪನೆಯನ್ನು ಜೀವಂತವಾಗಿಡಲು ಪ್ರತಿಯೊಂದು ತಲೆಮಾರಿಗೂ ಒಂದು ಹೊಸ ಭಾಷೆಯಲ್ಲಿ ಈ ಆದರ್ಶಗಳನ್ನು ಮರುಶೋಧನೆ ಮಾಡುತ್ತ ಸಾರ್ವಜನಿಕರೊಂದಿಗೆ ಸತತವಾದ ಮಾತುಕತೆ ಮಾಡಬೇಕಾಗುತ್ತದೆ. ನಮ್ಮ ಜಾತ್ಯತೀತ ಗಣ್ಯರು ಈ ಮಾತುಕತೆಯನ್ನು ಹಲವು ದಶಕಗಳ ಹಿಂದೆಯೇ ನಿಲ್ಲಿಸಿಬಿಟ್ಟಿದ್ದಾರೆ.

ಇದನ್ನೂ ಓದಿ: ದೀರ್ಘವಾದ ಸಮರಕ್ಕೆ ತಯಾರಿ ಮಾಡಿಕೊಳ್ಳಬೇಕೆಂಬ ಸೂಚನೆ ಇದು : ಯೋಗೇಂದ್ರ ಯಾದವ್

ಇದೇ ಸಮಯದಲ್ಲಿ ಸಂಘ ಪರಿವಾರವು ಇದನ್ನು ಮಾಡುತ್ತಲೇ ಬಂತು. ಸ್ವಾತಂತ್ರ್ಯೋತ್ತರ ಕಾಲಘಟ್ಟದಲ್ಲಿ ಸಂಘ ಪರಿವಾರವು ಕಳಂಕಿತಗೊಂಡು, ಅಂಚಿಗೆ ತಳ್ಳಲ್ಪಟ್ಟಿದ್ದರೂ ಈ ಕೆಲಸವನ್ನು ಮಾಡುವುದನ್ನು ನಿಲ್ಲಿಸಲಿಲ್ಲ. ಅದು ಸಾಮಾನ್ಯ ಜನರೊಂದಿಗೆ ಅವರದೇ ಭಾಷೆಯಲ್ಲಿ, ಅವರದೇ ನುಡಿಗಟ್ಟಿನಲ್ಲಿ ಮತ್ತು ಅವರ ಸಾಂಸ್ಕೃತಿಕ ಸಂವೇದನೆಗೆ ಅನುಗುಣವಾಗಿ ಸಂಭಾಷಣೆಯನ್ನು ಮುಂದುವರೆಸಿತು. ಆದರೆ ಜಾತ್ಯತೀತರು ಇವುಗಳಿಂದ ಕಳಚಿಕೊಂಡಿದ್ದರು. ಅದಕ್ಕಿಂತ ದುರದೃಷ್ಟಕರವಾಗಿ, ಜನಪ್ರಿಯ ಸಂಸ್ಕೃತಿಯೊಂದಿಗೆ ಸಂಪರ್ಕ ಸಾಧಿಸಲು ಪ್ರಯತ್ನವನ್ನೂ ಮಾಡಲಿಲ್ಲ. ಜಾತ್ಯತೀತ ಎನ್ನುವುದು ಒಂದು ಗಣ್ಯರ ತತ್ವ ಸಿದ್ಧಾಂತ ಆಗುತ್ತಿದ್ದ ಸಂದರ್ಭದಲ್ಲಿ ಹಿಂದುತ್ವ (ಮತ್ತು ಅಲ್ಪಸಂಖ್ಯಾತರಲ್ಲಿ ಹಿಂದುತ್ವದ ಸಮನಾದದ್ದು) ಜನಪ್ರಿಯ ನಂಬಿಕೆಯಾಗಿ ಬೆಳೆಯಿತು. ಅಂತಿಮವಾಗಿ, ಜನಪ್ರಿಯ ನಂಬಿಕೆಗಳೇ ಗೆಲ್ಲುವುದನ್ನು ನಮ್ಮ ಪ್ರಜಾಪ್ರಭುತ್ವ ಖಚಿತಪಡಿಸಿಕೊಂಡಿತು.

ಧರ್ಮ ಮತ್ತು ಪರಂಪರೆಗಳ ಬಗ್ಗೆ ಇದ್ದ ಉದಾಸೀನತೆಯು ಜನಪ್ರಿಯ ನಂಬಿಕೆಗಳೊಂದಿಗೆ ಸಂಪರ್ಕ ಕಳೆದುಕೊಳ್ಳುವುದನ್ನು ಖಚಿತಪಡಿಸಿಕೊಂಡಿತು ಹಾಗೂ ಪರಿಕಲ್ಪನೆಗಳ ಈ ಯುದ್ಧದಲ್ಲಿ ಸೋಲುವುದನ್ನು ನಿಶ್ಚಿತಗೊಳಿಸಿತು. ನಮ್ಮ ಸ್ವಾತಂತ್ರ ಸಂಗ್ರಾಮದ ಕಾಲದಲ್ಲಿ, ನಮ್ಮ ಬಹುತೇಕ ರಾಷ್ಟ್ರೀಯ ನಾಯಕರು ಆಳವಾಗಿ ಧಾರ್ಮಿಕ ವ್ಯಕ್ತಿಗಳಾಗಿದ್ದರೂ, ಅದೇ ಸಮಯದಲ್ಲಿ ರಾಜಿಯಾಗದ ಜಾತ್ಯತೀತರೂ ಆಗಿದ್ದರು. ಇದಕ್ಕೆ ಜವಾಹರಲಾಲ್ ನೆಹರು ಅವರು ಅಪವಾದ ಎಂತಲೇ ಹೇಳಬಹುದು. ಇತರ ನಾಯಕರು ಧರ್ಮದೊಂದಿಗೆ ಆಳವಾಗಿ ಬೆಸೆದುಕೊಂಡಿದ್ದರು, ಕೆಲವು ಬಾರಿ ಒಂದಕ್ಕಿಂತ ಹೆಚ್ಚು ಧರ್ಮಗಳೊಂದಿಗೆ ಬೆಸೆದುಕೊಂಡಿದ್ದರು. ನಮ್ಮ ಅನೇಕ ರಾಷ್ಟ್ರೀಯ ನಾಯಕರು ಭಗವದ್ಗೀತೆಯ ಮೇಲೆ ಟಿಪ್ಪಣಿಗಳನ್ನು ಬರೆದರು. ಮೌಲಾನಾ ಆಝಾದ್‌ರಂತಹ ನಾಯಕರನ್ನು ಇಸ್ಲಾಮ್‌ನ ವಿದ್ವಾಂಸ ಎಂದು ಗೌರವಿಸಲಾಗುತ್ತಿತ್ತು. ವಿನೋಬಾ ಭಾವೆ ಅವರು ಹಲವಾರು ಧರ್ಮಗಳ ಬಗ್ಗೆ ಆಳವಾದ ಅರಿವನ್ನು ಹೊಂದಿದವರಾಗಿದ್ದರು. ಆದರೂ ಒಂದು ಧರ್ಮ ಇನ್ನೊಂದು ಧರ್ಮದ ಮೇಲೆ ಪ್ರಾಬಲ್ಯ ಹೊಂದದ ಭಾರತದ ಪರಿಕಲ್ಪನೆಗೆ ಬೆಸೆದುಕೊಂಡವರಾಗಿದ್ದರು.

ಸಾಂಸ್ಕೃತಿಕ ನಿರ್ವಾತ, ರಾಜಕೀಯ ಶೋಷಣೆ

ಈ ಮೇಲೆ ಹೇಳಿದ್ದನ್ನು ಇಂದಿನ ಸಾರ್ವಜನಿಕ ಜೀವನಕ್ಕೆ ಹೋಲಿಸಿ ನೋಡಿ. ಆಳವಾಗಿ ಧಾರ್ಮಿಕವಾಗಿಯೂ ಕಟ್ಟಾ ಜಾತ್ಯತೀತರಾಗಿರುವ ಎಷ್ಟು ರಾಜಕಾರಣಿಗಳನ್ನು ನಾವಿಂದು ಗುರುತಿಸಬಹುದು? ರಾಜಕಾರಣಿಗಳನ್ನು ಬಿಟ್ಟುಬಿಡಿ, ಧಾರ್ಮಿಕ ಗ್ರಂಥಗಳೊಂದಿಗೆ ಮತ್ತು ಅದರ ಪರಂಪರೆಗಳೊಂದಿಗೆ ಬೆರಯಬಲ್ಲ, ಚರ್ಚಿಸಬಹುದಾದ ಎಷ್ಟು ಸುಶಿಕ್ಷಿತ ಭಾರತೀಯರನ್ನು ಗುರುತಿಸಬಲ್ಲೆವು? ಈ ಸಾಂಸ್ಕೃತಿಕ ನಿರ್ವಾತವು ಎಂತಹ ಪರಿಸ್ಥಿತಿಯನ್ನು ನಿರ್ಮಿಸುತ್ತದೆ ಎಂದರೆ, ಅದರಲ್ಲಿ ಯಾರು ಬೇಕಾದರೂ ಧಾರ್ಮಿಕ ಪರಂಪರೆಯ ರಕ್ಷಕರೆಂದು ಘೋಷಿಸಿಕೊಳ್ಳಬಹದು. ಈ ಪರಿಸ್ಥಿತಿ ರಾಜಕೀಯ ಶೋಷಣೆಗೆ ಪಕ್ಷವಾಗಿರುವ ಸಮಯವಾಗುತ್ತದೆ.

ಇದನ್ನೂ ಓದಿ : ಅಯೋಧ್ಯೆ ಪ್ರಕರಣದ ತೀರ್ಪನ್ನು ಹೇಗೆ ಸ್ವೀಕರಿಸಬೇಕು: ಯೋಗೇಂದ್ರ ಯಾದವ್‌

ಇದು ಹಿಂದೂಯಿಸಂನ ವಿಚಾರದಲ್ಲಿ ಅತ್ಯಂತ ಹೆಚ್ಚು ವಾಸ್ತವವಾಗಿದೆ. ಜಾತ್ಯತೀತ ರಾಜಕೀಯವು ಸಾಮಾನ್ಯವಾಗಿ ಎಲ್ಲಾ ಧರ್ಮಗಳ ಕುರಿತೂ ಉದಾಸೀನ ಹೊಂದಿದೆ. ಆದರೆ ಹಿಂದೂ ಧರ್ಮವನ್ನು ವಿಶೇಷವಾಗಿ ತಳ್ಳಿ ಹಾಕುವಂತೆ ನಡೆದುಕೊಂಡಿದೆ. ಒಂದು ಕಡೆ ಆಧುನಿಕ ವಸಾಹತುಶಾಹಿಯಿಂದ ಪ್ರಭಾವಿತ ಮನಸ್ಸುಗಳು ಹಿಂದೂಯಿಸಂನಂತಹ ಅಬ್ರಾಹಾಮಿಕ್ ಅಲ್ಲದ ಧರ್ಮದೊಂದಿಗೆ ಆಳವಾದ ಇರಿಸುಮುರಿಸಿನ ಸಂಬಂಧವನ್ನು ಹೊಂದಿದ್ದಾರೆ.

ಇನ್ನೊಂದು ಕಡೆ ಜಾತಿಯಾಧಾರಿತ ಅನ್ಯಾಯವನ್ನು ವಿರೋಧಿಸುವ, ಆಧುನಿಕ ಸಮಾನತೆಯ ವಿಚಾರವನ್ನು ಹೊಂದಿರುವ ಒಂದು ಎಳೆಯು ಹಿಂದೂ ಸಾಮಾಜಿಕ ಶ್ರೇಣಿಯೊಂದಿಗೆ ವಿಶೇಷವಾದ ಸಿಟ್ಟನ್ನು ಹೊಂದಿದ್ದಾರೆ. ಇವೆರಡೂ ಸೇರಿ ಹಿಂದೂಯಿಸಂ ಎನ್ನುವುದು ಭೂಮಿಯ ಮೇಲಿರುವ ಅತ್ಯಂತ ಪ್ರತಿಗಾಮಿ, ತಿರೋಗಾಮಿ ಧರ್ಮ ಎನ್ನುವ ಭಾವನೆಯನ್ನು ಆಧುನಿಕ, ಜಾತ್ಯತೀತ ವಲಯದಲ್ಲಿ ಸೃಷ್ಟಿಸುತ್ತವೆ. ಹಿಂದೂ ಧರ್ಮದ ಮೇಲೆ ತಪ್ಪು ಮಾಹಿತಿಯ ಮತ್ತು ತೀವ್ರವಾದ ಮತ್ತು ಒರಟಾದ ದಾಳಿಯನ್ನು ನಡೆಸುವುದು ನಮ್ಮ ಚಿಂತನಾವಲಯದಲ್ಲಿ ಒಂದು ಮಾಡಲೇಬೇಕಾದ ಕಾರ್ಯವಾಗಿಬಿಟ್ಟಿತ್ತು. ಇದು ಒಂದು ರಾಜಕೀಯ ಬ್ಯಾಕ್‌ಲ್ಯಾಶ್‌ಅನ್ನು ಸೃಷ್ಟಿಸುವುದಕ್ಕೆ ಒಂದೊಳ್ಳೆ ಅವಕಾಶವನ್ನು ಮಾಡಿಕೊಟ್ಟಿತು.

ಇಷ್ಟೆಲ್ಲಾ ಸಾಕಾಗುತ್ತಿಲ್ಲ ಎಂಬಂತೆ ತಮ್ಮ ಬೇರುಗಳನ್ನು ಕಳಚಿಕೊಂಡ ಗಣ್ಯರು ಯಾವುದೇ ಭಾರತೀಯ ಭಾಷೆಯಲ್ಲಿ ಮಾತನಾಡುವಲ್ಲಿ ವಿಫಲವಾದರು. ಮೊದಲೇ ಜನರೊಂದಿಗೆ ಕಡಿತಗೊಂಡಿದ್ದ ಸಂಪರ್ಕ ಸಂಪೂರ್ಣವಾಗಿ ಬೇರ್ಪಡುವುಂತೆ ಮಾಡಿತು. ಇಲ್ಲಿಯೂ ಸ್ವಾತಂತ್ರ್ಯ ಸಂಗ್ರಾಮದೊಂದಿಗೆ ಇರುವ ಹೋಲಿಕೆ, ವ್ಯತಿರಿಕ್ತತೆ ಅತ್ಯಂತ ಮುಖ್ಯವಾಗಿದೆ. ಆ ಸಮಯದ ನಮ್ಮ ಹೆಚ್ಚಿನ, ಬಹುತೇಕ ಎಲ್ಲ ಶ್ರೇಷ್ಠ ನಾಯಕರೂ ಇಂಗ್ಲಿಷ್ ಓದುತ್ತಿದ್ದರು. ಆದರೆ ಮಾತನಾಡುವುದು ಮತ್ತು ಬರೆಯುವುದನ್ನು ಪ್ರಮುಖವಾಗಿ ತಮ್ಮ ಭಾಷೆಗಳಲ್ಲೇ ಮಾಡಿದರು. ಸ್ವಾತಂತ್ರ್ಯೋತ್ತರದ ಜಾತ್ಯತೀತ ಗಣ್ಯರು ಏಕಭಾಷಿಕರಾಗಿ ಇಂಗ್ಲಿಷ್‌ಗೆ ಮಾತ್ರ ಸೀಮಿತಗೊಳಿಸಿಕೊಂಡಿದ್ದಾರೆ. ಆಳುವವರು ಮತ್ತು ಆಳಿಸಿಕೊಳ್ಳುವವರ ನಡುವೆ ಇರುವ ಈ ಸಾಂಸ್ಕೃತಿಕ ಕಂದರ ‘ಖಾನ್ ಮಾರ್ಕೆಟ್ ಗ್ಯಾಂಗ್’ ನಂತಹ ‘ವ್ಯಂಗ್ಯ’ಕ್ಕೆ ಅನುವು ಮಾಡಿಕೊಡುತ್ತದೆ.

ಇವುಗಳು ಅತ್ಯಂತ ಕಠೋರ ಮಾತುಗಳಾಗಿವೆ; ಬಹುಶಃ ಈ ಸಂಕಷ್ಟದ ಸಮಯದಲ್ಲಿ ಜಾತ್ಯತೀತ ಭಾರತದ ಪರಿಕಲ್ಪನೆಯನ್ನು ಉಳಿಸಲು ಹೆಣಗಾಡುತ್ತಿರುವ ಅನೇಕರಿಗೆ ಇದು ನೋವುಂಟು ಮಾಡಬಹುದು. ಆದರೆ ಇದು ಒಂದು ಸರಳ ಪಾಠವನ್ನು ಮುಟ್ಟಿಸುತ್ತದೆ ಎಂದು ನಾನು ಆಶಿಸುತ್ತೇನೆ; ತನ್ನ ಭಗ್ನಾವಶೇಷದಿಂದ ಜಾತ್ಯತೀತ ಭಾರತದ ಪರಿಕಲ್ಪನೆಯನ್ನು ಮರುಪಡೆಯುವುದೆನ್ನುವುದು, ಕೇವಲ ಹೇಗಾದರೂ ಮಾಡಿ ಬಿಜೆಪಿಯನ್ನು ಸೋಲಿಸುವುದಷ್ಟೇ ಅಲ್ಲ ಎಂದು ನಾವುಗಳು ಅರ್ಥ ಮಾಡಿಕೊಳ್ಳಬೇಕಿದೆ. ಇದಕ್ಕೆ ಒಂದು ರೀತಿಯ ಸಾಂಸ್ಕೃತಿಕ ರಾಜಕೀಯದ ಅವಶ್ಯಕತೆ ಇದೆ. ಈ ಹೊಸ ಸಾಂಸ್ಕೃತಿಕ ರಾಜಕೀಯವು ಸಾಮಾನ್ಯ ಜನರೊಂದಿಗೆ ಅವರದೇ ಆದ ಭಾಷೆಯಲ್ಲಿ, ನೈತಿಕ ನುಡಿಗಟ್ಟಿನಲ್ಲಿ, ಸಾಂಸ್ಕೃತಿಕ ಸಂವೇದನೆಯಲ್ಲಿ ಸತತವಾಗಿ ಮಾತುಕತೆ ನಡೆಸುವುದಕ್ಕೆ ಬದ್ಧವಾಗಿರಲು ಇಚ್ಛಿಸುವ ಒಂದು ಸಾಂಸ್ಕೃತಿಕ ರಾಜಕೀಯವಾಗಿರಬೇಕಿದೆ. ಇದಕ್ಕೆ ಯಾವುದೇ ಅಡ್ಡಹಾದಿ (ಶಾರ್ಟ್ ಕಟ್)ಗಳಿಲ್ಲ.

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...