Homeಮುಖಪುಟಆಂದೋಲನ ಅಂದರೆ ಬದಲಾವಣೆ, ಸುಂದರ ಬದಲಾವಣೆ, ಆ ಕನಸುಗಳನ್ನು ಇಟ್ಟುಕೊಂಡಿರುವವನೇ ಆಂದೋಲನ ಜೀವಿ ಮೋದಿಜಿ

ಆಂದೋಲನ ಅಂದರೆ ಬದಲಾವಣೆ, ಸುಂದರ ಬದಲಾವಣೆ, ಆ ಕನಸುಗಳನ್ನು ಇಟ್ಟುಕೊಂಡಿರುವವನೇ ಆಂದೋಲನ ಜೀವಿ ಮೋದಿಜಿ

ನಿಮಗೆ ಸ್ವಲ್ಪ ಮುಜುಗರ ಆಗಬಹುದೇನೋ ಅದರ ಹೆಸರು ಹೇಳುವುದಕ್ಕೆ, ಏಕೆಂದರೆ, ಯಾವುದನ್ನು ನೀವು ನಿಮ್ಮ ವೈಚಾರಿಕತೆಯ ನೆಲೆ ಅಂತೀರೋ ಯಾವುದರ ಪರಂಪರೆಯನ್ನು ನಿಮ್ಮ ಪರಂಪರೆಯಂತಿರೋ, ಅಂತಹ ಗುಂಪಿನವರು ಈ ದೇಶದ ಸ್ವಾತಂತ್ರ್ಯ ಆಂದೋಲನದಲ್ಲಿ ಒಂದೇ ಒಂದು ಬಲಿದಾನವನ್ನು ಸಹ ನೀಡಿಲ್ಲ, ಒಂದು ಹನಿ ರಕ್ತವನ್ನು ಸಹ ಹರಿಸಿಲ್ಲ.

- Advertisement -
- Advertisement -

ನಮ್ಮ ಪ್ರಧಾನ ಮಂತ್ರಿಯವರು ಸದನದಲ್ಲಿ ರಾಷ್ಟ್ರಪತಿ ಭಾಷಣಕ್ಕೆ ಉತ್ತರ ನೀಡುವ ಭರದಲ್ಲಿ ಎಂಥಾ ಮಾತುಗಳನ್ನಾಡಿದರೆಂದರೆ, ಅದೂ ಒಂದು ಕುಟಿಲ ನಗುವಿನೊಂದಿಗೆ…

ರಾಷ್ಟ್ರಪತಿ ಭಾಷಣ ಆದ ನಂತರ ಪ್ರತಿಪಕ್ಷಗಳು ಸ್ಪಂದಿಸುತ್ತವೆ ನಂತರ ಕೊನೆಗೆ ಪ್ರಧಾನ ಮಂತ್ರಿ ಉತ್ತರ ನೀಡುತ್ತಾರೆ. ಸಂಸದೀಯ ಪ್ರಜಾಪ್ರಭುತ್ವದಲ್ಲಿ ಇದು ಬಹಳ ಮಹತ್ವಪೂರ್ಣ ಸಂದರ್ಭ ಆಗಿರುತ್ತದೆ. ಪ್ರಧಾನ ಮಂತ್ರಿಯವರು ಪ್ರತಿಪಕ್ಷದ ಮೇಲೆ ದಾಳಿ ಮಾಡಿದರು. ಅದನ್ನು ಅವರು ಯಾವಾಗಲೂ ಮಾಡುತ್ತಲೆ ಇರುತ್ತಾರೆ. ’ಶರದ್ ಪವಾರ್ ಮೊದಲು ಹೀಗೆ ಹೇಳಿದ್ದರು. ಈಗ ಹೀಗೆ ಹೇಳುತ್ತಿದ್ದಾರೆ. ಕಾಂಗ್ರೆಸ್ ಹೀಗೆ ಹೇಳಿತ್ತು, ಹಾಗೆ ಮಾಡಿತ್ತು… ಇತರರ ಕಾಯಿಲೆ ಮೇಲೆ ಬೆಳೆಯುತ್ತವಲ್ಲಾ ಅದಕ್ಕೊಂದು ಪದವಿದೆ; ರೈತರು ಹೇಳುತ್ತಿರುತ್ತಾರೆ, ರೈತ ವಿಜ್ಞಾನಿಗಳು ಸಹಾ ಹೆಳುತ್ತಾರೆ… ತನ್ನ ಸ್ವಂತ ಕಾಲುಗಳ ಮೇಲೆ ನಿಲ್ಲದೇ ಇತರರ ಕಾಯಿಲೆಗಳ ಮೇಲೆ ಬೆಳೆಯುವ ಜೀವಿಯನ್ನು ಪ್ಯಾರಸೈಟ್ ಕರೆಯಲಾಗುತ್ತದೆ; ಪರಾವಲಂಬಜೀವಿ.’ ಹೀಗೆ ಹೇಳುತ್ತಾ ಹೋದರು.

ಇಂದು ಪ್ರಧಾನ ಮಂತ್ರಿ ಪರಾವಲಂಬಜೀವಿ ಶಬ್ದವನ್ನು ಬಳಸಿದ್ದಾರೆ. ತದನಂತರ ಅವರು ತಮ್ಮ ನಿಜವಾದ ಗುಂಡು ಹಾರಿಸಿದರು. ’ಆಂದೋಲನಜೀವಿ. ಈ ದೇಶದಲ್ಲಿ ಹೊಸ ಜೀವಿಯೊಂದು ಜನ್ಮತಾಳಿದೆ. ಅದು ಆಂದೋಲನ ಜೀವಿ. ಖತರ್ನಾಕ್ ಜನ. ಪ್ರತಿದಿನ ಒಂದು ಆಂದೋಲನವನ್ನು ಹುಡುಕುತ್ತಾರೆ. ಒಂದು ಮುಗಿದರೆ ಮತ್ತೊಂದು ಎರಡು ಮೂರು ಹೀಗೆ ಪ್ರತಿಯೊಂದು ದಿನ ಆಂದೋಲನವನ್ನು ಹುಡುಕುತ್ತಿರುತ್ತಾರೆ. ಇದು ಖತರ್ನಾಕ್ ಆಗಿಬಿಟ್ಟಿದೆ. ದೇಶವನ್ನು ಇವರಿಂದ ಕಾಪಾಡಬೇಕಿದೆ. ಇವರು ಆಂದೋಲನಗಳಿಗೆ ವಿಚಾರೆಧಾರೆಯನ್ನು ನೀಡುತ್ತಾರೆ.’ ಇವೆಲ್ಲಾ ಸ್ವತಃ ಪ್ರಧಾನ ಮಂತ್ರಿ ಬಾಯಿಂದಲೇ ಬಂದಂತಹ ಮಾತುಗಳು. ನಾನು ಕೇಳುತ್ತಲೇ ಇದ್ದೆ.

ಇದು ಈ ದೇಶದ ಪ್ರಧಾನ ಮಂತ್ರಿ ಮಾತನಾಡಿದ್ದಾ? ಅದು ಸಂಸತ್ತಿನಲ್ಲಿ ಮಾತನಾಡಿದ್ದಾ? ಅವರು ಯಾರ ಕಡೆ ಬೊಟ್ಟು ಮಾಡಿದ್ದರು ಎಂಬುದು ಸ್ಪಷ್ಟವಾಗಿತ್ತು.

ಅವರು ನಮ್ಮಿಂದ ಇಷ್ಟೊಂದು ಹೆದರುತ್ತಾರಾ? ಇದು ಗೌರವ ತರುವಂಥದ್ದಲ್ಲ ಪ್ರಧಾನಮಂತ್ರಿಗಳೇ… ಬಹಳ ದೊಡ್ಡ ಕುರ್ಚಿ ಮೇಲೆ ಕೂತಿದ್ದೀರಿ, ಮನಸ್ಸು ಎಷ್ಟೇ ಸಣ್ಣದಿರಲಿ, ಈ ದೇಶ ನಿಮಗೆ ಬಹಳ ದೊಡ್ಡ ಕುರ್ಚಿಯನ್ನು ನೀಡಿದೆ. ಇಂತಹ ದೊಡ್ಡ ಕುರ್ಚಿಯ ಮೇಲೆ ಕುಳಿತು ಇಂತಹ ಸಣ್ಣ ಮಾತುಗಳನ್ನಾಡುವುದೆಂದರೆ..? ಹಾಗೂ ನಮ್ಮಂತಹ ಸಣ್ಣ ಜನರಿಂದ ಹೆದರಿಕೊಳ್ಳುವುದು ನಿಮಗೆ ಗೌರವಕ್ಕೆ ತಕ್ಕುದ್ದಲ್ಲ.

PC : News18

ನಿಮಗೆ ಒಂದಿಷ್ಟು ನೆನಪಿಸಲಾ? ಸ್ವಲ್ಪ ದಿನಗಳ ಹಿಂದೆ ಟ್ವೀಟ್ ಇತ್ಯಾದಿಗಳನ್ನು ಸಹ ಮಾಡಿದ್ದಿರಿ “ಈ ದೇಶಕ್ಕೆ ಜನಾಂದೋಲನದ ಅಗತ್ಯವಿದೆ” ಎಂದು. ಇದು ನಿಮ್ಮದ್ದೇ ಟ್ವೀಟ್, ನನ್ನದಲ್ಲ ಮೋದಿಯವರೇ! ಆಗ ಜನಾಂದೋಲನ ಚೆನ್ನಾಗಿದೆ ಅನಿಸುತ್ತಿತ್ತು. ಕಾಂಗ್ರೆಸ್ ಅಧಿಕಾರದಲ್ಲಿತ್ತಲ್ಲ, ಯುಪಿಎ ಸರಕಾರ ಇತ್ತಲ್ಲ, ಆಗ ನೀವು ಪೆಟ್ರೊಲ್ ಬೆಲೆ ಸಮಸ್ತೆ ಬಗ್ಗೆ ಆಂದೋಲನ ನಡೆಸಿದ್ದಿರಿ. ಡಾಲರ್‌ನ ಪೈಪೋಟಿಯಲ್ಲಿ ರುಪಾಯಿ – 50ಕ್ಕೂ ಏರಿ, ರೂಪಾಯಿ ಮೌಲ್ಯ ಕುಸಿತದ ಬಗ್ಗೆ ಸಹ ಆಂದೋಲನ ಮಾಡುತ್ತಿದ್ದಿರಿ. ಶಿಕ್ಷಣದ ಬಗ್ಗೆ, ಇತರ ಯಾವ್ಯಾವುದೋ ವಿಷಯಗಳ ಬಗ್ಗೆ ಆಂದೋಲನವನ್ನು ನಡೆಸಿದ್ದಿರಿ. ಆಗೆಲ್ಲಾ ಆಂದೋಲನ ಚೆನ್ನಾಗಿರುತ್ತಿತ್ತು. ಈಗ ಕೆಟ್ಟದಾಗಿಬಿಡ್ತಾ? ಹೋಗಲಿ ಬಿಡಿ ಆಗ ಪ್ರತಿಪಕ್ಷದಲ್ಲಿದ್ದು ಆಟವಾಡಿದ್ದಿರಿ.

ಇನ್ನೂ ಹೆಚ್ಚು ನೆನಪಿಸಲಾ ಮೋದಿಜಿ ನಮಗೆ?

ಜಯಪ್ರಕಾಶ್ ಆಂದೋಲನ ನಡೆಯುತ್ತಿತ್ತು. ಆ ಆಂದೋಲನದ ಬಗ್ಗೆ ನಿಮ್ಮ ಜೀವನಚರಿತ್ರೆಯಲ್ಲಿ ಬಹಳ ಗರ್ವದಿಂದ ಹೇಳಿಕೊಳ್ಳುತ್ತೀರಿ. ಅದರಲ್ಲಿ ಭಾಗಿಯಾಗಿದ್ದೇನೆಂದು! ಅವರೆಲ್ಲರೂ ದೊಡ್ಡವರಾಗಿದ್ದರು. ಒಂದು ನವ ನಿರ್ಮಾಣದ ಆಂದೋಲನ ಕೂಡ ನಡೆಯುತ್ತಿತ್ತು ನಿಮ್ಮ ಗುಜರಾತಿನಲ್ಲಿ, ನನ್ನ ಗುಜರಾತಿನಲ್ಲಿ. ನವ ನಿರ್ಮಾಣ ಆಂದೋಲನದಿಂದಲೇ ನನ್ನ ರಾಜಕೀಯ ಜೀವನ ಶುರುವಾಗಿದೆ ಎಂದು ಕೂಡ ಹೇಳಿಕೊಂಡಿತ್ತೀರಿ. ಇದರಲ್ಲಿ ಎಷ್ಟು ಸತ್ಯ, ಎಷ್ಟು ಸುಳ್ಳು ಇದೆ ಎಂದು ನನಗೆ ಗೊತ್ತಿಲ್ಲ. ಸ್ವತಃ ನೀವೇ ಹೇಳಿಕೊಂಡಿದ್ದೀರಿ. ಆಂದೋಲನ ಹೆಸರಲ್ಲಿ ನಮ್ಮಂಥವರ ಮೇಲೆ ದಾಳಿ ಮಾಡಲು ತಾವು ಆಂದೋಲನದ ಹೆಸರಿಗೇ ಮಸಿ ಬಳಿಯುತ್ತೀರಾ? ಇಂದು ದೇಶದ ಲಕ್ಷಾಂತರ ಜನರಲ್ಲಿ ಬೀದಿಯಲ್ಲಿ ಕೂತಿದ್ದಾರೆ. ಅವರ ಮುಖಕ್ಕೆ ಮಸಿ ಬಳಿಯುತ್ತೀರಾ? ಅವರನ್ನು ಅವಹೇಳನಗೊಳಿಸುತ್ತೀರಾ? ಅವಮಾನ ಮಾಡುತ್ತೀರಾ? ಕೇವಲ ನಮ್ಮಂತಹವರನ್ನು ಸಹಿಸಿಕೊಳ್ಳಲಾಗುವುದಿಲ್ಲ ಎಂಬ ಕಾರಣಕ್ಕೆ ಈ ಆಂದೋಲನಗಳನ್ನು ಬದನಾಂ ಮಾಡುವಿರಾ? ಇರಲಿ..

ಇರಲಿ ನಮ್ಮನ್ನು ಬಿಟ್ಟುಬಿಡಿ. ಇಂದಿನ ಆಂದೋಲನಕಾರರನ್ನು ಬಿಟ್ಟುಬಿಡಿ.

ಸ್ವಲ್ಪ ನೆನಪಿಸಿಕೊಳ್ಳಿ. ಈಗ ನೆಹರು ಹೆಸರನ್ನು ನಾನು ತೆಗೆಯುವುದಿಲ್ಲ, ಯಾಕೆಂದರೆ ನೆಹರು ದೊಡ್ಡ ಹೋರಾಟವೇನೂ ಮಾಡಿರಲಿಲ್ಲ. ಆದರೆ ಪಟೇಲ್ ಹೆಸರು ತಮಗೆ ಜ್ಞಾಪಕವಿದೆ ಅಲ್ವಾ! ಬಾರ್ದೋಲಿ ಆಂದೋಲನ ಯಾರದ್ದು ಮೋದಿಜಿ? ಹಾಗೂ ಸುಭಾಸ್ ಚಂದ್ರ ಬೋಸ್ ಅವರೂ ಆಂದೋಲನ ಮಾಡಿದ್ದರಾ?

ಯಾವ ಆಂದೋಲನಗಳನ್ನು ನಾನು ಬೆಂಬಲಿಸುವುದಿಲ್ಲವೋ, ಅವುಗಳ ನೆನಪೂ ಮಾಡಿಕೊಳ್ಳುವ. ಬೇರೆಯವರದನ್ನು ಬಿಡಿ, ಶ್ಯಾಮಪ್ರಸಾದ ಮುಖರ್ಜಿಯವರನ್ನಾದರೂ ಗೌರವಿಸಬೇಕಿತ್ತಲ್ಲವೇ? ದೀನದಯಾಳ ಉಪಾಧ್ಯಯ ಅವರನ್ನು ನೆನಪಿಸಿಕೊಳ್ಳಬೇಕಿತ್ತು. ನಮ್ಮ ಮುಖಕ್ಕೆ ಮಸಿ ಬಳಿಯುವ ಪ್ರಯತ್ನದಲ್ಲಿ, ನೀವು ನಿಮ್ಮವರೇ ಎಂದು ಹೇಳಿಕೊಳ್ಳುವವರ ಮುಖಕ್ಕೂ ಮಸಿ ಬಳಿದುಬಿಟ್ಟಿರಲ್ಲ. ಇಷ್ಟು ಹೆದರಿಕೊಂಡು ಇದ್ದೀರಾ?

ಒಂದು ವಿಚಾರ ಹೇಳೋದು ಮರೆತುಬಿಟ್ಟೆ ಮೋದಿಜಿ, ಈ ದೇಶ ಇದೆಯಲ್ಲ, ಇದು ಆಂದೋಲನದ ಬುನಾದಿಯ ಮೇಲೆ ನಿಂತಿರುವಂಥದ್ದು. ಇದು ಯಾರಿಂದಲೋ ಬಹುಮಾನವಾಗಿ ಬಂದಿರುವ ದೇಶವಲ್ಲ, ಯಾರಿಂದಲೋ ಸ್ವತಂತ್ರವನ್ನು ಉಡುಗೊರೆಯಾಗಿ ತೆಗೆದುಕೊಂಡು ಆಗಿರುವ ದೇಶವೂ ಅಲ್ಲ, ಒಂದು ಆಂದೋಲನದ ಕಾರಣದಿಂದಾಗಿ ಇದು ಒಂದು ದೇಶವಾಗಿರುವುದು. ಆ ಆಂದೋಲನದ ಹೆಸರು ಭಾರತೀಯ ರಾಷ್ಟ್ರೀಯ ಆಂದೋಲನ ಅಂದರೆ ಸ್ವಾತಂತ್ರ್ಯ ಆಂದೋಲನ.

ನಿಮಗೆ ಸ್ವಲ್ಪ ಮುಜುಗರ ಆಗಬಹುದೇನೋ ಅದರ ಹೆಸರು ಹೇಳುವುದಕ್ಕೆ, ಏಕೆಂದರೆ, ಯಾವುದನ್ನು ನೀವು ನಿಮ್ಮ ವೈಚಾರಿಕತೆಯ ನೆಲೆ ಅಂತೀರೋ ಯಾವುದರ ಪರಂಪರೆಯನ್ನು ನಿಮ್ಮ ಪರಂಪರೆಯಂತಿರೋ, ಅಂತಹ ಗುಂಪಿನವರು ಈ ದೇಶದ ಸ್ವಾತಂತ್ರ್ಯ ಆಂದೋಲನದಲ್ಲಿ ಒಂದೇ ಒಂದು ಬಲಿದಾನವನ್ನು ಸಹ ನೀಡಿಲ್ಲ, ಒಂದು ಹನಿ ರಕ್ತವನ್ನು ಸಹ ಹರಿಸಿಲ್ಲ.

ಇವತ್ತು ನೀವು ಒಂದು ಸುಂದರವಾದ ಮಾತನ್ನು ಹೇಳಿದಿರಿ. ಈ ದೇಶಕ್ಕೆ ಎಫ್‌ಡಿಐನ ತೊಂದರೆಯಿದೆ ಎಂದು. ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಜಿಯ ತೊಂದರೆಯಿದೆ ಅಂತ. ಹೌದು ಮೋದಿಜಿ ಫಾರಿನ್ ಡಿಸ್ಟ್ರಕ್ಟಿವ್ ಐಡಿಯಾಲಿಯಿಂದ ತೊಂದರೆ ಇದೆ ಆದರೆ ಇಲ್ಲಿ ಎಫ್‌ಡಿಐ ಅಂದ್ರೆ ಈ ದೇಶದ ರಾಷ್ಟ್ರೀಯ ಆಂದೋಲನದ ಮಹಾನ್ ಪರಂಪರೆಯನ್ನು ಜರ್ಮನಿಯ ತುಚ್ಛವಾದ ರಾಷ್ಟ್ರೀಯವಾದದ ಮಟ್ಟಕ್ಕೆ ಇಳಿಸುವುದಿದೆಯಲ್ಲ ಅದು ಎಫ್‌ಡಿಐ. ಈ ದೇಶದ ರಾಷ್ಟ್ರವಾದವನ್ನು ಈ ದೇಶದ ಪರಂಪರೆಯಲ್ಲಿ ನೋಡದೆ, ಯಾರು ಈ ದೇಶದ ರಾಷ್ಟ್ರವಾದವನ್ನು ಈ ದೇಶದ ಮಣ್ಣಿನಲ್ಲಿ ಹುಡುಕದೆ, ಈ ದೇಶದ ರಾಷ್ಟ್ರವಾದಕ್ಕಾಗಿ ಜರ್ಮನಿಯ ನಕಲನ್ನು ಮಾಡುವುದು ಎಲ್ಲಕ್ಕಿಂತ ದೊಡ್ಡ ಎಫ್‌ಡಿಐ ಆಗಿದೆ.

ಅಂಥವರು ಈ ದೇಶವನ್ನು ಎಷ್ಟೊಂದು ಹಾಳು (ಡಿಸ್ಟ್ರಕ್ಷನ್) ಮಾಡಿದ್ದಾರೆ ಎಂದರೆ ಮೋದಿಜಿ, ಈಗ ಅವರ ಕಣ್ಣಿಗೆ ಎಲ್ಲಾ ಸಮಯದಲ್ಲೂ ಶತ್ರುಗಳೇ ಕಾಣಿಸುತ್ತಿದ್ದಾರೆ. ನೀವು ಪ್ರಧಾನ ಮಂತ್ರಿಯಾದಾಗಿನಿಂದ ಈ ದೇಶದಲ್ಲಿ ಬರೀ ಶತ್ರುಗಳೇ ಹುಟ್ಟಿದ್ರಾ ಹೇಗೆ? ದಿನಾಲು ಹೊಸ ಹೊಸ ಶತ್ರುಗಳು ಈ ದೇಶದಲ್ಲಿ ಸಿಕ್ತಿದಾರಾ? ಇನ್ನು ನಾಳೆಯಿಂದ ಆಂದೋಲನದಲ್ಲಿ ಇರುವವರು ಕೂಡ ಶತ್ರುಗಳಾಗುತ್ತಾರೆ ಅಲ್ಲವೇ? ಕೆಲವೊಮ್ಮೆಯಾದರೂ ಸ್ನೇಹಿತರನ್ನು ಆಯ್ಕೆ ಮಾಡಿ ಮೋದಿಜಿ. ಇಷ್ಟೊಂದು ದೊಡ್ಡ ಮಟ್ಟದ ಹುದ್ದೆಯನ್ನು ನೀಡಿದ್ದಾರೆ ಈ ದೇಶದ ಜನ, ಅದನ್ನು ಬಳಸಿಕೊಂಡು ಹೊಸ ಮಿತ್ರರನ್ನು ತನ್ನಿ ಈ ದೇಶಕ್ಕಾಗಿ, ಆ ಟ್ರಂಪ್‌ನಂತವರನ್ನು ಬಿಟ್ಟು. ಆತ ಬಂದಾಗೆಲ್ಲ ನಿಮ್ಮನ್ನು ಹಾಗೂ ನಮ್ಮ ಹಿಂದೂಸ್ತಾನವನ್ನು ಅವಮಾನ ಮಾಡುತ್ತಿದ್ದ, ಹೋಗ್ತಾ ಹೋಗ್ತಾ ಪ್ರಪಂಚವನ್ನೇ ಅವಮಾನ ಮಾಡಿ ಹೋದ.

ಶತ್ರುಗಳನ್ನು ಯಾಕ್ ಹುಡುಕುತ್ತೀರಾ ಸರ್?

ಈ ದೇಶ ಆಂದೋಲನದ ಮೇಲೆ ನಿಂತಿದೆ. ನಂಗೊತ್ತಿದೆ ಈಗ ನಿಮ್ಮ ಸ್ನೇಹಿತರು ಏನು ಹೇಳುತ್ತಾರೆ ಎಂದು. ಹೌದು ಆಂದೋಲನಜೀವಿ. ಆಂದೋಲನಜೀವಿಯೆಂದರೆ ಯಾರು ಅಂತ ಸ್ಪಷ್ಟವಾಗಿ ನಂಗೊತ್ತಿದೆ. ಮೂರು ತರಹ ಇದ್ದಾರೆ. ಒಂದು ಆಂದೋಲನ ಭೋಗಿ, ಇನ್ನೊಂದು ಆಂದೋಲನ ರೋಗಿ. ಮತ್ತೊಂದು ಆಂದೋಲನಜೀವಿ. ಮೋದಿಜಿ, ಗರ್ವದಿಂದ ಹೇಳುತ್ತೇನೆ ನಾನೊಬ್ಬ ಆಂದೋಲನ ಜೀವಿ ಎಂದು.

ಆಂದೋಲನ ಭೋಗಿ ಬಗ್ಗೆ ನಿಮಗೆ ಚೆನ್ನಾಗಿ ಗೊತ್ತಿದೆ ಅಲ್ವಾ, ಅವರು ಒಂದು ಸಲ ಆಂದೋಲನ ಮಾಡುತ್ತಾರೆ ಮತ್ತು ಜೀವನಪೂರ್ತಿ ಕುಳಿತುಕೊಂಡು ಅದರ ಫಲ ತಿಂತಾರೆ. ಹಿಂದೆ ಒಂದು ರಾಮಜನ್ಮಭೂಮಿ ಆಂದೋಲನ ಅಂತಾ ನಡೆದಿತ್ತು ನಿಮಗೆ ನೆನಪಿರಬಹುದು. ಅಡ್ವಾಣಿ ಜೊತೆ ನಿಮ್ಮ ಫೋಟೋನು ಇರುತ್ತಿತ್ತು. ಈಗ ಅಡ್ವಾಣಿಯವರು ಕಾಣಿಸುವುದೇ ಇಲ್ಲ ಅಲ್ವಾ ಮೋದಿಜಿ. ಎಲ್ಲಿ ಹೋಗಿದ್ದಾರೆ ಅನ್ನೋದೇ ಗೊತ್ತಾಗ್ತಿಲ್ಲ. ಬಹುಶಃ ಆಂದೋಲನದ ಭೋಗಿ ಯಾರು ಎಂದರೆ ಅವರನ್ನು ಗುರುತಿಸುತ್ತೀರಲ್ವಾ? ಯಾರು ಆಂದೋಲನ ಅಂತೇಳಿ ಜನರನ್ನು ಸಾಯಿಸಿ ಹೊಟ್ಟೆ ತುಂಬಿಸಿಕೊಳ್ಳುತ್ತಾರೋ ಅವರು. ಇನ್ನೂ ಆಂದೋಲನ ರೋಗಿ ಅಂತಿರ್ತಾರೆ. ಇವರಿಗೆ ಅಧಿಕಾರದ ರೋಗ ಇರುತ್ತೆ. ಇವತ್ತು ಒಂದು ಒಳ್ಳೆಯ ಕೆಲಸ ಮಾಡಿದ್ರಿ ನೀವು, ನಿಮ್ಮ ಭಾಷಣದಲ್ಲಿ ಕಾಂಗ್ರೆಸ್‌ನವರನ್ನು ಸೇರಿಸಿಕೊಂಡಿರಿ, ಅಣ್ಣಾ, ಈ ಆಂದೋಲನಕಾರಿಗಳ ಸಹವಾಸದಿಂದ ನೀವು ಸಾಯ್ತೀರಾ, ನಾವು ಸಾಯ್ತೀವಿ, ಇಬ್ಬರೂ ಸೇರಿ ಈ ರೀತಿ ಮಾಡೋಣ ಎಂದು ಮುಕ್ತವಾಗಿ ಸಂಸತ್ತಿನಲ್ಲಿ ವಿಪಕ್ಷಗಳಿಗೆ ಕಣ್ಣಿನ ಸೂಚನೆಯೊಂದಿಗೆ ನೀವು ಹೇಳುತ್ತಿದ್ದೀರಾ. ನೀವೂ ಆಂದೋಲನಕಾರಿಗಳನ್ನು ಹಿಡಿತದಲ್ಲಿಡಿ, ನಾವೂ ಟೈಟಾಗಿ ಇಟ್ಕೊಳ್ತೀವಿ ಎಂದು.

ಇದನ್ನೇ ನಾನು ರಾತ್ರಿ-ಹಗಲು ಹೇಳ್ತಾ ಇರೋದು, ಇದು ಕಾಂಗ್ರೆಸ್ ಬಿಜೆಪಿಯ ಆಟವಲ್ಲ. ಇದು ಪ್ರಭುತ್ವ ಹಾಗೂ ರೈತರ ನಡುವಿನ ಹೋರಾಟವಾಗಿದೆ. ಅಧಿಕಾರದ ವಿರುದ್ಧ ರೈತನಿದ್ದಾನೆ/ಳೆ. ಈ ಆಂದೋಲನ ಯಾವುದೋ ವಿರೋಧ ಪಕ್ಷದಲ್ಲ. ಒಳ್ಳೆಯದೇ ಆಯ್ತು ನೀವು ಈ ಮಾತನ್ನು ಒಪ್ಪಿಕೊಂಡದ್ದು. ನಿಮ್ಮ ನೋಟದಲ್ಲಿ ಸಂಸತ್ತಿನ ಒಳಗಡೆ ಆಡಳಿತ ಹಾಗೂ ವಿರೋಧ ಪಕ್ಷಗಳೆಲ್ಲ ಒಂದೇ ಆಗಿವೆ. ಹಾಗಾಗಿ ಒಳ್ಳೆಯದೇ ಆಯ್ತು ನೀವು ಈ ಮಾತನ್ನು ಹೇಳಿದ್ದು. ಇದು ರೈತರ ಸಂಘರ್ಷ, ಆತ ನಿಂತು ನಡೆಸುತ್ತಿರುವ ಆಡಳಿತದ ವಿರುದ್ಧದ ಸಂಘರ್ಷ.

ಇನ್ನು ಆಂದೋಲನ ರೋಗಿಗಳು. ನಾನು ಹೇಳಿದೆನಲ್ಲ ಕೆಲವರು ಆಂದೋಲನ ರೋಗಿ ಎಂದು, ಅವರಿಗೆ ದಿನರಾತ್ರಿ ಕನಸುಗಳು ಬೀಳತ್ತೆ. ’ಓಹ್ ಆಂದೋಲನ ಅಂತೆ, ಆಂದೋಲನ ಅಂತೆ, ಆಂದೋಲನ ಆಗಿಬಿಟ್ರೆ ಏನು?’ ಎಂಬ ಕನಸುಗಳು. ಏಕೆಂದರೆ ಯಾರಿಗೆ ಸತ್ಯದಿಂದ ಭಯ ಆಗುತ್ತೋ, ಅವರಿಗೆ ಆಂದೋಲನದಿಂದಲೂ ಭಯ, ಯಾರಿಗೆ ಬದಲಾವಣೆಯಿಂದ ಭಯ ಆಗುತ್ತೋ, ಅವರಿಗೆ ಆಂದೋಲನದಿಂದ ಭಯ ಆಗುತ್ತೆ, ಯಾರಿಗೆ ಭವಿಷ್ಯದಿಂದ ಭಯ ಆಗುತ್ತೋ, ಅವರಿಗೆ ಆಂದೋಲನ ಅಂದರೆ ಭಯ.

ಇವೆಲ್ಲದರ ಹೊರತಾಗಿ ಇರುವವನೆ ಆಂದೋಲನ ಜೀವಿ. ಅವರು ಆಂದೋಲನದ ಲಾಭಕ್ಕಾಗಿ ಇರುವವರಲ್ಲ, ಆಂದೋಲನದಿಂದ ಓಡುವವರಲ್ಲ, ಅವರು ಆಂದೋಲನವನ್ನು ಜೀವಿಸುತ್ತಾರೆ, ಪ್ರತಿ ಕ್ಷಣ ಜೀವಿಸುತ್ತಾರೆ. ಆಂದೋಲನದ ಆಸೆ, ಆಕಾಂಕ್ಷೆ, ಸಂದೇಹಗಳನ್ನು ಜೀವಿಸುತ್ತಾರೆ, ಆಂದೋಲನ ಸತ್ಯವನ್ನು ಜೀವಿಸುತ್ತಾರೆ, ಆಂದೋಲನದ ಕನಸನ್ನು ಜೀವಿಸುತ್ತಾರೆ. ಆಂದೋಲನ ಅಂದರೆ ಬದಲಾವಣೆ, ಸುಂದರ ಬದಲಾವಣೆ, ಆತ ಆಂದೋಲನದ ಕನಸುಗಳನ್ನು ಇಟ್ಟುಕೊಂಡು ಮಲಗುತ್ತಾರೆ, ಏಳುತ್ತಾರೆ, ಆ ಕನಸುಗಳು ಅವರಿಗೆ ನಿದ್ರೆ ಮಾಡಲು ಬಿಡುವುದಿಲ್ಲ. ಅವರು ಆಂದೋಲನಜೀವಿಗಳು ಮೋದಿಜಿ. ನಿಮಗೆ ಸ್ವಲ್ಪ ಕಷ್ಟ ಆಗಬಹುದು ಮೋದಿಜಿ ಇಂತಹ ವಿಚಾರಗಳನ್ನೆಲ್ಲ ಅರ್ಥಮಾಡಿಕೊಳ್ಳುವುದು. ಆದರೆ ಯೋಚಿಸಿ, ರಾಷ್ಟ್ರಪತಿ ಭಾಷಣದ ಮೇಲಿನ ಚರ್ಚೆಯ ಸಮಯದಲ್ಲಿ ದೇಶದ ಪ್ರಧಾನಮಂತ್ರಿಯಾಗಿ ನಿಂತುಕೊಂಡು ಟ್ರೋಲ್ ಆರ್ಮಿಗಳಿಗೆ ಬೇರೆಯವರ ಮೇಲೆ ದಾಳಿ ಮಾಡಲು ಪದಗಳನ್ನು ಕೊಡುವ ಕೆಲಸ ಮಾಡುತ್ತೀರಾ ಎಂದರೆ ಈ ದೇಶದ ಇಂತಹ ದೊಡ್ಡ ಪದವಿಗೆ ಶೋಭೆ ತರುವಂತಹದ್ದಲ್ಲ ಎಂದು.

ಆದರೆ ನಿಮಗೆ ಗೊತ್ತಾ, ಪ್ರಧಾನ ಮಂತ್ರಿಯವರೇ ನೀವು ಏಸೆಯುವ ನಿಮ್ಮ ದಾಳಗಳು ಉಲ್ಟಾ ಹೊಡೆದಿವೆ. ನೀವು ಎಷ್ಟೊಂದು ಪದಗಳನ್ನು ಬೈಗುಳಗಳನ್ನಾಗಿ ಬದಲಾವಣೆ ಮಾಡುವ ಪ್ರಯತ್ನ ಮಾಡಿದಿರಿ, ಆದರೆ ಜನರು ಅವುಗಳನ್ನೇ ಮೆಡಲ್ ಆಗಿ ಮಾಡಿದ್ದಾರೆ. ಇದೇ ಮಾತು ನೀವು ಹೇಳಿದ ಆಂದೋಲನ ಜೀವಿ ಅನ್ನೋ ಪದವೇ ನಾಳೆ ಬೆಳಗ್ಗೆ ಒಂದು ಗೌರವದ ಪದವಾಗಿ, ಒಂದು ಪದಕವಾಗಿ, ಒಂದು ಮಡೆಲ್ ಆಗಿಬಿಡಬಹುದೇನೋ! ಜನ ತಮ್ಮನ್ನು ತಾವು ಆಂದೋಲನ ಜೀವಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳಬಹುದು. ಯಾರೆಲ್ಲ ಒಂದು ಸುಂದರವಾದ ಭಾರತದ ಕನಸುಗಳನ್ನು ಕಾಣುತ್ತಾರೆ ಅಂಥವರು ತಮ್ಮನ್ನು ತಾವು ಆಂದೋಲನ ಜೀವಿ ಅಂತ ಕರೆದುಕೊಳ್ಳಬಹುದು ಅಲ್ಲವೇ?

ಬೇರೆಯವರ ಬಗ್ಗೆ ಗೊತ್ತಿಲ್ಲ ಆದರೆ ನೀವಂತೂ ನನಗೊಂದು ಹೆಸರು ಕೊಟ್ಟಿದ್ದೀರಿ. ಧನ್ಯವಾದಗಳು ಮೋದಿಜಿ.

(ಇದು ಯೋಗೇಂದ್ರ ಯಾದವ್ ಅವರು ಮಾಡಿದ ಭಾಷಣದ ಆಯ್ದ ಪಠ್ಯರೂಪ. ಇದನ್ನು ರಾಜಶೇಖರ್ ಅಕ್ಕಿ ಅಕ್ಷರ ರೂಪಕ್ಕೆ ಇಳಿಸಿದ್ದಾರೆ)

ಯೋಗೇಂದ್ರ ಯಾದವ್

ಯೋಗೇಂದ್ರ ಯಾದವ್
ರಾಜಕೀಯ ಚಿಂತಕರು ಮತ್ತು ಸ್ವರಾಜ್ ಇಂಡಿಯಾದ ರಾಷ್ಟ್ರಾಧ್ಯಕ್ಷರು. ರೈತ ಸಮಸ್ಯೆಗಳನ್ನು ಒಳಗೊಂಡಂತೆ ಪ್ರಸಕ್ತ ದೇಶದ ಸಮಸ್ಯೆಗಳ ಬಗ್ಗೆ ಆಳವಾಗಿ ಅಧ್ಯಯನ ನಡೆಸಿರುವ ಯೋಗೇಂದ್ರ ಅವರು ಜನಪರ ಹೋರಾಟಗಳಲ್ಲಿ ಭಾಗಿಯಾಗುವಂತೆಯೇ ಅವುಗಳ ವಿಚಾರಗಳನ್ನು ಸಾಮಾನ್ಯರಿಗೆ ತಿಳಿಸಲು ಜನಪ್ರಿಯ ಪತ್ರಿಕೆಗಳಿಗೆ ಸಕ್ರಿಯವಾಗಿ ಲೇಖನಗಳನ್ನು ಬರೆಯುತ್ತಿದ್ದಾರೆ.


ಇದನ್ನೂ ಓದಿ: ಬ್ಯಾರಿಕೇಡ್‌ಗಳನ್ನು ತೆಗೆಯಿರಿ, ಬಂಧಿಸಿರುವ ರೈತರನ್ನು ಬಿಡುಗಡೆಗೊಳಿಸಿ: ಅಂತರರಾಷ್ಟ್ರೀಯ ನ್ಯಾಯಶಾಸ್ತ್ರಜ್ಞರ ಆಯೋಗ

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

1 COMMENT

LEAVE A REPLY

Please enter your comment!
Please enter your name here

- Advertisment -

Must Read

ಬಿಸಿಲಿನ ತಾಪವಿದ್ದರೂ ಬಿಜೆಪಿ ಒತ್ತಡದಿಂದ ಬಂಗಾಳದಲ್ಲಿ 7 ಹಂತದ ಚುನಾವಣೆ: ಅಭಿಷೇಕ್ ಬ್ಯಾನರ್ಜಿ

0
ಪಶ್ಚಿಮ ಬಂಗಾಳದಲ್ಲಿ ಸಾಕಷ್ಟು ಬಿಸಿಲಿನ ತಾಪವಿದ್ದರೂ, ಏಳು ಹಂತಗಳಲ್ಲಿ ಲೋಕಸಭೆ ಚುನಾವಣೆ ಆಯೋಜಿಸುವಂತೆ ಬಿಜೆಪಿ ಚುನಾವಣಾ ಆಯೋಗವನ್ನು ಒತ್ತಾಯಿಸಿದೆ ಎಂದು ಟಿಎಂಸಿಯ ನಾಯಕ ಅಭಿಷೇಕ್ ಬ್ಯಾನರ್ಜಿ ಮಂಗಳವಾರ ಆರೋಪಿಸಿದ್ದಾರೆ. ಟಿಎಂಸಿಯ ಡಾರ್ಜಿಲಿಂಗ್ ಅಭ್ಯರ್ಥಿ ಗೋಪಾಲ್...