ಒಡಿಶಾದಲ್ಲಿ ಹೆಚ್ಚುತ್ತಿರುವ ಮಹಿಳೆಯರ ಮೇಲಿನ ದೌರ್ಜನ್ಯಕ್ಕೆ ಸಾಕ್ಷಿ ಎಂಬಂತೆ, ಚಲಿಸುತ್ತಿದ್ದ ವ್ಯಾನ್‌ನಲ್ಲಿ ಯುವತಿಯೊಬ್ಬರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಿ, ಬಳಿಕ ಆಕೆಯನ್ನು ಹೆದ್ದಾರಿ ಬದಿ ಬಿಟ್ಟು ಹೋದ ಆಘಾತಕಾರಿ ಘಟನೆ ವರದಿಯಾಗಿದೆ.
ಕಳೆದ ಶುಕ್ರವಾರ (ಆ.29) ಸಂಜೆ ಒಡಿಶಾದ ಉಡಾಲ ಪೊಲೀಸ್ ಠಾಣಾ ವ್ಯಾಪ್ತಿಯ ರಾಜ್ಯ ಹೆದ್ದಾರಿಯಲ್ಲಿ ಪ್ರಯಾಣಿಕರ ವ್ಯಾನ್‌ನಲ್ಲಿ 21 ವರ್ಷದ ಯುವತಿಯ ಮೇಲೆ ಆರು ಜನರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.
ಪೊಲೀಸರಿಗೆ ನೀಡಿರುವ ದೂರಿನ ಪ್ರಕಾರ, ಉಡಾಲ-ಬಾಲಸೋರ್ ರಸ್ತೆಯಲ್ಲಿ ಸಂಜೆ 6 ರಿಂದ 7 ಗಂಟೆಯ ನಡುವೆ ಈ ಘಟನೆ ನಡೆದಿದೆ. ಆರೋಪಿಗಳೆಲ್ಲರೂ ಶರತ್ ಪ್ರದೇಶದವರಾಗಿದ್ದು, ಸಂತ್ರಸ್ತೆ ಸಹಾಯಕ್ಕಾಗಿ ಕಿರುಚಿದಾಗ ಆಕೆಯನ್ನು ರಸ್ತೆ ಬದಿ ಬಿಟ್ಟು ಹೋಗಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಯುವತಿಯ ತಾಯಿ ನೀಡಿದ ದೂರಿನಲ್ಲಿ, ಈ ವರ್ಷದ ಆರಂಭದಲ್ಲಿ ಬಂಗಿರಿಪೋಸಿಯಲ್ಲಿ ನಡೆದ ಮಕರ ಹಬ್ಬದ ಆಚರಣೆಯ ಸಂದರ್ಭದಲ್ಲಿ ಭೇಟಿಯಾದ ಇಬ್ಬರು ಯುವಕರು ಯುವತಿಗೆ ಪರಿಚ ಇದ್ದರು. ಆ ಇಬ್ಬರು ಆಕೆಯೊಂದಿಗೆ ಫೋನ್ ನಂಬರ್ ವಿನಿಮಯ ಮಾಡಿಕೊಂಡಿದ್ದರು. ಖಾಸಗಿ ಕಂಪನಿಯಲ್ಲಿ ಆಕೆಗೆ ಕೆಲಸ ಕೊಡಿಸುವುದಾಗಿ ಭರವಸೆ ನೀಡಿದ್ದರು. ಅವರ ಮಾತುಗಳನ್ನು ನಂಬಿದ ತಾಯಿ ಅವರೊಂದಿಗೆ ಮಾತುಕತೆ ನಡೆಸಲು ಮಗಳಿಗೆ ಅವಕಾಶ ನೀಡಿದ್ದರು.
ಶುಕ್ರವಾರ, ಆ ಇಬ್ಬರು ಇತರ ನಾಲ್ವರೊಂದಿಗೆ ಯುವತಿಯ ಮನೆಗೆ ಹೋಗಿ ತಮ್ಮೊಂದಿಗೆ ಬರುವಂತೆ ಆಕೆಯ ಮನವೊಲಿಸಿದ್ದರು. ಪರಿಚಯಸ್ಥರು ಕರೆದ ಕಾರಣ ಯುವತಿ ಹೋಗಿದ್ದರು. ಅವರ ವಾಹನವು ಕಪ್ತಿಪಡ ಚೌಕ್‌ನಿಂದ ಬಾಲಸೋರ್ ಕಡೆಗೆ ಹೋಗುತ್ತಿದ್ದಾಗ, ಬಂಗಿರಿಪೋಸಿಯಿಂದ ಸುಮಾರು 70 ಕಿ.ಮೀ ದೂರದಲ್ಲಿ ವ್ಯಾನ್‌ನೊಳಗೆ ಎಲ್ಲರೂ ಸೇರಿ ಯುವತಿ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ್ದಾರೆ. ಈ ವೇಳೆ ಸಹಾಯಕ್ಕಾಗಿ ಆಕೆ ಕಿರುಚಿದಾಗ, ಆರೋಪಿಗಳು ಆಕೆಯನ್ನು ರಸ್ತೆ ಬದಿಯಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಸಂತ್ರಸ್ತೆ ತನ್ನ ತಾಯಿಗೆ ವಿಷಯ ತಿಳಿಸುವಲ್ಲಿ ಯಶಸ್ವಿಯಾಗಿದ್ದರು. ತಾಯಿ ತಕ್ಷಣ ಸ್ಥಳಕ್ಕೆ ಧಾವಿಸಿ ಮಗಳನ್ನು ಮನೆಗೆ ಕರೆದೊಯ್ದಿದ್ದರು. ನಂತರ, ಅವರು ಬಂಗಿರಿಪೋಸಿ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ.
ಎಫ್‌ಐಆರ್ ಆಧರಿಸಿ, ಬಂಗಿರಿಪೋಸಿ ಐಐಸಿ ಬೀರೇಂದ್ರ ಸೇನಾಪತಿ ಶನಿವಾರ ಬೆಳಗಿನ ಜಾವ ಶರತ್‌ನ ಇಬ್ಬರು ಶಂಕಿತರನ್ನು ಬಂಧಿಸಿ, ನಂತರ ಉಡಾಲ ಪೊಲೀಸ್ ಠಾಣೆಗೆ ಕರೆದೊಯ್ದಿದ್ದಾರೆ.
ಉಡಾಲ ಪೊಲೀಸ್ ಠಾಣೆಯಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣ ದಾಖಲಾಗಿದೆ. ಇತರ ನಾಲ್ವರು ತಲೆಮರೆಸಿಕೊಂಡಿದ್ದಾರೆ ಎಂದು ಉಡಾಲ ಎಸ್‌ಡಿಪಿಒ ಹೃಸಿಕೇಶ್ ನಾಯಕ್ ತಿಳಿಸಿದ್ದಾರೆ. ಪೊಲೀಸರು ಹುಡುಕಾಟ ಆರಂಭಿಸಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.