ಸಂಸತ್ತಿನ ಬಳಿ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದ ಉತ್ತರ ಪ್ರದೇಶದ ಬಾಗ್‌ಪತ್‌ನ 26 ವರ್ಷದ ಯುವಕ ಘಟನೆ ನಡೆದು ಎರಡು ದಿನಗಳ ನಂತರ ನವದೆಹಲಿಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಶುಕ್ರವಾರ ಸಾವನ್ನಪ್ಪಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಯುವಕನನ್ನು ಜಿತೇಂದ್ರ ಕುಮಾರ್ ಎಂದು ಗುರುತಿಸಲಾಗಿದೆ.
ಜಿತೇಂದ್ರ ಕುಮಾರ್ ಬುಧವಾರ ಮಧ್ಯಾಹ್ನ 3.30 ಕ್ಕೆ ಸಂಸತ್ ಕಟ್ಟಡದ ವೃತ್ತದ ಬಳಿಯ ಉದ್ಯಾನವನದಲ್ಲಿ ಪೆಟ್ರೋಲ್ ಸುರಿದು ಆತ್ಮಹತ್ಯಾಗೆ ಯತ್ನಿಸಿದ್ದಾರೆ. ಈ ವೇಳೆ ಸ್ಥಳದಲ್ಲಿ ನಿಯೋಜನೆಗೊಂಡಿದ್ದ ಭದ್ರತಾ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ನೆರವಾಗಿದ್ದರು. ಅಲ್ಲಿಂದ ಜಿತೇಂದ್ರ ಅವರನ್ನು ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆಗೆ ಕರೆದೊಯ್ದು ಅಲ್ಲಿ ಚಿಕಿತ್ಸೆ ನೀಡಲಾಗಿತ್ತು. ಆ ವೇಳೆ ಅವರಿಗೆ 95% ಸುಟ್ಟ ಗಾಯಗಳಾಗಿವೆ ಎಂದು ಪಿಟಿಐ ವರದಿ ಮಾಡಿತ್ತು. ಸಂಸತ್ತಿನ ಬಳಿ
“ಅವರು [ಶುಕ್ರವಾರ] ಸುಮಾರು 2 ಗಂಟೆಗೆ ನಿಧನರಾದರು,” ಎಂದು ಪೊಲೀಸ್ ಅಧಿಕಾರಿ ಹೇಳಿಕೆಯನ್ನು ಉಲ್ಲೇಖಿಸಿ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ. “ಯುವಕನ ಮರಣೋತ್ತರ ಪರೀಕ್ಷೆ ನಡೆಸಲಾಗಿದ್ದು, ವರದಿಗಾಗಿ ಕಾಯಲಾಗುತ್ತಿದೆ. ಅವರ ದೇಹವನ್ನು ಅವರ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
“ಸಾವಿಗೀಡಾದ ಯುವಕ ನೀಡಿದ್ದ ಹೇಳಿಕೆಯಲ್ಲಿ, ಸ್ಥಳೀಯ ಪೊಲೀಸರು ಪ್ರಕರಣವನ್ನು ಸರಿಯಾಗಿ ತನಿಖೆ ಮಾಡುತ್ತಿಲ್ಲ ಎಂದು ಅವರು ಆರೋಪಿಸಿದ್ದಾರೆ. ಕೆಲವು ವರ್ಷಗಳಿಂದ ತನಗೆ ಮತ್ತು ತನ್ನ ಕುಟುಂಬಕ್ಕೆ ತೊಂದರೆ ನೀಡಿದ್ದಾರೆ ಎಂದು ಆರೋಪಿಸಿರುವ ವ್ಯಕ್ತಿಯನ್ನು ಹೆಸರಿಸಿದ್ದಾರೆ” ಎಂದು ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ಪತ್ರಿಕೆ ವರದಿ ಮಾಡಿದೆ.
ಆರೋಪದ ಕಿರುಕುಳದ ಬಗ್ಗೆ ತಮ್ಮ ಕುಟುಂಬದ ಮಾತನ್ನು ಯಾವುದೇ ಅಧಿಕಾರಿಗಳು ಕೇಳಲಿಲ್ಲ ಎಂದು ಜಿತೇಂದ್ರ ಕುಮಾರ್ ಅವರ ಸೋದರಸಂಬಂಧಿ ಗೌರವ್ ತಿಳಿಸಿದ್ದಾರೆ. ಕೆಲವು ವ್ಯಕ್ತಿಗಳು 2021 ರಲ್ಲಿ ಜಿತೇಂದ್ರ ಕುಮಾರ್ ಅವರ ತಂದೆಯ ಮೇಲೆ ಹಲ್ಲೆ ನಡೆಸಿದ್ದರು. “ಅವರ ಕುಟುಂಬವು ಪ್ರಕರಣವನ್ನು ದಾಖಲಿಸಲು ಪ್ರಯತ್ನಿಸಿದಾಗ, ಅದರ ಬದಲಿಗೆ ಜಿತೇಂದ್ರ ಅವರ ವಿರುದ್ಧವೇ ಪ್ರಕರಣ ದಾಖಲಿಸಲಾಯಿತು” ಎಂದು ಅವರು ಹೇಳಿದ್ದಾರೆ.
ಅವರ ತಂದೆಯ ಮೇಲೆ ಹಲ್ಲೆ ನಡೆಸಿದ ವ್ಯಕ್ತಿಗಳೇ 2022ರಲ್ಲಿ ಜಿತೇಂದ್ರ ವಿರುದ್ಧ ಮತ್ತೊಂದು ಪ್ರಕರಣ ದಾಖಲಿಸಿದ್ದಾರೆ ಎಂದು ಅವರು ಆರೋಪಿಸಿದ್ದಾರೆ. ಅದೇ ಗುಂಪು 2024 ರಲ್ಲಿ ಜಿತೇಂದ್ರ ಕುಮಾರ್ ಮತ್ತು ಅವನ ತಂದೆಯ ಮೇಲೆ ವಾಹನ ಹರಿಸಲು ಪ್ರಯತ್ನಿಸಿತು. ಜೊತೆಗೆ ಜಿತೇಂದ್ರ ವಿರುದ್ಧ ಮತ್ತೊಂದು ಪ್ರಕರಣವನ್ನು ದಾಖಲಿಸಲಾಗಿದೆ ಎಂದು ಗೌರವ್ ಹೇಳಿದ್ದಾರೆ.
“ಈ ವರ್ಷಗಳಲ್ಲಿ ಅವರು ಮೌನವಾಗಿರಲು ಅವರು ಮತ್ತು ಅವರ ಕುಟುಂಬಕ್ಕೆ ಬೆದರಿಕೆ ಹಾಕುತ್ತಿದ್ದರು,” ಎಂದು ಗೌರವ್ ಹೇಳಿದ್ದಾರೆ. ಈ ಪ್ರಕರಣವೊಂದರಲ್ಲಿ ಮೃತ ಜಿತೇಂದ್ರ ಕುಮಾರ್ 1.5 ತಿಂಗಳ ಕಾಲ ಜೈಲು ಶಿಕ್ಷೆ ಅನುಭವಿಸಿದ್ದರು ಎಂದು ಅವರು ಹೇಳಿದ್ದಾರೆ.
ಪೊಲೀಸ್ ಉಪ ಆಯುಕ್ತ ದೇವೇಶ್ ಮಹಲಾ ಪ್ರತಿಕ್ರಿಯಿಸಿ, ವೈಯಕ್ತಿಕ ದ್ವೇಷದಿಂದಾಗಿ ಜಿತೇಂದ್ರ ಅಸಮಾಧಾನಗೊಂಡಿದ್ದಾರೆ ಎಂದು ಹೇಳಿದ್ದಾರೆ. ಪ್ರಕರಣದ ತನಿಖೆಯ ಸಮಯದಲ್ಲಿ ಪೊಲೀಸರು ಕೆಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಅದರಲ್ಲಿ ಜಿತೇಂದ್ರ ಕುಮಾರ್ ವಿರುದ್ಧ ಮೇ 2021, ಏಪ್ರಿಲ್ 2022 ಮತ್ತು ಮೇ 2024 ರಲ್ಲಿ ಬಾಗ್‌ಪತ್‌ನಲ್ಲಿ ಮೂರು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಬಹಿರಂಗವಾಗಿದೆ ಎಂದು ಅವರು ಹೇಳಿದ್ದಾರೆ. ಸಂಸತ್ತಿನ ಬಳಿ
ಇದನ್ನೂ ಓದಿ: ‘ದೆಹಲಿಯಲ್ಲಿ ಬಿಜೆಪಿ ಹಣ ಹಂಚುತ್ತಿದೆ’ ಎಂದು ಆರೋಪಿಸಿದ ಎಎಪಿ; ಜಾರಿ ನಿರ್ದೇಶನಾಲಯಕ್ಕೆ ದೂರು
‘ದೆಹಲಿಯಲ್ಲಿ ಬಿಜೆಪಿ ಹಣ ಹಂಚುತ್ತಿದೆ’ ಎಂದು ಆರೋಪಿಸಿದ ಎಎಪಿ; ಜಾರಿ ನಿರ್ದೇಶನಾಲಯಕ್ಕೆ ದೂರು


