Homeರಾಜಕೀಯಶಕ್ತಿಕಾಂತ್ ದಾಸನ ವೃತ್ತಾಂತ

ಶಕ್ತಿಕಾಂತ್ ದಾಸನ ವೃತ್ತಾಂತ

- Advertisement -
- Advertisement -

 ದೊಡ್ಡಿಪಾಳ್ಯ ನರಸಿಂಹಮೂರ್ತಿ |
ರಿಜರ್ವ್ ಬ್ಯಾಂಕಿನ ಗವರ್ನರ್ ಹುದ್ದೆಗೆ ಊರ್ಜಿತ್ ಪಟೇಲ್ ‘ವೈಯಕ್ತಿಕ ಕಾರಣಗಳಿಗಾಗಿ’ ರಾಜೀನಾಮೆ ನೀಡಿದ್ದು ಈಗ ಹಳೆಯ ಸುದ್ದಿ. ತೆರವಾದ ಗವರ್ನರ್ ಹುದ್ದೆಗೆ ಎರಡೇ ದಿನದಲ್ಲಿ ಶಕ್ತಿಕಾಂತ್ ದಾಸ್ ಎಂಬ ತಮ್ಮ ನಿಷ್ಠ ಅಧಿಕಾರಿಯನ್ನು ಮೋದಿ ಸರ್ಕಾರ ನೇಮಿಸಿದ್ದೂ ಆಗಿದೆ. ಊರ್ಜಿತ್ ಪಟೇಲರ ವೈಯಕ್ತಿಕ ಕಾರಣಗಳೇನು ಎಂಬುದು ಈಗ ಗುಟ್ಟಾಗಿ ಉಳಿದಿಲ್ಲ. ಬ್ಯಾಂಕಿಂಗ್ ವ್ಯವಸ್ಥೆಯಲ್ಲಿ ಮಿಗುತಾಯದಲ್ಲಿರುವ 3.5 ಲಕ್ಷ ಕೋಟಿ ಮೊತ್ತವನ್ನು ರಿಜರ್ವ್ ಬ್ಯಾಂಕಿನಿಂದ ಕೇಂದ್ರ ಸರ್ಕಾರದ ಖಜಾನೆಗೆ ವರ್ಗಾಯಿಸಬೇಕೆಂದು ರಿಜರ್ವ್ ಬ್ಯಾಂಕ್ ಗವರ್ನರ್ ಮೇಲೆ ಮೋದಿ ಸರ್ಕಾರ ಒತ್ತಡ ಹೇರಿದ್ದು ಈಗ ಜಗಜ್ಜಾಹೀರಾಗಿದೆ. ಎನ್.ಪಿ.ಎ ಸಮಸ್ಯೆ, ಎನ್.ಬಿ.ಎಫ್.ಸಿ ಗಳ ದಿವಾಳಿ ಸಮಸ್ಯೆ, ಕುಸಿದಿರುವ ಆರ್ಥಿಕತೆ ಮುಂತಾದ ಕಾರಣಗಳಿಂದಾಗಿ ಹಣಕಾಸು ಮಾರುಕಟ್ಟೆಯಲ್ಲಿ ಸಮತೋಲನ ಕಾಪಾಡುವ ದೃಷ್ಟಿಯಿಂದ ಆರ್.ಬಿ.ಐ ಆಡಳಿತ ಮಂಡಳಿ ಮೋದಿ ಸರ್ಕಾರದ ಒತ್ತಡಕ್ಕೆ ಪ್ರತಿರೋಧ ತೋರಿತ್ತು.
ಸರ್ಕಾರ ಕೇಂದ್ರೀಯ ಬ್ಯಾಂಕ್ ವ್ಯವಹಾರದಲ್ಲಿ ಹಸ್ತಕ್ಷೇಪ ಮಾಡಿ, ಸಂಸ್ಥೆಯ ಸ್ವಾಯತ್ತತೆಗೆ ಧಕ್ಕೆ ತಂದರೆ ಇಡೀ ಆರ್ಥಿಕತೆಯ ಮೇಲೆ ವಿನಾಶಕಾರಿ ಪರಿಣಾಮ ಬೀರುತ್ತದೆ ಎಂದು ಆರ್.ಬಿ.ಐ ಡೆಪ್ಯೂಟಿ ಗವರ್ನರ್ ವಿರಾಲ್ ಆಚಾರ್ಯ ಬಹಿರಂಗವಾಗಿ ಹೇಳಿಕೆ ನೀಡಿದ್ದು ರಾಜಕೀಯ ವಲಯದಲ್ಲಿ ಸಂಚಲನವನ್ನೇ ಉಂಟು ಮಾಡಿತ್ತು. ಇನ್ನೂ ಮುಂದುವರೆದ ಆಚಾರ್ಯ ‘ರಿಜರ್ವ್ ಬ್ಯಾಂಕ್ ಸರ್ಕಾರದ ಮತ್ತೊಂದು ಇಲಾಖೆಯಲ್ಲ, ಅದೊಂದು ಸ್ವತಂತ್ರ ಸಂಸ್ಥೆ’ ಎಂಬುದನ್ನು ಒತ್ತಿ ಹೇಳಿದ್ದರು. ಒಂದುವೇಳೆ ಸರ್ಕಾರದ ಹಸ್ತಕ್ಷೇಪ ಹೆಚ್ಚಾದರೆ ಅಜೆರ್ಂಟೈನಾದಲ್ಲಾದಂತೆ ಆರ್ಥಿಕತೆ ದಿವಾಳಿಯಾಗಲಿದೆ ಎಂದು ಎಚ್ಚರಿಕೆಯನ್ನೂ ನೀಡಿದ್ದರು.
ಪ್ರತಿಯೊಂದು ಸಾಂವಿಧಾನಿಕ ಸಂಸ್ಥೆಯನ್ನೂ ತನ್ನ ಕಬ್ಜಾಗೆ ತೆಗೆದುಕೊಂಡ ಮೋದಿ ಸರ್ಕಾರಕ್ಕೆ ರಿಜರ್ವ್ ಬ್ಯಾಂಕಿನ ಡೈರೆಕ್ಟರ್‍ಗಳ ಪ್ರತಿರೋಧ ನುಂಗಲಾರದ ತುತ್ತಾಗಿ ಪರಿಣಮಿಸಿತು. ತುರ್ತಾಗಿ ರಿಜರ್ವ್ ಬ್ಯಾಂಕನ್ನು ತಮ್ಮ ಕಬ್ಜಾಗೆ ತೆಗೆದುಕೊಳ್ಳಬೇಕಿತ್ತು. ಯಾಕೆಂದರೆ ತನ್ನ ದುರಾಡಳಿತದಿಂದ ಖಾಲಿಯಾಗಿರುವ ಬೊಕ್ಕಸವನ್ನು ತುಂಬಿಸಿಕೊಳ್ಳಲು 3.5 ಲಕ್ಷ ಕೋಟಿ ಕ್ಯಾಷ್ ರಿಜರ್ವ್ ಹಣವನ್ನು ಹೇಗಾದರೂ ವಶಮಾಡಿಕೊಳ್ಳಲೇಬೇಕಿತ್ತು. ಆದ್ದರಿಂದ ಸಂವಿಧಾನದ 7ನೇ ವಿಧಿಯನ್ನು ಜಾರಿಗೊಳಿಸಿಯಾದರೂ ಕೇಂದ್ರ ಬ್ಯಾಂಕಿನಲ್ಲಿರುವ ಹಣವನ್ನು ತಮ್ಮ ವಶಕ್ಕೆ ಪಡೆಯುವ ನಿರಂಕುಶ ಮಾತುಗಳು ಸರ್ಕಾರದ ಕಡೆಯಿಂದ ಕೇಳಿಬಂದಿದ್ದವು. ನೆನಪಿಡಿ, ಸಂವಿಧಾನದ 7ನೇ ವಿಧಿಯನ್ನು ಯುದ್ಧದ ಸಂದರ್ಭದಲ್ಲಿ ಅಥವ ತತ್ಸಮಾನವಾದ ವಿಕೋಪದ ಸಂದರ್ಭದಲ್ಲಿ ಮಾತ್ರ ಬಳಸಲು ಅವಕಾಶವಿದೆ. ನಮ್ಮ ಸಂವಿಧಾನ ಜಾರಿಗೊಂಡ 7 ದಶಕಗಳಲ್ಲಿ ಒಮ್ಮೆಯಾದರೂ ಈ ವಿಧಿಯನ್ನು ಯಾವ ಸರ್ಕಾರವೂ ಬಳಸಿಲ್ಲ ಎಂಬುದನ್ನು ನಾವು ಮರೆಯಬಾರದು. ಆದರೆ ಮೋದಿಯವರ ಸರ್ಕಾರ ಇಂತಹ ಅನಪೇಕ್ಷಿತ ದುಸ್ಸಾಹಸಕ್ಕೆ ಕೈಹಾಕುವ ಮಟ್ಟಕ್ಕೂ ಹೋಗಿದ್ದು ಈ ದೇಶದ ದೌರ್ಭಾಗ್ಯ.
ಇಂಥಾ ಒತ್ತಡದ ಸನ್ನಿವೇಶದಲ್ಲಿ ಊರ್ಜಿತ್ ಪಟೇಲ್ ರಾಜೀನಾಮೆ ಕೊಟ್ಟು, ವೈಯಕ್ತಿಕ ಕಾರಣ ಎಂದಿದ್ದನ್ನು ಯಾರಾದರೂ ಅರ್ಥ ಮಾಡಿಕೊಳ್ಳಬಹುದು.
ಇಂಥಾ ಸನ್ನಿವೇಶದಲ್ಲಿ ಗವರ್ನರ್ ಸ್ಥಾನಕ್ಕೆ ಸರ್ಕಾರ ನೇಮಕ ಮಾಡುವ ವ್ಯಕ್ತಿಯ ಜಾಯಮಾನ ಎಂಥದ್ದಿರಬಹುದೆಂದು ಊಹಿಸುವುದು ಅಂಥಾ ಕಷ್ಟವೇನಲ್ಲ. ಆದರೆ ನಾವು ಯಾವುದೇ ನಿರ್ಣಯಕ್ಕೆ ಬರುವ ಮೊದಲು ಆಯಾ ವ್ಯಕ್ತಿಯ ಪೂರ್ವಾಪರಗಳ ಬಗ್ಗೆ ನಿಷ್ಪಕ್ಷಪಾತವಾಗಿ ಪರಿಶೀಲಿಸಬೇಕಾದ್ದು ಪತ್ರಿಕಾಧರ್ಮ.
ಈ ಶಕ್ತಿಕಾಂತ್ ದಾಸ್ ಮೂಲತಃ ಒರಿಸ್ಸಾದವರು. ತಮಿಳುನಾಡಿನ 1980ರ ಬ್ಯಾಚಿನ ಐಎಎಸ್ ಕೇಡರ್. 2014ರ ಜೂನ್‍ನಿಂದ 2015ರ ಆಗಸ್ಟ್‍ವರೆಗೆ ಕಂದಾಯ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಅಲ್ಲಿಂದ 2017ರ ಮೇವರೆಗೆ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದರು. ನಂತರ ಹಣಕಾಸು ಆಯೋಗದ ಸದಸ್ಯರೂ ಆಗಿದ್ದರು. ಇವರು ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲೇ ಭಾರತವನ್ನು ಬರ್ಬಾದ್ ಮಾಡಿದ ನೋಟ್-ಬಂದಿ ನಡೆದಿದ್ದು. ವಾಸ್ತವದಲ್ಲಿ ರಿಜರ್ವ್ ಬ್ಯಾಂಕ್ ಗವರ್ನರ್ ಮಾಡಬೇಕಿದ್ದ ಹಲವು ಜವಾಬ್ದಾರಿಗಳನ್ನು ನಿರ್ವಹಿಸಿದ್ದು ಇದೇ ವ್ಯಕ್ತಿ. ನೋಟ್ ಬಂದಿಯ ಆ ಎರಡು ತಿಂಗಳಿನಲ್ಲಿ ಸುಮಾರು 70 ಬಾರಿ ನಿಯಮಗಳನ್ನು ಬದಲಿಸಿ ಕುಖ್ಯಾತಿ ಪಡೆದ ಮಹಾನುಭಾವ ಈತನೇ. ಜನರು ತಮ್ಮ ಬಳಿಯಿರುವ ಕಪ್ಪುಹಣವನ್ನು ಬದಲಿಸಿಕೊಳ್ಳಲು ಪದೇಪದೇ ಕ್ಯೂನಲ್ಲಿ ನಿಲ್ಲುತ್ತಿದ್ದಾರೆಂದು ಆರೋಪಿಸಿ, ನೋಟು ಪಡೆದ ಜನರ ಬೆರಳಿಗೆ ಶಾಹಿ ಗುರುತು ಹಾಕುವಂತೆ ತಲೆಕೆಟ್ಟ ಆದೇಶ ಹೊರಡಿಸಿ ಛೀಮಾರಿಗೊಳಗಾಗಿದ್ದ ಮಹಾನುಭಾವ ಈತನೇ. ಬಿಜೆಪಿ ವಕ್ತಾರರೇ ನೋಟ್ ಬಂದಿಯನ್ನು ಸಮರ್ಥಿಸಿಕೊಳ್ಳಲು ಹಿಂಜರಿಯುತ್ತಿರುವ ಸನ್ನಿವೇಶದಲ್ಲಿ, ನೋಟ್ ಬಂದಿ ಸಮರ್ಥಿಸುತ್ತಿರುವ ಕೆಲವೇ ಭಂಡರಲ್ಲಿ ಈ ಆಸಾಮಿ ಅಗ್ರಗಣ್ಯ.
ಈ ಆಸಾಮಿಯ ವೃತ್ತಾಂತ ಇಷ್ಟಕ್ಕೇ ಮುಗಿಯುವುದಿಲ್ಲ. ಇನ್ನೂ ಮುಂದೆ ಓದಿ.
ಬಿಜೆಪಿಯ ರಾಜ್ಯಸಭಾ ಎಂಪಿ ಸುಬ್ರಮಣ್ಯ ಸ್ವಾಮಿಯ ಪ್ರಕಾರ “ಶಕ್ತಿಕಾಂತ್ ದಾಸ್ ಪರಮಭ್ರಷ್ಟ”. ಇಂತಹ ವ್ಯಕ್ತಿಯನ್ನು ಆರ್.ಬಿ.ಐ ಗವರ್ನರ್ ಆಗಿ ನೇಮಿಸಿದ್ದನ್ನು ಕಂಡು ಸ್ವಾಮಿಗೆ ಪರಮಾಶ್ಚರ್ಯ ಆಗಿದೆಯಂತೆ. “ಈ ವ್ಯಕ್ತಿಯ ಭ್ರಷ್ಟಾಚಾರದ ಕಾರಣಕ್ಕಾಗಿ ಈತನನ್ನು ಹಣಕಾಸು ಇಲಾಖೆಯಿಂದ ಹೊರಗೆ ಹಾಕುವಂತೆ ಮಾಡಿದ್ದೆ. ಈಗ ಅದೇ ವ್ಯಕ್ತಿಯನ್ನು ಗವರ್ನರ್ ಆಗಿ ನೇಮಿಸಿರುವುದು ಪರಮಾಶ್ಚರ್ಯ” ಎಂದು ಸು.ಸ್ವಾಮಿ ಬಹಿರಂಗವಾಗಿ ಹೇಳಿದ್ದಾರೆ.
ಶಕ್ತಿಕಾಂತ್ ದಾಸ್ ಬಗ್ಗೆ ಮಾಧ್ಯಮಗಳಲ್ಲಿ ಮರೆಮಾಚಲ್ಪಟ್ಟಿರುವ ಕಟುಸತ್ಯಗಳನ್ನು ಕೆದಕಿದರೆ ದೇಶದ ಆರ್ಥಿಕ ವ್ಯವಸ್ಥೆಗೆ ಆವರಿಸಿರುವ ಕರಾಳ ಹಸ್ತಗಳ ಒಂದು ಅಂದಾಜು ಸಿಗುತ್ತದೆ. ಅಧಿಕಾರದ ಕಾರಿಡಾರ್ ಗಳಲ್ಲಿರುವ ವಿವಿಧ ಶಕ್ತಿಗಳ ನಡುವಿನ ಕಾದಾಟದಿಂದಾಗಿ ಬಹಳಷ್ಟು ಸಾರಿ ವ್ಯವಸ್ಥೆಯ ಹುಳುಕುಗಳು ಬಹಿರಂಗಗೊಂಡು ಹೊರಜಗತ್ತಿನ ಗಮನಕ್ಕೆ ಬರುತ್ತದೆ. ಈ ಶಕ್ತಿಕಾಂತ್ ದಾಸ್ ವಿಷಯದಲ್ಲೂ ಅದೇ ಆಗಿದೆ. ಶಕ್ತಿಕಾಂತ್ ದಾಸ್ ಅವರನ್ನು ಸ್ಟಾಕ್ಸ್ & ಎಕ್ಸ್ಚೇಂಜಸ್ ಬೋರ್ಡ್ ಆಫ್ ಇಂಡಿಯಾ (ಸೆಬಿ)ದ ಚೇರ್ಮನ್ ಆಗಿ ನೇಮಕ ಮಾಡಲಾಗುತ್ತದೆಂಬ ಸುದ್ದಿಯೊಂದು 2017ರ ಜನವರಿಯಲ್ಲಿ ಕೆಲವು ಮಾಧ್ಯಮಗಳಲ್ಲಿ ಹರಿದಾಡಿತ್ತು. ಈ ಕ್ರಮವನ್ನು ವಿರೋಧಿಸಿ ಇದೇ ಜನವರಿ 7ನೇ ತಾರೀಕು ಸು.ಸ್ವಾಮಿ ಪ್ರಧಾನಿ ಮೋದಿಗೆ ಒಂದು ಪತ್ರ ಬರೆದಿದ್ದರು. ಪತ್ರದ ವಿವರ ನೋಡಿ.
“ಯುಪಿಎ ಅವಧಿಯಲ್ಲಿ ಚಿದಂಬರಂ ಹಣಕಾಸು ಸಚಿವರಾಗಿದ್ದ ಅವಧಿಯಲ್ಲಿ, ಅವರ ಚೇಲಾ ಆಗಿದ್ದ ಶಕ್ತಿಕಾಂತ್ ದಾಸ್ ಬಡ್ತಿ ಪಡೆದುಕೊಂಡು ದೆಹಲಿಯ ಉನ್ನತ ಹುದ್ದೆಗಳಿಗೇರಿದರು. ಈ ವ್ಯಕ್ತಿ ಹಣಕಾಸು ಇಲಾಖೆಯ ಕಾರ್ಯದರ್ಶಿಯಾಗಿದ್ದ ಅವಧಿಯಲ್ಲೂ ಚಿದಂಬರಂ ಪರವಾಗಿ ಕೆಲಸ ಮಾಡುತ್ತಿದ್ದರೆಂಬುದು ಜನಜನಿತವಾಗಿದೆ. ಅದು 2ಜಿ ಸ್ಪೆಕ್ಟ್ರಮ್ ಹಗರಣವಿರಲಿ, ಏರ್ಸೆಲ್-ಮ್ಯಾಕ್ಸಿಸ್ ಹಗರಣವಿರಲಿ, ಎನ್.ಎಸ್.ಇ ಅಕ್ರಮವಿರಲಿ, ಷೇರು ಮಾರುಕಟ್ಟೆಯ ಅವ್ಯವಹಾರವಿರಲಿ ಎಲ್ಲದರಲ್ಲೂ ಚಿದಂಬರಂ ಅವರನ್ನು ರಕ್ಷಣೆ ಮಾಡುವಲ್ಲಿ ದಾಸ್ ಕೈವಾಡವಿದೆ. ಕೆಲವು ಪ್ರಕರಣಗಳಲ್ಲಿ ಕೋರ್ಟ್ ನಿಗಾವಣೆಯಲ್ಲಿ ನಡೆಯುತ್ತಿದ್ದ ತನಿಖೆಗಳನ್ನು ಅನಗತ್ಯ ವಿಳಂಬವಾಗುವಂತೆ ಮಾಡಿ ಚಿದಂಬರಂಗೆ ಸಹಾಯಕವಾಗಿ ನಿಂತಿದ್ದಾರೆ. ಇದಕ್ಕೆ ಉದಾಹರಣೆಯಾಗಿ 2015ರ ಸೆಪ್ಟೆಂಬರ್ 17ರಂದು ಸಿಬಿಐ ಡೈರೆಕ್ಟರ್ ಬರೆದಿರುವ ಪತ್ರವನ್ನು ಇದರೊಂದಿಗೆ ಲಗತ್ತಿಸಿದ್ದೇನೆ. ಆ ಪತ್ರದಲ್ಲಿ ಚಿದಂಬಂರಂಗೆ ಸಂಬಂಧಿಸಿದ ಕೇಸಿನಲ್ಲಿ ಹಣಕಾಸು ಇಲಾಖೆಯ ದಾಖಲೆಗಳು ಹಾಗೂ ಸ್ಪಷ್ಟೀಕರಣ ಒದಗಿಸುವಂತೆ ಅಂದಿನ ಸಿಬಿಐ ಡೈರೆಕ್ಟರ್ ಅಂದಿನ ಹಣಕಾಸು ಕಾರ್ಯದರ್ಶಿಯಾಗಿದ್ದ ದಾಸ್ ಅವರನ್ನು ಕೇಳಿದ್ದರು. ಪದೇಪದೇ ರಿಮೈಂಡರ್ ಕಳಿಸಿದರೂ ಚಿದಂಬರಂರನ್ನು ರಕ್ಷಿಸುವ ಸಲುವಾಗಿ ದಾಸ್ ಸಂಬಂಧಿತ ದಾಖಲೆಗಳನ್ನು ಒದಗಸಲಿಲ್ಲ. (ವಿವರಗಳಿಗೆ ಅನುಬಂಧ ನೋಡಿ).
ಏರ್ಸೆಲ್-ಮ್ಯಾಕ್ಸಿಸ್ ಹಗರಣದಲ್ಲಿ ಅಂದಿನ ಹಣಕಾಸು ಸಚಿವ ಚಿದಂಬರಂ ಅವರು ‘ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ (ಎಫ್.ಐ.ಪಿ.ಬಿ)ಯ ಅಕ್ರಮ ಕ್ಲಿಯರೆನ್ಸ್ ನೀಡಿದ್ದರ ಬಗ್ಗೆ ಮುಂದಿನ ತನಿಖೆ ನಡೆಯಬೇಕಿದೆ. ಮ್ಯಾಕ್ಸಿಸ್ ಕಂಪನಿಯಿಂದ ಇವರ ಮಗ (ಕಾರ್ತಿ ಚಿದಂಬರಂ) ಮಲೇಷಿಯಾ ಮೂಲದಿಂದ ಹಣ ಪಡೆದಿರುವುದು ತನಿಖೆಗಳಿಂದ ಹೊರಬಂದಿದೆ.
ಈ ಎಲ್ಲ ಹಿನ್ನೆಲೆಯಲ್ಲಿ ಶಕ್ತಿಕಾಂತ್ ದಾಸ್ ಅವರನ್ನು ಸೆಬಿ ಹುದ್ದೆಗೆ ಪರಿಗಣಿಸಬಾರದೆಂದು ಮನವಿ ಮಾಡುತ್ತೇನೆ.”
ಇದು ಸು.ಸ್ವಾಮಿಯ ಪತ್ರದ ಮುಖ್ಯಾಂಶ. ಪ್ರಧಾನಿಗೆ ಪತ್ರ ಬರೆದಿದ್ದು ಮಾತ್ರವಲ್ಲದೆ ಸು.ಸ್ವಾಮಿ ಈ ವಿಚಾರದಲ್ಲಿ ಟ್ವಿಟರ್ ಕ್ಯಾಂಪೇನ್ ಶುರುವಿಟ್ಟುಕೊಂಡಿದ್ದರು. “ಚಿದಂಬರಂ ಚೇಲಾ ಹಾಗೂ ಭ್ರಷ್ಟ ಶಕ್ತಿಕಾಂತ್ ದಾಸ್‍ನನ್ನು ಸೆಬಿಯ ಚೇರ್ಮನ್ ಮಾಡಬೇಡಿ” ಎಂಬ ಒಕ್ಕಣೆಯ ಟ್ವಿಟರ್ ಪ್ರಚಾರ ಆರಂಭಿಸಿದರು.
ಸು.ಸ್ವಾಮಿಯ ಪ್ರಚಾರ ಬಿರುಸು ಪಡೆದುಕೊಳ್ಳುತ್ತಿದ್ದಂತೆ ಸರ್ಕಾರ ಡಿಫೆನ್ಸ್ ಗೆ ತೊಡಗಬೇಕಾಯ್ತು. ಮೋದಿ ಕ್ಯಾಬಿನೆಟ್‍ನಲ್ಲಿ ಒಬ್ಬ ಪರಿಣಿತ ಡಿಫೆನ್ಸ್ ಲಾಯರ್ ಇದ್ದಾರೆ. ಯಾವುದೇ ಅಕ್ರಮ ಅಥವಾ ಭ್ರಷ್ಟಾಚಾರದ ಆರೋಪ ಕೇಳಿಬಂದ ತಕ್ಷಣ ಅವರು ಕಣಕ್ಕಿಳಿದು ತಮ್ಮ ಪರಿಣತಿಯನ್ನು ಬಳಸಿ ಡಿಫೆನ್ಸ್ ವಾದ ಮಂಡಿಸುತ್ತಾರೆ. ಆ ಡಿಫೆನ್ಸ್ ಲಾಯರ್ ಬೇರಾರೂ ಅಲ್ಲ, ಮಾನ್ಯ ಅರುಣ್ ಜೇಟ್ಲಿ. ಶಕ್ತಿಕಾಂತ್ ದಾಸ್ ಪ್ರಕರಣದಲ್ಲೂ ಡಿಫೆನ್ಸಿಗಿಳಿದ ಜೇಟ್ಲಿ ದಾಸ್‍ಗೆ ಕ್ಯಾರೆಕ್ಟರ್ ಸರ್ಟಿಫಿಕೇಟ್ ದಯಪಾಲಿಸಿದ್ದರು.
ಅಂತಿಮವಾಗಿ ಸ್ವಾಮಿಯ ಈ ಪ್ರಚಾರ ತಂತ್ರ ಪರಿಣಾಮ ಬೀರಿತೋ ಏನೋ? ಅಂತೂ ದಾಸ್ ಸೆಬಿಯ ಚೇರ್ಮನ್ ಆಗಿ ನೇಮಕವಾಗಲಿಲ್ಲ. ಆದರೇನಂತೆ? ಇದೀಗ ಅದಕ್ಕಿಂತಲೂ ಗುರುತರವಾದ ಆರ್.ಬಿ.ಐ ಗವರ್ನರ್ ಆಗಿ ಇದೇ ಕಳಂಕಿತ ದಾಸ್ ವಿರಾಜಮಾನರಾಗಿದ್ದಾರೆ. ಇದು ಮೋದಿ ಮಾದರಿ ಆಡಳಿತದ ಅವಿಭಾಜ್ಯ ಅಂಗ.
ಈ ಬಾಬು ಬಹಳಷ್ಟು ವರ್ಷಗಳು ತಮಿಳುನಾಡಿನಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದಾರೆ. ಅದರಲ್ಲಿ ಕೈಗಾರಿಕಾ ಕಾರ್ಯದರ್ಶಿಯಾಗಿದ್ದ ಕಾಲದ ಒಂದು ಪ್ರಕರಣವನ್ನು ಪರಿಶೀಲಿಸೋಣ. ಚೆನ್ನೈನಿಂದ ದಕ್ಷಿಣಕ್ಕೆ ಸುಮಾರು 50 ಕಿ.ಮೀ ದೂರದಲ್ಲಿರುವ ಉರಗಡಂ ಕೈಗಾರಿಕಾ ಪ್ರದೇಶದಲ್ಲಿ ಸರ್ಕಾರಿ ಸ್ವಾಮ್ಯದ 100 ಎಕರೆ ಭೂಮಿಯನ್ನು ಅಮೆರಿಕಾ ಮೂಲದ ಸ್ಯಾನ್ಮಿನಾ ಎಂಬ ಕಂಪನಿಗೆ ದುಗ್ಗಾಣಿ ಬೆಲೆಗೆ ಧಾರೆಯೆರೆದ ಆರೋಪ ಇದೇ ದಾಸ್ ಮೇಲಿದೆ. ಕೈಗಾರಿಕಾ ಪ್ರದೇಶದ ಭೂಮಿಯ ಅಂದಿನ ಮಾರುಕಟ್ಟೆ ಬೆಲೆ ಎಕರೆಗೆ ಸುಮಾರು 4 ಕೋಟಿ. ಇಂದಿನ ಮಾರುಕಟ್ಟೆ ಬೆಲೆ ಸುಮಾರು 10 ಕೋಟಿ. ಇಂಥಾ ಭೂಮಿಯನ್ನು ಕೇವಲ 15 ಲಕ್ಷದಂತೆ ಪರಭಾರೆ ಮಾಡಿದ್ದು ಇದೇ ಮಹಾನುಭಾವ. ಅದಕ್ಕೆ ನೀಡಿದ್ದ ಸಮರ್ಥನೆ ಸ್ಯಾನ್ಮಿನಾ ಕಂಪನಿ 250 ಕೋಟಿಗಳ ಬಂಡವಾಳ ಹೂಡಿ, 4000 ಜನರಿಗೆ ಉದ್ಯೋಗ ಕೊಡುತ್ತದೆಂಬುದು. ಆದರೆ ವಾಸ್ತವದಲ್ಲಿ ಇಂದಿಗೂ ಕಂಪನಿ ಕೊಟ್ಟಿರುವ ಉದ್ಯೋಗಗಳು ಕೆಲವು ನೂರನ್ನು ದಾಟಿಲ್ಲ. ಅದೂ ಕೂಡ ಚೀಪ್ ಲೇಬರ್ ಕೆಲಸಗಳು, ಸಂಬಳ 7 -8 ಸಾವಿರ ಪ್ರತಿ ತಿಂಗಳಿಗೆ. ಇಂಥಾ ಸಾಧನೆಗೆ 100 ಎಕರೆ ಭೂಮಿಯನ್ನು ಮತ್ತು ಇತರೆ ಮೂಲ ಸೌಕರ್ಯಗಳನ್ನು ಧಾರೆಯೆರೆದು, ನಾನಾ ಸಬ್ಸಿಡಿಯನ್ನು ಒದಗಿಸಿಕೊಟ್ಟ ಖ್ಯಾತಿ ಮಾನ್ಯ ದಾಸ್ ಅವರಿಗೆ ಸಲ್ಲತಕ್ಕದ್ದು.
ಇಲ್ಲಿ ಒಂದು ಕನಿಷ್ಠ ಅಂಕಗಣಿತದ ಒಂದು ಪ್ರಶ್ನೆ ಎದುರಾಗುತ್ತದೆ. ಆ 100 ಎಕರೆ ಭೂಮಿಯನ್ನು ಅಂದಿನ ಮಾರುಕಟ್ಟೆ ಬೆಲೆಗೆ ಮಾರಾಟ ಮಾಡಿದ್ದರೆ ಸರ್ಕಾರಕ್ಕೆ ಸುಮಾರು 400 ಕೋಟಿಗಳನಿವ್ವಳ ಬಂಡವಾಳ ಸಿಗುತ್ತಿತ್ತು. ಅದೇ ಬಂಡವಾಳವನ್ನು ಕೈಗಾರಿಕಾ ಅಭಿವೃದ್ಧಿಗೆ ಬಳಸಬಹುದಿತ್ತಲ್ಲವೆ? ಎಂಬ ಪ್ರಶ್ನೆಗಳಿಗೆ ದಾಸ್ ಆಗಲಿ, ಅಂದಿನ ಆಳುವ ಪಕ್ಷದವರಲ್ಲಾಗಲಿ ಉತ್ತರವಿಲ್ಲ. ಒಂದಷ್ಟು ಕಾಲ ಸುದ್ದಿ ಮಾಡಿದ ಈ ಪ್ರಕರಣ ಹಾಗೇ ಇತಿಹಾಸದಲ್ಲಿ ಹೂತುಹೋಗಿದೆ.
ಹೀಗೆ ಕೆದಕುತ್ತಾ ಹೋದರೆ ಒಂದೊಂದೇ ಹುಳುಕುಗಳು ಹೊರಬೀಳುತ್ತವೆ. ದಾಸ್ ಇಷ್ಟೆಲ್ಲಾ ಸಾಧನೆ ಮಾಡದೇ ಇದ್ದಿದ್ದರೆ ಮೋದಿ ಸರ್ಕಾರ ಇವರನ್ನು ಆರ್.ಬಿ.ಐ ಗವರ್ನರ್ ಹುದ್ದೆಗೆ ಪರಿಗಣಿಸುವುದು ಸಾಧ್ಯವೇ ಇರಲಿಲ್ಲ. ಅಲ್ಲವೆ?

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...