Homeಅಂಕಣಗಳು‘ನೀಟ್’ ನಿಜಕ್ಕೂ ನೀಟಾಗಿದೆಯೇ?

‘ನೀಟ್’ ನಿಜಕ್ಕೂ ನೀಟಾಗಿದೆಯೇ?

- Advertisement -
- Advertisement -

ನೀಟ್ ಪರೀಕ್ಷೆ ಈಗಾಗಲೇ ತನ್ನ ಬಲಿ ತೆಗೆದುಕೊಳ್ಳಲಾರಂಭಿಸಿದೆ. ಈ ಲೇಖನ ಪ್ರಕಟಣೆಗೆ ಹೋಗುವಾಗ ಆಗಲೇ ಮೂವರು ವಿದ್ಯಾರ್ಥಿನಿಯರು ನೀಟ್‍ನ ಎತ್ತರದ ಬೇಲಿಯನ್ನು ದಾಟಲಾರದೆ ತಮ್ಮೆಲ್ಲಾ ಆಕಾಂಕ್ಷೆಗಳಿಗೂ, ತಮ್ಮನ್ನು ಹೆತ್ತವರ ಸ್ನೇಹಿತರ ಕನಸುಗಳಿಗೂ ಪೂರ್ಣವಿರಾಮ ಹಾಕಿ ಬದುಕಿಗೆ ವಿಷಾದದ ವಿದಾಯ ಹೇಳಿದ್ದಾರೆ. ಈಗಷ್ಟೇ ಅಲ್ಲ, ನೀಟ್ ಆರಂಭವಾದಾಗಲೇ ತಮಿಳುನಾಡಿನ ಅನಿತಾ ಎಂಬ ದಲಿತ ಬಾಲಕಿ, ತಾನು ಎಂದಿಗೂ ನೀಟ್ ಎಂಬ ಕತ್ತಲ ಸುರಂಗದಿಂದ ಹೊರಬರಲಾರೆ ಎಂಬ ಆತಂಕದಲ್ಲಿ ಆತ್ಮಹತ್ಯೆಗೆ ಶರಣಾದಳು. ಆರಂಭದಲ್ಲಿ, ದೇಶಾದ್ಯಂತ ಪ್ರತೀ ರಾಜ್ಯದಲ್ಲೂ ಚಾಲ್ತಿಯಲ್ಲಿರುವ ಅಸಂಖ್ಯಾತ ಮೆಡಿಕಲ್ ಎಂಟ್ರೆನ್ಸ್ ಟೆಸ್ಟ್‍ಗಳಿಂದ ಹೈರಾಣಾಗಿ, ನೀಟ್ ನಂತರವಾದರೂ ತಮ್ಮ ಮಕ್ಕಳಿಗೆ ಸಲೀಸಾಗಿ ಸೀಟ್ ಸಿಕ್ಕಿ ನೆಮ್ಮದಿಯಾಗಿರುತ್ತೇವೆಂದು ಭಾವಿಸಿದ್ದ ಪೋಷಕರೂ ಕೂಡಾ, ಒತ್ತಡದಿಂದ ಮುಕ್ತರಾಗಿಲ್ಲ. ಹಾಗಿದ್ದರೆ, ನೀಟ್ ಬಂದದ್ದೇಕೆ? ಅದು ತಂದದ್ದೇನು? ನೀಟ್ ನಿಜಕ್ಕೂ ನೀಟಾಗಿದೆಯೇ ಎಂಬ ಪ್ರಶ್ನೆಗಳು ನಮ್ಮೆದುರು ನಿಲ್ಲುತ್ತವೆ.
ಏನಿದು ನೀಟ್?
ನೀಟ್ ಎಂದರೆ ‘ನ್ಯಾಷನಲ್ ಎಲಿಜಿಬಿಲಿಟಿ ಅಂಡ್ ಎಂಟ್ರನ್ಸ್ ಟೆಸ್ಟ್’. ಅಂದರೆ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ. ಇದನ್ನು ನಡೆಸುವ ನೋಡಲ್ ಏಜೆನ್ಸಿಯನ್ನಾಗಿ ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್_ ಸಿಬಿಎಸ್‍ಇಯನ್ನು ನೇಮಿಸಲಾಗಿದೆ. ಅದರಂತೆ, ಭಾರತದ 66,000 ವೈದ್ಯಕೀಯ ಮತ್ತು ದಂತ ವೈದ್ಯಕೀಯ ಸೀಟುಗಳಿಗೆ ಸಿಬಿಎಸ್‍ಇಯು ನೀಟ್ ಪರೀಕ್ಷೆಯನ್ನು ನಡೆಸಲಾರಂಭಿಸಿದೆ. ವಾಸ್ತವದಲ್ಲಿ ಈ ಬಗ್ಗೆ ಭಾರತ ವೈದ್ಯಕೀಯ ಪರಿಷತ್ತು_ ಎಂಸಿಐ [ಮೆಡಿಕಲ್ ಕೌನ್ಸಿಲ್ ಆಫ್ ಇಂಡಿಯಾ] ಮೊದಲ ಬಾರಿ ಚಿಂತನೆ ನಡೆಸಿ ಸಾರ್ವಜನಿಕ ಅಭಿಪ್ರಾಯವನ್ನು ಕೋರಿದಾಗ, ಮೊದಲಿಗೆ ಭಾರತದ ಎಲ್ಲ ರಾಜ್ಯಗಳ 11 ಮತ್ತು 12ನೇ ತರಗತಿಯವರೆಗಿನ [ಕರ್ನಾಟಕದಲ್ಲಿ ಪಿಯುಸಿ ಎಂದು ನಾವು ಕರೆಯುವ ತರಗತಿಗಳು] ವಿಜ್ಞಾನ ಶಿಕ್ಷಣವನ್ನು ಒಂದೇ ಗುಣಮಟ್ಟಕ್ಕೆ ತರುವ ಸವಾಲನ್ನು ಎದುರಿಸಬೇಕೆಂಬ ಅಭಿಪ್ರಾಯ ಸಾರ್ವತ್ರಿಕವಾಗಿ ವ್ಯಕ್ತವಾಗಿತ್ತು. ಆದ್ದರಿಂದ 2022ರ ನಂತರ ನೀಟ್ ಆರಂಭಿಸುವ ಉದ್ದೇಶವನ್ನು ಎಂಸಿಐ ಹೊಂದಿತ್ತೆಂದು ಹೇಳಲಾಗುತ್ತಿದೆ.
ಆದರೆ, 2013ರಲ್ಲಿ ಇದ್ದಕ್ಕಿದ್ದಂತೆ ನೀಟ್ ಪರೀಕ್ಷೆಯನ್ನು ಘೋಷಿಸಲಾಯಿತು. ಮೊದಲಿಗೆ ಇದು ಹುಟ್ಟಿಸಿದ ಗೊಂದಲ, ಕಳವಳ ಮತ್ತು ದಿಗ್ಭ್ರಾಂತಿಯನ್ನು ವಿವರಿಸುವುದು ಕಷ್ಟ. ಎಷ್ಟರಮಟ್ಟಿಗೆಂದರೆ ನ್ಯಾಯಾಲಯವೂ ಕೂಡಾ ಮೊದಲಿಗೆ ಇದನ್ನು ‘ಅಸಂವಿಧಾನಿಕ’ ಎಂದು ಕರೆದು ಪರೀಕ್ಷೆ ನಡೆಸುವುದಕ್ಕೆ ತಡೆ ನೀಡಿತು. ಆ ನಂತರದಲ್ಲಿ 5 ಮಂದಿ ನ್ಯಾಯಾಧೀಶರನ್ನೊಳಗೊಂಡ ಸಂವಿಧಾನ ಪೀಠವು ವಿಸ್ತಾರವಾಗಿ ವಿಚಾರಣೆ ನಡೆಸಿ 2016ರ ಏಪ್ರಿಲ್ 11ರಂದು ನೀಟ್ ನಡೆಸಲು ಎಂಸಿಐಗೆ ಅವಕಾಶ ನೀಡಿ, ಸಿಬಿಎಸ್‍ಸಿಯನ್ನು ಅದರ ನೋಡಲ್ ಏಜೆನ್ಸಿಯಾಗಿ ನೇಮಿಸಿತು. ಕಳೆದ ಎರಡು ಮೂರು ವರ್ಷಗಳಲ್ಲಿ ಆದ ಒಂದಷ್ಟು ಬದಲಾವಣೆಗಳ ನಂತರ ಈಗ ನೀಟ್ ಪರೀಕ್ಷೆಯನ್ನು ಇಂಗ್ಲೀಷ್, ಹಿಂದಿ ಮತ್ತು ಇನ್ನಿತರ ಒಂಬತ್ತು ರಾಜ್ಯ/ಪ್ರಾದೇಶಿಕ ಭಾಷೆಗಳಲ್ಲಿ ಬರೆಯಬಹುದಾಗಿದೆ.
ಹಲವು ಪ್ರವೇಶ ಪರೀಕ್ಷೆಗಳ ಒತ್ತಡದಿಂದ ಮುಕ್ತಿಯ ಮಂತ್ರ!
ನೀಟ್ ಪರೀಕ್ಷೆಯನ್ನು ವೈದ್ಯಕೀಯ ಶಿಕ್ಷಣದಲ್ಲಿದ್ದ ವ್ಯಾಪಾರೀಕರಣಕ್ಕೆ ಪೂರ್ಣ ಕಡಿವಾಣ ಎಂದೇ ಬಿಂಬಿಸಲಾಗಿತ್ತು. ಅದಕ್ಕೆ ಕಾರಣ, ಈ ಹಿಂದೆ ನಡೆಯುತ್ತಿದ್ದ ಅನೇಕಾನೇಕ ಬಗೆಯ ಪ್ರವೇಶ ಪರೀಕ್ಷೆಗಳನ್ನು ನಿಲ್ಲಿಸಿ, ಒಂದೇ ಮಟ್ಟದ ಒಂದೇ ಪರೀಕ್ಷೆಯನ್ನು ನಡೆಸುವುದರಿಂದ ಎಲ್ಲ ಖಾಸಗಿ ಮತ್ತು ಡೀಮ್ಡ್ ವೈದ್ಯಕೀಯ ಕಾಲೇಜುಗಳನ್ನು ನಿಯಂತ್ರಿಸಲು ಸಾಧ್ಯ ಎಂದು ಪೋಷಕರು, ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಎಲ್ಲರೂ ಭಾವಿಸಿದ್ದರು. ಅದರಂತೆಯೇ, ಇಂದು ಅಂತಹ ಎಲ್ಲ ಪರೀಕ್ಷೆ ಬರೆಯುವ ಒತ್ತಡದಿಂದ ಮತ್ತು ದೊಡ್ಡ ಆರ್ಥಿಕ ಹೊರೆಯಿಂದ ವಿದ್ಯಾರ್ಥಿಗಳು ಮತ್ತು ಪೋಷಕರು ಮುಕ್ತರಾಗಿರುವುದು ನಿಜ. ಕರ್ನಾಟಕದ ಉದಾಹರಣೆಯನ್ನೇ ತೆಗೆದುಕೊಳ್ಳಿ. ಈ ಹಿಂದೆ, ಸರ್ಕಾರಿ ಕಾಲೇಜುಗಳು ಮತ್ತು ಸರ್ಕಾರಿ ವೈದ್ಯಕೀಯ ಸೀಟುಗಳಿಗಾಗಿ ಒಮ್ಮೆ ಸಿಇಟಿ, ನಂತರ ಖಾಸಗಿ ಸೀಟುಗಳಿಗಾಗಿ ಕಾಮೆಡ್ ಕೆ ನಡೆಸುವ ಪ್ರವೇಶ ಪರೀಕ್ಷೆ, ಅಖಿಲ ಭಾರತ ವೈದ್ಯಕೀಯ ಸಂಸ್ಥೆಗಳಿಗಾಗಿ ಅಖಿಲ ಭಾರತ ವೈದ್ಯಕೀಯ ಪೂರ್ವ ಪ್ರವೇಶ ಪರೀಕ್ಷೆ, ಡೀಮ್ಡ್ ವೈದ್ಯಕೀಯ ಕಾಲೇಜುಗಳ ಪ್ರವೇಶ ಪರೀಕ್ಷೆಗಳು, ಇತರ ರಾಜ್ಯಗಳಲ್ಲಿ ಪ್ರವೇಶ ಬಯಸುವ ವಿದ್ಯಾರ್ಥಿಗಳು ಆ ರಾಜ್ಯಗಳ ಇಂತಹ ಎಲ್ಲ ಪರೀಕ್ಷೆಗಳು ಇವೇ ಮೊದಲಾಗಿ ಕೊನೆಯಿಲ್ಲದಂತೆ ಪ್ರವೇಶ ಪರೀಕ್ಷೆಗಳಿಗಾಗಿ ಖರ್ಚು ಮಾಡಬೇಕಿತ್ತು ಹಾಗೂ ಸಿದ್ಧತೆ ಮಾಡಿಕೊಂಡು ಪರೀಕ್ಷೆ ಬರೆಯಬೇಕಿತ್ತು. ಈಗ ಅಂತಹ ಯಾವುದೇ ಅಗತ್ಯವಿಲ್ಲದೆ, ಒಂದೇ ಪರೀಕ್ಷೆಯಲ್ಲಿ ವಿದ್ಯಾರ್ಥಿ ಗಳಿಸಿರುವ ಅರ್ಹತೆಯ ಆಧಾರದಲ್ಲಿ ದೇಶಾದ್ಯಂತ ಎಲ್ಲಿ ಬೇಕಾದರೂ ಸೀಟು ಪಡೆಯಬಹುದೆಂದು ವಾದಿಸಲಾಗುತ್ತಿದೆ.
ನೀಟ್‍ನಲ್ಲಿ ಎಲ್ಲವೂ ನೀಟಾಗಿದ್ದುದ್ದೇ ಆಗಿದ್ದರೆ ವಿರೋಧ ಏಕಿದೆ?
ನೀಟ್‍ನ ಆರಂಭದ ದಿನಗಳಿಂದಲೂ ಇದನ್ನು ಕಟುವಾಗಿ ವಿರೋಧಿಸುತ್ತಾ ಬಂದಿರುವ ಅನೇಕರಿದ್ದಾರೆ. ಮುಖ್ಯವಾಗಿ ಹಿಂದಿಯಲ್ಲದ ಇತರ ಭಾಷೆಗಳನ್ನು ರಾಜ್ಯ ಭಾಷೆಗಳನ್ನಾಗಿ ಹೊಂದಿರುವ ರಾಜ್ಯಗಳು, ವಿಜ್ಞಾನ ಶಿಕ್ಷಣದಲ್ಲಿ ತಮ್ಮದೇ ರಾಜ್ಯ ಸಿಲಬಸ್ ಹೊಂದಿರುವ ರಾಜ್ಯಗಳ ಸಂಘ ಸಂಸ್ಥೆಗಳು, ಪೋಷಕರು ಮತ್ತು ಜನಪ್ರತಿನಿಧಿಗಳು ಈ ವ್ಯವಸ್ಥೆಯನ್ನು ಒಪ್ಪಲು ತಯಾರಿಲ್ಲ. ಈಗಾಗಲೇ ಆಂದ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳು ನೀಟ್ ಅರ್ಹತೆಯ ಮಾನದಂಡವನ್ನು ಅಳವಡಿಸಿಕೊಳ್ಳುವುದಿಲ್ಲವೆಂದು ಪ್ರತ್ಯೇಕ ಸುಗ್ರೀವಾಜ್ಞೆಗಳನ್ನು ಹೊರಡಿಸಿವೆ. ಈ ರೀತಿಯ ವಿರೋಧವು ಖಾಸಗಿ ಮತ್ತು ಡೀಮ್ಡ್ ವೈದ್ಯಕೀಯ ಸಂಸ್ಥೆಗಳಿಂದ ಪ್ರಚೋದಿತವಾಗಿರಬಹುದೇ ಎಂಬ ಅನುಮಾನ ಮೂಡುವುದು ಸಹಜ. ಆದರೆ, ನೀಟನ್ನು ಒಪ್ಪದೆ ಉಳಿದದ್ದು ಸರ್ಕಾರಗಳು ಮಾತ್ರವಲ್ಲ; ವಿರೋಧ ವ್ಯಕ್ತಪಡಿಸುತ್ತಿರುವವರು ಹಲವು ದಶಕಗಳಿಂದ ಸಾಮಾಜಿಕ ನ್ಯಾಯದ ಹೋರಾಟಗಳಲ್ಲಿ ಸಕ್ರಿಯರಾಗಿರುವವರು. ಆದ್ದರಿಂದ ಅವರುಗಳು ಎತ್ತುತ್ತಿರುವ ಪ್ರಶ್ನೆಗಳೂ ಪರಿಗಣನೆಗೆ ಖಂಡಿತವಾಗಿಯೂ ಅರ್ಹವಾಗಿವೆ. ಅಂತಹ ಕೆಲವು ವಿಚಾರಗಳು ಹೀಗಿವೆ:
“ಮುಖ್ಯವಾಗಿ ನೀಟ್ ಪರೀಕ್ಷೆಯನ್ನು ಬೆಂಬಲಿಸುತ್ತಿರುವವರು ಈ ಹಿಂದೆ ಅಸ್ತಿತ್ವದಲ್ಲಿದ್ದ ಒಂದು ಬಗೆಯ ಅರಾಜಕವೆಂದು ಕರೆಯಬಹುದಾಗಿದ್ದ ಪದ್ಧತಿಗೆ ಹೋಲಿಸಿ ಇದು ಉತ್ತಮ ಎನ್ನುತ್ತಿದ್ದಾರೆ. ಆದರೆ, ಇದರಲ್ಲೂ ವೈದ್ಯಕೀಯ ಶಿಕ್ಷಣವನ್ನು ದೊಡ್ಡ ದಂಧೆಯನ್ನಾಗಿಯೇ ಮಾಡಿಕೊಂಡಿರುವ ಡೀಮ್ಡ್ ಸಂಸ್ಥೆಗಳು ರಂಗೋಲಿಯ ಕೆಳಗೆ ತೂರಿರುವುದು ಸ್ಪಷ್ಟವಿದೆ. ನೀಟ್ ವಿದ್ಯಾರ್ಥಿ ಸ್ನೇಹಿ ಅಂದುಕೊಳ್ಳುವ ಹೊತ್ತಿನಲ್ಲೇ ಖಾಸಗಿ ವೈದ್ಯಕೀಯ ದಂಧೆಗೆ ಈ ವ್ಯವಸ್ಥೆಯಲ್ಲೂ ಅವಕಾಶ ಮುಂದುವರೆದಿರುವುದು ಬೇಸರದ ಸಂಗತಿ” ಎನ್ನುತ್ತಾರೆ ವೃತ್ತಿ ಸಮಾಲೋಚಕರಾದ ಮಂಗಳೂರಿನ ಯು.ಎಚ್.ಉಮರ್‍ರವರು.
ತಮಿಳುನಾಡಿನ ‘ಸಾಮಾಜಿಕ ನ್ಯಾಯಕ್ಕಾಗಿ ಹೋರಾಡುವ ವೈದ್ಯರ ವೇದಿಕೆ’ಯ ಡಾ.ರವೀಂದ್ರನಾಥ್‍ರವರು, “ಈ ಹೊಸ ಪದ್ಧತಿಯಿಂದ ತಮಿಳುನಾಡಿನಂಥ ರಾಜ್ಯಗಳಿಗೆ ಆಗಿರುವ ಆಘಾತವನ್ನು ನೀವು ಊಹಿಸಲಾರಿರಿ. ನಮ್ಮಲ್ಲಿ ಬಹಳ ಸುದೀರ್ಘ ಹೋರಾಟದ ನಂತರ ಯಾವುದೇ ಪ್ರವೇಶ ಪರೀಕ್ಷೆಯ ಅಗತ್ಯವಿಲ್ಲದೆ 12ನೆ ತರಗತಿಯ [ದ್ವಿತೀಯ ಪಿಯುಸಿ] ಪಬ್ಲಿಕ್ ಪರೀಕ್ಷೆಯಲ್ಲಿ ಪಡೆದ ಅಂಕಗಳ ಆಧಾರದಲ್ಲಿಯೇ ವೃತ್ತಿಪರ ಶಿಕ್ಷಣಕ್ಕೆ ಪ್ರವೇಶ ಪಡೆಯುವ ಅರ್ಹತೆಯನ್ನು ಗಳಿಸಿಕೊಳ್ಳುವ ವ್ಯವಸ್ಥೆಯನ್ನು ರೂಪಿಸಿಕೊಂಡಿದ್ದೇವೆ. ಈಗ ಇದು ಪ್ರವೇಶ ಪರೀಕ್ಷೆ ಮಾತ್ರವಲ್ಲ, ದೇಶಾದ್ಯಂತ ಎಲ್ಲರಿಗೂ ಒಂದೇ ಮಾನದಂಡದ ಮೇಲೆ ಅರ್ಹತೆಯ ಸರ್ಟಿಫಿಕೇಟ್ ಕೊಡುವ ಹುನ್ನಾರ. ಅಷ್ಟಕ್ಕೂ ಇದನ್ನೆಲ್ಲ ನಿರ್ವಹಿಸಲು ಸಿಬಿಎಸ್‍ಇಗೆ ಏನು ಅರ್ಹತೆ ಇದೆ? ನಮ್ಮ ರಾಜ್ಯಗಳಲ್ಲಿ ಮಕ್ಕಳು ಪಡೆಯುತ್ತಿರುವ ವೈದ್ಯಕೀಯ ಶಿಕ್ಷಣದಿಂದ ಅವರು ಪಡೆದಿರುವ ಕೌಶಲ್ಯವು ಸಿಬಿಎಸ್‍ಇ ಅಡಿಯಲ್ಲಿ ದೊರೆಯುವ ಕೌಶಲ್ಯಕ್ಕಿಂತ ಕಡಿಮೆ ಎಂಬುದನ್ನು ಯಾರಾದರೂ ಸಾಬೀತು ಮಾಡುತ್ತಾರೆಯೇ? ಹಾಗೇನೂ ಇಲ್ಲ. ಅಂದಮೇಲೆ ನಮ್ಮ ಮಕ್ಕಳೇಕೆ ನೀಟ್ ಬರೆಯಬೇಕು? ನಮ್ಮ ಪದ್ಧತಿಯಲ್ಲಿ ಇದೇ ಮೊದಲ ಬಾರಿಗೆ ಶಿಕ್ಷಣ ಪಡೆಯುತ್ತಿರುವ ಗ್ರಾಮೀಣ ಭಾಗದ ಅತ್ಯಂತ ಬಡ ಕುಟುಂಬಗಳ ಮಕ್ಕಳೂ ಕೂಡಾ ವೈದ್ಯಕೀಯ ಶಿಕ್ಷಣಕ್ಕೆ ಅರ್ಹತೆ ಗಳಿಸಲು ಸಾಧ್ಯವಿತ್ತು. ಅಂತಹ ಸಾಧ್ಯತೆಯ ಬಾಗಿಲು ಮುಚ್ಚುತ್ತಿರುವ ನೀಟ್‍ನಿಂದ ನಾವು ಅನಿತಾಳಂತಹ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಕಳೆದುಕೊಳ್ಳುತ್ತಿದ್ದೇವೆ. ಆಕೆ ರಾಜ್ಯಮಟ್ಟದ ಪರೀಕ್ಷೆಯಲ್ಲಿ 200 ಅಂಕಗಳಿಗೆ 196.5 ಅಂಕ ಗಳಿಸಿದ್ದಳು. ಖಂಡಿತ ಒಳ್ಳೆಯ ವೈದ್ಯೆಯಾಗುತ್ತಿದ್ದಳು” ಎಂದು ನೋವಿನಿಂದ ನುಡಿಯುತ್ತಾರೆ.
ವ್ಯಾಪಾರೀ ಮಾರುಕಟ್ಟೆಯಲ್ಲಿ ನಡೆಯುವ ‘ಉನ್ನತೀಕರಣ’ ತೀವ್ರರೂಪಿ ಪ್ರಯತ್ನಗಳು ಮಾರುಕಟ್ಟೆ ಹಿತಾಸಕ್ತಿಗಳಿಗೆ ಪೂರಕವಾಗುವ ಸಾಧ್ಯತೆಗಳೇ ಹೆಚ್ಚು!
ಹೌದು, ಈ ಬಗೆಯ ಸಮಸ್ಯೆಗಳು ನೀಟ್ ಪರೀಕ್ಷೆಯ ನಿಯಮಾವಳಿಗಳಲ್ಲಿ ಮತ್ತು ಅದರ ಅಡಿಪಾಯದಲ್ಲೇ ಅಡಗಿವೆ. ಮೊದಲನೆಯದಾಗಿ, ಯಾವುದೇ ಬಗೆಯ ಕೇಂದ್ರೀಕರಣ ಮತ್ತು ಸೋ ಕಾಲ್ಡ್ ‘ಉನ್ನತೀಕರಣ’ಗಳು ನಮ್ಮಂತಹ ಜಾತಿ, ವರ್ಗ, ಲಿಂಗ ತಾರತಮ್ಯದ ಶ್ರೇಣೀಕೃತ ಸಮಾಜದಲ್ಲಿ ಒಂದಷ್ಟು ಜನರನ್ನು ಸೋಸಿ ಹೊರಗುಳಿಸುವ ಫಿಲ್ಟರ್‍ಗಳಾಗಿಯೇ ಕೆಲಸ ಮಾಡುತ್ತವೆಂಬುದಕ್ಕೆ ಇತಿಹಾಸವೇ ಸಾಕ್ಷಿ. ಆದ್ದರಿಂದಲೇ ನಮ್ಮ ಸಾಮಾಜಿಕ ನ್ಯಾಯದ ಪರಿಕಲ್ಪನೆಗಳು ಕೇಂದ್ರೀಕರಣದ ಬದಲಿಗೆ ವಿಕೇಂದ್ರೀಕರಣವನ್ನು, ‘ಉನ್ನತೀಕರಣ’ದ ಬದಲಿಗೆ ಸಾರ್ವತ್ರೀಕರಣವನ್ನು ಮತ್ತು ಏಕಕೇಂದ್ರ ನಿಯಂತ್ರಿತ ವ್ಯವಸ್ಥೆಯ ಬದಲಿಗೆ ಒಕ್ಕೂಟ ವ್ಯವಸ್ಥೆಯನ್ನು ಪ್ರತಿಪಾದಿಸುತ್ತವೆ. ಇಲ್ಲಿಯೂ ಕೂಡಾ, ನೀಟ್ ಮೂಲಕ ಜಾರಿಗೆ ತರಲಾಗಿರುವ ‘ಉನ್ನತೀಕರಣ’ವು, ನಗರ ಕೇಂದ್ರಿತವಾದ, ಸಿಬಿಎಸ್‍ಇ ಪಠ್ಯಕ್ರಮ ಅಳವಡಿಸಿಕೊಂಡಿರುವ ಶಾಲೆಗಳ ಮತ್ತು ನೀಟ್ ಕೋಚಿಂಗ್‍ನ ಎಲ್ಲ ಹೊರೆಯನ್ನೂ ಸಹಿಸಬಲ್ಲ ಎಲೀಟ್ ವರ್ಗಗಳಿಗೆ ಪೂರಕವಾಗಿದೆ. ಇದರರ್ಥ ಏನು? ಇಂತಹದ್ದಕ್ಕೆ ತೆರೆದುಕೊಳ್ಳುವ ಸಾಧ್ಯತೆಯನ್ನೇ ಹೊಂದಿರದ ವರ್ಗಗಳು ವಂಚಿತವಾಗುತ್ತವೆಂದೇ ಅರ್ಥ. ಬಹಳ ಸರಳವಾದ ಉದಾಹರಣೆಯನ್ನೇ ನೋಡುವುದಾದರೆ, ಇಲ್ಲಿನ ಪ್ರವೇಶ ಪರೀಕ್ಷೆಯಲ್ಲಿ ನೆಗೆಟಿವ್ ಮಾರ್ಕಿಂಗ್ ಪದ್ಧತಿ ಇರಲಿಲ್ಲ. ಅಂದರೆ, ತಪ್ಪು ಉತ್ತರ ಬರೆದಾಗ ಅಂಕಗಳನ್ನು ಕಳೆದುಕೊಳ್ಳುವ ಆತಂಕ ಇರಲಿಲ್ಲ. ನೀಟ್‍ನಲ್ಲಿ ಒಂದು ಸರಿ ಉತ್ತರಕ್ಕೆ 4 ಅಂಕಗಳು ದೊರೆತರೆ, ಒಂದು ತಪ್ಪು ಉತ್ತರಕ್ಕೆ 1 ಅಂಕ ಕಡಿತಗೊಳ್ಳುತ್ತದೆ. ಮೊದಲೇ ನಾವು ಓದುವ ಸಿಲಬಸ್‍ಗಿಂತ ಭಿನ್ನವಾದ, ಕ್ಲಿಷ್ಟವಾದ ಆಂಗ್ಲಭಾಷೆಯಲ್ಲಿರುವ ಪ್ರಶ್ನೆಗಳಿಗೆ ಉತ್ತರ ಬರೆಯುವ ಪ್ರಯತ್ನವನ್ನೇ ಈ ಪದ್ಧತಿ ಮೊಟಕುಗೊಳಿಸುತ್ತದೆ. [ಈಗ ಕರ್ನಾಟಕವೂ ಸೇರಿದಂತೆ ಅನೇಕ ರಾಜ್ಯಗಳಲ್ಲಿ ರಾಜ್ಯ ಪಠ್ಯಕ್ರಮವನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಗಳು ನಡೆಯುತ್ತಿವೆ. ಆದರೆ, ಈ ಪ್ರಕ್ರಿಯೆ ಕೆಳ ಹಂತದವರೆಗೂ ತಲುಪಲು ಅಗತ್ಯವಿರುವ ಸಮಯಾವಕಾಶ ದೊರೆತಿಲ್ಲ].
ರಾಜ್ಯದ ವಿದ್ಯಾರ್ಥಿಗಳಿಗೆ ಈ ಹಿಂದಿನ ಪದ್ಧತಿಯಲ್ಲಿ ಮತ್ತು ನೀಟ್ ಅಡಿಯಲ್ಲಿ ದೊರೆಯುತ್ತಿರುವ ವೈದ್ಯಕೀಯ ಸೀಟುಗಳ ಅಂಕಿಸಂಖ್ಯೆ ನೋಡಿದರೆ, ಅದರಲ್ಲೂ ಇಳಿಕೆಯಾಗುತ್ತಿರುವುದು ಕಾಣುತ್ತದೆ.
ಭಾಷೆಯ ವಿಚಾರವನ್ನೂ ಗಂಭೀರವಾಗಿಯೇ ಪರಿಗಣಿಸಬೇಕು. ತಮಿಳುನಾಡು, ಪಶ್ಚಿಮ ಬಂಗಾಳ, ಕೇರಳ ಮೊದಲಾದ ರಾಜ್ಯಗಳಲ್ಲಿ ಈಗಲೂ ವಿಜ್ಞಾನ ಶಿಕ್ಷಣವೂ ಪೂರ್ಣ ಪ್ರಮಾಣದಲ್ಲಿ, ನಿಜವಾದ ಅರ್ಥದಲ್ಲಿ ಅವರವರ ಮಾತೃಭಾಷೆ/ರಾಜ್ಯ ಭಾಷೆಯಲ್ಲಿ ದೊರೆಯುತ್ತಿದೆ. ಅಂತಹ ಎಲ್ಲ ಭಾಷೆಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿಲ್ಲ. ಒಂಬತ್ತು ಪ್ರಾದೇಶಿಕ ಭಾಷೆಗಳಿಗೆ ಈ ಬಾರಿ ಅವಕಾಶ ದೊರೆತಿದೆ. ಆದರೆ 2018ರ ಸಾಲಿನ ನೀಟ್ ಬರೆದವರಲ್ಲಿ ಶೇ.80.1ರಷ್ಟು ಮಂದಿ ಇಂಗ್ಲೀಷಿನಲ್ಲಿ, ಶೇ.11ರಷ್ಟು ಮಂದಿ ಹಿಂದಿಯಲ್ಲಿ ಬರೆದಿದ್ದಾರೆ. ಇನ್ನುಳಿದ ಭಾಷೆಯಲ್ಲಿ ಬರೆದವರ ಸಂಖ್ಯೆ ನಗಣ್ಯ [ಕನ್ನಡದಲ್ಲಿ ಕೇವಲ 700ರ ಆಸುಪಾಸಿನಲ್ಲಿದೆ ಈ ಸಂಖ್ಯೆ].
ಹಾಗಿದ್ದರೆ ಮೊದಲಿದ್ದ ಪರಿಸ್ಥಿತಿ ಬೇಕೆ? ಬದಲಾವಣೆಯೇ ಬೇಡವೇ?
ಇದು ನಾವು ತುರ್ತಾಗಿ ಉತ್ತರ ಹುಡುಕಿಕೊಳ್ಳಬೇಕಿರುವ ಪ್ರಶ್ನೆ. ಬದಲಾವಣೆ ಖಂಡಿತ ಬೇಕು. ಆದರೆ, ಅದು ನಮ್ಮನ್ನು ಇನ್ನಷ್ಟು ಅಸಮಾನತೆಯೆಡೆಗೆ, ಶ್ರೇಣೀಕರಣದೆಡೆಗೆ ತಳ್ಳುವಂತಿರಬಾರದು. ನಿಧಾನವಾಗಿ ನಾವು ಸ್ಥಳೀಯ ಭಾಷೆಗಳಲ್ಲಿಯೂ ವಿಜ್ಞಾನ ಮತ್ತು ವೃತ್ತಿಪರ ಶಿಕ್ಷಣ ದೊರೆಯಲು ಸಾಧ್ಯವಾಗುವ ಕಡೆಗೆ, ಗ್ರಾಮೀಣ ಭಾಗದಲ್ಲೂ ಅಗತ್ಯವಿರುವ ಕೌಶಲ್ಯಗಳು ಮತ್ತು ಇಂಗ್ಲೀಷ್ ಭಾಷಾಜ್ಞಾನವು ಉತ್ತಮವಾಗಿ ದೊರೆಯುವ ಕಡೆಗೆ, ಹಾಗೆಯೇ ಶಿಕ್ಷಣವು ವ್ಯಾಪಾರವಾಗದಂತೆ ಶಿಕ್ಷಣದ ಸಮಾನತೆಯ ಕಡೆಗೆ ಸಾಗಬೇಕಿತ್ತು. ಆದರೆ ಇದಕ್ಕೆ ವಿರುದ್ಧ ದಿಕ್ಕಿನ ಪ್ರಕ್ರಿಯೆ ತೀವ್ರಗೊಳ್ಳುತ್ತಿರುವುದಕ್ಕೆ ನೀಟ್ ಕೂಡಾ ಮತ್ತೊಂದು ಸಾಕ್ಷಿ.
ಸದ್ಯಕ್ಕಂತೂ ಈ ಬಿಕ್ಕಟ್ಟು ಇನ್ನಷ್ಟು ತೀವ್ರಗೊಳ್ಳುವೆಡೆಗೆ ಸಾಗುವ ಲಕ್ಷಣವೇ ಗೋಚರಿಸುತ್ತಿದೆ. ಇದಕ್ಕೆ ಸಾಮಾಜಿಕ, ಸಾಂಸ್ಥಿಕ ಮತ್ತು ವೈಯಕ್ತಿಕ_ಎಲ್ಲ ಹಂತಗಳಲ್ಲೂ ಶಿಕ್ಷಣದ ಸಮಾನತೆಯ ಪ್ರಯತ್ನಗಳು ಘನೀಭವಿಸುವುದೇ ಸರಿಯಾದ ಪರಿಹಾರ. ಆದರೆ ಅಲ್ಲಿಯವರೆಗೆ, ನೀಟ್ ಗೊಂದಲಕ್ಕೆ ನೋಯುತ್ತಲೇ ಬಂದವರು ಇನ್ನಷ್ಟು ಬಲಿಯಾಗದಂತೆ ನೋಡಿಕೊಳ್ಳುವುದು, ನೀಟ್‍ಅನ್ನು ನಿಜಕ್ಕೂ ನೀಟಾಗಿಸುವುದು ನಮ್ಮೆಲ್ಲರ ಕರ್ತವ್ಯವಲ್ಲವೇ?

– ಮಲ್ಲಿಗೆ ಸಿರಿಮನೆ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಐ-ಪ್ಯಾಕ್ ಮೇಲೆ ದಾಳಿ ಪ್ರಕರಣ: ಮಮತಾ ಬ್ಯಾನರ್ಜಿ ದೂರಿನ ಬೆನ್ನಲ್ಲೇ ಜಾರಿ ನಿರ್ದೇಶನಾಲಯದ ವಿರುದ್ಧ ಎಫ್‌ಐಆರ್

ಕೋಲ್ಕತ್ತಾ: ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ನಿವಾಸದ ಮೇಲೆ ಜಾರಿ ನಿರ್ದೇಶನಾಲಯ ನಡೆಸಿದ ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ...

‘ಭ್ರಷ್ಟ ಜನತಾ ಪಾರ್ಟಿ’: ಬಿಜೆಪಿ ಡಬಲ್ ಎಂಜಿನ್ ಆಡಳಿತದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ

ನವದೆಹಲಿ: ವಿವಿಧ ರಾಜ್ಯಗಳಲ್ಲಿ ಬಿಜೆಪಿಯ ಡಬಲ್ ಎಂಜಿನ್ ಸರ್ಕಾರಗಳ ವಿರುದ್ಧ ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.  ತಮ್ಮ ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ರಾಹುಲ್, ಉತ್ತರಾಖಂಡದಲ್ಲಿ ಅಂಕಿತ...

ಇಂದೋರ್‌ನಲ್ಲಿ ಕಲುಷಿತ ನೀರಿಗೆ 8 ಮಂದಿ ಬಲಿ: ಆರ್‌ಎಸ್‌ಎಸ್ ಕಚೇರಿಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್: ಭುಗಿಲೆದ್ದ ವಿವಾದ

ಇಂದೋರ್: ಆರ್‌ಎಸ್‌ಎಸ್ ಕಚೇರಿಯಲ್ಲಿ ಬುಧವಾರ ತಡರಾತ್ರಿ ನಡೆದ ಸಭೆಯಲ್ಲಿ ಜಿಲ್ಲಾಧಿಕಾರಿ ಮತ್ತು ಮೇಯರ್ ಭಾಗವಹಿಸಿದ್ದು ಕಂಡುಬಂದ ನಂತರ ಗುರುವಾರ ಇಂದೋರ್‌ನಲ್ಲಿ ರಾಜಕೀಯ ವಿವಾದ ಭುಗಿಲೆದ್ದಿದೆ.  ಕನಿಷ್ಠ ಎಂಟು ಮಂದಿ ಜೀವಗಳನ್ನು ಬಲಿ ಪಡೆದಿರುವ ಕಲುಷಿತ...

ಐ-ಪ್ಯಾಕ್ ಮೇಲೆ ಇಡಿ ದಾಳಿ: ಕೋಲ್ಕತ್ತಾದಲ್ಲಿ ಮಮತಾ ಪ್ರತಿಭಟನೆ: ಅಮಿತ್ ಶಾ ಕಚೇರಿಯ ಹೊರಗೆ ಪ್ರತಿಭಟಿಸುತ್ತಿದ್ದ ಟಿಎಂಸಿ ಶಾಸಕರ ಬಂಧನ

ಗುರುವಾರ (ಜ.8) ಬೆಳಿಗ್ಗೆ ಕೋಲ್ಕತ್ತಾದ ಸಾಲ್ಟ್ ಲೇಕ್‌ನಲ್ಲಿರುವ ರಾಜಕೀಯ ಸಲಹಾ ಸಂಸ್ಥೆ ಐ-ಪಿಎಸಿ (ಐ-ಪ್ಯಾಕ್) ಕಚೇರಿ ಮತ್ತು ಅದರ ಮುಖ್ಯಸ್ಥ ಪ್ರತೀಕ್ ಜೈನ್ ಅವರ ಮನೆ ಮೇಲೆ ಜಾರಿ ನಿರ್ದೇಶನಾಲಯ (ಇಡಿ) ನಡೆಸಿದ...

ಮಹಾರಾಷ್ಟ್ರ ಜಲ್ನಾ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣದ ಪ್ರಮುಖ ಆರೋಪಿ ಸ್ಪರ್ಧೆ!

ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯ ಆರೋಪಿ ಶ್ರೀಕಾಂತ್ ಪಂಗಾರ್ಕರ್ ಮುಂಬರುವ ಜಲ್ನಾ ಮುನ್ಸಿಪಲ್ ಕಾರ್ಪೊರೇಷನ್ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿದ್ದಾರೆ ಎಂಬ ಸುದ್ದಿ  ಹಲವು ರಾಷ್ಟ್ರೀಯ ಮಾಧ್ಯಮಗಳಲ್ಲಿ ವರದಿಯಾಗಿದೆ.  ಗೌರಿ ಲಂಕೇಶ್ ಹತ್ಯೆ ಸೇರಿದಂತೆ...

‘ಮೋದಿ ಟ್ರಂಪ್‌ಗೆ ಕರೆ ಮಾಡದ ಕಾರಣ ಭಾರತ-ಯುಎಸ್ ವ್ಯಾಪಾರ ಒಪ್ಪಂದ ನಡೆಯಲಿಲ್ಲ’: ಹೊವಾರ್ಡ್ ಲುಟ್ನಿಕ್ 

ಪ್ರಧಾನಿ ನರೇಂದ್ರ ಮೋದಿ ಅವರು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರಿಗೆ ಸರಿಯಾದ ಸಮಯಕ್ಕೆ ಕರೆ ಮಾಡದ ಕಾರಣ ಭಾರತದೊಂದಿಗಿನ ವ್ಯಾಪಾರ ಒಪ್ಪಂದ ನಡೆಯಲಿಲ್ಲ ಎಂದು ಅಮೆರಿಕದ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್...

‘ರೈಲ್ವೆ ಸಚಿವಾಲಯವನ್ನು ವೈಯಕ್ತಿಕ ಆಸ್ತಿಯಾಗಿ ಬಳಸಿಕೊಳ್ಳಲಾಗಿದೆ’: ಲಾಲು ಮತ್ತು ಕುಟುಂಬದ ವಿರುದ್ಧ ದೆಹಲಿ ನ್ಯಾಯಾಲಯ ಆರೋಪ

ನವದೆಹಲಿ: ಉದ್ಯೋಗಕ್ಕಾಗಿ ಭೂಮಿ ಹಗರಣದಲ್ಲಿ ಆರ್‌ಜೆಡಿ ಮುಖ್ಯಸ್ಥ ಮತ್ತು ಮಾಜಿ ರೈಲ್ವೆ ಸಚಿವ ಲಾಲು ಪ್ರಸಾದ್ ಯಾದವ್, ಅವರ ಕುಟುಂಬದ ಸದಸ್ಯರು ಮತ್ತು ಇತರರ ವಿರುದ್ಧ ದೆಹಲಿ ನ್ಯಾಯಾಲಯ ಗಂಭೀರ ಆರೋಪಗಳನ್ನು ಮಾಡಿದೆ.  ಯಾದವ್...

‘ಕೇರಳದ ಮಲಯಾಳಂ ಮಸೂದೆಯನ್ನು ವಿರೋಧಿಸಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತೇವೆ’: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ಕನ್ನಡ ಮಾಧ್ಯಮ ಶಾಲೆಗಳಲ್ಲಿಯೂ ಮಲಯಾಳಂ ಅನ್ನು ಪ್ರಥಮ ಭಾಷೆಯನ್ನಾಗಿ ಮಾಡುವ ಕೇರಳದ ಪ್ರಸ್ತಾವಿತ ಕಾನೂನನ್ನು ವಿರೋಧಿಸಲು ಕರ್ನಾಟಕ "ಸಾಧ್ಯವಾದಷ್ಟು ಪ್ರಯತ್ನಿಸುತ್ತದೆ" ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.   ಪ್ರಸ್ತಾವಿತ ಮಲಯಾಳಂ ಭಾಷಾ ಮಸೂದೆಯು "ಕೇರಳದ...

ಜಾರ್ಖಂಡ್‌ನಲ್ಲಿ ಮತ್ತೊಂದು ಗುಂಪುಹತ್ಯೆ: ದನ ಕಳ್ಳತನದ ಶಂಕೆಯಲ್ಲಿ ಮುಸ್ಲಿಂ ವ್ಯಕ್ತಿಯನ್ನು ಥಳಿಸಿ ಕೊಂದ ಗುಂಪು

ಜಾರ್ಖಂಡ್‌ನ ಗೊಡ್ಡಾ ಜಿಲ್ಲೆಯಲ್ಲಿ ಬುಧವಾರ ದನಗಳನ್ನು ಕದ್ದಿದ್ದಾನೆ ಎಂಬ ಶಂಕೆಯಲ್ಲಿ 45 ವರ್ಷದ ಮುಸ್ಲಿಂ ವ್ಯಕ್ತಿಯನ್ನು ಅಪರಿಚಿತ ಜನರ ಗುಂಪೊಂದು ಹೊಡೆದು ಕೊಂದಿದೆ ಎಂದು ಪಿಟಿಐ ವರದಿ ಮಾಡಿದೆ. ಪೊಲೀಸ್ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿ...

ನ್ಯಾಷನಲ್ ಹೆರಾಲ್ಡ್ ಜಾಹೀರಾತು ವಿವಾದ: ಹಣಕಾಸಿನ ದಾಖಲೆ ಕೇಳಿ ಡಿಕೆ ಸಹೋದರರಿಗೆ ನೋಟಿಸ್  

ಕಾಂಗ್ರೆಸ್ ನೇತೃತ್ವದ ಕರ್ನಾಟಕ ಸರ್ಕಾರದಿಂದ ನ್ಯಾಷನಲ್ ಹೆರಾಲ್ಡ್ ಪತ್ರಿಕೆಗೆ ಬೇರೆ ಯಾವುದೇ ರಾಷ್ಟ್ರೀಯ ದಿನಪತ್ರಿಕೆಗಿಂತ ಹೆಚ್ಚಿನ ಜಾಹೀರಾತು ನಿಧಿ ದೊರೆತಿದೆ ಎಂದು ವರದಿಯಾಗಿದೆ, ಇದು ಸಾರ್ವಜನಿಕ ಹಣದ ಬಳಕೆಯ ಬಗ್ಗೆ ಪ್ರಶ್ನೆಗಳನ್ನು ಹುಟ್ಟುಹಾಕಿದೆ....