Homeಅಂಕಣಗಳುಮುಖ್ಯಮಂತ್ರಿ ಕುರ್ಚಿಯಲ್ಲಿ ಕುಮಾರಸ್ವಾಮಿ ಸೇಫ್!

ಮುಖ್ಯಮಂತ್ರಿ ಕುರ್ಚಿಯಲ್ಲಿ ಕುಮಾರಸ್ವಾಮಿ ಸೇಫ್!

- Advertisement -
- Advertisement -

ಲೋಕಸಭಾ ಚುನಾವಣೆ ನಡೆಯುವ 1 ವರ್ಷದವರೆಗೆ ನನ್ನನ್ನು ಅಲುಗಾಡಿಸಲು ಸಾಧ್ಯವಿಲ್ಲ ಅಂತ ನನಗೂ ಗೊತ್ತಿದೆ’ ಎಂದು ಮುಖ್ಯಮಂತ್ರಿ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಹೇಳುವಾಗ ಅವರ ಮನಸ್ಸಿನಲ್ಲಿ ಏನಿತ್ತು? ಇನ್ನೊಂದು ವಾರದೊಳಗೆ ಕಾಂಗ್ರೆಸ್ ಅಧಿನಾಯಕ ರಾಹುಲ್‍ಗಾಂಧಿ ‘5 ವರ್ಷಗಳ ಕಾಲ ನೀವೇ ಸಿಎಂ, 1 ವರ್ಷ ಎಂದೇಕೆ ಹೇಳಿದಿರಿ?’ ಎಂದು ಕೇಳಿ, ಪೂರ್ಣ 5 ವರ್ಷಗಳ ಭರವಸೆ ಕೊಡಬೇಕಾಗುತ್ತದೆಂದು ಊಹಿಸಿದ್ದರೇ? ಬಹುಶಃ ಇಲ್ಲ. ಕುಮಾರಸ್ವಾಮಿ ಕೆಲವೊಮ್ಮೆ ಮನಸ್ಸಿನಲ್ಲಿದ್ದುದನ್ನು ಹಾಗ್ಹಾಗೇ ಹೊರಗೆ ಹಾಕುತ್ತಾರೆ; ಮಾತಿನ ಪರಿಣಾಮ ತಟ್ಟಲಿ ಎಂತಲೂ ಹೇಳುತ್ತಾರೆ; ತಾನು ನೇರಾನೇರ ಮಾತಾಡುವ ವ್ಯಕ್ತಿ ಎಂಬಂತೆ ಕಾಣಬೇಕು ಎಂಬ ಇರಾದೆಯೂ ಅವರದ್ದಿರಬಹುದು ಅಥವಾ ಸಮ್ಮಿಶ್ರ ಸರ್ಕಾರದ ಜಂಜಾಟದ ನಡುವೆ ತೂರಿಬಂದ ಅಸಹನೆಯೂ ಈ ಮಾತನ್ನು ಆಡಿಸಿದ್ದಿರಬಹುದು. ಆದರೆ ಪರಿಣಾಮವಂತೂ ಕುಮಾರಸ್ವಾಮಿಯವರ ಬಯಕೆ ಏನಿದ್ದಿರಬಹುದೋ ಅದೇ ಆಯಿತು! ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರ ಐದು ವರ್ಷಗಳವರೆಗೆ ಸೇೀೀೀೀಫ್.
ಮೇಲ್ನೋಟಕ್ಕೆ ಈ ಸರ್ಕಾರವು ಇನ್ನೂ ಸೆಟ್ಲ್ ಆದಂತೆ ಕಾಣುತ್ತಿಲ್ಲ. ಸಚಿವರುಗಳು ಈಗಷ್ಟೇ ಖಾತೆಗೆ ಹೊಂದಿಕೊಳ್ಳುತ್ತಿದ್ದಾರೆ. ಕುಮಾರಸ್ವಾಮಿಯವರು ಇಡೀ ತಂಡದ ಕ್ಯಾಪ್ಟನ್ ಥರಾ ಆಗಿ ವ್ಯವಹರಿಸುವುದು ಸುಲಭವಿಲ್ಲ. ಹಲವು ಹೊಸಬರು ಮಂತ್ರಿಗಳಾಗಿದ್ದಾರೆ; ಅವರ ರೀತಿ-ನೀತಿಗಳನ್ನು ಅರ್ಥ ಮಾಡಿಕೊಂಡು ಜೊತೆ ಕರೆದೊಯ್ಯಬೇಕು. ಡಿ.ಕೆ.ಶಿವಕುಮಾರ್‍ರಿಗೆ ಸಲ್ಲಬೇಕಾದ ಸ್ಥಾನ ಸಲ್ಲದೇ ಹೋದರೆ ಬಹಿರಂಗ ವಾಗ್ದಾಳಿಯನ್ನೇ ಎದುರಿಸಬೇಕಾಗಿ ಬರಬಹುದೆಂಬ ಆತಂಕ ಇದ್ದೇ ಇರುತ್ತದೆ. ಲಿಂಗಾಯಿತರಿಗೆ ಮತ್ತು ಸಿದ್ದರಾಮಯ್ಯ ಬೆಂಬಲಿಗರಿಗೆ ಸೂಕ್ತ ಸ್ಥಾನಮಾನ ಸಿಗದೇ ಇರುವುದರಿಂದ ಉಂಟಾಗಬಹುದಾದ ಭಿನ್ನಮತವನ್ನು ಸಂಪೂರ್ಣ ಶಮನ ಮಾಡಲಾಗಿಲ್ಲ; ಇವೆಲ್ಲವೂ ನಿಜ.
ಆದರೂ ಕುಮಾರಸ್ವಾಮಿ ಸೇಫ್ ಎಂದು ಖಚಿತವಾಗಿ ಹೇಳಲು ಕಾರಣಗಳಿವೆ. ಮೇಲೆ ಹೇಳಲಾದ ಎಲ್ಲವನ್ನೂ, ಜೊತೆಗೆ ಅನಿರೀಕ್ಷಿತವಾಗಿ ಎದುರಾಗಬಹುದಾದ ಇನ್ನಿತರ ಸಮಸ್ಯೆಗಳನ್ನು ಹಾಗೂ ಬಿಜೆಪಿಯ ಸಂಭವನೀಯ ದಾಳಿಯನ್ನು ಸಂದರ್ಭಕ್ಕೆ ತಕ್ಕಂತೆ ಎದುರಿಸಲೇಬೇಕಾಗುತ್ತದೆ. ಆದರೆ, ಈಗಲೇ ತನಗೇನೂ ಹೆದರಿಕೆಯೇ ಇಲ್ಲದೇ ಆಡಳಿತ ಮಾಡಿಕೊಂಡು ಹೋಗಲು ಮೂರ್ನಾಲ್ಕು ಸಂಗತಿಗಳನ್ನು ಖಚಿತಪಡಿಸಿಕೊಳ್ಳುವ ಅಗತ್ಯ ಜೆಡಿಎಸ್ ನಾಯಕರುಗಳಿಗೆ ಇದ್ದೇ ಇತ್ತು. ಆ ಮೂರ್ನಾಲ್ಕು ಸಂಗತಿಗಳು ಈಗಾಗಲೇ ಬಗೆಹರಿದಿದೆ.
ಈ ವಿಚಾರದಲ್ಲಿ ಕುಮಾರಸ್ವಾಮಿಯವರಿಗೆ ಬೇಕಿದ್ದ ಮೊದಲನೆಯ ಭರವಸೆ ಗೌಡರ ಕುಟುಂಬದೊಳಗಿನದ್ದು. ರೇವಣ್ಣರಿಗೆ ಲೋಕೋಪಯೋಗಿ ಮತ್ತು ಇಂಧನ ಖಾತೆ ಎರಡೂ ಬೇಕಿತ್ತೆಂದೂ, ರೇವಣ್ಣರ ಕುಟುಂಬ (ಪತ್ನಿ ಭವಾನಿ ಮತ್ತು ಪುತ್ರ ಪ್ರಜ್ವಲ್)ದ ಕಡೆಯಿಂದ ಆತಂಕ ತಪ್ಪಿದ್ದಲ್ಲವೆಂದೂ ಗುಸುಗುಸು ಇದ್ದೇ ಇತ್ತು. ಕುಮಾರಸ್ವಾಮಿ ಮುಖ್ಯಮಂತ್ರಿಯಾದ ಮೊದಮೊದಲೇ ನಡೆಸಿದ ಒಂದು ಪತ್ರಿಕಾಗೋಷ್ಠಿಯಲ್ಲಿ, ಸ್ವಲ್ಪ ದೂರದಲ್ಲಿ ಕೂತಿದ್ದ ರೇವಣ್ಣರೇ ಮಧ್ಯೆ ಮಧ್ಯೆ ಬಾಯಿ ಹಾಕಿ ಎಡವಟ್ಟು ಮಾಡಿದ್ದರು. ಕೊನೆಗೆ ಸಿಎಂ ‘ಏಯ್ ರೇವಣ್ಣ, ಸ್ವಲ್ಪ ಸುಮ್ನಿರು. ನೀನು ಬೇಕಾದ್ರೆ ಆ ಮೇಲೆ ಇನ್ನೊಂದು ಪತ್ರಿಕಾಗೋಷ್ಠಿ ಕರೆದು ವಿವರವಾಗಿ ಹೇಳು’ ಎಂದು ನಗುನಗುತ್ತಲೇ ಹೇಳಬೇಕಾಗಿ ಬಂದಿತ್ತು. ಕುಮಾರಸ್ವಾಮಿ ವಿಶ್ವಾಸಮತ ಯಾಚನೆ ಸಂದರ್ಭದಲ್ಲೂ ಅವರ ಹಿಂದೆಯೇ ಕೂತಿದ್ದ ರೇವಣ್ಣ ಯಡಿಯೂರಪ್ಪನವರು ಮಾತಾಡುವಾಗ ಮಧ್ಯೆ ಮಧ್ಯೆ ಬಾಯಿ ಹಾಕಿ, ಮುಜುಗರ ತರಿಸುತ್ತಿದ್ದರು. ಯಾಕೋ ರೇವಣ್ಣ ಕುಮಾರಸ್ವಾಮಿಗೆ ಉದ್ದಕ್ಕೂ ತೊಂದರೆ ಕೊಡಬಹುದು ಎಂದು ಯಾರಿಗಾದರೂ ಅನಿಸುತ್ತಿತ್ತು.
ಸ್ವಭಾವದ ಕಾರಣಕ್ಕೆ ಮುಂದೆಯೂ ಅಂತಹದ್ದು ಪುನರಾವರ್ತನೆ ಆಗಬಹುದಾದರೂ, ಗೌಡರ ಇಡೀ ಫ್ಯಾಮಿಲಿಯ ಟೀಂ ವರ್ಕ್ ಆಗಲೇ ಶುರುವಾಗಿಬಿಟ್ಟಿದೆ. ದೇವೇಗೌಡರು ಇಂತಹುದನ್ನು ಮಾತಿನಿಂದಲೂ, ಮೌನದಿಂದಲೂ, ಕೆಲಸಗಳನ್ನು ಹಂಚುವ ಮುಖಾಂತರವೂ ಬಗೆಹರಿಸುವ ಅಸಾಧಾರಣ ಕೌಶಲವನ್ನು ಹೊಂದಿದ್ದಾರೆ. ಹಿಂದಿನಿಂದಲೂ ಸಿದ್ದರಾಮಯ್ಯರ ಜೊತೆಗೆ ಚೆನ್ನಾಗಿಯೇ ಇರುವ ರೇವಣ್ಣ, ಶಿರಾಡಿ ಘಾಟ್ ರಸ್ತೆ ಪರಿಶೀಲನೆ ನೆಪದಲ್ಲಿ ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರಕ್ಕೆ ಹೋಗಿ ಬಂದಿದ್ದು ಆ ವರ್ಕ್ ಡಿವಿಜನ್ ಭಾಗವಾಗಿಯೇ. ಅಲ್ಲಿ ದಾಖಲಾಗಿರುವ ಸಿದ್ದು ಬಳಿ, ಕುಶಲ ಸಮಾಚಾರ ಕೇಳಲು ರೇವಣ್ಣ ಹೋಗಿರಲಿಲ್ಲ. ಬಜೆಟ್ ಕುರಿತಂತೆ ಸಿದ್ದರಾಮಯ್ಯರ ಹೇಳಿಕೆ, ಸಿದ್ದು ಬೆಂಬಲಿಗರ ಮುನಿಸು ಎಲ್ಲವನ್ನೂ ಆ ಭೇಟಿ ಮುಂದಿಟ್ಟ ಇಮೇಜ್ ಬದಲಿಸಿಬಿಟ್ಟಿತು. ಸಿದ್ದರಾಮಯ್ಯನವರನ್ನು ಮ್ಯಾನೇಜ್ ಮಾಡುವ ಈ ಖಾತೆಯ ಉಸ್ತುವಾರಿ ದೇವೇಗೌಡರದ್ದೇ ಆಗಿದ್ದರೂ, ಅವರ ರಾಜ್ಯ ಮಂತ್ರಿ ರೇವಣ್ಣರೇ. ಸಿಎಂ ಪಿಎಸ್ ಆಗಿ ಕಚೇರಿಯಲ್ಲಿ ಪ್ರತಿಷ್ಠಾಪನೆಗೊಂಡಿರುವ ಚೆನ್ನಮ್ಮರ ಸಂಬಂಧಿ ಪ್ರಭುವಿನಿಂದ ಹಿಡಿದು, ಹಲವು ಬಾಂಧವರು ಈಗಾಗಲೇ ಸೂಕ್ತ ಸ್ಥಾನಗಳಲ್ಲಿ ವಿರಾಜಮಾನರಾಗುತ್ತಿದ್ದಾರೆ.
ಇದೇ ರೀತಿ ಜೆಡಿಎಸ್ ಒಳಗಿನ ಬೇಗುದಿಯೂ ಸ್ಫೋಟಗೊಳ್ಳುವ ಸಾಧ್ಯತೆ ಇಲ್ಲ. ಸಂಪುಟ ರಚನೆಯ ಹಿಂದಿನ ದಿನ ನಡೆದ ಶಾಸಕಾಂಗ ಸಭೆಯಲ್ಲಿಯೇ ‘ರಾಷ್ಟ್ರೀಯ ಅಧ್ಯಕ್ಷರು’ ಎಲ್ಲರಿಗೂ ಹೇಳಬೇಕಾದ್ದನ್ನು ಹೇಳಿದ್ದಾರೆಂದು ಎಎನ್‍ಐಗೆ ನೀಡಿದ ಬೈಟ್‍ನಲ್ಲಿ ಕುಮಾರಸ್ವಾಮಿ ಆತ್ಮವಿಶ್ವಾಸದಿಂದ ಹೇಳಿದ್ದರು. ಬಹುಶಃ ಇನ್ನಾವ ಮುಖ್ಯಮಂತ್ರಿಗೂ ಇರದ ಅನುಕೂಲ ಅವರಿಗಿದೆ. ಅದೇನೆಂದರೆ, ಅವರಿಗಿಂತ ಚಾಣಾಕ್ಷರಾದ ಸೀನಿಯರ್ ರಾಜಕಾರಣಿ ಅವರ ಬೆನ್ನೆಲುಬಿಗಿದ್ದು ಎಲ್ಲವನ್ನೂ ಮ್ಯಾನೇಜ್ ಮಾಡುತ್ತಿರುತ್ತಾರೆ. ಸೀನಿಯರ್ ರೇವಣ್ಣ ಅಲ್ಲ; ದೇವೇಗೌಡರು.
ದೇವೇಗೌಡರು ಕಾಂಗ್ರೆಸ್‍ಅನ್ನು ಮ್ಯಾನೇಜ್ ಮಾಡಲು ಇರುವ ಅತ್ಯುತ್ತಮ ವಿಧಾನ ಏನೆಂಬುದನ್ನು ಚೆನ್ನಾಗಿ ಬಲ್ಲರು. ಸೋನಿಯಾಗಾಂಧಿ ಎಂತಹುದೇ ಸಂದರ್ಭದಲ್ಲೂ ಕೊಟ್ಟ ಮಾತಿಗೆ ತಪ್ಪುವುದಿಲ್ಲ ಮತ್ತು ರಾಹುಲ್‍ಗಾಂಧಿ ಸಹಾ ಅದೇ ಸ್ವಭಾವ ಹೊಂದಿದ್ದಾರೆಂಬುದು ಅವರಿಗೆ ಗೊತ್ತು. ಕಾಂಗ್ರೆಸ್ ಜೊತೆಗೆ ಸಂಬಂಧ ಕೆಟ್ಟಾಗಲೂ ಗೌಡರು ಸೋನಿಯಾರನ್ನು ಎಂದೂ ನಿಂದಿಸಿರಲಿಲ್ಲ. ಈಗಲೂ ಕುಮಾರಸ್ವಾಮಿಗೆ ಕಾಂಗ್ರೆಸ್ ಹೈಕಮ್ಯಾಂಡ್ ಅಭಯ ಮುಖ್ಯವೆಂದರಿತಿರುವ ಗೌಡರು, ಒಂದಲ್ಲಾ ಮೂರು ಬಾರಿ ಸೋನಿಯಾ/ರಾಹುಲ್‍ರ ಕೈಲಿ, ಈ ಬೆಂಬಲ 5 ವರ್ಷದವರೆಗೆ ಎಂದು ಹೇಳಿಸಿದ್ದಾರೆ. ಮೊನ್ನೆ ಕುಮಾರಸ್ವಾಮಿ ದೆಹಲಿಗೆ ಹೋದಾಗ ರಾಹುಲ್‍ಗಾಂಧಿ ಇನ್ನೊಮ್ಮೆ ಅದನ್ನು ಸ್ಪಷ್ಟಪಡಿಸಿರುವುದಕ್ಕೆ, ತಾನು 1 ವರ್ಷದವರೆಗೆ ಸೇಫ್ ಎಂಬ ಕುಮಾರಸ್ವಾಮಿ ಹೇಳಿಕೆಯ ಜೊತೆಗೆ ಗೌಡರ ಮಾಸ್ಟರ್ ಪ್ಲಾನ್ ಸಹಾ ಕೆಲಸ ಮಾಡಿದೆ. 2019ರ ಚುನಾವಣೆಯಲ್ಲಿ ಏನೇ ನಡೆದರೂ, ಕಾಂಗ್ರೆಸ್ ಹೈಕಮ್ಯಾಂಡ್‍ನಿಂದ ಸಮ್ಮಿಶ್ರ ಸರ್ಕಾರ ದುರ್ಬಲಗೊಳಿಸಲು ಕುಮ್ಮಕ್ಕು ದೊರೆಯುವುದಿಲ್ಲವೆಂಬುದು ಖಚಿತ. ಎರಡು ಯುಪಿಎ ಸರ್ಕಾರಗಳನ್ನು ಮತ್ತು ಮಹಾರಾಷ್ಟ್ರದಲ್ಲಿ ಎರಡು ಸುದೀರ್ಘ ಅವಧಿಯ ಸಮ್ಮಿಶ್ರ ಸರ್ಕಾರಗಳನ್ನು ನಡೆಸಿರುವ ಸೋನಿಯಾ ನೇತೃತ್ವದ ಕಾಂಗ್ರೆಸ್‍ಗಿರುವ ಟ್ರ್ಯಾಕ್ ರೆಕಾರ್ಡ್ ಅದನ್ನೇ ಹೇಳುತ್ತದೆ.
ಕಾಂಗ್ರೆಸ್‍ನ ನಾಯಕತ್ವದ ಮನಸ್ಥಿತಿಯನ್ನು ತೋರುವ ಬೆಳವಣಿಗೆಯೊಂದು ತೀರಾ ಇತ್ತೀಚೆಗೆ ಕೇರಳದಲ್ಲಿ ನಡೆಯಿತು. ಕಳೆದ ಚುನಾವಣೆಗೆ ಮುಂಚೆ ಕಾಂಗ್ರೆಸ್ ನೇತೃತ್ವದ ಯುಡಿಎಫ್‍ಅನ್ನು ಕೇರಳ ಕಾಂಗ್ರೆಸ್ (ಮಣಿ) ತೊರೆದು ಹೋಗಿತ್ತು. ಅದರಿಂದ ಯುಡಿಎಫ್‍ಗೆ ನಷ್ಟವೂ ಆಗಿತ್ತು. ಆದರೂ ಆ ಪಕ್ಷಕ್ಕೆ – ಸ್ಥಳೀಯ ಪ್ರತಿರೋಧದ ಹೊರತಾಗಿಯೂ – ಇದ್ದ ಒಂದೇ ರಾಜ್ಯಸಭಾ ಸ್ಥಾನವನ್ನು ಕಾಂಗ್ರೆಸ್ ಬಿಟ್ಟುಕೊಟ್ಟಿತು.
ಸಂಪುಟ ರಚನೆ ಸಂದರ್ಭದಲ್ಲಿ ಕಂಡ ಭಿನ್ನಮತ ಚಟುವಟಿಕೆ ದೊಡ್ಡ ಸಮಸ್ಯೆಯಾಗುವುದಿಲ್ಲವೆಂಬುದು ತಂದೆ ಮಗನಿಗೆ ಗೊತ್ತಿತ್ತು. ಕುಮಾರಸ್ವಾಮಿ ಅದನ್ನು ಮಾಧ್ಯಮಗಳ ಮುಂದೆ ಹೇಳಿಯೂ ಇದ್ದರು. ‘2008ರಲ್ಲಿ ಬಿಜೆಪಿ ಸರ್ಕಾರ ರಚನೆಯಾದಾಗ ಆನೇಕಲ್, ಹಾವೇರಿ ಮತ್ತು ಹುಬ್ಬಳ್ಳಿಗಳಲ್ಲಿ ಯಾವ ರೀತಿ ಪ್ರತಿಭಟನೆ ಆಯ್ತು ಅಂತ ಗೊತ್ತಿಲ್ಲವಾ, ಪ್ರತಿಭಟನೆ ಆಗುತ್ತೆ, ನಂತರ ಎಲ್ಲಾ ಸರಿ ಹೋಗುತ್ತೆ’ ಎಂದು ಹೇಳಿದ್ದರೂ, ಒಂದು ವಾರಕ್ಕೂ ಹೆಚ್ಚು ಕಾಲ ಮುಂದುವರೆದಾಗ ತಾವೇ ಸ್ವತಃ ಎಂ.ಬಿ.ಪಾಟೀಲ್ ಮನೆಗೂ ಹೋಗಿ ಬಂದರು. ‘ಸಿ.ಎಂ. ನಮ್ಮ ಮನೆಗೆ ಬರ್ತೀನಿ ಎಂದರೆ ಬೇಡ ಅನ್ನೋಕಾಗುತ್ತಾ? ಬನ್ನಿ ಎಂದೆ, ಅಷ್ಟೇ’ ಎಂದು ಪಾಟೀಲರು ಹೇಳಿದಾಗ ಕಾಂಗ್ರೆಸ್ ಹೈಕಮ್ಯಾಂಡ್‍ಗೆ ಸಂದೇಶ ಹೋಯಿತು. ಅವರ ಸೂಚನೆಯ ಮೇರೆಗೆ ದೆಹಲಿಗೆ ಹೋದ ಎಂ.ಬಿ.ಪಾಟೀಲ್, ರಾಹುಲ್‍ಗಾಂಧಿ ಭೇಟಿಯ ನಂತರ ಹೊರಗೆ ಬಂದು, ‘ನಾನು ಸಚಿವ ಸ್ಥಾನದ ಆಕಾಂಕ್ಷಿಯೂ ಅಲ್ಲ, ಕೆಪಿಸಿಸಿ ಸ್ಥಾನದ ಆಕಾಂಕ್ಷಿಯೂ ಅಲ್ಲ’ ಎಂದು ತೇಲಿಸಿಬಿಟ್ಟರು.
ಏನೇ ಭಿನ್ನಮತವಿದ್ದರೂ, ಗುಂಪಿನಲ್ಲಿ ದೊಡ್ಡ ಸಂಖ್ಯೆಯ (ಬಿಜೆಪಿಗೆ ಅಗತ್ಯವಿರುವ 14ರಷ್ಟು) ಶಾಸಕರು ಬಿಟ್ಟು ಹೋಗುವುದು ಕಷ್ಟ ಎಂಬುದು ಎಲ್ಲರಿಗೂ ಗೊತ್ತು. ಆಪರೇಷನ್ ಕಮಲವೂ ಗುಂಪಾಗಿ ನಡೆಯುವುದು ಕಷ್ಟ. ಅದಕ್ಕೆ ಎಂ.ಬಿ.ಪಾಟೀಲ್ ಅಥವಾ ಸತೀಶ್ ಜಾರಕಿಹೊಳಿಯಂತಹ ನಾಯಕರುಗಳಿದ್ದು, ಬಿಜೆಪಿಯಿಂದ ಖಚಿತ ಆಶ್ವಾಸನೆ ಬೇಕಾಗುತ್ತದೆ. ಲಿಂಗಾಯಿತ ಚಳವಳಿಯ ಕಾರಣಕ್ಕೆ ಎಂ.ಬಿ.ಪಾಟೀಲ್ ಬಿಜೆಪಿಗೆ ಹೋಗುವುದು ಅಸಾಧ್ಯ ಮತ್ತು ಸೈದ್ಧಾಂತಿಕ ಕಾರಣಗಳಿಗೆ ಜಾರಕಿಹೊಳಿಯವರೂ ಹೋಗಲಾರರು. ಆದರೂ ಭುಸುಗುಡುವ ಪಾಟೀಲರನ್ನು ಸಮಾಧಾನಪಡಿಸುವ ಪ್ರಯತ್ನವೂ ಯಶಸ್ವಿಯಾಗಿದೆ.
ಇದರಾಚೆಗೆ ಕಾಂಗ್ರೆಸ್ಸಿನ ಪಾಲಿಗೆ ಇನ್ನೂ ಆರು ಸಚಿವ ಸ್ಥಾನಗಳಿವೆ ಮತ್ತು ಜೆಡಿಎಸ್‍ನ ಪಾಲಿಗೆ ಮುಖ್ಯಮಂತ್ರಿ ದಯಪಾಲಿಸಬಹುದಾದ ಹಲವಾರು ಅನುಕೂಲಗಳಿವೆ. ಹಾಗಾಗಿ ಐದೂ ವರ್ಷಗಳನ್ನು ದಾಟುವುದು ದೊಡ್ಡ ವಿಚಾರವೇ ಅಲ್ಲ. ಹೀಗಿದ್ದೂ, ಗೌಡರ ಕುಟುಂಬ ತನ್ನ ಪಾಲಿಗೆ ಪಡೆದು ಕೊಂಡಿರುವುದೇನೂ ಕಡಿಮೆಯಲ್ಲ. ಹಣಕಾಸು, ಅಬಕಾರಿ, ಇಂಧನ, ಲೋಕೋಪಯೋಗಿಯಂತಹ ಫಲವತ್ತಾದ ಖಾತೆಗಳನ್ನು ತಮ್ಮೊಂದಿಗೇ ಇಟ್ಟುಕೊಂಡಿದ್ದಾರೆ. ಸದ್ಯಕ್ಕೆ ಜಿ.ಟಿ.ದೇವೇಗೌಡರು ನಿರಾಕರಿಸಿರುವ ಉನ್ನತ ಶಿಕ್ಷಣ ಮತ್ತು ಬೀಗರಾದ ತಮ್ಮಣ್ಣರ ಸಾರಿಗೆಯೂ ಇವರೊಂದಿಗೇ ಇದ್ದಂತೆ. ದೊಡ್ಡಗೌಡರು, ರೇವಣ್ಣ ಮತ್ತು ಕುಮಾರಸ್ವಾಮಿಯಲ್ಲದೇ, ‘ಒಂದು ಖಾತೆಯನ್ನು ನಿಭಾಯಿಸಲು ಶಕ್ತಿಯುಳ್ಳ’ ದೊಡ್ಡಣ್ಣ ನಿವೃತ್ತ ಅಧಿಕಾರಿ ಬಾಲಕೃಷ್ಣೇಗೌಡರೂ ಟೀಂನಲ್ಲಿದ್ದಾರೆ. ಇವುಗಳ ಮೂಲಕ ತಮ್ಮ ಕೆಲಸಗಳನ್ನು ಮಾಡಿಕೊಳ್ಳಲೂ ಆಯಿತು, ಬೇಕೆಂದಾಗ ‘ಬಲಾಢ್ಯ’ರೊಬ್ಬರಿಗೆ ಈ ಖಾತೆಯನ್ನು ಕೊಟ್ಟು ತಮ್ಮ ಜೊತೆಗಿಟ್ಟುಕೊಳ್ಳಲೂ ಆಯಿತು ಎಂದೇ ಇಷ್ಟು ಖಾತೆಗಳು ಉಳಿದುಕೊಂಡಿವೆ.
ಈ ಸದ್ಯ ಅತೀ ದೊಡ್ಡ ಭಿನ್ನಮತೀಯ ನಾಯಕರೆಂದು ಬಿಂಬಿಸಲಾಗುತ್ತಿರುವ ಸಿದ್ದರಾಮಯ್ಯನವರು ಬಯಸಿದರೂ, ಬಹಳ ದೊಡ್ಡ ಭಿನ್ನಮತವನ್ನು ಸಂಘಟಿಸಿ ಸರ್ಕಾರವನ್ನು ಉರುಳಿಸಲಾರರು. ಮೊದಲನೆಯದಾಗಿ, ಅಂತಹ ಭಿನ್ನಮತವನ್ನು ಕಾಂಗ್ರೆಸ್‍ನಲ್ಲಿ ಈ ಹಂತದಲ್ಲಿ ತೋರುವ ಪರಿಸ್ಥಿತಿಯಲ್ಲಿ ಅವರೇ ಇಲ್ಲ. ಮೇಲ್ಜಾತಿ ಧ್ರುವೀಕರಣ ಮತ್ತು ಕಳೆದ ಐದು ವರ್ಷಗಳಲ್ಲಿ ಬರಗೆಟ್ಟಂತಿದ್ದ ಮೇಲ್ಜಾತಿ ಅಧಿಕಾರಿಗಳ ಆಟಾಟೋಪ ಹಿಂದುಳಿದ ಸಮುದಾಯಗಳಲ್ಲಿ ಉಂಟು ಮಾಡಬಹುದಾದ ಅಸಮಾಧಾನವನ್ನು ಹರಳುಗಟ್ಟಿಸುವ ಕೆಲಸ ಅವರಿಂದ ಸಾಧ್ಯವೂ ಇಲ್ಲ. ಎರಡನೆಯದಾಗಿ, ಸಮನ್ವಯ ಸಮಿತಿಯ ಅಧ್ಯಕ್ಷರಾಗಿ ಸಮನ್ವಯ ಮಾಡಬೇಕಾದ ಜವಾಬ್ದಾರಿ ಹೊತ್ತಿರುವವರು ಅದನ್ನು ಕದಡುವಂತಿಲ್ಲ. ಒಂದು ವೇಳೆ ಅಂತಹುದಕ್ಕೆ ಕಾರಣವಾದರೆ, ಅವರಿಗೆ ನೆನಪಿಸಲು ಹೈಕಮಾಂಡ್ ಇದ್ದೇ ಇದೆ. ತಮಗೆ ಐದು ವರ್ಷ ಅಧಿಕಾರ ನಡೆಸಲು ಬೇಕಾದ ಸ್ವಾತಂತ್ರ್ಯ ಮತ್ತು ಚುನಾವಣಾ ಸಾರಥ್ಯವನ್ನು ನೀಡಿದ ರಾಹುಲ್-ಸೋನಿಯಾರು ಹಾಕಿದ ಗೆರೆಯನ್ನು ಸಿದ್ದರಾಮಯ್ಯನವರು ದಾಟುವುದು ಸಾಧ್ಯವಿಲ್ಲ. ಈ ಸರ್ಕಾರವನ್ನು ಬೀಳಿಸಿದ ಮತ್ತು ಯಾವುದಾದರೂ ರೀತಿಯಲ್ಲಿ ಬಿಜೆಪಿಗೆ ಅನುಕೂಲ ಮಾಡಿಕೊಟ್ಟ ಅಪಖ್ಯಾತಿಯನ್ನು ಅವರಂತೂ ಹೊತ್ತುಕೊಳ್ಳುವುದಿಲ್ಲ.
ಸಿದ್ದರಾಮಯ್ಯನವರು ಮುಖ್ಯಮಂತ್ರಿಯಾದ ಕೆಲವು ತಿಂಗಳಲ್ಲೇ, ಅವರ ಸರ್ಕಾರವು ಪತನವಾಗಲಿದೆ; ಸಿದ್ದರಾಮಯ್ಯನವರು ಕೆಳಗಿಳಿಯುತ್ತಾರೆ ಎಂದು ಬರಲಾರಂಭಿಸಿದ ವರದಿಗಳು ಹೆಚ್ಚೂ ಕಡಿಮೆ ಮೂರೂವರೆ ವರ್ಷಗಳವರೆಗೂ ‘ಬ್ರೇಕ್’ ಆಗುತ್ತಲೇ ಇದ್ದವು. ಈಗಲೂ ಅಂತಹ ಸುದ್ದಿಗಳು ಆಗಾಗ ಬರುವ ಸಾಧ್ಯತೆ ಇದೆ. ಕನಿಷ್ಠ ಒಂದು ವರ್ಷ ಕಾಲವಾದರೂ ಅಂತಹ ತರ್ಕಹೀನ ಸುದ್ದಿಗಳನ್ನು ಮಾಡಬೇಡಿ ಎಂದು ಕುಮಾರಸ್ವಾಮಿ ಸೂಚಿಸಿದ್ದಾರೆ ಎಂದಷ್ಟೇ ಈಗ ಅಂದುಕೊಳ್ಳಬಹುದು.

– ನೀಲಗಾರ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ಪ್ಯಾಲೆಸ್ತೀನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಣೆ; ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿಭಟಿಸಬೇಕು : ನಟ ಪ್ರಕಾಶ್ ರಾಜ್

ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವದಲ್ಲಿ ಪ್ಯಾಲೆಸ್ತೀನಿಯನ್ ಸಿನಿಮಾಗಳ ಪ್ರದರ್ಶನಕ್ಕೆ ಅನುಮತಿ ನಿರಾಕರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ರಾಜ್ಯ ಸರ್ಕಾರ ಗಟ್ಟಿ ದನಿಯಲ್ಲಿ ಪ್ರತಿರೋಧಿಸಬೇಕು, ಪ್ರತಿಭಟಿಸಬೇಕು ಎಂದು ನಟ ಪ್ರಕಾಶ್ ರಾಜ್ ಒತ್ತಾಯಿಸಿದರು. ಗುರುವಾರ (ಜ.29) ಸಂಜೆ...

ಗೌರಿ ಲಂಕೇಶರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ‘ಲ್ಯಾಂಡ್‍ ಲಾರ್ಡ್‌’ನಂತಹ ಸಿನಿಮಾ ಮಾಡಲು ಕೈ ಹಾಕಿದ್ದೇನೆ: ನಟ ದುನಿಯಾ ವಿಜಯ್

ಗೌರಿ ಲಂಕೇಶ್ ಹಾಗೂ ಇತರ ಹೋರಾಟಗಾರರ ನೆರಳು ನನ್ನ ಮೇಲೆ ಬಿದ್ದಿರುವ ಕಾರಣಕ್ಕೆ ನಾನು 'ಲ್ಯಾಂಡ್‍ಲಾರ್ಡ್' ನಂತಹ ಸಿನೆಮಾ ಮಾಡುವುದಕ್ಕೆ ಕೈ ಹಾಕಿದ್ದೇನೆ ಎಂದು ನಟ ದುನಿಯಾ ವಿಜಯ್ ಹೇಳಿದರು. ಗುರುವಾರ (ಜ.29) ಬೆಂಗಳೂರಿನ...

ಜಾತಿ ತಾರತಮ್ಯ ತಡೆಗಟ್ಟುವ ಯುಜಿಸಿಯ ಹೊಸ ನಿಯಮಕ್ಕೆ ಸುಪ್ರೀಂ ಕೋರ್ಟ್ ತಡೆ

ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಜಾತಿ ಆಧಾರಿತ ತಾರತಮ್ಯವನ್ನು ತಡೆಗಟ್ಟಲು ಕೇಂದ್ರ ಸರ್ಕಾರ ಜಾರಿಗೆ ತಂದಿರುವ ವಿಶ್ವವಿದ್ಯಾಲಯ ಅನುದಾನ ಆಯೋಗದ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಮಾನತೆಯ ಪ್ರಚಾರ) ನಿಯಮಗಳು, 2026ಕ್ಕೆ ಸುಪ್ರೀಂ ಕೋರ್ಟ್ ಗುರುವಾರ...

ರಾಜಸ್ಥಾನ| ಸಾರ್ವಜನಿಕ ಕಾರ್ಯಕ್ರಮದಲ್ಲಿ ವೃದ್ಧ ಮಹಿಳೆಯನ್ನು ಕಾಲಿನಿಂದ ಒದ್ದ ವ್ಯಕ್ತಿ

ರಾಜಸ್ಥಾನದ ಬಾರ್ಮರ್ ಜಿಲ್ಲೆಯಲ್ಲಿ ನಡೆಯುತ್ತಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ವೃದ್ಧ ಮಹಿಳೆಯನ್ನು ಒದೆಯುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ವ್ಯಕ್ತಿಯನ್ನು ಬಂಧಿಸಲಾಗಿದೆ. ಆತನ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶಕ್ಕೆ ವ್ಯಕ್ತವಾಗಿದೆ. ಜತೋನ್ ಕಾ...

ಅಜಿತ್ ಪವಾರ್ ವಿಮಾನ ದುರಂತ: ಅಪಘಾತ ಸ್ಥಳದಲ್ಲಿ ಬ್ಲಾಕ್ ಬಾಕ್ಸ್ ಪತ್ತೆ..!

ನವದೆಹಲಿ: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಮತ್ತು ಇತರ ನಾಲ್ವರು ಸಾವನ್ನಪ್ಪಿದ ಬಾರಾಮತಿ ವಿಮಾನ ನಿಲ್ದಾಣದಲ್ಲಿ ಬುಧವಾರ ಸಂಭವಿಸಿದ ವಿಮಾನ ಅಪಘಾತದ ತನಿಖೆಯ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ (MoCA) ಗುರುವಾರ ಹೇಳಿಕೆ...

ಮೀಸಲಾತಿಗಾಗಿ ಪ್ರಬಲ ಜಾತಿಯ ವ್ಯಕ್ತಿ ಬೌದ್ಧ ಧರ್ಮಕ್ಕೆ ಮತಾಂತರ : ಹೊಸ ಬಗೆಯ ವಂಚನೆ ಎಂದ ಸುಪ್ರೀಂ ಕೋರ್ಟ್

ಇಬ್ಬರು ಪ್ರಬಲ ಜಾತಿ ಅಭ್ಯರ್ಥಿಗಳು ಬೌದ್ಧ ಧರ್ಮಕ್ಕೆ ಮತಾಂತರಗೊಂಡಿರುವ ಬಗ್ಗೆ ಮಂಗಳವಾರ (ಜ.27) ಸುಪ್ರೀಂ ಕೋರ್ಟ್ ಗಂಭೀರ ಅನುಮಾನ ವ್ಯಕ್ತಪಡಿಸಿದ್ದು, ಈ ನಡೆಯು ಸ್ನಾತಕೋತ್ತರ ವೈದ್ಯಕೀಯ ಕೋರ್ಸ್‌ಗಳಿಗೆ ಅಲ್ಪಸಂಖ್ಯಾತ ಕೋಟಾದ ಅಡಿಯಲ್ಲಿ ಪ್ರವೇಶ...

ವಿಮಾನ ಪತನ : ಸಂಸದ ಸೇರಿ 15 ಜನರು ಸಾವು

ಬುಧವಾರ (ಜ.28) ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ ಸಟೇನಾ ನಿರ್ವಹಿಸುತ್ತಿದ್ದ ಸಣ್ಣ ಪ್ರಯಾಣಿಕ ವಿಮಾನವು ಈಶಾನ್ಯ ಕೊಲಂಬಿಯಾದ ಪರ್ವತ ಪ್ರದೇಶದಲ್ಲಿ ಪತನಗೊಂಡು ಎಲ್ಲಾ 15 ಪ್ರಯಾಣಿಕರು ಜನರು ಸಾವಿಗೀಡಾಗಿದ್ದಾರೆ. ದುರಂತದ ಕಾರಣ ಇನ್ನೂ ಸ್ಪಷ್ಟವಾಗಿಲ್ಲ....

‘ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆ..’; ಕೇಂದ್ರದ ಯುಜಿಸಿ ನಿಯಮಗಳನ್ನು ಪ್ರಶಂಸಿದ ಸಿಎಂ ಸ್ಟಾಲಿನ್

ಯುಜಿಸಿ (ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಈಕ್ವಿಟಿ ಪ್ರಚಾರ) ನಿಯಮಗಳು, 2026 "ಆಳವಾಗಿ ಬೇರೂರಿರುವ ತಾರತಮ್ಯ ಮತ್ತು ಸಾಂಸ್ಥಿಕ ನಿರಾಸಕ್ತಿಯಿಂದ ಬಳಲುತ್ತಿರುವ ಉನ್ನತ ಶಿಕ್ಷಣ ವ್ಯವಸ್ಥೆಯನ್ನು ಸುಧಾರಿಸುವಲ್ಲಿ ವಿಳಂಬವಾದರೂ ಸ್ವಾಗತಾರ್ಹ ಹೆಜ್ಜೆಯಾಗಿದೆ" ಎಂದು ತಮಿಳುನಾಡು...

ಹಿರಿಯ ಕಾರ್ಮಿಕ ಮುಖಂಡ ಅನಂತ ಸುಬ್ಬರಾವ್ ನಿಧನ

ಕಳೆದ ನಾಲ್ಕು ದಶಕಗಳಿಂದ ಸಾರಿಗೆ ಕ್ಷೇತ್ರದ ಕಾರ್ಮಿಕರ ಪರವಾಗಿ ಧ್ವನಿ ಎತ್ತುತ್ತಿದ್ದ, ಕಾರ್ಮಿಕರ ಹಿತರಕ್ಷಣೆಗಾಗಿ ನಿರಂತರ ಹೋರಾಟ ನಡೆಸುತ್ತಿದ್ದ ಹಿರಿಯ ಕಾರ್ಮಿಕ ಮುಖಂಡ ಎಚ್‌.ವಿ ಅನಂತ ಸುಬ್ಬರಾವ್ ಅವರು ಜನವರಿ 28ರಂದು, ನಿಧನರಾಗಿದ್ದಾರೆ....

ಮುಡಾ ಪ್ರಕರಣ: ಸಿದ್ದರಾಮಯ್ಯಗೆ ಬಿಗ್ ರಿಲೀಫ್, ಲೋಕಾಯುಕ್ತ ಬಿ ರಿಪೋರ್ಟ್ ಪುರಸ್ಕರಿಸಿದ ಕೋರ್ಟ್

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಪ್ರಕರಣಕ್ಕೆ ಸಂಬಂಧಿಸಿದಂತೆ ಲೋಕಾಯುಕ್ತ ಪೊಲೀಸರು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಪುರಾವೆಗಳಿಲ್ಲ ಎಂದು ಹೇಳಿ ‘ಕ್ಲೀನ್ ಚೀಟ್’ ನೀಡಿ ‘ಬಿ’ ರಿಪೋರ್ಟ್ ಅನ್ನು ಸಲ್ಲಿಸಿತ್ತು....