- Advertisement -
- Advertisement -
ಭಯೋತ್ಪಾದನೆ ವಿರುದ್ಧ ಸಮರಕ್ಕಾಗಿ ಪಾಕಿಸ್ತಾನ ಜತೆಗಿನ ಎಲ್ಲಾ ಸಂಬಂಧ ಕಡಿದುಕೊಳ್ಳುವತ್ತ ಹೆಜ್ಜೆಯಿಟ್ಟಿರುವ ಕೇಂದ್ರ ಸರ್ಕಾರ ಇಬ್ಬಗೆ ನೀತಿ ಅನುಸರಿಸುತ್ತಿದೆ. ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್ ಅವರ ಪುತ್ರ ಪಾಕಿಸ್ತಾನಿ ಮೂಲದ ಉದ್ಯಮ ಪಾಲುದಾರನನ್ನು ಹೊಂದಿದ್ದಾನೆ ಎಂದು ಕಾಂಗ್ರೆಸ್ ಆರೋಪಿಸಿದೆ.

“ಒಂದೆಡೆ ಪಾಕಿಸ್ತಾನದಲ್ಲಿ ಪಟಾಕಿ ಸಿಡಿಸಲಾಗುತ್ತದೆ (ಬಿಜೆಪಿ ಸೋತರೆ) ಎಂದು ಅಮಿತ್ ಶಾ ಹೇಳುತ್ತಾರೆ, ಇನ್ನೊಂದೆಡೆ, ಅಜಿತ್ ದೋವಲ್‌ರ ಪುತ್ರ ಶೌರ್ಯ ದೋವಲ್ ಪಾಕಿಸ್ತಾನಿ ವ್ಯಕ್ತಿ ಸೈಯದ್ ಆಲ್ ಅಬ್ಬಾಸ್ ಜತೆ ಉದ್ಯಮ ಸಹಭಾಗಿತ್ವ ಹೊಂದಿದ್ದಾನೆ. ಆತನ ಇನ್ನೊಬ್ಬ ಉದ್ಯಮ ಪಾಲುದಾರ ಸೌದಿ ಅರೇಬಿಯಾದ ವ್ಯಕ್ತಿ. ಇದಕ್ಕೆ ಅಮಿತ್ ಶಾ ಅವರಿಂದ ಯಾವುದೇ ಆಕ್ಷೇಪವೂ ಇಲ್ಲ ಎಂದು ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೇವಾಲಾ ಕಟಕಿಯಾಡಿದ್ದಾರೆ.
ಮೋದಿ ಹಾಗೂ ಶಾ ಅವರು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಭಾಷೆ ಮತ್ತು ಸಭ್ಯತೆಯ ಬಗ್ಗೆ ಪಾಠ ಮಾಡಬೇಕಾದ ಅಗತ್ಯವಿಲ್ಲ, ಇಡೀ ದೇಶವೇ ಅವರ ನಮ್ರತೆ ಮತ್ತು ಶಿಷ್ಟಾಚಾರವನ್ನು ಮೆಚ್ಚಿಕೊಂಡಿದೆ ಎಂದು ಅವರು ಇದೇ ವೇಳೆ ಹೇಳಿದ್ದಾರೆ.
ಸುರ್ಜೇವಾಲಾ ಬಿಜೆಪಿ ಬಳಿ ಕೇಳಿದ ಪ್ರಶ್ನೆಗಳು:
- 2016ರಲ್ಲಿ ಅಂತಾರಾಷ್ಟ್ರೀಯ ಭಯೋತ್ಪಾದಕ ದಾವೂದ್ ಇಬ್ರಾಹಿಂನ ಪತ್ನಿ ಪಾಕಿಸ್ತಾನದಿಂದ ಮುಂಬೈಗೆ ಪ್ರಯಾಣಿಸಿದ್ದು ಹೇಗೆ ಮತ್ತು ರಾಜ್ಯ ಅಥವಾ ಕೇಂದ್ರ ಸರ್ಕಾರ ಆಕೆಯನ್ನು ಬಂಧಿಸಲಿಲ್ಲ ಯಾಕೆ?
- ದಾವೂದ್ ಇಬ್ರಾಹಿಂ ಜತೆ ಮಾತನಾಡಿದ ಕಾರಣಕ್ಕೆ ಏಕನಾಥ್ ಖಾಡ್ಸೆ ರಾಜ್ಯ ಬಿಜೆಪಿ ಅಧ್ಯಕ್ಷ ಹಾಗೂ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು ಎಂಬುದು ಸುಳ್ಳೇ?
- ಬಿಜೆಪಿ ನಾಯಕರು ಹಾಗೂ ಸಚಿವರೂ ಆದ ಗಿರೀಶ್ ಮಹಾಜನ್ ಮತ್ತು ಶಾಸಕರಾದ ದೇವಯಾನಿ ಫರಂಡೆ, ಸೀಮಾ ಹೀರೆ ಮತ್ತು ಇತರೆ ಬಿಜೆಪಿ ನಾಯಕರು ನಾಸಿಕ್‌ನಲ್ಲಿ ಈ ವರ್ಷ ಮೇ 19ರಂದು ನಡೆದ ದಾವೂದ್‌ನ ಸೊಸೆಯ ಮದುವೆಯಲ್ಲಿ ಹೇಗೆ ಪಾಲ್ಗೊಂಡರು?
- ವ್ಯೂಹಾತ್ಮಕ ವಾಯುಪಡೆಯ ನೆಲೆಯಾದ ಪಠಾಣ್‌ಕೋಟ್‌ಗೆ ಪಾಕಿಸ್ತಾನದ ಐಎಸ್ಐ ಅಧಿಕಾರಿಗಳನ್ನು ಸರ್ಕಾರ ಒಳಬಿಟ್ಟಿದ್ದು ಹೇಗೆ?
- ಉಧಾಮ್‌ಪುರ ಹಾಗೂ ಗುರುದಾಸ್‌ಪುರದಲ್ಲಿ ಪಾಕ್ ಪ್ರೇರಿತ ಭಯೋತ್ಪಾದಕ ದಾಳಿಗಳಾದ ಬಳಿಕವೂ ಆಹ್ವಾನರಹಿತ ಅತಿಥಿಯಾಗಿ ಪಾಕ್ ಪ್ರಧಾನಿ ನವಾಜ್ ಅವರ ಮೊಮ್ಮಗಳ ಮದುವೆಗಾಗಿ ಮೋದಿ ಪಾಕಿಸ್ತಾನಕ್ಕೆ ಪ್ರವಾಸ ಕೈಗೊಂಡಿದ್ದು ಯಾಕೆ?
- ಬಿಜೆಪಿಯ ಐಟಿ ಸೆಲ್‌ನಲ್ಲಿದ್ದ ಧ್ರುವ ಸಕ್ಸೇನಾ ನೇತೃತ್ವದಲ್ಲಿ 11 ಜನರು ಪಾಕಿಸ್ತಾನದ ಐಎಸ್ಐ ಪರವಾಗಿ ಗೂಢಚರ್ಯೆ ನಡೆಸುತ್ತಿರುವಾಗ ಸಿಕ್ಕಿಬಿದ್ದಿದ್ದು ಸುಳ್ಳೇ?
- ಹಿಂದಿನ ಬಿಜೆಪಿ ಸರ್ಕಾರ ಜೈಶ್-ಇ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್, ಕಾಶ್ಮೀರಿ ಉಗ್ರ ಮುಶ್ತಕ್ ಝರ್‌ಗರ್ ಹಾಗೂ ಉಮರ್ ಸೈಯದ್ ಶೇಖ್ ಅವರನ್ನು ಜೈಲಿನಿಂದ ಬಿಡುಗಡೆಗೊಳಿಸಿ ಕಂದಹಾರ್‌ಗೆ ಕರೆದೊಯ್ದದ್ದು ಸುಳ್ಳೇ?
- ಹಿಜಬ್ ಉಗ್ರ ಬುರ್ಹಾನ್ ವಾನಿಯನ್ನು ಆಕಸ್ಮಿಕ ಎನ್‌ಕೌಂಟರ್‌ನಲ್ಲಿ ಕೊಲ್ಲಲಾಯಿತು ಮತ್ತು ಭದ್ರತಾ ಪಡೆಗಳು ಮುನ್ನೆಚ್ಚರಿಕೆ ವಹಿಸಬೇಕಾಗಿತ್ತು ಎಂದು ಜಮ್ಮು ಕಾಶ್ಮೀರದ ಉಪಮುಖ್ಯಮಂತ್ರಿ ನಿರ್ಮಲ್ ಸಿಂಗ್ ಹೇಳಿರಲಿಲ್ಲವೇ?
- ವಾನಿಯ ಕುಟುಂಬಕ್ಕೆ ಉದ್ಯೋಗ ಹಾಗೂ ಪರಿಹಾರವನ್ನು ಜಮ್ಮು ಕಾಶ್ಮೀರದ ಪಿಡಿಪಿ-ಬಿಜೆಪಿ ಸರ್ಕಾರ ನೀಡಿದ್ದು ಸತ್ಯವಲ್ಲವೇ?


