ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ?

ಆಕೆ ಯಾವಾಗಲೂ ಹಾಗೆಯೇ ಅಂತೆ ಎಂದು ಹೇಳಿದ ಸಚಿವ ಮಾಧುಸ್ವಾಮಿಯವರು ಉಲ್ಲೇಖಿಸುತ್ತಿರುವ ನಳಿನಿ ಯಾರು? ಅವರ ಹಿನ್ನೆಲೆಯೇನು? ಯಾವಾಗಲೂ ಅವರು ಹೇಗೆ ಮಾಡುತ್ತಾರೆ, ನಳಿನಿಯವರನ್ನು ಸ್ವತಃ ಬಲ್ಲ ಡಾ.ವಾಸು ಎಚ್‌.ವಿ ಅವರ ಬರಹ

0
ನಳಿನಿ

ನಳಿನಿ
ಕೋಲಾರ ಜಿಲ್ಲೆಯ ಅಗ್ರಹಾರ ಕೆರೆಯ ವೀಕ್ಷಣೆಗೆ ಹೋಗಿದ್ದ ಸಣ್ಣ ನೀರಾವರಿ ಸಚಿವ ಮಾಧುಸ್ವಾಮಿಯರನ್ನು ಪ್ರಶ್ನಿಸಿದ ನಳಿನಿ ಇಂದು ಆಕೆಯನ್ನು ಟಿವಿಯಲ್ಲಿ ನೋಡುತ್ತಿರುವ ಹೆಚ್ಚಿನವರಿಗೆ ಪರಿಚಯವಿರಲಿಕ್ಕಿಲ್ಲ. ಆದರೆ ಕೋಲಾರದಲ್ಲಿ ಮತ್ತು ರಾಜ್ಯದ ವಿವಿಧ ಜಿಲ್ಲೆಗಳ ರೈತಸಂಘದ ಕಾರ್ಯಕರ್ತರಿಗೆ ನಳಿನಿ ಚೆನ್ನಾಗಿ ಗೊತ್ತು. ಏಕೆಂದರೆ ಕಳೆದ ಸುಮಾರು ಏಳೆಂಟು ವರ್ಷಗಳಿಂದ ರೈತಸಂಘ ಮತ್ತು ಇತರ ಪ್ರಗತಿಪರ ಸಂಘಟನೆಗಳ ನೂರಾರು ಕಾರ್ಯಕ್ರಮಗಳು/ಹೋರಾಟಗಳಲ್ಲಿ ಅವರಿದ್ದಾರೆ.

‘ಆಯಮ್ಮ ಹಾಗೇ ಅಂತ, ಯಾರು ಬಂದರೂ ಹೋಗಿ ಪ್ರಶ್ನಿಸುವುದು. ಬೇಕಾದರೆ ಆ ವಿಡಿಯೋ ನೋಡಿ, ಅದರಲ್ಲಿ ಇನ್ಸ್‍ಪೆಕ್ಟರ್‍ರನ್ನು ‘ಏನ್ಸಾರ್ ಯಾವಾಗಲೂ ನೀವು ಹೀಗೇ ಮಾಡ್ತೀರಾ?, ನಮಗೆ ಅವಕಾಶವನ್ನೇ ಕೊಡಲಿಲ್ಲ’ ಎಂದಿದ್ದಾರೆ ಎಂಬ ಅರ್ಥದಲ್ಲಿ ಸಚಿವ ಮಾಧುಸ್ವಾಮಿಯವರು ತಮ್ಮ ‘ಕ್ಷಮಾಪಣಾ ಹೇಳಿಕೆ’ಯಲ್ಲೂ ಆರೋಪ ಮಾಡಿದ್ದಾರೆ. ನಳಿನಿಯವರು ಹೇಳುವ ಪ್ರಕಾರ, ಅವರನ್ನು ಅಲ್ಲಿಂದ ತಳ್ಳಿಕೊಂಡು ಹೋದ ಇನ್ಸ್‍ಪೆಕ್ಟರ್ ಸಹಾ ‘ನೀನು ಯಾವಾಗಲೂ ಹೀಗೆಯೇ ಮಾಡುತ್ತೀಯಾ’ ಎಂದು ಹೇಳಿ, ‘ಈಕೆ ಮೇಲೆ ಒಂದೆರಡು ಕೇಸು ಫಿಟ್ ಮಾಡ್ರಿ’ ಎಂದು ಅಲ್ಲಿದ್ದ ಪೊಲೀಸರಿಗೆ ಹೇಳಿ ಹೋದರಂತೆ.

ಹೌದಾ? ನಳಿನಿ ಹಾಗೆ ಮಾಡುತ್ತಾರಾ? ಮಾಧುಸ್ವಾಮಿಯವರು ಹೇಳಿದಂತೆ ಆಕೆ ಅತಿರೇಕ ಮಾಡುತ್ತಾರಾ? ಸ್ವತಃ ಆ ವಿಡಿಯೋ ನೋಡಿದ ಯಾರೊಬ್ಬರೂ ಅದನ್ನು ನಂಬಲಾರರು. ಆದರೆ ನಳಿನಿಯವರನ್ನು ಸಾಕಷ್ಟು ಕಾಲದಿಂದ ನೋಡಿರುವ ನಮ್ಮಂಥವರ ಅಭಿಪ್ರಾಯವೇನು?

ನಳಿನಿಯವರ ಹಿನ್ನೆಲೆಯೇನು?
ಸ್ವತಃ ರೈತರೂ, ರೈತ ಸಂಘಟನೆಯ ಮುಖಂಡರೂ ಇರುವ ಒಟ್ಟು ಕುಟುಂಬದ ಮಗಳು ನಳಿನಿ. ಕೋಲಾರದಲ್ಲೇ ಬಿಕಾಂ ಮುಗಿಸಿರುವ ಅವರು ವಿದ್ಯಾಭ್ಯಾಸ ಮಾಡುವಾಗಿನಿಂದ ರೈತ ಚಳವಳಿಯಲ್ಲಿ ಸಕ್ರಿಯರಾಗಿದ್ದಾರೆ. ನಳಿನಿ ಮತ್ತು ಅವರ ತಂಗಿ ಉಮಾ ಇಬ್ಬರೂ ರೈತಚಳವಳಿಯ ಕಾರ್ಯಕರ್ತೆಯರು. ಬಹಳಷ್ಟು ರೈತ ನಾಯಕರುಗಳು ತಮ್ಮ ಗಂಡುಮಕ್ಕಳನ್ನೂ ಚಳವಳಿಯಲ್ಲಿ ಸಕ್ರಿಯಗೊಳಿಸಲು ಆಗಿಲ್ಲ. ಹೀಗಿರುವಾಗ ಶ್ರೀನಿವಾಸಗೌಡರ ಕುಟುಂಬ ಈ ಇಬ್ಬರು ಹೆಣ್ಣುಮಕ್ಕಳಿಗೆ ನೀಡಿರುವ ಪ್ರೋತ್ಸಾಹ ಅಭಿನಂದನೀಯ. ಸ್ವತಃ ರೈತ ಸಂಘಟನೆಯ ಒಂದು ಗುಂಪಿನ ಜೊತೆಗೆ ಇದ್ದರೂ, ಆಕೆ ಕೇವಲ ಒಂದು ಬಣಕ್ಕೆ ತನ್ನನ್ನು ಸೀಮಿತಗೊಳಿಸಿಕೊಂಡಿಲ್ಲ. ದೊಡ್ಡ ನಾಯಕರ ಬಗ್ಗೆಯೂ ತನ್ನ ಅನಿಸಿಕೆಗಳನ್ನು ನೇರವಾಗಿ ಹೇಳುತ್ತಾರೆ. ಹಾಗೆ ಹೇಳುವಾಗ, ಸಾಮಾಜಿಕ ಜಾಲತಾಣಗಳಲ್ಲೂ ತನ್ನ ಕಟು ವಿಮರ್ಶೆಯನ್ನು ಮುಂದಿಡುವಾಗಲೂ ಅದನ್ನು ಸಭ್ಯತೆಯನ್ನು ದಾಟಿ ಹೇಳುವುದಿಲ್ಲ.
ಹಲವಾರು ಶಿಬಿರಗಳಲ್ಲಿ, ಹೋರಾಟಗಳಲ್ಲಿ ನಳಿನಿಯವರ ಜೊತೆಗೆ ಭಾಗವಹಿಸಿ ಖುದ್ದಾಗಿ ನೋಡಿರುವ ನಾನು ಅಂತಹ ಹೋರಾಟಗಳಲ್ಲಿ ಸಕ್ರಿಯವಾಗಿರುವ, ಹೆದರಿ ಎಂದೂ ಹಿಂದಕ್ಕೆ ಹೋಗದ, ಮುಂಚೂಣಿ ವ್ಯಕ್ತಿಯಾಗಿ ಮಾತಾಡುವಾಗಲೂ ಬಾಯಿಗೆ ಬಂದ ಹಾಗೆ ಮಾತಾಡದ ವ್ಯಕ್ತಿ ನಳಿನಿ. ಹಾಗೆಂದು ಮಾತನಾಡದೇ ಸುಮ್ಮನಿರುವುದಿಲ್ಲ. ರೈತಸಂಘದ ಕಾರ್ಯಕರ್ತೆಯಾಗಿ ತಾನು ಇರಬೇಕಾದ್ದೇ ಹೀಗೆ ಎಂದು ಆಕೆಯ ಖಚಿತ ನಂಬಿಕೆಯಿದ್ದಂತಿದೆ. ರಾಜಿ ಮಾಡಿಕೊಳ್ಳದಿರುವುದು ಮತ್ತು ಅನ್ಯಾಯವನ್ನು ಪ್ರಶ್ನಿಸಬೇಕಾದ್ದು ಹೋರಾಟಗಾರ್ತಿಯ ಧರ್ಮ ಎಂಬುದರಲ್ಲಿ ನಳಿನಿಗೆ ಸಂದೇಹವೇ ಇಲ್ಲ. ಹಾಗಾಗಿ ಆಕೆಗೆ ಹೆದರಿಕೆ ಇಲ್ಲ.

ನಳಿನಿ

 

ಸಂಘಟನೆಯೊಳಗೂ ಪ್ರಬುದ್ಧತೆ ತೋರುವ ವ್ಯಕ್ತಿ
ಇಷ್ಟಾದ ಮೇಲೂ ಒಂದು ಪ್ರಶ್ನೆಯಿದೆ. ಪ್ರಚಾರಕ್ಕೆ, ತೋರಿಕೆಗೆ ಇದನ್ನು ಮಾಡುತ್ತಾರಾ ಎಂದು. ಏಕೆಂದರೆ ಹಲವು ಹೊಸತಲೆಮಾರಿನ ‘ಹೋರಾಟಗಾರರು’ ಅದನ್ನು ಮಾಡುವುದು ವಾಸ್ತವ. ಹೆಣ್ಣುಮಕ್ಕಳಲ್ಲೂ ಕೆಲವರು ಹಾಗೆ ಮಾಡಿದ್ದು ನೋಡಿದ್ದೇನೆ. ಕೆಲವೊಮ್ಮೆ ಅಪ್ರಬುದ್ಧತೆಯ ಕಾರಣಕ್ಕೂ ಹಾಗೆ ಮಾಡುತ್ತಾರೆ. ಆದರೆ, ಯಾವುದಾದರೂ ಹೋರಾಟದ ಸಂದರ್ಭದಲ್ಲಿ ಅನಗತ್ಯವಾಗಿ ಮುಂದಕ್ಕೆ ಬಂದು ನಿಂತಿದ್ದು ಅಥವಾ ಪ್ರಚಾರದ ಗೀಳಿನಿಂದ ಅನಗತ್ಯ ಮಾತುಗಳನ್ನಾಡಿದ್ದನ್ನು ನಾನಂತೂ ನೋಡಿಲ್ಲ. ವಿಚಾರಗಳನ್ನು ಅನಗತ್ಯವಾಗಿ ಕಾಂಪ್ಲಿಕೇಟೆಡ್ ಮಾಡಿಕೊಳ್ಳದೇ ಮುಂದಕ್ಕೆ ಹೋಗುತ್ತಿರುತ್ತಾರೆ. ಸಂಘಟನೆಯ ಒಳಗೇ ತನಗಾದ ಸಮಸ್ಯೆಗಳನ್ನು ವಿಪರೀತಗೊಳಿಸಿ ಸಂದರ್ಭವಲ್ಲದ ಸಂದರ್ಭದಲ್ಲಿ ವೇದಿಕೆಯಿಂದ ಬೇರೆಯವರು ಮಾತಾಡಿದಾಗ ಅವರ ಜೊತೆಗೆ ಸಾಲಿಡಾರಿಟಿ ತೋರಿಸಿ ನಿಂತಿದ್ದನ್ನು ನೋಡಿದ್ದೇನೆಯೇ ಹೊರತು, ಸ್ವತಃ ತಾನೇ ಅತಿರೇಕ ಮಾಡಿದ್ದನ್ನು ನೋಡಿಲ್ಲ.

ಇದನ್ನೂ ಓದಿ: ಲಾಕ್‌ಡೌನ್‌ ನಂತರದ ಪ್ರಥಮ ಆದ್ಯತೆ ಕೃಷಿ ಮತ್ತು ಆರ್ಥಿಕತೆ- ಡಾ.ಕಮ್ಮರಡಿ

ಹಳ್ಳಿ ಹೆಣ್ಣುಮಗಳಾದ ನಳಿನಿ ನಿಜವಾದ ಅರ್ಥದಲ್ಲಿ ನೇರ, ದಿಟ್ಟ, ನಿರಂತರ, ಆದರೆ ಸರಳ ವ್ಯಕ್ತಿ. ಬಹುಶಃ ಇದನ್ನು ಕೋಲಾರ ಗ್ರಾಮಾಂತರದ ಇನ್ಸ್‍ಪೆಕ್ಟರ್ ಅರ್ಥ ಮಾಡಿಕೊಳ್ಳುವುದು ಕಷ್ಟವೇನೋ. ಹೆಣ್ಣುಮಕ್ಕಳು ಮನೆಯಲ್ಲಿರಬೇಕು, ದೈನ್ಯತೆಯಿಂದ ಕೇಳಿಕೊಳ್ಳಬೇಕು, ಹೋರಾಟಗಳಲ್ಲಿ ಗಂಡಸರನ್ನು ಮುಂದೆ ಬಿಟ್ಟು ಹಿಂದೆ ಗುಂಪಿನಲ್ಲಿ ಸಂಖ್ಯೆಯಾಗಿ ಮಾತ್ರ ಇರಬೇಕು ಎಂಬುದು ‘ಸಹಜ ಫ್ಯೂಡಲ್ ಭಾವನೆ’. ‘ರಿಕ್ವೆಸ್ಟ್ ಮಾಡಿಕೊಳ್ಳಬೇಕಮ್ಮಾ’ ಎಂದು ಹೇಳಿದ ಎಂಎಲ್‍ಸಿ ಮತ್ತು ಬಾಯಿಗೆ ಬಂದ ಹಾಗೆ ವದರಿದ ಮಂತ್ರಿಗಳಿಗೆ ಅಂತಹ ಭಾವನೆ ಇರುವುದು ಎದ್ದು ಕಂಡ ಮೇಲೆ, ಇನ್ನು ಆ ಇನ್ಸ್‍ಪೆಕ್ಟರ್‍ರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳಲಾದೀತೇ?


ಇದನ್ನೂ ಓದಿ: ಕ್ಷಮೆ ಕೇಳುತ್ತಲೇ ಆರೋಪ ಮುಂದುವರೆಸಿದ ಮಾಧುಸ್ವಾಮಿ

ಸಚಿವ ಮಾಧುಸ್ವಾಮಿ ಕ್ಷಮೆಯಾಚನೆ ಮಾಡದಿದ್ದರೂ ಆಗುತ್ತಿತ್ತು. ಆದರೆ ನಳಿನಿಯ ಕುರಿತಾಗಿ ‘ಆಕೆ ಯಾವಾಗಲೂ ಹಾಗೆ ಅಂತೆ’ ಇತ್ಯಾದಿ ಮಾತುಗಳನ್ನು ಹೇಳಿದಾಗ ನಾವು ಮಾತಾಡದಿದ್ದರೆ ತಪ್ಪಾಗುತ್ತದೆ ಎಂಬ ಕಾರಣಕ್ಕೆ ಇಷ್ಟನ್ನು ಬರೆಯಬೇಕಾಯಿತು. ನಳಿನಿ ‘ಯಾವಾಗಲೂ ಹಾಗೆಯೇ ಇರಲಿ’ ಎಂದು ಆಶಿಸುತ್ತೇನೆ. ಇನ್ನಷ್ಟು ಹೊಸ ತಿಳುವಳಿಕೆಯ ಜೊತೆಗೆ ಆಕೆ ರೈತಚಳವಳಿಗೆ ಅಗತ್ಯವಿರುವ ಹೊಸನಾಯಕಿಯಾಗಿ ರೂಪುಗೊಳ್ಳಲಿ.

Donate

ಜನಪರ ಪತ್ರಿಕೋದ್ಯಮದ ಉಳಿವು ಮತ್ತು ಬೆಳವಣಿಗೆಗಾಗಿ ನಿಮ್ಮ ನಿರಂತರ ಆರ್ಥಿಕ ನೆರವು ಅಗತ್ಯ. ನಿಮ್ಮಿಂದ ಸಾಧ್ಯವಿರುವಷ್ಟು ಹೆಚ್ಚಿನ ವಂತಿಗೆಯನ್ನು ನೀಡಲು ಕೆಳಗಿನ ಲಿಂಕುಗಳನ್ನು ಕ್ಲಿಕ್ಕಿಸಿ.
ಒಂದು ವೇಳೆ ಈ ಲಿಂಕಿನ ಮೂಲಕ ಹಣ ಪಾವತಿ ಮಾಡುವುದಕ್ಕೆ ಅಡಚಣೆ ಇದ್ದರೆ, ಈ ಪುಟದ ಮೇಲೆ ಅಥವಾ ಕೆಳಗೆ ಇರುವ ವಂತಿಗೆ – Donate ಬಟನ್.ಅನ್ನು ಕ್ಲಿಕ್ಕಿಸಿ.
ಧನ್ಯವಾದಗಳು
Independent journalism can’t be independent without your support, contribute by clicking below.

LEAVE A REPLY

Please enter your comment!
Please enter your name here