Homeಚಳವಳಿಮಾಧುಸ್ವಾಮಿಗೆ ಕಾನೂನಿನ ಪಾಠ ಹೇಳಿಕೊಡಬೇಕಿದೆ ; ಹೋರಾಟಗಾರ್ತಿಯರ ಆಕ್ರೋಶ

ಮಾಧುಸ್ವಾಮಿಗೆ ಕಾನೂನಿನ ಪಾಠ ಹೇಳಿಕೊಡಬೇಕಿದೆ ; ಹೋರಾಟಗಾರ್ತಿಯರ ಆಕ್ರೋಶ

ಕ್ಷಮೆಯಲ್ಲಿ ಮುಗಿದುಹೋಗಬೇಕಿದ್ದ ಪ್ರಕರಣವನ್ನು ಅವರೇ ದೊಡ್ಡದು ಮಾಡುತ್ತಿದ್ದಾರೆ. ಇದರಿಂದ ನಾನು ಕುಗ್ಗುವುದಿಲ್ಲ. ಪ್ರಾಮಾಣಿಕವಾಗಿ ಹೋರಾಟ ಮುಂದುವರೆಸುತ್ತೇನೆ. ನಮ್ಮ ರೈತಸಂಘದ ಹಿರಿಯರೊಂದಿಗೆ ಸಭೆ ನಡೆಸಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ ಎಂದು ನಳಿನಿ ತಿಳಿಸಿದ್ದಾರೆ.

- Advertisement -
- Advertisement -

ರೈತ ಹೋರಾಟಗಾರ್ತಿಯೊಂದಿಗೆ ಅನುಚಿತವಾಗಿ ವರ್ತಿಸಿ ತೀವ್ರ ಖಂಡನೆಗೆ ಒಳಗಾಗಿದ್ದ ಸಣ್ಣ ನೀರಾವರಿ ಮತ್ತು ಕಾನೂನು ಸಚಿವ ಮಾಧುಸ್ವಾಮಿಯವರು ತನ್ನ ತಪ್ಪಿಗೆ ಕ್ಷಮೆ ಕೇಳುತ್ತಲೇ ನಳಿನಿ ವಿರುದ್ಧ ಮತ್ತಷ್ಟು ಆರೋಪಗಳನ್ನು ಮಾಡಿ ವಿವಾದವನ್ನು ಮುಂದುವರೆಸಿದ್ದಾರೆ.

ಇಂದು ಪತ್ರಕರ್ತರೊಂದಿಗೆ ಮಾತನಾಡಿದ ಅವರು “ಆಯಮ್ಮ ನನ್ನನ್ನ ಟೆಂಪ್ಟ್ ಮಾಡಿದ್ದಾರೆ, ಒಬ್ಬ ಮಂತ್ರಿ ಅವರ ಊರಿಗೆ ಹೋಗಿ ಸುಮ್ಮನೆ ಬೈಸಿಕೊಂಡು ಬರುವುದಕ್ಕಾಗುತ್ತದೆಯೇ? ಆಯಮ್ಮನಿಗೆ ಅದೇನಾಗಿತ್ತೊ ಗೊತ್ತಿಲ್ಲ. ಆಯಮ್ಮ ಬಹುಶಃ ಅದೇ ರೀತಿ ಬೆಳೆದುಕೊಂಡಬಂದಿರಬಹುದು. ಈಯಮ್ಮನ ನೇಚರ್‌ ಅಂತದ್ದು ಎಂದು ಸ್ಥಳೀಯವಾಗಿ ಹೇಳಿದ್ದಾರೆ” ಎಂದು ಆರೋಪಿಸಿದ್ದಾರೆ.

ಈ ಕುರಿತು ನಾನುಗೌರಿ.ಕಾಂ ಮಹಿಳಾ ಮತ್ತು ರೈತ ಹೋರಾಟಗಾರರನ್ನು ಮಾತನಾಡಿಸಿತು. ಅವರ ಪ್ರತಿಕ್ರಿಯೆಗಳು ಈ ಕೆಳಗಿನಂತವೆ.

ಒಬ್ಬ ಮಹಿಳೆಯ ಎದುರು “ನಾನು ಬಹಳ ಕೆಟ್ಟ ಮನುಷ್ಯ” ಎಂದರೆ ಏನರ್ಥ? : ನಂದಿನಿ ಜಯರಾಂ ಪ್ರಶ್ನೆ

“ಮೊದಲನೆಯದಾಗಿ ನಳಿನಿಯಂತಹ ಹೆಣ್ಣು ಮಕ್ಕಳು ಸಾಮಾಜಿಕ ಹೋರಾಟಕ್ಕೆ ಬರುವುದೇ ದೊಡ್ಡದು. ಅದಕ್ಕಾಗಿ ಅವಳನ್ನು ಅಭಿನಂದಿಸಬೇಕು. ಎರಡನೇಯದಾಗಿ ಅವರೂರಿಗೆ ಬಂದಾಗ ಅವರೂರಿನ ಸಮಸ್ಯೆಯನ್ನೇ ಅವಳು ಕೇಳಿದ್ದಾಳೆ. ಈ ಮೊದಲು ಆ ಕೆರೆ ನೀರು ಹಂಚಿಕೆ ಸಂಬಂಧಿಸಿದಂತೆ ಹೋರಾಟ ಮಾಡಿ ಯಶಸ್ಸು ಕಂಡಿದ್ದಾರೆ. ಈಗ ಒತ್ತುವರಿ ಸಮಸ್ಯೆ ಗಮನಕ್ಕೆ ಬಂದಾಗ ಅದನ್ನು ಪ್ರಶ್ನಿಸಿದ್ದಾರೆ. ಆಗ ಮಾಧುಸ್ವಾಮಿಯವರು ಆ ಪ್ರಶ್ನೆಯನ್ನು ಫ್ಯೂಡಲ್‌ ಮನಸ್ಥಿತಿಯಿಂದ ನೋಡಿದ್ದಾರೆ.

ಅಷ್ಟು ಚಿಕ್ಕ ಹುಡುಗಿ ಪ್ರಶ್ನೆ ಮಾಡಿರುವುದು ಮತ್ತು ಹುಡುಗಿಯೊಬ್ಬಳು ಸಾರ್ವಜನಿಕವಾಗಿ ಪ್ರಶ್ನೆ ಮಾಡಿರುವುದನ್ನು ತಡೆದುಕೊಳ್ಳಲು ಮಾಧುಸ್ವಾಮಿಯವರಿಗೆ ಆಗಿಲ್ಲ. ಅದಕ್ಕಾಗಿ ಅವರು ಪದೇ ಪದೇ ಅವಳ ಮಾತಿನ ಧಾಟಿ ಸರಿಯಿಲ್ಲ ಅನ್ನುತ್ತಾರಲ್ಲ, ಅವರು ಸಾರ್ವಜನಿಕವಾಗಿ ಮುಚ್ಚು ಬಾಯಿ ರ್‍ಯಾಸ್ಕಲ್ ಎನ್ನುವ ಧಾಟಿ ಸರಿಯೇ? ಒಬ್ಬ ಹೆಣ್ಣು ಮಗಳಿಗೆ ನಾನು ಕೆಟ್ಟ ಮನುಷ್ಯ ಗೊತ್ತಿಲ್ಲ ನಿನಗೆ ಎಂದರೆ ಅರ್ಥವೇನು? ಇದು ಬಹಿರಂಗ ಬೆದರಿಕೆಯಲ್ಲವೇ?

ನಂದಿನಿ ಜಯರಾಂ

ರೈತಸಂಘ ಮಾಧುಸ್ವಾಮಿಯವರ ನಡೆಯನ್ನು ತೀವ್ರವಾಗಿ ಖಂಡಿಸುತ್ತದೆ. ಕ್ಷಮೆ ಕೇಳಿದರೆಂದು ನಾವು ಸುಮ್ಮನಾಗಿದ್ದೆವು. ಆದರೆ ಅವರು ತಮ್ಮ ಹೇಳಿಕೆಗಳನ್ನು ಬದಲಿಸುತ್ತಿರುವುದನ್ನು ನೋಡಿದರೆ ಕ್ಷಮೆ ಅವರ ಮನಸ್ಸಿನಿಂದ ಬಂದಿಲ್ಲ, ಬದಲಿಗೆ ತಮ್ಮ ಮೇಲಿನ ದಾಳಿಯಿಂದ ತಪ್ಪಿಸಿಕೊಳ್ಳಲಿಕ್ಕಾಗಿ ಕ್ಷಮೆ ಕೇಳಿದ್ದಾರೆಂಬುದು ಅರಿವಿಗೆ ಬರುತ್ತದೆ. ಒಂದು ಕಡೆ ಸಂಸ್ಕೃತಿಯ ಬಗ್ಗೆ ಮಾತನಾಡುವ ಅವರು ಇಲ್ಲಿ ನಾಲಿಗೆ ಹರಿಯಬಿಡುತ್ತಾರೆ. ಇದನ್ನು ನಾವು ತೀವ್ರವಾಗಿ ಖಂಡಿಸುತ್ತೇವೆ.

ನಂದಿನಿ ಜಯರಾಂ, ರೈತ ಮುಖಂಡರು,

ಕರ್ನಾಟಕ ರಾಜ್ಯ ರೈತ ಸಂಘ, ಕೆ.ಆರ್‌ ಪೇಟೆ.

ತಾನೊಬ್ಬ ಕೆಟ್ಟ ಮನುಷ್ಯ ಎಂಬುದನ್ನು ತೋರಿಸಿದ್ದಾರೆ. – ಗೀತಾ.ವಿ

ರಾಜ್ಯದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರು ನಮ್ಮ ಕೋಲಾರದಲ್ಲಿ ಮಹಿಳಾ ರೈತ ಮುಖಂಡರುಗಳಿಗೆ ಬಾಯಿ ಮಚ್ಚು ರ್‍ಯಾಸ್ಕಲ್‌ ಎಂದು‌ ಕೆಟ್ಟ ಭಾಷೆಯಲ್ಲಿ ಬೈದು ತಾನೊಬ್ಬ ಕೆಟ್ಟ ಮನುಷ್ಯ ಎಂದು ಬೆರಳು ತೋರಿಸಿ ಹೇಳುತ್ತಿರುವುದು ಇದೊಂದು ಖಂಡನೀಯ ವರ್ತನೆ. ಯಾವ ವ್ಯಕ್ತಿಯೂ ಈ ರೀತಿ ನಡೆದುಕೊಳ್ಳಬಾರದು. ಅದರಲ್ಲಿಯೂ ಜನಪ್ರತಿನಿಧಿಗಳು ಶಾಸಕರು, ಸಚಿವರು‌ ಅದರಲ್ಲಿಯೂ ಕಾನೂನು ಸಚಿವರಾಗಿ ಕನಿಷ್ಟ ಸಾಮಾನ್ಯ ಪ್ರಜ್ಞೆಯಿಲ್ಲದೇ ನಾಲಿಗೆ ಹರಿಬಿಟ್ಟಿದ್ದು ಅಕ್ಷಮ್ಯ. ಸಾಲದ್ದಕ್ಕೆ ಸ್ಥಳದಲ್ಲಿ ಇದ್ದ ಪುರುಷ ಪೋಲೀಸ್ ಆಕೆಯನ್ನು ತಳ್ಳಿಕೊಂಡು ಹೋಗುತ್ತಿರುವುದೂ ಕಾಣುತ್ತಿದೆ. ಇದೂ ಆಕ್ಷೇಪಾರ್ಹ ಸಂಗತಿಯೇ.

ಗೀತಾ.ವಿ

ಕನಿಷ್ಟ ಸಾಮಾನ್ಯ ಜ್ಞಾನವಿಲ್ಲದವರು ಸಚಿವರಾಗಿರುವುದು ತರವಲ್ಲ. ಅದರಲ್ಲಿಯೂ ಕಾನೂನು ಸಚಿವರಾಗಿರುವುದಂತೂ ಸುತರಾಂ ಸರಿಯಲ್ಲ. ಇವರ‌ ಮನೋಧರ್ಮ ಮನುಧರ್ಮದ ಭಾಗವೇ ಆಗಿದೆ. ಮಹಿಳೆಯರ ಬಗ್ಗೆ ಕೂಡ ಕನಿಷ್ಟ ಗೌರವವಿಲ್ಲದ ಇವರು ಕಾನೂನು ಸಚಿವರಾಗಿ‌ ಮುಂದುವರೆಯಲು ಅರ್ಹರಲ್ಲವೆಂದೇ ಬಾವಿಸಬೇಕು. ನಾವು ಇದನ್ನು ಖಂಡಿಸುತ್ತೇವೆ.

ಗೀತಾ.ವಿ, ಉಪಾಧ್ಯಕ್ಷರು
ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ರಾಜ್ಯ ಸಮಿತಿ.

ಪ್ರಶ್ನೆ ಮತ್ತು ನ್ಯಾಯ ಈ ಎರಡು ಪದಗಳಿಂದ ಬಿಜೆಪಿಯವರು ಬಹಳ ದೂರ. – ಗೌರಿ

ಮಂತ್ರಿಗಳಿಗೆ ಮೊದಲು ಸಂವಿಧಾನದ ಬಗ್ಗೆ, ಕಾನೂನಿನ ತರಬೇತಿ ಕೊಡುವುದನ್ನು ಕಡ್ಡಾಯ ಮಾಡಬೇಕು. ಸಾಮಾನ್ಯ ಜ್ಞಾನ ಇಲ್ಲದ ಇಂತಹವರು ಮಂತ್ರಿಗಳಾದರೆ ಏನಾಗುತ್ತದೆ ಎಂಬುದಕ್ಕೆ ಈ ಘಟನೆ ಸಾಕ್ಷಿಯಾಗಿದೆ. ಮಹಿಳಾ ಹೋರಾಟಗಾರ್ತಿ ನಳಿನಿ ಏನೂ ತಪ್ಪಾಗಿ ಮಾತನಾಡಿಲ್ಲ. ಸಮಾಧಾನವಾಗಿಯೇ ಸಮಸ್ಯೆಯನ್ನು ಹೇಳುತ್ತಿದ್ದಾಳೆ. ಅದನ್ನು ಮಂತ್ರಿಗೆ ಕೇಳಿಸಿಕೊಳ್ಳಲು ಸಾಧ್ಯವಿಲ್ಲವೆಂದಾದರೆ ಅದು ಯಾರ ತಪ್ಪು?

ಗೌರಿ

ಪ್ರಶ್ನೆ ಮತ್ತು ನ್ಯಾಯ ಈ ಎರಡು ಪದಗಳಿಂದ ಬಿಜೆಪಿಯವರು ಬಹಳ ದೂರ. ಹಾಗಾಗಿ ಯಾರಾದರೂ ಪ್ರಶ್ನಿಸಿದರೆ ಕೆಂಡಾಮಂಡಲವಾಗುತ್ತಾರೆ. ಇದರಿಂದ ಆ ಮಂತ್ರಿಯ ಮನೆಯ ಹೆಣ್ಣು ಮಕ್ಕಳ ಸ್ಥಾನ ಏನು ಎಂಬುದು ತಿಳಿಯುತ್ತದೆ. ಜನರ ಸಮಸ್ಯೆಗಳನ್ನು ಇವರ ಗಮನಕ್ಕೆ ತರದೆ ಇನ್ಯಾರ ಹತ್ತಿರ ಹೇಳಬೇಕು. ಆ ಮಹಿಳೆ ಹಾಗೆ ಅಂತ ಅವಳ ನಡತೆಯನ್ನು ತೇಜೋವಧೆ ಮಾಡುವ ಮಾಧುಸ್ವಾಮಿಯವರು ಮಂತ್ರಿಯ ಸ್ಥಾನದಲ್ಲಿ ಉಳಿಯಲೂ ಅನರ್ಹರು. ಒಂದು ಕಡೆ ಮಹಿಳೆಯರನ್ನು ದೇವಿಗೆ ಹೋಲಿಸುವುದು ಮತ್ತೊಂದು ಕಡೆ ಅವಕಾಶ ಸಿಕ್ಕಾಗೆಲ್ಲಾ ಅವರನ್ನ ಕೀಳು ಮಟ್ಟದಲ್ಲಿ ನಡಸಿಕೂಳ್ಳುವುದೇ ಇವರ ಸಂಸ್ಕೃತಿ.  ಮೊದಲು ಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಲಿ. ಮಹಿಳೆಯರ ವಿಷಯದಲ್ಲಿ ಹೇಗೆ ನಡೆದುಕೊಳ್ಳಬೇಕೆಂದು ಉಳಿದ ಜನಪ್ರತಿನಿಧಿಗಳಿಗೂ ಇದು ಪಾಠವಾಗಲಿ.

ಗೌರಿ, ರಾಜ್ಯಸಮಿತಿ ಸದಸ್ಯರು

ಕರ್ನಾಟಕ ಜನಶಕ್ತಿ.

ಹೋರಾಟ ಮುಂದುವರೆಸುತ್ತೇನೆ – ನಳಿನಿ

ರೈತಸಂಘದವರು ಅಂತ ಗೊತ್ತಿರಲಿಲ್ಲ ಎಂದು ಹೇಳಿ ಇಂದು ಬೆಳಿಗ್ಗೆ ಮಾಧುಸ್ವಾಮಿಯವರು ಕ್ಷಮೆ ಕೇಳಿದ್ದರು. ಆದರೆ ಮತ್ತೆ ಮಧ್ಯಾಹ್ನ ಪತ್ರಿಕಾಗೋಷ್ಠಿಯಲ್ಲಿ ನನ್ನ ವಿರುದ್ಧವೇ ಆರೋಪ ಮಾಡಿದ್ದಾರೆ. ನಾನು ಜೋರುದನಿಯಲ್ಲಿ ಮಾತನಾಡಿದ್ದೇನೆ ಎಂದು ಅವರು ಆರೋಪಿಸಿದ್ದಾರೆ. ನಾನು ನನ್ನ ಹಕ್ಕನ್ನು ಕೇಳಿದ್ದೇನೆಯೇ ಹೊರತು ಮತ್ತೇನಲ್ಲ ಎಂಬುದನ್ನು ಅವರು ಮರೆಯಬಾರದು. ಅವರು ಪೊಲೀಸರ ಮಾತುಗಳನ್ನು ಕೇಳುವುದನ್ನು ಬಿಟ್ಟು ಜಿಲ್ಲಾಡಳಿತದಲ್ಲಿ ನನ್ನ ಬಗ್ಗೆ ಕೇಳಲಿ.

ನಳಿನಿ
ನಳಿನಿ

ಒಮ್ಮೆ ತಪ್ಪು ಮಾಡಿದ ಅವರು ಇಂದು ನನ್ನ ಮೇಲೆ ಕೆಟ್ಟದಾಗಿ ಮಾತನಾಡಿ ಮತ್ತೆ ಮತ್ತೆ ತಪ್ಪು ಮಾಡುತ್ತಿದ್ದಾರೆ.  ಕ್ಷಮೆಯಲ್ಲಿ ಮುಗಿದುಹೋಗಬೇಕಿದ್ದ ಪ್ರಕರಣವನ್ನು ಅವರೇ ದೊಡ್ಡದು ಮಾಡುತ್ತಿದ್ದಾರೆ. ಇದರಿಂದ ನಾನು ಕುಗ್ಗುವುದಿಲ್ಲ. ಪ್ರಾಮಾಣಿಕವಾಗಿ ಹೋರಾಟ ಮುಂದುವರೆಸುತ್ತೇನೆ. ನಮ್ಮ ರೈತಸಂಘದ ಹಿರಿಯರೊಂದಿಗೆ ಸಭೆ ನಡೆಸಿ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುತ್ತೇನೆ.

ನಳಿನಿ, ಜಿಲ್ಲಾಧ್ಯಕ್ಷೆ

ಕರ್ನಾಟಕ ರಾಜ್ಯ ರೈತ ಸಂಘ, ಕೋಲಾರ.


ಇದನ್ನೂ ಓದಿ: ಮಾಧುಸ್ವಾಮಿಯವರನ್ನು ಪ್ರಶ್ನಿಸಿದ ನಳಿನಿ ಯಾರು? ಅವರು ಯಾವಾಗಲೂ ಹಾಗೇನಾ? 

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಜೆಪಿಯ ಅಧಿಕೃತ ‘ಎಕ್ಸ್’ ಖಾತೆ ವಿರುದ್ಧ ಎಫ್‌ಐಆರ್‌ ದಾಖಲಿಸಿದ ಚುನಾವಣಾ ಆಯೋಗ

0
ವಿವಿಧ ಗುಂಪುಗಳು ಮತ್ತು ವರ್ಗಗಳ ನಡುವೆ ದ್ವೇಷ ಹರಡಲು ಮತ್ತು ಉತ್ತೇಜಿಸಲು ಯತ್ನಿಸುತ್ತಿರುವ ಆರೋಪದ ಮೇಲೆ ಬಿಜೆಪಿಯ ಅಧಿಕೃತ ಎಕ್ಸ್ ಖಾತೆ ವಿರುದ್ಧ ಚುನಾವಣಾ ಆಯೋಗ ಎಫ್‌ಐಆರ್‌ನ್ನು ದಾಖಲಿಸಿದೆ. ಈ ಕುರಿತು ಚುನಾವಣಾ ಆಯೋಗ...