ಮೇ 10 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸಾರ್ವಜನಿಕರಲ್ಲಿ ಮಿತವ್ಯಯದ ಅಪೀಲು ಮಾಡಿದ್ದು, ಇಂಧನ ಬಳಕೆಯನ್ನು ಕನಿಷ್ಠ ಮಟ್ಟಕ್ಕೆ ಇಳಿಸುವಂತೆ ಕೋರಿದ್ದರು. ಜನರು ಖಾಸಗಿ ವಾಹನಗಳ ಬಳಕೆಯನ್ನು ಬಿಟ್ಟು ಸಾರ್ವಜನಿಕ ಸಾರಿಗೆಯನ್ನು ಬಳಸಬೇಕೆಂದು ಕೇಳಿಕೊಂಡಿದ್ದರು.ಇಂಧನ ಆಮದನ್ನು ತಗ್ಗಿಸುವ ನಿಟ್ಟಿನಲ್ಲಿ, ಅಡುಗೆ ಎಣ್ಣೆಯ ಬಳಕೆಯನ್ನು ಕಡಿಮೆ ಮಾಡುವಂತೆಯೂ ಅವರು ಜನರಲ್ಲಿ ಮನವಿ ಮಾಡಿದ್ದರು.
ಆದರೆ, ಯುದ್ಧ ಪ್ರಾರಂಭವಾದಾಗಿನಿಂದ ಪ್ರಧಾನಿಯವರ ಪ್ರವಾಸದ ವಿವರಗಳನ್ನು ವಿಶ್ಲೇಷಿಸಿದರೆ, ಮಾರ್ಚ್ 1 ರಿಂದ ಮೇ 12ರ (ಮೋದಿ ಮಿತವ್ಯಯಕ್ಕೆ ಕರೆ ನೀಡಿದ ದಿನ) ನಡುವಿನ 70 ದಿನಗಳ ಅವಧಿಯಲ್ಲಿ, ಅವರು ದೆಹಲಿಯಿಂದ ಹೊರಗೆ 81 ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ಈ ಅವಧಿಯಲ್ಲಿ 12 ವಿವಿಧ ರಾಜ್ಯಗಳ ಒಟ್ಟು 53 ನಗರ ಮತ್ತು ಪಟ್ಟಣಗಳಿಗೆ ಅವರು ಭೇಟಿ ನೀಡಿದ್ದಾರೆ.
ಅವರ ಈ ಪ್ರವಾಸಗಳ ಪೈಕಿ ಕೇವಲ 13 ಅಂದರೆ ಶೇ. 16 ರಷ್ಟು ಮಾತ್ರ ಅಧಿಕೃತ ಕಾರ್ಯಕ್ರಮಗಳಾಗಿದ್ದವು. ಅಲ್ಲಿ ಮೋದಿ ಅವರು ನೋಯ್ಡಾದ ಜೇವರ್ ವಿಮಾನ ನಿಲ್ದಾಣದಂತಹ ಯೋಜನೆಗಳನ್ನು ಉದ್ಘಾಟಿಸಿದ್ದರು ಅಥವಾ ಅಭಿವೃದ್ಧಿ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು.
ಅವರ ಪ್ರವಾಸದ ಬಹುಪಾಲು ಭಾಗವು ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಪರ ಪ್ರಚಾರ ಕಾರ್ಯಕ್ಕೆ ಸಂಬಂಧಿಸಿದ್ದಾಗಿತ್ತು.
ಪ್ರಧಾನಿಯವರ ಈ ಮನವಿ ಮತ್ತು ಅವರದೇ ಸ್ವಂತ ಪ್ರವಾಸಗಳು, ಜಾಗತಿಕವಾಗಿ ಇತರ ದೇಶಗಳು ಅನುಸರಿಸುತ್ತಿರುವ ನಿಲುವುಗಳಿಗೆ ತದ್ವಿರುದ್ಧವಾಗಿವೆ. ಮಾರ್ಚ್ ಕೊನೆಯಲ್ಲಿ ಫಿಲಿಪೈನ್ಸ್ ರಾಷ್ಟ್ರೀಯ ಇಂಧನ ತುರ್ತುಸ್ಥಿತಿಯನ್ನು ಘೋಷಿಸಿತು. ಅದೇ ಸಮಯದಲ್ಲಿ ದಕ್ಷಿಣ ಕೊರಿಯಾ ಇಂಧನ ಉಳಿತಾಯ ಅಭಿಯಾನವನ್ನು ಪ್ರಾರಂಭಿಸಿ, ಜನರು ತಮ್ಮ ದೈನಂದಿನ ಜೀವನದಲ್ಲಿ ವಿದ್ಯುತ್ ಉಳಿಸುವಂತೆ ಒತ್ತಾಯಿಸಿತು. ಏಪ್ರಿಲ್ 6 ರಂದು ಥಾಯ್ಲೆಂಡ್ ಪ್ರಧಾನಿ ಅನುತಿನ್ ಚಾರ್ನ್ವಿರಾಕುಲ್ ಅವರು ಇಂಧನ ಸಂರಕ್ಷಣೆಗಾಗಿ ಕಾರ್‌ಪೂಲಿಂಗ್ (ವಾಹನ ಹಂಚಿಕೆ) ಮಾಡಲು ಮತ್ತು ಮನೆಯಿಂದಲೇ ಕೆಲಸ (ವರ್ಕ್ ಫ್ರಮ್ ಹೋಮ್) ಮಾಡಲು ಥಾಯ್ ನಾಗರಿಕರಲ್ಲಿ ಮನವಿ ಮಾಡಿದ್ದರು.
ಆದರೆ ಭಾರತದಲ್ಲಿ, ನಾಗರಿಕರು ಅಡುಗೆ ಅನಿಲ ವಿತರಣೆ ವಿಳಂಬ ಮತ್ತು ಇಂಧನ ಬಂಕ್‌ಗಳಲ್ಲಿನ ಕೊರತೆಯ ಬಗ್ಗೆ ದೂರುತ್ತಿದ್ದರೂ, ದೇಶದಲ್ಲಿ ಸಾಕಷ್ಟು ಇಂಧನ ದಾಸ್ತಾನು ಇದೆ ಎಂದು ಸರ್ಕಾರ ಪ್ರತಿಪಾದಿಸುತ್ತಲೇ ಇತ್ತು.
ಆದಾಗ್ಯೂ, ಮೇ 4 ರಂದು 5 ರಾಜ್ಯಗಳ ಚುನಾವಣಾ ಫಲಿತಾಂಶಗಳು ಪ್ರಕಟವಾದ ಐದು ದಿನಗಳ ನಂತರ, ಮೋದಿ ನಾಗರಿಕರಿಗೆ ಇಂಧನ ಉಳಿಸಲು ಕರೆ ನೀಡಿದರು. ಅವರು ಮನವಿ ಮಾಡಿದ ಕೆಲವೇ ದಿನಗಳಲ್ಲಿ, ಪೆಟ್ರೋಲಿಯಂ ಕಂಪನಿಗಳು ಕೇವಲ 10 ದಿನಗಳ ಅಂತರದಲ್ಲಿ ನಾಲ್ಕು ಬಾರಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಮಾಡಿದ್ದವು.
ಪ್ರಧಾನಿ ಪ್ರವಾಸದ ಒಂದು ನೋಟ
ಯುದ್ಧ ಪ್ರಾರಂಭವಾದ ತಕ್ಷಣದ ಅವಧಿಯಲ್ಲಿ ಪ್ರಧಾನಿಯವರ ಸಾರ್ವಜನಿಕ ಹಾಜರಾತಿಯನ್ನು ‘ದಿ ವೈರ್’ ಅವರ ಎಕ್ಸ್ (X) ಫೀಡ್, ಯೂಟ್ಯೂಬ್ ಖಾತೆ ಮತ್ತು ಪತ್ರಿಕಾ ಮಾಹಿತಿ ಬ್ಯೂರೋ (ಪಿಐಬಿ) ಪ್ರಕಟಣೆಗಳ ಮೂಲಕ ಪರಿಶೀಲಿಸಿದೆ. ಮೋದಿ ಅವರು ಭಾಗವಹಿಸಿದ ಪ್ರತಿಯೊಂದು ಕಾರ್ಯಕ್ರಮವನ್ನೂ ಪ್ರತ್ಯೇಕವಾಗಿ ವಿಶ್ಲೇಷಿಸಿದೆ. ಅವು ಒಂದೇ ನಗರದಲ್ಲಿದ್ದರೂ ಬೇರೆ ಬೇರೆಯಾಗಿಯೇ ಲೆಕ್ಕ ಹಾಕಲಾಗಿದೆ. ಏಕೆಂದರೆ ಪ್ರತಿ ಕಾರ್ಯಕ್ರಮಕ್ಕೂ ವಿಭಿನ್ನ ಲಾಜಿಸ್ಟಿಕಲ್ ಸವಾಲುಗಳಿರುತ್ತವೆ ಉದಾಹರಣೆಗೆ, ಒಂದೇ ನಗರದಲ್ಲಿ ಒಂದೇ ದಿನ ನಡೆದರೂ ರೋಡ್‌ಶೋ ಮತ್ತು ಸಾರ್ವಜನಿಕ ಸಭೆಗೆ ಬೇಕಾಗುವ ಸಂಪನ್ಮೂಲಗಳು ಭಿನ್ನವಾಗಿರುತ್ತವೆ. ಅವರು ದೆಹಲಿಯಿಂದ ದೂರದಲ್ಲಿದ್ದುಕೊಂಡೇ ವರ್ಚುವಲ್ ಆಗಿ ಭಾಗವಹಿಸಿದ ಕಾರ್ಯಕ್ರಮಗಳನ್ನು ನಾವು ಇದರಲ್ಲಿ ಸೇರಿಸಿಲ್ಲ, ಕೇವಲ ದೆಹಲಿಯಿಂದ ಹೊರಗೆ ಅವರು ಖುದ್ದಾಗಿ ಪ್ರಯಾಣಿಸಿದ ಕಾರ್ಯಕ್ರಮಗಳ ಮೇಲಷ್ಟೇ ಗಮನ ಕೇಂದ್ರೀಕರಿಸಿದ್ದೇವೆ ‘ದಿ ವೈರ್’ ವರದಿ ಮಾಡಿದೆ.
ಈ ಮಾನದಂಡವನ್ನು ಬಳಸಿದಾಗ, ಮಾರ್ಚ್ 1 ರಿಂದ ಮೇ 12 ರವರೆಗೆ ಪ್ರಧಾನಿಯವರು ದೇಶಾದ್ಯಂತ ಸರಣಿ ಪ್ರಯಾಣ ಕೈಗೊಂಡಿದ್ದು, 11 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯ 53 ನಗರ ಹಾಗೂ ಪಟ್ಟಣಗಳಿಗೆ ಭೇಟಿ ನೀಡಿರುವುದು ಕಂಡುಬಂದಿದೆ. ಒಟ್ಟಾರೆಯಾಗಿ, ಮೋದಿ ದೆಹಲಿಯಿಂದ ಹೊರಗೆ 81 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಈ ಅವಧಿಯಲ್ಲಿ ಮೋದಿ ಒಟ್ಟು 37 ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದ್ದಾರೆ, 25 ರೋಡ್‌ಶೋಗಳನ್ನು ನಡೆಸಿದ್ದಾರೆ ಮತ್ತು ಮುಂಬರುವ ಯೋಜನೆಗಳಿಗೆ ಶಂಕುಸ್ಥಾಪನೆ ಅಥವಾ ಪೂರ್ಣಗೊಂಡ ಯೋಜನೆಗಳ ಉದ್ಘಾಟನೆಯ 13 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವುಗಳನ್ನು ಹೊರತುಪಡಿಸಿ, ಅಸ್ಸಾಂನಲ್ಲಿ ಚಹಾ ತೋಟದ ಕಾರ್ಮಿಕರನ್ನು ಭೇಟಿ ಮಾಡುವುದು, ಗುಜರಾತ್‌ನ ಸೋಮನಾಥ ದೇವಾಲಯಕ್ಕೆ ಭೇಟಿ ನೀಡುವುದು, ‘ದಿ ಆರ್ಟ್ ಆಫ್ ಲಿವಿಂಗ್’ ಸಂಸ್ಥೆಯ 45 ನೇ ವಾರ್ಷಿಕೋತ್ಸವದ ಆಚರಣೆಯಲ್ಲಿ ಭಾಗವಹಿಸಲು ಬೆಂಗಳೂರಿಗೆ ಪ್ರಯಾಣಿಸುವುದು ಮುಂತಾದ ಇತರ ಕಾರ್ಯಕ್ರಮಗಳನ್ನೂ ಮೋದಿ ನಡೆಸಿದ್ದಾರೆ.
ಇದರಲ್ಲಿನ ಬಹುಪಾಲು ಕಾರ್ಯಕ್ರಮಗಳು – ಅಂದರೆ ಒಟ್ಟು 81 ರಲ್ಲಿ 53 (ಶೇ. 65 ರಷ್ಟು) – ವಿಧಾನಸಭೆ ಚುನಾವಣೆ ನಡೆದ ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಕೇಂದ್ರಾಡಳಿತ ಪ್ರದೇಶವಾದ ಪುದುಚೇರಿಯಲ್ಲಿ ನಡೆದಿವೆ. ಇವುಗಳಲ್ಲಿ 26 ಕಾರ್ಯಕ್ರಮಗಳು ಪಶ್ಚಿಮ ಬಂಗಾಳದಲ್ಲಿ, 11 ಅಸ್ಸಾಂನಲ್ಲಿ, 8 ಕೇರಳದಲ್ಲಿ, 6 ತಮಿಳುನಾಡಿನಲ್ಲಿ ಮತ್ತು 2 ಪುದುಚೇರಿಯಲ್ಲಿ ನಡೆದಿವೆ.
ಈ ನಾಲ್ಕು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶದಲ್ಲಿ ಮೋದಿ ಅವರು 3 ಉದ್ಘಾಟನೆಗಳು, 31 ಸಾರ್ವಜನಿಕ ಸಭೆಗಳು ಮತ್ತು 15 ರೋಡ್‌ಶೋಗಳು ಸೇರಿದಂತೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ನಡೆಸಿದ್ದಾರೆ. ತಮ್ಮ ಪ್ರಯಾಣದ ಸಂದರ್ಭದಲ್ಲಿ, ಮೋದಿ ಅವರ ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ಈ ಕಾರ್ಯಕ್ರಮಗಳ ಭವ್ಯತೆಯ ಬಗ್ಗೆ ಆಗಾಗ್ಗೆ ಹೆಮ್ಮೆಯಿಂದ ಹೇಳಿಕೊಂಡಿದ್ದವು.
ಏಪ್ರಿಲ್ 11 ರಂದು ಸಿಲಿಗುರಿ ಪಟ್ಟಣದಲ್ಲಿ ಮೋದಿ 15 ಕಿಲೋಮೀಟರ್ ಉದ್ದದ ರೋಡ್‌ಶೋ ನಡೆಸಿದ್ದರು, ಇದನ್ನು ಮೋದಿ ತಮ್ಮ ಎಕ್ಸ್ ಪೋಸ್ಟ್‌ನಲ್ಲಿ “ಅತ್ಯಂತ ಸ್ಮರಣೀಯ” ಎಂದು ಕರೆದಿದ್ದಾರೆ. ಮೋದಿ ತಮ್ಮ ಯೂಟ್ಯೂಬ್ ಖಾತೆಯಲ್ಲಿ ಪೋಸ್ಟ್ ಮಾಡಿದ ದೃಶ್ಯಗಳಲ್ಲಿ, ಅವರು ತಮ್ಮ ಕಾರಿನಿಂದ ಜನರಿಗೆ ಕೈ ಬೀಸುತ್ತಿರುವಾಗ ಅವರ ಕಾರಿನ ಹಿಂದೆ ವಾಹನಗಳ ಸುದೀರ್ಘ ಸಾಲು ಸಾಗುತ್ತಿರುವುದನ್ನು ಕಾಣಬಹುದು.
ಏಪ್ರಿಲ್ 19 ರಂದು ಮೋದಿ ಪಶ್ಚಿಮ ಬಂಗಾಳದ ಝಾಗ್ರಾಮ್‌ಗೆ ಭೇಟಿ ನೀಡಿದ್ದರು ಮತ್ತು ಜನರ “ಉತ್ಸಾಹ” ನೋಡಿ ತಾವು “ತಕ್ಷಣದ (ಇಂಪ್ರಾಂಪ್ಟು) ರೋಡ್‌ಶೋ” ನಡೆಸಿದ್ದಾಗಿ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದರು. ಆ ಪೋಸ್ಟ್ ಜೊತೆಗಿದ್ದ ವೀಡಿಯೊದಲ್ಲಿ ಮೋದಿಯವರ ಕಾರಿನ ಹಿಂದೆ ಕನಿಷ್ಠ 11 ವಾಹನಗಳು ಸಾಗುತ್ತಿರುವುದು ಕಾಣಿಸುತ್ತದೆ.
ರೋಡ್‌ಶೋ ನಂತರ ಅವರು ಉದ್ದೇಶಿಸಿ ಮಾತನಾಡಿದ ರ‍್ಯಾಲಿಯಲ್ಲಿ, ಹೆಲಿಪ್ಯಾಡ್‌ನಿಂದ ರ‍್ಯಾಲಿ ನಡೆಯುವ ಸ್ಥಳದವರೆಗಿನ 2-3 ಕಿಲೋಮೀಟರ್ ಮಾರ್ಗದಲ್ಲಿ ಜನರು ಹೇಗೆ ಸಾಲುಗಟ್ಟಿ ನಿಂತಿದ್ದರು ಎಂಬುದನ್ನು ಅವರು ವಿವರಿಸಿದರು. ತಮ್ಮ ಭಾಷಣದ ಆರಂಭದಲ್ಲಿ, “ಅದು ಎಷ್ಟು ಅದ್ಭುತವಾದ ರೋಡ್‌ಶೋ ಆಗಿತ್ತೆಂದರೆ, ನಾನು ಕಾರಿನ ಫುಟ್‌ಬೋರ್ಡ್ ಮೇಲೆ ನಿಲ್ಲಬೇಕಾಯಿತು,” ಎಂದು ಅವರು ಹೇಳಿದರು.
ಅದೇ ರೀತಿ, ಏಪ್ರಿಲ್ 26 ರಂದು ಮೋದಿಯವರ ಯೂಟ್ಯೂಬ್ ಚಾನೆಲ್ ಕೋಲ್ಕತ್ತಾ ರೋಡ್‌ಶೋನ ವೀಡಿಯೊವನ್ನು ಅಪ್‌ಲೋಡ್ ಮಾಡಿ, ಅದನ್ನು “ಮೆಗಾ” (MEGA) ರೋಡ್‌ಶೋ ಎಂದು ಕರೆದಿದೆ. ಈ ರೋಡ್‌ಶೋನ ವೀಡಿಯೊ ಬರೋಬ್ಬರಿ 84 ನಿಮಿಷಗಳಷ್ಟು ದೀರ್ಘವಾಗಿತ್ತು.
ಚುನಾವಣೆ ನಡೆಯುವ ರಾಜ್ಯಗಳ ನಂತರ, ಮೋದಿ ಅವರು ತಮ್ಮ ತವರು ರಾಜ್ಯವಾದ ಗುಜರಾತ್‌ನಲ್ಲಿ ಹೆಚ್ಚಿನ ಸಮಯ ಕಳೆದಿದ್ದಾರೆ ಎಂದು ತಿಳಿದುಬಂದಿದೆ. ಅಲ್ಲಿ ಅವರು 70 ದಿನಗಳ ಅವಧಿಯಲ್ಲಿ 10 ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದು, ಅವುಗಳಲ್ಲಿ ನಾಲ್ಕು ರೋಡ್‌ಶೋಗಳಾಗಿದ್ದವು.
ವಾಸ್ತವವಾಗಿ, ಪ್ರಧಾನಿಯವರು ನಾಗರಿಕರಿಗೆ ಇಂಧನ ಉಳಿಸುವಂತೆ ಕರೆ ನೀಡಿದ ದಿನದಂದೇ ಅವರು ಎರಡು ರೋಡ್‌ಶೋಗಳನ್ನು ನಡೆಸಿದ್ದರು – ಒಂದು ಸಿಕಂದರಾಬಾದ್‌ನಲ್ಲಿ ಮತ್ತು ಇನ್ನೊಂದು ತಡರಾತ್ರಿ ಜಾಮ್‌ನಗರದಲ್ಲಿ. ಮರುದಿನ ಬೆಳಿಗ್ಗೆ, ಅವರು ಗುಜರಾತ್‌ನ ಸೋಮನಾಥ ನಗರದಲ್ಲಿ ಮೂರನೇ ರೋಡ್‌ಶೋ ನಡೆಸಿದರು, ಅಲ್ಲಿ ಅವರು ನಂತರ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿ ಅದರ ಪುನರ್ನಿರ್ಮಾಣದ 75 ವರ್ಷಗಳ ನೆನಪಿನ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ದೇವಾಲಯದಲ್ಲಿ ಮೋದಿಯವರ ಸಮ್ಮುಖದಲ್ಲಿ, ಭಾರತೀಯ ವಾಯುಪಡೆಯ ‘ಸೂರ್ಯ ಕಿರಣ್ ಏರೋಬ್ಯಾಟಿಕ್ ತಂಡ’ವು ತನ್ನ ಆರು ಬಿಎಇ ಸಿಸ್ಟಮ್ಸ್ ಹಾಕ್ ಎಂಕೆಯು-132 (BAE Systems Hawk Mk-132) ಸುಧಾರಿತ ಜೆಟ್ ತರಬೇತುದಾರ ವಿಮಾನಗಳೊಂದಿಗೆ ಆಕಾಶದಲ್ಲಿ ಕೇಸರಿ, ಬಿಳಿ ಮತ್ತು ಹಸಿರು ಬಣ್ಣದ ಹೊಗೆಯ ರೇಖೆಗಳನ್ನು ಮೂಡಿಸುತ್ತಾ ಸಮ್ಮಿಲಿತ ಕಸರತ್ತುಗಳನ್ನು ಪ್ರದರ್ಶಿಸಿತು. ಈ ಪ್ರದರ್ಶನದ ನಂತರ, ಮೋದಿಯವರ ಸಮ್ಮುಖದಲ್ಲಿ ವಾಯುಪಡೆಯ ಹೆಲಿಕಾಪ್ಟರ್ ಒಂದು ದೇವಾಲಯದ ಆವರಣದ ಮೇಲೆ ಹೂವಿನ ದಳಗಳನ್ನು ಮಳೆಗರೆಯಿತು. ವಾಯುಯಾನ ಇಂಧನದ ಕೊರತೆಯಿರುವ ಇಂತಹ ಸಮಯದಲ್ಲಿ ಭಾರಿ ಇಂಧನ ಬಳಕೆಗೆ ಕಾರಣವಾಗುವ ಇಂತಹ ಪ್ರದರ್ಶನವು, ಮೋದಿಯವರ ಮಿತವ್ಯಯದ ಸಾರ್ವಜನಿಕ ಸಂದೇಶಕ್ಕೆ ಸಂಪೂರ್ಣ “ವಿರುದ್ಧವಾಗಿದೆ” ಎಂದು ಕೆಲವು ಐಎಫ್ (IAF) ಹಿರಿಯ ಅಧಿಕಾರಿಗಳು ‘ದಿ ವೈರ್’ಗೆ ತಿಳಿಸಿದ್ದಾರೆ.
ಸಾರ್ವಜನಿಕ ಸಭೆಗಳು ಮತ್ತು ರೋಡ್‌ಶೋಗಳ ಹೊರತಾಗಿ, ಮೋದಿ ಅವರು ಕನಿಷ್ಠ 13 ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಅಭಿವೃದ್ಧಿ ಕೆಲಸಗಳಿಗೆ ಶಂಕುಸ್ಥಾಪನೆ ನೆರವೇರಿಸಿದ್ದಾರೆ ಅಥವಾ ಯೋಜನೆಗಳನ್ನು ಉದ್ಘಾಟಿಸಿದ್ದಾರೆ. ಇಂತಹ ಉದ್ಘಾಟನೆಗಳನ್ನು ವರ್ಚುವಲ್ ಆಗಿಯೂ (ಆನ್‌ಲೈನ್) ಮಾಡಬಹುದಿತ್ತು ಎಂಬುದನ್ನು ಮಾರ್ಚ್ 7 ರಂದು ಕೋಟಾ ವಿಮಾನ ನಿಲ್ದಾಣದ ಶಂಕುಸ್ಥಾಪನೆಯನ್ನು ವರ್ಚುವಲ್ ಸಮಾರಂಭ ನೆರವೇರಿಸುವ ಮೂಲಕ ಮೋದಿ ಅವರೇ ತೋರಿಸಿಕೊಟ್ಟಿದ್ದರು.
ಪ್ರಯಾಣವನ್ನು ತಪ್ಪಿಸಲು ರಿಮೋಟ್ ವರ್ಕಿಂಗ್ (ಮನೆಯಿಂದ ಕೆಲಸ) ಗೆ ಆದ್ಯತೆ ನೀಡಬೇಕೆಂಬ ಮೋದಿಯವರ ಮನವಿಯ ಬೆನ್ನಲ್ಲೇ, ಸರ್ಕಾರದ ನೀತಿ ನಿರೂಪಣಾ ಸಂಸ್ಥೆಯಾದ ‘ನೀತಿ ಆಯೋಗ್’ ಸೆಮಿನಾರ್‌ಗಳು, ಕಾರ್ಯಾಗಾರಗಳು ಮತ್ತು ಸಮ್ಮೇಳನಗಳು ಸೇರಿದಂತೆ ಎಲ್ಲಾ ಇನ್-ಪರ್ಸನ್ (ಖುದ್ದಾಗಿ ಭಾಗವಹಿಸುವ) ಕಾರ್ಯಕ್ರಮಗಳನ್ನು ಸ್ಥಗಿತಗೊಳಿಸಿದೆ ಎಂದು ವರದಿಯಾಗಿದೆ.
ಇದೇ ಸಮಯದಲ್ಲಿ, ಮೋದಿ ಅವರು ತಮ್ಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಅರ್ಧದಷ್ಟು ಕಡಿಮೆ ಮಾಡಲು ಸೂಚಿಸಿದ್ದಾರೆ ಎಂದು ಮಾಧ್ಯಮ ವರದಿಗಳು ತಿಳಿಸಿವೆ.
ಇದಕ್ಕೆ ವ್ಯತಿರಿಕ್ತವಾಗಿ, ಮೋದಿಯವರ ಮನವಿಯ ಎರಡು ದಿನಗಳ ನಂತರ, ಮೇ 12 ರಂದು ಅಸ್ಸಾಂ ಸರ್ಕಾರವು ನೂತನ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಮತ್ತು ಅವರ ಸಚಿವರ ಪ್ರಮಾಣವಚನ ಸ್ವೀಕಾರಕ್ಕಾಗಿ ಬೃಹತ್ ಸಮಾರಂಭವನ್ನು ಆಯೋಜಿಸಿತ್ತು. ಈ ಭವ್ಯ ಸಮಾರಂಭಕ್ಕೆ ಒಂದು ಲಕ್ಷ ಜನರನ್ನು ಸೇರಿಸುವ ನಿರೀಕ್ಷೆಯಲ್ಲಿದ್ದೇವೆ ಎಂದು ಸ್ಥಳೀಯ ಬಿಜೆಪಿ ನಾಯಕರ ಹೇಳಿಕೆಯನ್ನು ಮಾಧ್ಯಮಗಳು ಉಲ್ಲೇಖಿಸಿವೆ.
ಪ್ರಧಾನಿಯ ದುಬಾರಿ ವೆಚ್ಚಗಳು:
ಮೋದಿಯವರ ದೇಶೀಯ ಪ್ರಯಾಣವು ಹೆಚ್ಚಾಗಿ ವಾಯುಮಾರ್ಗದ ಮೂಲಕವೇ ಇರುತ್ತದೆ, ಕೊನೆಯ ಹಂತದ ಪ್ರಯಾಣವನ್ನು ರಸ್ತೆ ಅಥವಾ ಹೆಲಿಕಾಪ್ಟರ್‌ಗಳ ಮೂಲಕ ಮಾಡಲಾಗುತ್ತದೆ.
ಮೇ 9 ರಂದು ಪಶ್ಚಿಮ ಬಂಗಾಳದ ನೂತನ ಸಚಿವ ಸಂಪುಟದ ಪ್ರಮಾಣವಚನ ಸಮಾರಂಭಕ್ಕಾಗಿ ಕೋಲ್ಕತ್ತಾಕ್ಕೆ ಭೇಟಿ ನೀಡಿದಾಗ, ಮೋದಿ ಅವರು ಭಾರತೀಯ ವಾಯುಪಡೆಯ (IAF) ಬೋಯಿಂಗ್ ಬ್ಯುಸಿನೆಸ್ ಜೆಟ್ 737 ರಲ್ಲಿ ಪ್ರಯಾಣಿಸುತ್ತಿರುವುದು ಕಂಡುಬಂದಿದೆ. ಇದು 2009 ರಲ್ಲಿ ವಾಯುಪಡೆಗೆ ಸೇರಿಸಲಾದ ಮೂರು ಜೆಟ್‌ಗಳಲ್ಲಿ ಒಂದಾಗಿದೆ.
ಇಂತಹ ಜೆಟ್‌ಗಳನ್ನು ನಿರ್ವಹಿಸುವ ವೆಚ್ಚ ಎಷ್ಟು ಎಂಬುದು ನಿಖರವಾಗಿ ತಿಳಿಯದಿದ್ದರೂ, 2016 ರಲ್ಲಿ ವಾಯುಪಡೆ ನೀಡಿದ ಮಾಹಿತಿ ಹಕ್ಕಿನ (RTI) ಉತ್ತರವು ಇದಕ್ಕೆ ದಾರಿದೀಪವಾಗಿದೆ. ರಾಷ್ಟ್ರಪತಿ, ಉಪರಾಷ್ಟ್ರಪತಿ ಮತ್ತು ಪ್ರಧಾನಮಂತ್ರಿಯವರು ಅಧಿಕೃತ ಕರ್ತವ್ಯದ ಮೇಲೆ ಪ್ರಯಾಣಿಸುವಾಗ ಶುಲ್ಕದಿಂದ ವಿನಾಯಿತಿ ನೀಡಲಾಗುತ್ತದೆಯಾದರೂ, 1999 ರಲ್ಲಿ ಅಂತಿಮಗೊಳಿಸಲಾದ ದರಗಳ ಪ್ರಕಾರ ಇಂತಹ ಬೋಯಿಂಗ್ 737 ಜೆಟ್‌ನಲ್ಲಿ ಪ್ರಯಾಣಿಸಲು ವಾಯುಪಡೆಯು ಗಂಟೆಗೆ 5,42,000 ರೂ. ಶುಲ್ಕವನ್ನು ವಿಧಿಸಿತ್ತು. ಅಂದಿನಿಂದ ಈ ದರಗಳನ್ನು ಪರಿಷ್ಕರಿಸಲಾಗಿದೆಯೇ ಎಂಬುದು ಸ್ಪಷ್ಟವಾಗಿಲ್ಲ.
ಇದರ ಜೊತೆಗೆ, ಪ್ರಧಾನಿಯವರು ರಾಜ್ಯದ ಒಳಗಿನ ಕಡಿಮೆ ದೂರದ ಪ್ರಯಾಣಕ್ಕಾಗಿ ಹೆಲಿಕಾಪ್ಟರ್‌ಗಳನ್ನು ಬಳಸುತ್ತಾರೆ. ಉದಾಹರಣೆಗೆ, ಮೇ 12 ರಂದು ಜಾಮ್‌ನಗರದಿಂದ ಸೋಮನಾಥಕ್ಕೆ ಪ್ರಯಾಣಿಸುವಾಗ ಮೋದಿ ಹೆಲಿಕಾಪ್ಟರ್‌ನಲ್ಲಿ ಪ್ರಯಾಣಿಸಿದ್ದರು ಮತ್ತು ಸೋಮನಾಥ ದೇವಾಲಯದ ವಿಹಂಗಮ ನೋಟವನ್ನು ತೋರಿಸುವ ವೀಡಿಯೊವನ್ನು ಸಹ ಹಂಚಿಕೊಂಡಿದ್ದರು.
ಜನರಿಗೆ ಸರಳತೆಯ ಪಾಠಗಳನ್ನು ಹೇಳುತ್ತಾ, ಮತ್ತೊಂದೆಡೆ ಸಾರ್ವಜನಿಕ ಹಣ ಮತ್ತು ಸರ್ಕಾರಿ ಯಂತ್ರಾಂಗವನ್ನು ಬಳಸಿಕೊಂಡು ಭವ್ಯವಾದ ಪ್ರಚಾರ ರ‍್ಯಾಲಿಗಳನ್ನು ಹಾಗೂ ಅದ್ಧೂರಿ ಮೆರವಣಿಗೆಗಳನ್ನು ನಿರಂತರವಾಗಿ ಮುಂದುವರಿಸುವುದು ಕೇವಲ ರಾಜಕೀಯ ವಿರೋಧಾಭಾಸವನ್ನು ಮಾತ್ರವಲ್ಲದೆ, ನೈತಿಕ ಹೊಣೆಗಾರಿಕೆಯ ಕೊರತೆಯನ್ನೂ ಎತ್ತಿ ತೋರಿಸುತ್ತದೆ. ಆರ್ಥಿಕ ಬಿಕ್ಕಟ್ಟಿನ ಸಮಯದಲ್ಲಿ ದೇಶದ ಇಂಧನವನ್ನು ಉಳಿಸುವುದು ಕೇವಲ ಪ್ರಜೆಗಳ ಕರ್ತವ್ಯ ಮಾತ್ರವಲ್ಲ, ಅದು ಆಡಳಿತದ ಉನ್ನತ ಸ್ಥಾನದಲ್ಲಿರುವವರಿಗೂ ಅನ್ವಯಿಸುವ ಸಮಾನ ಜವಾಬ್ದಾರಿಯಾಗಿದೆ. ನಾಯಕರ ಮಾತಿನ ಆಶಯ ಮತ್ತು ಅವರ ನೈಜ ನಡವಳಿಕೆಯ ನಡುವೆ ಇಂತಹ ದೊಡ್ಡ ಕಂದಕವಿದ್ದಾಗ, ಸಾರ್ವಜನಿಕರಲ್ಲಿ ಸರ್ಕಾರದ ನೀತಿಗಳ ಮೇಲಿನ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಎಂಬುದೇ ಈ ಇಡೀ ವಿದ್ಯಮಾನದ ಮುಖ್ಯ ಸಾರವಾಗಿದೆ.
ಸರಳತೆ ಎಂಬುದು ಮಾತಿನಲ್ಲಿ ಬರುವ ಪದಗಳಲ್ಲಿ ಮಾತ್ರ ಇರದೆ, ಆಚರಣೆಯಲ್ಲೂ ಇರಬೇಕು. ಇಲ್ಲದಿದ್ದರೆ ಅದಕ್ಕೆ ಯಾವ ಕಿಮ್ಮತೂ ಇರುವುದಿಲ್ಲ. ದೇಶದ ಕಡುಬಡವರು ಮತ್ತು ಶ್ರಮಿಕ ವರ್ಗಕ್ಕೆ “ತ್ಯಾಗಕ್ಕೆ ಸಿದ್ಧರಾಗಿ” ಎಂದು ಕರೆ ನೀಡುವ ಪ್ರಧಾನಿಗಳು, ದೇಶದ ಶೇ 99ರಷ್ಟು ಸಂಪನ್ಮೂಲಗಳನ್ನು ಅನುಭವಿಸುತ್ತಿರುವ ಶ್ರೀಮಂತರಿಗೆ ನೀವು ಕೊಡುವ ಕರೆ ಏನು ಎಂದು ಈ ದೇಶದ ಜನ ಪ್ರಶ್ನಿಸುತ್ತಿದ್ದಾರೆ.
SOURCE: The Wire


