Homeಚಳವಳಿನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

ನೇತ್ರಾವತಿ ತೀರದಲ್ಲಿ ‘ಅಂತರಗಂಗೆ’ಯಂತೆ ಹರಿಯುತ್ತಿರುವ ಪ್ರತಿರೋಧ: ವೇದವಲ್ಲಿಯಿಂದ ಸೌಜನ್ಯಳವರೆಗೆ ಪ್ರತಿಧ್ವನಿಸುತ್ತಿರುವ ಪ್ರಶ್ನೆ-‘ಕೊಂದವರು ಯಾರು?’

- Advertisement -
- Advertisement -

ಪ್ರಪಂಚದಾದ್ಯಂತ ಪಿತೃಪ್ರಧಾನ ವ್ಯವಸ್ಥೆ ಮತ್ತು ಪ್ರಭುತ್ವಗಳು ಹಲವು ರೀತಿಗಳಲ್ಲಿ ಮಹಿಳೆಯರನ್ನು ದಮನಿಸುವ ವಿಧಾನಗಳನ್ನು ಕಂಡುಕೊಂಡು ಕರಗತ ಮಾಡಿಕೊಂಡಿವೆ. ಅದರಲ್ಲಿ ಅತ್ಯಂತ ಪರಿಣಾಮಕಾರಿಯಾದುದು, ದೇವರು, ಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಮಹಿಳೆಯರನ್ನು ದಮನಕ್ಕೊಳಪಡಿಸುವ ತಂತ್ರ. ಇದು ಯಾವುದೇ ಒಂದು ಧರ್ಮಕ್ಕೆ ಸೀಮಿತವಾದುದಲ್ಲ, ಇಂದು ಅಮೆರಿಕದಲ್ಲಿ ಎಫ್‌ಸ್ಟೀನ್ ಪ್ರಕರಣಗಳ ವಿರುದ್ಧ ದೊಡ್ಡ ಕೂಗು ಎದ್ದಿದೆ. ಆಗಷ್ಟೇ ಜಗತ್ತನ್ನು ಕಣ್ಣುಬಿಟ್ಟು ನೋಡುತ್ತಿರುವ ಎಳೆಯ ಕಂದಮ್ಮಗಳನ್ನೂ ಬಿಡದಂತೆ ಪುಟ್ಟ ಹೆಣ್ಣುಮಕ್ಕಳನ್ನೂ, ಯುವತಿಯರನ್ನೂ ಅಗಾಧವಾದ ಹಿಂಸೆಗೆ, ದಮನಕ್ಕೆ ದೂಡಿದ ಎಫ್‌ಸ್ಟೀನ್ ಮತ್ತು ಅವನ ಜೊತೆಯಲ್ಲಿದ್ದ ಪ್ರಪಂಚದ ಎಲ್ಲ ದೇಶಗಳ ಪ್ರಭಾವಿ ರಾಜಕಾರಣಿಗಳು, ಉದ್ಯಮಿಗಳು, ಅಧಿಕಾರಿಗಳು ಮತ್ತು ಬಲಾಢ್ಯರ ಜಾಲವನ್ನು ಎಫ್‌ಸ್ಟೀನ್ ಫೈಲ್ಸ್ ಬಯಲುಗೊಳಿಸಿತು. ಆದರೂ ಅವರಲ್ಲಿ ಎಷ್ಟು ಜನರನ್ನು ಕಾನೂನಿನ ಕೈಗಳು ತಲುಪಬಲ್ಲವು ಎಂಬುದು ಇಂದಿಗೂ ಒಂದು ಪ್ರಶ್ನೆಯೇ….. ಹೀಗಾಗಿ ಧರ್ಮ ಯಾವುದೇ ಆಗಿರಲಿ, ಸಾಂಸ್ಥಿಕ ಚೌಕಟ್ಟಿನೊಳಕ್ಕೆ ಸೇರಿಸಲ್ಪಟ್ಟ ದೇವರು, ಧರ್ಮಗಳು ತಮ್ಮನ್ನು ಅಸಹಾಯಕರಾಗಿ ನಂಬಿಕೊಂಡು ಅಮಾಯಕತೆಯಿಂದ ಆರಾಧಿಸುವ ಮಹಿಳೆಯರನ್ನು ಶೋಷಿಸುವ ಉಪಕರಣಗಳಾಗಿ ಪರಿವರ್ತನೆಯಾಗಿರುವುದು ಈ ’ನಾಗರಿಕ‘ವೆಂದು ಕರೆಸಿಕೊಳ್ಳುವ ಸಮಾಜದ ಬಹುದೊಡ್ಡ ದುರಂತ!

ಪವಿತ್ರವೆಂದು ಭಾವಿಸಲ್ಪಡುವ ಸ್ಥಳಗಳಲ್ಲೇ ಭಕ್ತಿ ಮತ್ತು ನಂಬಿಕೆಯನ್ನೇ ಬಂಡವಾಳವಾಗಿಸಿಕೊಂಡು ಮಹಿಳೆಯರ ಘನತೆಯನ್ನು ಹೂತುಹಾಕುವ ಈ ವ್ಯವಸ್ಥಿತ ಕ್ರೌರ್ಯದ ಚರಿತ್ರೆಯ ಹಿನ್ನೆಲೆಯಲ್ಲೇ, ಇಂದು ತುಳುನಾಡಿನ ಧರ್ಮಸ್ಥಳದ ಸುತ್ತಮುತ್ತ ಸಂಭವಿಸಿರುವ ಮಹಿಳೆಯರ ಅಸಹಜ ಸಾವುಗಳು ಮತ್ತು ಅತ್ಯಾಚಾರಗಳ ಹಿಂದಿನ ಸತ್ಯವನ್ನು ಬಯಲು ಮಾಡಲು ’ಕೊಂದವರು ಯಾರು?’ ಆಂದೋಲನವು ಅನಿವಾರ್ಯವಾಗಿ ಮುನ್ನಲೆಗೆ ಬಂದಿದೆ. ಪಾರಮ್ಯ ಮತ್ತು ಅಧಿಕಾರಯುತ ಧ್ವನಿಗಳು ಸೃಷ್ಟಿಸಿರುವ ನಿರಂತರ ಮೌನವನ್ನು ಸೀಳಿ ನ್ಯಾಯಕ್ಕಾಗಿ ಮೊಳಗುತ್ತಿರುವ ಈ ಕೂಗು, ಜಾಗತಿಕ ಮಟ್ಟದಲ್ಲಿ ನಡೆಯುತ್ತಿರುವ, ನಮ್ಮ ದೇಶದಲ್ಲೂ ಶತಮಾನಗಳಿಂದ ನಡೆಯುತ್ತಾ ಬಂದಿರುವ ಸ್ತ್ರೀ ವಿರೋಧಿ ದಮನಕಾರಿ ಜಾಲಗಳ ವಿರುದ್ಧದ ಪ್ರತಿರೋಧದ ಒಂದು ಭಾಗವೇ ಆಗಿದೆ.

ತಾಯಿ ಮೂಲದ ನೆಲವು ದಬ್ಬಾಳಿಕೆಯ ತವರಾದ ದುರಂತ

ತುಳುನಾಡು ಎಂದರೆ ಕೇವಲ ದೈವಾರಾಧನೆ, ಯಕ್ಷಗಾನ ಅಥವಾ ಕರಾವಳಿಯ ಸೌಂದರ್ಯವಷ್ಟೇ ಅಲ್ಲ; ಅದು ಅನ್ಯಾಯದ ವಿರುದ್ಧದ ಸುದೀರ್ಘ ಪ್ರತಿರೋಧದ ಭೂಮಿಯೂ ಹೌದು. ಮಾತೃವಂಶೀಯ ಪರಂಪರೆಯ ಈ ನೆಲದಲ್ಲಿ ಮಹಿಳೆ ಶ್ರಮಜೀವಿ, ಸಶಕ್ತೆ ಮತ್ತು ಸ್ವಾಭಿಮಾನಿ. ಮಕ್ಕಳನ್ನು ತಾಯಿಮೂಲದಿಂದ ಗುರುತಿಸುವ ಮಾತೃವಂಶೀಯ ಕುಟುಂಬ ಪದ್ಧತಿ ತೀರಾ ಇತ್ತೀಚಿನವರೆಗೂ ಜೀವಂತವಾಗಿದ್ದ ನೆಲ. ಆದರೆ ಕಳೆದ ಕೆಲವು ದಶಕಗಳಲ್ಲಿ ಬೆಳ್ತಂಗಡಿ ತಾಲ್ಲೂಕಿನ, ವಿಶೇಷವಾಗಿ ಧರ್ಮಸ್ಥಳದ ಆಸುಪಾಸಿನ ಅಡವಿಗಳಲ್ಲಿ ಹರಿದ ನೇತ್ರಾವತಿಯ ಸಾಕ್ಷಿಯಾಗಿ ನಡೆದ ಮಹಿಳೆಯರ ಮೇಲಿನ ಹಿಂಸೆ, ಲೈಂಗಿಕ ದೌರ್ಜನ್ಯ ಮತ್ತು ಕ್ರೌರ್ಯದ ಕಥೆಗಳು ವ್ಯವಸ್ಥಿತ ಮೌನದೊಳಗೆ ಮುಚ್ಚಿಹೋಗಿವೆ. ಈ ಮೌನವನ್ನು ಸೀಳಲು ದಶಕಗಳಿಂದ ಹಲವು ಬಗೆಯ ಜನಪರ ಚಳವಳಿಗಳು, ಮಹಿಳಾ ಸಂಘಟನೆಗಳು ಸತತವಾಗಿ ಹೋರಾಟ ನಡೆಸುತ್ತಲೇ ಬಂದಿದ್ದಾರೆ. ಅವುಗಳ ಸಾಲಿನಲ್ಲಿ ಇಂದು ಕರ್ನಾಟಕದ ಮಹಿಳೆಯರು ಮತ್ತು ಮಹಿಳಾಪರ ಜೀವಪರ ಮನಸ್ಸುಗಳು ಸೇರಿ ಆರಂಭಿಸಿರುವ ’ಕೊಂದವರು ಯಾರು?’ ಆಂದೋಲನವೂ ಕೂಡಾ ಅಬ್ಬಕ್ಕ ಮತ್ತು ಸಿರಿಯ ಚೈತನ್ಯದೊಂದಿಗೆ ಬೀದಿಗೆ ಇಳಿದಿದೆ.

ಇತಿಹಾಸದ ಚೈತನ್ಯ: ಅಬ್ಬಕ್ಕ ಮತ್ತು ಸಿರಿ

ತುಳುನಾಡಿನ ಜನಪದ ಮಹಾಕಾವ್ಯವಾದ ’ಸಿರಿ’ ಪಾಡ್ದನಗಳು ನಮಗೆ ಕೇವಲ ದೇವತೆಯ ಕಥೆಯನ್ನಲ್ಲ, ಬದಲಾಗಿ ಮಾತೃವಂಶೀಯ ಕುಟುಂಬದ ಮಹಿಳೆಯೊಬ್ಬಳು ಅನುಭವಿಸಿದ ನೋವು ಮತ್ತು ಅವಳ ಘನತೆಯ ಹೋರಾಟವನ್ನು ಅವು ಸೂಚಿಸುತ್ತವೆ. ಮತ್ತೊಂದೆಡೆ, 16ನೇ ಶತಮಾನದಲ್ಲೇ ಪೋರ್ಚುಗೀಸರ ಫಿರಂಗಿಗಳಿಗೆ ಎದೆಯೊಡ್ಡಿ ನಿಂತ ಉಳ್ಳಾಲದ ರಾಣಿ ಅಬ್ಬಕ್ಕ ಚೌಟಳು ನಮ್ಮ ಪಾಲಿನ ’ನಿರ್ಭಯ ರಾಣಿ’. ಎಲ್ಲ ಧರ್ಮೀಯರನ್ನು ಒಳಗೊಂಡ ಸೈನ್ಯದ ಮೂಲಕ ಬಹುತ್ವದ ಪಾಠ ಹೇಳಿಕೊಟ್ಟ ಅಬ್ಬಕ್ಕಳ ನೆಲದಲ್ಲಿ ಇಂದು ’ಬಹುತ್ವ’ ಮತ್ತು ’ಮಹಿಳಾ ಸುರಕ್ಷತೆ’ ಎರಡೂ ಅಪಾಯದಲ್ಲಿರುವುದು ವಿಪರ್ಯಾಸ.

ಧರ್ಮಸ್ಥಳದ ನೇತ್ರಾವತಿ ನದಿ ತೀರದ ‘ನಿಗೂಢ’ ಮೌನ

ಕರ್ನಾಟಕದ ಅತಿದೊಡ್ಡ ಶ್ರದ್ಧಾಕೇಂದ್ರಗಳಲ್ಲಿ ಒಂದಾದ ಧರ್ಮಸ್ಥಳದ ನೇತ್ರಾವತಿ ನದಿಯ ತಟದಲ್ಲಿ ಭಕ್ತರ ದಂಡೇ ಹರಿಯುತ್ತದೆ. ಆದರೆ ಅದೇ ನದಿ ತಟದ ಕಾಡುಗಳಲ್ಲಿ ಮಹಿಳೆಯರು ಹೋದರೆ ವಾಪಸ್ ಬರುವುದಿಲ್ಲ ಎಂಬ ಭೀತಿ ದಶಕಗಳಿಂದ ಮನೆಮಾಡಿದೆ. ಆರ್.ಟಿ.ಐ (RTI) ಮಾಹಿತಿಯ ಪ್ರಕಾರ, 2001 ರಿಂದ 2012ರ ನಡುವೆ ಬೆಳ್ತಂಗಡಿಯಲ್ಲಿ ನಡೆದ 452 ಅಸಹಜ ಸಾವುಗಳಲ್ಲಿ 349 ಪ್ರಕರಣಗಳು ಧರ್ಮಸ್ಥಳ ಮತ್ತು ಉಜಿರೆಯಲ್ಲೇ ನಡೆದಿವೆ. ಅಂದರೆ ವರ್ಷಕ್ಕೆ ಸರಾಸರಿ 37 ಸಾವುಗಳು! ಇದು ರಾಷ್ಟ್ರಿಯ ಸರಾಸರಿಗಿಂತ ಮೂರು ಪಟ್ಟು ಹೆಚ್ಚು.

ಪೊಲೀಸರು ಇವುಗಳನ್ನು ’ಆತ್ಮಹತ್ಯೆ’ ಅಥವಾ ‘ಕಾಲು ಜಾರಿ ಬಿದ್ದ ಸಾವುಗಳು’ ಎಂದು ಹಣೆಪಟ್ಟಿ ಕಟ್ಟಿ ‘ಸಿ’ ವರದಿ ಸಲ್ಲಿಸಿ ಕೈತೊಳೆದುಕೊಳ್ಳುತ್ತಿದ್ದಾರೆ. 2016ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಗೆ ಭೇಟಿಕೊಟ್ಟ ಉಗ್ರಪ್ಪ ಸಮಿತಿಯ ಮುಂದೆ ಅಪರ ಪೊಲೀಸ್ ವರಿಷ್ಠಾಧಿಕಾರಿ ನೀಡಿದ “ಮೋಕ್ಷ ಪಡೆಯಲು ಜನರು ಇಲ್ಲಿ ಬಂದು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ” ಎಂಬ ಅತಾರ್ಕಿಕ ವಾದವು ವ್ಯವಸ್ಥಿತವಾಗಿ ಸತ್ಯವನ್ನು ಹೂತುಹಾಕುವ ಪ್ರಯತ್ನದಂತೆ ತೋರುತ್ತಿದೆ.

ಹೂತುಹಾಕಲ್ಪಟ್ಟ ಸತ್ಯಗಳು: ವೇದವಲ್ಲಿಯಿಂದ ಸೌಜನ್ಯಳವರೆಗೆ

ಈ ಭಾಗದಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಇಂದು ನಿನ್ನೆಯದಲ್ಲ.

ವೇದವಲ್ಲಿ ಕೊಲೆ (1979):

ಬಡ್ತಿ ನಿರಾಕರಣೆಯ ವಿರುದ್ಧ ಧ್ವನಿ ಎತ್ತಿದ ಶಿಕ್ಷಕಿ ವೇದವಲ್ಲಿಯವರನ್ನು ಅವರದ್ದೇ ಮನೆಯಲ್ಲಿ ಅತ್ಯಾಚಾರ ಮಾಡಿ ಜೀವಂತವಾಗಿ ಸುಟ್ಟುಹಾಕಲಾಯಿತು. ಪೊಲೀಸರು ಆಕೆಯ ಪತಿಯನ್ನೇ ಆರೋಪಿಯನ್ನಾಗಿಸಿ ಬಂಧಿಸಿ, ಕೊನೆಯಲ್ಲಿ ಪುರಾವೆಗಳಿಲ್ಲ ಎಂದು ಕೇಸ್ ಮುಚ್ಚಿಹಾಕಿದರು.

ಪದ್ಮಲತಾ ಅಪಹರಣ (1986):

ಊಳಿಗಮಾನ್ಯ ಪದ್ಧತಿಯನ್ನು ಪ್ರಶ್ನಿಸಿದ ಸಿಪಿಐ(ಎಂ) ನಾಯಕ ದೇವಾನಂದ್ ಅವರ ಮಗಳು ಪದ್ಮಲತಾಳ ಶವ 56 ದಿನಗಳ ಬಳಿಕ ವಿಕಾರಗೊಂಡ ಸ್ಥಿತಿಯಲ್ಲಿ ಸಿಕ್ಕಿತು. ರಾಜಕೀಯ ಹಸ್ತಕ್ಷೇಪದಿಂದ ಈ ತನಿಖೆಯೂ ಹಳ್ಳ ಹಿಡಿಯಿತು.

ಯಮುನಾ-ನಾರಾಯಣ ಜೋಡಿ ಕೊಲೆ (2012):

ಭೂಮಿ ಬಿಟ್ಟುಕೊಡಲು ನಿರಾಕರಿಸಿದ ಆನೆ ಮಾವುತ ನಾರಾಯಣ ಮತ್ತು ಆತನ ತಂಗಿ ಯಮುನಾಳನ್ನು ಬರ್ಬರವಾಗಿ ಕೊಲ್ಲಲಾಯಿತು. ಅವರ ಮನೆ ಇದ್ದ ಜಾಗದಲ್ಲಿ ಇಂದು ಬಹುಮಹಡಿಯ ಹೊಟೇಲ್ ಎದ್ದು ನಿಂತಿದೆ. ದುರಂತವೆಂದರೆ, ಯಮುನಾ ಮತ್ತು ನಾರಾಯಣರ ಕೊಲೆ ಪ್ರಕರಣವನ್ನು ದರೋಡೆ ಪ್ರಯತ್ನವೆಂದು ಬಿಂಬಿಸಲು ಪೊಲೀಸ್ ವ್ಯವಸ್ಥೆ ತೀವ್ರ ಪ್ರಯತ್ನ ನಡೆಸಿತು.

ಸೌಜನ್ಯ ಪ್ರಕರಣ (2012): ಯಮುನಾ- ನಾರಾಯಣ ಜೋಡಿ ಕೊಲೆ ನಡೆದು ಕೇವಲ 20 ದಿನಗಳಲ್ಲಿ ನಡೆದ, 17 ವರ್ಷದ ಸೌಜನ್ಯಳ ಭೀಕರವಾದ ಅತ್ಯಾಚಾರ ಮತ್ತು ಕೊಲೆ ಇಡೀ ರಾಜ್ಯವನ್ನೇ ನಡುಗಿಸಿತು. ಸಾಕ್ಷ್ಯ ನಾಶಪಡಿಸಿದ ಅಧಿಕಾರಿಗಳು, ಅಮಾಯಕ ಸಂತೋಷ್ ರಾವ್‌ನನ್ನು ಸಿಲುಕಿಸಿದ ಪರಿಯನ್ನು ನ್ಯಾಯಾಲಯವೇ ಖಂಡಿಸಿದೆ. ಆದರೂ ನ್ಯಾಯಾಲಯವೇ ಆದೇಶ ನೀಡಿದಾಗಲೂ ಇಡೀ ಪ್ರಕರಣವನ್ನು ದಿಕ್ಕು ತಪ್ಪಿಸಿದ ಅಧಿಕಾರಿಗಳ ಮೇಲೆ ಯಾವ ಸರ್ಕಾರಗಳೂ ಕ್ರಮ ಜರುಗಿಸಿಲ್ಲ, ಅನುಮಾನಾಸ್ಪದವಾಗಿ ಸಾವಿಗೀಡಾದ ಐದು ಮಂದಿ ಸಾಕ್ಷಿಗಳ ವಿಚಾರದಲ್ಲಿ ಆಮೂಲಾಗ್ರ ತನಿಖೆ ನಡೆದಿಲ್ಲ. ಒಟ್ಟಿನಲ್ಲಿ ಇಂದಿಗೂ ಸೌಜನ್ಯಳನ್ನು ’ಕೊಂದವರು ಯಾರು?’ ಎಂಬ ಪ್ರಶ್ನೆಗೆ ಉತ್ತರವಿಲ್ಲ! ಸೌಜನ್ಯಳ ಕುಟುಂಬ ಮತ್ತು ಸ್ಥಳೀಯ ಹೋರಾಟಗಾರರು ಮಾತ್ರ ಇಂದಿಗೂ ತಮ್ಮ ಪ್ರಯತ್ನವನ್ನು ನಿಲ್ಲಿಸಿಲ್ಲ.

ಅಂಕಿಅಂಶಗಳು ಹೇಳುವುದೇನು?

RTI ಅರ್ಜಿಗಳ ಮೂಲಕ ಪಡೆದ ಮಾಹಿತಿಯ ಪ್ರಕಾರ, ಧರ್ಮಸ್ಥಳದ ಅಸಹಜ ಸಾವುಗಳ ಸಂಖ್ಯೆಯ ಮತ್ತು ಆ ಬಗ್ಗೆ ಯಾವ ಸರ್ಕಾರಿ ಯಂತ್ರಾಂಗಗಳೂ ಯಾವ ರೀತಿಯಲ್ಲೂ ಉತ್ತರದಾಯಿತ್ವವನ್ನು ಪ್ರದರ್ಶಿಸದಿರುವುದು ಚಿಂತಾಜನಕವಾಗಿದೆ. ಇವನ್ನು NCRB ದತ್ತಾಂಶಗಳೊಂದಿಗೆ ಹೋಲಿಸಿದರೆ ಪ್ರಶ್ನೆಗಳು ಇನ್ನಷ್ಟು ಆಳವಾಗಿ ಕಾಡುತ್ತವೆ:

ಸಾವುಗಳ ಕಾರಣಗಳು:

ಬಹುತೇಕ “ಆತ್ಮಹತ್ಯೆ”, “ನದಿಗೆ ದುಮುಕುವುದು”, “ಮಾದಕ ಸೇವನೆಯಿಂದ ಸಾವು” ಎಂದು ದಾಖಲು, ಆದರೆ ನಿಜವಾದ ಕಾರಣಗಳು ಸಂಶಯಾಸ್ಪದ (ಅತ್ಯಾಚಾರ-ಕೊಲೆ ಇತ್ಯಾದಿ). ಈ ಎಲ್ಲದರ ಕುರಿತು 2016ರ ಉಗ್ರಪ್ಪ ಸಮಿತಿ ಶಿಫಾರಸ್ಸಿನಂತೆ ಅಧ್ಯಯನ ಅಗತ್ಯ.

NCRB ಹೋಲಿಕೆ:

ಧರ್ಮಸ್ಥಳದ ಅಸಹಜ ಸಾವುಗಳ ಸಂಖ್ಯೆ ರಾಷ್ಟೀಯ ಸರಾಸರಿಯಿಂತ 2-3 ಪಟ್ಟು ಹೆಚ್ಚು, ಇದು ವ್ಯವಸ್ಥಿತ ದೌರ್ಜನ್ಯವನ್ನು ಸೂಚಿಸುತ್ತದೆ. ಸೌಜನ್ಯ ಪ್ರಕರಣದ ನಂತರ ಸ್ವಲ್ಪ ಇಳಿಕೆಯಾಗಿದೆಯಾದರೂ, ಅಸಹಜ ಸಾವುಗಳು ಪೂರ್ತಿ ನಿಂತಿಲ್ಲ. ಅಷ್ಟೆಲ್ಲ ಗದ್ದಲ ಮತ್ತು ಹೋರಾಟದ ನಂತರವೂ ಇನ್ನೂ ಸಾವುಗಳು ನಿಂತಿಲ್ಲ ಎಂಬುದು ಆತಂಕದ ವಿಚಾರ.

ಅಧಿಕಾರ, ಧರ್ಮ ಮತ್ತು ಮೈಕ್ರೋಫೈನಾನ್ಸ್ ರಾಜಕೀಯ

ಯಾವಾಗ ಮಹಿಳಾ ಸಂಘಟನೆಗಳು ಈ ಅನ್ಯಾಯದ ವಿರುದ್ಧ ಧ್ವನಿ ಎತ್ತುತ್ತವೆಯೋ, ಆಗ ’ಧರ್ಮದ ಗೌರವ’ ಮತ್ತು ’ಕ್ಷೇತ್ರದ ಮರ್ಯಾದೆ’ ಎಂಬ ಗುರಾಣಿಗಳನ್ನು ಬಳಸಲಾಗುತ್ತದೆ. ಅಚ್ಚರಿಯೆಂದರೆ, ಮಹಿಳಾ ಸಬಲೀಕರಣದ ಹೆಸರಲ್ಲಿ ಮೈಕ್ರೋಫೈನಾನ್ಸ್ ಮೂಲಕ ಸಂಘಟಿತರಾಗಿರುವ ಸಾವಿರಾರು ಮಹಿಳೆಯರನ್ನೇ ಈ ಹೋರಾಟದ ವಿರುದ್ಧ ಎತ್ತಿಕಟ್ಟಲಾಗುತ್ತಿದೆ.

ಸಾಲ ಕೊಟ್ಟ ಮಾತ್ರಕ್ಕೆ ಅಥವಾ ಧರ್ಮದ ಮರೆಯಲ್ಲಿ ಮಹಿಳೆಯರ ಮೇಲಿನ ಹಿಂಸೆಯನ್ನು ಸಮರ್ಥಿಸಿಕೊಳ್ಳಲು ಸಾಧ್ಯವೇ? ಸಬಲೀಕರಣ ಎಂದರೆ ಕೇವಲ ಸಾಲ ಕೊಡುವುದಲ್ಲ, ಅನ್ಯಾಯದ ವಿರುದ್ಧ ಮಾತನಾಡುವ ಧೈರ್ಯ ತುಂಬುವುದು. ಆದರೆ ಇಲ್ಲಿ ಮಹಿಳೆಯರನ್ನು ಟ್ರಸ್ಟ್‌ನ ರಕ್ಷಣೆಗೆ ಬಳಸಲಾಗುತ್ತಿದೆಯೇ ಹೊರತು, ಸೌಜನ್ಯಳಂತಹ ಹೆಣ್ಣುಮಕ್ಕಳಿಗೆ ನ್ಯಾಯ ಕೊಡಿಸಲು ಅವರ ಧ್ವನಿಯನ್ನು ಬಳಸುತ್ತಿಲ್ಲ.

’ಕೊಂದವರು ಯಾರು?’: ಇದು ಕೇವಲ ಪ್ರಶ್ನೆಯಲ್ಲ, ಪ್ರತಿರೋಧ

ಇಂದು ಎಸ್‌ಐಟಿ (SIT) ತನಿಖೆ ಆರಂಭವಾಗಿದ್ದರೂ, ಅದು ಕೇವಲ ’ಹೆಣ ಹೂಳುವಿಕೆ’ಯ ಸುತ್ತ ಸುತ್ತುತ್ತಿದೆಯೇ ಹೊರತು ಮಹಿಳೆಯರ ಮೇಲಿನ ದೌರ್ಜನ್ಯಗಳ ಆಳಕ್ಕಿಳಿಯುತ್ತಿಲ್ಲ ಎಂಬ ಹಿನ್ನೆಲೆಯಲ್ಲಿ ರೂಪಿತವಾದದ್ದೇ ’ಕೊಂದವರು ಯಾರು?’ ಆಂದೋಲನ.

ಈ ಪ್ರಯತ್ನದ ಆಶಯಗಳು ಸ್ಪಷ್ಟವಾಗಿವೆ

1. ಧರ್ಮಸ್ಥಳದಲ್ಲಿ ನೊಂದ ಕುಟುಂಬಗಳು ದಶಕಗಳಿಂದ ನಡೆಸುತ್ತಾ ಬಂದಿರುವ ಹೋರಾಟದಲ್ಲಿ, ಅವರ ಬೆಂಬಲಕ್ಕೆ ನಿಲ್ಲುವುದು.
2. ದಶಕಗಳಿಂದ ಮುಚ್ಚಿಹಾಕಲ್ಪಟ್ಟ ಅಸಹಜ ಸಾವುಗಳ ಮರುತನಿಖೆಯಾಗಬೇಕೆಂಬ ಹಕ್ಕೊತ್ತಾಯದೊಂದಿಗೆ ಆಂದೋಲನ ರೂಪಿಸುವುದು.
3. ಸಿಬಿಐ ವಿಚಾರಣೆ ನಂತರದ ಹೈಕೋರ್ಟ್ ಆದೇಶದಂತೆ ತನಿಖೆಯ ಹಾದಿ ತಪ್ಪಿಸಿದ ವೈದ್ಯಾಧಿಕಾರಿಗಳು ಮತ್ತು ಪೊಲೀಸ್ ಅಧಿಕಾರಿಗಳ ಮೇಲೆ ಕ್ರಮವಾಗಬೇಕು ಎಂಬ ಒತ್ತಡ ಹೇರುವುದು.
4. ಮಹಿಳೆಯರ ಮೇಲಿನ-ವಿಶೇಷವಾಗಿ ದುರ್ಬಲ ಮತ್ತು ಶೋಷಿತ ಸಮುದಾಯಗಳಿಗೆ ಸೇರಿದ ಗ್ರಾಮೀಣ ಭಾಗದ ಮಹಿಳೆಯರ ಮೇಲಿನ- ದೌರ್ಜನ್ಯಗಳಲ್ಲಿ ಮತ್ತು ಆರೋಪಿಗಳು ಬಲಾಢ್ಯರಾಗಿದ್ದಾಗ ಕಂಡುಬರುವ ವ್ಯವಸ್ಥೆಯ ವೈಫಲ್ಯವನ್ನು ಪ್ರಶ್ನಿಸುವುದು.
5. ಪಿತೃಪ್ರಧಾನ ಸಂಸ್ಕೃತಿ ಮತ್ತು ಧರ್ಮದ ಹೆಸರಿನಲ್ಲಿ ನಡೆಯುವ ದಮನವನ್ನು ತಡೆಯುವಂತಹ ಅರಿವನ್ನು ಮಹಿಳೆಯರಲ್ಲಿ ಮತ್ತು ಸಮಾಜದಲ್ಲಿ ಮೂಡಿಸುವುದು.

ನಮ್ಮ ಹೋರಾಟ ಯಾವುದೇ ದೇವರ ಅಥವಾ ಭಕ್ತರ ನಂಬಿಕೆಯ ವಿರುದ್ಧವಲ್ಲ. ಬದಲಾಗಿ, ದೇವರ ಹೆಸರಿನಲ್ಲಿ ಅಧಿಕಾರ ಚಲಾಯಿಸುತ್ತಾ ಕಾನೂನಿಗಿಂತ ಮೇಲೆ ನಿಲ್ಲುವ ಶಕ್ತಿಗಳ ವಿರುದ್ಧ. ನೆಲದ ಕಾನೂನು ಮತ್ತು ಸಂವಿಧಾನ ಎಲ್ಲರಿಗೂ ಒಂದೇ. ಸಿರಿಯ ನಾಡಿನಲ್ಲಿ ಸಿರಿಯಕ್ಕಗಳ ಮೇಲೆ ನಡೆಯುವ ದೌರ್ಜನ್ಯ ನಿಲ್ಲುವವರೆಗೆ, ಅಬ್ಬಕ್ಕಳ ನಾಡಿನಲ್ಲಿ ಮಹಿಳೆಯರ ಘನತೆ ರಕ್ಷಣೆ ಆಗುವವರೆಗೆ ಈ ಪ್ರತಿರೋಧದ ’ಅಂತರಗಂಗೆ’ ಬತ್ತುವುದಿಲ್ಲ.

ನಮ್ಮ ಮಟ್ಟಿಗೆ ನ್ಯಾಯವೆಂದರೆ

ಕೊಂದವರು ಯಾರು ಆಂದೋಲನದಿಂದ ಬೆಳ್ತಂಗಡಿಯಲ್ಲಿ ನಡೆದ ‘ಮಹಿಳಾ ನ್ಯಾಯ ಸಮಾವೇಶ’ದಲ್ಲಿ ಮಾತನಾಡುವಾಗ ಸೌಜನ್ಯಳ ತಂಗಿ ಸೌಂದರ್ಯ, “ನಮ್ಮ ಅಕ್ಕನ ಪ್ರಕರಣಕ್ಕೆ ಇನ್ನೂ ನ್ಯಾಯ ಸಿಕ್ಕಿಲ್ಲದಿರಬಹುದು, ಆದರೆ ಆಗ ನಡೆದ ಹೋರಾಟ ಮತ್ತು ಇಂದಿಗೂ ಮುಂದುವರಿದಿರುವ ಪ್ರತಿರೋಧದ ಕಾರಣಕ್ಕೆ ಆ ರೀತಿಯಲ್ಲಿ ಭೀಕರವಾದ ಇನ್ಯಾವುದೇ ಪ್ರಕರಣ ಈ ಭಾಗದಲ್ಲಿ ನಡೆಯಲಿಲ್ಲ. ನಾವು ಹೋರಾಟ ಮುಂದುವರಿಸುತ್ತೇವೆ, ಆದರೆ ನಮ್ಮ ಮಟ್ಟಿಗೆ ಇದೂ ಕೂಡಾ ಒಂದಷ್ಟು ನ್ಯಾಯ ಸಿಕ್ಕಿದಂತೆಯೇ…” ಎಂದು ಹೇಳಿದರು. ಇನ್ನೂ ಹಲವರು ಮಾತನಾಡುತ್ತಾ, ರಾಜ್ಯದ ಎಲ್ಲ ಭಾಗಗಳ, ವಿವಿಧ ಸಂಘಟನೆಗಳ, ವಿವಿಧ ಸಿದ್ಧಾಂತಗಳ ಮಹಿಳೆಯರಿಂದು ಒಂದೆಡೆ ಕಲೆತು, ತಮ್ಮ ಘನತೆ, ಹಕ್ಕು ಮತ್ತು ಹೋರಾಟದ ಬಗ್ಗೆ ಮಾತನಾಡುತ್ತಿರುವುದು ಕೂಡಾ ನ್ಯಾಯದ ಒಂದು ರೂಪ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದರು. ಮಹಿಳಾ ಚಳವಳಿಯು ದೀರ್ಘಕಾಲದಿಂದ ಮಹಿಳೆಯರ ಹಕ್ಕು ಮತ್ತು ಘನತೆಗಾಗಿ ಹೋರಾಟ ನಡೆಸುತ್ತಾ ಕಲಿತಿರುವ ಒಂದು ಪಾಠವೆಂದರೆ, ನ್ಯಾಯವೆಂಬುದು ಕೇವಲ ಕೋರ್ಟು ಕಛೇರಿಗಳ ಕಟಕಟೆಯಲ್ಲಷ್ಟೇ ಸಿಗುವಂಥದಲ್ಲ, ಸಾಮಾಜಿಕವಾಗಿ ಅದಕ್ಕಾಗಿ ಏಳುವ ದೊಡ್ಡ ಕೂಗು ಕೂಡಾ ನ್ಯಾಯದ ಒಂದು ಹೆಜ್ಜೆ, ನೊಂದವರ ನಡುವೆ ಏರ್ಪಡುವ ಬಾಂಧವ್ಯ, ಐಕ್ಯತೆ ಕೂಡಾ ಅಂತಹ ಹೆಜ್ಜೆಗಳೇ, ಮತ್ತು ದೀರ್ಘಕಾಲದಲ್ಲಿ ಇವೆಲ್ಲವೂ ಸಂಪೂರ್ಣ ನ್ಯಾಯ ದೊರಕುವುದನ್ನು ಖಾತ್ರಿಪಡಿಸುವುದಕ್ಕೆ ಬೇಕಿರುವ ಬುನಾದಿಗಳಾಗುತ್ತವೆ ಎಂಬುದು. ಹೀಗಾಗಿ, ಹಲವರು ‘ಧರ್ಮಸ್ಥಳದ ಪ್ರಕರಣದಲ್ಲಿ ನ್ಯಾಯ ಸಿಗುತ್ತದೆಂಬ ಭರವಸೆ ಇದೆಯೇ?’ ಎಂದು ನಮ್ಮನ್ನು ಕೇಳಿದಾಗ ನಾವು ಹೇಳುತ್ತೇವೆ- ‘ಹೌದು ಇದೆ, ಖಂಡಿತವಾಗಿ ನಮಗೆ ಆ ಭರವಸೆ ಇದೆ!’

ಮಹಿಳಾ ಆಂದೋಲನದ ದೃಷ್ಟಿಕೋನದಲ್ಲಿ ನ್ಯಾಯವೆಂಬುದು ಕೇವಲ ನ್ಯಾಯಾಲಯದ ನಾಲ್ಕು ಗೋಡೆಗಳ ನಡುವೆ ಸಿಗುವ ತೀರ್ಪು ಅಥವಾ ಕೇವಲ ಅಪರಾಧಿಗೆ ಆಗುವ ಶಿಕ್ಷೆಯಷ್ಟೇ ಅಲ್ಲ; ಅದು ಮೌನಕ್ಕೆ ಶರಣಾಗಿದ್ದ ನೋವಿನ ಕಥೆಗಳು ಸಾರ್ವಜನಿಕವಾಗಿ ಧ್ವನಿ ಪಡೆಯುವುದು, ದಶಕಗಳಿಂದ ಹತ್ತಿಕ್ಕಲ್ಪಟ್ಟ ಸತ್ಯಗಳು ಜನಮಾನಸದಲ್ಲಿ ಚರ್ಚೆಯಾಗುವುದು ಮತ್ತು ನೊಂದ ಕುಟುಂಬಗಳ ಪರವಾಗಿ ಇಡೀ ಸಮಾಜವು ಸಾಂಘಿಕವಾಗಿ ಎದ್ದು ನಿಲ್ಲುವುದಾಗಿದೆ. ಸಂತ್ರಸ್ತರ ನಡುವೆ ಏರ್ಪಡುವ ಸಹೋದರಿತ್ವದ ಬಾಂಧವ್ಯ, ವಿವಿಧ ಸಿದ್ಧಾಂತಗಳ ಮಹಿಳೆಯರು ತಮ್ಮ ಹಕ್ಕು ಮತ್ತು ಘನತೆಗಾಗಿ ತೋರುವ ಐಕ್ಯತೆ ಹಾಗೂ ಅನ್ಯಾಯದ ವಿರುದ್ಧ ಸತತವಾಗಿ ಮೊಳಗುವ ಪ್ರತಿರೋಧದ ಕೂಗು ಕೂಡಾ ನ್ಯಾಯದ ಅತ್ಯಂತ ಶಕ್ತಿಶಾಲಿ ರೂಪಗಳೇ ಆಗಿವೆ. ವ್ಯವಸ್ಥೆಯ ಮರ್ಜಿಗೆ ಒಳಗಾಗದೆ ಅಧಿಕಾರ ಮತ್ತು ಧರ್ಮದ ರಾಜಕೀಯವನ್ನು ಪ್ರಶ್ನಿಸುವ ಧೈರ್ಯವನ್ನು ಜನರಲ್ಲಿ ಬೆಳೆಸುವುದು ಹಾಗೂ ಭವಿಷ್ಯದಲ್ಲಿ ಇಂತಹ ಕ್ರೌರ್ಯಗಳು ಮರುಕಳಿಸದಂತೆ ತಡೆಯುವ ಸಾಮಾಜಿಕ ಜಾಗೃತಿಯನ್ನು ನಿರ್ಮಿಸುವುದೇ ಚಳವಳಿಯ ಪಾಲಿಗೆ ನ್ಯಾಯದ ಮೊದಲ ಮತ್ತು ಭದ್ರವಾದ ಬುನಾದಿಯಾಗಿದೆ.


ಇದನ್ನೂ ಓದಿ: ಧರ್ಮಸ್ಥಳದಲ್ಲಿ 74 ಅಸಹಜ ಸಾವು ಪ್ರಕರಣ : ತನಿಖಾ ವರದಿ ಸಲ್ಲಿಸಲು ರಾಜ್ಯ ಸರ್ಕಾರಕ್ಕೆ ಹೈಕೋರ್ಟ್‌ ನಿರ್ದೇಶನ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ನಿರುದ್ಯೋಗಿ ಯುವಕರನ್ನು ಜಿರಳೆಗಳು ಎಂದ ಸಿಜೆಐ: ಇಂದೆತಾ ಮಾತು ನ್ಯಾಯಮೂರ್ತಿಗಳೇ!

‘ಕೆಲವು ನಿರುದ್ಯೋಗಿ ಯುವಕರು ಜಿರಳೆಗಳಂತೆ ಸಮಾಜವನ್ನು ಕಾಡುತ್ತಾರೆ. ಉದ್ಯೋಗ, ಸ್ಥಾನಮಾನ ಸಿಗದೆ ಇದ್ದಾಗ ಅವರು ಎಲ್ಲರ ಮೇಲೆ ದಾಳಿ ಆರಂಭಿಸುತ್ತಾರೆ’ ಇದು ಯಾವುದೋ ರಾಜಕೀಯ ರ‍್ಯಾಲಿಯ ಭಾಷಣವಲ್ಲ ಅಥವಾ ಟಿವಿ ಚಾನೆಲ್‌ಗಳ ಜಗಳವಲ್ಲ,...

ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ..ಹಕ್ಕುಗಳನ್ನು ಕೇಳಬಾರದಾ?: ಕಾಂಗ್ರೆಸ್‌ಗೆ ಮುಸ್ಲಿಂ ಸಮಾವೇಶ ಪ್ರಶ್ನೆ

"ಮುಸ್ಲಿಮರು ಕೇವಲ ವೋಟು ಹಾಕಿಕೊಂಡೇ ಇರಬೇಕಾ? ಯಾವ ಹಕ್ಕನ್ನೂ ಕೇಳಬಾರದು ಎಂದು ನೀವು (ಕಾಂಗ್ರೆಸ್‌ನವರು) ಬಯಸುತ್ತಿದ್ದೀರಾ?" ಎಂದು ಕರ್ನಾಟಕ ಮುಸ್ಲಿಂ ಸಮಾವೇಶ ಖಾರವಾಗಿ ಪ್ರಶ್ನಿಸಿತು. ಬೆಂಗಳೂರಿನ ಪುರಭವನದಲ್ಲಿ ಇಂದು (ಮೇ 16, ಶನಿವಾರ) ನಡೆದ...

“ಸನಾತನ ಬೇರುಗಳಲ್ಲಿರುವ ಅಸಮಾನತೆಗೆ ದ್ರಾವಿಡ ನೆಲದ ಪ್ರತಿರೋಧ”: ಉದಯನಿಧಿ ಹೇಳಿಕೆ ವಿವಾದವಾಗಿದ್ದೇಗೆ..?

ಸನಾತನ ಸಂಸ್ಥೆಗಳನ್ನು ಮತ್ತು ಸನಾತನ ಧರ್ಮವನ್ನು ನಿರ್ಮೂಲನೆ ಮಾಡುವ ಬಗ್ಗೆ ಉದಯನಿಧಿ ಸ್ಟಾಲಿನ್ ಅವರ ಹೇಳಿಕೆಗಳು ಸದ್ಯ ದೇಶಾದ್ಯಂತ ಸಂಚಲನ ಮೂಡಿಸಿವೆ.  ತಮಿಳುನಾಡು ವಿಧಾನಸಭೆಯಲ್ಲಿ ನೂತನ ಮುಖ್ಯಮಂತ್ರಿಯಾಗಿ ಸಿ. ಜೋಸೆಫ್ ವಿಜಯ್ ಅವರು ಅಧಿಕಾರ...

ರೂ. 170 ಕೋಟಿ ದಂಡ ಪಾವತಿಸಲು ಮುಂದಾದ ಅದಾನಿ : ಏನಿದು ಪ್ರಕರಣ?

ಅಮೆರಿಕದ ನ್ಯಾಯಾಲಯದಲ್ಲಿ ದಾಖಲಾಗಿದ್ದ ವಂಚನೆ ಮತ್ತು ಲಂಚದ ಪ್ರಕರಣಕ್ಕೆ ಸಂಬಂಧಿಸಿದಂತೆ, ಉದ್ಯಮಿ ಗೌತಮ್ ಅದಾನಿ ಮತ್ತು ಅವರ ಸೋದರಳಿಯ ಸಾಗರ್ ಅದಾನಿ ಒಟ್ಟು 18 ಮಿಲಿಯನ್ ಡಾಲರ್ (ಸುಮಾರು 170 ಕೋಟಿ ರೂಪಾಯಿ) ದಂಡ ಪಾವತಿಸಲು ಒಪ್ಪಿಕೊಳ್ಳುವ ಮೂಲಕ...

ಭೋಜಶಾಲಾ-ಕಮಲ್ ಮೌಲಾ ಪ್ರಕರಣದಲ್ಲಿ ಹಿಂದೂಗಳ ಪರ ತೀರ್ಪು…ಮಸೀದಿಯಲ್ಲ ದೇವಸ್ಥಾನವೆಂದ ಕೋರ್ಟ್ : ಏನಿದು ವಿವಾದ?

ಸುಮಾರು 100 ವರ್ಷಗಳ ಹಳೆಯ ವಿವಾದವಾದ ಭೋಜಶಾಲಾ-ಕಮಲ್ ಮೌಲಾ ಮಸೀದಿ ಪ್ರಕರಣದಲ್ಲಿ ಶುಕ್ರವಾರ (ಮೇ 15) ಮಧ್ಯಪ್ರದೇಶ ಹೈಕೋರ್ಟ್ ತೀರ್ಪು ನೀಡಿದ್ದು, ಭೋಜಶಾಲಾದಲ್ಲಿರುವ ಐತಿಹಾಸಿಕ ಸ್ಥಳವು ಸರಸ್ವತಿ ದೇವಿಗೆ ಸಮರ್ಪಿತವಾದ ದೇವಾಲಯವಾಗಿದೆ ಎಂದು...

“ಮಹಿಳಾ ಮೀಸಲಾತಿ ಮುಖವಾಡದಲ್ಲಿ ಡಿಲಿಮಿಟೇಷನ್ ಕುತಂತ್ರ ವಿಫಲ” ಬಿಜೆಪಿಗೆ ದಕ್ಷಿಣ ಭಾರತದ ಎಚ್ಚರಿಕೆ

ಮೋದಿ ನೇತೃತ್ವದ ಕೇಂದ್ರ ಸರ್ಕಾರವು 2026ರ ಏಪ್ರಿಲ್ 16ರಂದು ಸಂಸತ್ತಿನ ವಿಶೇಷ ಅಧಿವೇಶನ ಕರೆದು, ಮಹಿಳಾ ಮೀಸಲಾತಿ ಅನುಷ್ಠಾನವನ್ನು ತ್ವರಿತಗೊಳಿಸುವ ನೆಪವನ್ನು ಮುಂದುಮಾಡಿ ಮೂರು ಮಸೂದೆಗಳನ್ನು ಮಂಡಿಸಿತು. ಇವುಗಳಲ್ಲಿ ಪ್ರಮುಖವಾದ ಸಂವಿಧಾನ (131ನೇ...

ಹೊಸ ಕಾರ್ಮಿಕ ಕಾನೂನು ಶ್ರಮಿಕರ ಮೂಲಭೂತ ಹಕ್ಕುಗಳಿಗೆ ಕತ್ತರಿ!

"8 ಗಂಟೆ ಕೆಲಸ, 8 ಗಂಟೆ ಮನರಂಜನೆ, 8 ಗಂಟೆ ವಿಶ್ರಾಂತಿ" ಎಂಬ ತತ್ವವು ಸುಲಭವಾಗಿ ದೊರೆತದ್ದಲ್ಲ, ಇದು ದೀರ್ಘಕಾಲದ ಹೋರಾಟ, ತ್ಯಾಗ ಮತ್ತು ಏಕತೆಯ ಫಲವಾಗಿದೆ. ಕೆಲಸದ ಹೊರೆ ಅತಿಯಾಗಿ ಇದ್ದ...

ಮನರೇಗಾ ಯಶೋಗಾಥೆ: ಭಾಗ-1 ದಲಿತರು-ಮಹಿಳೆಯರಿಗೆ ಆರ್ಥಿಕ ಭದ್ರತೆ; ಗ್ರಾಮ ಸಬಲೀಕರಣಕ್ಕೆ ಮನರೇಗಾ ಕೊಟ್ಟ ಕೊಡುಗೆ ಅಪಾರ

2001-2004 ರವರೆಗಿನ ನಿರಂತರ ಬರ ಕರ್ನಾಟಕದ ಬಹುತೇಕ ಹಳ್ಳಿಗಳನ್ನು ಕಂಗಾಲಾಗಿಸಿದ್ದಂತೂ ನಿಜ. ಎಲ್ಲ ಕೆರೆಗಳು ಬತ್ತಿಹೋಗಿದ್ದರಿಂದ ದನಕರುಗಳಿಗೆ ನೀರು ಕುಡಿಸಲೂ ಜನ ಅಲೆದಾಡುತ್ತಿದ್ದರು. ಜನರಿಗೆ ಕುಡಿಯುವ ನೀರು ಪೂರೈಕೆ ಸಹ ಆ ಸಂದರ್ಭದಲ್ಲಿ...

ಮಣಿಪುರ: ಬುಡಕಟ್ಟು ಚರ್ಚ್ ನಾಯಕರ ಮೇಲೆ ಉಗ್ರ ದಾಳಿ:  ಹಲವೆಡೆ ಮೇಣದ ಬತ್ತಿಯ ಜೊತೆಗೆ ಶೋಕ ವ್ಯಕ್ತ ಪಡಿಸಿದ ಕುಕಿ ಸಮುದಾಯ 

ಇಂಫಾಲ್: ಮಣಿಪುರದ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೂವರು ಪ್ರಮುಖ ಕುಕಿ ಚರ್ಚ್ ನಾಯಕರನ್ನು ಹೊಂಚು ಹಾಕಿ ದಾಳಿ ನಡೆಸಿ ಕೊಲ್ಲಲಾಗಿದೆ. ಈ ಘಟನೆಯು ರಾಜ್ಯದಲ್ಲಿ ಜನಾಂಗೀಯ ಉದ್ವಿಗ್ನತೆಯನ್ನು ಮತ್ತಷ್ಟು ತೀವ್ರಗೊಳಿಸಿದೆ.  ಮೇ 13ರಂದು ಬೆಳಿಗ್ಗೆ ಚುರಾಚಂದ್‌ಪುರನಲ್ಲಿ...

ಗುಜರಾತ್| ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡಿದ ದಲಿತ ವರನ ಮೇಲೆ ಹಲ್ಲೆ

ಗುಜರಾತ್‌ನ ಮೆಹ್ಸಾನಾ ಜಿಲ್ಲೆಯ ಮಡಿ ಗ್ರಾಮದಲ್ಲಿ ಮದುವೆ ಮೆರವಣಿಗೆಯಲ್ಲಿ ಕುದುರೆ ಸವಾರಿ ಮಾಡುತ್ತಿದ್ದ ದಲಿತ ವರನ ಮೇಲೆ ಮೇಲ್ಜಾತಿಯ ಪುರುಷರ ಗುಂಪೊಂದು ಜಾತಿ ನಿಂದನೆ ಮಾಡಿ ನಿಂದಿಸಿದ್ದಾರೆ ಎಂದು ಆರೋಪಿಸಲಾಗಿದೆ. ಮೇ 10 ರಂದು...