Homeಮುಖಪುಟ’ಬುಲ್ಲಿ ಭಾಯ್' - ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ

’ಬುಲ್ಲಿ ಭಾಯ್’ – ಗುಂಪುದಾಳಿ ಮನಸ್ಥಿತಿ ವರ್ಚುವಲ್ ಸ್ಪೇಸ್‌ನೊಳಗೆ

- Advertisement -
- Advertisement -

“ಇದು ಬಹಳ ದುಃಖದ ಸಂಗತಿ; ಒಬ್ಬ ಮುಸ್ಲಿಂ ಮಹಿಳೆಯಾಗಿರುವ ಕಾರಣಕ್ಕೆ ನೀವು ನಿಮ್ಮ ಹೊಸ ವರ್ಷವನ್ನು ಭಯಾತಂಕಗಳೊಂದಿಗೆ ಮತ್ತು ಅಸಹ್ಯದೊಂದಿಗೆ ಆರಂಭಿಸಬೇಕಾಗಿ ಬಂದಿರುವುದು; ನಾನು ಹೇಳದೆಯೇ ಗೊತ್ತಿರುವ ಸಂಗತಿಯೇನೆಂದರೆ ಹೀಗೆ #SulliDeals ಹೊಸ ರೂಪದ ದಾಳಿಗೆ
ಗುರಿಯಾಗಿರುವವಳು ನಾನೊಬ್ಬಳೇ ಅಲ್ಲ ಎಂದು ಅತ್ಯಂತ ನೋವಿನಿಂದ ತಮ್ಮ ಟ್ವಿಟರ್ ಖಾತೆಯಲ್ಲಿ ಬೆರದುಕೊಂಡಿರುವ ದೆಹಲಿ ಮೂಲದ ಪತ್ರಕರ್ತೆ ಇಸ್ಮತ್ ಅರಾ. ತಮ್ಮ ಚಿತ್ರವನ್ನು ಅತ್ಯಂತ ಅವಮಾನಕರ ರೀತಿಯಲ್ಲಿ ಆನ್‌ಲೈನ್ ಹರಾಜಿಗಿಟ್ಟಿರುವ ’ಬುಲ್ಲಿಬಾಯ್’ (#BulliBai) ಎಂಬ ವೆಬ್‌ಸೈಟ್ ಆಪ್‌ನ ಸ್ಕ್ರೀನ್‌ಶಾಟ್‌ಗಳನ್ನು ತಮ್ಮ ಟ್ವಿಟರ್‌ನಲ್ಲಿ ಹಾಕಿ “ಸ್ನೇಹಿತರೊಬ್ಬರು ಇಂದು ಮುಂಜಾನೆ ಕಳಿಸಿರುವ ಸ್ಕ್ರೀನ್‌ಶಾಟ್ಸ್ ಇವು. ಹೊಸ ವರ್ಷದ ಶುಭಾಶಯಗಳು” ಎಂದು ತೀಕ್ಷ್ಣವಾಗಿ ಬರೆದಿರುವ ಪತ್ರಕರ್ತೆ ಇಸ್ಮತ್ ಅರಾ ಅವರು ಸಾಕಷ್ಟು ದೊಡ್ಡ ಸಂಖ್ಯೆಯ ಆನ್‌ಲೈನ್ ಫಾಲೋವರ್‌ಗಳನ್ನು ಹೊಂದಿದ್ದಾರೆ.

2021ರ ಜುಲೈನಲ್ಲಿ ಇಂತಹದ್ದೆ ಪ್ರಕರಣವೊಂದರಲ್ಲಿ, “ಸುಲ್ಲಿ ಡೀಲ್ಸ್” ಎಂಬ ಆಪ್ ಮೂಲಕ ನೂರಾರು ಮುಸ್ಲಿಂ ಮಹಿಳೆಯರ ವಿರೂಪಗೊಳಿಸಲ್ಪಟ್ಟ ಫೋಟೋಗಳನ್ನು ಪ್ರಕಟಿಸಲಾಗಿತ್ತು. ಮುಸ್ಲಿಂ ಮಹಿಳೆಯರನ್ನು ಅವಮಾನಿಸುವ ಪದವನ್ನೇ ತನ್ನ ಆಪ್‌ನ ಹೆಸರಾಗಿ ಹೊಂದಿದ್ದ ಈ ಆನ್‌ಲೈನ್ ವೆಬ್‌ಸೈಟ್ ಆಗಲೇ ಸಾಕಷ್ಟು ವಿರೋಧ ಎದುರಿಸಿತ್ತು. “ಸುಲ್ಲಿ ಡೀಲ್ಸ್” ವಿರುದ್ಧ ದೂರು ದಾಖಲಾಗಿತ್ತಾದರೂ ಗಂಭೀರವಾದ ಕ್ರಮ ಜರುಗಿರಲಿಲ್ಲ. ಆಗ ಯಾವ ಹೋಸ್ಟಿಂಗ್ ಸೇವಾ ವ್ಯವಸ್ಥೆಯ ಮೂಲಕ ಈ ಆಪ್‌ನ್ನೂ ಅಸ್ತಿತ್ವಕ್ಕೆ ತರಲಾಗಿತ್ತೋ ಅದೇ ರೆಪಾಸಿಟರಿ ಹೋಸ್ಟಿಂಗ್ ಸರ್ವೀಸ್ ’ಗಿಟ್‌ಹಬ್’ (Git Hub) ಮೂಲಕ ಈ ಬಾರಿಯೂ ಈ ಆಪ್ ಚಾಲ್ತಿಗೆ ಬಂದಿರುವುದು ಸಾಮಾಜಿಕ ಜಾಲತಾಣದಲ್ಲಿ ಅಪಾರ ಆಕ್ರೋಶಕ್ಕೆ ಕಾರಣವಾಗಿದೆ.

ಇಸ್ಮತ್ ಅರಾ ಅವರ ದೂರನ್ನಾಧರಿಸಿ ದೆಹಲಿ ಮತ್ತು ಮುಂಬೈ ಪೊಲೀಸರು ಪ್ರಕರಣ ದಾಖಲಿಸಲಾಗಿದ್ದು, IPC153A (ಧರ್ಮದ ಆಧಾರದಲ್ಲಿ ಗುಂಪುಗಳ ನಡುವೆ ದ್ವೇಷ ಬಿತ್ತುವುದು), 153B (ರಾಷ್ಟ್ರದ ಭದ್ರತೆಗೆ ಧಕ್ಕೆ ತರುವುದು), 354A (ಲೈಂಗಿಕ ಹಿಂಸಾಚಾರ), 509 (ಮಹಿಳೆಯ ಘನತೆಗೆ ಹಾನಿ) ಸೆಕ್ಷನ್‌ಗಳನ್ನು ಹಾಕಲಾಗಿದೆ. ಮುಂಬೈ ಪೊಲೀಸರು ಈ ಮೇಲಿನ ಸೆಕ್ಷನ್‌ಗಳೊಂದಿಗೆ IPC295A (ಧಾರ್ಮಿಕ ಭಾವನೆಗಳನ್ನು ಪ್ರಚೋದಿಸುವ ಕೃತ್ಯ) ಮುಂತಾದ ಇನ್ನೂ ಕೆಲವು ಸೆಕ್ಷನ್‌ಗಳನ್ನು ಹಾಕಿದ್ದಾರೆ. (ಈ ಪ್ರಕರಣದಲ್ಲಿ ಮುಂಬೈ ಪೊಲೀಸರು ಬೆಂಗಳೂರು ಮೂಲದ ಒಬ್ಬ ವಿದ್ಯಾರ್ಥಿಯನ್ನು ಬಂಧಿಸಿದ ಬೆಳವಣಿಗೆ ಅನಾವರಣಗೊಳ್ಳುತ್ತಿದೆ). ಮಾಹಿತಿ ಮತ್ತು ತಂತ್ರಜ್ಞಾನ ಕಾಯ್ದೆಯಡಿಯಲ್ಲಿ ಪ್ರಚೋದನಕಾರಿ ಕೃತ್ಯಗಳನ್ನು ಶಿಕ್ಷಿಸುವ ಸೆಕ್ಷನ್‌ಗಳನ್ನು ಈ ಪ್ರಕರಣದಲ್ಲಿ ದಾಖಲಿಸಲಾಗಿದೆ. ಇಷ್ಟೆಲ್ಲ ಆದಮೇಲೆ ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚ್ಛಿದ್ರಕಾರಿ ಕೃತ್ಯದ ವಿರುದ್ಧ ಜಾಲತಾಣಿಗರಿಂದ ವಿಶೇಷವಾಗಿ ಮಹಿಳೆಯರಿಂದ ಅತ್ಯಂತ ತೀವ್ರವಾದ ಟೀಕೆ ಮತ್ತು ಆಕ್ರೋಶ ವ್ಯಕ್ತವಾಗಿದೆ. ಹೀಗೆ ಆಕ್ರೋಶದ ಕಟ್ಟೆಯೊಡೆದಿರುವುದಕ್ಕೂ ನಿರ್ದಿಷ್ಟ ಕಾರಣಗಳಿವೆ.

ಈ ಹಿಂದೆ ಕಳೆದ ವರ್ಷದ ಜುಲೈನಲ್ಲಿಯೇ ಸುಲ್ಲಿ ಡೀಲ್ಸ್ ಎಂಬ ಜಾಲತಾಣ ಇಂತಹ ಹೇಯಕೃತ್ಯ ನಡೆಸಿದಾಗ ಸರ್ಕಾರಗಳ ಪ್ರತಿಕ್ರಿಯೆ ಅತ್ಯಂತ ಪೇಲವವಾಗಿತ್ತು. ಇದು ಕಳೆದೊಂದು ವರ್ಷಕ್ಕಷ್ಟೇ ಸೀಮಿತವಾದ ವಿಚಾರವಾಗಿಯೂ ಉಳಿದಿಲ್ಲ. ಪ್ರಖ್ಯಾತ ಪತ್ರಕರ್ತೆ ರಾಣಾಅಯೂಬ್ ಜಾಲತಾಣಗಳಲ್ಲಿ ಮಹಿಳೆಯರನ್ನು ಗುರಿಯಾಗಿಸುವ ಈ ಹಿಂಸಾಚಾರಕ್ಕೆ ನಿರ್ದಿಷ್ಟವಾದ ಮೂರು ಕಾರಣಗಳನ್ನು ಭಾರತದ ಸಂದರ್ಭದಲ್ಲಿ ಗುರುತಿಸುತ್ತಾರೆ: “ಸಾರ್ವತ್ರಿಕವಾಗಿ ಜಾತಿ, ಧರ್ಮ, ಲಿಂಗದ ಆಧಾರದಲ್ಲಿ ದ್ವೇಷವನ್ನು ಪ್ರಚೋದಿಸುವ ನಿರ್ದಿಷ್ಟ ರಾಜಕೀಯ ಗುಂಪುಗಳು ಪ್ರಜ್ಞಾಪೂರ್ವಕವಾಗಿ ಇಂತಹ ತಂಡಗಳನ್ನೇ ಕಟ್ಟಿ ಕ್ರಿಯೆಗಿಳಿಸಿವೆ. ಎರಡನೆಯದಾಗಿ ಮುಖ್ಯವಾಹಿನಿಯ ಮಾಧ್ಯಮಗಳು ಇಂತಹವನ್ನು ವಿರೋಧಿಸುವ ಮನಸ್ಥಿತಿಯನ್ನು ರೂಪಿಸುವ ಬದಲು ಇನ್ನಷ್ಟು ಪ್ರಕ್ಷುಬ್ಧ ಮನಸ್ಥಿತಿಯನ್ನೇ ರೂಢಿಸಿಕೊಳ್ಳುತ್ತಿವೆ. ಹಾಗೆಯೇ ಮೂರನೆಯದಾಗಿ ಮತ್ತು ಬಹಳ ಮುಖ್ಯವಾಗಿ ಇಂತಹವುಗಳನ್ನು ಶಿಕ್ಷಾರ್ಹ ಅಪರಾಧವೆಂದು ಕಟುವಾದ ಕ್ರಮಕ್ಕಿಳಿಯಬೇಕಾದ ಪ್ರಭುತ್ವಗಳು, ಇವು ಅಲ್ಲೊಂದು ಇಲ್ಲೊಂದು ನಡೆಯುವ ಬಿಡಿ ಘಟನೆಗಳೆಬಂತೆ ನೋಡುತ್ತಿವೆ”. ರಾಣಾ ಅಯೂಬ್ ಸರಿಯಾಗಿಯೇ ಗುರುತಿಸಿರುವಂತೆ ಒಟ್ಟಾರೆಯಾಗಿ ಇವು ನಿಯಂತ್ರಣಕ್ಕೊಳಪಡಿಸಬೇಕಾದ ಗಂಭೀರವಾದ ಅಪರಾಧಗಳೆಂಬ ಮನಸ್ಥಿತಿ ಸಮಾಜದ ಯಾವುದೇ ಹಂತಗಳಲ್ಲೂ ಕಾಣದಂತಾಗಿರುವುದು ನಿಜವಾದ ದುರಂತ.

ಜಾಲತಾಣಗಳಲ್ಲಿ ಹಬ್ಬಿಸಲ್ಪಡುತ್ತಿರುವ ಗುಂಪು-ಗಲಭೆಯ ಮನಸ್ಥಿತಿ

ಹೀಗೆ ಮಹಿಳೆಯರನ್ನು ಅಥವಾ ಇತರ ಅಂಚಿಗೆ ತಳ್ಳಲ್ಪಟ್ಟಿರುವರನ್ನು ಸಮಾಜದಲ್ಲಿ ಹಲವು ರೀತಿಗಳಲ್ಲಿ ದಾಳಿಗೆ ಗುರಿಪಡಿಸುವುದು ಏನನ್ನು ಸೂಚಿಸುತ್ತದೆ? ಸಮಾಜವು ತೀವ್ರವಾಗಿ ಕೋಮು, ಜಾತಿ ವಿದ್ವೇಷದ ಆಧಾರದಲ್ಲಿ ಧ್ರುವೀಕರಣಗೊಂಡು ಪ್ರಕ್ಷುಬ್ಧತೆಯ ಸನ್ನಿವೇಶಗಳಿಗೆ ತಳ್ಳಲ್ಪಟ್ಟಾಗ ರೂಪುಗೊಳ್ಳುವ ವಿಚ್ಛೆದ್ರಕಾರಿ ಗುಂಪು ಗಲಭೆಯ ಮನಸ್ಥಿತಿಯ (Mob mentality) ಪರಿಣಾಮಗಳು ಇವೆಂದು ಸಮಾಜೋ-ಮನೋವೈಜ್ಞಾನಿಕ ದೃಷ್ಟಿಯಿಂದ ಬಹಳ ಹಿಂದೆಯೇ ವಿಶ್ಲೇಷಿಸಲಾಗಿದೆ.

ಇಂತಹದ್ದೇ ಮನಸ್ಥಿತಿಯನ್ನು ಪ್ರಜ್ಞಾಪೂರ್ವಕವಾಗಿ ಫ್ಯಾಸಿಸ್ಟ್ ಇಟಲಿಯಲ್ಲಿ ಮತ್ತು ನಾಜಿ ಜರ್ಮನಿಯಲ್ಲಿ ರೂಪಿಸಲು ಖಚಿತ ಕಾರ್ಯತಂತ್ರವನ್ನು ರೂಪಿಸಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಅವು ಜನಸಮುದಾಯಗಳನ್ನು ತೀವ್ರವಾಗಿ ಒಡೆದು ಧ್ರುವೀಕರಿಸಿ ಲಕ್ಷಾಂತರ ಯಹೂದಿಗಳನ್ನು ಮತ್ತು ಇನ್ನಿತರ ಅಲ್ಪಸಂಖ್ಯಾತ ನಾಗರಿಕರನ್ನು ಜನಾಂಗೀಯ ಹತ್ಯೆಗೊಳಪಡಿಸಿದ ಭೀಕರ ಘಟನೆಗಳನ್ನು ಸಮರ್ಥಿಸುವಂತಹ ಚಿಂತನೆಯನ್ನು ಹುಟ್ಟುಹಾಕಿದ್ದನ್ನು ಹೋಲೋಕಾಸ್ಟ್ ಅಧ್ಯಯನಕಾರರು ಸೇರಿದಂತೆ ಇತಿಹಾಸಕಾರರು ದಾಖಲಿಸಿದ್ದಾರೆ. ಇದು ಕೇವಲ ಸಮರ್ಥನೆಗಳಿಗಷ್ಟೇ ಸೀಮಿತವಾಗದೆ, ನಿರ್ದಿಷ್ಟ ಘಟನೆಗಳಲ್ಲಿ, ಶಾಶ್ವತ ಪ್ರಚೋದಿತ ಮಾನಸಿಕ ಅವಸ್ಥೆಯಲ್ಲಿರುವ ಗುಂಪುಗಳು ತಾವೇ ಹತ್ಯೆಗಿಳಿದಿರುವುದನ್ನು ದಾಖಲಿಸಲಾಗಿದೆ. ಇದು ಕೇವಲ ಎರಡು ಮಹಾಯುದ್ಧಗಳ ಸಂದರ್ಭದಲ್ಲಿ, ಆ ಕಾಲಘಟ್ಟಕ್ಕಷ್ಟೇ ಸೀಮಿತವಾದ ಘಟನೆಗಳಲ್ಲ. 90ರ ದಶಕದ ನಂತರದ ಮತ್ತು ನಿರ್ದಿಷ್ಟವಾಗಿ ಈ ದಶಕದಲ್ಲಿ ಪ್ರಪಂಚದ ಅನೇಕ ದೇಶಗಳಲ್ಲಿ ರೂಪುಗೊಂಡ ನಿರಂಕುಶ ಪ್ರಭುತ್ವಗಳು (ಆಟೋಕ್ರಟಿಕ್) ವಿಚ್ಛಿದ್ರಕಾರಿ ಗುಂಪುಗಳು ಮತ್ತು ಮಾಧ್ಯಮಗಳನ್ನು ಮುಂದಿಟ್ಟುಕೊಂಡು, ದಮನಿತ-ಅಂಚಿಗೊತ್ತಲ್ಪಟ್ಟ-ಅಲ್ಪಸಂಖ್ಯಾತ ಸಮುದಾಯಗಳನ್ನು ಗುರಿಯಾಗಿಸಿ ಮತ್ತು ಇಂತಹವರನ್ನು ಗುರಿಯಾಗಿಸುವುದನ್ನು ವಿರೋಧಿಸುವ ಪುರೋಗಾಮಿ ವ್ಯಕ್ತಿಗಳನ್ನು ಗುರಿಯಾಗಿಸಿ ದಾಳಿ ನಡೆಸುವುದನ್ನು ಸಾಮಾನ್ಯವಾಗಿಸಿಕೊಂಡಿವೆ. ಬ್ರೆಜಿಲ್, ಫಿಲಿಪ್ಪೇನ್ಸ್, ಚಿಲಿ ಮೊದಲಾದ ದೇಶಗಳೂ ಇದಕ್ಕೆ ಸಾಕ್ಷಿಯಾಗಿವೆ. ಇಂತಹ ದಾಳಿಗಳು ಇಂದಿನ ಕಾಲಘಟ್ಟದಲ್ಲಿ ಕೇವಲ ದೈಹಿಕ ದಾಳಿಗಳಾಗಿಯಷ್ಟೇ ಉಳಿದಿಲ್ಲ.

ವರ್ಚುವಲ್ ಸ್ಪೇಸ್ ಮತ್ತು ದಾಳಿಕೋರ ಗುಂಪುಗಲಭೆಕೋರರು

ಭಾರತವೂ ಸೇರಿದಂತೆ ಜಗತ್ತಿನ ಹಲವೆಡೆ ಇಂದು ಗುಂಪುಗಲಭೆಕೋರರ ದಾಳಿಗಳು ದೈಹಿಕ ಸ್ವರೂಪದ ಜೊತೆಜೊತೆಗೆ ವರ್ಚುವಲ್ ಸ್ಪೇಸ್‌ಗೂ ಲಗ್ಗೆಯಿಟ್ಟಿವೆ. ತಮ್ಮನ್ನು ತಾವು ಬಹಳ ಉದಾರವಾದಿ ದೇಶಗಳೆಂದು ಕರೆದುಕೊಳ್ಳುವ ಅಮೆರಿಕ, ಫ್ರಾನ್ಸ್‌ನಂತಹ ದೇಶದ ಖ್ಯಾತ ಮಹಿಳೆಯರೂ ಈ ದಾಳಿಗಳಿಂದ ತಪ್ಪಿಸಿಕೊಳ್ಳಲಾಗಿಲ್ಲ. ಹಿಲರಿ ಕ್ಲಿಂಟನ್ ಚುನಾವಣೆಗಳನ್ನೆದುರಿಸುವ ಸಂದರ್ಭದಲ್ಲಿ ಅವರ ಮೇಲೆ ಇದೇ ರೀತಿಯ ಹೀನವಾದ ದಾಳಿಗಳು ಜಾಲತಾಣಗಳಲ್ಲಿ ನಡೆದದ್ದನ್ನು ನೆನಪಿಸಿಕೊಳ್ಳಬಹುದು. ಹಾಗೆಯೇ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿಗಳಿಗೆ ಹಿಜಾಬ್ ಮತ್ತು ನಖಾಬ್ ಧರಿಸಿರುವ ಕುರಿತು ಫ್ರಾನ್ಸ್ ಸರ್ಕಾರ ಕಾನೂನು ತಿದ್ದುಪಡಿಗಳನ್ನು ಮಾಡಿದಾಗ ಪರವಿರೋಧದ ಗುಂಪುಗಳ ನಡುವೆ ಹೀಗೆ ಗದ್ದಲವಾದದ್ದು ಮತ್ತು ಅಂತಹ ಗದ್ದಲದಲ್ಲಿ ಮಹಿಳೆಯರು ಮುಖ್ಯವಾಗಿ ಮುಸ್ಲಿಂ ಮಹಿಳೆಯರು ತಮ್ಮ ಖಚಿತ ಅಭಿಪ್ರಾಯಗಳಿಗಾಗಿ ದಾಳಿಗೆ ಗುರಿಯಾಗಿದ್ದು ನಡೆದಿತ್ತು. ಖಂಡಿತವಾಗಿ ಇವನ್ನು ಭಾರತದಲ್ಲಿ ಇಂದು ನಡೆಯುತ್ತಿರುವ ವಿಕೃತ ದಾಳಿಗಳಿಗೆ ಹೋಲಿಸಲು ಸಾಧ್ಯವಿಲ್ಲವಾದರೂ ದಾಳಿಕೋರ ಮನಸ್ಥಿತಿ ಎಲ್ಲೆಡೆ ಸಕ್ರಿಯಗೊಳ್ಳುತ್ತಿರುವುದು ಖಚಿತ.

ಭಾರತದ ಜಾಲತಾಣಗಳಲ್ಲೂ ಈ ಪರಿಸ್ಥಿತಿ ಉಂಟಾಗಿ ಬಹಳ ಕಾಲ ಸಂದಿದೆ. ಆದರೆ ದಾಳಿಯ ಗುರಿಗಳು, ಅಂಚಿನ ಸಮುದಾಯದ ಮಹಿಳೆಯರು. ಅವರು ತಮ್ಮ ಹಕ್ಕುಗಳ ಕುರಿತಾಗಿ ಮಾತಾಡುವವರಾದರೆ ಅದರ ತೀವ್ರತೆ ಬಹಳವೇ ಕಠೋರ. ಈ ಬಾರಿಯ ’ಸುಲ್ಲಿ ಡೀಲ್ಸ್’ ಮತ್ತು ’ಬುಲ್ಲಿ ಬಾಯ್’ ಥರದಲ್ಲಿ ಈ ಹಿಂದೆ ಭಾರತದ ಕೋಮುಗಲಭೆಗಳನ್ನು ಪ್ರಶ್ನಿಸಿದವರನ್ನು, ಮೋದಿ ಆಡಳಿತವನ್ನು ಟೀಕಿಸಿದವರನ್ನು ಮಹಿಳೆಯರು ಪುರುಷರೆನ್ನದೆ ಕಾಡಿದ್ದನ್ನು ನೋಡಿದ್ದೇವೆ. ತೀಸ್ತಾ ಸೆಥಲ್‌ವಾಡ್, ಪ್ರಶಾಂತ್ ಭೂಷಣ್ ಮುಂತಾದ ಅತ್ಯಂತ ಹಿರಿಯ ಘನತೆವೆತ್ತ ವಕೀಲರಾಗಲೀ ಸಿದ್ಧಾರ್ಥ್ ವರದರಾಜನ್, ಬರ್ಖಾ ದತ್‌ರಂತಹ ಮುಂಚೂಣಿ ಪತ್ರಕರ್ತರಾಗಲೀ ವಿಮರ್ಶಾತ್ಮಕ ನೋಟವುಳ್ಳ ಬರಹಗಾರರು, ಚಿಂತಕರು, ರಾಜಕಾರಣಿಗಳಾಗಲೀ ಇದಕ್ಕೆ ಹೊರತಲ್ಲ. ಆದರೆ ದಲಿತ, ಅಲ್ಪಸಂಖ್ಯಾತ, ದಮನಿತ ಹಿನ್ನೆಲೆಯ ಮಹಿಳೆಯರಾದರೆ ಅದರ ಪ್ರಮಾಣವನ್ನು ಊಹಿಸಲೂ ಸಾಧ್ಯವಿಲ್ಲ.

’ಸ್ಮ್ಯಾಶ್ ಬ್ರಾಹ್ಮಿನಿಕಲ್ ಪೇಟ್ರಿಯಾರ್ಕಿ’ ಪ್ರಕರಣ

ಟ್ವಿಟರ್‌ನಲ್ಲಿ ದಾಳಿಕೋರ ಮನಸ್ಥಿತಿಯೇ ಮೇಲುಗೈಯಾಗಿರುವುದನ್ನು ಅತ್ಯಂತ ನಿಚ್ಚಳವಾಗಿ ತೋರಿಸಿದ್ದು ’ಬ್ರಾಹ್ಮಣೀಯ ಪಿತೃಪ್ರಧಾನತೆಯನ್ನು ಧ್ವಂಸಗೊಳಿಸಿ’ ಎಂಬ ಸಂದೇಶ ಹೊತ್ತಿದ್ದ ಚಿತ್ರಕೃತಿಯೊಂದರ ಪ್ರಕರಣ. ಟ್ವಿಟರ್‌ನ ಜಾಗತಿಕ ಸಿಇಓ ಆಗಿದ್ದ ಜಾಕ್‌ಡಾರ್ಸೆ ಭಾರತಕ್ಕೆ ಬಂದಿದ್ದಾಗ, ಜಾಲತಾಣಗಳಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯದ ಕುರಿತು ಖ್ಯಾತ ಮಹಿಳಾ ಜಾಲತಾಣಿಗರೊಂದಿಗೆ ಅನೌಪಚಾರಿಕ ಮಾತುಕತೆ ನಡೆಸಿದ್ದರು. ಆ ಭೇಟಿಯ ನೆನಪಿಗೆಂದು ತೆಲುಗು ಸಾಮಾಜಿಕ ಕಾರ್ಯಕರ್ತೆ ಸಂಗಪಲ್ಲಿ ಅರುಣಾರವರು ಮೇಲಿನ ಹೇಳಿಕೆಯಿದ್ದ ದಲಿತ ಕಲಾವಿದೆ ತೇನ್‌ಮೋಳಿ ರಚಿಸಿದ್ದ ಚಿತ್ರವನ್ನು ಕಾಣಿಕೆಯಾಗಿ ಕೊಟ್ಟಿದ್ದರು. ಆ ಚಿತ್ರದೊಂದಿಗೆ ಈ ಎಲ್ಲರೂ ನಿಂತಿದ್ದ ಫೋಟೊ ಟ್ವಿಟರ್‌ನಲ್ಲಿ ಪ್ರಕಟಗೊಳ್ಳುತ್ತಿದ್ದಂತೆ ಕೆಲವೇ ಕ್ಷಣಗಳಲ್ಲಿ ಆರಂಭವಾದ ಜಾತಿವಾದಿ ಗುಂಪುಗಲಭೆಕೋರರ ದಾಳಿಗೆ ಎಷ್ಟು ಭಯಹುಟ್ಟಿಸುವ ಶಕ್ತಿಯಿತ್ತೆಂದರೆ ಬೆದರಿದ ಭಾರತದ ಟ್ವಿಟರ್ ಖಾತೆ ತಕ್ಷಣವೇ ಫೋಟೊ ತೆಗೆದದ್ದು ಮಾತ್ರವಲ್ಲ ಬೇಷರತ್ ಕ್ಷಮೆಯಾಚಿಸಿತು. (ಸಭೆಯಲ್ಲಿ ಪಾಲ್ಗೊಂಡ ಬಹುತೇಕ ಮಹಿಳೆಯರು ಇದನ್ನೂ ವಿರೋಧಿಸಿದ್ದು ಅವರ ಗಟ್ಟಿತನಕ್ಕೆ ಸಾಕ್ಷಿ).

“ಇಂತಹ ಪ್ರಕರಣಗಳನ್ನು ಬಹುತೇಕ ಸಂದರ್ಭಗಳಲ್ಲಿ ದೈಹಿಕ ಹಲ್ಲೆ ಅಥವಾ ದಾಳಿಯಷ್ಟು ಗಂಭೀರ ಎಂದು ಪರಿಗಣಿಸಲಾಗುವುದಿಲ್ಲ. ಎಷ್ಟೋ ಬಾರಿ ಇವು ನಿರುಪದ್ರವಿ (Harmless) ಘಟನೆಗಳೆಂದು ನೋಡುವ ಪರಿಸ್ಥಿತಿ ಆಡಳಿತಗಾರರಲ್ಲಿ ಇದು ಬಹಳ ತಪ್ಪು. ಈ ಬಗೆಯ ಪ್ರಕರಣಗಳು ಜಾಲತಾಣಗಳಲ್ಲಿ ನಡೆದರೂ ಅವು ಸಮಾಜದ ಎಲ್ಲರ ಅಲೋಚನೆಯ ವಿಧಾನವನ್ನು ಪ್ರಭಾವಿಸುತ್ತವೆ. ನಿರ್ದಿಷ್ಟ ಅಭಿಪ್ರಾಯವೊಂದು ರೂಪಿಸುತ್ತವೆ. ಇದು ಸಮಾಜದ ಸಮಷ್ಟಿ ಆರೋಗ್ಯಕ್ಕೆ ಅತ್ಯಂತ ಮಾರಕ” ಎಂದು ಕರ್ನಾಟಕದಲ್ಲಿ ಹಲವು ಉನ್ನತ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದು ಸಾಮಾಜಿಕವಾಗಿಯೂ, ಜಾಲತಾಣಗಳಲ್ಲೂ ಸಕ್ರಿಯರಾಗಿರುವ ನಿವೃತ್ತ ಮಹಿಳಾ ಅಧಿಕಾರಿಯೊಬ್ಬರು ಆಭಿಪ್ರಾಯಪಡುತ್ತಾರೆ.

ಭಾರತ ಮೂಲದ ಪ್ರಸ್ತುತ ಆಸ್ಟ್ರೇಲಿಯಾದಲ್ಲಿರುವ ಶಿಕ್ಷಣ ಶಾಸ್ತ್ರದ ಪ್ರಾಧ್ಯಾಪಕಿ ಡಾ. ನಿಶಾ ತಪ್ಲಿಯಾಲ್‌ರವರು ಜಗತ್ತಿನಾದ್ಯಂತ ಏರಿಕೆಯಾಗುತ್ತಿರುವ ಫ್ಯಾಸಿಸ್ಟ್ ಪ್ರವೃತ್ತಿಯನ್ನು ವಿವರಿಸುತ್ತಾ “ವರ್ಚುವಲ್ ಸ್ಪೇಸ್‌ನ ಗುಂಪುಗಲಭೆಕೋರ ಮನಸ್ಥಿತಿಯಲ್ಲಿ ನಮಗೆ ಎರಡು ಅಪಾಯಕಾರಿ ವಿದ್ಯಮಾನಗಳು ಕಾಣುತ್ತವೆ. ಮೊದಲನೆಯದ್ದು ಸಮಾಜವು ಒಡೆದು ಹೋಗುತ್ತಿರುವ ಮತ್ತು ಆ ಒಡಕನ್ನು ಹೆಚ್ಚಿಸಲು ಜಾಲತಾಣಗಳು ಜನಪ್ರಿಯಗೊಂಡಂತೆ ಅವುಗಳನ್ನು ಬಹಳ ವೇಗವಾಗಿ ಬಳಸಲಾಗುತ್ತಿರುವ ವಿದ್ಯಮಾನ. ಎರಡನೆಯದ್ದು ಸಮಾಜದಲ್ಲಿ ಇಂತಹವನ್ನೂ ವಿರೋಧಿಸುವ ವಾಸ್ತವಿಕ ಚಲನೆಗಳು ಗೈರುಹಾಜರಾಗಿರುತ್ತವೆಂಬ ಆತಂಕದ ವಿದ್ಯಮಾನ. ಈ ಎರಡೂ ಕೂಡಾ ಪ್ರಜ್ಞಾವಂತರನ್ನು ಚಿಂತನೆಗೆ ಹಚ್ಚಬೇಕು” ಎನ್ನುತ್ತಾರೆ.

’ಬುಲ್ಲಿ ಬಾಯ್’ ಪ್ರಕರಣದಲ್ಲಿ ಅತ್ಯಂತ ಅವಮಾನಕರವಾಗಿ ನೂರಾರು ಹೆಚ್ಚು ಖ್ಯಾತನಾಮರಾದ ಮುಸ್ಲಿಂ ಮಹಿಳೆಯರು ದಾಳಿಗೊಳಗಾಗುತ್ತಿರುವುದು ಒಂದೆಡೆಯಾದರೆ, ತಮ್ಮದೇ ಸಮುದಾಯದ ಸಂಪ್ರದಾಯವಾದಿಗಳಿಂದ ’ಮಹಿಳೆಯರಿಗೆ ಜಾಲತಾಣದಲ್ಲಿ ತಲೆವಸ್ತ್ರವಿಲ್ಲದೆ ಮುಖ ತೋರಿಸುವ ಕೆಲಸವೇಕೆ ಬೇಕು’ ಎಂದು ದೂಷಣೆಗೊಳಗಾಗಬೇಕಾದ ದುರಂತ ಮತ್ತೊಂದೆಡೆ ಕಾಣಬರುತ್ತಿರುವುದು ಚಿಂತೆಗೀಡು ಮಾಡುತ್ತದೆ.

ಇಂತಹ ಒಂದೊಂದು ಘಟನೆಗೂ ಸಮಾಜದ ಸ್ವಾಸ್ಥ್ಯ ಬಯಸುವವರ ತೀವ್ರವಾಗಿ ಪ್ರತಿಕ್ರಿಯಿಸುವುದು ಅಗತ್ಯ; ಮಾತ್ರವಲ್ಲದೆ ದಿನನಿತ್ಯದ ದುಡಿಮೆ ಬದುಕಿನ ಜಂಜಾಟದಲ್ಲಿ ಎಷ್ಟೋ ತೆರವಾದ ಹಿಂಸೆಗಳಿಗೆ ಗುರಿಯಾಗುವ ನೊಂದ ಮಹಿಳೆಯರ ಸಂಕಟಗಳಿಂದಲೇ ಆರಂಭಿಸಿ ಮಹಿಳಾ ಹಕ್ಕುಗಳೆಂದರೆ ಪ್ರತಿಯೊಬ್ಬ ಮಹಿಳೆಯ ಹಕ್ಕೂ ಹೌದು ಮತ್ತು ಅವು ನಮ್ಮೆಲ್ಲರಿಗೂ ಸಂಬಂಧಿಸಿದ್ದು ಎಂಬ ಖಚಿತ ಸಂದೇಶ ನೀಡುವ ಹೆಜ್ಜೆಗಳನ್ನಿಡುವುದು ಇನ್ನೂ ಬಹುಮುಖ್ಯ. ದಾಳಿಗೊಳಗಾದವರೊಂದಿಗೆ ಬಂಡೆಕಲ್ಲಿನಂತೆ ನಿಲ್ಲುವ ಇಂತಹ ಸೌಹಾರ್ದತೆಯಿಂದ ಮಾತ್ರ, ಈಗಲ್ಲದಿದ್ದರೂ ಮುಂದಾದರು ಬದಲಾವಣೆ ಕಾಣಬಹುದು

ಮಲ್ಲಿಗೆ ಸಿರಿಮನೆ

ಮಲ್ಲಿಗೆ ಸಿರಿಮನೆ
ಕರ್ನಾಟಕ ಜನಶಕ್ತಿ, ರಾಜ್ಯ ಪ್ರಧಾನ ಕಾರ್ಯದರ್ಶಿ


ಇದನ್ನೂ ಓದಿ: ’ಬುಲ್ಲಿ ಬಾಯ್’ ಪ್ರಕರಣದ ಪ್ರಮುಖ ಆರೋಪಿ ನೀರಜ್ ಬಿಷ್ಣೋಯ್ ಬಂಧನ: ದೆಹಲಿ ಪೊಲೀಸರು

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಗನ್ ತೋರಿಸಿ ಅತ್ಯಾಚಾರ: ಪ್ರಜ್ವಲ್ ರೇವಣ್ಣ ವಿರುದ್ಧ ಜಿಲ್ಲಾ ಪಂಚಾಯತ್ ಮಾಜಿ ಸದಸ್ಯೆ ದೂರು

0
ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿರುದ್ದದ ಮಹಿಳೆಯರ ಲೈಂಗಿಕ ದೌರ್ಜನ್ಯ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದೆ. ಈಗಾಗಲೇ ಹೆಚ್‌.ಡಿ ರೇವಣ್ಣ ಮತ್ತು ಪ್ರಜ್ವಲ್ ರೇವಣ್ಣ ವಿರುದ್ದ ಕೆಲ ಸಂತ್ರಸ್ತೆಯರು ದೂರು ನೀಡಿದ್ದು, ತನಿಖೆ...