Homeಅಂಕಣಗಳುಹಳತು-ವಿವೇಕ; ಮಾಂಗ್ ಮತ್ತು ಮಹಾರರ ನೋವಿನ ಬಗ್ಗೆ

ಹಳತು-ವಿವೇಕ; ಮಾಂಗ್ ಮತ್ತು ಮಹಾರರ ನೋವಿನ ಬಗ್ಗೆ

- Advertisement -
- Advertisement -

ಜೋತಿರಾವ್ ಮತ್ತು ಸಾವಿತ್ರಿಬಾಯಿ ಫುಲೆ ನಡೆಸುತ್ತಿದ್ದ ಶಾಲೆಯಲ್ಲಿ ಮುಕ್ತಾ ಸಾಳ್ವೆ ವಿದ್ಯಾರ್ಥಿನಿಯಾಗಿದ್ದರು. ತಮ್ಮ 14ನೇ ವಯಸ್ಸಿನಲ್ಲಿಯೇ ಮಾಂಗ್ ಮತ್ತು ಮಹಾರ್ ಸಮುದಾಯಗಳು ಎದುರಿಸುತ್ತಿದ್ದ ಕಷ್ಟ-ಕಾರ್ಪಣ್ಯಗಳು ಮತ್ತು ಅದನ್ನು ಪರಿಹರಿಸಲು ಇರುವ ಮಾರ್ಗಗಳ ಬಗ್ಗೆ ಪ್ರಬಂಧವೊಂದನ್ನು ಬರೆದರು. ಅವರ ಪ್ರಬಂಧವು ‘ ಜ್ಞಾನೋದಯ’ ಮರಾಠಿ ಪತ್ರಿಕೆಯಯಲ್ಲಿ ಪ್ರಕಟವಾಗಿತ್ತು.

ದಮನ-ದಬ್ಬಾಳಿಕೆಯನ್ನು ಕಂಡುಂಡ 14 ವರ್ಷದ ದಲಿತ ಬಾಲಕಿಯು ಅದನ್ನು ಹೇಗೆ ಗ್ರಹಿಸಿರಬಹುದು? ಆಕೆ ಅದನ್ನು ಹೇಗೆ ಅರ್ಥೈಸಿಕೊಳ್ಳಬಹುದು ಎಂಬ ದೃಷ್ಟಿಕೋನವನ್ನು ಮುಕ್ತಾ ಸಾಳ್ವೆ ನಮಗೆ ಈ ಪ್ರಬಂಧದಲ್ಲಿ ಕಟ್ಟಿಕೊಡುತ್ತಾರೆ. ಸುಮಾರು 169 ವರ್ಷಗಳ ಹಿಂದೆಯೇ ಮರಾಠಿ ಪಾಕ್ಷಿಕ ‘ ಜ್ಞಾನೋದಯ’ಕ್ಕೆ ಬರೆದ ತಮ್ಮ ಪ್ರಬಂಧದಲ್ಲಿ ಮೊಟ್ಟಮೊದಲ ದಲಿತ ಲೇಖಕಿಯಾದ ಮುಕ್ತಾ ಸಾಳ್ವೆಯವರು ದಬ್ಬಾಳಿಕೆಯನ್ನು ಪ್ರಶ್ನಿಸುತ್ತಾ ಅದರ ವಿರುದ್ಧ ಕಿಡಿ ಕಾರಿದ್ದಾರೆ. ‘ಮಾಂಗ್ ಮಹಾರಾಚ್ಯಾ ದುಃಖವಿಸಾಯಿ’ ಎಂಬ ಶೀರ್ಷಿಕೆಯಡಿ ಎರಡು ಕಂತುಗಳಲ್ಲಿ ಈ ಪ್ರಬಂಧ ಪ್ರಕಟವಾಯಿತು. ಮೊದಲ ಕಂತು ಫೆಬ್ರವರಿ 15, 1855ರಂದು ಮತ್ತು ಎರಡನೇ ಕಂತು ಮಾರ್ಚ್ 1, 1855ರಂದು ಪ್ರಕಟವಾಗಿತ್ತು.

_________________________________

ಭಗವಂತನು ಪ್ರಾಣಿಗಳಿಗಿಂತಲೂ ಕೀಳು ಎಂದು ಪರಿಗಣಿಸಲ್ಪಡುವ ನನ್ನಂತಹ ಅಸ್ಪೃಶ್ಯ ಹುಡುಗಿಯೊಬ್ಬಳ ಹೃದಯದಲ್ಲಿ ನನ್ನ ಜನರ- ಮಹಾರ್ ಮತ್ತು ಮಾಂಗರ ನೋವು-ಸಂಕಟಗಳನ್ನು ಇರಿಸಿದ್ದಾನೆ ಎಂಬುದರ ಅರಿವು ನನ್ನನ್ನು ವಿನಮ್ರಳನ್ನಾಗಿಸಿದೆ. ಎಲ್ಲರ ಸೃಷ್ಟಿಕರ್ತನೇ ನನ್ನ ಹೃದಯದಲ್ಲಿ ಇದನ್ನು ಬಿತ್ತಿದ್ದಾನೆ ಮತ್ತು ಅವನನ್ನು ನೆನೆಯತ್ತ ನಾನು ಪಡೆದುಕೊಂಡಿರುವ ಶಕ್ತಿಯೊಂದಿಗೆ ಈ ಪ್ರಬಂಧ ಬರೆಯಲು ಧೈರ್ಯಮಾಡುತ್ತಿದ್ದೇನೆ. ಆ ಸೃಷ್ಟಿಕರ್ತನೇ ಮಾಂಗರನ್ನು, ಮಹಾರರನ್ನು ಮತ್ತು ಬ್ರಾಹ್ಮಣರನ್ನು ಸೃಷ್ಟಿಸಿದವನು. ನಾನಿದನ್ನು ಬರೆಯಲು ಬುದ್ಧಿ ತುಂಬುತ್ತಿರುವವನೂ ಅವನೇ. ನನ್ನ ಶ್ರಮಕ್ಕೆ ಅವನು ಒಳ್ಳೆಯ ಪ್ರತಿಫಲವನ್ನೇ ನೀಡಿ ಆಶೀರ್ವದಿಸುತ್ತಾನೆ.

ನಮ್ಮನ್ನು ದ್ವೇಷಿಸುವ ಮತ್ತು ತಮ್ಮನ್ನು ತಾವೇ ಅತ್ಯಂತ ಶ್ರೇಷ್ಠರೆಂದು ಭಾವಿಸಿರುವ ಹೊಟ್ಟೆಬಾಕರಾದ ಈ ಬ್ರಾಹ್ಮಣರ ವಾದವನ್ನು ವೇದಗಳನ್ನಾಧರಿಸಿ ನಾವೇನಾದರು ನಿರಾಕರಿಸಲು ಪ್ರಯತ್ನಿಸಿದರೆ, ವೇದಗಳು ಅವರದ್ದೇ ಆಸ್ತಿಯೆಂದೂ, ಅದು ಅವರದ್ದೇ ಸ್ವತ್ತು ಎನ್ನುತ್ತಾರೆ. ವೇದಗಳು ಕೇವಲ ಬ್ರಾಹ್ಮಣರಿಗಾಗಿದ್ದರೆ, ನಿಸ್ಸಂಶಯವಾಗಿ ಅವು ನಮಗಲ್ಲ. ವೇದಗಳು ಕೇವಲ ಬ್ರಾಹ್ಮಣರಿಗೆ ಸೇರಿದ್ದಾಗಿದ್ದರೆ, ನಮಗೆ ಆ ಪುಸ್ತಕಗಳು ಲಭ್ಯವಿಲ್ಲ ಎಂಬುದು ಬಹಿರಂಗ ರಹಸ್ಯ. ನಮ್ಮ ಬಳಿ ಪುಸ್ತಕಗಳಿಲ್ಲ- ನಮಗೆ ಯಾವುದೇ ಧರ್ಮಗಳಿಲ್ಲ. ವೇದಗಳು ಬ್ರಾಹ್ಮಣರಿಗೆ ಮಾತ್ರ ಎಂದಾದರೆ, ನಾವದನ್ನು ಪಾಲಿಸಬೇಕಿಲ್ಲ. ಬ್ರಾಹ್ಮಣರು ಹೇಳುವಂತೆ ವೇದಗಳನ್ನು ಕಣ್ಣೆತ್ತಿ ನೋಡುವುದೇ ಘೋರ ಪಾಪವಾದರೆ, ಅವುಗಳನ್ನು ಅನುಸರಿಸುವುದು ಮೂರ್ಖತನದ ಪರಮಾವಧಿಯಲ್ಲವೇ? ಮುಸ್ಲಿಮರು ತಮ್ಮ ಕುರಾನಿನ ಪ್ರಕಾರ ತಮ್ಮ ಜೀವನವನ್ನು ನಡೆಸುತ್ತಾರೆ. ಇಂಗ್ಲಿಷರು ಬೈಬಲನ್ನು ಅನುಸರಿಸುತ್ತಾರೆ. ಬ್ರಾಹ್ಮಣರಿಗೆ ಅವರದ್ದೇ ಆದ ವೇದಗಳಿವೆ. ಅವರಿಗೆ ತಪ್ಪೋ-ಒಪ್ಪೋ ಆದ ಸ್ವಂತ ಧರ್ಮ ಇರುವುದಕ್ಕೆ ಅವರೆಲ್ಲರೂ ಅದನ್ನು ಆಚರಿಸುತ್ತಾರೆ. ಆದ್ದರಿಂದ, ಯಾವುದೇ ಧರ್ಮವಿಲ್ಲದೆ ನಮಗಿಂತ ಅವರು ಸ್ವಲ್ಪ ಹೆಚ್ಚೇ ಸಂತೋಷವಾಗಿದ್ದಾರೆ. ಓ ದೇವರೇ, ಹೇಳು ನಮ್ಮ ಧರ್ಮ ಯಾವುದು? ಓ ದೇವರೇ, ನಿನ್ನ ನಿಜ ಧರ್ಮವ ನಮಗೆ ಬೋಧಿಸು. ನಾವೆಲ್ಲರೂ ಅದರಂತೆಯೇ ನಮ್ಮ ಜೀವನ ನಡೆಸುತ್ತೇವೆ. ಯಾವ ಧರ್ಮದಿಂದ ಕೆಲವೇ ಕೆಲವರು ಸವಲತ್ತುಗಳನ್ನು ಪಡೆದು ಉಳಿದವರು ವಂಚಿತರಾಗುವರೋ ಆ ಧರ್ಮಗಳು ನಾಶವಾಗಲಿ ಮತ್ತು ಅಂತಹ [ತಾರತಮ್ಯದ] ಧರ್ಮದ ಬಗ್ಗೆ ಹೆಮ್ಮೆಯು ನಮ್ಮ ಮನಸ್ಸಿನಲ್ಲಿ ಎಂದಿಗೂ ಬೇರೂರದಿರಲಿ.

ಬಡ ಮಾಂಗರು ಮತ್ತು ಮಹಾರರಾದ ನಮ್ಮನ್ನು ಈ ಜನರು ನಮ್ಮ ಸ್ವಂತ ನೆಲದಿಂದಲೇ ಒಕ್ಕಲೆಬ್ಬಿಸಿ, ದೊಡ್ಡ ಕಟ್ಟಡಗಳನ್ನು ನಿರ್ಮಿಸಲು ಆಕ್ರಮಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಮಾಂಗರು ಮತ್ತು ಮಹಾರರು ಕೆಂಪುಸೀಸ ಮಿಶ್ರಿತ ಎಣ್ಣೆಯನ್ನು ಕುಡಿಯುವಂತೆ ಮಾಡಿ, ನಮ್ಮ ಜನರನ್ನು ಶವಗಳ ಮೇಲೆ ಭವ್ಯಕಟ್ಟಡಗಳ ನಿರ್ಮಿಸಿ, ನಮ್ಮ ಬಡಜನರ ಇಡೀ ಪೀಳಿಗೆ-ಪೀಳಿಗೆಯನ್ನೇ ಅಳಿಸಿಹಾಕಿದ್ದಾರೆ. ಬ್ರಾಹ್ಮಣರು ನಮ್ಮನ್ನು ಕೀಳುಮಟ್ಟಕ್ಕಿಳಿಸಿದ್ದಾರೆಂದರೆ; ಅವರು ನಮ್ಮಂತಹ ಜನರನ್ನು ಹಸು-ಎಮ್ಮೆಗಳಿಗಿಂತಲೂ ಕಡೆಯಾಗಿ ಕಾಣುತ್ತಾರೆ. ಬಾಜಿರಾವ್ ಪೇಶ್ವೆಯ ಆಳ್ವಿಕೆಯಲ್ಲಿ ಅವರು ನಮ್ಮನ್ನು ಕತ್ತೆಗಳಿಗಿಂತಲೂ ಕೀಳಾಗಿ ಕಾಣಲಿಲ್ಲವೇ? ನೀವು ಕತ್ತೆಯೊಂದನ್ನು ಬಡಿದರು ಕೂಡ ಅದರ ಯಜಮಾನ ಸಿಡಿದೇಳುತ್ತಾನೆ. ಆದರೆ, ಮಹಾರರು ಮತ್ತು ಮಾಂಗರನ್ನು ದಿನನಿತ್ಯ ಥಳಿಸಿದರೂ ಯಾರು ತಾನೇ ಕೇಳುತ್ತಿದ್ದರು? ಬಾಜಿರಾವನ ಆಳ್ವಿಕೆಯಲ್ಲಿ ವ್ಯಾಯಾಮಶಾಲೆಯ ಮುಂದೆ ಮಾಂಗ್ ಅಥವಾ ಮಹಾರರು ಯಾರಾದರೂ ಹಾದುಹೋದರೆ, ಅಂಥವರ ತಲೆ ಕತ್ತರಿಸಿ, ತಮ್ಮ ಕತ್ತಿಗಳನ್ನೇ ಬ್ಯಾಟುಗಳನ್ನಾಗಿಸಿ ಅವರ ತಲೆಯನ್ನೇ ಚೆಂಡನ್ನಾಗಿಸಿ ಮೈದಾನದಲ್ಲಿ “ಬ್ಯಾಟ್ ಆಂಡ್ ಬಾಲ್” ಆಡುತ್ತಿದ್ದರು. ಅವರ ಮನೆಬಾಗಿಲ ಮುಂದೆ ಹಾದು ಹೋಗುವುದಕ್ಕೇ ಶಿಕ್ಷೆ ಅನುಭವಿಸಬೇಕಿದ್ದಾಗ, ಶಿಕ್ಷಣ ಪಡೆಯುವ ಅಥವಾ ಓದು-ಬರಹ ಕಲಿಯುವ ಸ್ವಾತಂತ್ರ್ಯವಾದರೂ ಎಲ್ಲಿತ್ತು? ಮಾಂಗ್ ಅಥವಾ ಮಹಾರರು ಯಾರಾದರೂ ಓದು-ಬರಹ ಕಲಿತು, ಆ ವಿಷಯವೇನಾದರೂ ಬಾಜಿರಾವನಿಗೆ ತಿಳಿದರೆ, “ಮಾಂಗ್ ಅಥವಾ ಮಹಾರನೊಬ್ಬ ಶಿಕ್ಷಿತನಾದನೆಂದರೆ ಬ್ರಾಹ್ಮಣನ ಕೆಲಸವನ್ನು ಕಸಿದುಕೊಳ್ಳುವುದಕ್ಕೆ ಸಮ” ಎನ್ನುತ್ತಿದ್ದ. “ಶಿಕ್ಷಿತರಾಗಲು ಅವರಿಗೆಷ್ಟು ಧೈರ್ಯ? ಬ್ರಾಹ್ಮಣರು ತಮ್ಮ ಕೆಲಸಗಳನ್ನೆಲ್ಲಾ ಈ ಅಸ್ಪೃಶ್ಯರಿಗೆ ವಹಿಸಿ, ಅವರು ಹಿಡಿಯುವ ಕ್ಷೌರದ ಪೆಟ್ಟಿಗಗಳ ಹಿಡಿದು ವಿಧವೆಯರ ತಲೆ ಬೋಳಿಸಿಕೊಂಡು ತಿರುಗುತ್ತಾರೆಂದು ಈ ಅಸ್ಪೃಶ್ಯರು ತಿಳಿದಿದ್ದಾರೆಯೇ?” ಎಂದು ನಿಂದಿಸಿ ಅವರನ್ನು ಶಿಕ್ಷಿಸುತ್ತಿದ್ದ.

ಇದನ್ನೂ ಓದಿ: ಅಸ್ಪೃಶ್ಯ, ಅಸಹಾಯಕ ಲೋಕಕ್ಕೆ ಅಕ್ಷರ ಕಲಿಸಿದ ಸಾವಿತ್ರಮ್ಮನನ್ನೇ ಪಠ್ಯಪುಸ್ತಕದಿಂದ ಹೊರಗಿಟ್ಟ ಕಾಲದಲ್ಲಿ ಒಂದು ಸ್ಮರಣೆ

ಎರಡನೆಯದಾಗಿ, ನಮಗೆ ಕಲಿಕೆಯನ್ನು ನಿಷೇಧಿಸಿದ ಮಾತ್ರಕ್ಕೆ ಈ ಬ್ರಾಹ್ಮಣರು ತೃಪ್ತರಾದರೆ? ಖಂಡಿತ ಇಲ್ಲ. ಕಾಶಿಗೆ ಹೋದ ಬಾಜಿರಾವನು ಅವಮಾನಕರ ರೀತಿಯಲ್ಲಿ ಸಾವನ್ನಪ್ಪಿದ. ಆದರೆ, ಮಾಂಗರಷ್ಟೇ ಅಸ್ಪೃಶ್ಯರಾದ ಮಹಾರರು ಕೂಡ ಇಲ್ಲಿ ಮಾಂಗರೊಂದಿಗಿನ ಒಡನಾಡುವುದನ್ನು ತಪ್ಪಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಬ್ರಾಹ್ಮಣ್ಯದ ಕೆಲ ಲಕ್ಷಣಗಳನ್ನು ಮೈಗೂಡಿಸಿಕೊಂಡಿರುವ ಅವರು ತಮ್ಮನ್ನು ಮಾಂಗರಿಗಿಂತ ಶ್ರೇಷ್ಠರೆಂದು ಪರಿಗಣಿಸುತ್ತಾರೆ- ಮಾಂಗರ ನೆರಳು ಅವರ ಮೇಲೆ ಬಿದ್ದರೆ ಅವರೂ ಕಲುಷಿತರಾಗುತ್ತಾರೆ! ಅಸ್ಪೃಶ್ಯರು ಎಂಬ ಹಣೆಪಟ್ಟಿ ಹೊತ್ತ ಕಾರಣಕ್ಕೆ ನಾವು ಇಷ್ಟೆಲ್ಲಾ ನೋವು ಅನುಭವಿಸುತ್ತಿರುವಾಗ, ಮಡಿಬಟ್ಟೆ ಧರಿಸಿ ತಮ್ಮ ಶ್ರೇಷ್ಠತೆಯನ್ನು ಸಾರುತ್ತಾ ತಿರುಗಾಡುವ ಕಲ್ಲುಹೃದಯದ ಬ್ರಾಹ್ಮಣರು ನಮ್ಮ ಬಗ್ಗೆ ಎಂದಾದರೂ ಕರುಣೆ ತೋರುವರೆ? ಅಸ್ಪೃಶ್ಯರೆಂಬ ಕಾರಣಕ್ಕೆ ನಮಗೆ ಯಾರೂ ಉದ್ಯೋಗ ಕೊಡುವುದಿಲ್ಲ. ಕೆಲಸವಿಲ್ಲ ಎಂದರೆ ಹಣವಿಲ್ಲ. ಬಡತನವನ್ನು ನಾವು ಸಹಿಸಿಕೊಳ್ಳಬೇಕಾಗಿದೆ. ಓ ಕಲಿತ ಪಂಡಿತರೇ, ನಿಮ್ಮ ಸ್ವಾರ್ಥಿ ಪುರೋಹಿತಶಾಹಿಯನ್ನು ಸಾಕುಮಾಡಿ. ನಿಮ್ಮ ಟೊಳ್ಳು ಉಪದೇಶಗಳ ನಿಲ್ಲಿಸಿ ಮತ್ತು ನಾನು ಹೇಳುವುದನ್ನು ಆಲಿಸಿ. ನಮ್ಮ ಹೆಂಗಸರು ಮಕ್ಕಳ ಹೆರುವಾಗ ಅವರ ನೆತ್ತಿಯ ಮೇಲೆ ಒಂದು ಸೂರು ಕೂಡ ಇರುವುದಿಲ್ಲ. ಮಳೆಯಲ್ಲಿ ಚಳಿಯಲ್ಲಿ ಅವರು ಹೇಗೆಲ್ಲಾ ನರಳುತ್ತಾರೆ! ನಿಮ್ಮ ಸ್ವಂತ ಅನುಭವಗಳಿಂದಲೇ ಅದನ್ನು ಅರ್ಥಮಾಡಿಕೊಳ್ಳಲು ಪ್ರಯತ್ನಿಸಿ. ಹೆರಿಗೆಯ ಸಮಯದಲ್ಲಿ ಅವರಿಗೇನಾದರೂ ಕಾಯಿಲೆಗಳು ಬಂತೆಂದರೆ, ವೈದ್ಯರಿಗೆ ಕೊಡಲು ಅಥವಾ ಔಷಧಿಗಳ ಖರ್ಚಿಗೆ ಹಣವೆಲ್ಲಿಂದ ಬರಬೇಕು? ಇಂತಹವರಿಗೆ ಉಚಿತವಾಗಿ ಚಿಕಿತ್ಸೆ ಕೊಡುವಷ್ಟು ಮಾನವೀಯತೆ ಹೊಂದಿರುವ ವೈದ್ಯನೊಬ್ಬ ನಿಮ್ಮ ನಡುವೆ ಇದ್ದಾನೆಯೇ?

ಬ್ರಾಹ್ಮಣರ ಮಕ್ಕಳು ತಮ್ಮ ಮೇಲೆ ಕಲ್ಲು ತೂರಿ ಎಷ್ಟೇ ಗಾಯಗೊಳಿಸಿದರೂ ಸಹ ಮಾಂಗ್ ಮತ್ತು ಮಹಾರರ ಮಕ್ಕಳು ದೂರು ನೀಡುವ ಧೈರ್ಯ ಮಾಡುವುದಿಲ್ಲ. ಕೊನೆಗೆ ತಂಗಳನ್ನು ಬೇಡಲು ಬ್ರಾಹ್ಮಣರ ಮನೆಗಳಿಗೇ ಹೋಗಬೇಕು ಎಂದು ತಿಳಿದಿರುವ ಅವರು ಮೌನವಾಗೇ ನರಳುತ್ತಾರೆ. ಅಯ್ಯೋ! ದೇವರೆ! ಇದೆಂತಾ ಸಂಕಟ! ಈ ಅನ್ಯಾಯಗಳ ಬಗ್ಗೆ ಹೆಚ್ಚು ಬರೆಯಲು ಹೋದರೆ ನಾನು ಕಣ್ಣೀರಲ್ಲೇ ಮುಳುಗುವೆ. ಇಂತಹ ದಬ್ಬಾಳಿಕೆಗಳಿಂದಾಗಿ, ಕರುಣಾಮಯಿಯಾದ ಆ ದೇವರು ನಮಗಾಗಿ ದಯಾಮಯಿ ಬ್ರಿಟಿಷ್ ಸರ್ಕಾರವನ್ನು ದಯಪಾಲಿಸಿದ್ದಾನೆ, ಈ ದಯಾಮಯಿ ಬ್ರಿಟಿಷ್ ಸರ್ಕಾರದಲ್ಲಿ ನಮ್ಮ ನೋವುಗಳು ಹೇಗೆ ಕಡಿಮೆಯಾಗಿದೆ ಎಂದು ನೋಡೋಣ.

ಈ ಹಿಂದೆ ಗೋಖಲೆ, ಆಪಟೆ, ತ್ರಿಮ್ಕಾಜಿ, ಅಂಧಾಳ, ಪನ್ಸಾರ, ಕಾಳೆ, ಬೆಹ್ರೆ, ಇತ್ಯಾದಿ (ಎಲ್ಲವೂ ಬ್ರಾಹ್ಮಣ ಉಪನಾಮಗಳೇ) ತಮ್ಮ ಮನೆಯಲ್ಲಿದ್ದ ಇಲಿಗಳನ್ನು ಕೊಂದು ಶೌರ್ಯತ್ವ ಪ್ರದರ್ಶಿಸಿದವರು ವಿನಾಕಾರಣ, ತಮಗನಿಸಿದಂತೆ ನಮ್ಮನ್ನು ಹಿಂಸಿಸಿದರು. ಗರ್ಭಿಣಿಯರನ್ನು ಸಹ ಅವರು ಬಿಡುತ್ತಿರಲಿಲ್ಲ. ಇವೆಲ್ಲ ಈಗ ನಿಂತಿದೆ. ಪುಣೆಯ ಪೇಶ್ವೆಗಳ ಆಳ್ವಿಕೆಯಲ್ಲಿ ಮಹಾರರು ಮತ್ತು ಮಾಂಗರಿಗೆ ನೀಡಲಾಗುತ್ತಿದ್ದ ಕಿರುಕುಳಗಳು ಚಿತ್ರಹಿಂಸೆಗಳು ನಿಂತಿದೆ. ಈಗ, ಕೋಟೆ- ಮಹಲುಗಳ ಅಡಿಪಾಯಕ್ಕೆ ನಡೆಯುತ್ತಿದ್ದ ನರಬಲಿಗಳು ನಿಂತಿದೆ- ಈಗ ಯಾರೂ ನಮ್ಮನ್ನ ಜೀವಂತವಾಗಿ ಹೂಳುವುದಿಲ್ಲ. ಈಗ, ನಮ್ಮ ಜನಸಂಖ್ಯೆಯು ಬೆಳೆಯುತ್ತಿದೆ. ಹಿಂದೆ, ಮಹಾರ್ ಅಥವಾ ಮಾಂಗರು ಯಾರಾದರೂ ಒಳ್ಳಯ ಬಟ್ಟೆ ತೊಟ್ಟುಬಿಟ್ಟರೆ ಸಾಕು ಬ್ರಾಹ್ಮಣರು ಮಾತ್ರ ಅಂತಹ ಬಟ್ಟೆಗಳ ಧರಿಸಬೇಕು ಎನ್ನುತ್ತಿದ್ದರು. ನಾವು ಒಳ್ಳೆ ಬಟ್ಟೆ ತೊಟ್ಟಿರುವುದು ಕಂಡರೆ ಸಾಕು ನಾವದನ್ನು ಕದ್ದಿದ್ದೇವೆ ಎಂದು ಆರೋಪಿಸಲಾಗುತ್ತಿತ್ತು. ಅಸ್ಪೃಶ್ಯರ ಮೈಯ ಸುತ್ತ ಬಟ್ಟೆಯಿದ್ದರೆ ಸಾಕು, ಅವರ ಧರ್ಮವು ಕಲುಷಿತವಾಗುವ ಅಪಾಯವಿತ್ತು; ಅದಕ್ಕೆ ಅಂತಹವರನ್ನು ಮರಕ್ಕೆ ಕಟ್ಟಿ ಶಿಕ್ಷಿಸುತ್ತಿದ್ದರು. ಆದರೆ, ಬ್ರಿಟಿಷರ ಆಳ್ವಿಕೆಯಲ್ಲಿ, ಹಣವಿರುವ ಯಾರಾದರೂ ಬಟ್ಟೆ ಖರೀದಿಸಿ ಅದನ್ನು ತೊಡಬಹುದು. ಈ ಹಿಂದೆ, ಮೇಲ್ಜಾತಿಗಳ ವಿರೋಧಿಸುವ ತಪ್ಪೆಸಗಿದರೆ ಅಸ್ಪೃಶ್ಯರ ಶಿರಚ್ಛೇದವಾಗುತ್ತಿತ್ತು- ಈಗ ಅದು ನಿಂತಿದೆ. ಮಿತಿಮೀರಿದ ಮತ್ತು ಶೋಷಿಸುವ ತೆರಿಗೆಗಳು ನಿಂತಿವೆ. ಕೆಲವೆಡೆ ಅಸ್ಪೃಶ್ಯತೆಯ ಆಚರಣೆ ನಿಂತಿವೆ. ಆಟದ ಮೈದಾನದಲ್ಲಿ ನಡೆಯುತ್ತಿದ್ದ ಕೊಲೆಗಳು ನಿಂತಿವೆ. ನಾವೀಗೆ ಸಂತೆ-ಮಾರುಕಟ್ಟೆಗೆಲ್ಲಾ ಭೇಟಿ ನೀಡಬಹುದು.

ನಿಷ್ಪಕ್ಷಪಾತ ಬ್ರಿಟಿಷರ ಆಳ್ವಿಕೆಯಲ್ಲಿ ಇಂತಹ ಹಲವು ವಿದ್ಯಮಾನಗಳು ನಡೆದಿವೆ. ನಾನಿದನ್ನು ಬರೆಯುವ ಹೊತ್ತಿಗೆ, ಮೇಲೆ ತಿಳಿಸಿರುವಂತೆ ನಮ್ಮನ್ನು ಕಸಕ್ಕಿಂತಲೂ ಕಡೆಯಾಗಿ ನಡೆಸಿಕೊಳ್ಳುತ್ತಿದ್ದ ಬ್ರಾಹ್ಮಣರೀಗ ನಮ್ಮನ್ನು ಬಂಧನಗಳಿಂದ ಮುಕ್ತಗೊಳಿಸಲು ಬಯಸುತ್ತಿದ್ದಾರೆ ಎಂಬುದು ಆಶ್ಚರ್ಯವಾಗುತ್ತಿದೆ. ಹಾಗೆಂದಮಾತ್ರಕ್ಕೆ ಎಲ್ಲ ಬ್ರಾಹ್ಮಣರೂ ಅಲ್ಲ. ಸೈತಾನನ ಪ್ರಭಾವಕ್ಕೊಳಗಾದವರು ಮೊದಲಿನಂತೆಯೇ ನಮ್ಮನ್ನು ದ್ವೇಷಿಸುತ್ತಾರೆ. ಅವರುಗಳು ನಮ್ಮ ವಿಮೋಚನೆಗಾಗಿ ಶ್ರಮಿಸುತ್ತಿರುವ ಬ್ರಾಹ್ಮಣರನ್ನು ಗುರಿಯಾಗಿಸಿ ಬಹಿಷ್ಕರಿಸುತ್ತಾರೆ. ಕೆಲವು ಉದಾತ್ತರು ಮಹಾರರು ಮತ್ತು ಮಾಂಗರಿಗಾಗಿ ಶಾಲೆಗಳನ್ನು ಪ್ರಾರಂಭಿಸಿದ್ದಾರೆ ಮತ್ತು ಅಂತಹ ಶಾಲೆಗಳನ್ನು ಕರುಣಾಮಯಿ ಬ್ರಿಟಿಷ್ ಸರ್ಕಾರವು ಬೆಂಬಲಿಸುತ್ತಿದೆ. ಓ ಮಹಾರರೇ ಮತ್ತು ಮಾಂಗರೇ, ನೀವು ಬಡವರು ಮತ್ತು ನೀವು ರೋಗಕ್ಕೊಳಗಾಗಿದ್ದೀರಿ. ನಿಮಗೆ ಚಿಕಿತ್ಸೆ ನೀಡಿ ನಿಮ್ಮನ್ನು ಗುಣಪಡಿಸುವುದು ಜ್ಞಾನವೆಂಬ ಔಷಧಿ ಮಾತ್ರ. ಇದು ನಿಮ್ಮನ್ನು ಮೂಢನಂಬಿಕೆಗಳಿಂದ ದೂರಾಗಿಸುತ್ತದೆ. ನೀವು ನೀತಿವಂತರೂ ಪ್ರಾಮಾಣಿಕರೂ ಆಗುವಿರಿ. ಇದರಿಂದ ನಿಮ್ಮ ಶೋಷಣೆ ನಿಲ್ಲುತ್ತದೆ. ನಿಮ್ಮನ್ನು ಪ್ರಾಣಿಗಳಂತೆ ನಡೆಸಿಕೊಳ್ಳುವ ಜನ ಇನ್ನು ಮುಂದೆ ನಿಮ್ಮನ್ನು ಹಾಗೆ ನಡೆಸಿಕೊಳ್ಳುವ ಧೈರ್ಯ ಮಾಡುವುದಿಲ್ಲ. ಆದ್ದರಿಂದ, ದಯವಿಟ್ಟು ಕಷ್ಟಪಟ್ಟು ಓದಿ. ಶಿಕ್ಷಣ ಪಡೆದು ಒಳ್ಳೆಯ ಮನುಷ್ಯರಾಗಿ. ಆದರೆ ಇದನ್ನು ನಾನು ಸಾಬೀತುಪಡಿಸಲು ಸಹ ಸಾಧ್ಯವಿಲ್ಲ. ಏಕೆಂದರೆ ಉದಾಹರಣೆಗೆ, ಉತ್ತಮ ಶಿಕ್ಷಣ ಪಡೆದವರೇ ಕೆಲವೊಮ್ಮೆ ಕೆಟ್ಟ ಕೆಲಸಗಳ ಮಾಡಿ ನಮ್ಮನ್ನು ದಂಗುಬಡಿಸುತ್ತಾರೆ

ಕನ್ನಡಕ್ಕೆ: ಶಶಾಂಕ್ ಎಸ್.ಆರ್

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

FACT CHECK : ಗುಜರಾತ್‌ನ ಅದಾನಿ ಬಂದರಿನ ಮೂಲಕ ಹಸುಗಳನ್ನು ಅರಬ್‌ ದೇಶಕ್ಕೆ ಕಳಿಸಲಾಗುತ್ತಿದೆ...

0
ಗುಜರಾತ್‌ನ ಅದಾನಿ ಬಂದರಿನ ಮೂಲಕ ಟ್ರಕ್‌ಗಳಲ್ಲಿ ಸಾವಿರಾರು ಹಸುಗಳನ್ನು ತುಂಬಿ ವಧೆಗಾಗಿ ಅರಬ್‌ ದೇಶಗಳಿಗೆ ಕಳಿಸಲಾಗುತ್ತಿದೆ ಎಂಬ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿನಾಯಕ್ ಕಟ್ಟಿಕ್ಕರ ಕನ್ನಡಿಗ ಎಂಬ ಫೇಸ್‌ಬುಕ್ ಬಳಕೆದಾರ...