Homeಮುಖಪುಟಆಪನ್‌ಹೈಮರ್ ಸಿನಿಮಾದಲ್ಲಿ ಗೀತೆ

ಆಪನ್‌ಹೈಮರ್ ಸಿನಿಮಾದಲ್ಲಿ ಗೀತೆ

- Advertisement -
- Advertisement -

ಕಳೆದ ಶನಿವಾರ ಮೈಸೂರಿನ ಕಲಾಮಂದಿರದಲ್ಲಿ ಡಾ.ಹೆಚ್.ಸಿ ಮಹದೇವಪ್ಪನವರ ’ಸಂವಿಧಾನದ ನೆರಳಿನಲ್ಲಿ’ ಪುಸ್ತಕದ ಬಿಡುಗಡೆಯಿತ್ತು. ಇದರ ನಿರೂಪಕ ರಮೇಶ್ ಹೆಚ್.ಕೆ; ಈ ಪುಟ್ಟ ಹುಡುಗ ಶಿವಮೊಗ್ಗದಲ್ಲಿದ್ದಾಗ ನಮ್ಮ ನಾಟಕದ ಟೀಮಿನಲ್ಲಿದ್ದ. ಈಗ ನಮ್ಮ ನಡುವೆ ಲೋಹಿಯಾರನ್ನು ನೆನಪಿಸುವ ಮಹದೇವಪ್ಪನವರ ಜೊತೆಗಿದ್ದಾನೆ. ನಮ್ಮ ನಾಡಿನ ಇತ್ತೀಚಿನ ಎಲ್ಲಾ ಕ್ಷೋಭೆ ಮತ್ತು ಅನಾಹುತಗಳಿಗೂ ಮಹದೇವಪ್ಪನವರು ಕರಾರುವಕ್ಕಾಗಿ ಪ್ರತಿಕ್ರಿಯಿಸಿದ್ದಾರೆ. ಆ ಪ್ರತಿಕ್ರಿಯೆಗಳ ದಾಖಲೆಯೇ ’ಸಂವಿಧಾನದ ನೆರಳಲ್ಲಿ’ ಎಂಬ ಪುಸ್ತಕ. ನಮ್ಮ ನಡುವೆ ಎಲ್ಲ ವಿಷಯಗಳನ್ನು ಚರ್ಚಿಸಬಲ್ಲ ರಾಜಕಾರಣಿಯೊಬ್ಬರಿದ್ದಾರೆ ಎಂಬುದೇ ನಮಗೆ ಹೆಮ್ಮೆಯ ಸಂಗತಿ. ಏಕೆಂದರೆ ಈಚಿನ ರಾಜಕಾರಣಿಗಳ ಜೊತೆ ಏನು ಮಾತನಾಡಬೇಕೆಂಬುದೇ ತೋಚದಾಗಿದೆ. ಇದೊಂದು ರೀತಿ ನಮ್ಮ ರಾಜಕಾರಣದ ಮತ್ತು ಸಂಸ್ಕೃತಿ, ಭಾಷೆಯ ಅವನತಿಯ ಕಾಲದಂತೆಯೂ ಕಾಣುತ್ತಿದೆ. ಇಂತಹ ಸಮಯದಲ್ಲಿ ಮಹದೇವಪ್ಪನಂತವರು ಇದ್ದಾರಲ್ಲಾ ಎಂದು ಒಂದು ಮಟ್ಟದ ಸಮಾಧಾನವಾಗುತ್ತದೆ.

ಕಲಾಮಂದಿರಕ್ಕೆ ಹೋಗುತ್ತಿದ್ದಂತೆ ಬಾಗಿಲ ಬಳಿ ಅಂಬೇಡ್ಕರ್ ವಿಗ್ರಹ ನಿಲ್ಲಿಸಿದ್ದರು. ಖುಷಿಯಾಗಿ ಹತ್ತಿರ ಹೋದಾಗ ಆ ವಿಗ್ರಹ ಕಣ್ಣು ಮಿಟುಕಿಸಿತು. ಆಶ್ಚರ್ಯಗೊಂಡು ಮಾತನಾಡಿಸಿದಾಗ ಅವರು ವಿದ್ಯಾರಣ್ಯಪುರದ ವೇಣುಗೋಪಾಲ್ ಎಂದು ತಿಳಿಯಿತು. ಅಂಬೇಡ್ಕರ್ ವೇಷದಿಂದ ಅವರು ಈ ಪ್ರಾಂತ್ಯದಲ್ಲಿ ಪ್ರಖ್ಯಾತರಾಗಿದ್ದಾರೆ. ಈ ಸಮಾರಂಭ ಪುಸ್ತಕ ಬಿಡುಗಡೆಗೆ ಮಾತ್ರ ಸೀಮಿತವಾಗದೆ ಜನ್ನಣ್ಣನ ಹಾಡು ಮತ್ತು ಜನಪದ ಗಾಯಕ ಮಳವಳ್ಳಿ ಮಹದೇವಪ್ಪ ಹಾಡಿದ “ಅನ್ಯಾಯಕಾರಿ ಬ್ರಹ್ಮ ಈ ಸುಂದರನ ಸನ್ಯಾಸಿ ಮಾಡಬಹುದೇ” ಎಂಬ ಹಾಡು ಕಲಾಮಂದಿರವನ್ನು ಮೊಳಗಿತ್ತು. ಇತ್ತೀಚೆಗೆ ತುಂಬ ವೈರಲ್ ಆಗಿರುವ ಈ ಹಾಡನ್ನು ಕೇಳುತ್ತಿದ್ದಾಗ ಕಲಾಮಂದಿರದ ವಾತಾವರಣ ಕಂಗೊಳಿಸಿತು. ಈ ಆವರಣ ಹೀಗೇ ಇರಬೇಕೆನ್ನಿಸಿತು. ಹಂಸಲೇಖ ಅರ್ಥಪೂರ್ಣವಾಗಿ ಮಾತನಾಡಿದರು. ನಂತರ ಕೆ.ವೈ. ನಾರಾಯಣಸ್ವಾಮಿ, ಬಂಜಗೆರೆ ಜಯಪ್ರಕಾಶ ಕೃತಿನಿಷ್ಟವಾಗಿ ಮಾತನಾಡಿ ಪುಸ್ತಕದ ಬಿಡುಗಡೆಯನ್ನು ವೈಭವೀಕರಿಸಿದರು. ನಿಜಕ್ಕೂ ಒಂದು ಅರ್ಥಪೂರ್ಣ ಪುಸ್ತಕದ ಬಿಡುಗಡೆ ಹಿಗೇ ಇರಬೇಕೆನ್ನಿಸಿ ಹೊಟ್ಟೆತುಂಬ ಮೊಸರನ್ನ ತಿಂದು ತಂಪಾದ ಹವಾಮಾನದಲ್ಲಿ ತಣ್ಣಗೆ ಹೊರಟಾಗ ನಮ್ಮ ಹಾಯ್ಕು ಕವಿ ಡಾ.ರವೀಂದ್ರನಾಥ್ ಮತ್ತು ಸಂಶೋಧನಾ ವಿದ್ವಾಂಸ ಸಂತೋಷ್ ನಾಯಕ್ ಸಿಕ್ಕಿ “ಕ್ರಿಸ್ಟೊಫರ್ ನೊಲಾನ್ ತೆಗೆದಿರುವ ಅದ್ಭುತ ಸಿನಿಮಾ ಬಂದಿದೆ ನೋಡೋಣ” ಎಂದು ಕರೆದರು. ಆ ಸಿನಿಮಾದ ಬಗ್ಗೆ ಹೆಚ್ಚು ತಿಳಿದಿರುವ ರವೀಂದ್ರನಾಥ್ ಮಾತನಾಡುತ್ತಿದ್ದಾಗ ನಾನು ಅರ್ಧ ಶತಮಾನಕ್ಕೂ ಹಿಂದೆ ಇದೇ ಮೈಸೂರಿನಲ್ಲಿ ವಿಪರೀತ ಕನ್ನಡ ಸಿನಿಮಾ ನೋಡಿ ಫೇಲಾಗಿದ್ದರ ಬಗ್ಗೆ ಯೋಚಿಸುತ್ತಿದ್ದೆ. ಅದು 69-70-71ರ ಇಸವಿ ಸಮಯ. ಪ್ರತಿ ತಿಂಗಳು ಅಣ್ಣಾವ್ರ ಹೊಸಹೊಸ ಸಿನಿಮಾ ಬಿಡುಗಡೆಯಾಗುತ್ತಿದ್ದವು. ಥಿಯೇಟರಿನಲ್ಲಿ ಮುಂದಿನ ಸೀಟು 75 ಪೈಸೆಯಾದ್ದರಿಂದ ಬಂದ ಸಿನಿಮಾಗಳನ್ನೆಲ್ಲಾ ನೋಡಲು ಕಷ್ಟಪಡಬೇಕಾಗಿರಲಿಲ್ಲ. ಕನ್ನಡದ ಸಂಸ್ಕೃತಿಯ ಪ್ರತೀಕದಂತೆ ಕಾಣುತಿದ್ದ ರಾಜಕುಮಾರರನ್ನು ಇವತ್ತಿನ ಯಾವ ನಟರೂ ಆದರ್ಶವಾಗಿ ಸ್ವೀಕರಿಸುತ್ತಿಲ್ಲ. ಕೆಟ್ಟಕೆಟ್ಟ ರಾಜಕಾರಣಿಗಳ ಚುನಾವಣಾ ಪ್ರಚಾರಕ್ಕೆ ಹೋಗಿಬಿಡುವ ಇವರಿಗೆ ಬುದ್ಧಿಯ ಮತ್ತು ಪ್ರಬುದ್ಧತೆಯ ಕೊರತೆ ಎದ್ದು ಕಾಣುತ್ತದೆ. ಪ್ರಜಾಪ್ರಭುತ್ವ ಅಪಾಯಕ್ಕೆ ಸಿಕ್ಕಿದ್ದಾಗ ಜವಾಬ್ದಾರಿಯುತ ರಾಜಕಾರಣಿಯ ಪರ ಪ್ರಚಾರಕ್ಕೆ ಹೋಗಿ ಮಾತನಾಡಿದರೆ ತಪ್ಪೇನೂ ಇಲ್ಲ. ಇಲ್ಲವೇ ಅಣ್ಣಾವ್ರಂತೆ ದೂರ ನಿಂತು ಕೈ ಮುಗಿದುಬಿಡುವುದು ಒಳ್ಳೆಯದು. ಹೀಗೆ ಇತ್ಯಾದಿಯಾಗಿ ಯೋಚಿಸುತ್ತ ಇತ್ತೀಚಿನ ಮಾಲ್ ಒಂದರೊಳಗೆ ನಿರ್ಮಾಣಗೊಂಡು ಗುಹೆಯಂತೆ ಕಾಣುವ ಥಿಯೇಟರ್ ಒಂದಕ್ಕೆ ನುಗ್ಗಿ ಕುಳಿತುಕೊಳ್ಳುವಷ್ಟರಲ್ಲಿ ಡಾ.ಸಂತೋಷ್ ನಾಯಕ್ ಕ್ರಿಸ್ಟೊಫರ್ ಸಿನಿಮಾಗಳ ಬಗ್ಗೆ ಹಾಗೆಯೇ ಡಾ.ರವೀಂದ್ರನಾಥ್ ಆಪನ್‌ಹೈಮರ್ ಅಣುಬಾಂಬು ತಯಾರಿಸಿದ ಬಗ್ಗೆ ಸಂಕ್ಷಿಪ್ತವಾಗಿ ಹೇಳಿದ್ದರು. ಹಾಗೆಯೇ ಸದರಿ ಸಿನಿಮಾ ವಿಜ್ಞಾನಿ ಆಪನ್‌ಹೈಮರ್ ಜೀವನ ಕುರಿತ ಚಿತ್ರ ಎಂದು ಹೇಳಿದ್ದರು.

ಮೂರು ಗಂಟೆ ಅವಧಿಯ ಈ ಸಿನಿಮಾದಲ್ಲಿ ತೀರ ಕುತೂಹಲ ಕೆರಳಿಸಿದ ಸಂಗತಿ ಯಾವುದೆಂದರೆ ಆಪನ್‌ಹೈಮರ್ ಅಣುಬಾಂಬು ತಯಾರಿಸಲು ತನಗೆ ಸ್ಫೂರ್ತಿಯಾಗಿದ್ದು ಭಗವದ್ಗೀತೆಯ ಕೃಷ್ಣನ ಸಂದೇಶ ಎಂದು ನಂಬಿದ್ದು. ಕ್ಷಣ ಮಾತ್ರದಲ್ಲಿ ಜಪಾನ್ ದೇಶದ ನಾಗಸಾಕಿ ಮತ್ತು ಹಿರೋಶಿಮಾ ಎಂಬ ಪಟ್ಟಣಗಳು ಬೆಂಕಿಯೊಳಗೆ ಅಂತರ್ಧಾನವಾಗುವಂತಹ ಅಣುಬಾಂಬ್ ತಯಾರಿಸಿದ ಆಪನ್‌ಹೈಮರ್ ಪಾತ್ರ ಭಗವದ್ಗಿತೆಯ ಕೃಷ್ಣನ ಸಂದೇಶವನ್ನು ಹೇಳುವುದಲ್ಲದೆ, ಸಂಸ್ಕೃತದ ಭಗವದ್ಗೀತೆ ಪುಸ್ತಕವನ್ನು ತೋರುತ್ತಾರೆ. ಈಗಾಗಲೇ ನಮಗೆ ಗೊತ್ತಿರುವಂತೆ ನದಿಯ ಆಕಡೆ ಮತ್ತು ಈಕಡೆ ನಿಂತರೆ ಕಾಣುವ ಅಕ್ಷೆಹಿಣಿ ಸೈನ್ಯದ ನಡುವೆ ನಿಂತು ಅರ್ಜುನನಿಗೆ ಕೃಷ್ಣ ಬೋಧಿಸುವ ಗೀತೆ ಜಗದ್ವಿಖ್ಯಾತವಾಗಿದೆ. ಮನುಕುಲದ ಸೃಷ್ಟಿಕರ್ತನೂ ನಾನೆ ಮತ್ತು ಅದರ ನಿರ್ನಾಮವೂ ನನ್ನಿಂದಲೇ, ನೀನೇನು ಚಿಂತಿಸಬೇಡ, ನನ್ನ ಈ ವಿರಾಟ್ ರೂಪದ ದರ್ಶನ ಮಾಡು ಎಂದು ಕೃಷ್ಣ ವಿಶ್ವರೂಪ ದರ್ಶನ ಮಾಡಿಸುತ್ತಾನೆ. ಸ್ಫೂರ್ತಿಗೊಂಡ ಅರ್ಜುನ ಬಿಸಾಡಿದ್ದ ಬಿಲ್ಲು ಬಾಣ ತೆಗೆದುಕೊಂಡು ಯುದ್ಧ ಸನ್ನದ್ಧನಾಗುತ್ತಾನೆ. ಆ ಯುದ್ಧದಲ್ಲಿ ಎಲ್ಲವೂ ಸರ್ವನಾಶವಾಗಿ ಹಸ್ತಿನಾವತಿಯಲ್ಲಿ ಮುದುಕರು, ಮಕ್ಕಳು ಮತ್ತು ಸಹಗಮವಾಗದೆ ಉಳಿದ ಮಹಿಳೆಯರು, ಅಂಗವಿಕಲರು ಧರ್ಮರಾಯನ ಆಳ್ವಿಕೆಗೆ ಒಳಪಡುತ್ತಾರೆ.

ಗೀತೆಯನ್ನು ಕೋಟ್ ಮಾಡುವ ಆಪನ್‌ಹೈಮರ್ ತಯಾರಿಸಿದ ಅಣುಬಾಂಬಿನಿಂದ ನಾಗಸಾಕಿ ಮತ್ತು ಹಿರೋಶಿಮಾದಲ್ಲಿ ಬೂದಿ ಮಾತ್ರ ಉಳಿಯುತ್ತದೆ. ಇಂತಹ ಸರ್ವನಾಶದ ಬಾಂಬಿಗೆ ಸ್ಫೂರ್ತಿ ಕೃಷ್ಣನ ಸಂದೇಶ ಎಂಬ ಮಾತು ಈ ಸಿನಿಮಾದ ಬಗ್ಗೆ ತಕರಾರನ್ನು ಎಬ್ಬಿಸಿದೆ. ಮಹಾತ್ಮಗಾಂಧಿಯವರು ಈ ಗೀತೆಯನ್ನು ನನ್ನ ತಾಯಿ ಎಂದು ಕರೆದ ಕಾರಣಕ್ಕೆ ಭಕ್ತಿಯಿಂದ ಗೀತೆ ಓದಿದಾಗ ಈ ಗೀತೆ ಮಹಾಭಾರತದ ಕತೆಯಿಂದ ಹೊರಗುಳಿಯುತ್ತದೆ. ಗೀತೆಯ ಬಗ್ಗೆ ಇರುವ ನೂರಾರು ಟೀಕೆಗಳು ಈ ಪಠ್ಯದ ವೈರುಧ್ಯವನ್ನು ಸಾಬೀತುಪಡಿಸುತ್ತವೆ. ಜಗತ್ತಿನ ಯಾವ ಅವಧೂತನೂ ತಾನೇ ದೇವರೆಂದು ಹೇಳಿಲ್ಲ. ಕೃಷ್ಣನನ್ನು ದೇವರನ್ನಾಗಿಸಿ ಪ್ರತಿಷ್ಠಾಪಿಸಲು ಸ್ವಹಿತಾಸಕ್ತಿಯ ವೈದಿಕ ವಿದ್ವಾಂಸರು ಗೀತೆ ಬರೆದು ಮಹಾಭಾರತದೊಳಕ್ಕೆ ತುರುಕಿದ್ದಾರೆ; ಇದು ಆರನೇ ಶತಮಾನದಲ್ಲಿ ನಡೆದ ಸಂಚು ಎಂದು ಕೆಲ ವಿದ್ವಾಂಸರ ವಾದವಾದರೆ ಮತ್ತೆ ಕೆಲವರು ಬುದ್ಧನನ್ನ ಈ ನೆಲದಿಂದ ಓಡಿಸಲು ಕೃಷ್ಣನ ಅವತಾರಗಳನ್ನು ಸೃಷ್ಟಿಸಲಾಯಿತು ಎನ್ನುವವರಿದ್ದಾರೆ. ಇದೇನೇ ಆದರೂ ಭಾರತದ ನೆಲ, ಜಲ ಬೆಟ್ಟಗುಡ್ಡಗಳಲ್ಲಿ ಮತ್ತು ಕಾಡುಗಳಲ್ಲಿ ಹಾಸುಹೊಕ್ಕಾಗಿರುವ ಮಹಾಭಾರತದ ಕಡೆಗೆ ಯಾವ ಚ್ಯುತಿಯೂ ಬಂದಿಲ್ಲ; ಆದರೆ ಅಣುಬಾಂಬಿಗೆ ಸ್ಫೂರ್ತಿ ನೀಡಿದ ಕೃಷ್ಣ ಸಂದೇಶ ಗೀತೆಗೆ ಕೊಟ್ಟ ಹೊಡೆತವಾಗಿದೆ.

ಗೀತಾ ವಾಕ್ಯದ ಸಂದೇಶ ಹೊತ್ತ ಆಪನ್‌ಹೈಮರ್ ಅಣುಬಾಂಬು ತಯಾರಿಸುತ್ತಾರೆ. ಮ್ಯಾನ್‌ಹಟನ್ ಪ್ರಾಜೆಕ್ಟಿನ ಮುಖ್ಯಸ್ಥನಾಗಿದ್ದ ಆಪನ್‌ಹೈಮರ್ ಬಾಂಬ್ ತಯಾರಿಸುವ ಕೆಲಸದಲ್ಲಿ ವೈಜ್ಞಾನಿಕವಾಗಿ ಐನ್‌ಸ್ಟೀನ್‌ರಿಂದ ಕೆಲವು ಸಲಹೆ ಪಡೆಯುತ್ತಾನೆ. ಆದರೆ ಐನ್‌ಸ್ಟೀನ್ ಅಂತಿಮ ಪರಿಣಾಮದ ಬಗ್ಗೆ ಏನೂ ಹೇಳುವುದಿಲ್ಲ. ಆದರೂ ಯುವ ವಿಜ್ಞಾನಿ ಸಮೂಹ ತಮ್ಮ ಪ್ರಯತ್ನ ಬಿಡದೆ ಅಣುಬಾಂಬ್ ತಯಾರಿಸುತ್ತಾರೆ. ಈ ಅಣುಬಾಂಬು ಜಗತ್ತನ್ನೇ ನಾಶಮಾಡಬಲ್ಲದು ಎಂಬುದನ್ನರಿತಿದ್ದರೂ, ಅದಾಗಲೇ ಹಿಟ್ಲರ್ ಸತ್ತು ಯುದ್ಧ ನಿಲುಗಡೆಯಾಗಿದ್ದರೂ, ಅಮೆರಿಕನ್ನರು ಜಪಾನಿನ ಮೇಲೆ ಅದನ್ನು ಪ್ರಯೋಗಿಸಿಬಿಡುತ್ತಾರೆ. ಲಿಟಲ್ ಬಾಯ್ ಎಂಬ ಬಾಂಬನ್ನು ನಾಗಸಾಕಿ ಮೇಲೆ ಹಾಕಿ ಎರಡು ನಗರಗಳು ಹೇಳ ಹೆಸರಿಲ್ಲದಂತೆ ನಿರ್ನಾಮವಾದ ಸುದ್ದಿ ಕೇಳಿ ಅಮೆರಿಕನ್ನರು ಕೇಕೆ ಹಾಕಿ ಕುಣಿದು ಕುಪ್ಪಳಿಸುತ್ತಾರೆ. ಅದರಲ್ಲಿ ಮಮ್ಮಲ ಮರುಗಿದವರೂ ಇದ್ದರು. ಈ ಪೈಕಿ ಬಾಂಬ್ ತಯಾರಿಸಿದ ಆಪನ್‌ಹೈಮರ್ ಕೂಡ ಒಬ್ಬ.

ಇದನ್ನೂ ಓದಿ: ಟ್ರಯಾಂಗಲ್ ಆಫ್ ಸ್ಯಾಡ್‌ನೆಸ್: ಕ್ಯಾಪಿಟಲಿಸಂನ ಅಮಾನುಷತೆಯ ಅನಾವರಣ

ಈತನ ವಿಚಾರಣೆ ಆರಂಭವಾಗುತ್ತದೆ. ಏಕೆಂದರೆ ಅಮೆರಿಕದವರಿಗೆ ಹೈಡ್ರೋಜನ್ ಬಾಂಬು ಬೇಕಿರುತ್ತದೆ. ಅದನ್ನು ತಯಾರಿಸಲು ಆಪನ್‌ಹೈಮರ್ ನಿರಾಕರಿಸಿದಾಗ ಅವನ ವಿರುದ್ಧ ತನಿಖೆ ನಡೆಸಲಾಗುತ್ತದೆ. ಈತ ಜರ್ಮನ್ ಮೂಲದವನು, ಕಮ್ಯುನಿಸ್ಟ್ ಒಲವಿನವನು, ಈತನ ಪ್ರೇಯಸಿ ಮತ್ತು ಹೆಂಡತಿಯೆಲ್ಲಾ ಒಮ್ಮೆ ಕಮ್ಯುನಿಸ್ಟರಾಗಿದ್ದವರು ಎಂಬ ತನಿಖೆ ಆಪನ್‌ಹೈಮರ್‌ನನ್ನ ಹೈರಾಣಾಗಿಸುತ್ತದೆ. ಬಾಂಬ್ ಪ್ರಯೋಗದ ನಂತರ ಈತ ಯಾವ ಸಂತೋಷಕೂಟದಲ್ಲೂ ಉತ್ಸಾಹದಿಂದ ಭಾಗವಹಿಸುವುದಿಲ್ಲ. ಆತ ನೋವಿನ ಕಣ್ಣಿನಲ್ಲೇ ಪ್ರಶಸ್ತಿ ಪಡೆಯುತ್ತಾನೆ. ಆಗ ಒಮ್ಮೆ ಅಂದಿನ ಅಮೆರಿಕದ ಪ್ರೆಸಿಡೆಂಟ್ ಟ್ರ್ರೂಮನ್ ಛೇಂಬರಿಗೆ ಹೋದಾಗ, ಆತ ಕೈ ಕುಲುಕಿ ಇದರ ಜವಬ್ದಾರಿ ನಾವು ಹೊರುತ್ತೇವೆ ನೀನು ಹೋಗಿ ಬಾ ಎಂದು ಕಳಿಸುತ್ತಾನೆ. ಇದಕ್ಕಿಂತ ಮುಂಚೆ ಆಪನ್‌ಹೈಮರ್‌ಗೆ ತನ್ನ ಸುತ್ತಮುತ್ತಲಿನವರು ಮತ್ತು ಪತ್ರಕರ್ತರೆಲ್ಲರೂ ಬಾಂಬ್ ದಾಳಿಗೆ ಚರ್ಮ ಸುಲಿದುಕೊಂಡವರಂತೆ ಕಾಣುತ್ತಿರುತ್ತಾರೆ.

ನಾಗಸಾಕಿ ಹಿರೋಶಿಮಾದ ಮೇಲೆ ದಾಳಿ ನಡೆಯುವ ಮುನ್ನ ಅದರ ಪ್ರಯೋಗ ನಡೆಯುತ್ತದೆ. ಈ ಪ್ರಯೋಗವೇ ಎದೆನಡುಗಿಸುವಂತಿದೆ. ಪ್ರಯೋಗಾರ್ಥ ಯಂತ್ರದ ಗುಂಡಿ ಒತ್ತುವವನ ಕೈ ನಡುಗುತ್ತದೆ. ನಂತರ ಇಡೀ ಭೂಮಂಡಲವನ್ನೇ ಬೆಂಕಿ ಆವರಿಸುತ್ತಿದೆಯೆನಿಸುತ್ತದೆ. ಹಲವು ಸೆಕೆಂಡಿನ ನಂತರ ಬಾಂಬು ಸ್ಫೋಟದ ಸದ್ದು ಬೆಚ್ಚಿಬೀಳುವಂತೆ ಮಾಡುತ್ತದೆ. ಇಲ್ಲಿ ನಾಗಸಾಕಿ ಹಿರೋಶಿಮಾವನ್ನು ತೋರಿಸುವುದಿಲ್ಲ. ಆದರೆ ಇಂದಿಗೂ ನಾಗಸಾಕಿ ಹಿರೋಶಿಮಾದ ಪ್ರದೇಶದಲ್ಲಿ ಹುಟ್ಟುವ ಮಕ್ಕಳು ಅಂಗವಿಕಲತೆಯಿಂದ ಕೂಡಿರುತ್ತವೆ; ಅದಕ್ಕೆ ಅಲ್ಲಿ ಮದುವೆಯಾಗಿ ಮಕ್ಕಳನ್ನು ಹಡೆಯಲು ಕೂಡ ಹೆದರುತ್ತಾರೆ.

ಅಮೆರಿಕ ಆಪನ್‌ಹೈಮರ್‌ನನ್ನ ಬಳಸಿಕೊಂಡು ನಂತರ ಯೋಜನೆಯಿಂದ ಆತನನ್ನು ಬಿಡುಗಡೆ ಮಾಡಿದ ಮೇಲೆ ಆಪನ್‌ಹೈಮರ್ ಮುಖ ಹೆಣದ ಮುಖದಂತಾಗುತ್ತದೆ. ಸತ್ತ ಮುಖದಲ್ಲಿನ ನೋವಿನ ಕಣ್ಣು ನಮ್ಮನ್ನು ಆವರಿಸಿಕೊಳ್ಳುತ್ತದೆ. ನಿಜಕ್ಕೂ ಇದು ನಿರ್ದೇಶಕ ಕ್ರಿಸ್ಟೊಫರ್ ನೊಲಾನ್‌ನ ಕಲ್ಪನೆಯೋ ಅಥವ ಆಪನ್‌ಹೈಮರ್ ಹಾಗಿಯೇ ಇದ್ದನೋ ಎಂಬ ಯೋಚನೆ ನಮಗೆ ಆವರಿಸಿ ನಾವು ನಾಗಸಾಕಿ ಮತ್ತು ಹಿರೋಶಿಮಾ ನಾಶ ಮಾಡಿದವನ ಬಗ್ಗೆ ಕನಿಕರ ತಾಳುವಂತೆ ಮಾಡುತ್ತದೆ.

ಅಮೆರಿಕ ಈ ಜಗತ್ತಿನ ಶೋಷಕರೆಲ್ಲರೂ ಒಟ್ಟಿಗೆ ಬೀಡುಬಿಟ್ಟ ದೇಶವಾಗಿದೆ. ಯುದ್ಧ ಸಾಮಗ್ರಿ ಮಾಡಲೆಂದೇ ಒಂದು ಸಚಿವಾಲಯವಿರುವ ದೇಶ ಅದು. ಇಂದಿರಾಗಾಂಧಿ ಪೂರ್ವ ಪಾಕಿಸ್ತಾನದ ಮೇಲೆ ಯುದ್ಧ ಮಾಡಿ ಗೆದ್ದು ಆ ದೇಶದ ಎಂಭತ್ತು ಸಾವಿರ ಸೈನಿಕರನ್ನು ಸೆರೆಹಿಡಿದಾಗ ಇಂದಿರಾ ಪರವಿದ್ದಂತ ಅಮೆರಿಕ, ಅದಾಗಲೇ ಪಾಕಿಸ್ತಾನಕ್ಕೆ ಯುದ್ಧ ಸಾಮಗ್ರಿ ತುಂಬಿದ ಹಡಗು ಕಳುಹಿಸಿರುತ್ತದೆ. ಆದರೆ ಅಷ್ಟರಲ್ಲಾಗಲೆ ಯುದ್ಧ ಮುಗಿದಿತ್ತು. ಈ ಮನಸ್ಥಿತಿಯನ್ನು ಅಮೆರಿಕ ಎಂದೂ ಬದಲಿಸಿಕೊಂಡಿಲ್ಲ. ಮನುಕುಲದ ಇತಿಹಾಸವನ್ನು ನೋಡಿದರೆ ಆದಿಮಾನವನೇ ಕೋಲಿನ ತುದಿಗೆ ಕಲ್ಲು ಕಟ್ಟಿಕೊಂಡು ಭೇಟೆಯಾಡಿದ ದಾಖಲೆ ಸಿಗುತ್ತದೆ. ಅದೇ ಮನಸ್ಸು ಮುಂದುವರಿದು ಇಂದು ಒಂದು ಬಟನ್ ಒತ್ತಿದರೆ ಮತ್ತೊಂದು ದೇಶವನ್ನು ನಿರ್ನಾಮ ಮಾಡುವಷ್ಟು ಹೈಡ್ರೋಜನ್ ಮತ್ತು ಅಣು ಬಾಂಬುಗಳನ್ನು ತಯಾರಿಸಿಕೊಂಡು ಆ ದೇಶ ಕುಳಿತಿದೆ. ಇವತ್ತು ಎಲ್ಲರ ಕೈಯಲ್ಲೂ ಬಾಂಬುಗಳಿದ್ದರೂ, ಈ ಜಗತ್ತನ್ನು ಹಲವು ಬಾರಿ ಸುಡುವಷ್ಟು ಬಾಂಬು ಇವರ ಕೈಲಿದೆ. ಯಾವುದಾದರೂ ತಲೆಕೆಟ್ಟ ಆಸಾಮಿ ತನಗಾಗದವರ ಮೇಲೆ ಎಸೆದರೆ ಅಲ್ಲಿಗೆ ಈ ಜಗತ್ತು ಸರ್ವನಾಶವಾಗುತ್ತದೆ. ಆಪನ್‌ಹೈಮರ್ ಜೀವನಚಿತ್ರವನ್ನು ನಿರೂಪಪಿಸಿದ ಈ ಸಿನಿಮಾ ಇಷ್ಟೆಲ್ಲಾ ಯೋಚನೆಗಳನ್ನು ಮಾಡುವಂತೆ ಮಾಡಿತು.

ಬಿ. ಚಂದ್ರೇಗೌಡ

ಬಿ. ಚಂದ್ರೇಗೌಡ
ಲಂಕೇಶರ ಪತ್ರಿಕೆಯಲ್ಲಿ ಬಯಲುಸೀಮೆಯ ಕಟ್ಟೆ ಪುರಾಣದ ಮೂಲಕ ಕನ್ನಡಿಗರೆಲ್ಲರ ಗಮನಕ್ಕೆ ಬಂದ ಚಂದ್ರೇಗೌಡರು, ನಾಟಕಕಾರರು, ನಟರಷ್ಟೇ ಅಲ್ಲ ವಿಶಿಷ್ಟ ರಾಜಕೀಯ ನೋಟವುಳ್ಳವರೂ ಸಹಾ. ಕರ್ನಾಟಕದ ಸಾಂಸ್ಕೃತಿಕ ಹಾಗೂ ರಾಜಕೀಯ ಇತಿಹಾಸದ ಆಗುಹೋಗುಗಳು ಅವರಲ್ಲಿ ದಾಖಲಾಗಿರುವ ಬಗೆಯೂ ವಿಶಿಷ್ಟವೇ..

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಉತ್ತರಪ್ರದೇಶ: ಕ್ಷೌರ ಮಾಡಲು ತಡವಾಗಿ ಬಂದ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿದ ಪೊಲೀಸ್‌ ಅಧಿಕಾರಿ

0
ಕ್ಷೌರಕ್ಕಾಗಿ ಮನೆಗೆ ಕ್ಷೌರಿಕ ತಡವಾಗಿ ಬಂದ ಎಂದು ಪೊಲೀಸ್‌ ಅಧಿಕಾರಿಯೋರ್ವ ಕ್ಷೌರಿಕನನ್ನು ಲಾಕಪ್‌ನಲ್ಲಿ ಕೂಡಿ ಹಾಕಿರುವ ಅಮಾನವೀಯ ಘಟನೆ ಬಿಜೆಪಿ ಆಡಳಿತದ ಉತ್ತರಪ್ರದೇಶದ ಬುದೌನ್‌ನ ಪೊಲೀಸ್ ಠಾಣೆಯೊಂದರಲ್ಲಿ ನಡೆದಿದೆ. ಸರ್ಕಲ್ ಆಫೀಸರ್(ಸಿಒ) ಸುನೀಲ್ ಕುಮಾರ್...